ಬೆಂಗಳೂರು: ಅನೇಕ ವರ್ಷಗಳಿಂದ ರಾಜ್ಯ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದ್ದ ಮಾತು ʼಪಿಎಫ್ಐ ಬ್ಯಾನ್ ಮಾಡಬೇಕುʼ ಎನ್ನುವುದು. ಕೊನೆಗೂ ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದಕ್ಕೆ ಸಂಬಂಧಿಸಿದ ಸಂಘ ಸಂಸ್ಥೆಗಳನ್ನು ನಿಷೇಧ ಮಾಡಿದೆ.
ಈ ನಿಷೇಧ, ದೇಶದ ಭದ್ರತೆ, ಸಮಗ್ರತೆ ದೃಷ್ಟಿಯಿಂದ ಅತ್ಯಂತ ಮಹತ್ವದ್ದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ಕರ್ನಾಟಕದ ಮಟ್ಟಿಗಂತೂ ಈ ನಡೆಯಿಂದ ಬಿಜೆಪಿ ನಾಯಕರಿಗೆ ಪ್ರಾಣವೇ ಮರಳಿ ಬಂದಂತಹ ಅನುಭವವಾಗಿದೆ.
2018ರ ವಿಧಾನಸಭೆ ಚುನಾವಣೆ ಸಮಯದಲ್ಲೆ ಪಿಎಫ್ಐ ಬ್ಯಾನ್ ಮಾಡಬೇಕೆಂಬ ಬೇಡಿಕೆ ಇತ್ತು. ಆ ವೇಳೆಗಾಗಲಿ 20-24 ಹಿಂದು ಕಾರ್ಯಕರ್ತರ ಹತ್ಯೆಗಳಾಗಿವೆ ಎಂದು ರಾಜ್ಯ ಬಿಜೆಪಿ ಪಟ್ಟಿ ಸಿದ್ಧಮಾಡಿಕೊಂಡಿತ್ತು. ಪಿಎಫ್ಐ ಬ್ಯಾನ್ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನೂ ಬರೆಯಲಾಗಿತ್ತು. ಆದರೆ ಇದೀಗ 2023ರ ವಿಧಾನಸಭೆ ಚುನಾವಣೆ ಹತ್ತಿರವಾದರೂ ಬ್ಯಾನ್ ಮಾಡದೇ ಇರುವುದು ರಾಜ್ಯ ಬಿಜೆಪಿ ನಾಯಕರು ಕೈಕೈ ಹಿಸುಕಿಕೊಳ್ಳುವಂತೆ ಮಾಡಿತ್ತು.
ಮುಂದಿನ ಚುನಾವಣೆಗೆ ಹೋಗುವ ಮುನ್ನ ಪಿಎಫ್ಐ ಬ್ಯಾನ್ ಆಗದಿದ್ದರೆ ಮತದಾರರಿಗೆ ಮುಖ ತೋರಿಸಲು ಆಗುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಈಗಾಗಲೆ ಕರ್ನಾಟಕದಲ್ಲಿ ಬ್ರ್ಯಾಂಡ್ ಆಗಿರುವ 40% ಸರ್ಕಾರ ವಿಚಾರಕ್ಕೂ ಇದು ಕೌಂಟರ್ ಆಗುತ್ತದೆ ಎಂದು ಹೇಳಿದ್ದರು.
40% ಆರೋಪಕ್ಕೆ ಉತ್ತರವೇ ಇರಲಿಲ್ಲ
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಪಡೆಯಬೇಕೆಂದರೆ 40% ಕಮಿಷನ್ ನೀಡಬೇಕು ಎಂದು ರಾಜ್ಯ ಗುತ್ತಿಗೆದಾರರ ಸಂಘ ಕಳೆದ ವರ್ಷ ಆರೋಪ ಮಾಡಿದ್ದು ಬಿಜೆಪಿ ಸರ್ಕಾರವನ್ನು ಸುತ್ತಿಕೊಂಡಿದೆ. ಆಗಲೇ ಪ್ರಧಾನಿ ಮೋದಿವರೆಗೆ ಪತ್ರ ಬರೆದಿದ್ದ ಗುತ್ತಿಗೆದಾರರ ಸಂಘದ ಸದಸ್ಯರು ಇತ್ತೀಚೆಗೆ ಮತ್ತೆ ವಿಚಾರಗಳನ್ನು ಮುನ್ನೆಲೆಗೆ ತಂದಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ವತಿಯಿಂದ ಸದನದೊಳಗೆ, ಹೊರಗೆ 40% ಭ್ರಷ್ಟಾಚಾರವನ್ನು ಬ್ರ್ಯಾಂಡ್ ಮಾಡಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ 10% ಭ್ರಷ್ಟಾಚಾರ ಆರೋಪ ಮಾಡಿದ್ದ ಬಿಜೆಪಿ ಈ ಬಾರಿ ಅದೇ ಚಕ್ರದಲ್ಲಿ ಸಿಲುಕಿಕೊಂಡಿದೆ. ಇತ್ತೀಚೆಗಂತೂ ಕಾಂಗ್ರೆಸ್ ವತಿಯಿಂದ ಪೇ ಸಿಎಂ ಅಭಿಯಾನ ಆರಂಭಿಸಿರುವುದು ಬಿಜೆಪಿಗೆ ಚುನಾವಣೆ ಸಮಯದಲ್ಲಿ ಅಸ್ತ್ರವೇ ಇಲ್ಲದಂತಾಗಿದೆ.
ಹೇಗಾದರೂ ಮಾಡಿ ಬೇರೆ ವಿಷಯಗಳನ್ನು ಮುನ್ನೆಲೆಗೆ ತರಬೇಕೆಂಬ ಸತತ ಪ್ರಯತ್ನ ನಡೆಯುತ್ತಿದೆ. ವಿವಿಧ ಸಮುದಾಯಗಳ ಸಭೆ ನಡೆಸುವುದರ ಜತೆಗೆ ವಿಶೇಷವಾಗಿ ಹಿಂದುಳಿದ ವರ್ಗಗಳನ್ನು ಸೆಳೆಯಲು ಕೆಲ ಪ್ರಯತ್ನ ನಡೆಸಲಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಹಿಂದೆಂದಿಗಿಂತಲೂ ಹೆಚ್ಚು ಅಗ್ರೆಸಿವ್ ಆಗಿ ಸಿದ್ದರಾಮಯ್ಯ ಹಾಗೂ ಇನ್ನಿತರರ ವಿರುದ್ಧ ಹರಿಹಾಯುತ್ತಿದ್ದಾರೆ. ತಮ್ಮ ಸರ್ಕಾರ ಕನ್ನಡದ ಪರ ಎಂಬುದನ್ನು ತೋರಿಸಿಕೊಡಲೂ ಪ್ರಯತ್ನ ಮುಂದುವರಿಸಿದೆ. ಈ ಎಲ್ಲ ಪ್ರಯತ್ನಗಳೂ ತಕ್ಕಮಟ್ಟಿಗೆ ಫಲ ನೀಡುತ್ತಿವೆಯಾದರೂ 40% ಆರೋಪದ ಹೈ ಡೆಸಿಬಲ್ ಪ್ರಚಾರದೆದುರು ಜನರ ಮನಸ್ಸಿಗೆ ನಾಟುತ್ತಿಲ್ಲ.
ಸರ್ಕಾರದಿಂದ ಅನೇಕ ಯೋಜನೆಗಳನ್ನು ರೂಪಿಸಲಾಗಿದೆಯಾದರೂ ಜನರ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಅದನ್ನು ಪ್ರಚಾರ ಮಾಡುವಲ್ಲಿ ಸರ್ಕಾರ ಹಿಂದೆ ಬಿದ್ದಿದೆ. ಕಾಂಗ್ರೆಸ್ನ 40% ಆರೋಪಕ್ಕೆ ವಿರುದ್ಧವಾಗಿ ಅಸ್ತ್ರವೇ ಇಲ್ಲದೆ ಸುಮ್ಮನಾಗಿದ್ದ ಬಿಜೆಪಿ ನಾಯಕರಿಗೆ ಪಿಎಫ್ಐ ಬ್ಯಾನ್ ಹೊಸ ಚೈತನ್ಯ ನೀಡಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಿಎಫ್ಐ ಮೇಲಿನ ಪ್ರಕರಣಗಳನ್ನು ಹಿಂಪಡೆದಿತ್ತು. ದೇಶದ ಭದ್ರತೆ ಕುರಿತು ಕಾಂಗ್ರೆಸ್ಗೆ ಕಾಳಜಿಯಿಲ್ಲ, ಆದರೆ ಬಿಜೆಪಿ ನುಡಿದಂತೆ ನಡೆದಿದೆ ಎಂದು ಈಗಾಗಲೆ ಹೇಳಲಾಗುತ್ತಿದೆ. ಈ ಮೂಲಕವಾದರೂ ತಮ್ಮ ಸಮರ್ಥನೆಗೆ ಒಂದು ಅಂಶ ಸಿಕ್ಕಿತು ಎಂಬ ಸಂತೋಷದಲ್ಲಿ ಬಿಜೆಪಿ ನಾಯಕರಿದ್ದಾರೆ.
ಇದನ್ನೂ ಓದಿ | PFI Banned | ಮುಸ್ಲಿಂ ಸಂಘಟನೆಗಳ ಜತೆ ಚರ್ಚೆ ಬಳಿಕವೇ ಪಿಎಫ್ಐ ಬ್ಯಾನ್, ಇದು ಮೋದಿ ಮಾಸ್ಟರ್ಪ್ಲ್ಯಾನ್