Site icon Vistara News

Parenting Tips: ಮಕ್ಕಳನ್ನು ಸಮಾಧಾನಗೊಳಿಸುವ ವೇದ ವಾಕ್ಯಗಳು!

parenting

ಮಕ್ಕಳು ಅಳುತ್ತಿದ್ದರೆ ನಾವು ಹೇಳುವ ಮೊದಲ ವಾಕ್ಯ ಎಂದರೆ, “ಸಾಕು ನಿಲ್ಸು! ಅಳ್ಬೇಡ”. ಸಣ್ಣ ಮಾತು ಬಾರದ ಮಗುವಾದರೆ ಅಮ್ಮನ ಸಾನಿಧ್ಯದಲ್ಲೇ ಸುಖ ಸಿಕ್ಕಿ ಅಳು ನಿಲ್ಲಿಸಬಹುದು. ಪುಟಾಣಿ ಮಗುವಿನ ಆದ್ಯತೆಗಳೇ ಬೇರೆ. ಆಗ ಹೆತ್ತವರ ತಾಳ್ಮೆಯೂ ಹೆಚ್ಚಿರುತ್ತದೆ, ಆದರೆ, ಒಮ್ಮೆ ಮಗು ಸ್ವಲ್ಪ ಬೆಳೆದು ಪ್ರಾಥಮಿಕ ಶಾಲೆಯ ಹಂತಕ್ಕೆ ಬಂದರೆ ಆಗ ಮಕ್ಕಳ ಅಳು, ಹಠ ನಿಲ್ಲಿಸುವುದು ಹೆತ್ತವರಿಗೆ ಸವಾಲಿನ ಪರಿಸ್ಥಿತಿಯಾಗಿ ಬದಲಾಗುತ್ತದೆ.  ಸಂದರ್ಭ ಮಕ್ಕಳ ಮೇಲಾಗುವ ಹೊರ ಜಗತ್ತಿನ ಪ್ರಭಾವವೂ ದೊಡ್ಡದಿರುವುದರಿಂದ ಮಕ್ಕಳನ್ನು ಈ ಸಂದರ್ಭ ಹತೋಟಿಗೆ (Parenting Tips) ತರುವ ಕಾರ್ಯ ಬಹಳ ದೊಡ್ಡದು.

ಹಾಗಾದರೆ, ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಅಡ್ಡ ಪರಿಣಾಮ ಬೀರದಂತೆ ಸಂಭಾಳಿಸುವುದು ಹೇಗೆ ಎನ್ನುವುದು ಎಲ್ಲ ಹೆತ್ತವರಿಗೆ ಇರುವ ಸಂಕಟ. ಬಹಳ ಸಾರಿ ಇಂಥ ಪ್ರಾಯದ ಮಕ್ಕಳು ಅತ್ತರೆ, ಅಳು ನಿಲ್ಲಿಸು, ಸಾಕು ಅತ್ತಿದ್ದು ಎಂಬಿತ್ಯಾದಿ ಡೈಲಾಗುಗಳನ್ನೇ ಉದುರಿಸಿ ಮಕ್ಕಳ ನಿಜವಾದ ಸಮಸ್ಯೆಯನ್ನು ಧನಾತ್ಮಕ ಆಯಾಮದಲ್ಲಿ ಪರಿಹರಿಸಲು ಪ್ರಯತ್ನಿಸುವಲ್ಲಿ ಸೋಲುತ್ತೇವೆ.

ಅಳು ಎಂಬುದಕ್ಕೆ ಯಾವಾಗಲೂ ಬೇಸರವೇ ಕಾರಣವಾಗಬೇಕಿಲ್ಲ. ಸಿಟ್ಟು, ಹತಾಷೆ, ಗೊಂದಲ, ಮಾನಸಿಕ ಒತ್ತಡ, ಹಾಗೂ ಕೆಲವೊಮ್ಮೆ ಖುಷಿಯೂ ಕಾರಣವಾಗಿರಬಹುದು. ಬಹಳಷ್ಟು ಮಕ್ಕಳಿಗೆ ಈ ಹಂತದಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಬಗೆಗೆ ಗೊಂದಲಗಳಿರುತ್ತವೆ. ಹೇಗೆ ವ್ಯಕ್ತಪಡಿಸುವುದು ಎಂಬುದು ತಿಳಿದಿರುವುದಿಲ್ಲ. ಅಂಥ ಸಂದರ್ಭ ಅಳುವೊಂದೇ ಅವರ ಮಾರ್ಗವಾಗಿರುತ್ತದೆ. ಆಗ, ಹೆತ್ತವರು ವ್ಯಕ್ತಪಡಿಸುವ ಪ್ರತಿಕ್ರಿಯೆಗಳು ಮಕ್ಕಳ ಮನಸ್ಸಿನ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. “ಸಾಕು ನಿಲ್ಲಿಸು, ಅಳ್ಬೇಡ, ಸುಮ್ನಿರು” ಇತ್ಯಾದಿ ವಾಕ್ಯಗಳು ಮಕ್ಕಳಿಗೆ ತಮ್ಮ ಹೆತ್ತವರು ತಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂಬ ಸಂದೇಶವನ್ನಷ್ಟೆ ರವಾನಿಸುತ್ತದೆ. ಇದರಿಂದ ಒಂದು ಆರೋಗ್ಯಕರ ಸಂಬಂಧ ಅಲ್ಲೇ ಮುರುಟುತ್ತದೆ. ಹೆತ್ತವರೊಂದಿಗೆ ಸುಲಭವಾಗಿ ಮಾತಿನ ಮೂಲಕ ಶಾಂತವಾಗಿ ಮಕ್ಕಳು ಅನಿಸಿಕೆಗಳನ್ನು ಹಂಚಿಕೊಳ್ಳುವವರಾಗಿ ಬದಲಾವಣೆ ಹೊಂದುವುದು ಸಾಧ್ಯವಾಗುವುದಿಲ್ಲ.

ಮಕ್ಕಳೊಂದಿಗೆ ಆರೋಗ್ಯಕರ ಫ್ರೆಂಡ್ಲೀ ಸಂಬಂಧವೊಂದು ಎಳವೆಯಲ್ಲೇ ಚಿಗುರೊಡೆಯಲು ಹೆತ್ತವರ ಪಾತ್ರ ಬಹಳ ಮುಖ್ಯವಾಗುತ್ತದೆ. ಮಕ್ಕಳು ಅತ್ತಾಗ ರಚ್ಚೆ ಹಿಡಿದಾಗ, ಸಾಮಾನ್ಯವಾಗಿ ಹೇಳುವ ಮಾತನ್ನು ಬಿಟ್ಟು ಬೇರೆ ವಿಧಾನಗಳಲ್ಲೂ ಅವರನ್ನು ಶಾಂತಗೊಳಿಸಬಹುದು ಹಾಗೂ ಹೆತ್ತವರಿಗೆ ನಮ್ಮ ಭಾವನೆಗಳು ಅರ್ಥವಾಗುತ್ತದೆ ಎಂಬ ಸಂದೇಶವನ್ನು ರವಾನಿಸಬಹುದು.

ಇದನ್ನೂ ಓದಿ: Aadhaar card : ಮಕ್ಕಳಿಗೆ ಆಧಾರ್‌ ಕಾರ್ಡ್‌ ಮಾಡಿಸಲು ಅರ್ಜಿ ಸಲ್ಲಿಸುವುದು ಹೇಗೆ?

ಒಮ್ಮೆ ಅಳು ನಿಲ್ಲಿಸ್ತೀಯಾ ಇಲ್ವೋ ಎಂದು ಗದರುವುದು ಸುಲಭ. ಆದರೆ ಅದರ ಬದಲು, “ಹೇಳು, ಯಾಕೆ ಅಳ್ತಾ ಇದ್ದಿ? ನೀನು ನನ್ನ ಜೊತೆ ಹಂಚಿಕೋಬಹುದು, ನಾನು ನಿನ್ನ ಬೆಸ್ಟ್‌ ಫ್ರೆಂಡ್‌” ಎಂದು ಅಭಯ ನೀಡಬಹುದು. “ನನಗೆ ಅರ್ಥವಾಗುತ್ತದೆ ನಿನ್ನ ಕಷ್ಟದ ಪರಿಸ್ಥಿತಿ” ಎನ್ನಬಹುದು. “ನಿನಗೆ ನೋವಾದರೆ ನನಗೂ ನೋವಾಗುತ್ತದೆ” ಎಂದೂ ಕೈಹಿಡಿದು ನಾನಿನ್ನ ಜೊತೆಗಿದ್ದೇನೆ ಎಂದು ಅಪ್ಪಿಕೊಳ್ಳಬಹುದು. “ನಾನು ನಿನ್ನ ಜಾಗದಲ್ಲಿದ್ದರೆ, ನನಗೂ ಹೀಗೆಯೇ ನೋವಾಗುತ್ತಿತ್ತು” ಎನ್ನಬಹುದು. “ಅಳುವುದು ಒಕೆ, ತೊಂದರೆಯಿಲ್ಲ, ಸಮಾಧಾನ ಸಿಗುತ್ತದೆ, ನಾನೂ ಕೆಲವೊಮ್ಮೆ ನಿನ್ನ ವಯಸ್ಸಿನಲ್ಲಿ ಹೀಗೇ ಅಳುತ್ತಿದ್ದೆ” ಎಂದೂ ಸಮಾಧಾನದ ಮಾತನ್ನಾಡಬಹುದು. “ಸಮಾಧಾನ ಮಾಡಿಕೊಳ್ಳಲು ಸಮಯ ಬೇಕೆಂದರೆ ಒಕೆ, ನಿನ್ನ ಸಮಯ ತೆಗೆದುಕೋ” ಎಂದವರನ್ನು ಸುಮ್ಮನೆ ಬಿಡಬಹುದು. ತಾಳ್ಮೆಯಿಂದ ಪಕ್ಕದಲ್ಲಿ ಜೊತೆಗೆ ಕೂರಬಹುದು. “ಸರಿ ಇದಕ್ಕೊಂದು ಪರಿಹಾರ ಹುಡುಕೋಣ” ಎಂದು ಇಬ್ಬರೂ ಕೂತು ಮಾತಾಡಿ ಸಮಸ್ಯೆ ಬಗೆಹರಿಸಬಹುದು. “ನೋಡು ನಾನು ಯಾವಾಗಲೂ ನಿನ್ನ ಜೊತೆಗಿದ್ದೇನೆ, ನನ್ನ ಜೊತೆ ನಿನ್ನ ಭಾವನೆ ಹಂಚಿಕೊಳ್ಳಬಹುದು” ಎಂದೂ ಹೇಳಬಹುದು. ಮಕ್ಕಳು ಪ್ರಾಥಮಿಕ ಶಾಲೆಯ ವಯಸ್ಸಿನಲ್ಲಿಯೇ ಇಂತಹ ಮಾತುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನೆನಪಿರಲಿ.

ಮಕ್ಕಳು ದೊಡ್ಡವರಿರಲಿ ಸಣ್ಣವರಿರಲಿ ಹೆತ್ತವರು ನಮ್ಮ ಜೊತೆಗಿದ್ದಾರೆ ಎಂಬ ಅಭಯ, ತಾಳ್ಮೆ ಮಕ್ಕಳ ಎಷ್ಟೋ ಭಾವನಾತ್ಮಕ ಸಮಸ್ಯೆಗಳನ್ನು ತಿಳಿಗೊಳಿಸುತ್ತದೆ. ತಾಳ್ಮೆಯೆಂಬುದು ಸಂಬಂಧವನ್ನು ಕಾಯುತ್ತದೆ.

ಇದನ್ನೂ ಓದಿ: Kids Care In Summer: ಬೇಸಿಗೆ ಬೇಗೆಯಲ್ಲಿ ಪುಟ್ಟ ಮಕ್ಕಳನ್ನು ಖುಷಿಯಾಗಿರಿಸುವುದು ಹೇಗೆ?

Exit mobile version