Site icon Vistara News

PCOS Diet: ಪಿಸಿಒಎಸ್‌ ಸಮಸ್ಯೆಯೇ? ಈ ಪಾನೀಯಗಳಿಂದಲೂ ಪ್ರಯೋಜನ ಆಗಬಹುದು!

natural drink

ಪಾಲಿಸಿಸ್ಟಿಕ್‌ ಓವರಿಯನ್‌ ಸಿಂಡ್ರೋಮ್‌ ಅಥವಾ ಪಿಸಿಒಎಸ್‌ (PCOS) ಎಂಬ ತೊಂದರೆ ಇಂದು ಸಾಮಾನ್ಯವಾಗಿ ಬಹುತೇಕ ಮಹಿಳೆಯರಲ್ಲಿ ಕಂಡು ಬರುವ ತೊಂದರೆ. ಹಾರ್ಮೋನಿನ ವೈಪರೀತ್ಯ, ಮಹಿಳೆಯರ ದೇಹದಲ್ಲಿರುವ ಪುರುಷ ಹಾರ್ಮೋನು ಆಂಡ್ರೋಜೆನ್‌ನ ಏರುಪೇರು ಈ ಸಮಸ್ಯೆಗೆ ಮುಖ್ಯ ಕಾರಣವೂ ಹೌದು. ಇಂದು ಬದಲಾದ ಜೀವನಶೈಲಿ, ಆಹಾರ ಬದಲಾವಣೆ ಸೇರಿದಂತೆ ಒತ್ತಡದ ಬದುಕಿನಿಂದಾಗಿ ಈ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ. ಅದರ ಪರಿಣಾಮವಾಗಿ, ಸಂತಾನೋತ್ಪತ್ತಿ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.

ನಿಯಮಿತವಾಗಿಲ್ಲದ ಋತುಚಕ್ರ ಅಥವಾ ಪ್ರತಿ ತಿಂಗಳಿಗೆ ಸರಿಯಾಗಿ ಮುಟ್ಟಾಗದಿರುವುದು, ಮುಟ್ಟು ತಪ್ಪುವುದು, ಇದ್ದಕ್ಕಿದ್ದಂತೆ ತೂಕ ಹೆಚ್ಚಾಗುವುದು ಮುಖ್ಯನಾಗಿ ಸೊಂಟದ ಸುತ್ತಲಿನ ಭಾಗ ದಪ್ಪವಾಗುವುದು, ಕೂದಲ ಬೆಳವಣಿಗೆ ಹೆಚ್ಚಾಗುವುದು ಅರ್ಥಾತ್‌, ಮುಖದಲ್ಲಿ ಗದ್ದ ಹಾಗೂ ಎದೆಯ ಮೇಲೆ ಕೂದಲು ಬೆಳೆಯಲು ಆರಂಭವಾಗುವುದು, ಮಕ್ಕಳಾಗದಿರುವುದು, ಚರ್ಮ ಜಿಡ್ಡು ಜಿಡ್ಡಾಗುವುದು ಹಾಗೂ ಮೊಡವೆಗಳೇಳುವುದು, ಗರ್ಭಾಶಯ ದೊಡ್ಡದಿರುವುದು ಹಾಗೂ ಗರ್ಭಾಶಯದಲ್ಲಿ ಸಣ್ಣ ಸಣ್ಣ ಗಡ್ಡೆಗಳಾಗುವುದು, ಚರ್ಮದ ಮೇಳೆ ನರುಳ್ಳೆ ಅಥವಾ ನರುಹುಲಿಗಳಾಗುವುದು ಇತ್ಯಾದಿ ಪಿಸಿಒಡಿಯ ಸಾಮಾನ್ಯ ಲಕ್ಷಣಗಳು.

ಈ ತೊಂದರೆಗೆ ಮುಖ್ಯವಾಗಿ ನಾವು ಸೇವಿಸುವ ಆಹಾರದ ಮೇಲಿನ ಹಿಡಿತ (PCOS diet), ಅತಿಯಾದ ಜಂಕ್‌ (junk food) ಸೇವಿಸದೆ ಇರುವುದು ಹಾಗೂ ವ್ಯಾಯಾಮ (exercise) ಇತ್ಯಾದಿಗಳ ಶಿಸ್ತಿನ ಜೀವನ ಶೈಲಿಯ ಅಗತ್ಯವೂ ಇದೆ. ಉತ್ತಮ ಪೋಷಕಾಂಶಯುಕ್ತ ಆಹಾರಶೈಲಿ ಜೊತೆಗೆ ಈ ಕೆಳಗಿನ ಕೆಲವು ಪಾನೀಯಗಳೂ (drinks for pcos problem) ಕೂಡಾ ಈ ತೊಂದರೆಯನ್ನು ಕೊಂಚ ಸರಳವಾಗಿಸುವಲ್ಲಿ ಸಹಾಯ ಮಾಡಬಲ್ಲವು. ಬನ್ನಿ ಯಾವೆಲ್ಲ ಪಾನೀಯಗಳು ಈ ಸಮಸ್ಯೆಗೆ ಕೊಂಚ ಮಟ್ಟಿನ ಸಹಾಯ ಮಾಡಬಲ್ಲವು ಎಂಬುದನ್ನು ನೋಡೋಣ.

1. ಮೆಂತ್ಯ ಪಾನೀಯ: ಜೀರ್ಣಕ್ರಿಯೆ, ಮಧುಮೇಹ ಸೇರಿದಂತೆ ಹಲವು ಸಮಸ್ಯೆಗಳಿಗೆ ಮೆಂತ್ಯ ಒಳ್ಳೆಯದು ಎಂಬುದು ಬಹುತೇಕರಿಗೆ ತಿಳಿದಿದೆ. ಆದರೆ ಪಿಸಿಓನಂತಹ ಸಮಸ್ಯೆಗಳಿಗೂ ಇದು ಸಹಾಯ ಮಾಡುತ್ತದೆ. ಇದು ಗರ್ಭಕೋಶದ ಆರೋಗ್ಯವನ್ನು ಕಾಪಾಡುವುದಲ್ಲದೆ ನಿಯಮಿತವಾದ ಋತುಚಕ್ರ ಮುಂದುವರಿಯಲೂ ಸಹಾಯ ಮಾಡುತ್ತದೆ. ಒಂದು ಚಮಚ ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅದನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಇಂತಹ ಹಲವು ಸಮಸ್ಯೆಗಳಿಂದ ಮುಕ್ತರಾಗಬಹುದು.

2. ಪುದಿನ ಚಹಾ: ಪುದಿನ ಎಲೆಗಳು ಹರ್‌ಸುಟಿಸಮ್‌ ಮಟ್ಟವನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುವ ಮೂಲಕ ಮುಖ ಹಾಗೂ ಬೇಡದ ಜಾಗಗಳಲ್ಲಿ ಮಹಿಳೆಯರಿಗೆ ಅನಗತ್ಯ ಕೂದಲ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಈ ಪರಿಣಾಮವನ್ನು ಕಾಣಲು ನಿಯಮಿತವಾಗಿ ಪುದಿನ ಚಹಾವನ್ನು ಸೇವಿಸಬೇಕು.

3. ಆಲೋವಿರಾ ಜ್ಯೂಸ್:‌ ಆಲೊವೆರಾ ಚರ್ಮದ ಆರೋಗ್ಯದಲ್ಲಿ ಮಹತ್ತರ ಪಾತ್ರ ವಹಿಸಿರುವುದು ಬಹುತೇಕರಿಗೆ ತಿಳಿದಿರುವಂಥದ್ದೇ. ಆದರೆ, ಆಲೋವಿರಾ ಜ್ಯೂಸ್‌ ಕುಡಿಯುವ ಮೂಲಕ ಇನ್ನೂ ಹಲವು ಲಾಭಗಳ್ನು ನಾವು ಪಡೆಯಬಹುದು ಗೊತ್ತೇ? ಇದನ್ನು ನಿಯಮಿತವಾಗಿ ಸೇವಿಸುವ ಮೂಲಕ ಹಾರ್ಮೋನಿನ ಏರುಪೇರು, ಪಿಸಿಒ ಪರಿಣಾಮಗಳು ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ದೇಹವನ್ನು ಡಿಟಾಕ್ಸ್‌ ಮಾಡಬಲ್ಲ ಗುಣವೂ ಇದರಲ್ಲಿದ್ದು ದೇಹದ ಕಲ್ಮಶಗಳನ್ನು ಇದು ಹೊಡೆದೋಡಿಸಿ ಆರೋಗ್ಯ ಹೆಚ್ಚಿಸುತ್ತದೆ.

4. ದಾಸವಾಳ ಚಹಾ: ದಾಸವಾಳದಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಸೊಂಪಾದ ಕೂದಲ ಆರೋಗ್ಯಕ್ಕೆ ದಾಸವಾಳದ ಪ್ರಯೋಜನವನ್ನು ಅರಿಯದವರಿಲ್ಲ. ಆದರೆ, ಈ ದಾಸವಾಳ ಮಹಿಳೆಯರ ಪಿಸಿಒ ಸಮಸ್ಯೆಗಳಿಗೂ ಉತ್ತಮ ಸಾಥಿಯಾಗಬಹುದು. ಋತುಚಕ್ರದ ಸಂದರ್ಭ ಉಂಟಾಗುವ ನೋವಿಗೂ ಇದು ಒಳ್ಳೆಯ ಮದ್ದು. ಕೊಲೆಸ್ಟೆರಾಲ್‌ ಕಡಿಮೆಗೊಳಿಸಲೂ ಇದು ಕೈಲಾದ ಸಹಾಯ ಮಾಡಬಲ್ಲುದು. ಗರ್ಭಕೋಶವನ್ನು ಆರೋಗ್ಯವಾಗಿಡುವಲ್ಲಿಯೂ ಇದು ಕೊಡುಗೆ ನೀಡುತ್ತದೆ.

ಇದನ್ನೂ ಓದಿ: Polycystic ovary syndrome (PCOS) Problem: ಪಿಸಿಒಎಸ್‌ ಸಮಸ್ಯೆಯೆ? ಹಾರ್ಮೋನ್‌ ಅಸಮತೋಲನಕ್ಕೆ ಕಾರಣವಾಗುವ ಅಂಶಗಳಿವು

Exit mobile version