ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆತ್ತವರಾಗುವುದು ಸವಾಲಿನ ಕೆಲಸ. ಮಗು ಹುಟ್ಟಿದ ಮೇಲೆ ಮಗುವಿನ ಜವಾಬ್ದಾರಿ ಎಂಬುದು ಎಷ್ಟೆಲ್ಲಾ ಸವಾಲುಗಳನ್ನು ನಮ್ಮ ಮುಂದಿರಿಸುತ್ತದೆ ಎಂಬುದು ಹೆತ್ತವರಾದ ಮೇಲಷ್ಟೇ ಅರಿವಾದೀತು. ಮಕ್ಕಳ ಪ್ರಪಂಚ ಅವರಿಗೆ ಹೇಗೆ ಹೊಸದೋ ಹಾಗೆಯೇ ಹೆತ್ತವರ ಪ್ರಪಂಚವೂ ಹೆತ್ತವರಾಗಿ ಅವರಿಗೆ ಹೊಸದು. ಹೆತ್ತವರಿಬ್ಬರೂ ಕೆಲಸ ಮಾಡುವುದು ಸಾಮಾನ್ಯವಾಗಿರುವಾಗ ಮಕ್ಕಳನ್ನು ಬೆಳೆಸುವುದು ಖಂಡಿತವಾಗಿಯೂ ಚಾಲೆಂಜಿಂಗ್. ಅದಕ್ಕಾಗಿ ಕೆಲವು ಪೇರೆಂಟಿಂಗ್ ಟಿಪ್ಸ್ (parenting tips) ಇಲ್ಲಿವೆ.
1. ಪಾಸಿಟಿವ್ ಮಾತುಕತೆ ಹೆಚ್ಚು ಮಾಡಿ. ನಿಮ್ಮ ನಡುವೆ ಆರೋಗ್ಯಕರ ಸಂಭಾಷಣೆಗಳು ನಡೆಯಲಿ.
2. ನೀವು ಮಕ್ಕಳ ಜೊತೆಗೆ ಎಷ್ಟು ಹೊತ್ತು ಕಳೆಯುತ್ತೀರಿ ಎಂಬುದಕ್ಕಿಂತಲೂ ಅವರ ಜೊತೆಗಿರುವ ಕಡಿಮೆ ಸಮಯದಲ್ಲೂ ಗುಣಮಟ್ಟವನ್ನು ಹೇಗೆ ಕಾಪಾಡುತ್ತೀರಿ ಎಂಬುದು ಮುಖ್ಯ. ಅವರ ಜೊತೆಗಿರುವ ಸಮಯ ಕಡಿಮೆಯಾಗಿದ್ದರೂ ನಿಮ್ಮ ಸಂಪೂರ್ಣ ಗಮನ ಆ ಸಮಯದಲ್ಲಿ ಅವರ ಮೇಲಿರಲಿ.
3. ಮಕ್ಕಳ ಕುತೂಹಲವನ್ನು ಚಿವುಟಬೇಡಿ. ಮಕ್ಕಳಿಗೆ ಪ್ರಶ್ನೆ ಕೇಳಲು ಬಿಡಿ. ಆಗ ಅವರು ದೊಡ್ಡವರಾದ ಮೇಳೂ ನಿಮ್ಮತ್ತ ತಮ್ಮ ಪ್ರಶ್ನೆಗಳ ಜೊತೆ ಬರುತ್ತಾರೆ.
4. ಮಕ್ಕಳಿಗೆ ನೀವು ಬೋಧನೆ ಮಾಡುವುದನ್ನು ನೀವೂ ಅನುಸರಿಸಿ. ನೀವು ಅವರಿಗೆ ಹೇಳುವುದನ್ನು ನೀವೇ ಸ್ವತಃ ಪಾಲಿಸುತ್ತಿಲ್ಲ ಎಂದಾದರೆ ಅವರು ಪಾಲಿಸಬೇಕೆಂದು ಬಯಸುವುದು ಶುದ್ಧ ಮೂರ್ಖತನ. ನೆನಪಿಡಿ, ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತಾರೆ, ಕೇಳಿ ಕಲಿಯುವುದಿಲ್ಲ.
5. ಮಕ್ಕಳ ಮೇಲೆ ಯಾವುದೇ ಉತ್ತಮ ಪರಿಣಾಮ ಬೀರದ ಹಾಗೂ ನಿಮ್ಮ ಹಾಗೂ ಮಗುವಿನ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುವ ಅಭ್ಯಾಸವನ್ನು ಬಿಡಲು ಪ್ರಯತ್ನಿಸಿ.
6. ಮಕ್ಕಳು ನಿಮ್ಮ ಮೇಲೆ ಅವಲಂಬಿಸುವುದನ್ನು ಕಡಿಮೆ ಮಾಡಿಸಿ. ಅವರ ಕೆಲಸಗಳನ್ನು ಅವರೇ ಮಾಡಲು ಪ್ರೋತ್ಸಾಹಿಸಿ.
7. ತೊಂದರೆಗಳನ್ನು ಪರಿಹರಿಸಲು ಯಾವಾಗಲೂ ಬೈಯುತ್ತಾ ಇರುವುದನ್ನು ನಿಲ್ಲಿಸಿ. ತಾಪತ್ರಯಗಳನ್ನು ಕ್ರಿಯೇಟಿವ್ ಆಗಿ ಪರಿಹರಿಸಲು ಪ್ರಯತ್ನಿಸಿ.
8. ನಿಮ್ಮ ನಡತೆಯ ಬಗ್ಗೆ ಮಕ್ಕಳು ನೇರವಾಗಿ ನಿಮ್ಮ ಬಳಿ ಹೇಳಿದರೆ ಅವರ ಅಭಿಪ್ರಾಯಕ್ಕೆ ಗೌರವ ಕೊಡಿ.
9. ಕೆಲವೊಮ್ಮೆ ಮನೆಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಂದರ್ಭ ಅಥವಾ ಮನೆಯ ಆಗುಹೋಗುಗಳಲ್ಲಿ ಅವರ ಭಾಗವಹಿಸುವಿಕೆಯನ್ನೂ ಪ್ರೋತ್ಸಾಹಿಸಿ, ಅವರ ನಿರ್ಧಾರಗಳನ್ನೂ ಆಲಿಸಿ.
10. ಮಕ್ಕಳ ಕೆಲವೊಂದು ಖಾಸಗಿತನಕ್ಕೆ ಬೆಲೆ ಕೊಡಿ. ಹಾಗಂತ ಅದು ಮಿತಿಮೀರದಂತೆ ಹಾಗೂ ಅವರು ನಿಮ್ಮ ಅಂಕೆ ಮೀರದಂತೆ ಇರಿಸಬಲ್ಲ ಸೂಕ್ಮತೆಯೂ ನಿಮಗೆ ಅರಿವಿರಲಿ.
11. ಮಕ್ಕಳ ಜೊತೆ ಗೆಳೆಯರ ಹಾಗಿರಿ. ಆಗ ಮಕ್ಕಳ ಹಲವು ಸಮಸ್ಯೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
12. ಮಕ್ಕಳಿಗೆ ಏನೇ ತೊಂದರೆಯಾದರೂ ಹೆತ್ತವರು ನಮ್ಮ ಜೊತೆಗಿದ್ದಾರೆ ಎಂಬ ಭದ್ರತೆ ಮೂಡಿಸಿ.
ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳ ಮೇಲೆ ನಿಜವಾದ ಪ್ರೀತಿಯಿದ್ದರೆ ಈ 12 ತಪ್ಪು ಮಾಡಬೇಡಿ!
13. ಹೆತ್ತವರು ಎಂದಾಕ್ಷಣ ೨೪/೭ ಅದೇ ನಿಮ್ಮ ಕೆಲಸವಲ್ಲ. ನಿಮ್ಮ ಖಾಸಗೀ ಆಸಕ್ತಿಗಳಿಗೂ ನೀವು ಸಮಯ ಕೊಡಿ. ಅದನ್ನೂ ಮಕ್ಕಳಿಗೆ ಅರಿವೂ ಮೂಡಿಸಿ.
14. ಬೇರೆಯವರ ಎದುರಲ್ಲಿ ಮಕ್ಕಳನ್ನು ಬೈಯಬೇಡಿ ಹಾಗೂ ಟೀಕಿಸಬೇಡಿ.
15. ಮಕ್ಕಳಿಗೆ ಇಬ್ಬರಿಂದಲೂ ಅಂದರೆ ಅಪ್ಪ ಹಾಗೂ ಅಮ್ಮನಿಂದ ಸಮಾನ ಪ್ರೀತಿ ಸಿಗುವಂತೆ ನೋಡಿಕೊಳ್ಳಿ.
16. ನೀವು ತಪ್ಪು ಮಾಡಿದಾಗ ಅವರ ಬಳಿ ಕ್ಷಮೆ ಕೇಳಿದರೆ ನೀವು ಚಿಕ್ಕವರಾಗುವುದಿಲ್ಲ. ಬದಲಾಗಿ ನಿಮ್ಮಿಬ್ಬರ ನಡುವಿನ ಸಂಬಂಧ ಗಾಢವಾಗುತ್ತದೆ.
17. ಹಿರಿಯರಿಗೆ, ನಿಮಗೆ ಗೌರವ ಕೊಡುವುದನ್ನು ನೀವು ಗಳಿಸಿಕೊಳ್ಳಿ. ಅದು ಒತ್ತಾಯದಿಂದ ಪಡೆದುಕೊಳ್ಳುವ ವಸ್ತುವಲ್ಲ, ನೆನಪಿಡಿ.
18. ಮಕ್ಕಳ ಜೊತೆಗೆ ಯಾವಾಗಲೂ ಒಂದೇ ತೆರನಾಗಿರಿ. ಅವರಿಗೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಅರಿವು ಇರಲಿ.
ಇದನ್ನೂ ಓದಿ: Parenting Tips: ಮಕ್ಕಳಿಗೆ ಹುಟ್ಟುಹಬ್ಬದ ಸಂಭ್ರಮಾಚರಣೆ ಏಕೆ ಬೇಕು?