ಚಂದಕ್ಕೆ ಸಾಗುವ ಬದುಕು ಇದ್ದಕ್ಕಿದ್ದಂತೆ ಹಠಾತ್ತನೆ (Women’s Day 2024) ಬದಲಾದಾಗ, ಬದುಕಿನಲ್ಲಿ ಸಮಸ್ಯೆಗಳ ಸುಳಿಯಲ್ಲಿ ನಾವು ಸಿಕ್ಕಿ ಹಾಕಿಕೊಂಡಾಗ, ಇನ್ನು ಮರಳಿ ಬರಲಿಕ್ಕೇ ಆಗುವುದಿಲ್ಲವೇನೋ ಎಂಬಷ್ಟು ಅಧೀರರಾಗಿಬಿಡುತ್ತೇವೆ. ಅದರಲ್ಲಿ ಕೆಲವರು ಮಾತ್ರ ಅವುಗಳನ್ನು ಗೆದ್ದು, ಫೀನಿಕ್ಸಿನಂತೆ ಮೇಲೆದ್ದು ಬರುತ್ತಾರೆ! ಮೌಶ್ಮಿ ಕಪಾಡಿಯಾ ಕತೆ ಅಂಥದ್ದು. ಅಯ್ಯೋ ನನ್ನ ಬದುಕು ಮುಗಿಯಿತು ಎಂದು ಅಂದುಕೊಳ್ಳುವವರಿಗೆ ಮೌಶ್ಮಿ ಕಪಾಡಿಯಾ ಕತೆಯೇ ಸ್ಫೂರ್ತಿಯಾಗಬೇಕು!
ಒಂದು ಕೈಯಲ್ಲಿ ಐದು ವರ್ಷದ ಅಪರೂಪದ ವಂಶವಾಹಿನಿಯ ಕಾಯಿಲೆಗೆ ತುತ್ತಾಗಿದ್ದ ಮಗು, ಇನ್ನೊಂದು ಕೈಯಲ್ಲಿ ಹಸುಗೂಸು, ಮೊದಲ ಮಗುವಿಗೆ ಪದೇ ಪದೇ ಬಿಡದೆ ಕಾಡಲು ಬರುತ್ತಿದ್ದ ನ್ಯುಮೋನಿಯಾ ಕಾಯಿಲೆ, ಮುಗಿಯದ ಆಸ್ಪತ್ರೆ ವಾಸಗಳು, ಪತಿ ಪ್ರಿಯೇಶ್‌ಗೆ ದೂರದ ದುಬೈನಲ್ಲಿ ಕೆಲಸ ಇತ್ಯಾದಿ ಇತ್ಯಾದಿಗಳು ಮೌಶ್ಮಿ ಕಪಾಡಿಯಾರನ್ನು ಹಿಂಡಿ ಹಿಪ್ಪೆ ಮಾಡಿದ್ದಲ್ಲದೆ, ಇದೇ ಕಾರಣಕ್ಕೆ ಆಕೆ ಖಿನ್ನತೆಗೆ ತುತ್ತಾಗಿದ್ದರು. ಮೂರು ವರ್ಷಗಳ ಕಾಲ ಖಿನ್ನತೆಯ ಜೊತೆಗೆ ಹೋರಾಡಿದ ಆಕೆ, 2009ರಲ್ಲಿ ಒಂದು ನಿರ್ಧಾರ ಮಾಡಿದ್ದರು. ಇನ್ನೆಂದೂ ತನ್ನ ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗಲು ತಾನು ಬಿಡಬಾರದು ಎಂದು ನಿರ್ಧರಿಸಿದ ಆಕೆ, ತಾನು ಅಂದುಕೊಂಡಂತೆ ಮತ್ತೆಂದೂ ಹಿಂತಿರುಗಿ ನೋಡಲಿಲ್ಲ. ಅಷ್ಟೇ ಅಲ್ಲ. ತನ್ನ ಪರಿಸ್ಥಿತಿಯ ಜೊತೆಗೆ ತನ್ನ ಕನಸನ್ನೂ ವಿಸ್ತರಿಸಿಕೊಂಡು ಎಲ್ಲವನ್ನೂ ಅದ್ಭುತವಾಗಿ ಸಂಭಾಳಿಸಿಕೊಂಡು ಇಂದು ಬೈಕರ್, ಚಾರಣಿಗ ಎಂದಿನಿಸಿಕೊಂಡಿದ್ದಾರೆ. 21 ದೇಶಗಳನ್ನು ಸುತ್ತಿದ್ದಾರೆ. 12 ಚಾರಣಗಳನ್ನು ಮಾಡಿದ್ದಾರೆ. 26 ರಾಜ್ಯಗಳಲ್ಲಿ ದೇಶದ ಉದ್ದಗಲಕ್ಕೂ ಹಲವಾರು ಬೈಕ್ ಯಾತ್ರೆಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ತನ್ನ ಅಪರೂಪದ ಕಾಯಿಲೆಯಿರುವ ಮಗನಿಗೂ ಹಲವು ದೇಶಗಳ ಪ್ರವಾಸ ಮಾಡಿಸಿದ್ದಾರೆ!
ರಿಜಿಡ್ ಸ್ಪೈನ್ ಮಸ್ಕ್ಯುಲರ್ ಡಿಸ್ಟ್ರೊಫಿ ಎಂಬ ಬೆನ್ನುಹುರಿಯ ಅಪರೂಪದ ವಂಶವಾಹಿನಿ ಸಂಬಂಧೀ ಕಾಯಿಲೆಗೆ ತುತ್ತಾಗಿದ್ದ ಆಕೆಯ ಮೊದಲ ಮಗ ವೇದಾಂಶ್ ಕೂಡಾ, ಈಗ ಹಲವರಿಗೆ ಸ್ಪೂರ್ತಿಯ ಚಿಲುಮೆ! ಈತನಿಗೆ ತನ್ನ ಈ ಸ್ಥಿತಿಯ ಬಗೆಗೆ ಬೇಸರವಿಲ್ಲ. ಬದಲಾಗಿ ತನ್ನಮ್ಮನ ಬಗೆಗೆ ಹೆಮ್ಮೆಯಿದೆ!
ಇದನ್ನೂ ಓದಿ: Women’s Day 2024: ಮೀನಾ ಬಿಂದ್ರಾರ ಕನಸಿನ ಕೂಸು ‘ಬೀಬಾ’ ಪ್ರತಿ ಮಹಿಳೆಗೂ ಸ್ಫೂರ್ತಿಕತೆ!
ಗೊತ್ತಾಗಿದ್ದು ಹೇಗೆ?
ಈಕೆ ಹೇಳುವಂತೆ, ಮೊದಲು ವೇದಾಂಶ್‌ಗೆ ಒಂದು ವರ್ಷ ವಯಸ್ಸಾದಾಗ, ಗಂಡ ಪ್ರಿಯೇಶ್ ತನ್ನ ಮಗುವಿಗೆ ಕತ್ತು ನೇರ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಗಮನಿಸಿದರಂತೆ. ಅದಕ್ಕಾಗಿ ವೈದ್ಯರನ್ನು ಸಂಪರ್ಕಿಸಿದಾಗ ಹಲವಾರು ಪರೀಕ್ಷೆಗಳ ನಂತರ ಮಗುವಿಗೆ ಇರುವ ಕಾಯಿಲೆ ಗುಣಪಡಿಸಲಾಗದ್ದು ಎಂಬುದು ತಿಳಿಯಿತು. ಸುಮಾರು ೧೮ ತಿಂಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ ದಂಪತಿಗಳಿಗೆ ಈ ಕಾಯಿಲೆ ಏನೆಂಬುದು ಗೊತ್ತಾದದ್ದು. ಕಾಯಿಲೆ ಏನೆಂದು ಗೊತ್ತಾದುದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಡದಂತೆ ದಂಪತಿಗಳನ್ನು ಅಧೀರರನ್ನಾಗಿಸಲು ಮತ್ತೊಂದು ಸುದ್ದಿಯೂ ಕಾದಿತ್ತು. ತಮ್ಮ ಮಗು, ಇನ್ನೆಂದಿಗೂ ತಲೆಯನ್ನು ಎತ್ತಿ ಎಲ್ಲರಂತೆ ಬದುಕುವ ಸಾಮರ್ಥ್ಯ ಪಡೆಯಲಾರದು ಎಂದು ತಿಳಿದರೆ ಯಾವ ಹೆತ್ತವರ ಎದೆ ಒಡೆಯಲಿಕ್ಕಿಲ್ಲ ಹೇಳಿ! ಅಷ್ಟೇ ಅಲ್ಲ, ಇದರ ಬೆನ್ನಿಗೇ ಮಗುವಿಗೆ ನ್ಯುಮೋನಿಯಾ. ೨೦ ವರ್ಷಗಳ ಹಿಂದೆ ದುಬೈನಲ್ಲಿ ಇದಕ್ಕೆ ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದೆ, ಮಗುವನ್ನು ಕರೆದುಕೊಂಡು ಭಾರತಕ್ಕೆ ಬರಬೇಕಾಯ್ತು. ಮಗು ಇಲ್ಲಿ ಗುಣಮುಖವಾಯ್ತು. ಆದರೆ, ಪದೇ ಪದೇ ನ್ಯುಮೋನಿಯಾ ಬರುವುದು ತಪ್ಪಲಿಲ್ಲ. ಹೀಗಾಗಿ, ಮೌಶ್ಮಿ ಕಪಾಡಿಯಾ ಮಗುವಿನ ಜೊತೆಗೆ ಇಲ್ಲಿ, ಪತಿ ಕೆಲಸಕ್ಕಾಗಿ ದುಬೈಯಲ್ಲಿರುವುದು ಅನಿವಾರ್ಯವಾಯಿತು.
ಹತಾಶೆಯ ಬದುಕು
ಈ ನಡುವೆ ಕೆಲವೇ ವರ್ಷಗಳಲ್ಲಿ ಅವರಿಗೆ ಇನ್ನೊಂದು ಮಗುವೂ ಆಯಿತು. ಎರಡು ಮಕ್ಕಳಾದ ಮೇಲೆ ಕಪಾಡಿಯ ಜೀವನ ಇನ್ನಷ್ಟು ದುಸ್ತರವಾಯಿತು. ಇದರ ಪರಿಣಾಮ ನಿತ್ಯವೂ ಕೋಪ, ಹತಾಶೆಯ ಬದುಕು ಹೆಚ್ಚಾಯಿತು. ಖಿನ್ನತೆಗಾಗಿ ಮನೋವೈದ್ಯರ ಸಲಹೆ, ಮಾತ್ರೆ ಇತ್ಯಾದಿಗಳು ಸಾಮಾನ್ಯವಾಯಿತು. ಮೂರು ವರ್ಷಗಳ ಖಿನ್ನತೆಯ ಸಮಸ್ಯೆಯಿಂದ ಕೊನೆಗೂ ಚೇತರಿಸಿಕೊಂಡಾಗ, ಮಾತ್ರೆಗಳ ಅಡ್ಡ ಪರಿಣಾಮದಿಂದಾಗಿ ಫಿಟ್‌ನೆಸ್ ಇರಲಿಲ್ಲ. ಕೂಡಲೇ ತಾನಿನ್ನು ಇದರಿಂದ ಹೊರಬರಬೇಕು, ಇರುವ ಪರಿಸ್ಥಿತಿಯಲ್ಲೇ ನಮ್ಮ ಖುಷಿಯನ್ನು ಹುಡುಕಿಕೊಳ್ಳಬೇಕು ಎಂದು ನಿರ್ಧರಿಸಿದ ಆಕೆ ಮತ್ತೆಂದೂ ಹಿಂತಿರುಗಿ ನೋಡಲಿಲ್ಲ. ಆಕೆಯ ಕನಸಿಗೆ ಒತ್ತಾಸೆಯಾಗಿ ಅತ್ತೆ ಮಾವನವರೂ ನಿಂತರು.
ಫಿಟ್ ನೆಸ್ ಕಡೆಗೆ ಗಮನ
ಟಿನಿಸ್, ಝುಂಬಾ, ಜಿಮ್ ಎಂದು ಫಿಟ್‌ನೆಸ್ ಕಡೆಗೆ ಗಮನ ಹರಿಸಲು ಆರಂಭಿಸಿದ ಆಕೆ, ಬೈಕಿಂಗ್, ಟ್ರೆಕ್ಕಿಂಗ್ ಆರಂಭಿಸಿದರು. ಒಂದು ದಿನದ ಬೈಕಿಂಗ್ ಇತ್ಯಾದಿಗಳನ್ನು ಮಾಡುತ್ತಿದ್ದ ಆಕೆ ಮೊದಲ ಬಾರಿಗೆ ಲೇಹ್‌ಗೆ ೧೦ ದಿನಗಳ ಬೈಕಿಂಗ್ ಯಾತ್ರೆಗೆ ಹೊರಟಾಗ ಎದೆ ಹೊಡೆದುಕೊಳ್ಳುತ್ತಿತ್ತಂತೆ. ಮನೆಯಿಂದ ಒಂದು ಕರೆ ಬಂದರೂ ಮಗನಿಗೇನಾಗಿದೆಯೋ ಎಂಬ ಆತಂಕ, ನಿನಗೇನಾದರೂ ಆದರೆ ನಿನ್ನ ಮಗನ ಗತಿಯೇನು ಎಂದು ಪ್ರಶ್ನೆ ಮಾಡಿದ್ದ ಗೆಳೆಯ ಗೆಳತಿಯ ನುಡಿಗಳು ಆಗಾಗ ಆಕೆಯನ್ನು ಧೃತಿಗೆಡಿಸುತ್ತಿದ್ದರೂ, ತನ್ನ ಅಚಲ ಆತ್ಮವಿಶ್ವಾಸದಿಂದ ಆಕೆ ಲೇಹ್ ಯಾತ್ರೆ ಮುಗಿಸಿ ಬಂದರು. ಆಗ ಅಮ್ಮನ ಖುಷಿಯನ್ನು ಹೆಚ್ಚಿಸಿದ್ದು ಅದೇ ವೇದಾಂಶ್. ಈ ಎಲ್ಲವುಗಳ ನಡುವೆ, ತನ್ನದೇ ಆದ ಹೋಂ ಡೆಕೋರ್ ಸಂಸ್ಥೆಯನ್ನೂ ಹುಟ್ಟು ಹಾಕಿ ನಡೆಸುತ್ತಿದ್ದಾರೆ.
ಮೌಶ್ಮಿ ಕಪಾಡಿಯಾ ಹೇಳುವಂತೆ, ಮಹಿಳೆಯರು ತ್ಯಾಗ ಮಾಡಬೇಕು. ಬದುಕಿನೊಂದಿಗೆ ಹೊಂದಾಣಿಕೆ ಮಾಡಬೇಕು ಎಂದು ನಮಗೆ ಹಿರಿಯರು ಹೇಳುವ ಬುದ್ಧಿಮಾತು. ಆದರೆ, ನಾವು ಸಂತೋಷವಾಗಿದ್ದರೆ, ನಮ್ಮನ್ನು ಪ್ರೀತಿಸುತ್ತಿದ್ದರೆ, ನಮ್ಮ ಮಕ್ಕಳನ್ನೂ ಹಾಗೆಯೇ ಪ್ರೀತಿಸಬಹುದು ಎನ್ನುತ್ತಾರೆ. ಅಂದುಕೊಂಡದ್ದನ್ನು, ಬಯಸಿದ್ದನ್ನು ಮಾಡಲಾಗುವುದಿಲ್ಲ ಎಂದು ಅನೇಕ ಮಹಿಳೆಯರು ನನಗೆ ಹೇಳುತ್ತಾರೆ. ಅನಾರೋಗ್ಯವಿರುವ ಮಗು ಹಾಗೂ ವಿದೇಶದಲ್ಲಿರುವ ಗಂಡನನ್ನು ಹೊಂದಿರುವ ನಾನೇ ಇವೆಲ್ಲವನ್ನು ಮಾಡಲು ಸಾಧ್ಯವಿದೆ ಎಂದರೆ, ಯಾರಿಗೂ ಸಾಧ್ಯವಾಗದೆ ಇರದು. ನಿಮಗೆ ಕೇವಲ ಸ್ಪೂರ್ತಿಯ ಕೊರತೆಯಿದೆ ಅಷ್ಟೇ. ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸು ಹಾಗೂ ದೇಹದ ಆರೋಗ್ಯಕ ಕಾಳಜಿ ವಹಿಸಿಕೊಳ್ಳಿ. ಮಹಿಳೆಯರಿಗೆ ಅದು ಬಹಳ ಮುಖ್ಯ ಎಂದೂ ಸಲಹೆ ಮಾಡುತ್ತಾರೆ.
ಅಮ್ಮಂದಿರು ನಾವು ಯಾವಾಗಲೂ ಪಾಪಪ್ರಜ್ಞೆಗಳನ್ನು ಬೆಳೆಸಿಕೊಂಡುಬಿಡುತ್ತೇವೆ. ಮಕ್ಕಳನ್ನು ನಾವು ಬಿಟ್ಟು ಹೋದರೆ ಯಾರು ಅವರನ್ನು ನೋಡಿಕೊಳ್ಳುತ್ತಾರೆ ಎಂದು ಅಂದುಕೊಳ್ಳುತ್ತೇವೆ. ಮೊದಲು ನಾವು ಈ ಪಾಪಪ್ರಜ್ಞೆಗಳಿಂದ ಹೊರಬರಬೇಕು ಎನ್ನುತ್ತಾರೆ.
ಇದನ್ನೂ ಓದಿ: Women’s Day 2024: ಮನೆಯ ಕಸದಿಂದ ಗೊಬ್ಬರ ತಯಾರಿಸುವ ಯಂತ್ರ; ಇದು ಮಹಿಳೆಯೊಬ್ಬರ ಆವಿಷ್ಕಾರ!
ಶಿಕ್ಷಣಕ್ಕೆ ಕೊರತೆ ಇಲ್ಲ
ಈ ಎಲ್ಲ ನ್ಯೂನತೆ ಸಮಸ್ಯೆಗಳ ಹೊರತಾಗಿಯೂ ವೇದಾಂಶ್‌ಗೆ ಶಿಕ್ಷಣ ಸಿಕ್ಕಿದೆ. ಸದ್ಯ ಅಮ್ಮನ ಜೊತೆಗೆ ಹಲವು ದೇಶಗಳನ್ನೂ ಸುತ್ತಿ ಬಂದಿರುವ ವೇದಾಂಶ್‌ಗೆ ಪ್ರವಾಸವೆಂದರೆ ಅಚ್ಚುಮೆಚ್ಚು. 20 ವರ್ಷ ವಯಸ್ಸಿನ ಈ ವೇದಾಂಶ್ ಈಗ ತಮ್ಮ ಕುಟುಂಬದ ಐಸ್‌ಕ್ರೀಂ ಪಾರ್ಲರ್ ಒಂದನ್ನೂ ನಡೆಸುತ್ತಾ ತನ್ನ ಕಾಲ ಮೇಲೆ ನಿಂತಿರುವ ಆತ್ಮವಿಶ್ವಾಸ ಹೊಂದಿದ್ದಾನೆ. ಅಮ್ಮನ ಖುಷಿಗೆ ಇನ್ನೇನು ಬೇಕು! ಜೊತೆಗೆ, ಜಗತ್ತಿನ ಅಮ್ಮಂದಿರೆಲ್ಲರಿಗೆ ಸ್ಫೂರ್ತಿಯಾಗುವ ಇದಕ್ಕಿಂತ ಚಂದದ ಸ್ಫೂರ್ತಿ ಕತೆ ಬೇಕೇ?