ಬೆಂಗಳೂರು: ಹಾವೇರಿಯಲ್ಲಿ ಸೆಪ್ಟೆಂಬರ್ 23, 24 ಹಾಗೂ 25 ರಂದು ಮೂರು ದಿನಗಳ ಕಾಲ ನಡೆಯಬೇಕಾಗಿದ್ದ 86ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತೆ ಮುಂದೂಡಲ್ಪಡುವ ಸಾಧ್ಯತೆಗಳಿವೆ.
ಕಳೆದ ಎರಡು ವರ್ಷಗಳಿಂದ ಸಮ್ಮೇಳನ ನಡೆದಿಲ್ಲ. ಈಗಾಗಲೇ ಮೂರು ಬಾರಿ ಈ ಸಮ್ಮೇಳನವನ್ನು ವಿವಿಧ ಕಾರಣಗಳಿಂದ ಮುಂದೂಡಲಾಗಿದೆ. ಈಗ ಸಮ್ಮೇಳನ ಆಯೋಜಕರೇ ಅದನ್ನು ಮುಂದೂಡಲು ತೀರ್ಮಾನಿಸಿದ್ದಾರೆ.
ಏಪ್ರಿಲ್ 23 ರಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಸೆಪ್ಟೆಂಬರ್‌ನಲ್ಲಿ ಸಮ್ಮೇಳನ ನಡೆಸುವ ಕುರಿತು ಒಮ್ಮತದಿಂದ ತೀರ್ಮಾನಿಸಲಾಗಿತ್ತಾದರೂ ಕೆಲ ಸಾಹಿತಿಗಳು ಮತ್ತು ಮಠಾಧೀಶರು ಈ ದಿನಾಂಕಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿರುವುದರಿಂದ ಸಮ್ಮೇಳನವನ್ನು ಮುಂದೂಡುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ ಜೋಶಿಯವರೇ ಮುಖ್ಯಮಂತ್ರಿಗಳಿಗೆ, ಸಂಬಂಧಿಸಿದ ಸಚಿವರಿಗೆ ಈಗ ಪತ್ರ ಬರೆದಿದ್ದಾರೆ.
“ಸಿರಿಗೆರೆಯ ಶ್ರೀ ತರಳುಬಾಳು ಜಗದ್ಗುರು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದೂರವಾಣಿ ಕರೆ ಮಾಡಿ ಬೃಹನ್ಮಠದ 20ನೇಯ ಜಗದ್ಗುರುಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಶ್ರದ್ಧಾಂಜಲಿ ಸಮಾರಂಭವು ಪ್ರತಿವರ್ಷದಂತೆ ಈ ಬಾರಿಯೂ 2022ರ ಸೆಪ್ಟೆಂಬರ್ 23, 24 ರಂದು ನಡೆಯಲಿದ್ದು, ಹಾವೇರಿ, ರಾಣೆಬೆನ್ನೂರು, ರಟ್ಟಿಹಳ್ಳಿ, ಹಿರೇಕೆರೂರು ಹಾಗೂ ಇತರೆ ಭಾಗಗಳಿಂದ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಅನಾನುಕೂಲವಾಗುವುದರಿಂದ ಸಮ್ಮೇಳನ ಮುಂದೂಡುವಂತೆ ಕೋರಿದ್ದಾರೆʼʼ ಎಂದು ಜೋಶಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪಿತೃಪಕ್ಷವೂ ಕಾರಣ!
ಸೆಪ್ಟೆಂಬರ್ 25 ರಂದು ಮಹಾಲಯ ಅಮಾವಾಸ್ಯೆ ಇರುವುದರಿಂದ ಪಿತೃಪಕ್ಷದಲ್ಲಿ ಸಮ್ಮೇಳನವನ್ನು ನಡೆಸುವುದು ಸೂಕ್ತವಲ್ಲವಾದ್ದರಿಂದ ಸಮ್ಮೇಳನ ಮುಂದೂಡಿ ಎಂದು ಅಧ್ಯಕ್ಷರು ಪತ್ರದಲ್ಲಿ ತಿಳಿಸಿದ್ದಾರೆ
ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆಯು ನಿಂತಿರುವುದಿಲ್ಲ ಮತ್ತು ವಿಧಾನ ಪರಿಷತ್ತು ಚುನಾವಣೆಯ ನಿಮಿತ್ತ ಜೂನ್ 17ರ ವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಮ್ಮೇಳನದ ವಿವಿಧ ಸಮಿತಿಗಳಲ್ಲಿ ಕಾರ್ಯನಿರ್ವಹಿಸುವ ಮಂತ್ರಿಗಳು, ಶಾಸಕರು ಸಮ್ಮೇಳನದ ಪೂರ್ವಸಿದ್ಧತಾ ಸಭೆಗಳಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದರಿಂದ ಸಮ್ಮೇಳನದ ತಯಾರಿಗೆ ತೊಂದರೆಯಾಗಲಿದೆ ಎಂದು ಅವರು ವಿವರಿಸಿದ್ದಾರೆ.
ನವೆಂಬರ್‌ನಲ್ಲಿ ನಡೆಯಲಿ
ಹಾವೇರಿ ಜಿಲ್ಲೆಯ ಹೆಮ್ಮೆಯ ದಾಸಶ್ರೇಷ್ಠರಾದ ಕನಕದಾಸರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಸೂಕ್ತ ಗೌರವ ಸಲ್ಲಿಸಲು, ಅವರ ಜಯಂತಿ ದಿನವಾದ ನವೆಂಬರ್ 11ರಂದು ಸರ್ಕಾರಿ ರಜೆ ಇದ್ದು, ಮರುದಿನಗಳಾದ 12ರಂದು ಎರಡನೆಯ ಶನಿವಾರ ಮತ್ತು 13ರಂದು ಭಾನುವಾರವಾದ್ದರಿಂದ ನಾಡಿನಾದ್ಯಂತ ಭಾಗವಹಿಸುವವರಿಗೆ ಅನುಕೂಲವಾಗುವ ಉದ್ದೇಶದಿಂದ, ಈಗ ನಿರ್ಧರಿಸಿರುವ ದಿನಾಂಕಗಳಿಂದ ಸಮ್ಮೇಳನವನ್ನು ಮುಂದೂಡಿ, 2022ರ ನವೆಂಬರ್ 11, 12 ಹಾಗೂ 13 ರಂದು ಜರುಗಿಸಬೇಕೆಂದು ಜೋಶಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ|ಕನ್ನಡ ಸಾಹಿತ್ಯ ಪರಿಷತ್ತಿಗೆ ಎಂಟು ಆಧಾರಸ್ತಂಭ: ಡಾ. ಮಹೇಶ ಜೋಶಿ
ಕೋವಿಡ್-19 ಕಾರಣದಿಂದ ಕಳೆದ ಎರಡು ವರ್ಷಗಳಿಂದ ನೆರವೇರದ ಈ ಅಕ್ಷರಜಾತ್ರೆಯನ್ನು ಇನ್ಯಾವುದೇ ಕಾರಣಕ್ಕೂ ಮುಂದೂಡದೇ 11, 12 ಹಾಗೂ 13 ನವೆಂಬರ್ 2022 ರಂದು ನಡೆಸಲು ಅಂತಿಮವಾಗಿ ದಿನಾಂಕಗಳನ್ನು ನಿಗದಿಪಡಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಅಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಕಾರ್ಮಿಕ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಶಿವರಾಮ್ ಹೆಬ್ಬಾರ್ ಮತ್ತು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರುಗಳಿಗೂ ಪತ್ರ ಬರೆದಿದ್ದಾರೆ.