ನವ ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಪಿಎಂ-ಕಿಸಾನ್ (PM-KISAN) ಯೋಜನೆಯ ಅಡಿಯಲ್ಲಿ ರೈತರಿಗೆ 12ನೇ ಕಂತಿನಲ್ಲಿ 16,000 ಕೋಟಿ ರೂ.ಗಳನ್ನು ಸೋಮವಾರ ಬಿಡುಗಡೆಗೊಳಿಸಿದರು.
ದೀಪಾವಳಿಗೆ ಹಾಗೂ ಚಳಿಗಾಲದ ಅವಧಿಯ ಬೆಳೆಯ ಬಿತ್ತನೆಗೆ ಮುನ್ನ ರೈತರಿಗೆ ಈ ನೆರವು ಸಿಗುತ್ತಿದೆ. ಪಿಎಂ-ಕಿಸಾನ್ ಯೋಜನೆಯ ಅಡಿಯಲ್ಲಿ ಇದುವರೆಗೆ ಒಟ್ಟು 2.16 ಲಕ್ಷ ಕೋಟಿ ರೂ. ಬಿಡುಗಡೆಯಾಗಿದೆ.
ಪಿಎಂ-ಕಿಸಾನ್ ಅಡಿಯಲ್ಲಿ ಅರ್ಹ ರೈತರು ವಾರ್ಷಿಕ 6,000 ರೂ. ಹಣಕಾಸು ನೆರವು ಪಡೆಯುತ್ತಾರೆ. ತಲಾ 2,000 ರೂ.ಗಳ ಮೂರು ಕಂತುಗಳಲ್ಲಿ ಪ್ರತಿ ವರ್ಷ ಇದು ದೊರೆಯುತ್ತದೆ. ಅಂದರೆ ನಾಲ್ಕು ತಿಂಗಳಿಗೊಮ್ಮೆ ವಿತರಣೆಯಾಗುತ್ತದೆ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ.
2019ರ ಫೆಬ್ರವರಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ದಿಲ್ಲಿಯಲ್ಲಿ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ 12ನೇ ಕಂತನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದರು. ಈ ಸಮ್ಮೇಳನದಲ್ಲಿ 13,500 ರೈತರು ಭಾಗವಹಿಸಿದ್ದಾರೆ. 1,500 ಕೃಷಿ ಸ್ಟಾರ್ಟಪ್‌ಗಳು ಭಾಗವಹಿಸಿವೆ. ಪಿಎಂ-ಕಿಸಾನ್ 100% ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.