Site icon Vistara News

Beauty Tips: ಮಹಿಳೆಯರೇ, ಸರಳವಾಗಿ ಸುಂದರವಾಗಿ ಕಾಣಲು ಇಲ್ಲಿವೆ ಹತ್ತು ಸೂತ್ರಗಳು!

anushka shetty

ತಾನು ಚೆನ್ನಾಗಿ ಕಾಣಬೇಕು ಎಂಬುದು ಮನುಷ್ಯನ ಸಹಜ ಬಯಕೆ. ಮಹಿಳೆಯಾಗಲಿ, ಪುರುಷನಾಗಲಿ, ಹೊರಗೆ ಜಗತ್ತಿಗೆ ನಾನು ಹೀಗೆ ಕಾಣಿಸಿಕೊಂಡರೆ ಚಂದ ಎಂಬ ಅವರದ್ದೇ ಆದ ಕಲ್ಪನೆ ಪ್ರತಿಯೊಬ್ಬರಿಗೂ ಇರುತ್ತದೆ. ಅದರಲ್ಲೂ ಫ್ಯಾಷನ್‌ (fashion tips), ಸೌಂದರ್ಯದ (beauty tips) ವಿಚಾರಕ್ಕೆ ಬಂದರೆ, ಮಹಿಳೆಯರ ಸುತ್ತ ಮಾತು ಹೊರಳುವುದೂ ಕೂಡಾ ಸಹಜವೇ. ಯಾಕೆಂದರೆ ಮಹಿಳೆಯ ಸೌಂದರ್ಯ ಸದಾ ಚರ್ಚೆಯಲ್ಲಿರುವ ವಿಚಾರವೇ. ಈಗಿನ ಮಾಡರ್ನ್‌ ಯುಗದಲ್ಲಿ ತಾನು ಹೇಗಿದ್ದರೆ ಚಂದ ಕಾಣುತ್ತೇನೆ ಎಂಬುದನ್ನು ಪ್ರತ್ಯೇಕವಾಗಿ ಪ್ರತಿ ಮಹಿಳೆಗೂ ಹೇಳಿ ಕೊಡುವ ಅಗತ್ಯವಿಲ್ಲ. ಎಲ್ಲರಿಗೂ ಅವರದ್ದೇ ಆದ ಫ್ಯಾಷನ್‌ ಕಲ್ಪನೆಗಳಿವೆ. ಆದರೂ, ಪ್ರತಿಯೊಬ್ಬ ಮಹಿಳೆಯೂ ಈಗಿನ ಕಾಲಕ್ಕೆ ತಕ್ಕ ಹಾಗೆ ತಾನು ಆಕರ್ಷಕವಾಗಿ ಕಾಣಬೇಕು (simple beauty tips) ಎಂದು ಬಯಸುತ್ತಿದ್ದರೆ, ಗಮನಿಸಬೇಕಾದ, ಅರಿತುಕೊಳ್ಳಬೇಕಾದ ಸರಳ ವಿಚಾರಗಳಿವು. ಇವುಗಳ ಅರಿವಿದ್ದರೆ, ಆಕೆ ತನ್ನನ್ನು ತಾನು ಜಗತ್ತಿನೆದುರು ಸರಳವಾಗಿ ಆದರೆ, ಅದ್ಭುತವಾಗಿ ಪ್ರಸೆಂಟ್‌ (attractive personality) ಮಾಡಬಲ್ಲಳು. ಬನ್ನಿ ಅವು ಯಾವುವು ನೋಡೋಣ.

1. ತನ್ನ ದೇಹ ಯಾವ ಬಗೆಯದ್ದು (body type) ಎಂಬ ಅರಿವು ಇರಬೇಕಾದುದು ಮೊದಲ ಅಗತ್ಯ. ತ್ರಿಕೋನ, ಉಲ್ಟಾ ತ್ರಿಕೋನ, ಆಯತ, ಮೊಟ್ಟೆಯಾಕಾರ, ಗುಂಡಗೆ ಇತ್ಯಾದಿ ಬಗೆಯ ದೇಹದ ಆಕಾರಗಳಲ್ಲಿ ತನ್ನದು ಯಾವ ಬಗೆಯದ್ದು ಎಂಬ ಅರಿವು ಇದ್ದಲ್ಲಿ, ತನ್ನ ದೇಹಕ್ಕೆ ಹೊಂದಬಲ್ಲ ಬಟ್ಟೆಗಳನ್ನು ಖರೀದಿಸಲು ಸಹಾಯವಾಗುತ್ತದೆ. ತನ್ನ ದೇಹಕ್ಕೆ ಹೊಂದುವ ಬಟ್ಟೆಗಳ ಆಯ್ಕೆಯೂ ಬಹಳ ಮುಖ್ಯ. ಎಲ್ಲರೂ ಧರಿಸುತ್ತಾರೆ ಎಂಬ ಕಾರಣಕ್ಕೆ ತನಗೆ ಸರಿಹೊಂದದ ಬಟ್ಟೆ ಖರೀದಿಸಬೇಕಾಗಿಲ್ಲ!

2. ಮಹಿಳೆಯ ದೇಹ ಸುಂದರವಾಗಿ ಕಾಣಬೇಕಾಗಿದ್ದರೆ, ಒಳಗೆ ಧರಿಸುವ ಬಟ್ಟೆಯ (dress selection) ಬಗೆಗೂ ಗಮನ ಅತ್ಯಗತ್ಯ. ತನ್ನ ಆಕಾರಕ್ಕೆ ಸರಿಹೊಂದುವ ಸರಿಯಾದ ಅಳತೆಯ ಬ್ರಾ ಆಯ್ಕೆಯೂ ಬಹಳ ಮುಖ್ಯ. ಸರಿಯಾದ ಅಳತೆಯ ಬ್ರಾ ಧರಿಸುವುದರಿಂದಲೂ ಸೌಂದರ್ಯ ಇಮ್ಮಡಿಗೊಳ್ಳುತ್ತದೆ, ಆತ್ಮವಿಶ್ವಾಸ ಹೆಚ್ಚುತ್ತದೆ. ಸೌಂದರ್ಯದಲ್ಲಿ ಆತ್ಮವಿಶ್ವಾಸವೇ ಬಹಳ ಮುಖ್ಯ.

3. ಬಣ್ಣಗಳ ಬಗ್ಗೆ ಅರಿವು ಅತ್ಯಂತ ಅಗತ್ಯ. ಯಾವ ಬಣ್ಣಕ್ಕೆ ಯಾವ ಬಣ್ಣ ಸರಿಹೊಂದುತ್ತದೆ ಎಂಬ ಅಂದಾಜಿದ್ದರೆ, ಬಟ್ಟೆಗಳನ್ನು ಮ್ಯಾಚ್‌ ಮಾಡಿಕೊಳ್ಳುವ, ಟ್ರೆಂಡ್‌, ಸಮಯ, ಸನ್ನಿವೇಶಕ್ಕೆ ತಕ್ಕ ಹಾಗೆ ಬಟ್ಟೆ ಧರಿಸುವ ಅರಿವು ತಾನೇತಾನಾಗಿ ಬರುತ್ತದೆ.

4. ಬಟ್ಟೆಗಳನ್ನು ಚೆನ್ನಾಗಿಟ್ಟುಕೊಳ್ಳುವುದೂ ಒಂದು ಕಲೆ. ಬಿಳಿಯ ಬಟ್ಟೆಗಳನ್ನು, ಸೂಕ್ಷ್ಮ ಡಿಸೈನ್‌ಗಳಿರುವ ಬಟ್ಟೆಗಳನ್ನು ಪ್ರತ್ಯೇಕವಾಗಿಟ್ಟುಕೊಳ್ಳುವುದು, ಸರಿಯಾಗಿ ಮಡಚಿಡುವುದು ಎಲ್ಲವೂ ಕೂಡಾ ಮುಖ್ಯವೇ. ಬಟ್ಟೆಯ ಸ್ವಚ್ಛತೆ ನಿಮ್ಮ ಒಟ್ಟು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

5. ಸೇಲ್‌ ನಡೆಯುತ್ತಿದೆ ಎಂದ ತಕ್ಷಣ ಅಲ್ಲಿ ನೀವು ಹಾಜರಿ ಹಾಕಲೇಬೇಕು ಎಂದಿಲ್ಲ. ಯಾವುದಾದರೂ ಬಗೆಯ ಬಟ್ಟೆ ಬೇಕು  ಎಂದು ನೀವು ಕಾಯುತ್ತಿದ್ದರೆ ಬಟ್ಟೆ ಖರೀದಿಸಿ. ಸುಮ್ಮನೆ ಸೇಲ್‌ನಲ್ಲಿ ಕಡಿಮೆಗೆ ದೊರೆಯುತ್ತದೆ ಎಂದ ತಕ್ಷಣ ಅದನ್ನು ಖರೀದಿಸಬೇಕಿಲ್ಲ!

6. ಟ್ರೆಂಡ್‌ ಎಂದು ಯಾವುದೋ ನಿಮಗೆ ಸರಿಹೊಂದದ, ಬಟ್ಟೆಗೆ ಸರಿಹೊಂದದ ಜುವೆಲ್ಲರಿ ಧರಿಸಬೇಕಾಗಿಲ್ಲ. ನಿಮಗೆ ಕಂಫರ್ಟ್‌ ಎನಿಸುವ ಸರಳ ಜ್ಯುವೆಲ್ಲರಿಯೂ ಸುಂದರವಾಗಿಯೇ ನಿಮ್ಮನ್ನು ಕಾಣಿಸುತ್ತದೆ.

7. ನಿಮ್ಮ ದೇಹಕ್ಕೆ ಸರಿಹೊಂದುವ ರೀತಿಯಲ್ಲಿ ಲೂಸ್‌ ಹಾಗೂ ಟೈಟ್‌ ಬಟ್ಟೆಗಳನ್ನು ಆಯ್ಕೆ ಮಾಡಿ. ಟ್ರೆಂಡ್‌ ಎಂದು ನಿಮಗೆ ಸರಿಹೊಂದದ ಬಗೆಯ ಡ್ರೆಸ್‌ ಆಯ್ಕೆ ಬೇಡ. ಬಟ್ಟೆಗಳನ್ನು ತೊಡುವಾಗ ಕಂಫರ್ಟ್‌ ಬಹಳ ಮುಖ್ಯ. ಲೆಗ್ಗಿಂಗ್‌ಗಳನ್ನು ಧರಿಸುತ್ತಿದ್ದರೆ, ಅದಕ್ಕೆ ಉದ್ದ ಟಾಪ್‌ಗಳನ್ನೇ ಧರಿಸಿ. ನಿಮ್ಮ ದೇಹ ಯಾವುದೇ ಆಕಾರವಿರಲಿ, ಲೆಗ್ಗಿಂಗ್‌ಗೆ ಯಾವಾಗಲೂ ಉದ್ದ ಟಾಪ್‌ ಎಂಬುದನ್ನು ಮರೆಯಬೇಡಿ. ಅಷ್ಟೇ ಅಲ್ಲ, ಒಂದು ಬಟ್ಟೆಯನ್ನು ತೊಟ್ಟ ಮೇಲಿನ ನಿಮ್ಮ ದೇಹಭಂಗಿ, ಆಂಟಿಟ್ಯೂಡ್‌ ಬಹಳ ಮುಖ್ಯವಾಗುತ್ತದೆ. ಆತ್ಮವಿಶ್ವಾಸ ನಿಮ್ಮ ಬಟ್ಟೆಗಿಂತಲೂ ಮುಖ್ಯವಾಗುತ್ತದೆ.

8. ಢಾಳಾಗಿ ಲಿಪ್‌ಸ್ಟಿಕ್‌ ಹಚ್ಚಿಕೊಳ್ಳುವುದು ನಿಮಗಿಷ್ಟವಿಲ್ಲವಾದರೆ, ಸದಾ ನ್ಯೂಡ್‌ ಲಿಪ್‌ಸ್ಟಿಕ್‌ ಮೊರೆ ಹೋಗಿ. ನ್ಯೂಡ್‌ ಲಿಪ್‌ಸ್ಟಿಕ್‌ ಸದಾ ನಿಮ್ಮ ಸಹಜ ಸೌಂದರ್ಯವನ್ನು ಇನ್ನಷ್ಟು ಅಂದವಾಗಿ ಕಾಣಿಸುವಂತೆ ಮಾಡುತ್ತದೆ.

9. ನೀವು ತೆಳ್ಳಗೆ ಉದ್ದವಿದ್ದರೆ, ಸ್ವಲ್ಪ ಅಗಲವಾಗಿ ಕಾಣಬೇಕೆಂದರೆ, ಅಡ್ಡಡ್ಡ ಗೆರೆಗಳ ಬಟ್ಟೆಯನ್ನು ತೊಟ್ಟುಕೊಳ್ಳಬಹುದು, ಅಗಲವಾದ ದೇಹವಿದ್ದರೆ, ಇನ್ನೂ ದಪ್ಪ ಕಾಣಿಸುವುದು ಇಷ್ಟವಿಲ್ಲವೆಂದಾದರೆ, ಉದ್ದುದ್ದ ಗೆರೆಯ ಬಟ್ಟೆಯ ಆಯ್ಕೆ ನಿಮ್ಮದಾಗಿರಲಿ. ಹೀಗೆ ಬಟ್ಟೆಯ ಆಯ್ಕೆಯಲ್ಲಿಯೇ ಜಾಣತನ ಮೆರೆಯಿರಿ.

10. ರಾತ್ರಿ ಧರಿಸುವ ಉಡುಪು, ಬೆಳಗ್ಗಿನ ಉಡುಪು, ಋತುಗಳಿಗೆ ಸರಿಯಾದ ಬಟ್ಟೆಯ ಆಯ್ಕೆ ಇಂತಹ ಸಾಮಾನ್ಯ ಸಂಗತಿಗಳು ನಿಮಗೆ ತಿಳಿದಿರಲಿ. ಅದು ನಿಮ್ಮ ಫ್ಯಾಷನ್‌ ಸೆನ್ಸನ್ನು ಹೆಚ್ಚು ಮಾಡುತ್ತದೆ.

ಇದನ್ನೂ ಓದಿ: Health Care Of Women After Thirty: ಮೂವತ್ತರ ನಂತರ ಮಹಿಳೆಯರ ಆರೋಗ್ಯ ಕಾಳಜಿ ಹೀಗಿರಲಿ

Exit mobile version