ಸುಲ್ಕುಚಿ ಎಂಬ ಒಂದೂರು. ಅಲ್ಲೊಬ್ಬ ಓಂದಾ ಎಂಬ ಬಡವ ತನ್ನ ಕುಟುಂಬದೊಂದಿಗೆ ವಾಸವಾಗಿದ್ದ. ಸರಿಯಾದ ಉದ್ಯೋಗ ಇಲ್ಲದಿದ್ದರಿಂದ, ಕೆಲಸ ಅಥವಾ ಆಹಾರ ಹುಡುಕಿಕೊಂಡು ಪ್ರತಿದಿನವೂ ಅಲೆಯುತ್ತಿದ್ದ.
ಒಂದು ದಿನ ಎಂದಿನ ಹಾಗೆಯೇ ಆಹಾರ ಹುಡುಕಿಕೊಂಡು ಬಹುದೂರ ಹೋದ. ಸಂಜೆಯಾಗುತ್ತಾ ಬಂತು. ಮರಳಿ ಮನೆಗೆ ಹೋಗುವ ದಾರಿಯಲ್ಲಿ ಸ್ಮಶಾನವೊಂದು ಎದುರಾಯಿತು. ಅಮಾವಾಸ್ಯೆಯ ರಾತ್ರಿ, ಕಡುಕಪ್ಪು ಸ್ಮಶಾನ, ಸುಯ್ಯನೆ ಬೀಸುವ ಗಾಳಿ, ಮರ-ಗಿಡಗಳ ವಿಚಿತ್ರ ಶಬ್ದದ ನಡುವೆಯೂ ನಿಶ್ಯಬ್ದ. ಮನದ ಹೆದರಿಕೆಯಲ್ಲಿ, ರಾತ್ರಿಯ ಚಳಿಯಲ್ಲಿ ಓಂದಾನ ಮೂಳೆಯಲ್ಲೆಲ್ಲಾ ನಡುಕ ಆರಂಭವಾಯಿತು. ಆದರೆ ಸ್ಮಶಾನ ದಾಟದೆ ಮನೆಗೆ ತಲುಪುವಂತಿಲ್ಲ, ಮನೆ ತಲುಪದೆ ಹಸಿದ ಕುಟುಂಬಕ್ಕೆ ಆಹಾರ ನೀಡುವಂತಿಲ್ಲ. ಬೇರೆ ದಾರಿಯಿಲ್ಲದೆ ಓಂದಾ ಸ್ಮಶಾನದೊಳಗೆ ನಡೆಯತೊಡಗಿದ.
ಆ ಸ್ಮಶಾನವೋ ಚಿತ್ರ-ವಿಚಿತ್ರ ಭೂತಗಳ ಆಡುಂಬೊಲ. ಕರಿದೆವ್ವ, ಹಿರಿದೆವ್ವ, ಮರಿದೆವ್ವ, ಮುದಿದೆವ್ವ… ಒಂದೇ ಎರಡೇ. ಆ ರಾತ್ರಿಯಂತೂ ಅವರದ್ದು ಅಮಾವಾಸ್ಯೆಯ ಔತಣ! ಬಿಸಿಬಿಸಿ ಗುಂಡಿಗೆಯ ಬಜ್ಜಿ, ತಣ್ಣನೆ ಕಣ್ಣಿನ ಪಾನಕದಂಥ ನಾನಾ ರೀತಿಯ ರಸಪಾಕ ಜೊತೆಗೆ ರಂಗೇರಿತ್ತು ಭೂತಚೇಷ್ಟೆ. ತಾಪಟೆ ಎಂಬ ಭೂತ ಕೂದಲಿನಿಂದ ಮಾಡಿದ ಪಿಟೀಲನ್ನು ಮೂಳೆಯಿಂದ ಮಾಡಿದ ಕಡ್ಡಿಯಿಂದ ಕುಯ್ಯುತ್ತಿತ್ತು. ಇನ್ನೊಂದು ಭೂತವಂತೂ ತನಗೀಗ ಗಂಡನ ಮನೆಗೆ ಹೋಗಬೇಕಿದೆ ಎಂದು ಅಲವತ್ತುಕೊಳ್ಳುತ್ತಿತ್ತು. ಪುಲ್ವಾಯಿ ಎಂಬ ಮರಿದೆವ್ವವಂತೂ ಮರಕೋತಿ ಆಡುತ್ತಿತ್ತು. ಇಂಥ ರಂಗೇರಿದ ಹೊತ್ತಿಗೆ ಓಂದಾ ಬರಬೇಕೆ ಸ್ಮಶಾನಕ್ಕೆ!
ಭೂತಗಳಂತೂ ಕೋಪದಿಂದ ಥರಗುಟ್ಟಿದವು. ʻಯಾರಾತ…? ಇವನೂ ನಮ್ಮಗಳ ಹಾಗೆ ಜೀವದ ಆಸೆ ಬಿಟ್ಟವನೇ? ಅಲ್ಲದಿದ್ದರೆ ಈದಿನ ಇಷ್ಟೊತ್ತಿಗೆ ಇಲ್ಯಾಕೆ ಬಂದ?ʼ ಎಂದೆಲ್ಲಾ ಯೋಚಿಸಿ, ಯಾವುದಕ್ಕೂ ಇರಲಿ ಎಂದು ಒಂದು ಸುತ್ತು ಗಾಳಿಯೆಬ್ಬಿಸಿದವು. ಇವರೆಬ್ಬಿಸಿದ ಗಾಳಿಗೆ ನೆಲದಿಂದ ಮೇಲೆ ಹಾರಿ, ಗಿರ್ರನೆ ತಿರುಗಿ ಮತ್ತೆ ಭೂಮಿಗೆ ಬಿದ್ದ ಓಂದಾ. ಹಸಿದವನಿಗೆ ಕೋಪ ಹೆಚ್ಚು ಎಂಬಂತೆ, ʻಏ ಯಾರಲ್ಲಿ? ಓಂದಾ ಎಂಬ ಸರ್ವಶಕ್ತನ ಬಗ್ಗೆ ಕೇಳಿಲ್ಲವೇ ನೀವು?ʼ ಎಂದು ಅಬ್ಬರಿಸಿದ ಆತ. ಮಾತ್ರವಲ್ಲ, ಕೈಯಲ್ಲಿದ್ದ ದೊಣ್ಣೆಯನ್ನು ಎಗ್ಗಿಲ್ಲದೆ ಬೀಸತೊಡಗಿದ. ಈ ಸ್ವರಕ್ಕೆ ಭೂತಗಳೂ ಬೆದರಿದವು. ಅದರಲ್ಲೂ ಪಿಟೀಲು ಕುಯ್ಯುತ್ತಿದ್ದ ಪ್ರೇತಕ್ಕಂತೂ, ತನಗಿಂತ ಕರ್ಕಶ ಸ್ವರ ತೆಗೆಯುತ್ತಿರುವ ಈತ ಯಾರು ಎಂದು ಹೆದರುತ್ತಾ ಬಂದು ಶರಣಾಯಿತು. ʻಸರ್ವಶಕ್ತ ಓಂದಾ… ನಿಮ್ಮದೇನಾದರೂ ಸೇವೆ ಮಾಡಲೇ?ʼ ಎಂದು ವಿನಮ್ರವಾಗಿ ಕೇಳಿತು.
ಇದನ್ನೂ ಓದಿ: ಮಕ್ಕಳ ಕಥೆ: ಆನೆ ಬಾಲ ಹಿಡಿದು ಸ್ವರ್ಗಕ್ಕೆ ಹೋದ ಗೋಪಾಲ
ʻಸೇವೆ…? ಹ..ಹ..ಹೌದು. ನನ್ನಿಂದ ತೆಗೆದುಕೊಂಡಿದ್ದ ಸ..ಸಾಲವನ್ನು ಮರಳಿ ಕೊಡು, ಸಾಕುʼ ಎಂದ ಓಂದಾ ತನ್ನೆಲ್ಲಾ ಧೈರ್ಯವನ್ನು ಒಗ್ಗೂಡಿಸಿಕೊಂಡು.
ʻಸಾಲ…? ಆದರೆ ನಿಮ್ಮಿಂದ ಯಾವ ಸಾಲ ತೆಗೆದುಕೊಂಡಿದ್ದೂ ನನಗೆ ನೆನಪಿಲ್ಲವಲ್ಲʼ ಎಂದಿತು ಪಿಟೀಲು ಪ್ರೇತ.
ʻಹಾಗೆಂದರೇನು? ಸರ್ವಶಕ್ತ ಓಂದಾ ಎಂದಾದರೂ ಸುಳ್ಳು ಹೇಳುವನೇ?ʼ ಎಂದು ಅಬ್ಬರಿಸಿದ ಓಂದಾ.
ʻಇ..ಇ..ಇಲ್ಲ. ನೀವು ಹೇಳಿದ ಮೇಲೆ ನ..ನ..ನಾ ತೆಗೆದುಕೊಂಡಿರಲೇ ಬೇಕು. ಎಲ್ಲಿ ಯಾವಾಗ… ಅನ್ನುವುದನ್ನೂ ಕ..ಕ..ಕೇಳುವುದಿಲ್ಲ. ಎಷ್ಟು ಕೊಡಬೇಕು ಹೇಳಿದರೆ ಸಾಕುʼ ಎಂದು ತೊದಲಿತು ಪಿಟೀಲು ಪ್ರೇತ.
ʻಸರಿ, ಹೆಚ್ಚೇನಿಲ್ಲ. ನನ್ನ ಮನೆಯ ಸೂರಿನಡಿ ಏಳು ಮಡಕೆಗಳಿವೆ. ಅವುಗಳನ್ನು ತುಂಬುವಷ್ಟು ಚಿನ್ನದ ನಾಣ್ಯಗಳನ್ನು ತಂದರೆ ಸಾಕು. ಇಗೋ ಮನೆಯ ವಿಳಾಸʼ ಎಂದು ಹೇಳಿದ ಓಂದಾ. ʻಅಪ್ಪಣೆʼ ಎಂದಿತು ಭೂತ.
ನೇರ ಮನೆಗೆ ತೆರಳಿದ ಓಂದಾ, ತನ್ನ ಕುಟುಂಬವನ್ನು ಒಳ ಮನೆಯಲ್ಲಿ ಮಲಗುವಂತೆ ಹೇಳಿದ. ಒಂದಿಷ್ಟು ಮಡಕೆಗಳನ್ನು ತಂದು ಅವುಗಳ ತಳದಲ್ಲಿ ತೂತು ಕೊರೆದು ಸೂರಿಗೆ ನೇತಾಡಿಸಿದ. ನಡುರಾತ್ರಿಗೆ ಪಿಟೀಲು ಪ್ರೇತ ಬಂತು. ಒಂದೊಂದಾಗಿ ಚಿನ್ನದ ನಾಣ್ಯಗಳನ್ನು ಮಡಕೆಗೆ ಹಾಕತೊಡಗಿತು. ಎಷ್ಟು ಹಾಕಿದರೂ ತಳ ತೂತಾದ ಮಡಕೆ ತುಂಬುತ್ತಲೇ ಇರಲಿಲ್ಲ. ಕಡೆಗಂತೂ ಒಂದು ಮಡಕೆಯನ್ನೂ ತುಂಬಲಾಗದೆ ಸೋತ ಭೂತ, ʻದಯಾಮಯನಾದ ಓಂದಾ, ನನ್ನಲ್ಲಿ ಇರುವ ಸಂಪತ್ತನ್ನೆಲ್ಲಾ ಈ ಮಡಕೆಯಲ್ಲಿ ಹಾಕಿದರೂ ಮಡಕೆ ತುಂಬಲಿಲ್ಲ. ಆದರೆ ನನ್ನಲ್ಲಿ ಇನ್ನು ಏನೂ ಇಲ್ಲ. ದಯವಿಟ್ಟು ನನ್ನನ್ನು ಹೋಗಲು ಬಿಡುʼ ಎಂದು ಬೇಡಿಕೊಂಡಿತು. ʻನಿನ್ನ ವಿನಯಕ್ಕೆ ಮೆಚ್ಚಿದ್ದೇನೆ. ಸರಿ ನೀನಿನ್ನು ಹೋಗಬಹುದು, ಮತ್ತೆ ಬರಬೇಡʼ ಎಂದು ಅದನ್ನು ಕಳುಹಿಸಿದ ಓಂದಾ.
ಪಿಟೀಲು ಪ್ರೇತ ಕೊಟ್ಟ ಸಂಪತ್ತು ಓಂದಾ ಜೀವಮಾನಕ್ಕೂ ಸಾಕಾಗುವಷ್ಟಿತ್ತು. ಅಂದಿನಿಂದ ಅವನು ತನ್ನ ಕುಟುಂಬದೊಂದಿಗೆ ಸುಖವಾಗಿ ಬದುಕಿದ.
ಇದನ್ನೂ ಓದಿ: ಮಕ್ಕಳ ಕಥೆ: ಮರವಾಗಲು ಬಯಸಿದ ಶಿಲ್ಪಿ