ವಿಜಯಪುರ: ಶ್ರೀ ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರವನ್ನು ವಿಜಯಪುರ ಸೈನಿಕ ಶಾಲೆ ಆವರಣಕ್ಕೆ ತರಲಾಗಿದ್ದು, ವಿಜಯಪುರ ಜಿಲ್ಲಾಡಳಿತ ವತಿಯಿಂದ ಅವರ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ನಡೆದಿದೆ.
ಸೈನಿಕ ಶಾಲೆಯ ಆವರಣಕ್ಕೆ ಶ್ರೀಗಳ ಪಾರ್ಥಿವ ಶರೀರ ತಲುಪಿದ ಬಳಿಕ ಮಂಗಳಾರತಿ ಮಾಡಲಾಯಿತು. ಕೊಲ್ಲಾಪುರದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಂಗಳಾರತಿ ನಡೆಯಿತು. ನೂರಾರು ಸ್ವಾಮೀಜಿಗಳು, ರಾಜಕೀಯ ನಾಯಕರು, ಅಧಿಕಾರಿಗಳು, ಭಕ್ತರು ಭಾಗಿಯಾದರು.
ಆಶ್ರಮದ ಮಂಟಪದಿಂದ ಹೊರಟ ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರ ಹೊತ್ತ ವಾಹನವನ್ನು ರಸ್ತೆ ಅಕ್ಕ ಪಕ್ಕ ನಿಂತ ನೂರಾರು ಭಕ್ತರು ಎದುಗೊಂಡರಲ್ಲದೆ, ಶಿವಾಯ ನಮಃ ಮಂತ್ರ ಪಠಿಸಿದರು. ಹೂಗಳಿಂದ ಅಲಂಕರಿಸಿದ ವಾಹನದ ಮೂಲಕ ಗಾಂಧಿ ಚೌಕ ಮಾರ್ಗವಾಗಿ ಸೈನಿಕ ಶಾಲೆಗೆ ಸ್ಥಳಾಂತರಿಸಲಾಯಿತು. ಶ್ರೀಗಳ ಪಾರ್ಥಿವ ಶರೀರ ಹೊತ್ತ ವಾಹನ ಮುಂಭಾಗದಲ್ಲಿ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್ ನಡೆದರು.
ಇದನ್ನೂ ಓದಿ | Siddheshwar Swamiji | ಓದು, ಬರಹ, ಅಧ್ಯಯನ, ಪ್ರವಚನವೇ ಸಿದ್ದೇಶ್ವರ ಶ್ರೀಗಳ ಜೀವನಶಕ್ತಿ
ಶ್ರೀಗಳ ಕುರಿತಾಗಿ ಕೆಪಿಸಿಸಿ ಪ್ರಚಾರ ಸಮೀತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭಾವುಕ ಪ್ರತಿಕ್ರಿಯೆ ನೀಡಿದ್ದು, ಸೈನಿಕ ಶಾಲೆಯಲ್ಲೇ ಇಬ್ಬರೂ ಮುಖಂಡರು ಬೀಡು ಬಿಟ್ಟಿದ್ದಾರೆ. ಜಿ.ಪಂ ಸಿಈಓ ರಾಹುಲ್ ಶಿಂಧೆ ಸೇರಿದಂತೆ ಇಡೀ ಜಿಲ್ಲಾಡಳಿತವೇ ಸೈನಿಕ ಶಾಲೆಯಲ್ಲಿ ಬೀಡು ಬಿಟ್ಟಿದ್ದು, ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಲಕ್ಷ ಲಕ್ಷಗಳ ಸಂಖ್ಯೆಯಲ್ಲಿ ಭಕ್ತಗಣ ಹರಿದು ಬರುವ ಸಾಧ್ಯತೆಯಿದೆ. ಭಕ್ತರು ಸಂಯಮದಿಂದ ವರ್ತಿಸುವಂತೆ ವಿನಂತಿ ಮಾಡಲಾಗಿದ್ದು, ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿದೆ. ಬೆಳಿಗ್ಗೆ 5.30ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸೈನಿಕ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಸಾಗರೋಪಾದಿಯಲ್ಲಿ ವಿಜಯಪುರ ಸೈನಿಕ ಶಾಲೆಯತ್ತ ಸಿದ್ದೇಶ್ವರ ಶ್ರೀಗಳ ಭಕ್ತರು ಧಾವಿಸುತ್ತಿದ್ದು, ರಾಜಕೀಯ ನಾಯಕರು, ಹಲವು ಮಠಾಧೀಶರು,ಸೇರಿ ೨೦ ಲಕ್ಷ ಜನರಿಂದ ಅಂತಿಮ ದರ್ಶನ ನಿರೀಕ್ಷೆಯಿದೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಸಿದ್ದೇಶ್ವರ ಶ್ರೀಗಳು ಪ್ರವಚನ ಮೂಲಕ ನಮ್ಮೊಂದಿಗೆ ಸದಾ ಇರಲಿದ್ದಾರೆ