Site icon Vistara News

No marriage movement | ಮದುವೆ, ಮಕ್ಕಳು ಯಾವುದೂ ಬೇಡ: ಯುವತಿಯರಲ್ಲೀಗ ಹೊಸ ಟ್ರೆಂಡ್‌!

marriage

ಮಿಲೇನಿಯಲ್‌ ಮಹಿಳೆಯರಲ್ಲೀಗ ಹೊಸ ಟ್ರೆಂಡ್‌ ಶುರುವಾಗಿದೆ! ʻಮದುವೆ ಒಕೆ, ಮಕ್ಕಳು ಬೇಡʼ, ʻಮದುವೆಯೂ ಬೇಡ, ಮಕ್ಕಳೂ ಬೇಡʼ ಇವೆರಡು ಬಗೆಯ ಟ್ರೆಂಡ್‌ಗಳು ಇದೀಗ ಭಾರತವೂ ಸೇರಿದಂತೆ ಪ್ರಪಂಚದ ಬಹುತೇಕ ಮುಂದುವರಿದ, ಮುಂದುವರಿಯುತ್ತಿರುವ ದೇಶಗಳಲ್ಲಿ ನಿಧಾನವಾಗಿ ಹಬ್ಬಿಕೊಳ್ಳುತ್ತಿದೆ. ನಮ್ಮ ಅಕ್ಕಪಕ್ಕದ ಹುಡುಗಿಯರೇ, ೨೮ಕ್ಕೆ ಮದುವೆಯಾಗಿ, ಬಿಂದಾಸ್‌ ಆಗಿ ಬೇಕಾದ ಹಾಗಿದ್ದುಕೊಂಡು ʻಮಕ್ಕಳ ಯೋಚನೆ ಮಾತ್ರ ನಮಗಿಲ್ಲʼ ಎಂದು ಹೇಳುವುದು ಕೂಡಾ ಈಗ ನಮಗೆ ಸಹಜ ಎನಿಸತೊಡಗಿದೆ.

ಹಾಗೆ ನೋಡಿದರೆ, ಪ್ರಪಂಚದ ಇತ್ತೀಚೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ, ಬರ್ತ್‌ ರೇಟ್‌ (ಜನನ ಅನುಪಾತ) ಕುಗ್ಗುತ್ತಿದೆ. ಅತ್ಯಂತ ಹೆಚ್ಚು ಜನಸಂಖ್ಯೆಯ ಚೀನಾದ ಬರ್ತ್‌ ರೇಟ್‌ ೧.೭. ಅಂದರೆ, ಪ್ರತಿಯೊಬ್ಬ ಜೋಡಿಗೆ ೧.೭ ಮಕ್ಕಳಿದ್ದಂತೆ! ಭಾರತದಲ್ಲಿ ಇದು ೨.೧ಕ್ಕೆ ಇಳಿದಿದೆ. ಅಂದರೆ ಒಂದು ಕುಟುಂಬಕ್ಕೆ ಇಬ್ಬರು ಮಕ್ಕಳ ಅನುಪಾತ ಭಾರತದಲ್ಲಿದೆ. ದಕ್ಷಿಣ ಕೊರಿಯಾದಲ್ಲಿ ೧, ಸಿಂಗಾಪುರದಲ್ಲಿ ೧.೧, ಹಾಂಗ್‌ಕಾಂಗ್‌ನಲ್ಲಿ ೧.೧, ಸ್ಪೈನ್‌ನಲ್ಲಿ ೧.೩, ಇಟಲಿಯಲ್ಲಿ ೧.೩, ಕೆನಡಾದಲ್ಲಿ ೧.೫, ಯುಎಸ್‌ನಲ್ಲಿ ೧.೭ ಹೀಗೆ ಎಲ್ಲ ದೇಶಗಳಲ್ಲೂ ಹುಟ್ಟುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಂದರೆ, ನಿಧಾನವಾಗಿ, ಇಬ್ಬರು ಮಕ್ಕಳನ್ನು ಸಾಮಾನ್ಯವಾಗಿ ಬಯಸುವಲ್ಲಿ ಒಂದಕ್ಕೆ ಇಳಿದಿದ್ದರೆ, ಹಲವರು ಮಕ್ಕಳನ್ನು ಹೆರುವುದೆಂಬ ಜಂಜಡದಿಂದ ಹೊರಗುಳಿಯುತ್ತಿರುವ ಸಂಸ್ಕೃತಿ ಹೆಚ್ಚಾಗುತ್ತಿದೆ.

ಒಂದು ಕಾಲದಲ್ಲಿ, ದಂಪತಿಗಳಲ್ಲಿ ಸಮಸ್ಯೆ ಯಾರಲ್ಲೇ ಇದ್ದರೂ, ಮಕ್ಕಳಾಗದಿದ್ದರೆ ಮಹಿಳೆಗೆ ಬಂಜೆ ಎಂಬ ಪಟ್ಟ ಕಟ್ಟಿ ಹೊಣೆಗಾರರಳನ್ನಾಗಿ ಮಾಡಲಾಗುತ್ತಿತ್ತು. ಕೇವಲ ಭಾರತದಲ್ಲಷ್ಟೇ ಅಲ್ಲ, ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಈ ನಡತೆಯೇ ಜಾರಿಯಲ್ಲಿತ್ತು. ರೋಮ್‌ನಲ್ಲಿ ಮಕ್ಕಳಾಗದಿದ್ದರೆ, ಆಕೆ ಹೆಂಡತಿಯಾಗಿರಲಿಕ್ಕೇ ನಾಲಾಯಕ್ಕು ಎಂದು ಆಕೆಯನ್ನು ತ್ಯಜಿಸಲಾಗುತ್ತಿತ್ತು. ಇಲ್ಲಿ ಬಂಜೆ ಎಂಬ ಹೆಸರ ಬದಲಾಗಿ ಅಲ್ಲಿ ಇನ್ನೊಂದು ಹೆಸರಿಡಲಾಗಿತ್ತು ಅಷ್ಟೇ. ಆಕೆಯನ್ನು ಕೆಟ್ಟ ಆತ್ಮ ಎಂಬಂತೆ ನೋಡಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಈ ಪಿಡುಗು ನಗರಗಳಲ್ಲಂತೂ ದೂರಾಗಿದ್ದು, ಬಹುತೇಕ ಹಳ್ಳಿಗಳಲ್ಲೂ ಜನರು ಅರ್ಥ ಮಾಡಿಕೊಳ್ಳಬಲ್ಲ ಪರಿಸ್ಥಿತಿಗೆ ಬರುತ್ತಿದ್ದಾರೆ. ಅಷ್ಟರಲ್ಲಿ ನಿಧಾನವಾಗಿ ಪರಿಸ್ಥಿತಿ ಬೇರೆಯದೇ ರೂಪ ತಳೆಯುತ್ತಿದೆ. ನಾನು ಮಕ್ಕಳನ್ನು ಮಾಡಿಕೊಳ್ಳುವುದಿಲ್ಲ ಎಂದು ಮದುವೆಯಾದ ಮಹಿಳೆ ಎಲ್ಲರೊಂದಿಗೆ ಹೇಳಿಕೊಳ್ಳುವಷ್ಟು ಕಾಲ ಬದಲಾಗಿದೆ.

ಇದನ್ನೂ ಓದಿ: Woman style | ಎಂಥ ಮಹಿಳೆಯರನ್ನು ಕಂಡರೆ ಪುರುಷರಿಗೆ ಇಷ್ಟವೇ ಆಗುವುದಿಲ್ಲ?!

ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಯುವಪೀಳಿಗೆಯಲ್ಲಿ ʻನೋ ಮ್ಯಾರೇಜ್‌ ಮೂವ್‌ಮೆಂಟ್‌ʼ ಶುರುವಾಗಿದೆ. ನಮಗೆ ನಮ್ಮ ವೃತ್ತಿಯೇ ಮುಖ್ಯ, ಮದುವೆ ಬೇಡ ಎಂದು ಬಂಡಾಯ ಹೂಡುವ ಮಿಲೇನಿಯಲ್‌ ಹುಡುಗಿಯರ ಸಂಖ್ಯೆ ಹೆಚ್ಚಾಗುತ್ತಿದೆ. ದಕ್ಷಿಣ ಕೊರಿಯಾ ಎಂಬ ಸಂಸ್ಕೃತಿ ಪರಂಪರೆಯ ದೇಶದಲ್ಲೂ ಕೂಡಾ ಇಂದಿಗೂ ಮಹಿಳೆಯರು ಎಷ್ಟೇ ವೃತ್ತಿಯೆಂದು ಹೊರಗೆ ಕಾಲಿಟ್ಟರೂ, ಮನೆಯೊಳಗಿನ ಆಗುಹೋಗುಗಳನ್ನು ತಮ್ಮ ಕೆಲಸದ ಜೊತೆಗೆ ನಡೆಸಿಕೊಂಡು ಹೋಗಬೇಕು ಎನ್ನುವ ಪರಿಸ್ಥಿತಿ ಇದೆ. ಇಂಥ ಜಾಗದಲ್ಲೂ ಇಂದು ಮಹಿಳೆಯರು ನಮಗೆ ʻಕರಿಯರ್‌ ಬೇಕು, ಮ್ಯಾರೇಜ್‌ ಬೇಡʼ ಎಂದು ನೇರವಾಗಿ ತಮ್ಮ ಆಯ್ಕೆಯನ್ನು ಮುಂದಿಡುತ್ತಿದ್ದಾರೆ.

ಹಾಗಾದರೆ, ಪರಿಸ್ಥಿತಿ ಹೀಗಾಗಲು ಕಾರಣವೇನು? ಇಂದಿನ ಯುವಜನಾಂಗ ಮದುವೆ, ಮಕ್ಕಳ ಹೆಸರೆತ್ತಿದರೆ ಬೆನ್ನು ತಿರುಗಿಸುವುದ್ಯಾಕೆ ಎಂದು ಕೆದಕ ಹೊರಟರೆ ಕಾರಣಗಳು ಹಲವಾರು. ಅವುಗಳಲ್ಲಿ ಮುಖ್ಯವಾದದ್ದು ಎಂದರೆ ಶಿಕ್ಷಣ ಹಾಗೂ ಅವಕಾಶಗಳು. ಇಂದು ಮಹಿಳೆಯರು ಉತ್ತಮ ಶಿಕ್ಷಣ ಪಡೆಯುತ್ತಿದ್ದು ತಮ್ಮ ಜೀವನ ತಾವೇ ರೂಪಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ. ಓದು ಮುಗಿದ ತಕ್ಷಣ ಮದುವೆ ಎಂಬ ಚಿಂತನೆಯಿಂದ ಮಹಿಳೆಯರು ಮುಂದೆ ಹೋಗಿದ್ದಾರೆ. ತಮ್ಮ ಕನಸಿನ ಓದಿನ ನಂತರ ಕನಸಿನ ಉದ್ಯೋಗ, ಉದ್ಯೋಗದಲ್ಲಿ ಯಶಸ್ಸು, ಪ್ರಪಂಚ ಸುತ್ತಿ ನೋಡುವ ಕನಸು ಮಹಿಳೆಯರಲ್ಲಿ ಗರಿಗೆದರಿವೆ. ಮದುವೆಯಾಗಿ ಕೂಡಲೇ ಮಕ್ಕಳನ್ನು ಹೆರುವುದು, ಕುಟುಂಬ ಬೆಳೆಸುವುದು ಮತ್ತಿತರ ಯೋಚನೆಗಳು ಇದೀಗ ಮೂಲೆ ಸೇರುತ್ತಿವೆ.

ಮಹಿಳೆಗೆ ದಕ್ಕಿದ ಆರ್ಥಿಕ ಸ್ವಾತಂತ್ರ್ಯ ಆಕೆಯ ರೆಕ್ಕೆಗಳನ್ನು ಇನ್ನಷ್ಟು ವಿಸ್ತರಿಸಿದೆ. ಮಿಲೇನಿಯಲ್‌ ಗಂಡು ಹೆಣ್ಣು ಪರಸ್ಪರ ಮಾತನಾಡಿಕೊಂಡು ಮದುವೆಯೆಂಬ ಬಂಧಕ್ಕೆ ಮುಂದಡಿಯಿಟ್ಟರೂ, ಹಲವರು ಮಕ್ಕಳು ಮಾತ್ರ ಬೇಡ ಎಂಬ ನಿರ್ಧಾರಕ್ಕೆ ಬರುತ್ತಿದ್ದಾರೆ. ಮಹಿಳೆಯ ಮದುವೆಯ ವಯಸ್ಸೂ ೨೮ರ ಆಸುಪಾಸಿಗೆ ಏರುತ್ತಿದ್ದು, ಮಕ್ಕಳನ್ನು ಮಾಡಿಕೊಳ್ಳುವ ವಯಸ್ಸು ಇನ್ನೂ ಮುಂದಕ್ಕೆ ಹೋಗುತ್ತಿದೆ. ನಮ್ಮ ಒತ್ತಡದ ಜೀವನದಲ್ಲಿ ಮಕ್ಕಳಿಗೆ ನೀಡಬೇಕಾದ ಸಮಯಕ್ಕೆ ನಮಗೆ ಪುರುಸೊತ್ತಿಲ್ಲʼ ಎಂಬುದು ಗಂಡ ಹೆಂಡಿರ ಒಮ್ಮತದ ನಿರ್ಧಾರವಾದರೆ, ಇನ್ನೂ ಕೆಲವರದ್ದು, ʻಸೆಲ್ಫ್‌ ಲವ್‌ʼ ಹೆಸರಿನಡಿ, ʻಇರುವುದೊಂದೇ ಜೀವನ. ಇರುವ ಅಮೂಲ್ಯ ಜೀವನವನ್ನು ನಮ್ಮ ಆಸಕ್ತಿಗಳಿಗೆ ಬಳಸಬೇಕು. ಮಕ್ಕಳು ಎಂಬ ಸಂಸಾರ ಬಂಧನದಲ್ಲಿ ಸಿಲುಕಿದರೆ, ಅಲ್ಲಿಯೂ ನ್ಯಾಯ ಸಲ್ಲಿಸಲಾಗದೆ, ನಮಗೂ ನಾವು ನ್ಯಾಯ ನೀಡಲಾಗದೆ ಅನುಭವಿಸುವ ಮಾನಸಿಕ ತುಮುಲ ಯಾಕೆ ಬೇಕು? ಅದಕ್ಕಾಗಿ, ಇನ್ನೊಂದು ಜೀವವನ್ನು ಜಗತ್ತಿಗೆ ಪರಿಚಯಿಸಿ ಅವರಿಗೆ ಅನ್ಯಾಯವೆಸಗುವ ಬದಲಾಗಿ ನಮಗೆ ನಾವೇ ನ್ಯಾಯ ಕೊಟ್ಟುಕೊಳ್ಳುತ್ತೇವೆʼ ಎಂಬ ವಾದ ಮುಂದಿಡುತ್ತಿದ್ದಾರೆ.

ಇನ್ನೂ ಕೆಲವರು, ಮುಂದುವರಿದ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆಯಿಂದ ಮಕ್ಕಳ ಶಿಕ್ಷಣ ಎಂದರೆ ಇಂದು ಮಧ್ಯಮ ವರ್ಗಕ್ಕೆ ಕೈಗೆಟುಕದ ಸೊತ್ತಾಗಿ ಪರಿಣಮಿಸುತ್ತಿದೆ. ಜೊತೆಗೆ ಮಕ್ಕಳನ್ನು ಹೊಂದಿರುವವರ ಮುಂದಿರುವ ಸವಾಲುಗಳು, ಅವರು ಪಡುವ ಕಷ್ಟಗಳು ನಮಗೆ ಬೇಡ ಎಂದು ಮಕ್ಕಳೆಂಬ ಉಸಾಬರಿಗೆ ಕೈಮುಗಿವವರೂ ಇದ್ದಾರೆ. ಇನ್ನೂ ಕೆಲವರು, ಸದ್ಯ ಜಗತ್ತಿಗೇ ನುಂಗಲಾರದ ತುತ್ತಾಗಿ ಪರಿಣಮಿಸಿದ ಕೊರೋನಾದಂತಹ ಕಾಯಿಲೆಗಳು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಮಕ್ಕಳು ಸದ್ಯಕ್ಕೆ ಬೇಡ ಎಂದು ಧೈರ್ಯ ಮಾಡುತ್ತಿಲ್ಲ ಎಂಬುದು ತಿಳಿದು ಬಂದಿದೆ.

ಒಟ್ಟಾರೆ ಕಳೆದ ೫೦ ವರ್ಷಗಳಿಗೆ ಹೋಲಿಸಿದರೆ, ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇಂದು ಜನನ ಅನುಪಾತ ಇಳೆಕೆಯತ್ತ ಮುಖ ಮಾಡಿದ್ದು, ಇದು ಹೀಗೆಯೇ ಮುಂದುವರಿದರೆ, ಮುಂದಿನ ೫೦ ವರ್ಷಗಳಲ್ಲಿ ಇದು ನಿಜಕ್ಕೂ ಕಳವಳವನ್ನೇ ತಂದೊಡ್ಡಲಿದೆ ಎಂಬ ಲೆಕ್ಕಾಚಾರಗಳೂ ಈಗ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ನನ್ನ ಗೆಳೆಯ ಸ್ವಿಜರ್​ಲ್ಯಾಂಡ್​ಗೆ ಹೋದರೆ ಉಳಿಯೋದಿಲ್ಲ, ಅವನನ್ನು ತಡೆಯಿರಿ: ಹೈಕೋರ್ಟ್​ ಮೆಟ್ಟಿಲೇರಿದ ಮಹಿಳೆ

Exit mobile version