ಕನಸು ಕಾಣಲು ವಯಸ್ಸಿನ ಹಂಗಿದೆಯೇ ಹೇಳಿ. ಕೆಲವೊಮ್ಮೆ ಕೆಲವು ಕನಸುಗಳನ್ನು ಕಾಣಲು ನಮ್ಮಲ್ಲಿ ಅನೇಕರು ಇಂತಹ ಕನಸೆಲ್ಲ ಕಾಣಲು ಇದು ಸರಿಯಾದ ವಯಸ್ಸೇ ಎಂದು ಮೂದಲಿಸಿರಬಹುದು. ಒಂದು ವಯಸ್ಸು ದಾಟಿದ ಮೇಲೆ ಬಹುತೇಕರು ತಾವು ಆರಿಸಿಕೊಂಡ ಕ್ಷೇತ್ರದಲ್ಲೇ ಇದ್ದುಕೊಂಡು ಏನಾದರೊಂದು ಜೀವನೋಪಾಯಕ್ಕೆ ಮಾಡುವವರೇ ಹೆಚ್ಚು. ಚೌಕಟ್ಟಿನಿಂಧ ಹೊರಗೆ ಆಲೋಚನೆ ಮಾಡುವವರು ವಿರಳ. ಆದರೂ, ಇವೆಲ್ಲವನ್ನೂ ಮೀರಿ, ತಮ್ಮ ವಯಸ್ಸು, ಎತ್ತರ, ಇರುವ ಸ್ಥಳ ಇವ್ಯಾವುವೂ ಮಾಡಬೇಕಾದ ಸಾಧನೆಗೆ ಅಡ್ಡಿಯೇ ಅಲ್ಲ ಎಂಬುದನ್ನು ಸಾಧಿಸಿ ತೋರಿಸಿದವರಿದ್ದಾರೆ. ಇದು ಅಂತಹ ಒಂದು ಚೌಕಟ್ಟಿನಾಚೆಗಿನ ಜೀವನಕಥೆ. ಇವರು ನಡೆದು ಬಂದ ಹಾದಿಯೇ ಹಲವು ಮಹಿಳೆಯರಿಗೆ ಸ್ಪೂರ್ತಿಕತೆ.
ಡಾ ಗೀತಾ ಪ್ರಕಾಶ್. ಇವರ ವಯಸ್ಸು ಸುಮಾರು ೬೭. ಈ ಹೆಸರು ನೇರವಾಗಿ ಕೇಳದಿದ್ದರೂ ಬಹುತೇಕರು ಇವರ ಫೋಟೋ ನೋಡಿದರೆ, ಎಲ್ಲೋ ನೋಡಿದಂತಿದೆಯಲ್ಲ ಎಂದು ಹೇಳೇ ಹೇಳುತ್ತೀರಿ. ಹಲವರಿಗೆ ಇದು ಪರಿಚಿತ ಮುಖ. ಯಾಕೆಂದರೆ ಹಲ ಜಾಹಿರಾತುಗಳಲ್ಲಿ ಇವರು ರೂಪದರ್ಶಿಯಾಗಿ ಕಾಣಿಸಿಕೊಂಡು ಚಿರಪರಿಚಿತ ಎನಿಸಿಕೊಂಡಿದ್ದಾರೆ.
ವಿಶೇಷ ಎಂದರೆ, ಡಾ ಗೀತಾ ಪ್ರಕಾಶ್ ವೃತ್ತಿಯಲ್ಲಿ ಡಾಕ್ಟರ್. ಆದರೆ, ಯಾರೂ ಊಹಿಸದ ಹಾಗೆ ಇವರ ಬದುಕು ಬದಲಾಗಿದ್ದು ೫೭ನೇ ವಯಸ್ಸಿನಲ್ಲಿ. ಯಾಕೆಂದರೆ, ವೈದ್ಯರಾಗಿ, ಈಗಾಗಲೇ ವೃತ್ತಿಯಲ್ಲಿ ತೃಪ್ತಿಕರ ಜೀವನ ನಡೆಸುತ್ತಿದ್ದ ಗೀತಾ ಪ್ರಕಾಶ್ ಇನ್ನು ಇವೆಲ್ಲ ನನಗ್ಯಾಕೆ ಎಂದು ಅಂದುಕೊಳ್ಳುತ್ತಿದ್ದರೆ, ಈಗ ನಾವವರ ಬಗ್ಗೆ ಇಲ್ಲಿ ಬರೆಯುತ್ತಿರಲಿಲ್ಲ. ಯಾಕೆಂದರೆ, ಯಾರೂ ಯೋಚನೆ ಮಾಡದ ವಯಸ್ಸಿನಲ್ಲಿ ಇವರು ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿಟ್ಟರು!
ಎಲ್ಲರೂ ವಯಸ್ಸಿನ ಲೆಕ್ಕಾಚಾರದಿಂದ ಕನಸಿನ ಬಗೆಗೆ ಮಾತನಾಡುವ ಕಲ್ಪನೆಗೇ ಗೇಟ್‌ಪಾಸ್ ಕೊಡುತ್ತಾರೆ. ಆದರೆ ಇವರು 57ರ ವಯಸ್ಸಿನ್ಲಲಿ ಖುದ್ದು ತಾವೇ ಮಾಡೆಲೆಂಗ್ ಜಗತ್ತಿನಲ್ಲಿ ಸಾಕಷ್ಟು ದೊಡ್ಡ ದೊಡ್ಡ ಬ್ರ್ಯಾಂಡ್‌ಗಳಿಗೆ ರೂಪದರ್ಶಿಯಾಗಿ ಹೆಜ್ಜೆ ಹಾಕಿದ್ದಾರೆ. ಹಲವು ಹೆಸರಾಂತ ಡಿಸೈನರ್ ಬ್ರ್ಯಾಂಡ್‌ಗಳಾದ ಗೌರವ್ ಗುಪ್ತಾ, ತರುಣ್ ತಹಿಲಿಯಾನಿ, ನಿಕೋಬಾರ್, ಅಂಜಿ ಮೋದಿ, ತೋರಣಿ, ಜೇಪೋರ್, ಆಶ್‌ದೀನ್ ಸೇರಿದಂತೆಅನೇಕ ಸಂಸ್ಥೆಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡಿದ್ದಾರೆ.
ಮಾಡೆಲ್ ಅಥವಾ ರೂಪದರ್ಶಿ ಎಂದರೆ, ಇಂತಿಷ್ಟೇ ವಯಸಾಗಿರಬೇಕು, ಇಷ್ಟೇ ಎತ್ತರವಿರಬೇಕು, ಇಷ್ಟೇತೂಕ ಹೊಂದಿರಬೇಕು, ಇಂತಿಷ್ಟೇ ತಳುಕು ಬಳುಕಿರಬೇಕು ಎಂಬ ಎಲ್ಲ ನಿಯಮಗಳು ಗ್ಲ್ಯಾಮರ್ ಲೋಕವನ್ನು ಆಳುತ್ತಿರುವುದು ನಿಜವಾದರೂ ಈ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ, ಈ ಜಗತ್ತಿಗೂ ತಾನಿದ್ದ ಜಗತ್ತಿಗೂ ಸಂಬಂಧವೇ ಇರದಿದ್ದರೂ ಮಾಡೆಲಿಂಗ್ ಜಗತ್ತಿಗೆ ೫೭ನೇ ವಯಸ್ಸಿನಲ್ಲಿ ಕಾಲಿಟ್ಟ ಈಕೆ ಹಲವರಿಗೆ ಖಂಡಿತಾ ಸ್ಪೂರ್ತಿಕತೆ.
ಇದನ್ನೂ ಓದಿ | Fitness motivation | ಬರೋಬ್ಬರಿ ತೂಕ ಇಳಿಸಿಕೊಂಡ ಬಾಲಿವುಡ್ ನಟೀಮಣಿಯರ ಸ್ಫೂರ್ತಿಕತೆ!
ಸುಮಾರು ಹತ್ತು ವರ್ಷಗಳ ಹಿಂದೆ ತರುಣ್ ತಹಿಲಾನಿ ನನ್ನನ್ನು ಸಂಪರ್ಕಿಸಿ ಅವರ ಬ್ರ್ಯಾಂಡ್‌ಗೆ ರೂಪದರ್ಶಿಯಾಗಲು ಕೇಳಿತು. ನಾನು ಈ ಹೊಸ ಅವಕಾಶಕ್ಕೆ ಒಪ್ಪಿಕೊಂಡೆ. ಇದಾದ ಮೇಲೆ ಒಂದರ ಮೇಲೊಂದು ಆಫರ್‌ಗಳು ಬರತೊಡಗಿದವು. ಆಮೇಲೆ ನಾನೆಂದೂ ಹಿಂತಿರುಗಿ ನೋಡಿದ್ದೇ ಇಲ್ಲ ಎಂದು ಡಾ ಗೀತಾ ಹೇಳುತ್ತಾರೆ.
ಹಾಗಂತ ಈ ಹೊಸ ಕ್ಷೇತ್ರದಲ್ಲಿ ಗೀತಾ ಕೆಲಸ ಮಾಡುತ್ತಿದ್ದರೂ ತನ್ನ ಇಷ್ಟು ವರ್ಷ ಕೈಹಿಡಿದ ವೃತ್ತಿಯನ್ನು ಬಿಟ್ಟಿಲ್ಲ. ಕೇವಲ ವಾರಾಂತ್ಯಗಳಲ್ಲಿ ಮಾತ್ರ ನಾನು ಮಾಡೆಲಿಂಗ್ ಪ್ರಾಜೆಕ್ಟ್‌ಗಳಿಗೆ ಒಪ್ಪುತ್ತೇನೆ. ವಾರದ ದಿನಗಳಲ್ಲಿ ನನ್ನ ವೈದ್ಯ ವೃತ್ತಿಯನ್ನು ಹಾಗೆಯೇ ಮುಂದುವರಿಸಿದ್ದೇನೆ ಎನ್ನುತ್ತಾರೆ.
ವೈದ್ಯರಾಗಿ ಈ ವಯಸ್ಸಿನಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು ಆ ಮೂಲಕ ಮಹಿಳೆಯರಿಗೆ ಅವರು ಕಿವಿಮಾತನ್ನೂ ಹೇಳುತ್ತಾರೆ. ʻಕನಸು ಕಾಣಿ. ಪ್ರಪಂಚದಲ್ಲಿ ಯಾವುದನ್ನು ಯಾವಾಗ ಬೇಕಾದರೂ ಮಾಡಬಹುದು. ಅದಕ್ಕೆ ವಯಸ್ಸಿನ ಹಂಗಿಲ್ಲ. ಯಾವತ್ತೂ ಕನಸು ಕಾಣುವುದು ಹಾಗೂ ಆ ಬಗ್ಗೆ ಪ್ರಯತ್ನ ಪಡುವುದನ್ನು ನಿಲ್ಲಿಸಬೇಡಿ. ನಿಮ್ಮ ಆಸಕ್ತಿ, ಹವ್ಯಾಸಗಳಿಗೆ ಸಮಯ ಕೊಡಿ, ಇವ್ಯಾವುದಕ್ಕೂ ಮಿತಿಗಳಿಲ್ಲ. ವಯಸ್ಸೆಂಬುದು ಕೇವಲ ನಂಬರ್ ಅಷ್ಟೇʼ ಎಂಬುದು ಇವರ ಮಾತು. ಕೇವಲ ಹೇಳುವುದಷ್ಟೇ ಅಲ್ಲ. ಅವರ ಆ ಮಾತಿನ ಮೂಲಕ ಅವರೇ ಉದಾಹರಣೆಯಾಗಿಯೂ ನಿಲ್ಲುತ್ತಾರೆ!
ಇದನ್ನೂ ಓದಿ | Nayanthara | ʻʻಮದುವೆ ನಂತರ ಮಹಿಳೆಯರಿಗೇಕೆ ಹೊಸ ರೂಲ್ಸ್?ʼʼ: ನಯನತಾರಾ!