ಶಿವಮೊಗ್ಗ: ನಗರದ ಶಿವಪ್ಪ ನಾಯಕ ಸಿಟಿ ಸೆಂಟ್ರಲ್ ಮಾಲ್ನಲ್ಲಿನ ಸ್ವಾತಂತ್ರ್ಯ ಯೋಧರ ಭಾವಚಿತ್ರ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಂ.ಡಿ.ಶರೀಫ್ ಎಂಬಾತನನ್ನು ಬಂಧಿಸಿದ್ದಾರೆ. ಟಿಪ್ಪು ನಗರ ನಿವಾಸಿಯಾಗಿರುವ ಈತ ಕನ್ನಡಿಗರ ರಕ್ಷಣಾ ವೇದಿಕೆ ಅಧ್ಯಕ್ಷ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದ್ದು, ವಶಕ್ಕೆ ಪಡೆದವರನ್ನು ಪೊಲೀಸರು ಶನಿವಾರ ರಾತ್ರಿ ತುಂಗಾ ನಗರ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ಸುದ್ದಿ ತಿಳಿದು ರಾತ್ರಿ ತುಂಗಾನಗರ ಠಾಣೆ ಎದುರು ದೊಡ್ಡ ಸಂಖ್ಯೆ ಯಲ್ಲಿ ಮುಸ್ಲಿಮರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಎಂ.ಡಿ.ಶರೀಫ್ ಸಹಿತ ಒಟ್ಟು ನಾಲ್ಕು ಮಂದಿಯನ್ನು ತುಂಗಾನಗರ ಠಾಣೆಗೆ ಕರೆತಂದಿದ್ದರಿಂದ ತುಂಗಾ ನಗರ ಪೊಲೀಸ್ ಠಾಣೆ ಮುಂಭಾಗ ನೂರಾರು ಜನರು ಜಮಾಯಿಸಿದ್ದರು. ನಂತರ ಪೊಲೀಸರು ವಿಚಾರಣೆಗೆ ಕರೆತಂದವರಿಂದಲೇ ಜನರನ್ನು ತೆರಳುವಂತೆ ಹೇಳಿಸಿದ್ದರಿಂದ ಪರಿಸ್ಥಿತಿ ತಿಳಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಡಿ.ಶರೀಫ್ ಎಂಬಾತನನ್ನು ಪೊಲೀಸರು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಏನಿದು ಪ್ರಕರಣ?
ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಸರ್ಕಾರದ ಆದೇಶದಂತೆ ಮಹಾನಗರ ಪಾಲಿಕೆ ಜನನಿಬಿಡ ಪ್ರದೇಶವಾದ ಶಿವಪ್ಪ ನಾಯಕ ಮಾಲ್ನಲ್ಲಿ ಸ್ವಾತಂತ್ರ್ಯ ಯೋಧರ ಫೋಟೊ ಮತ್ತು ಸಾಕ್ಷ್ಯಚಿತ್ರ ತೋರಿಸುವ ವ್ಯವಸ್ಥೆ ಮಾಡಲಾಗಿತ್ತು. ಮಾಲ್ ಗೆ ಬಂದಿದ್ದ ಎಸ್ ಡಿಪಿ ಐ ಕಾರ್ಯಕರ್ತರು ಎನ್ನಲಾದ ಕೆಲ ಯುವಕರು ವೀರ ಸಾವರ್ಕರ್ ಫೋಟೊ ಅಳವಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅದನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದರು. ಜತೆಗೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಫೋಟೊ ಅಳವಡಿಸುವಂತೆ ಒತ್ತಾಯಿಸಿ ತೆರಳಿದ್ದರು. ಈ ಸುದ್ದಿ ತಿಳಿದು ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ, ಮಾಲ್ ಗೆ ಬಂದಿದ್ದ ಜನರನ್ನು ಹೊರಗೆ ಕಳಿಸಿ, ಮಾಲ್ ಬಂದ್ ಮಾಡಿಸಿ ಪ್ರವೇಶದ್ವಾರದ ಮುಂದೆ ಪ್ರತಿಭಟನೆ ನಡೆಸಿದರು. ದೇಶದ್ರೋಹಿಗಳ ವಿರುದ್ಧ ಕ್ರಮವಾಗಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ಮೇಯರ್ ಸುನೀತಾ ಅಣ್ಣಪ್ಪ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದವರ ವಿರುದ್ಧ ದೂರು ದಾಖಲಾಗಿದೆ ಎಂದು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರಲ್ಲದೆ, ಡಿವೈಎಸ್ಪಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ತಪ್ಪಿತಸ್ಥರನ್ನು ಬಂಧಿಸಲಾಗುವುದು ಎಂದು ಹೇಳಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರಕರಣಕ್ಕೆ ಸಂಬಂಧಿಸಿ ದೊಡ್ಡಪೇಟೆ ಪೊಲೀಸರು ತುಂಗಾನಗರ ಠಾಣೆಯಲ್ಲಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಹಿನ್ನೆಲೆ ತುಂಗಾನಗರ ಠಾಣೆಯಲ್ಲಿ ಶನಿವಾರ ರಾತ್ರಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಮರು ಜಮಾಯಿಸಿದ್ದರು. ತಪ್ಪು ಮಾಡದವರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಪೊಲೀಸರು ಒಬ್ಬನನ್ನು ಮಾತ್ರ ವಶಕ್ಕೆ ಪಡೆದಿದ್ದೇವೆ ಎಂದು ಹೇಳಿದರೂ ಜನರು ಕದಲಲಿಲ್ಲ. ಕೊನೆಗೆ ವಶಕ್ಕೆ ಪಡೆದಿದ್ದ ಎಂ.ಡಿ.ಶರೀಫ್ ಎಂಬಾತನಿಂದಲೇ ಜನರನ್ನು ವಾಪಸ್ಸಾಗುವಂತೆ ಹೇಳಿಸುವಲ್ಲಿ ಪೊಲೀಸರು ಯಶಸ್ವಿಯಾದ ನಂತರ ಪರಿಸ್ಥಿತಿ ತಿಳಿಯಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರು ಎಂ.ಡಿ.ಶರೀಫ್ ಎಂಬಾತನನ್ನು ಬಂಧಿಸಿ, ಕಾನೂನು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ| ಟಿಪ್ಪು ಬ್ಯಾನರ್‌ಗಳಿಗೆ ಹಾನಿ ಪುನೀತ್ ಕೆರೆಹಳ್ಳಿ ಟೀಮ್ ಕೃತ್ಯ, ಶಿವಮೊಗ್ಗದಲ್ಲಿ ಸಾವರ್ಕರ್ ವಿರೋಧಿಸಿದ್ದಕ್ಕೆ ಪ್ರತೀಕಾರ