Site icon Vistara News

ದೇವೇಗೌಡರನ್ನು ಭೇಟಿಯಾಗಿ ಕ್ಷಮೆ ಯಾಚಿಸುವೆ, ಆದರೆ ಬೆದರಿಕೆಗೆ ಜಗ್ಗುವುದಿಲ್ಲ: ಕೆ.ಎನ್‌. ರಾಜಣ್ಣ

KN Rajanna pressmeet

ತುಮಕೂರು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುರಿತು ಆಡಿದ ಮಾತು ವಿವಾದವಾಗುತ್ತಿರುವುದನ್ನು ಗಮನಿಸಿದ ಮಧುಗಿರಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ನಾಯಕ ಕೆ.ಎನ್‌. ರಾಜಣ್ಣ ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ. ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಆದರೂ ಈ ಬಗ್ಗೆ ನಾನು ವಾದ ಮಾಡಲು ಹೋಗುವುದಿಲ್ಲ. ಖುದ್ದಾಗಿ ಎಚ್‌.ಡಿ. ದೇವೇಗೌಡರನ್ನು ಭೇಟಿ ಮಾಡಿ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

ಮಧುಗಿರಿ ತಾಲೂಕಿನ ಕಾವಣದಾಲ ಎಂಬಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶುಕ್ರವಾರ ಬೆಳಗ್ಗೆ ಮಾತನಾಡಿದ್ದ ರಾಜಣ್ಣ, ನನಗೆ ಆಗಲೇ 72 ವರ್ಷ. ಈ ಬಾರಿ ಚುನಾವಣೆ ಗೆದ್ದ ಅವಧಿ ಮುಗಿಯುವ ವೇಳೆಗೆ 77 ವರ್ಷ ಆಗಿ, ಕೈಕಾಲು ಅಲ್ಲಾಡುತ್ತಿರುತ್ತವೆ ಎಂದರು. ಈ ಸಮಯದಲ್ಲಿ ಹತ್ತಿರ ಇದ್ದ ಕಾರ್ಯಕರ್ತರು, ದೇವೇಗೌಡರು ಇನ್ನೂ ರಾಜಕಾರಣ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ದೇವೇಗೌಡರು ಈಗಲೇ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ. ಸದ್ಯದಲ್ಲೆ ನಾಲ್ವರ ಮೇಲೆ ಹೋಗುತ್ತಾರೆ ಎಂದು ಮಾತನಾಡಿದ್ದರು. ದೇವೇಗೌಡರು ಯಾವ ರೀತಿ ಪಕ್ಕದಲ್ಲಿದ್ದವರ ಹೆಗಲ ಮೇಲೆ ಕೈ ಇಟ್ಟು ನಡೆಯುತ್ತಾರೆ ಎನ್ನುವುದನ್ನು ಕೈಸನ್ನೆ ಮಾಡಿ ತೋರಿಸಿದ್ದರು. ರಾಜಕೀಯ, ತತ್ವ ಸಿದ್ಧಾಂತ ಭಿನ್ನತೆ ಏನೇ ಇದ್ದರೂ ಪರಸ್ಪರರ ವಿರುದ್ಧ ಗೌರವಯುತವಾಗಿ ನಡೆದುಕೊಳ್ಳುವ ಬದಲು ಈ ರೀತಿ ಮಾತನಾಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು.

ಈ ಕುರಿತು ಜೆಡಿಎಸ್‌ ಜನಪ್ರತಿನಿಧಿಗಳು ಸೇರಿ ಅನೇಕರು ಪ್ರತಿಕ್ರಿಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, ದೇವೇಗೌಡರ ಬಗ್ಗೆ ವಿಕೃತವಾಗಿ ಮಾತನಾಡಿರುವ ರಾಜಣ್ಣ ತನ್ನ ಹೀನ ಸಂಸ್ಕೃತಿಯನ್ನು ಪ್ರದರ್ಶನ ಮಾಡಿದ್ದಾರೆ. ಈ ದುರಹಂಕಾರದ ಮಾತುಗಳಿಗೆ ಅವರು ತಕ್ಕ ಶಾಸ್ತಿ ಅನುಭವಿಸಲಿದ್ದಾರೆ. 2004ರಲ್ಲಿ ರಾಜಣ್ಣ ಅವರು ಬೆಳ್ಳಾವಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಚುನಾವಣೆಯ ಕೊನೆಯ ದಿನ ದೇವೇಗೌಡರು ಹೋಗಿ ಪ್ರಚಾರ ಮಾಡಿದ್ದರು. ಆಗ ಆ ವ್ಯಕ್ತಿ ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಾಯಿತು. ಇಲ್ಲದಿದ್ದರೆ ಅವರನ್ನು ಯಾರು ಕೇಳುತ್ತಿದ್ದರು? ದೇವರ ಮೆರವಣಿಗೆಗೂ ಭುಜ ಕೊಡುತ್ತೇವೆ. ಭುಜ ಕೊಟ್ಟೇ ಮೆರವಣಿಗೆ ಮಾಡೋದಲ್ಲವೇ? ದೇವೇಗೌಡರು ಕೂಡ ಹಾಗೆಯೇ, ನಮ್ಮ ಪಾಲಿಗೆ ಅವರು ದೈವವೇ ಎಂದು ತಿಳಿಸಿದ್ದರು.

ಈ ಕುರಿತು ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ್ದ ಎಚ್‌.ಡಿ. ದೇವೇಗೌಡರ ಮೊಮ್ಮಗ ಹಾಗೂ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ, ಇವರು ಜನಪ್ರತಿನಿಧಿಯಾಗಲು ಲಾಯಕ್ಕಿಲ್ಲ ಎಂದು ಮಧುಗಿರಿ ಜನರು ಮನೆಗೆ ಕಳಿಸಿದ್ದಾರೆ. ಲೆಕ್ಕಿಕ್ಕಿಲ್ಲದವರ ಬಗ್ಗೆ ನಾನು ಏಕೆ ಪ್ರತಿಕ್ರಿಯೆ ಕೊಡಬೇಕು? ದೊಡ್ಡ ದಂಧೆಕೋರ ಅವನು. ದೇವೇಗೌಡರ ಕಾಲಿನ ಧೂಳಿಗೂ ಸಮಾನ ಅಲ್ಲ ಅವನು. ನೀಚಬಾಯಲ್ಲಿ ನೀಚಪದ ಬಂದಿದೆ, ದೇವರು ಉತ್ತರ ಕೊಡುತ್ತಾರೆ. ಅವನು ಜನಪ್ರತಿನಿಧಿಯಲ್ಲ, ಸೋತು ಮನೆಗೆ ಕೂತುಕೊಂಡಿದ್ದಾನೆ. ಹೀಗೆಯೇ ಮಾತನಾಡುತ್ತಿದ್ದರೆ ಹುಚ್ಚು ಸಂತೆಯಲ್ಲಿ ನಾಯಿಗೆ ಹೊಡೆದ ರೀತಿ ಹೊಡೆಯುತ್ತಾರೆ ಎಂದು ಕಿಡಿಕಾರಿದ್ದರು.

ಜೆಡಿಎಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಪ್ರತಿಕ್ರಿಯಿಸಿ, ದೇಶದ ಸಾಕ್ಷಿ ಪ್ರಜ್ಞೆ, ಕನ್ನಡ ನಾಡಿನ ದಿಗ್ಗಜ ಚೇತನ ಮಾಜಿ ಪ್ರಧಾನಿ ದೇವೇಗೌಡರ ಆಯುಷ್ಯದ ಬಗ್ಗೆ ಕಾಂಗ್ರೆಸ್ ನಾಯಕ ರಾಜಣ್ಣ ಅವರು ಆಡಿರುವ ಹೀನಾಯ ಮಾತುಗಳು, ರಾಜಣ್ಣ ಅವರ ನೀಚ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದು ಹೇಳಿದ್ದರು.

ರಾಜ್ಯ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ರಾಜಣ್ಣ ಹೇಳಿಕೆ ಸರಿಯಲ್ಲ. ರಾಜಕಾರಣ ಬೇರೆ, ಆದರೆ ಆ ರೀತಿಯಲ್ಲಿ ಮಾತಾಡಬಾರದು. ರಾಜಣ್ಣ ನನ್ನ ಸ್ನೇಹಿತ. ಆದರೂ ಹಿರಿಯರ ಬಗ್ಗೆ ಈ ರೀತಿ ಮಾತಾಡುವುದು ಸರಿಯಲ್ಲ ಎಂದಿದ್ದರು.

ಕೆ.ಎನ್.ರಾಜಣ್ಣ ಅವರು ನೀಡಿರುವ ಹೇಳಿಕೆ ಖಂಡನೀಯ ಎಂದು ಸಂಸದ ಡಿ.ಕೆ. ಸುರೇಶ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನವ ದೆಹಲಿಯಲ್ಲಿ ಖಂಡಿಸಿದ್ದರು.

ದೆಹಲಿಯಿಂದ ವಿಡಿಯೋ ಸಂದೇಶದ ಮೂಲಕ ಪ್ರತಿಕ್ರಿಯೆ ನೀಡಿದ್ದ ಶಿವಕುಮಾರ್‌, ನಮ್ಮ ಪಕ್ಷದ ನಾಯಕರಾದ ರಾಜಣ್ಣ ಅವರು ಹಿರಿಯ ನಾಯಕ ದೇವೇಗೌಡರ ಪರಿಸ್ಥಿತಿ ಬಗ್ಗೆ ಆಡಿರುವ ಮಾತನ್ನು ಇಡೀ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಪಕ್ಷದ ನಾಯಕನಾಗಿ, ವ್ಯಯಕ್ತಿಕವಾಗಿಯೂ ಇದನ್ನು ಖಂಡಿಸುತ್ತೇನೆ. ಯಾರೇ ನಾಯಕರು ಮಾನವೀಯತೆಯನ್ನು ಮೆರೆಯಬೇಕು. ಸಮಾಜ ಹಾಗೂ ದೇಶಕ್ಕೆ ಸೇವೆ ಮಾಡಿರುವ ಹಿರಿಯ ನಾಯಕರಾದ ದೇವೇಗೌಡರ ಬಗ್ಗೆ ಇಂತಹ ಹೇಳಿಕೆ ನೀಡಿದ್ದು ಸರಿಯಲ್ಲ. ದೇವೇಗೌಡರು ಪ್ರಧಾನಿಯಾಗಲು ಹಿಂದೆ ಕಾಂಗ್ರೆಸ್ ಪಕ್ಷವೇ ಬೆಂಬಲ ನೀಡಿತ್ತು ಎಂದು ಹೇಳಿದ್ದರು.

ಡಿ.ಕೆ. ಸುರೇಶ್‌ ಪ್ರತಿಕ್ರಿಯಿಸಿ, ದೇವೇಗೌಡರ ಹಿರಿತನಕ್ಕೆ ನಾವೆಲ್ಲರೂ ತಲೆಬಾಗಬೇಕು. ಸಮಾಜದ ಹಿರಿಯರ ಬಗ್ಗೆ ಇಂತಹ ಹಗುರ ಹೇಳಿಕೆ ನೀಡಿರುವುದು ರಾಜಣ್ಣ ಅವರ ಘನತೆಗೆ ಸೂಕ್ತವಲ್ಲ. ರಾಜಣ್ಣ ಅವರು ಕೂಡಲೇ ಕ್ಷಮೆ ಕೋರಬೇಕು. ಇದು ಅವರ ವೈಯಕ್ತಿಕ ಹೇಳಿಕೆಯಾದರೂ, ಅವರು ಕ್ಷಮೆ ಕೋರಬೇಕು. ಇಲ್ಲದಿದ್ದರೆ ಸಮಾಜ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು.

ಪತ್ರಿಕಾಗೋಷ್ಠಿ ನಡೆಸಿದ ರಾಜಣ್ಣ

ನಾನು ಉದ್ದೇಶಪೂರ್ವಕವಾಗಿ ದೇವೇಗೌಡರ ಕುರಿತು ಮಾತನಾಡಿಲ್ಲ ಎಂದು ರಾಜಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು. ದೇವೇಗೌಡರಿಗೂ ವಯಸ್ಸಾಗಿದೆ, ಅವರೇ ರಾಜಕಾರಣ ಮಾಡುತ್ತಿಲ್ಲವೇ ಎಂದು ಕಾರ್ಯಕರ್ತ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ್ದೆ. ನನಗೂ ವಯಸ್ಸಾಗಿದೆ ಎಂದೂ ಹೇಳಿದ್ದೇನೆ. ನಾನು ಅವರ ಸಾವನ್ನು ಬಯಸಿದವನಲ್ಲ, ಬಯಸುವವನಲ್ಲ. ಅವರಿಂದ ದೇಶ, ರಾಜ್ಯಕ್ಕೆ ಆಗಿರುವ ಕೊಡುಗೆ ಮರೆತಿಲ್ಲ. ನನ್ನನ್ನು 2004ರಲ್ಲಿ ಶಾಸಕರಾಗಿಸಿದ್ದರು ಎಂಬ ಉಪಕಾರಸ್ಮರಣೆ ಇದೆ ಎಂದಿದ್ದರು.

ಟಾರ್ಗೆಟ್‌ ಮಾಡಿ ದೇವೇಗೌಡರ ವಿರುದ್ಧ ಮಾತನಾಡಿದ್ದಾರೆ ಎಂಬ ಜೆಡಿಎಸ್‌ ನಾಯಕರ ಪ್ರತಿಕ್ರಿಯೆಗೆ ಉತ್ತರಿಸಿದ ರಾಜಣ್ಣ, ಕುಮಾರಸ್ವಾಮಿ ಅವರು ದಿನಬೆಳಗಾದರೆ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್‌ ಮಾಡುತ್ತಾರೆ. ತುಮಕೂರಿನಲ್ಲೂ ಜೆಡಿಎಸ್‌ ಮುಖಂಡರು ನನ್ನನ್ನು ಟಾರ್ಗೆಟ್‌ ಮಾಡುತ್ತಾರೆ. ರಾಜಕೀಯವಾಗಿ ಚುನಾವಣೆ ಎದುರಿಸೋಣ, ಜನರ ತೀರ್ಮಾನವನ್ನು ಒಪ್ಪಿಕೊಳ್ಳೋಣ. ಯಾವುದೇ ಪಿತೂರಿಗೂ ಹೆದರುವುದಿಲ್ಲ. ಜನರ ಆಶೀರ್ವಾದ ಇರುವವರೆಗೆ ಪಿತೂರಿ ನಡೆಯುವುದಿಲ್ಲ. ಇದನ್ನೆಲ್ಲ ಚುನಾವಣೆ ಸಮಯದಲ್ಲಿ ಮತ್ತೆ ಹಾಕುತ್ತಾರೆ ಎಂದರು.

ಜೆಡಿಎಸ್‌ನವರು ನನ್ನ ವಿರುದ್ಧ ಪ್ರತಿಭಟನೆ ಮಾಡಿ ಐನೂರು ಜನ ಸೇರಿಸಿದರೆ ನಾನು ಐದು ಸಾವಿರ ಜನರನ್ನು ಸೇರಿಸುತ್ತೇನೆ. ಆದರೆ ಅಂತಹ ಸ್ಪರ್ಧೆ ಈಗ ಬೇಡ. ಖುದ್ದಾಗಿ ಭೇಟಿ ಮಾಡಿ ಕ್ಷಮೆ ಯಾಚಿಸುತ್ತೇನೆ ಎಂದರು. ಒಕ್ಕಲಿಗರು ಏನೆಂದು ತೋರಿಸುತ್ತೇವೆ ಎಂಬ ಜೆಡಿಎಸ್‌ ನಾಯಕರ ಸವಾಲಿಗೆ ಉತ್ತರಿಸಿದ ರಾಜಣ್ಣ, ಯಾರೂ ಒಂದೇ ಸಮುದಾಯದಿಂದ ಗೆಲ್ಲಲು ಆಗುವುದಿಲ್ಲ. ಎಲ್ಲ ಜಾತಿಯ ಮತದಾರರ ವಿಶ್ವಾಸ ಇಟ್ಟುಕೊಂಡವರು ಮಾತ್ರ ಗೆಲ್ಲಲು ಸಾಧ್ಯ. ನನಗೂ ಕೆಲವರು ಫೋನ್‌ ಮಾಡಿ ಬೆದರಿಕೆ ಹಾಕಿದರು. ಅಂಥದ್ದಕ್ಕೆಲ್ಲ ಹೆದರುವುದಿಲ್ಲ. ಪೊಲೀಸರಿಗೆ ದೂರನ್ನೂ ನೀಡುವುದಿಲ್ಲ ಎಂದರು.

ಇದನ್ನೂ ಓದಿ | ಕೆ.ಎನ್‌. ರಾಜಣ್ಣ ಮಾತಿಗೆ ತಿರುಗಿಬಿದ್ದ ಜೆಡಿಎಸ್‌ ನಾಯಕರು

Exit mobile version