Site icon Vistara News

Period myths | ಮುಟ್ಟಿನ ದಿನದಲ್ಲಿ ಕ್ಯಾಂಪಿಂಗ್‌ ಮಾಡಿದರೆ ಕರಡಿ ಬರುತ್ತೆ! ವಿಚಿತ್ರ ನಂಬಿಕೆಗಳು

period

ಮುಟ್ಟಿನ ಬಗೆಗೆ ನಮ್ಮ ದೇಶದಲ್ಲಿ ನೂರಾರು ನಂಬಿಕೆಗಳು, ಮೂಢನಂಬಿಕೆಗಳು ಹೊಸೆದುಕೊಂಡಿವೆ. ಆ ದಿನಗಳಲ್ಲಿ ದೇವರ ಕಾರ್ಯಗಳು, ಪೂಜಾ ಕಾರ್ಯಗಳನ್ನು ಮಾಡಬಾರದು, ದೇವಸ್ಥಾನಕ್ಕೆ ಹೋಗುವಂತಿಲ್ಲ, ಅಡುಗೆ ಮಾಡುವಂತಿಲ್ಲ, ಮುಟ್ಟಿನ ಮೂರು ದಿನಗಳು ಮನೆಯೊಳಗೆ ಪ್ರವೇಶವಿಲ್ಲ, ಮುಟ್ಟಾದ ಮಹಿಳೆ ಬೇರೆಯವರನ್ನು ಮುಟ್ಟಬಾರದು, ಮುಟ್ಟಿದರೆ ಅವರೂ ಅಶುದ್ಧ… ಇತ್ಯಾದಿ ಇತ್ಯಾದಿ ನಂಬಿಕೆಗಳು ಇಂದಿಗೂ ಇವೆ. ಇದು ಭಾರತದ ಬಹುತೇಕ ಜಾಗಗಳಲ್ಲಿ ಒಂದೇ ಆಗಿದ್ದರೂ, ಇನ್ನೂ ಕೆಲವು ಹೆಚ್ಚುವರಿ ನಂಬಿಕೆಗಳು, ಕಾಲದಿಂದ ಕಾಲಕ್ಕೆ, ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ. ಆದರೆ, ಇಂಥ ನಂಬಿಕೆಗಳು ಬಹುಶಃ ನಮ್ಮ ದೇಶದಲ್ಲಿ ಮಾತ್ರ ಇವೆ ಅಂದುಕೊಂಡರೆ ಅದು ತಪ್ಪಾದೀತು. ಮುಟ್ಟಿನ ಬಗೆಗೆ ಇಂದಿಗೂ ಪ್ರಪಂಚದ ಹಲವು ದೇಶಗಳಲ್ಲಿ ಹಲವು ನಂಬಿಕೆಗಳು ಇವೆ. ಚಿತ್ರವಿಚಿತ್ರವಾದ ಅರ್ಥವೇ ಇಲ್ಲದ ನಂಬಿಕೆಗಳು, ಆಚರಣೆಗಳು ಇಂದಿಗೂ ಇವೆ ಎಂದರೆ ನೀವು ನಂಬಲೇಬೇಕು!

ಹೌದು, ಅಮೆರಿಕ ಹಾಗೂ ಇಂಗ್ಲೆಂಡಿನಲ್ಲಿ, ಮುಟ್ಟಿನ ಬಗೆಗೆ ಇನ್ನೂ ಹಲವು ನಂಬಿಕೆಗಳಿವೆಯಂತೆ. ಮುಟ್ಟು ಎಂದರೆ ಕೊಳಕು, ಆ ದಿನಗಳಲ್ಲಿ ಸ್ನಾನ ಕಷ್ಟ ಎಂದು ಹಲವರು ನಂಬುತ್ತಾರಂತೆ. ಮುಟ್ಟಿನ ದಿನಗಳಲ್ಲಿ ಪ್ರವಾಸ ಮಾಡಬಾರದು, ಕಾಡಿನಲ್ಲಿ ಕ್ಯಾಂಪಿಂಗ್‌ ಮಾಡಿದರೆ, ಎಷ್ಟೇ ದೂರದಲ್ಲಿದ್ದರೂ ಕರಡಿ, ವಾಸನೆ ಹಿಡಿದು ಆಕ್ರಮಣ ಮಾಡುತ್ತದೆ ಎಂಬ ವಿಚಿತ್ರ ನಂಬಿಕೆಯೂ ಇದೆಯಂತೆ! ಮುಟ್ಟಿನ ದಿನಗಳಲ್ಲಿ ಉಪ್ಪಿನಕಾಯಿ ಹಾಕಬಾರದು, ಹಾಕಿದರೆ ಉಪ್ಪಿನಕಾಯಿ ಹಾಳಾಗುತ್ತದೆ ಎಂದೂ ನಂಬುತ್ತಾರಂತೆ.

ನೇಪಾಳದಲ್ಲಿ ಮುಟ್ಟಾದರೆ, ಮನೆಯಲ್ಲಿರಬಾರದಂತೆ. ಹೊರಗೆ ಎಲ್ಲಿ ಬೇಕಾದರೂ ಹೋಗಬಹುದಂತೆ!

ಇಸ್ರೇಲಿನಲ್ಲಿ ಮೊದಲ ಬಾರಿ ಮುಟ್ಟಾದರೆ, ಕೆನ್ನೆಗೆ ಛಳೀರನೆ ಒಂದೇಟು ಹೊಡೆದುಬಿಡುತ್ತಾರಂತೆ! ಆಗ ಕೆಂಪಾದ ಕೆನ್ನೆ ಜೀವನ ಪರ್ಯಂತ ಇರುತ್ತದೆ ಎಂಬುದು ಅವರ ನಂಬಿಕೆ. ಜೊತೆಗೆ ಬಿಸಿನೀರಿನಲ್ಲಿ ಸ್ನಾನ ಮಾಡಿದರೆ, ರಕ್ತಸ್ರಾವ ಅಧಿಕವಾಗುತ್ತದೆ ಎಂದು ನಂಬುತ್ತಾರಂತೆ.

ಕೊಲಂಬಿಯಾದಲ್ಲಿ ಮುಟ್ಟಿನ ದಿನಗಳಲ್ಲಿ ತಲೆಗೆ ಸ್ನಾನ ಮಾಡಬಾರದಂತೆ. ತಣ್ಣಗಿನ ಜ್ಯೂಸು ಕೂಡಾ ಕುಡಿಯಬಾರದಂತೆ. ಕುಡಿದರೆ ಹೊಟ್ಟೆನೋವು ಹೆಚ್ಚಾಗುತ್ತದೆ ಅಂದುಕೊಂಡಿದ್ದಾರೆ.

ಪೋಲೆಂಡಿನಲ್ಲಿ ಮುಟ್ಟಿನ ದಿನಗಳಲ್ಲಿ ಲೈಂಗಿಕ ಸಂಪರ್ಕ ಮಾಡಿದರೆ, ಸಂಗಾತಿ ಸತ್ತು ಹೋಗುತ್ತಾನೆ ಎಂಬ ನಂಬಿಕೆಯಂತೆ.

ಇದನ್ನೂ ಓದಿ: Breastfeeding Week 2022 | ಅಮ್ಮನ ಹಾಲೇ ಅಮೃತ!

ರೊಮೇನಿಯಾದಲ್ಲಿ, ಮುಟ್ಟಾದ ಮಹಿಳೆ ಹೂವನ್ನು ಮುಟ್ಟಬಾರದಂತೆ, ಮುಟ್ಟಿದರೆ ಆ ಗಿಡ ಸತ್ತು ಹೋಗುತ್ತದೆ ಎನ್ನುತ್ತಾರಂತೆ.

ಮಲೇಶಿಯಾದಲ್ಲಿ, ಮುಟ್ಟಾದ ಮಹಿಳೆ ಪ್ಯಾಡ್‌ ಉಪಯೋಗಿಸಿದರೆ ಅದನ್ನೂ ತೊಳೆಯಬೇಕಂತೆ. ಹಾಗೇ ಬಿಸಾಕಿದರೆ, ದೆವ್ವ ನಿಮ್ಮನ್ನು ಹುಡುಕಿಕೊಂಡು ಬಂದು ನಿಮ್ಮೊಳಗೆ ಪ್ರವೇಶಿಸುತ್ತದೆ ಎಂಬ ನಂಬಿಕೆಯಿದೆಯಂತೆ.

ಮೆಕ್ಸಿಕೋನಲ್ಲಿ ಮುಟ್ಟಿನ ದಿನಗಳಲ್ಲಿ ನೃತ್ಯ ಮಾಡಬಾರದು ಎಂಬ ನಂಬುತ್ತಾರಂತೆ. ಇದರಿಂದ ಗರ್ಭಕೋಶಕ್ಕೆ ಪೆಟ್ಟಾಗುತ್ತದೆಯಂತೆ.

ಡೊಮಿನಿಕನ್‌ ರಿಪಬ್ಲಿಕ್‌ನಲ್ಲಿ, ಮುಟ್ಟಿನ ಸಂದರ್ಭ ನೇಲ್‌ ಪಾಲಿಶ್‌ ಹಚ್ಚಬಾರದಂತೆ.

ಬ್ರೆಜಿಲ್‌ ದೇಶದಲ್ಲಿ ಬರಿಗಾಲಲ್ಲಿ ನಡೆಯಬಾರದು ಹಾಗೂ ಈ ದಿನಗಳಲ್ಲಿ ತಲೆಗೆ ಸ್ನಾನ ಮಾಡಬಾರದು ಎಂದು ನಿಯಮ ಪಾಲಿಸುತ್ತಾರಂತೆ.

ಅರ್ಜೇಂಟೀನಾ ಹಾಗೂ ಫ್ರಾನ್ಸ್‌ನಲ್ಲಿ ಹಾಲಿನ ಉತ್ಪನ್ನಗಳ ಕೆಲಸ ಮುಟ್ಟಾದ ಮಹಿಳೆ ಮಾಡಬಾರದಂತೆ. ಹಾಲು ಹಾಳಾಗಿ ಮೊಸರಾಗುತ್ತದೆ ಎಂಬ ನಂಬಿಕೆಯಿದೆಯಂತೆ. ಅಷ್ಟೇ ಅಲ್ಲ, ಈ ದಿನಗಳಲ್ಲಿ ಸ್ನಾನ ಮಾಡಿದರೆ ರಕ್ತಸ್ರಾವ ನಿಂತುಬಿಡುತ್ತದೆ ಹಾಗೂ ನಿಂತರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನಂಬುತ್ತಾರಂತೆ.

ಫಿಲಿಪೈನ್ಸ್‌ನಲ್ಲಿ ಮೊದಲ ಮುಟ್ಟಿನ ಸಂದರ್ಭ ಆಕೆ ತನ್ನ ರಕ್ತಸ್ರಾವದ ರಕ್ತದಿಂದಲೇ ಮುಖ ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಆಕೆಯ ಸೌಂದರ್ಯ ಇಮ್ಮಡಿಯಾಗುತ್ತದೆ ಎಂದು ನಂಬುತ್ತಾರಂತೆ.

ಇಟಲಿಯಲ್ಲಿ ಮುಟ್ಟಾದ ಮಹಿಳೆ ಹಿಟ್ಟು ಮಾಡಬಾರದು, ಅಡುಗೆ ಮಾಡಬಾರದು, ಮಾಡಿದರೆ ಅವೆಲ್ಲ ಹಾಳಾಗುತ್ತದೆ ಎಂಬ ನಂಬಿಕೆಯಂತೆ. ಜೊತೆಗೆ ಯಾವುದೇ ಗಿಡವನ್ನು ಮುಟ್ಟಿದರೂ ಅವು ಸಾಯುತ್ತದೆ ಎಂಬ ನಂಬಿಕೆಯಂತೆ.

ಜಪಾನಿನಲ್ಲಿ ಮುಟ್ಟಾದಾಕೆ ಸುಶಿ (ಜಪಾನೀ ತಿನಿಸು) ಮಾಡಬಾರದು, ಮಾಡಿದರೆ ಅದು ರುಚಿಯಾಗಿರುವುದಿಲ್ಲ ಎಂದು ನಂಬುತ್ತಾರಂತೆ!

ಇದನ್ನೂ ಓದಿ: ಈಗೀಗ 30-40ನೇ ವಯಸ್ಸಿನಲ್ಲೇ ಸ್ತನ ಕ್ಯಾನ್ಸರ್‌ ಕಾಡುವುದೇಕೆ? ಎಲ್ಲಿ ಎಡವಿದ್ದೇವೆ ನಾವು?

Exit mobile version