ಬೆಂಗಳೂರು: ʼಹೆಣ್ಣು ಮನುಕುಲದ ಕಣ್ಣುʼ ಎನ್ನುವ (International Women’s Day 2023) ಮಾತಿದೆ. ಅದೇ ಹೆಣ್ಣು ಕುಟುಂಬ, ಸಮಾಜಕ್ಕಾಗಿ ಮಾಡುವ ತ್ಯಾಗವನ್ನು ಸ್ಮರಿಸುವ ದಿನವೇ ʼಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆʼ. ಅಫ್ಘಾನಿಸ್ತಾನ, ಪಾಕಿಸ್ತಾನದಂತಹ ದೇಶಗಳಿಗೆ ಹೋಲಿಸಿದರೆ ಭಾರತ ನಿಜಕ್ಕೂ ಹೆಣ್ಣು ಮಕ್ಕಳ ಪಾಲಿಗೆ ಪುಣ್ಯ ಭೂಮಿಯೇ. ಸ್ವತಂತ್ರವಾಗಿ ಜೀವಿಸುವ ಹಕ್ಕು ಇಲ್ಲಿನ ಹೆಣ್ಣು ಮಕ್ಕಳಿಗಿದೆ. ಹೆಣ್ಣು ಮಕ್ಕಳ ರಕ್ಷಣೆ, ಭದ್ರತೆಗೆಂದೇ ವಿಶೇಷ ಹಕ್ಕುಗಳನ್ನೂ ನಮ್ಮ ಸಂವಿಧಾನ ಮಾಡಿಕೊಟ್ಟಿದೆ. ಅಂತಹ ಕೆಲವು ವಿಶೇಷ ಹಕ್ಕುಗಳ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Women’s Day Offer: ಮಹಿಳಾ ದಿನದ ನಿಮಿತ್ತ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಮಹಿಳೆಯರಿಗೆ ಭರ್ಜರಿ ಕೊಡುಗೆ!
ಮಾತೃತ್ವ ಸೌಲಭ್ಯದ ಹಕ್ಕು:
ಹೆಣ್ಣು ಮಕ್ಕಳು ಗರ್ಭಿಣಿಯಾಗಿದ್ದಾಗ ಮತ್ತು ಹೆರಿಗೆಯ ನಂತರ ಒಟ್ಟಾರೆಯಾಗಿ ಆರು ತಿಂಗಳ ಕಾಲ ಸಂಬಳಸಹಿತ ರಜೆಯನ್ನು ಪಡೆಯಬಹುದು. ಸರ್ಕಾರಿ, ಖಾಸಗಿ ಸೇರಿದಂತೆ ಎಲ್ಲ ಸಂಸ್ಥೆ, ಕಂಪನಿಗಳ ಉದ್ಯೋಗಿಗಳಿಗೆ ಈ ಸೌಲಭ್ಯ ಸೇರಿದೆ.
ಉಚಿತ ಕಾನೂನು ಸಹಾಯಕರ ಹಕ್ಕು
ಬಡ ಜನರು ಕೂಡ ಕಾನೂನಿನಲ್ಲಿ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ಸಂವಿಧಾನದಲ್ಲಿ ಈ ವಿಶೇಷ ಹಕ್ಕನ್ನು ರಚಿಸಲಾಗಿದೆ. ಬಡವರಿಗೆ ಕಾನೂನು ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುವುದಕ್ಕೆ ಸರ್ಕಾರವೇ ಉಚಿತವಾಗಿ ವಕೀಲರನ್ನು ನೇಮಿಸಿಕೊಡುತ್ತದೆ. ಅದೇ ರೀತಿ ಈ ಸೌಲಭ್ಯವನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮತ್ತು ಅತ್ಯಾಚಾರ ಸಂತ್ರಸ್ತ ಮಹಿಳೆಯರು ಬಳಸಿಕೊಳ್ಳಬಹುದಾಗಿದೆ. ಪೊಲೀಸ್ ಠಾಣೆಯ ಎಸ್‌ಎಚ್‌ಒ ಬಳಿ ಕಾನೂನು ಸಹಾಯ ಕೇಳಿದರೆ ಅವರೇ ಕಾನೂನು ಆಡಳಿತಕ್ಕೆ ಮಾಹಿತಿ ನೀಡಿ ವಕೀಲರನ್ನು ನೇಮಿಸಿಕೊಡುತ್ತಾರೆ.
ಹೆಸರು, ಗುರುತು ಗೌಪ್ಯವಾಗಿಟ್ಟುಕೊಳ್ಳುವ ಹಕ್ಕು
ಯಾವುದೇ ಹೆಣ್ಣು ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೆ ಅಥವಾ ಅತ್ಯಾಚಾರಕ್ಕೆ ಒಳಗಾದರೆ ಆಕೆ ತನ್ನ ಹೆಸರು ಮತ್ತು ಗುರುತು ಬಹಿರಂಗವಾಗದಂತೆ ಗೌಪ್ಯವಾಗಿಟ್ಟುಕೊಳ್ಳಬಹುದು. ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಮಹಿಳಾ ಪೇದೆಯ ಎದುರೇ ತಮ್ಮ ಹೇಳಿಕೆಯನ್ನು ದಾಖಲಿಸಬಹುದು. ಪೊಲೀಸರು ಕೂಡ ಮಹಿಳೆಯ ಗುರುತು, ಹೆಸರನ್ನು ಬಹಿರಂಗಪಡಿಸುವಂತಿಲ್ಲ ಎಂದು ಕಾನೂನು ಹೇಳುತ್ತದೆ.
ಇದನ್ನೂ ಓದಿ: Kirik Party: ಮಹಿಳಾ ಬೈಕ್ ರೈಡರ್ಸ್ ಮೇಲೆ ಸ್ಥಳೀಯನ ಕಿರಿಕ್, ಉಭಯ ಕಡೆಗಳಿಂದ ದೂರು
ರಾತ್ರಿ ಹೊತ್ತು ಬಂಧನ ಮಾಡುವಂತಿಲ್ಲ
ಯಾವುದೇ ಹೆಣ್ಣು ಆರೋಪಿ ಸ್ಥಾನದಲ್ಲಿದ್ದರೆ ಆಕೆಯನ್ನು ಸೂರ್ಯ ಮುಳುಗಿದ ನಂತರ ಮತ್ತು ಸೂರ್ಯ ಹುಟ್ಟುವುದರೊಳಗೆ ಬಂಧಿಸುವಂತಿಲ್ಲ. ಒಂದು ವೇಳೆ ಆ ಹೊತ್ತಿನಲ್ಲಿ ಬಂಧನ ಅತ್ಯವಶ್ಯಕವಾಗಿದ್ದರೆ ಪೊಲೀಸರು ಸ್ಥಳೀಯ ಮ್ಯಾಜಿಸ್ಟ್ರೇಟ್ ಅವರಿಂದ ಅನುಮತಿ ಪಡೆದು ಬಂಧಿಸಬೇಕು. ಹಾಗೆಯೇ ಮಹಿಳಾ ಪೊಲೀಸ್ ಸಿಬ್ಬಂದಿಯೇ ಆರೋಪಿತ ಮಹಿಳೆಯನ್ನು ಬಂಧಿಸಬೇಕು ಎಂದು ಕಾನೂನಿನಲ್ಲಿದೆ.