ವಿಧಾನಸಭೆ: ಶಿಕ್ಷಣ ಇಲಾಖೆಯ ಶಿಕ್ಷಕರ ವರ್ಗಾವಣೆ ಕುರಿತಂತೆ ʼಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆʼಗೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆತಿದ್ದು, ದಂಪತಿ ವರ್ಗಾವಣೆ ಸೇರಿ ಅನೇಕ ವಿಚಾರಗಳಲ್ಲಿ ಶಿಕ್ಷಕರಿಗೆ ಅನುಕೂಲವಾಗುವ ಸಾಧ್ಯತೆಯಿದೆ.
ವಿಧಾನಸಭೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಸೂದೆಯನ್ನು ಮಂಡಿಸಿದರು. ಇದಕ್ಕೆ ಧ್ವನಿಮತದ ಮೂಲಕ ಒಪ್ಪಿಗೆ ನೀಡಲಾಯಿತು.
ಒಂದೇ ವಿಷಯದ ಶಿಕ್ಷಕರು ಪರಸ್ಪರ ವರ್ಗಾವಣೆಗೆ ಈ ವಿಧೇಯಕದ ಮೂಲಕ ಅವಕಾಶ ಮಾಡಿಕೊಡಲಾಗಿದೆ. ಶಿಕ್ಷಕರು ಅಥವಾ ಉಪನ್ಯಾಸಕರು ಕನಿಷ್ಠ ಸೇವಾ ಅವಧಿಯನ್ನು ಮುಕ್ತಾಯಗೊಳಿಸಿದ್ದರೂ ಅವರನ್ನು ಮರುನಿಯೋಜನೆ ಮಾಡಲಾಗಿದ್ದಲ್ಲಿ ಶಾಲೆ ಅಥವಾ ಪದವಿಪೂರ್ವ ಕಾಲೇಜಿನಲ್ಲಿ ಸಲ್ಲಿಸಿದ ನಿರಂತರ ಮೂರು ವರ್ಷಗಳ ಸೇವೆ ಪರಿಗಣಿಸಿ ಕೌನ್ಸಲಿಂಗ್ ಮಾನದಂಡಗಳ ಅನುಸಾರವಾಗಿ ಆದ್ಯತಾ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಇದಕ್ಕೆ ಶಿಕ್ಷಕ ಪಡೆದ ಕೃಪಾಂಕವನ್ನು ಪರಿಗಣಿಸಲಾಗುತ್ತದೆ.
ಹುದ್ದೆಗಳ ಪರೀಕ್ಷೆಯಲ್ಲಿ ಪಡೆದ ಅಂಕಗಳ ಅನುಸಾರವಾಗಿ ಸಿದ್ಧಪಡಿಸಿದ ಮೆರಿಟ್ ಪಟ್ಟಿ ಮೂಲಕವೂ ಆಯ್ಕೆ ಮಾಡಲಾಗುವುದು. ಹಲವು ಪ್ರಮುಖ ಅಂಶಗಳನ್ನೊಳಗೊಂಡ ತಿದ್ದುಪಡಿಯನ್ನು ಈ ವಿಧೇಯಕದಲ್ಲಿ ಮಾಡಲಾಗಿದೆ.
ತಾಲೂಕಿನ ವ್ಯಾಪ್ತಿಯಲ್ಲಿ ಶೇ. 25 ಖಾಲಿ ಹುದ್ದೆ ಇದ್ದರೂ, ಹತ್ತು ವರ್ಷ ಒಂದೇ ವೃಂದದಲ್ಲಿ, ಹದಿನೈದು ವರ್ಷ ವಿವಿಧ ವೃಂದದಲ್ಲಿ ಸೇವೆ ಸಲ್ಲಿಸಿದವರಿಗೆ ವರ್ಗಾವಣೆಗೆ ಅವಕಾಶ ನೀಡಲಾಗಿದೆ. ಪರಸ್ಪರ ವರ್ಗಾವಣೆಗೆ ಒಟ್ಟು ಸೇವಾವಧಿ ಐದು ವರ್ಷ, ಪ್ರಸ್ತುತ ಶಾಲೆಯಲ್ಲಿ ಕನಿಷ್ಠ ಸೇವೆ ಮೂರು ವರ್ಷ ಪೂರ್ಣ ಆಗಿರಬೇಕು ಎಂದು ತಿಳಿಸಲಾಗಿದೆ.
ದಂಪತಿ ವರ್ಗಾವಣೆ ಪ್ರಕರಣವನ್ನು ಜಿಲ್ಲೆಗೆ ವಿಸ್ತರಣೆ ಮಾಡಲಾಗಿದೆ, ಮಲೆನಾಡು ಪ್ರದೇಶ, ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ವರ್ಗಾವಣೆ ಶೇಕಡಾ ಅಧ್ಯತೆ ಒಳಪಡುವುದಿಲ್ಲ ಎಂದು ತಿಳಿಸಲಾಗಿದೆ.
ವಿಧೇಯಕವನ್ನು ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಮಂಡಿಸಿ ಒಪ್ಪಿಗೆ ಪಡೆಯುವ ಸಾಧ್ಯತೆಯಿದೆ. ನಂತರ ರಾಜ್ಯಪಾಲರ ಅಂಕಿತದೊಂದಿಗೆ ಕಾಯ್ದೆಯಾಗಿ ರೂಪುಗೊಳ್ಳಲಿದೆ.
ಇದನ್ನೂ ಓದಿ | ಮೂಲ ಜಿಲ್ಲೆಗೆ ವರ್ಗಾವಣೆ ಮಾಡಿ ಎಂದು ಕೈಮುಗಿದು ಕಣ್ಣೀರಿಟ್ಟ ಸರ್ಕಾರಿ ಶಿಕ್ಷಕರು!