Site icon Vistara News

Viral video: ಸೀರೆಯಲ್ಲಿ ಪ್ರತಿದಿನ ವರ್ಕೌಟ್‌! 56ರ ಮಹಿಳೆಯ ಭರ್ಜರಿ ಪವರ್‌ಲಿಫ್ಟಿಂಗ್!

gym woman

ಈಗಿನ ಬಹಳ ಮಂದಿಗೆ ಸೀರೆಯೆಂದರೆ ಕಷ್ಟವೇ. ಸೀರೆಯುಟ್ಟರೆ ಇಲ್ಲಿದ್ದ ವಸ್ತುವನ್ನೆತ್ತಿ ಅಲ್ಲಿಡಲು ಆಗುವುದಿಲ್ಲ. ಇಂದಿನ ಕಾಲಘಟ್ಟದ ಪ್ಯಾಂಟು ಟೀ ಶರ್ಟು ಹಾಕಿ ಹಾಯಾಗಿರುವ ಮಂದಿಗೆ ಸೀರೆಯಲ್ಲಿ ಕಂಫರ್ಟ್‌ ಫೀಲು ಸಿಗುವುದಿಲ್ಲ. ಸಮಾರಂಭ, ಹಬ್ಬ ಹರಿದಿನಗಳಲ್ಲಿ ಮಾತ್ರ ಸೀರೆಯುಡುವ ಸಂಪ್ರದಾಯವೇ ಹೆಚ್ಚು. ಉಳಿದ ಸಮಯಗಳಲ್ಲಿ ಮಹಿಳೆಯರಿಗೆ ನಾನಾ ಆರಾಮದಾಯಕ ಉಡುಗೆಗಳಿವೆ. ಆದರೆ ಹಿಂದಿನ ಕಾಲದಲ್ಲಿ ಹಾಗಿರಲಿಲ್ಲ. ಸೀರೆ ಭಾರತೀಯ ಮಹಿಳೆಯರ ದಿನನಿತ್ಯದ ಉಡುಗೆಯಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಜೊತೆಗೆ ಆಟೋಟ ವ್ಯಾಯಾಮಗಳಿಗೆ ಸೀರೆ ಸರಿಹೊಂದುವುದೂ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೂ, ಸೀರೆಯುಟ್ಟು ಮ್ಯಾರಥಾನ್‌ ಮಾಡುವ, ಬೆಟ್ಟ ಹತ್ತುವ, ಬೈಕ್‌ ಓಡಿಸುವ ಹಾಗೂ ಎಲ್ಲ ಮಾದರಿಯ ಶ್ರಮದಾಯಕ ಕೆಲಸಗಳನ್ನು ಮಾಡುವ, ಮಾಡಿ ತೋರಿಸುವ ಮಂದಿಯನ್ನೆಲ್ಲ ನೋಡಿದ್ದೇವೆ. ಈಗ ಜಿಮ್‌ ಸರದಿ. ಇಲ್ಲೊಬ್ಬ ಮಹಿಳೆ ತಮ್ಮ 56ನೇ ವಯಸ್ಸಿನಲ್ಲಿ ಸೀರೆಯುಟ್ಟು ಕಳೆದ ನಾಲ್ಕು ವರ್ಷಗಳಿಂದ ಬೆವರಿಳಿಸುತ್ತಿದ್ದಾರೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Viral video) ಆಗಿದ್ದು, ಆಕೆಯ ಉತ್ಸಾಹ ನೋಡಿ ಜನ ಫಿದಾ ಆಗಿದ್ದಾರೆ.‌ ಇದು Women’s Day 2023ಗೆ ಒಂದು ವಿಶೇಷ ಸುದ್ದಿ.

ಕಳೆದ ನಾಲ್ಕು ವರ್ಷಗಳಿಂದ ಮೊಣಕಾಲಿನ ಗಂಟು ನೋವಿರುವ ಮಹಿಳೆಯೊಬ್ಬರು ಹೀಗೆ ಜಿಮ್‌ನಲ್ಲಿ ದೇಹ ದಂಡಿಸುತ್ತಿದ್ದಾರೆ. ಈಕೆ ತನ್ನ ಮಗನ ಜಿಮ್‌ನಲ್ಲಿ ತನ್ನ ಮಂಡಿ ನೋವಿನ ಸಮಸ್ಯೆಯಿಂದ ಮುಕ್ತಿ ಕಾಣಲು ತನ್ನ ಕಂಫರ್ಟ್‌ ದಿರಿಸದ ಸೀರೆಯಲ್ಲೇ ಬಂದು ದಿನನಿತ್ಯ ವರ್ಕೌಟ್‌ ಮಾಡುತ್ತಾರಂತೆ. ಮಗ ಅಮ್ಮನ ಮಂಡಿ ನೋವಿಗೆ ಕೆಲವು ವ್ಯಾಯಾಮಗಳನ್ನು ಹೇಳಿಕೊಟ್ಟಿದ್ದು, ಈಗ ಆತನ ಮಾರ್ಗದರ್ಶನದಲ್ಲಿ ಸೊಸೆಯ ಜೊತೆ ಜಿಮ್‌ಗೆ ತೆರಳಿ ನಿತ್ಯವೂ ವ್ಯಾಯಾಮ ಮಾಡುತ್ತಿದ್ದಾರೆ. ಈಕೆ ವ್ಯಾಯಾಮ ಮಾಡುತ್ತಿರುವ ವಿಡಿಯೋ ಇದೀಗ ವೈರಲ್‌ ಆಗಿದ್ದು ಸಾವಿರಾರು ಮಂದಿಗೆ ಸ್ಪೂರ್ತಿಯಾಗಿದೆ.

ಈ ವಿಡಿಯೋ ಪೋಸ್ಟ್‌ ವಿವರಣೆಯನ್ನೂ ಹೊಂದಿದ್ದು, ಅದರ ಪ್ರಕಾರ, ʻಈಕೆಗೆ ೫೬! ಆದರೇನು? ಆಕೆ ಸೀರೆ ಉಡುತ್ತಾರೆ ಹಾಗೂ ಅಷ್ಟೇ ಸಹಜವಾಗಿ ಪವರ್ಲಿಫ್ಟಿಂಗ್‌ ಹಾಗೂ ಪುಶ್‌ಅಪ್‌ ಕೂಡಾ ಮಾಡುತ್ತಾರೆ. ವಯಸ್ಸು ಎಂಬುದು ಕೇವಲ ಒಂದು ನಂಬರ್‌ ಅಷ್ಟೇ. ತನ್ನ ಸೊಸೆಯೊಂದಿಗೆ ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುವ ಈಕೆ, ಜೊತೆಯಾಗಿ ಬೆಳೆಯುವುದು ಎಂದರೆ ಹೀಗೆ ಎಂದು ತೋರಿಸಿಕೊಡುತ್ತಿದ್ದಾರೆ. ಪವರ್‌ಫುಲ್‌ ಮಹಿಳೆಯರಲ್ಲಿ ಒಬ್ಬರು ಈಕೆ!ʼ ಎಂದು ಬರೆಯಲಾಗಿದೆ. ಈ ಪೋಸ್ಟ್‌ ನೋಡಿದವರೆಲ್ಲರೂ ಈ ಮಾತನ್ನು ಒಪ್ಪಿಕೊಂಡಿಡು ಪ್ರತಿಕ್ರಿಯೆಯನ್ನೂ ಕೊಟ್ಟಿದ್ದಾರೆ.

ಇದನ್ನೂ ಓದಿ: Women’s Day 2023: ಮುಟ್ಟಿನ ರಜೆ ಆಯ್ಕೆಯಾಗಿರುವುದು ಸೂಕ್ತ

ʻನನಗೀಗ 56. ನಾನು ಸಹಜವಾಗಿರಬಲ್ಲ ಬಟ್ಟೆ ನನ್ನನ್ನು ಇದರಿಂದ ದೂರವಿರಿಸಬಾರದು ಅಲ್ಲವೇ? ಹಾಗಾಗಿ ನನಗೆ ಸುಲಭವೆನಿಸುವ ಕಂಫರ್ಟ್‌ ನೀಡುವ ಬಟ್ಟೆಯಲ್ಲೇ ನಾನು ವರ್ಕೌಟ್‌ ಮಾಡುತ್ತೇನೆ. ನನಗೆ ೫೨ ವರ್ಷವಿದ್ದಾಗ ಕಾಡಿ ಮೊಣಕಾಲಿನ ಸಮಸ್ಯೆ ನನ್ನನ್ನು ಜಿಮ್‌ಗೆ ಬರುವಂತೆ ಮಾಡಿತು ಅಂದಿನಿಂದ ಇಂದಿನವರೆಗೂ ನಾನು ಜಿಮ್‌ ತಪ್ಪಿಸಿಲ್ಲʼ ಎಂದಾಕೆ ಹೇಳುತ್ತಾರೆ.

ʻನನ್ನ ಮಗ ನನ್ನ ಕಾಲು ನೋವು ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳನ್ನು ತಿಳಿಯಲು ಪ್ರಯತ್ನಿಸಿದ. ಇದಕ್ಕೆ ಪರಿಹಾರ ಏನಿದೆ ಎಂದು ತಿಳಿಯಲು ಹೋಗಿ ಕೊನೆಗೆ ಆತ ಕೆಲವೊಂದು ವ್ಯಾಯಾಮಗಳನ್ನು ನನಗೆ ಹೇಳಿದ. ಆತನಿಗೊಂದು ಮೆಡ್ರಾಸ್‌ ಬರ್ಬೆಲ್‌ ಎಂಬ ಹೆಸರಿನ ಜಿಮ್‌ ಇದೆ. ಹೀಗಾಗಿ ನಾನು ಆತನ ಸಲಹೆಯಂತೆ ಜಿಮ್‌ಗೆ ಹೋಗಲಾರಂಭಿಸಿದೆ. ಈಗ ಸೊಸೆಯ ಜೊತೆ ದಿನವೂ ಹೋಗಿ ನಾವಿಬ್ಬರೂ ಜೊತೆಯಾಗಿ ಪವರ್‌ ಲಿಫ್ಟಿಂಗ್‌, ಸ್ವಾಟ್ಸ್‌ ಎಲ್ಲ ಮಾಡುತ್ತೇವೆ. ಇದು ನನ್ನ ಮೊಣಕಾಲಿನ ಸಮಸ್ಯೆಯನ್ನು ಭಾಗಶಃ ಶಮನಗೊಳಿಸಿದೆ. ಈಗ ನಾನು ನನ್ನ ಕುಟುಂಬದ ಜೊತೆ ಆರೋಗ್ಯವಾಗಿದ್ದೇನೆ ಎಂಬ ನೆಮ್ಮದಿಯಿದೆʼ ಎಂದಾಕೆ ಹೇಳುತ್ತಾರೆ.

ಈಕೆಯ ಈ ವಿಡಿಯೋವನ್ನು ಸುಮಾರು ಒಂದು ಲಕ್ಷ ಮಂದಿ ನೋಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಯಸ್ಸಿನಲ್ಲಿ ಸೀರೆಯಲ್ಲಿ ವರ್ಕೌಟ್‌ ಮಾಡುತ್ತಿರುವುದು ನೋಡಿದರೆ ಖುಷಿಯಾಗುತ್ತದೆ. ನೀವು ನಮಗೆ ಸ್ಪೂರ್ತಿಯಾಗಿದ್ದೀರಿ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Women’s Day 2023 : ಮಹಿಳಾ ಉದ್ಯೋಗಿಗಳು 2023ರಲ್ಲಿ ತೆರಿಗೆಯಲ್ಲಿ ಹೇಗೆ ಹೆಚ್ಚು ಉಳಿತಾಯ ಮಾಡಬಹುದು?

Exit mobile version