ಮಲ್ಲಮ್ಮ ಗಾಣಿಗಿ, ಮಿಸೆಸ್ ಇಂಡಿಯಾ ಕಾರ್ಪೋರೆಟ್
ಎಷ್ಟೋ ಶತಮಾನಗಳ ಹಿಂದೆ ವೈಜ್ಞಾನಿಕವಾಗಿ ಇರುವಂತಹ ಮನೆಯಲ್ಲಿ ಆಚರಿಸುವ ಮುಟ್ಟಿನ ರಜೆ ಈಗ ಒಂದು ಕೇವಲ ಪದ್ಧತಿ ಆಗಿ ಅವರವರ ಅನುಕೂಲಕ್ಕೆ ತಕ್ಕಂತೆ ಮಾರ್ಪಡಾಗಿರುವದು ಬಹಳ ವಿಷಾದದ ಸಂಗತಿ ( ಕೆಲವು ಮನೆಯಲ್ಲಿ ಅಡುಗೆ ಮನೆವರೆಗೂ ಇರೋ ಎಲ್ಲ ಕೆಲಸ ಮಾಡಬಹುದು. ಅಡುಗೆ ಬಿಟ್ಟು, ಕೆಲ ಮನೆಯಲ್ಲಿ ದೇವರ ಪೂಜೆ ಬಿಟ್ಟು ಎಲ್ಲ ಮಾಡಬಹುದು. ಹೊರಗಿನ ರೂಮ್ ನಲ್ಲೇ ಕೂತುಕೊಂಡು ಎಲ್ಲ ಕೆಲಸ ಮಾಡಬಹುದು, ಹೀಗೆ ಹಲವು, ನಮ್ಮ ಅನುಕೂಲಕ್ಕೆ ತಕ್ಕಂತೆ) ಹೆಣ್ಣುಮಕ್ಕಳಿಗೆ ಸಿಗಬೇಕಾದಂತ ಮುಟ್ಟಿನ ವಿಶ್ರಾಂತಿಯ ಬಗ್ಗೆ ವೈಜ್ಞಾನಿಕವಾಗಿ ಯೋಚನೆ ಮಾಡದೇ ಇರೋದ್ರಿಂದ ಇದು ಪದ್ಧತಿ ಆಗಿ, ಎಲ್ಲ ಹೆಂಗಸರಿಗೆ ಯಾಕಾದರು ಈ ಮುಟ್ಟು ಬರುತ್ತೋ ಅನ್ನೋ ರೀತಿ ಅಸಹ್ಯ ಆಗುತ್ತಿದೆ.
ಮುಟ್ಟು ಎಲ್ಲ ಹೆಣ್ಣುಮಕ್ಕಳಿಗೂ ನೈಸರ್ಗಿಕವಾಗಿ ಬರುವಂತಹ ಒಂದು ಕ್ರಿಯೆ. ಆದರೆ ಮುಟ್ಟಿಗೆ ಎಲ್ಲ ಹೆಂಗಳೆಯರ ದೇಹ ಒಂದೇ ತರ ಪ್ರತಿಕ್ರಿಯಸುವುದಿಲ್ಲ. ಒಬ್ಬಬ್ಬೊರು ಒಂದೊಂದು ತರಹ ಯಾತನೆ ಅನುಭವಿಸುತ್ತಾರೆ. ಸುಮಾರು ಶೇ. 70-80 ಮಹಿಳೆಯರು ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು, ಮೈ ಕೈ ನೋವಿಂದ, ಮೂಡ್ ಚೇಂಜ್ ಮತ್ತು ಅತಿಯಾದ ರಕ್ತ ಸ್ರಾವದಿಂದ ಬಳಲುತ್ತಾರೆ .ಎಷ್ಟೋ ಚಿಕ್ಕ ಚಿಕ್ಕ ಆಫೀಸ್ ಗಳಲ್ಲಿ ಹೆಣ್ಣುಮಕ್ಕಳಿಗೆ ಸಪರೇಟ್ ಆದ ಶೌಚಾಲಯ ಇರುದಿಲ್ಲ. ಇದ್ದರೂ ಬಟ್ಟೆ ಚೇಂಜ್ ಮಾಡೋದಕ್ಕೆ ಆಗುವದಿಲ್ಲ. ಈ ಎಲ್ಲ ಸಮಸ್ಯೆಯಿಂದ ಮುಟ್ಟಿನ ರಜೆ ಹೆಣ್ಣುಮಕ್ಕಳಿಗೆ ಒಂದು ದೊಡ್ಡ ವರವಾಗಿ ಕಾಣುತ್ತದೆ. ಈ ಸಮಯದಲ್ಲಿ ಏನೂ ತೊಂದರೆ ಇರದವರು ತಮ್ಮ ಸ್ವ ಇಚ್ಛೆಯಿಂದ ಕೆಲಸಕ್ಕೆ ಹೋಗೋದರಿಂದ ಇನ್ನೂ ಒಳ್ಳೆಯದು.
ಹೆಣ್ಣುಮಕ್ಕಳು ವಿಶ್ರಾಂತಿ ಪಡೆದು ಕೆಲಸಕ್ಕೆ ಮತ್ತೆ ಅದೇ ಉತ್ಸುಕತೆಯಿಂದ ಬಂದು ಕೆಲಸ ಮುಗಿಸುವದರಿಂದ ಸರಕಾರದ ಬೊಕ್ಕಸಕ್ಕೆ ಏನೂ ತೊಂದರೆ ಆಗಲಿಕ್ಕಿಲ್ಲ ಅನ್ನುವುದು ನನ್ನ ಅನಿಸಿಕೆ. ನಮ್ಮ ಸ್ತ್ರೀ ಶಕ್ತಿಗೆ ಇಷ್ಟು ಮಾಡಲಿಲ್ಲ ಅಂದರೆ ಹೇಗೆ?
ಇಡೀ ಜಗತ್ತಿನ ಮನುಕುಲದ ಸೃಷ್ಟಿ ನಿಂತಿರುವುದು ಮುಟ್ಟಿನ ಮೇಲೆ. ಆದ್ದರಿಂದ ಮುಟ್ಟಿಗೆ ಅದರದೇ ಆದ ಮಹತ್ವ ಕೊಟ್ಟು ಮುಟ್ಟನ್ನು ಗುಟ್ಟಾಗಿ ಇಡದೆ ಅದನ್ನು ಸರಿಯಾಗಿ ತಿಳಿದುಕೊಂಡು ಹೆಣ್ಣು ಮಕ್ಕಳಿಗೆ ನೈತಿಕವಾಗಿ ಬೆಂಬಲಿಸೋಣ.