ಸುಸ್ತಾದಾಗ ನಿಂಬೆಹಣ್ಣಿನ ಪಾನಕ ಮಾಡುವ ಜಾದೂ ಸಣ್ಣದೇನಲ್ಲ. ಸುಸ್ತಾಗಿ ಬಿಸಿಲಿನಲ್ಲಿ ನಡೆದು ಬಂದಾಗ ಒಂದು ಲೋಟ ನಿಂಬೆಹಣ್ಣಿನ ಜ್ಯೂಸು ಕುಡಿದರೆ ಸುಸ್ತೆಲ್ಲ ಮಾಯವಾಗಿ ಹಾಯೆನಿಸುತ್ತದೆ. ಇನ್ನು ಗರ್ಭಿಣಿಯರಿಗೆ ಇದು ಒಳ್ಳೆಯದು ಮಾಡದೆ ಇದ್ದೀತೇ ಹೇಳಿ? ಗರ್ಭಿಣಿಯರಿಗೆ ಕೆಲವು ಹಣ್ಣುಗಳ ಸೇವನೆಯಿಂದ ದೂರವಿರುವುದು ಒಳ್ಳೆದು ಎಂದು ವೈದ್ಯರೂ ಸಲಹೆ (pregnancy tips) ಕೊಡುವುದುಂಟು. ಇದಕ್ಕೆ ಕಾರಣಗಳು ಅನೇಕ. ಆದರೆ, ನಿಂಬೆಹಣ್ಣು ಹಾಗಲ್ಲ. ಗರ್ಭಿಣಿಯರೂ ಯಾವ ಭಯವೂ ಇಲ್ಲದೆ ಸೇವಿಸಬಹುದಾದದ್ದು. ಹಾಗಾಗಿ ಗರ್ಭಿಣಿಯರಿಗೆ ಇದರ ಪಾನಕ ಚೇತೋಹಾರಿ ಪಾನೀಯವಾಗಬಲ್ಲುದು. ಆದರೆ, ಒಳ್ಳೆಯದು ಎಂದುಕೊಂಡು ಮಿತಿಗಿಂತ ಹೆಚ್ಚು ಸೇವಿಸಬಾರದು ಎಂಬ ಎಚ್ಚರಿಕೆಯ ಅರಿವೂ ಇರುವುದು ಒಳ್ಳೆಯದು. ಹಾಗಾದರೆ ಬನ್ನಿ, ಗರ್ಭಿಣಿಯರು ಯಾವೆಲ್ಲ ಕಾರಣಗಳಿಗಾಗಿ ನಿಂಬೆಹಣ್ಣಿನ ಪಾನಕ ಸೇವಿಸುವುದು ಉತ್ತಮ (Health tips) ಎಂಬುದನ್ನು ನೋಡೋಣ.
1. ಗರ್ಭಿಣಿಯರಿಗೆ ಯಾವಾಗಲೂ ಕೊರತೆಯಾಗುವ ಪೋಷಕಾಂಶಗಳ ಪೈಕಿ ವಿಟಮಿನ್ ಸಿ ಕೂಡಾ ಒಂದು. ಸಿಟ್ರಸ್ ಹಣ್ಣುಗಳ ಪೈಕಿ ನಿಂಬೆ ಹಣ್ಣು ಮುಂಚೂಣಿಯಲ್ಲಿ ನಿಲ್ಲುವುದರಿಂದ ಗರ್ಭಿಣಿಯರಿಗೆ ಅಗತ್ಯವಾಗಿ ಬೇಕಾಗಿರುವ ವಿಟಮಿನ್ ಸಿ ಯನ್ನು ನಿಂಬೆಹಣ್ಣಿನ ಪಾನಕ ಕುಡಿಯುವುದರಿಂದ ಪಡೆಯಬಹುದು.
2. ಗರ್ಭಿಣಿಯರಿಗೆ ಜೀರ್ಣಕ್ರಿಯೆಯೂ ಸಮಸ್ಯೆಯಾಗಬಲ್ಲುದು. ಮಲಬದ್ಧತೆ, ಸರಿಯಾಗಿ ಜೀರ್ಣವಾಗದೆ ಇರುವುದು ಗರ್ಭಿಣಿಯರಿಗೆ ಸದಾ ಕಾಡುವ ಸಮಸ್ಯೆ. ಇದಕ್ಕೆ ನಿಂಬೆ ಹಣ್ಣಿನ ಪಾನಕ ಸಹಾಯ ಮಾಡಬಹುದು. ನಿಂಬೆಹಣ್ಣಿನ ಜ್ಯೂಸ್ ಸೇವಿಸುವುದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗಿ, ಆರಾಮಾಗುತ್ತದೆ.
3. ವಿಟಮಿನ್ ಸಿ ಒಂದು ಪವರ್ ಫುಲ್ ಆಂಟಿ ಆಕ್ಸಿಡೆಂಟ್. ಗರ್ಭಿಣಿ ಸ್ಟ್ರೀಯರಿಗೆ ಸಾಕಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳ ಅಗತ್ಯವಿರುವುದರಿಂದ ನಿಂಬೆಹಣ್ಣು ಅತ್ಯುತ್ತಮ ದಾರಿ. ಇದು ದೇಹದಲ್ಲಿರು ಕಶ್ಮಲಗಳನ್ನು ಹೊರಗೆ ಕಳಿಸುವುದಷ್ಟೇ ಅಲ್ಲ, ಗರ್ಭಿಣಿಯಾಗಿರುವಾಗ ಶೀತ, ನೆಗಡಿಯಂತಹ ತೊಂದರೆಗಳು ಬಾರದಂತೆ ಕಾಪಾಡುತ್ತದೆ.
4. ಗರ್ಭದಲ್ಲಿರುವ ಶಿಶುವಿಗೂ ನಿಂಬೆಹಣ್ಣು ಒಳ್ಳೆಯದು. ನಿಂಬೆಹಣ್ಣಿನಲ್ಲಿ ಪೊಟಾಶಿಯಂ ಅಧಿಕವಾಗಿದ್ದು ಇದು ಮಕ್ಕಳಲ್ಲಿ ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಅಷ್ಟೇ ಅಲ್ಲ ಹುಟ್ಟುವ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ, ಮಿದುಳಿನ ಬೆಳವಣಿಗೆ, ನರಮಂಡಲದ ಬೆಳವಣಿಗೆಗೂ ಸಹಾಯ ಮಾಡುತ್ತದೆ.
5. ಗರ್ಭಿಣಿ ಸ್ತ್ರೀಯರಿಗೆ ಪ್ರಮುಖವಾಗಿ ಕಾಡುವ ಅಧಿಕ ರಕ್ತದೊತ್ತಡಕ್ಕೆ ನಿಂಬೆಹಣ್ಣು ಒಳ್ಳೆಯದು. ನಿಂಬೆಹಣ್ಣಿನಲ್ಲಿ ಪೊಟಾಶಿಯಂ ಹಾಗೂ ಮೆಗ್ನೀಶಿಯಂ ಹೇರಳವಾಗಿರುವುದರಿಂದ ಇದು ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಗರ್ಭಿಣಿ ಸ್ತ್ರೀಯರಿಗೆ ಅವಧಿಗೂ ಮುನ್ನವೇ ಹೆರಿಗೆಯಂತಹ ಅಪಾಯವನ್ನು ತಂದೊಡ್ಡಬಹುದಾದ್ದರಿಂದ ಈ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿಕೊಳ್ಳಬೇಕು.
ಇದನ್ನೂ ಓದಿ: Kitchen Tips: ನಿಂಬೆಹಣ್ಣಿನ ರಸವೇ ನಿಮ್ಮ ಕಿಚನ್ ಕ್ಲೀನರ್: ಸ್ವಚ್ಛ ಅಡುಗೆಮನೆಗೆ ಇಲ್ಲಿವೆ ಟಿಪ್ಸ್!
6. ಗರ್ಭಿಣಿಯರಿಗೆ ಸಾಮಾನ್ಯವಾಗಿ ಬರುವ ಮತ್ತೊಂದು ತೊಂದರೆ ಎಂದರೆ ಪಾದಗಳಲ್ಲಿ ನೀರು ತುಂಬಿಕೊಳ್ಳುವುದು. ಇದು ಸಾಮಾನ್ಯ ತೊಂದರೆಯಾದರೂ ಯಾತನಾಮಯ. ಒಂದು ಚಮಚ ನಿಂಬೆರಸವನ್ನು ಒಂದು ಲೋಟ ನೀರಿಗೆ ಹಾಕಿ ಕುಡಿಯುವುದರಿಂದ ಈಂತಹ ತೊಂದರೆಗೆ ಪರಿಹಾರ ಕಾಣಬಹುದು.
7. ಹೆರಿಗೆ ಎಂಬುದು ಗರ್ಭಿಣಿಯ ಪಾಲಿನ ನಿರ್ಣಾಯಕ ದಿನ. ಇಷ್ಟು ತಿಂಗಳುಗಳ ಕಾಯುವಿಕೆಗೆ ಅರ್ಥ ನೀಡುವ ಸಂತೋಷದ ಗಳಿಗೆ ಮನೆಯವರಿಗಾದರೂ, ಗರ್ಭಿಣಿಗೆ ಇದು ನೋವಿನ ಪರಾಕಾಷ್ಠೆ. ಖುಷಿಯ ವಿಷಯ ಹೌದಾದರೂ, ನೋವನ್ನು ಗರ್ಭಿಣಿ ಸಹಿಸಲೇಬೇಕು. ಹಾಗಾಗಿ, ಗರ್ಭಿಣಿಯರು, ಹೆರಿಗೆ ಸುಲಭ ಮಾಡುವಂತಹ ಆಹಾರ ಕ್ರಮವನ್ನೂ ಜೀವನಕ್ರಮವನ್ನೂ ಒಂಭತ್ತು ತಿಂಗಳುಗಳ ಕಾಲ ಪಾಲಿಸಬೇಕು. ಇಂತಹ ಆಹಾರಗಳ ಪೈಕಿ ನಿಂಬೆಹಣ್ಣು ಕೂಡಾ ಮುಂಚೂಣಿಯಲ್ಲಿ ನಿಲ್ಲುತ್ತದೆ.
8. ಗರ್ಭಿಣಿಯರಲ್ಲಿ ಕಾಡುವ ಸಾಮಾನ್ಯ ಸಮಸ್ಯೆಗಳಾದ ವಾಂತಿ, ತಲೆಸುತ್ತು ಮತ್ತಿತರ ಸಮಸ್ಯೆಗಳಿಗೂ ಕೂಡಾ ನಿಂಬೆಹಣ್ಣು ಅತ್ಯುತ್ತಮ. ನಿಂಬೆಹಣ್ಣಿನ ಪಾನಕ ಕುಡಿಯುವುದರಿಂದ ಈ ಸುಸ್ತು, ವಾಂತಿ ಇವೆಲ್ಲವುಗಳಿಗೆ ತಕ್ಕಮಟ್ಟಿನ ಪರಿಹಾರ ಸಿಗಬಹುದು.
ಇದನ್ನೂ ಓದಿ: Detox Drinks: ಮೊಡವೆ, ಕಲೆಯಿಂದ ದೂರವಿರಲು ಇಲ್ಲಿವೆ ಡಿಟಾಕ್ಸ್ ಡ್ರಿಂಕ್ಸ್!