Site icon Vistara News

Menstruation: ಋತುಚಕ್ರದ ಸಂದರ್ಭ ಈ ಆಹಾರಗಳಿಂದ ದೂರವಿರಿ!

periods

ಬಹಳಷ್ಟು ಮಂದಿ ತಮ್ಮ ಋತುಷಕ್ರದ ಸಮಸ್ಯೆಗಳಿಂದ ಅತ್ತ ಅನುಭವಿಸಲೂ ಆಗದೆ, ಇತ್ತ ಬಿಡಲೂ ಆಗದೆ ಒದ್ದಾಡುತ್ತಿರುತ್ತಾರೆ. ಕೆಲಸದಲ್ಲಿರುವ ಮಹಿಳೆಯರು ಪ್ರತಿ ತಿಂಗಳ ನೋವಿನ ದಿನಗಳಲ್ಲಿ, ರಜೆಯೂ ತೆಗೆದುಕೊಳ್ಳಲು ಕಷ್ಟವಾಗಿ, ಮನಸ್ಸು ದೇಹ ಸ್ಪಂದಿಸದೇ ಇದ್ದರೂ ಅನಿವಾರ್ಯವಾಗಿ ಕೆಲಸ ಮಾಡುತ್ತಾರೆ. ಹೊಟ್ಟೆ ನೋವು, ಸೊಂಟ ನೋವು, ಸ್ನಾಯು ಸೆಳೆತಗಳಿಂದ ಬಳಲುತ್ತಾ ಸಂಕಷ್ಟದಲ್ಲಿ ದಿನ ದೂಡುತ್ತಾರೆ.

ಆದರೆ, ಒಮ್ಮೆಯಾದರೂ ನೀವು ತಿನ್ನುವ ಆಹಾರಕ್ಕೂ ಇವಕ್ಕೂ ಸಂಬಂಧವಿರಬಹುದು ಎಂದು ಯೋಚಿಸಿದ್ದೀರಾ? ಇಲ್ಲ ಎಂದಾದಲ್ಲಿ ಒಮ್ಮೆ ಯೋಚಿಸಿ. ಕೆಲವು ಆಹಾರ ಪದಾರ್ಥಗಳು ಋತುಚಕ್ರದ ಸಮಸ್ಯೆಗೆ ಪರಿಣಾಮಕಾರಿಯಾಗಿ ಹೇಗೆ ಕೆಲಸ ಮಾಡುತ್ತದೆಯೋ ಹಾಗೆಯೇ ಕೆಲವು ಆಹಾರಗಳು ವ್ಯತಿರಿಕ್ತವಾಗಿಯೂ ಕೆಲಸ ಮಾಡುತ್ತದೆ ಎಂಬುದು ನಮಗೆ ಗೊತ್ತಿರಬೇಕು. ಋತುಚಕ್ರದ ಸಂದರ್ಭ ಇಂತಹ ಆಹಾರ ಸೇವನೆಯಿಂದ ನೋವು, ಒತ್ತಡ, ನಿದ್ರಾಹೀನತೆಯಂಥ ಸಮಸ್ಯೆಗಳು ನಿಮ್ಮ ಮಾಸಿಕ ಸಮಸ್ಯೆಯನ್ನೂ ಇನ್ನೂ ದೊಡ್ಡ ಸಮಸ್ಯೆಯಾಗಿಸಬಹುದು.

1. ಉಪ್ಪು: ದಿನನಿತ್ಯದ ಆಹಾರದಲ್ಲಿ ಬಳಸುವ ಉಪ್ಪಲ್ಲದೆ, ಇನ್ನೂ ಹೆಚ್ಚಿನ ಉಪ್ಪು ಇತರ ಆಹಾರ ಮೂಲಗಳಿಂದ ಹೆಚ್ಚುವರಿ ಉಪ್ಪು ಸೇರುವುದನ್ನು ತಪ್ಪಿಸಿ. ಉದಾಹರಣೆಗೆ ನಿಮ್ಮ ಪೀರಿಯಡ್‌ ಸಮಯದಲ್ಲೇ ಚಿಪ್ಸ್‌ ಮತ್ತಿತರ ಕುರುಕಲು ತಿಂಡಿಗಳನ್ನು ತಿನ್ನಬೇಡಿ. ಎಲ್ಲ ರೀತಿಯ ಪ್ಯಾಕ್ಡ್‌ ಆಹಾರ ವಸ್ತುಗಳನ್ನು ಆ ದಿನಗಳಲ್ಲಿ ತಿನ್ನಲು ಹೋಗಬೇಡಿ. ಇವುಗಳಲ್ಲಿ ಸೋಡಿಯಂ ಪ್ರಮಾಣ ಅಧಿಕವಾಗಿರುತ್ತದೆ. ಇವುಗಳನ್ನು ಕಡಿಮೆ ಮಾಡಿದ ಕೂಡಲೇ ಖಂಡಿತವಾಗಿಯೂ ನಿಮ್ಮ ಈ ನೋವುಗಳು ಸ್ವಲ್ಪ ಹತೋಟಿಗೆ ಬರುತ್ತದೆ.

2. ಮೈದಾ: ನಿಮಗೆ ಪಿಜ್ಜಾ, ಪಾಸ್ತಾ, ಪೂರಿ, ಬ್ರೆಡ್‌ ಇಷ್ಟವೇ? ಹಾಗಾದರೆ, ನಿಮ್ಮ ಮಾಸಿಕ ಋತುಷಕ್ರದ ಸಂದರ್ಭ ಇಂತಹ ಮೈದಾಯುಕ್ತ ತಿಂಡಿಗಳನ್ನು ತಿನ್ನದಿರಿ. ಮೈದಾದಂಥ ರಿಫೈನ್ಡ್‌ ಹಿಟ್ಟುಗಳು ಮಲಬದ್ಧತೆಯನ್ನು ಉಂಟು ಮಾಡುತ್ತದೆ, ಜೊತೆಗೆ ಹೊಟ್ಟೆಯಲ್ಲಿ ಗ್ಯಾಸ್‌ಗೆ ಕಾರಣವಾಗುತ್ತದೆ. ಮೈದಾದಲ್ಲಿ ಮೊದಲೇ ಎಲ್ಲ ಪೋಷಕಾಂಶಗಳನ್ನೂ ತೆಗೆಯಲ್ಪಟ್ಟಿರುವುದರಿಂದ ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಏರಿಳಿಸುತ್ತದೆ.

3. ಸಿಹಿತಿಂಡಿಗಳು: ನೀವೆಂದಾದರೂ ಗಮನಿಸಿದ್ದೀರಾ? ನಿಮಗೆ ನಿಮ್ಮ ಪೀರಿಯಡ್‌ ಸಮಯದಲ್ಲೇ ಸಿಹಿತಿಂಡಿ ತಿನ್ನಬೇಕೆಂಬ ಬಯಕೆ ಹೆಚ್ಚಾಗುವುದು? ಆದರೆ, ಆಸೆಯಾಯಿತೆಂದು ಸಿಹಿತಿಂಡಿಯನ್ನು ಇಂತಹ ಸಮಯದಲ್ಲಿ ನಿರ್ಲಕ್ಷಿಸಿಬಿಡಿ. ಯಾಕೆಂದರೆ, ಸಿಹಿತಿಂಡಿಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣದಲ್ಲಿ ಸಮತೋಲನವನ್ನು ತಪ್ಪಿಸುವುದಲ್ಲದೆ, ಇದು ನಿಮ್ಮ ಕೆಟ್ಟ ಮೂಡ್‌ಗೂ ಕಾರಣವಾಗುತ್ತದೆ. ಅದಕ್ಕೇ ಪೀರಿಯಡ್‌ ಸಂದರ್ಭ ಮಾತು ಮಾತಿಗೂ ಕೋಪ ಬರುತ್ತದೆ. ಸಣ್ಣ ವಿಷಯಗಳು ಕೋಪ ತರಿಸುತ್ತದೆ. ಹೊಟ್ಟೆನೋವು, ತಲೆಸುತ್ತುವಿಕೆಯನ್ನೂ ತರಿಸುತ್ತದೆ.

4. ಕರಿದ ತಿನಿಸುಗಳು: ಪ್ಯಾಕ್ಡ್‌ ಆಹಾರ ವಸ್ತುವಿನಷ್ಟೇ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನೂ ಇಂಥ ಸಂದರ್ಭ ಕಡಿಮೆ ಮಾಡಿ. ಬಜ್ಜಿ, ಬೋಂಡಾಗಳನ್ನು ತಿನ್ನಬೇಕೆಂದು ಅನಿಸಿದರೂ ತಿನ್ನದಿರುವುದೇ ಒಳ್ಳೆಯದು. ಮಾಂಸ, ಹೆಚ್ಚು ಕೊಬ್ಬಿನ ಅಂಶವಿರುವ ಆಹಾರ ವಸ್ತುಗಳು ದೇಹದಲ್ಲಿ ಉರಿಯೂತವನ್ನು ತರಿಸಿ, ಅಲ್ಲಲ್ಲಿ ಸ್ನಾಯು ಸೆಳೆತ, ಬೆನ್ನು ನೋವು ಇತ್ಯಾದಿಗಳನ್ನು ಹೆಚ್ಚು ಮಾಡಬಹುದು.

ಇದನ್ನೂ ಓದಿ: Health Tips: ಬಾರ್ಲಿ ನೀರು: ಬೇಸಿಗೆಗೆ ಬೇಕೇ ಬೇಕು ಈ ಪುರಾತನ ಪೇಯ!

5. ಕಾಫಿ ಹಾಗೂ ಚಹಾ: ಸೊಂಟ ನೋವು, ಬೆನ್ನು ನೋವು, ಸ್ನಾಯು ಸೆಳೆತ ಎನ್ನುತ್ತಾ, ವಿಶ್ರಾಂತಿ ತೆಗೆದುಕೊಳ್ಳಲೆಂದು ಕೂತು ಜೊತೆಗೆ ಆಗಾಗ ಬೇಕಾಬಿಟ್ಟಿ ಕಾಫಿ ಚಹಾಗಳನ್ನು ಸೇವಿಸುತ್ತಲೇ ಇದ್ದರೆ, ನಿಮ್ಮ ಈ ನೋವುಗಳಿಗೆ ಮುಕ್ತಿ ದೊರೆಯದು. ಕಾಫಿ ಹಾಗೂ ಚಹಾದಲ್ಲಿರುವ ಕೆಫೀನ್‌ ಸ್ನಾಯುಸೆಳೆತದಂತಹ ನೋವುಗಳಿಗೆ ಒಳ್ಳೆಯದಲ್ಲ. ಹಾಲು ಹಾಗೂ ಹಾಲಿನ ಉತ್ಪನ್ನಗಳೂ ಕೂಡಾ ಇಂತಹ ದಿನಗಳಲ್ಲಿ ಒಳ್ಳೆಯದಲ್ಲ. ಹಾಲು ರಹಿತವಾಗಿ ಬ್ಲ್ಯಾಕ್‌ ಚಹಾವನ್ನೋ, ಲೆಮೆನ್‌ ಚಹಾವನ್ನೋ ಮಾಡಿ ಕುಡಿಯಬಹುದು ಅಥವಾ ಶುಂಠಿ ಚಹಾವೋ, ಸುಕ್ಕು ಕಾಫಿಯನ್ನೋ ಕುಡಿದು ನೋವಿಗೆ ಪರಿಹಾರ ಕಾಣುವ ಯತ್ನವನ್ನು ಮಾಡಬಹುದು.

6. ಆಲ್ಕೋಹಾಲ್:‌ ಆಲ್ಕೋಹಾಲ್‌, ಮಹಿಳೆಯರ ಇಸ್ಟ್ರೋಜನ್‌ ಹಾರ್ಮೋನಿನ ಮಟ್ಟವನ್ನು ಏರಿಸುವ ಗುಣವನ್ನು ಹೊಂದಿರುವುದರಿಂದ ಇದು ಪೀರಿಯಡ್‌ ಸಮಯದಲ್ಲಿ ಒಳ್ಳೆಯದಲ್ಲ. ಕೋಲಾ, ಪೆಪ್ಸಿಗಳಂಥ ಡ್ರಿಂಕ್‌ಗಳು ಕೂಡಾ ನೋವನ್ನು ಹೆಚ್ಚು ಮಾಡುತ್ತವೆ.

6. ಉಪ್ಪಿನಕಾಯಿ: ಉಪ್ಪಿನಕಾಯಿ, ಹಪ್ಪಳ, ನೂಡಲ್ಸ್‌, ಮ್ಯಾಗಿ ಫ್ರೋಜನ್‌ ಆಹಾರ ವಸ್ತುಗಳು ಇತ್ಯಾದಿಗಳೆಲ್ಲವೂ ಆ ದಿನಗಳಲ್ಲಿ ವರ್ಜ್ಯ. ಇವು ಹಾರ್ಮೋನಿನ ಸಮತೋಲನ ತಪ್ಪಿಸಿ, ನೋವು ಹೆಚ್ಚಿಸುವುದಲ್ಲದೆ, ನಿಮ್ಮ ಮೂಡು ಇನ್ನೂ ಕೆಡಲು ದಾರಿ ಮಾಡುತ್ತದೆ.

ಇದನ್ನೂ ಓದಿ: Vitamin C Benefits: ವಿಟಮಿನ್‌ ಸಿ ನಮಗೇಕೆ ಬೇಕು? ಇಲ್ಲಿವೆ ಕಾರಣಗಳು

Exit mobile version