Site icon Vistara News

National Nutrition Week 2023: ಸಿರಿಧಾನ್ಯ ಬೆಳೆದ ರೈತ ಸಿರಿವಂತನಾಗುವುದು ಖಚಿತ

Millets Farming

ಬೆಂಗಳೂರು: ದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಯುವುದರಿಂದ (National Nutrition Week 2023) ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ಹೆಚ್ಚಳವಾಗಲಿದೆ ಎಂದು ಸರ್ಕಾರ ಹೇಳಿದೆ. ಮರೆತು ಹೋಗಿರುವ ಸಿರಿಧಾನ್ಯಗಳ ಬೆಳೆಯನ್ನು ಮತ್ತೆ ಪುನರುಜ್ಜೀವನಗೊಳಿಸಲು ಅಂತರರಾಷ್ಟ್ರೀಯ ಸಂಸ್ಥೆಗಳು, ಅಕಾಡೆಮಿಗಳು ಹಾಗೂ ಹೋಟೆಲ್‌ ಉದ್ಯಮಕ್ಕೆ ಸರ್ಕಾರ ಒತ್ತಾಯಿಸಿದೆ.

ಭಾರತವು ಸಿರಿಧಾನ್ಯಗಳ ಜಾಗತಿಕ ಕೇಂದ್ರವನ್ನಾಗಿ ಗುರುತಿಸಿಕೊಳ್ಳಲು ಬಯಸುತ್ತಿದೆ. ಅದೇ ನಿಟ್ಟಿನಲ್ಲಿ 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಗುರುತಿಸಲು ವಿಶ್ವ ಸಂಸ್ಥೆ ಮುಂದೆ ಪ್ರಸ್ತಾಪ ಇಟ್ಟಿದ್ದು, ಅದಕ್ಕೆ ಒಪ್ಪಿಗೆ ಕೂಡ ಸಿಕ್ಕಿದೆ. ವಿಶ್ವಸಂಸ್ಥೆಯು 2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ.

ಈ ಬಗ್ಗೆ ಭಾರತೀಯ ಪಾಕಶಾಲೆಯ ಸಂಘಗಳ ಒಕ್ಕೂಟ ಆಯೋಜಿಸಿದ್ದ 9ನೇ ಅಂತಾರಾಷ್ಟ್ರೀಯ ಬಾಣಸಿಗರ ಸಮ್ಮೇಳನದಲ್ಲಿ ಭಾಗವಹಿಸಿದ ಕೇಂದ್ರ ಸಹಾಯಕ ಕೃಷಿ ಸಚಿವ ಕೈಲಾಶ್‌ ಚೌಧರಿ ಅವರು, “ಏಷ್ಯಾ ಮತ್ತು ಆಫ್ರಿಕಾದಾದ್ಯಂತ ಅರ್ಧ ಶತಕೋಟಿಗೂ ಹೆಚ್ಚು ಜನರಿಗೆ ಸಿರಿಧಾನ್ಯ ಸಾಂಪ್ರದಾಯಿಕ ಆಹಾರವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ, ಸಿರಿಧಾನ್ಯಗಳು ಪ್ರಾಥಮಿಕವಾಗಿ ಹಿಂಗಾರು ಬೆಳೆಯಾಗಿದೆ. ಇದಕ್ಕೆ ಪ್ರಧಾನ ಆಹಾರಗಳಿಗಿಂತ ಕಡಿಮೆ ನೀರು ಸಾಕಾಗುತ್ತದೆ. ಜೀವನೋಪಾಯವನ್ನು ಸೃಷ್ಟಿಸಲು, ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಪ್ರಪಂಚದಾದ್ಯಂತ ಆಹಾರ ಮತ್ತು ಪೌಷ್ಟಿಕಾಂಶತೆಯನ್ನು ಹೆಚ್ಚಿಸುವುದಕ್ಕೆ ಸಾಮರ್ಥ್ಯವಿರುವ ಕಾರಣದಿಂದ ಸಿರಿಧಾನ್ಯ ಪ್ರಮುಖ ಬೆಳೆಯಾಗಿದೆ” ಎಂದು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಹೋಟೆಲ್‌ಗಳು, ಮಾಧ್ಯಮಗಳು, ಭಾರತೀಯ ವಲಸಿಗರು, ಸ್ಟಾರ್ಟ್‌ಅಪ್ ಸಮುದಾಯಗಳು, ನಾಗರಿಕ ಸಮಾಜಗಳು ಸಿರಿಧಾನ್ಯಗಳ ಪ್ರಾಮುಖ್ಯತೆಯನ್ನು ಪ್ರಚಾರ ಮಾಡುವುದಕ್ಕೆ ಕೈ ಜೋಡಿಸಬೇಕು ಎಂದು ಅವರು ಕೇಳಿಕೊಂಡರು.

ಕೃಷಿ ಕಾರ್ಯದರ್ಶಿ ಮನೋಜ್ ಅಹುಜಾ ಮಾತನಾಡಿ, ‘ದೇಶದಲ್ಲಿ ಸಿರಿಧಾನ್ಯ ಜನಪ್ರಿಯವಾಗುವುದರೊಂದಿಗೆ ಅದರ ಬೆಳೆಯಿಂದಾಗಿ ಸಣ್ಣ ಮತ್ತು ಅತಿಸಣ್ಣ ರೈತರ ಆದಾಯದಲ್ಲಿ ಹೆಚ್ಚಳವಾಗಲಿದೆ’ ಎಂದರು. ಹಾಗೆಯೇ, “ಕಳೆದ ಕೆಲವು ವರ್ಷಗಳಿಂದ ಕೃಷಿ ಬೆಳವಣಿಗೆಯು ಒಟ್ಟಾರೆ ಜಿಡಿಪಿಯಲ್ಲಿ ಉತ್ತಮ ಕೊಡುಗೆ ನೀಡಿದೆ. ಅದಕ್ಕಾಗಿ ಹಲವಾರು ತಂತ್ರಜ್ಞಾನಗಳನ್ನು ಈ ಕ್ಷೇತ್ರಕ್ಕೆ ಅಳವಡಿಕೆ ಮಾಡಿ ಕೃಷಿಯನ್ನು ಆಧುನಿಕಗೊಳಿಸಲು ಸರ್ಕಾರವು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಿದೆ” ಎಂದು ಅವರು ತಿಳಿಸಿದ್ದಾರೆ.

ಇದನ್ನ ಓದಿ: National Nutrition Week 2023: ಸಸ್ಯಾಹಾರದಲ್ಲಿ ಪೌಷ್ಟಿಕಾಂಶ ಹೆಚ್ಚಿಸುವುದು ಹೇಗೆ?

Exit mobile version