ನವದೆಹಲಿ: ಈ ಋತುವಿನಲ್ಲಿ ಗೋಧಿ ಉತ್ಪಾದನೆ (Wheat Crop) ದಾಖಲೆಯ ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ. ಗೋಧಿ ಬಿತ್ತನೆ ಪ್ರದೇಶವು ಗಣನೀಯವಾಗಿ ವಿಸ್ತರಿಸಿದೆ ಮತ್ತು ಪ್ರಮುಖ ಉತ್ಪಾದಕ ರಾಜ್ಯಗಳಲ್ಲಿನ ಶೀತ ಹವಾಮಾನವು ಇಳುವರಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಗೋಧಿ ಬೆಳೆಯುವ ಪ್ರದೇಶವು 3.4 ಕೋಟಿ ಹೆಕ್ಟೇರ್ (34 million hectares) ಪ್ರದೇಶಕ್ಕೆ ವ್ಯಾಪಿಸಿದೆ. ಇದು ಮೂರು ವರ್ಷಗಳಲ್ಲೇ ಗರಿಷ್ಠ. ದೇಶದ ಪ್ರಮುಖ ಗೋಧಿ ಉತ್ಪಾದಕ ರಾಜ್ಯಗಳಾದ ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಬಿತ್ತನೆ ಬಹುತೇಕ ಪೂರ್ಣಗೊಂಡಿದೆ. ನವೆಂಬರ್‌ನಲ್ಲಿ ಬಿತ್ತನೆ ಮಾಡಲಾಗುತ್ತದೆ ಮತ್ತು ಮಾರ್ಚ್‌ನಲ್ಲಿ ಕೊಯ್ಲು ಮಾಡಲಾಗುತ್ತದೆ.
ಬೆಲೆ ಇಳಿಕೆ ಸಾಧ್ಯತೆ
ʼʼಹೆಚ್ಚಿನ ಗೋಧಿ ಉತ್ಪಾದನೆಯು ಬೆಲೆ ಇಳಿಕೆಗೆ ಸಹಾಯ ಮಾಡಲಿದೆʼʼ ಎಂದು ಕೃಷಿ ಸಚಿವ ಅರ್ಜುನ್ ಮುಂಡಾ ತಿಳಿಸಿದ್ದಾರೆ. “ಈ ವರ್ಷ ಗೋಧಿಯನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗಿದೆ ಮತ್ತು ಉತ್ತಮ ಇಳುವರಿಯನ್ನು ನಿರೀಕ್ಷಿಸುತ್ತಿದ್ದೇವೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ 2023-24ರ ಸಾಲಿನಲ್ಲಿ ದೇಶವು ದಾಖಲೆಯ 114 ಮಿಲಿಯನ್ ಟನ್ ಗೋಧಿಯನ್ನು ಉತ್ಪಾದಿಸಲಿದೆ ಎಂದು ಭಾರತೀಯ ಆಹಾರ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಕೆ.ಕೆ.ಮೀನಾ ಇತ್ತೀಚೆಗೆ ತಿಳಿಸಿದ್ದರು. ಬಿಸಿಗಾಳಿ ಹಾವಳಿಯಿಂದಾಗಿ ಉತ್ಪಾದನೆ ಕುಸಿತವಾಗಿದ್ದರಿಂದ ದೇಶವು 2022ರಲ್ಲಿ ಗೋಧಿ ರಫ್ತು ನಿಷೇಧಿಸಿತ್ತು. 2022-23ರಲ್ಲಿ ಉತ್ಪಾದನೆಯು 100 ಮಿಲಿಯನ್ ಟನ್ ಆಗಿತ್ತು. ಹಿಂದಿನ ವರ್ಷದ 107.7 ಮಿಲಿಯನ್ ಟನ್ ಉತ್ಪಾದನೆಗೆ ಹೋಲಿಸಿದರೆ ಕುಸಿತ ಕಂಡು ಬಂದಿತ್ತು.
ಕಳೆದ ಎರಡು ವರ್ಷಗಳಲ್ಲಿ ಉಂಟಾದ ಹವಾಮಾನ ವೈಪರೀತ್ಯ ಗೋಧಿ ಬೆಳೆ ಮೇಲೆ ದುಷ್ಪರಿಣಾಮ ಬೀರಿದ್ದು, ಇದು ವಾರ್ಷಿಕ ಸರಾಸರಿ ಶೇ. 20ರಷ್ಟು ಬೆಲೆ ಏರಿಕೆಗೆ ಕಾರಣವಾಗಿದೆ. ಏರುತ್ತಿರುವ ಬೆಲೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡ ಕೇಂದ್ರ ಸರ್ಕಾರವು ಸುಮಾರು 6 ಮಿಲಿಯನ್ ಟನ್ ಗೋಧಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದರಿಂದ ಸರ್ಕಾರಿ ಸ್ವಾಮ್ಯದ ಉಗ್ರಾಣಗಳಲ್ಲಿ ಗೋಧಿ ದಾಸ್ತಾನು 19 ಮಿಲಿಯನ್ ಮೆಟ್ರಿಕ್ ಟನ್‌ಗೆ ಇಳಿದಿದೆ. ಇದು ಏಳು ವರ್ಷಗಳಲ್ಲಿ ಕನಿಷ್ಠವಾಗಿದೆ.
ಹೊಸ ತಳಿಯತ್ತ ಮುಖ ಮಾಡಿದ ಕೃಷಿಕರು
ಹವಾಮಾನ ಬಿಕ್ಕಟ್ಟಿನ ಪರಿಣಾಮಗಳನ್ನು ಎದುರಿಸಲು ಕೃಷಿಕರೂ ಕ್ರಮ ಕೈಗೊಂಡಿದ್ದಾರೆ. ಗೋಧಿ ಬೆಳೆಯುವ ಪ್ರಮುಖ ರಾಜ್ಯಗಳಲ್ಲಿನ ಕೃಷಿಕರು ಈ ಋತುವಿನಲ್ಲಿ ಬಿಸಿ ಸಹಿಸಿಕೊಳ್ಳುವ ಗೋಧಿ ಪ್ರಭೇದಗಳ ಮೊರೆ ಹೋಗಿದ್ದಾರೆ. ಬದಲಾಗುತ್ತಿರುವ ಹವಾಮಾನಗಳ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯೇ ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಇದನ್ನೂ ಓದಿ: Wheat Stock: ಜನರಿಗೆ ಮೋದಿ ಮತ್ತೊಂದು ಸಿಹಿ ಸುದ್ದಿ; ಗೋಧಿ ಬೆಲೆ ಇಳಿಕೆಗೆ ಮಹತ್ವದ ಕ್ರಮ
“ಪಂಜಾಬ್ ಮತ್ತು ಹರಿಯಾಣಗಳಲ್ಲಿ ಈ ವರ್ಷ ಶೇ. 80ರಷ್ಟು ಪ್ರದೇಶಗಳಲ್ಲಿ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಲು ಶಕ್ತವಾಗಿರುವ ಮತ್ತು ಜೈವಿಕ ಬಲವರ್ಧಿತ ಗೋಧಿ ಪ್ರಭೇದವನ್ನು ಬಿತ್ತನೆ ಮಾಡಲಾಗಿದೆʼʼ ಎಂದು ಭಾರತೀಯ ಗೋಧಿ ಮತ್ತು ಬಾರ್ಲಿ ಸಂಶೋಧನಾ ಸಂಸ್ಥೆಯ (ಐಐಬಿಆರ್) ನಿರ್ದೇಶಕ ಜ್ಞಾನೇಂದ್ರ ಸಿಂಗ್ ತಿಳಿಸಿದ್ದಾರೆ. ʼʼಉತ್ತರ ಭಾರತದ ಕೆಲವು ಭಾಗಗಳಲ್ಲಿ ಈಗ ಶೀತಗಾಳಿ ಬೀಸುತ್ತಿರುವುದು ಇಳುವರಿಯನ್ನು ಹೆಚ್ಚಿಸಲು ಸಹಾಯ ಮಾಡಲಿದೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ