Site icon Vistara News

Women’s Day 2023: ಹೆಣ್ಣುಮಕ್ಕಳಲ್ಲಿ ಸೌಂದರ್ಯಕ್ಕೂ ಮೀರಿದ ಗುಣಗಳೇ ಆಕೆಯ ಅಳತೆಗೋಲಾಗಲಿ

Womens Day 2023

ʻನೀನು ಸುಂದರವಾಗಿ ಕಾಣುತ್ತಿದ್ದಿ, ಮುದ್ದಾಗಿದ್ದಿ, ಬೊಂಬೆಯ ಹಾಗಿದ್ದಾಳೆʼ ಇತ್ಯಾದಿ ಇತ್ಯಾದಿ ಹೊಗಳಿಕೆಗಳು ಹೆಣ್ಣುಮಕ್ಕಳಿಗೆ ಸಾಮಾನ್ಯ. ಹೆಣ್ಣುಮಕ್ಕಳು ಆಗಾಗ ಹೊಗಳಿಸಿಕೊಳ್ಳುವ ವಿಷಯವೆಂದರೆ ಇದೇ. ಹೆಣ್ಣಿನ ಸೌಂದರ್ಯ ಹೀಗೆಯೇ ಇರಬೇಕು ಎಂಬ ಕಲ್ಪನೆಗಳಿಗೆ ಪಕ್ಕಾಗುವಂತಿದ್ದರೆ, ಆಕೆ ಸುಂದರಿಯೆಂದೂ, ಇಲ್ಲವಾದರೆ ಮದುವೆ ಕಷ್ಟವೆಂದೂ ಎಳವೆಯಲ್ಲೇ ಲೆಕ್ಕಾಚಾರ ಹಾಕಲಾಗುತ್ತದೆ. ಹೀಗಿದ್ದಾಗ, ಸಹಜವಾಗಿ ಹೆಣ್ಣು ಮಕ್ಕಳಿಗೆ (ಸೌಂದರ್ಯದ ಹೊರತಾದ ಗುಣಗಳಿಗಿಂತ ಸೌಂದರ್ಯವೇ ಮುಖ್ಯವಾಗಿ ಕಾಣತೊಡಗುತ್ತದೆ. ತನ್ನ ಬಗೆಗಿನ ಕೀಳರಿಮೆ, ಅಧೈರ್ಯ, ಆತ್ಮವಿಶ್ವಾಸದ ಕೊರತೆ ಎದ್ದು ಕಾಣತೊಡಗುತ್ತದೆ. ಹೆಣ್ಣನ್ನು ಸಮಾಜ ಸೌಂದರ್ಯದ ಪ್ರತೀಕವೆಂಬಂತೆ ನೋಡುವುದು ಸಹಜ. ಆದರೆ, ಬಹಳಷ್ಟು ಸಾರಿ ಹೆಣ್ಣುಮಗಳೊಬ್ಬಳಿಗೆ ಬೆಳವಣಿಗೆಯ ಹಂತದಲ್ಲಿ ಸಿಗಬೇಕಾದ ಪ್ರೋತ್ಸಾಹ, ಮುನ್ನಡೆಯಬಲ್ಲ ಮಾತುಗಳು ತನ್ನದೇ ಮನೆಯವರಿಂದ, ಹೆತ್ತವರಿಂದ, ಸಮಾಜದಿಂದ ದೊರೆಯುವುದೇ ಇಲ್ಲ. ಆಕೆಯ ಎಲ್ಲ ಗುಣ ಅವಗುಣಗಳೂ ಆಕೆಯ ಸೌಂದರ್ಯವೆಂಬ ಫ್ರೇಮಿನೊಳಗೆ ಕೂರದೆ ಅವಗಣನೆಗೆ ತುತ್ತಾಗುತ್ತದೆ. ಹಾಗಾಗಿ ಹೆತ್ತವರು ತಮ್ಮ ಹೆಣ್ಣು ಮಕ್ಕಳನ್ನು ಆಕೆಯ ಸೌಂದರ್ಯಕ್ಕೆ ಹೊರತಾದಂತೆಯೂ ನೋಡುವ ಮೂಲಕ, ಆಕೆಯ ಇತರ ಮಾನವೀಯ ಗುಣಗಳನ್ನೂ, ಪ್ರತಿಭೆಯನ್ನೂ, ಬುದ್ಧಿಮತ್ತೆಯನ್ನೂ ಪ್ರಶಂಸಿಸುವುದು ಅಗತ್ಯವಾಗಿ ಬೇಕಾಗುತ್ತದೆ. ಆ ಮೂಲಕ ಆಕೆಗೆ ಆತ್ಮವಿಶ್ವಾಸ ಮೂಡಿಸಬೇಕಾದ ಸಂದರ್ಭಗಳು ಹೆತ್ತವರಾಗಿ ನಿಮ್ಮ ಕೈಯಲ್ಲೇ ಇವೆ. ಆದರೆ, ಸೂಕ್ಷ್ಮಗಳನ್ನೂ ಆರಿತು, ಆಧುನಿಕ ಜಗತ್ತಿನಲ್ಲಿ ಆಕೆಯನ್ನೊಬ್ಬ ಆತ್ಮವಿಶ್ವಾಸಿ ಸ್ವತಂತ್ರ ಮಹಿಳೆಯಾಗಿ ರೂಪಿಸಿಕೊಳ್ಳುವಲ್ಲಿ ಹೆತ್ತವರ ಪಾತ್ರ ಬಹುಮುಖ್ಯ. ಹಾಗಾದರೆ ಅವು ಯಾವುವು ಎಂಬತ್ತ ಮಹಿಳಾ ದಿನದ (International Women’s Day 2023) ಸಂದರ್ಭದಲ್ಲಿ ಬೆಳಕು ಚೆಲ್ಲೋಣ.

೧. ಆಕೆಯ ಸಹಾಯ ಮಾಡುವ ಗುಣ: ಹೆಣ್ಣುಮಕ್ಕಳಲ್ಲಿ ಸಹಜವಾಗಿಯೇ ನೈಸರ್ಗಿಕವಾಗಿ ಸಹಾಯ ಮಾಡುವ ಗುಣವಿರುತ್ತದೆ. ಹೆತ್ತವರು ಜೊತೆಯಲ್ಲಿದ್ದಾಗಲೋ, ಅವರ ಸಾಮಾನನ್ನು ಹಿಡಿದುಕೊಳ್ಳುವಂಥ ಪುಟ್ಟ ಕೆಲಸವಿರಬಹುದು, ಮನೆಯಲ್ಲಿ ಹೆತ್ತವರ ನಿತ್ಯದ ಕೆಲಸಕ್ಕೆ ನೆರವಾಗುವುದಿರಬಹುದು, ಏನೇ ಇರಲಿ, ಆಕೆ ಮಾಡುವ ಸಹಾಯವನ್ನು ಗುರುತಿಸಿ. ಸಹಾಯ ಮಾಡಿದಾಗ ಆಕೆಯ ಬೆನ್ನುತಟ್ಟಿ ಹುರಿದುಂಬಿಸಿ.

೨. ಆಕೆಯ ನಾಯಕತ್ವದ ಗುಣ: ನಿಮ್ಮ ಹೆಣ್ಣುಮಕ್ಕಳಲ್ಲಿ ನಾಯಕತ್ವದ ಗುಣ ಇದ್ದರೆ ಅದಕ್ಕೆ ಸ್ಪೂರ್ತಿ ನೀಡಿ. ಆಕೆಯನ್ನು ಅಧೀರಗೊಳಿಸಬೇಡಿ. ಆಕೆ ಸರಿಯಾದ ದಿಶೆಯಲ್ಲಿ ಹೋಗುತ್ತಿದ್ದಾಳೆ ಎಂದೆನಿಸಿದರೆ, ನಾಯಕತ್ವದ ಗುಣ ಅವಳನ್ನು ಆತ್ಮವಿಶ್ವಾಸಿಯನ್ನಾಗಿಸುತ್ತದೆ.

೩. ಆಕೆಯಲ್ಲಿರುವ ಕಾಳಜಿ: ಸಾಮಾನ್ಯವಾಗಿ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ, ಅವರಲ್ಲಿ ಒಬ್ಬರು ಹೆಣ್ಣಾಗಿದ್ದರೆ ಇದು ನಿಮಗೆ ಢಾಳಾಗಿ ಕಾಣಿಸುತ್ತದೆ. ಹೆಣ್ಣು ಮಗಳು ತಮ್ಮನನ್ನು ಅಮ್ಮನಂತೆ ನೋಡಿಕೊಳ್ಳುತ್ತಾಳೆ. ಇಂತಹ ಆಕೆಯ ಗುಣವನ್ನು ಹೊಗಳಬಹುದು. ಆಕೆ ಖುಷಿಯಾಗುತ್ತಾಳೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಲಿಂಗ ಸಮಾನತೆಯ ಆಶಯ ಸರ್ಕಾರದ ಪ್ರಾತಿನಿಧ್ಯದಲ್ಲೂ ಈಡೇರಲಿ

೪. ಆಕೆಯ ಸಾಹಸ: ಎಷ್ಟೋ ಹೆಣ್ಣುಮಕ್ಕಳು ಎಳವೆಯಲ್ಲಿಯೇ ಸಾಹಸ ಮೆರೆಯುತ್ತಾರೆ. ಗಂಡುಮಕ್ಕಳಂತೆ ಇವೆಲ್ಲ ನಿನಗೆ ಬೇಕಾ ಎಂಬ ಮೂದಲಿಕೆಯ ಮಾತುಗಳು ಅವಳನ್ನು ಕುಗ್ಗಿಸಬಹುದು. ಸಾಹಸ ಮೆರೆದ ಹೆಣ್ಣುಮಗಳಿಗೆ ಊರುಗೋಲಾಗಿ ಆಕೆಯ ಬೆನ್ನಿಗೆ ನಿಂತರೆ ಆಕೆಯಿಂದ ಮುಂದೆ ಉತ್ತಮ ಭವಿಷ್ಯ ನಿರೀಕ್ಷಿಸಬಹುದು. ಆಕೆ ತನ್ನಕನಸುಗಳನ್ನು ಬೆಂಬತ್ತಿ ನಡೆಯಲು ಹೆಚ್ಚು ಧೈರ್ಯ ಬರಬಹುದು.

೫. ಆಕೆಯ ಬುದ್ಧಿಮತ್ತೆ: ಹೆಣ್ಣು ಹೆಚ್ಚು ಓದುವ ಅಗತ್ಯವಿಲ್ಲ ಎಂಬ ಹಳೆಯ ಮಾತು ಈಗಿಲ್ಲ ನಿಜ. ಆದರೂ ಇಂದಿಗೂ ಭಾರತದಂತಹ ದೇಶದಲ್ಲಿ ಮುಖ್ಯವಾಗಿ ಹಳ್ಳಿಗಳಲ್ಲಿ ಇಂದಿಗೂ ಹೆಣ್ಣುಮಕ್ಕಳು ಗಂಡುಮಕ್ಕಳಷ್ಟು ಸುಲಭವಾಗಿ ವಿದ್ಯೆಯ ಕನಸನ್ನು ಕಾಣುತ್ತಿಲ್ಲ. ಕನಸು ಕಂಡರೂ ಇಂದಿಗೂ ಬೇಲಿಗಳಿವೆ. ಹೆಣ್ಣುಮಕ್ಕಳು ಓದಿನಲ್ಲಿ, ಬುದ್ಧಿಮತ್ತೆಯಲ್ಲಿ ಚುರುಕಾಗಿದ್ದರೆ ಅದನ್ನು ಹೇಳಿ. ಆಕೆಯ ಸೌಂದರ್ಯಕ್ಕಿಂತ ಬುದ್ಧಿಮತ್ತೆಯೇ ಅಳತೆಗೋಲಾಗಲಿ. ಆ ಮೂಲಕ ಆಕೆಯ ಆತ್ಮ ವಿಶ್ವಾಸ ಹೆಚ್ಚಲಿ. ನೆನಪಿಡಿ, ಇದು ಪೋಷಕರಾಗಿ ನೀವು ನಿಮ್ಮ ಹೆಣ್ಣುಮಕ್ಕಳ ಭವಿಷ್ಯಕ್ಕೆ ಕೊಡಬಹುದಾದ ದೊಡ್ಡ ಗಿಫ್ಟು!

ಇದನ್ನೂ ಓದಿ: International Women’s Day 2023 : ಮಹಿಳಾ ದಿನಾಚರಣೆ ಆರಂಭವಾಗಿದ್ದು ಹೇಗೆ? ಏನಿದರ ಮಹತ್ವ?

Exit mobile version