Site icon Vistara News

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳ ನಿವಾರಣೆಗೆ ‘ಕೃಷಿ ಸುಣ್ಣ’ ರಾಮಬಾಣ!

soil

soil

| ಅರವಿಂದ ಸಿಗದಾಳ್, ಮೇಲುಕೊಪ್ಪ
ಬಿಸಿಲಿನ ಕಾವಿಗೆ ಲಿಂಬೆ ರಸ, ಬೆಲ್ಲ ಬೆರೆಸಿದ ಪಾನಕ ಕುಡಿದರೆ ಕುಡಿಯುತ್ತಾ ಇರೋಣ ಅನಿಸುತ್ತೆ. ಲಿಂಬೆ-ಬೆಲ್ಲದ ಪಾನಕವನ್ನು ಎಷ್ಟು ಕುಡಿದರೂ ಏನೂ ಆಗುವುದಿಲ್ಲ. ಮತ್ತೆರಡು ಬಾರಿ ನೇಚರ್ ಕಾಲ್‌ಗೆ ಹೋಗಬೇಕಾಗಬಹುದು ಅಷ್ಟೆ! ಅಷ್ಟು ಪಾನಕ ಕುಡಿದರೂ ಏನೂ ಆಗದೇ ಇರುವುದಕ್ಕೆ ಒಂದು ಮುಖ್ಯ ಕಾರಣ ಪಾನಕದಲ್ಲಿ ಬಳಸಿದ ಬೆಲ್ಲದಲ್ಲಿರುವ ಸುಣ್ಣದ ಅಂಶ! ಯಾವಾಗಲೂ ಗ್ಯಾಸ್ಟ್ರಿಕ್‌ ಸಮಸ್ಯೆ ಇದ್ರೆ, ಜೆಲುಸಿಲ್ MPS ಅನ್ನುವ (ಅಥವಾ ಅದೇ ತರಹದ ಡೈಜಿನ್ ಮಾತ್ರೆ) ಒಂದು ಲೈಟ್ ಪಿಂಕ್ ಬಣ್ಣದ, ದಪ್ಪ ಸಿರಪ್ ಕೊಡ್ತಾ ಇದ್ರು. ಶುಂಠಿ ಪೆಪ್ಪರ್‌ಮೆಂಟಿನ ಪರಿಮಳದ ಅದರಲ್ಲಿ ಅಲ್ಯುಮಿನಿಯಂ ಹೈಡ್ರಾಕ್ಸೈಡ್ ಮತ್ತು ಮೆಗ್ನೀಶಿಯಂ ಹೈಡ್ರಾಕ್ಸೈಡ್ ಮೆಯಿನ್ ಇಂಗ್ರೀಡಿಯಂಟ್ಸ್. ಈ ಅಲ್ಯುಮಿನಿಯಂ ಮತ್ತು ಮೆಗ್ನೀಶಿಯಂ ಹೈಡ್ರಾಕ್ಸೈಡ್‌ಗಳು ಹೊಟ್ಟೆಯ ಮತ್ತು ದೇಹದ ಆ್ಯಸಿಡಿಟಿ pH ಮಟ್ಟವನ್ನು ಅಗತ್ಯದ 7.35ಗೆ ಬರುವಂತೆ ಮಾಡುತ್ತದೆ.

ಗ್ಯಾಸ್ಟಿಕ್ ಸಮಸ್ಯೆ ನಿಧಾನವಾಗಿ ನಾರ್ಮಲ್‌ಗೆ ಬರುತ್ತದೆ. (ಈಗ ಹೆಚ್ಚಾಗಿ ಈ ಸಿರಪ್ ಕೊಡುವುದು ಕಡಿಮೆ, ಪೆಂಟಾಪ್ರಸೋಲ್, ರ‌ನ್ಯಾನಿಟಡಿನ್ ಮಾತ್ರೆಗಳನ್ನು ಕೊಡುತ್ತಾರೆ. ಹೋಟೆಲ್ ಅಥವಾ ಊಟದ ಮನೆಗೆ ಹೋಗುವವರೂ ATM ಸ್ಮಾರ್ಟ್ ಕಾರ್ಡ್ ಜತೆ ಪಾಕೇಟ್‌ನಲ್ಲಿ ಒಂದು ಪೆಂಟಾಪ್ರೆಸೋಲ್ ಮಾತ್ರೆ ಇಟ್ಕೊಂಡು ಹೋಗುವವರೂ ಇದ್ದಾರೆ!

ಮನುಷ್ಯನ ರಕ್ತದಲ್ಲಿ pH ಮಟ್ಟ 7.35 to 7.45 ಇರಬೇಕು. 7.35ಗಿಂತ ಕಡಿಮೆ ಇದ್ದರೆ ಅದು ಅಸಿಡಿಕ್. ಅಸಿಡಿಕ್‌ಗೆ ಕಾರಣ ಹೆಚ್ಚಾಗಿ ಸೇವಿಸುವ ಕಾಫಿ, ಸ್ವೀಟು, ಕೆಲವು ಜ್ಯೂಸ್‌ಗಳು, ಕರಿದ ತಿಂಡಿಗಳು, ಕೆಮಿಕಲ್ ಮಿಶ್ರಿತ ಆಹಾರ, ಸೋಡಾ ಬೆರೆಸಿದ ವಡೆ/ಮೆಣಸಿನ ಕಾಯಿ ಬಜ್ಜಿ, ಜೆಂಕ್ ಫುಡ್‌ಗಳು, ಪ್ರಿಸರ್ವೆಟಿವ್, ಟೇಸ್ಟಿಂಗ್, ಪೌಡರ್, ವಿನೇಗರ್, ಕಲ್ಮಶ ವಾತಾವರಣ, ಹೈಪರ್‌ಟೆನ್ಷನ್ ಇತ್ಯಾದಿ. ಇದೆಲ್ಲದರ ಪರಿಣಾಮ ಗ್ಯಾಸ್ಟ್ರಿಕ್ ಎಂಬ ರೋಗವಲ್ಲದ ರೋಗದ ನಿತ್ಯ ಬಾಧೆ! ಗ್ಯಾಸ್ಟ್ರಿಕ್ ಅಂದ್ರೆ ವ್ಯತ್ಯಾಸ ಆದ pH ಮಟ್ಟ. ಗ್ಯಾಸ್ಟ್ರಿಕ್ ಆದಾಗ ದೇಹದ ಚಟುವಟಿಕೆ ಕ್ಷೀಣಿಸುತ್ತದೆ. ಬೇರೆ ಕಾಯಿಲೆಗಳಿಗೆ ಆಹ್ವಾನ ಆಗುತ್ತದೆ.

ಮನುಷ್ಯರಂತೆ ಮಣ್ಣು, ನೀರು, ವಾತಾವರಣ ಮತ್ತು ಸಸ್ಯಗಳ pH ವ್ಯತ್ಯಾಸ ಆದಾಗ ಅವುಗಳೂ ಅನಾರೋಗ್ಯದಿಂದ ಬಳಲುತ್ತವೆ. ಪ್ರಕೃತಿಯಲ್ಲಿ ಚೇತನ-ಚಟುವಟಿಕೆಗಳು ಕಮ್ಮಿಯಾಗುತ್ತವೆ. ಅನೇಕ ಗಿಡ ಮರಗಳ ಬೆಳವಣಿಗೆ ಕುಂಠಿತವಾಗುತ್ತವೆ.

ಮಣ್ಣಿನ pH ತುಂಬಾ ಕಮ್ಮಿಯಾದರೆ ಏನಾಗುತ್ತದೆ?

ಯಾವಾಗ ಮಣ್ಣಿನ pH ತುಂಬ ಕಮ್ಮಿಯಾಗುತ್ತದೆ (ಅಂದರೆ ಆ್ಯಸಿಡಿಕ್ ಆಗುತ್ತದೆ) ಆಗ ಗಿಡ ಮರಗಳು ತಮ್ಮ ಬೇರುಗಳಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವುದು ಕಷ್ಟವಾಗುತ್ತದೆ. ಯಾವಾಗ ಗಿಡ ಮರಗಳಿಗೆ ಪೋಷಕಾಂಶಗಳು ಕಡಿಮೆಯಾಗುತ್ತವೆ ಪರಿಣಾಮ ಗಿಡ ಮರಗಳ ಬೆಳವಣಿಗೆ ಕಮ್ಮಿಯಾಗುತ್ತವೆ, ಸೊರಗುತ್ತವೆ ಮತ್ತು ರೋಗ ಬರುವ ಪರಿಸ್ಥಿತಿ ನಿರ್ಮಾಣವಾಗಬಹುದು. ಅದರ ಪರಿಣಾಮ ಹೂ ಬಿಡುವುವುದು ಕಡಿಮೆಯಾಗುತ್ತದೆ. ಮಳೆಗಾಲದಲ್ಲಿ ಮೇಲ್ಮೈ ಮಣ್ಣು ಹೆಚ್ಚು ಅ್ಯಸಿಡಿಕ್ ಆಗುವುದರಿಂದ ಗಿಡಗಳು ಹೂ ಬಿಡುವುದು ಕಡಿಮೆ. (‘ಮಳೆ ಜಾಸ್ತಿಯಾಗಿ ಮಳೆಗಾಲದಲ್ಲಿ ದೇವರಿಗೂ ಹೂವಿಲ್ಲ’ ಅನ್ನುವ ಮಾತು ನೆನಪಿಸಿಕೊಳ್ಳಿ). pH ಮಟ್ಟ ಕಡಿಮೆಯಾದಾಗ (ಅ್ಯಸಿಡಿಕ್ ಆದಾಗ) ಫಲ ಬಿಡುವ, ಬಿಟ್ಟ ಫಲ ಪಕ್ವವಾಗುವ (ಬೆಳೆಯುವ) ಗತಿಯೂ ನಿಧಾನವಾಗುತ್ತದೆ. ಮಣ್ಣಿನ pH ಮಟ್ಟ ಕಡಿಮೆಯಾದ ಕಾರಣ ಹಿಂಬೆಳಸು ಅಥವಾ ಅಡಿಕೆ ಕೊನೆ ತೆಗೆಯುವ ದಿನಗಳು ಮುಂದಕ್ಕೆ ಹೋಗುತ್ತವೆ. ಗಮನಿಸಿ ನವರಾತ್ರಿಗೆ ಅಡಿಕೆ ಕೊನೆ ತೆಗೆಯುತ್ತಿದ್ದವರು ದೀಪಾವಳಿ ಮುಗಿದು ಪಕ್ಷ ಕಳೆದರೂ ‘ಕೊನೆ ಬಂದಿಲ್ಲ ಅಂತಿರುತ್ತಾರೆ. ಇದಕ್ಕೆ ಬೇರೆ ಕಾರಣಗಳೂ (ಉಷ್ಣತೆ, ಚಳಿ, ಹ್ಯುಮಿಡಿಟಿ ಇತ್ಯಾದಿ) ಇರಬಹುದು. ಅದರ ಜತೆಗೆ ಮಣ್ಣಿನ pH ಕಡಿಮೆಯಾದ ಕಾರಣವೂ ಇರಬಹುದು ಎನ್ನುವ ಅಭಿಪ್ರಾಯ ಇದೆ.

ಎಲೆ ಚುಕ್ಕಿ ರೋಗ

ನಿರಂತರ ಸರಿ ಸುಮಾರು ಏಳು ತಿಂಗಳಿಗೂ ಹೆಚ್ಚು ಸುರಿದ ಮಳೆ ನೀರಿನಿಂದ ಮಣ್ಣಿನ pH ಮಟ್ಟ ತೀವ್ರವಾಗಿ ಕಡಿಮೆಯಾಗಿ ಅಡಿಕೆ ಮರಗಳು ಶಕ್ತಿಗುಂದಿ ಎಲೆ ಚುಕ್ಕಿ ರೋಗ, ಅಡಿಕೆ ಅಂಡೊಡಕು, ಅಡಿಕೆ ಬೆಳವಣಿಗೆ ಕಮ್ಮಿಯಾಗಿರುವುದು, ಅಡಿಕೆ ಹಡ್ಳು ಹಳದಿಯಾಗುವುದು, ಎಳೆ ಅಡಿಕೆಗಳು ಉದುರುವುದು, ಉದುರುವಾಗಲೂ ಚಿಗುರು ಅಡಿಕೆ ಹಳದಿ ಬಣ್ಣಕ್ಕೆ ತಿರುಗಿ ಉದುರುವುದು, ಕೊಳೆ ರೋಗ ಎಲ್ಲ ಕಾಣಿಸಬಹುದು.

ಸರ್ವೇಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಕ್ಯಾಲ್ಸಿಯಂ ಸುಣ್ಣ, ಡೋಲೋಮೇಟ್ ಸುಣ್ಣ ಬಳಕೆಗೆ ವಿಜ್ಞಾನಿಗಳು ಶಿಫಾರಸು ಮಾಡುತ್ತಾರೆ. (ಮನುಷ್ಯರ ದೇಹದ pH ವ್ಯತ್ಯಾಸದ ಗ್ಯಾಸ್ಟ್ರಿಕ್‌ ಸರಿಪಡಿಸಲು ಕೊಡುವ ಔಷಧಿಯಂತೆ)
ಅನೇಕರು ಏಪ್ರಿಲ್-ಮೇ ತಿಂಗಳಲ್ಲಿ ತೋಟಕ್ಕೆ ಸುಣ್ಣ ಕೊಟ್ಟಿದ್ದರೂ, ಮಳೆಯ ತೀವ್ರತೆ ಮತ್ತು ಮಳೆ ದೀರ್ಘಕಾಲ ಬಿದ್ದ ಪರಿಣಾಮವಾಗಿ ಮಣ್ಣಿನ pH ಕಮ್ಮಿಯಾಗಿರಬಹುದು.

ಸಾಂಪ್ರದಾಯಿಕ ಬೇಸಾಯ ಪದ್ಧತಿ ಮಾಯ

ಸಾಂಪ್ರದಾಯಿಕ ಬೇಸಾಯ ಪದ್ಧತಿ ಕಡಿಮೆ ಮಾಡಿ, ರಾಸಾಯನಿಕ ಗೊಬ್ಬರ ಬಳಸುವಿಕೆಯಿಂದಲೂ ಮಣ್ಣಿನ pH ಕಡಿಮೆಯಾಗಿರಬಹುದು. (ನಮಗೂ ಯಾವುದೇ ಔಷಧಿ ಕೊಟ್ಟರೂ ಅವುಗಳ ಜೊತೆ ದಿನಕ್ಕೆ ಒಂದರಂತಾದರೂ ಗ್ಯಾಸ್ಟ್ರಿಕ್‌ ಅಥವಾ ಆ್ಯಸಿಡಿಕ್ ಆಗದಂತೆ ಮಾತ್ರೆ ಕೊಡುವುದು ಸರ್ವೇಸಾಮಾನ್ಯ). ಅದೇ ರೀತಿ ಮೇಲೆ NPK ಕೆಮಿಕಲ್ ರಸಗೊಬ್ಬರಗಳೂ ಮಣ್ಣಿನ pH ಮಟ್ಟ ಇಳಿಸಿ, ಅಸಿಡಿಕ್ ಮಾಡುತ್ತವೆ ಎಂದಾಯ್ತು.

ಅಂತರ್ಜಾಲದಲ್ಲಿ ಏನಿದೆ ಉತ್ತರ?

ಅಂತರ್ಜಾಲದಲ್ಲಿ ಮಣ್ಣಿನ pH ಸಮಸ್ಯೆಗಳನ್ನು ಕೇಳಿದರೆ ಅದು ಕೊಡುವ ಉತ್ತರ: “Early identification of soil pH problems is important as it can be both costly and difficult to correct long-term nutrient deficiencies” ಎಂದು.

ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ, ಮಣ್ಣಿನ ನಿರಂತರ pH ಸಮತೋಲನ(6 ರಿಂದ 7.5) ವನ್ನು ಕಾಪಾಡಿಕೊಳ್ಳುವಲ್ಲಿ ನಾವು ಹೆಚ್ಚಿನ ಶ್ರಮ ವಹಿಸುವುದು ಈಗ ಇನ್ನೂ ಹೆಚ್ಚು ಅಗತ್ಯ ಅನಿಸುತ್ತದೆ. ಮೊದಲೇ ಹೇಳಿದಂತೆ, ಆರೊಗ್ಯವಂತ ಮನುಷ್ಯರಿಗೆ ರಕ್ತದ pH 7.35 to 7.45 ಇರಬೇಕು. 7.35 ಗಿಂತ ಕಡಿಮೆ ಇದ್ದರೆ ಅದು ಅ್ಯಸಿಡಿಕ್. ಅದೇ ರೀತಿ ಮಣ್ಣಿನ pH ಸಮತೋಲನ 6 ರಿಂದ 7.5 ಕಾಪಾಡಿಕೊಳ್ಳುವುದು, ಆ ಮೂಲಕ ಮಣ್ಣು ಅ್ಯಸಿಡಿಕ್ ಆಗದಂತೆ ನೋಡಿಕೊಳ್ಳುವುದು ಅನಿವಾರ್ಯ.

ಮಣ್ಣಿನ pH ಸಮತೋಲನ (6 ರಿಂದ 7.5) ಮಾಡುವುದು ಹೇಗೆ?

ಇದಕ್ಕಿರುವುದು ಒಂದೇ ದಾರಿ ಅಂದರೆ ಕ್ಯಾಲ್ಸಿಯಂ ಕೃಷಿ ಸುಣ್ಣವನ್ನು pH ಮಟ್ಟಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ಬಳಸುವುದು. ಇದಿಷ್ಟು ಅನೇಕ ನುರಿತ ಪ್ರಗತಿಪರ ಕೃಷಿಕರ ಅನುಭವದಿಂದ, ಒಂದಿಷ್ಟು ಜನ ವಿಜ್ಞಾನಿಗಳಿಂದ ಮತ್ತು ಅಂತರ್ಜಾಲದಲ್ಲಿ ದೊರೆತ ಮಾಹಿತಿಗಳ ಸಂಕ್ಷಿಪ್ತ ರೂಪ.

ಅತಿಯಾದ ಮಳೆಯಿಂದ, ತೇವಾಂಶದ ಆರ್ದ್ರತೆಯಿಂದ ಮಣ್ಣು ಮಾತ್ರ ಅಲ್ಲ, ತೋಟದ ವಾತಾವರಣ, ಗಿಡ ಮರಗಳ ಒಳ ಭಾಗದ pH ಮಟ್ಟವೂ ಅ್ಯಸಿಡಿಕ್ ಆಗಬಹುದು ಎನ್ನುವುದು ಕೆಲವರ ಅಭಿಪ್ರಾಯ. ನೈಟ್ರೋಜನ್ ರಸಗೊಬ್ಬರ ಬಳಕೆಯೂ ಮಣ್ಣಿನ pH ಮಟ್ಟವನ್ನು ಕಡಿಮೆ ಮಾಡುತ್ತದೆಯಂತೆ. ಈ ಬಗ್ಗೆಯೂ ಹೆಚ್ಚಿನ ಗಮನ ಅಗತ್ಯ. ಇದು ಹೌದಾದರೆ ಮುಂಗಾರು ಮುನ್ನ ರಸಗೊಬ್ಬರ ಬೇಸಾಯವೂ ಮರು ಚಿಂತನೆ ಮಾಡಬೇಕು. ಈ ಎಲ್ಲಾ ಕಾರಣಗಳಿಂದ ಮಾಹಿತಿಗಳಿಂದ ಒಂದಂತು ಸ್ಪಷ್ಟ, ಎಲೆ ಚುಕ್ಕಿ ರೋಗ (ಮತ್ತಿತರ ರೋಗಗಳಾದ, ಅಡಿಕೆ ಅಂಡೊಡಕು, ಅಡಿಕೆ ಉದುರುವಿಕೆ, ಹಳದಿ ಎಲೆ ಇತ್ಯಾದಿಗಳು ಕೂಡ) ಹೆಚ್ಚುತ್ತಿರುವುದಕ್ಕೆ ಮಣ್ಣಿನ pH ಮಟ್ಟ ಇಳಿದು ಮಣ್ಣು ಅ್ಯಸಿಡಿಕ್ ಆಗುತ್ತಿರುವುದೂ ಒಂದು ಕಾರಣ. pH ಮಾತ್ರ ಕಾರಣ ಅಲ್ಲದಿರಬಹುದು, ಆದರೆ ಅದೂ ಒಂದು ಪ್ರಬಲವಾದ ಕಾರಣ. ಜತೆಗೆ ಫಂಗಸ್ ಬೆಳವಣಿಗೆ, ಪೌಷ್ಟಿಕಾಂಶ ಕೊರತೆಗೂ pH ಕಾರಣವಂತೂ ನಿಜ. ಇದಿಷ್ಟು ಮಣ್ಣಿನ pH ವಿಚಾರದ ಬೇಸಿಕ್ ವಿಚಾರಗಳು.

ಮಣ್ಣಿನ pH ವಿಚಾರದಲ್ಲಿ ಸರಕಾರ, ಇಲಾಖೆಗಳು, ಕೃಷಿ ವಿಜ್ಞಾನಿಗಳು ಏನು ಮಾಡಬೇಕು?

pH ನಿಯಂತ್ರಣದ ಸುಣ್ಣ ಬಳಕೆಯ ಮತ್ತು ಇತರ ಅಗತ್ಯ ವಿಚಾರದಲ್ಲಿ ಸರಕಾರ, ಅದರ ಇಲಾಖೆಗಳು ಮತ್ತು ಕೃಷಿ ವಿಜ್ಞಾನಿಗಳು ಹೆಚ್ಚಿನ ಗಮನ ಕೊಡಬೇಕಾಗಿದೆ:

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಎಲೆಚುಕ್ಕಿ ರೋಗ; ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ಹೇಳಿಕೆಗಳೇ ಬೋಗಸ್‌! ಇಲ್ಲಿದೆ ಪುರಾವೆ

ಡಿವಿಜಿಯವರ ಒಂದು ಕಗ್ಗದ ಮುಕ್ತಕ ಹೀಗಿದೆ

ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ?। ದಿನಪನದೆ? ಚಂದ್ರನದೆ? ನೀರಿನದೆ? ನಿನದೆ? ॥ ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು। ಗುಣಕೆ ಕಾರಣವೊಂದೆ? – ಮಂಕುತಿಮ್ಮ ॥
ಅಂದರೆ, ಭೂಮಿಯಲ್ಲಿ ಚಿಗುರುವ ಹುಲ್ಲಿಗೆ ಆ ಹಸಿರುಬಣ್ಣ ಎಲ್ಲಿದ ಬಂತು? ಬೇರಿನದೋ ? ಭೂಮಿಯದೋ? ಬೆಳಕ ನೀಡುವ ಸೂರ್ಯನದೋ? ಚಂದ್ರನದೋ? ಪೂರಕವಾದ ನೀರಿನದೋ? ಅದನ್ನು ಬೆಳೆಸಿದ ನಿನ್ನದೋ? ಅಥವಾ ತಂಪ ಕಾಣುವ ನಿನ್ನ ಕಣ್ಣಿನ ಪುಣ್ಯದ್ದೋ? ಆ ಹುಲ್ಲಿನ ಹಸಿರಿನ ಗುಣಕ್ಕೆ ಕಾರಣ ಒಂದೇ ಅಲ್ಲ. ಅನೇಕ ಕಾರಣಗಳಿವೆ ಎಂದು ಮುಕ್ತಕದ ಅರ್ಥ. ಆ ಅನೇಕದಲ್ಲಿ pH ಕೂಡ ಒಂದು ಪ್ರಮುಖವಾದುದು. ಗೊಬ್ಬರ, ಪೋಶಕಾಂಶಗಳಿಗಿಂತ ಹೆಚ್ಚಿನ ಮಹತ್ವವನ್ನು ಮಣ್ಣಿನ pH (ರಸಸಾರ) ಬಗ್ಗೆ ಕೊಡಬೇಕು.
ಗ್ಯಾಸ್ಟ್ರಿಕ್ ಆ್ಯಸಿಡಿಟಿ ಇದ್ದಾಗ ಯಾವ ಒಳ್ಳೆಯ ಊಟವೂ ಸೇರುವುದಿಲ್ಲ. ತಿಂದರೆ ಜೀರ್ಣವೂ ಆಗುವುದಿಲ್ಲ. ಇದು ಕೃಷಿಗೂ ಅನ್ವಯ. ಮಣ್ಣಿನ ಆ್ಯಸಿಡಿಟಿ ಸರಿ ಮಾಡಿಕೊಂಡು, ಬೇಸಾಯದ ಊಟ ಬಡಿಸಬೇಕು.

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳಿಗೆ, ಇಳುವರಿ ಕ್ಷೀಣಿಸುವುದಕ್ಕೆ ಕಾರಣವೇ ಇದು! ಬೆಳೆಗಾರರೇ ಗಮನಿಸಿ…

Exit mobile version