ಈ ಕಥೆಯನ್ನು ಇಲ್ಲಿ ನೀವು ಕೇಳಬಹುದು:
ದೀಪ ಹಚ್ಚುವುದರಿಂದ ಕತ್ತಲೆಯನ್ನು ದೂರ ಮಾಡಬಹುದು ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ನಮ್ಮ ದೇಶದ ಹಲವಾರು ಸಂಸ್ಕೃತಿ- ಸಂಪ್ರದಾಯಗಳಲ್ಲಿ, ದೀಪ ಹಚ್ಚುವುದರಿಂದ ಸಮೃದ್ಧಿಯನ್ನೂ ಬರಮಾಡಿಕೊಳ್ಳಬಹುದು ಅಂತ ನಂಬಿದ್ದಾರೆ. ತಮಿಳುನಾಡಿನ ಮೂಲದ ಅಂಥದ್ದೊಂದು ಕಥೆ ಇಲ್ಲಿದೆ.
ಒಂದೂರಿನಲ್ಲಿ ಪಶುಪತಿ ಸೆಟ್ಟಿ ಅನ್ನುವ ವರ್ತಕನೊಬ್ಬ ಇದ್ದ. ಅವನಿಗೆ ವಿನೀತ ಅನ್ನುವ ಮಗ ಮತ್ತು ಗರ್ವಿ ಅನ್ನುವ ಮಗಳೂ ಇದ್ದರು. ಅವರಿಬ್ಬರೂ ಒಟ್ಟಿಗೆ ಆಡಾಡಿಕೊಂಡು ಬೆಳೆದರು. ಹಾಗೆ ಬೆಳೆಯುತ್ತಾ ಇರುವಾಗಲೇ, ಒಬ್ಬರಿಗೊಬ್ಬರು ಮಾತು ಕೊಟ್ಟಿದ್ದರು. ಏನಂತ? ಮುಂದೊಂದು ಕಾಲದಲ್ಲಿ ನಮಗೆ ಮಕ್ಕಳಾದರೆ ಅವರನ್ನು ಒಬ್ಬರನ್ನೊಬ್ಬರು ವಿವಾಹದ ಮೂಲಕ ತಂದುಕೊಳ್ಳೋಣ ಅಂತ. ಇಬ್ಬರೂ ಬೆಳೆದು ದೊಡ್ಡವರಾದರು. ಗರ್ವಿಯನ್ನು ಒಬ್ಬ ಶ್ರೀಮಂತ ವ್ಯಾಪಾರಿಗೆ ಕೊಟ್ಟು ಮದುವೆ ಮಾಡಲಾಯಿತು. ಅವಳಿಗೆ ಮೂವರು ಹೆಣ್ಣುಮಕ್ಕಳು ಹುಟ್ಟಿದರು. ವಿನೀತನಿಗೂ ಅನುರೂಪಳಾದ ಹುಡುಗಿಯೊಂದಿಗೆ ಮದುವೆ ಮಾಡಲಾಯಿತು. ಅವನಿಗೆ ಮೂವರು ಗಂಡು ಮಕ್ಕಳು ಹುಟ್ಟಿದರು. ಅವರೆಲ್ಲಾ ದೊಡ್ಡವರಾದ ಮೇಲೆ ತಮ್ಮ ಬಾಲ್ಯದ ಮಾತುಗಳನ್ನು ಪೂರ್ಣ ಮಾಡಬಹುದು ಎಂದು ಅಣ್ಣ-ತಂಗಿ ಸಂತೋಷದಿಂದಿದ್ದರು.
ಕಾಲ ಕಳೆಯಿತು. ಹಿರಿಯ ವರ್ತಕ ಪಶುಪತಿ ಸೆಟ್ಟಿ ದೇವರ ಪಾದ ಸೇರಿದ. ಆದರೆ ವ್ಯಾಪಾರ-ವಹಿವಾಟಿಗಾಗಿ ಆತ ಬಹಳಷ್ಟು ಸಾಲ ಮಾಡಿದ್ದ. ಅವೆಲ್ಲವನ್ನೂ ತೀರಿಸುವಂತೆ ಸಾಲಗಾರರು ಪಟ್ಟುಹಿಡಿದು ಕುಳಿತರು. ಬೇರೆ ದಾರಿ ಕಾಣದ ವಿನೀತ ಸೆಟ್ಟಿ, ತನ್ನ ಪಾಲಿನ ಆಸ್ತಿಯನ್ನು ಮಾರಿ ಸಾಲ ತೀರಿಸಿದ. ಸಾಲವೇನೋ ತೀರಿತು, ಆದರೆ ವಿನೀತನ ಕುಟುಂಬದ ಸಂಕಷ್ಟ ಆರಂಭವಾಯಿತು. ಸಕಲ ಅನುಕೂಲಗಳೊಂದಿಗೆ ಆರಾಮವಾಗಿದ್ದ ವಿನೀತನ ಕುಟುಂಬ, ಸಣ್ಣ ಮನೆಯಲ್ಲಿ, ಕಡಿಮೆ ಸಂಪಾದನೆಯಲ್ಲಿ ದಿನ ದೂಡಬೇಕಾಯಿತು. ಆದರೂ ಇರುವುದರಲ್ಲಿ ತೃಪ್ತಿ ಕಾಣಲು ಪ್ರಯತ್ನಿಸಿತು ಅವನ ಕುಟುಂಬ.
ವಿನೀತನ ತಂಗಿ ಗರ್ವಿಗೆ ತಳಮಳ ಆರಂಭವಾಯಿತು. ತನ್ನ ಹುಡುಗಿಯರನ್ನು ಅಣ್ಣನ ಹುಡುಗರಿಗೆ ಮದುವೆ ಮಾಡುವುದೆಂದು ಹಿಂದೆಯೇ ಮಾತಾಗಿದ್ದು ಹೌದು. ಆದರೀಗ ಪರಿಸ್ಥಿತಿ ಬದಲಾಗಿದೆಯಲ್ಲ, ಬಡವನ ಮನೆಗೆ ಮಕ್ಕಳನ್ನು ಹೇಗೆ ಮದುವೆ ಮಾಡುವುದು ಎಂಬ ಚಿಂತೆಗೆ ಬಿದ್ದಳು. ಮಾತ್ರವಲ್ಲ, ತನ್ನ ಮೊದಲಿಬ್ಬರು ಹೆಣ್ಣುಮಕ್ಕಳಿಗೆ ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಿಯೂ ಬಿಟ್ಟಳು. ಚಿಕ್ಕ ಮಗಳು ಸುಗುಣಿ ಮಾತ್ರ ಮನೆಯಲ್ಲಿ ಉಳಿದಿದ್ದಳು. ಈ ವಿಷಯ ತಿಳಿದ ವಿನೀತ ತುಂಬಾ ನೊಂದುಕೊಂಡ. ತನ್ನ ಮಕ್ಕಳಿಗೆ ತಂಗಿ ಮದುವೆ ಮಾಡಿಕೊಂಡಿದ್ದು ಅವನಿಗೆ ನೋವಾಗಲಿಲ್ಲ; ಎಷ್ಟಾದರೂ ಅನುಕೂಲವಂತರ ಮನೆಯ ಮಕ್ಕಳು, ತನ್ನ ಮನೆಯಲ್ಲಿ ಕಷ್ಟ ಪಡುವುದು ಅವನಿಗೂ ಬೇಕಿರಲಿಲ್ಲ. ಆದರೆ ಮದುವೆಗೆ ಕರೆಯನ್ನೂ ಕಳಿಸಲಿಲ್ಲವಲ್ಲ ತಂಗಿ ಎಂದು ಅವನಿಗೆ ಬೇಸರವಾಗಿತ್ತು. ಈ ವಿಷಯ ತಿಳಿದ ಬಂಧು-ಮಿತ್ರರೆಲ್ಲ ತಲೆಗೊಂದು ಮಾತಾಡಿದರು. ಕೆಲವರು ಗರ್ವಿಯನ್ನು ಬೈದರು, ಕೆಲವರು ವಿನೀತನನ್ನು ಹೀಯಾಳಿಸಿದರು. ಅಂತೂ ಊರೆಲ್ಲ ಸುದ್ದಿಯಾಗುವಂತಾಯ್ತು.
ಗರ್ವಿಯ ಕೊನೆಯ ಮಗಳು ಸುಗುಣಿಯ ಕಿವಿಗೂ ಈ ವಿಷಯ ತಲುಪಿತು. ಸೋದರ ಮಾವನಿಗೆ ಕೊಟ್ಟ ಮಾತನ್ನು ತನ್ನಮ್ಮ ಮುರಿದಿದ್ದು ತಿಳಿದು ಬೇಸರಗೊಂಡಳು. ʻಬಡವರಾದರೇನು, ಅವರೆಲ್ಲಾ ಒಳ್ಳೆಯವರು. ಇವತ್ತಿದ್ದ ಸಂಪತ್ತು ಮಾರನೆಯ ದಿನಕ್ಕೆ ಇರುವುದಿಲ್ಲ ಎಂಬುದನ್ನು ಮಾವನ ಮನೆಯ ವಿಷಯದಲ್ಲೇ ಕಂಡಾಗಿದೆಯಲ್ಲ. ಹಾಗಾದರೆ ಹಣಕ್ಕಲ್ಲ, ಗುಣಕ್ಕೆ ಮಣೆ ಹಾಕಬೇಕು ಎಂಬುದು ಸ್ಪಷ್ಟʼ ಎಂದು ಯೋಚಿಸಿದ ಆಕೆ ತನ್ನ ತಾಯಿಯೊಂದಿಗೆ ಮಾತಾಡಲು ನಿರ್ಧರಿಸಿದಳು.
ʻಅಮ್ಮಾ, ಮಾವನಿಗೆ ನೀನು ಮಾತು ಕೊಟ್ಟಿದ್ದ ವಿಷಯ ನನಗೆ ಗೊತ್ತಾಗಿದೆ. ಅಕ್ಕಂದಿರಂತೂ ಅವರವರ ಮನೆಗೆ ಹೋಗಿದ್ದಾರೆ. ಈಗ ನಾನು ಮದುವೆಯಾಗಿ ಹೋಗುವುದಿದ್ದರೆ ಮಾವನ ಮನೆಗೇʼ ಎಂದು ಹೇಳಿದಳು ಸುಗುಣಿ. ಮಗಳ ಮಾತಿನಿಂದ ಕೋಪಗೊಂಡ ಗರ್ವಿ, ʻನಿನಗೇನು ತಲೆ ಕೆಟ್ಟಿದೆಯೇ ಸುಗುಣಿ? ಅವರ ಮನೆಗೆ ಮದುವೆಯಾಗಿ ಹೋದರೆ ಊಟಕ್ಕೇನು ಮಾಡುತ್ತೀಯಾ? ಅದನ್ನೆಲ್ಲಾ ಯೋಚಿಸಿಯೇ ನಿನ್ನ ಅಕ್ಕಂದಿರನ್ನು ಬೇರೆ ಕಡೆ ಮದುವೆ ಮಾಡಿಕೊಟ್ಟಿದ್ದು. ಇಷ್ಟಾಗಿಯೂ ನಿನಗೆ ನಿನ್ನ ಹಠವೇ ಸರಿ ಎನಿಸಿದರೆ, ಮತ್ತೆ ನಾವ್ಯಾರೂ ನಿನ್ನ ಮುಖ ನೋಡುವುದಿಲ್ಲ, ನೆನಪಿರಲಿʼ ಎಂದಳು.
ಸುಗುಣಿಯ ಮಾತಿನಂತೆ, ವಿನೀತನ ಕೊನೆಯ ಮಗನೊಂದಿಗೆ ಮದುವೆ ನಿಶ್ಚಯವಾಯಿತು. ವಿನೀತನ ಮೊದಲಿಬ್ಬರು ಮಕ್ಕಳಿಗೆ ಈಗಾಗಲೇ ವಿವಾಹವಾಗಿತ್ತು. ಮದುವೆ ಮಾಡಿ ಮಗಳನ್ನು ಮನೆ ತುಂಬಿಸಿ ಬಂದ ಗರ್ವಿ ಮತ್ತೆ ಆ ಕಡೆ ತಿರುಗಿಯೂ ನೋಡಲಿಲ್ಲ. ತನ್ನ ಮನೆ, ಮನೆ-ಮಂದಿ ಮತ್ತು ಅಲ್ಲಿನ ಬಡತನವನ್ನು ಸುಗುಣಿ ಬೇಸರವಿಲ್ಲದೆ ಒಪ್ಪಿಕೊಂಡಳು. ವಿನೀತನ ಮನೆಮಂದಿಗೂ ಸುಗುಣಿಯನ್ನು ಕಂಡರೆ ಅಚ್ಚುಮೆಚ್ಚು ಎಂಬಂತಾಯ್ತು. ಮನೆಯ ಗಂಡಸರೆಲ್ಲ ಬೆಳಗೆದ್ದು ಕಾಡಿಗೆ ಹೋಗಿ, ಮುತ್ತುಗದ ಎಲೆಗಳನ್ನು ತರುತ್ತಿದ್ದರು. ಮನೆಯ ಮಹಿಳೆಯರೆಲ್ಲ ಅದನ್ನು ಸ್ವಚ್ಛಗೊಳಿಸಿ, ಪತ್ರಾವಳಿ ಹಚ್ಚುತ್ತಿದ್ದರು. ಇದನ್ನು ಸಂತೆಯಲ್ಲಿ ಮಾರಾಟ ಮಾಡಿ ಬಂದ ಹಣದಿಂದ ಅವರೆಲ್ಲರ ಜೀವನ ಸಾಗುತ್ತಿತ್ತು.
ಇದನ್ನೂ ಓದಿ | ಮಕ್ಕಳ ಕಥೆ | ರಾಜಕುಮಾರಿ ಮತ್ತು ಜಾದೂ ಪೆಟ್ಟಿಗೆಯಿಂದ ಹೊರಬರುವ ರಾಜ
ಒಮ್ಮೆ ಆ ಊರಿನ ರಾಜ ಅಭ್ಯಂಜನ ಮಾಡುವಾಗ ತನ್ನ ಕೊರಳಲ್ಲಿದ್ದ ರತ್ನದ ಹಾರವನ್ನು ಬಿಚ್ಚಿಟ್ಟುಕೊಂಡಿದ್ದ. ಫಳಫಳ ಹೊಳೆಯುತ್ತಿದ್ದ ಅದನ್ನು ಕಂಡು ಆಹಾರವೆಂದು ಭಾವಿಸಿದ ಹದ್ದೊಂದು ಅದರ ಮೇಲೆರಗಿ ಹೊತ್ತೊಯ್ದಿತು. ಅದನ್ನು ತಿನ್ನಲಾಗದು ಎಂದು ತಿಳಿದ ಮೇಲೆ ಎಲ್ಲೋ ಒಂದೆಡೆ ಬಿಸಾಡಿ ಹೋಯಿತು. ಹದ್ದು ಹಾಗೆ ಬಿಸಾಡಿದ್ದು, ಸುಗುಣಿಯ ಮನೆಯಂಗಳದಲ್ಲಿ. ಅದನ್ನು ಕಂಡ ಸುಗುಣಿ ಏನು ಮಾಡುವುದೆಂದು ತಿಳಿಯದೆ ಎತ್ತಿಟ್ಟುಕೊಂಡಳು. ಇತ್ತ, ತನ್ನ ರತ್ನದ ಹಾರದ ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿ ರಾಜ ಡಂಗುರ ಹೊಡೆಯಿಸಿದ. ಈ ವಿಷಯ ಸುಗುಣಿಯ ಕಿವಿಗೂ ಬಿತ್ತು. ತನ್ನ ಮನೆಯವರನ್ನೆಲ್ಲಾ ಕರೆದು ಆ ಹಾರವನ್ನು ತೋರಿಸಿದ ಸುಗುಣಿ, ಹದ್ದು ಬಿಸಾಡಿ ಹೋಗಿದ್ದನ್ನು ತಿಳಿಸಿದಳು. ಮಾತ್ರವಲ್ಲ, ಅದನ್ನು ನಾವೆಲ್ಲರೂ ಅರಮನೆಗೆ ತೆಗೆದುಕೊಂಡು ಹೋಗೋಣ. ಆಗ ರಾಜನಲ್ಲಿ ನಾನು ವಿಚಿತ್ರವಾದ ಬಹುಮಾನವನ್ನು ಕೇಳುತ್ತೇನೆ. ಅದಕ್ಕೆ ನೀವೆಲ್ಲರೂ ಒಪ್ಪಬೇಕು ಎಂದು ಕೋರಿದಳು. ಎಲ್ಲರಿಗೂ ಸುಗುಣಿಯಲ್ಲಿ ಏನೋ ಭರವಸೆ, ಈ ಜಾಣ ಹುಡುಗಿ ಸಿಕ್ಕಿದ ಅವಕಾಶವನ್ನು ಹಾಳು ಮಾಡುವುದಿಲ್ಲ ಎಂದು. ರತ್ನದ ಹಾರದೊಂದಿಗೆ ಎಲ್ಲರೂ ಅರಮನೆಗೆ ಹೊರಟರು.
ಹಾರವನ್ನು ಅರಸನ ಮುಂದಿಟ್ಟ ಸುಗುಣಿ, ಹದ್ದು ಎಸೆದು ಹೋಗಿದ್ದು ತನಗೆ ದೊರೆತಿದೆ ಎಂದು ಹೇಳಿದಳು. ಅವಳ ಪ್ರಾಮಾಣಿಕತೆಯನ್ನು ಕಂಡು ಸಂತೋಷಗೊಂಡ ರಾಜ, ʻಕೇಳು ಹುಡುಗಿ, ನಿನಗೇನು ಬೇಕು?ʼ ಎಂದ. ʻಮಹಾಸ್ವಾಮಿ, ನನ್ನದೊಂದು ಸಣ್ಣ ಬೇಡಿಕೆಯನ್ನು ದೊಡ್ಡ ಮನಸ್ಸು ಮಾಡಿ ನಡೆಸಿಕೊಡಬೇಕುʼ ಎಂದು ವಿನಮ್ರವಾಗಿ ಕೇಳಿದಳು ಸುಗುಣಿ. ಕೇಳು ಎನ್ನುವಂತೆ ಸನ್ನೆ ಮಾಡಿದ ರಾಜ. ʻಮಹಾಪ್ರಭು, ಒಂದು ಶುಕ್ರವಾರ ಸಂಜೆ ಇಡೀ ಊರಿನ ದೀಪಗಳೆಲ್ಲಾ ಆರಿರಬೇಕು, ಅರಮನೆಯದ್ದೂ ಸೇರಿದಂತೆ. ಈ ನಿಮ್ಮ ಸೇವಕರ ಮನೆಯ ದೀಪವನ್ನು ಮಾತ್ರ ಹೊತ್ತಿಸಲು ಅನುಮತಿ ಕೊಡಬೇಕು. ಇಡೀ ಊರಿನ ಕತ್ತಲಿನಲ್ಲಿ, ನನ್ನ ಮನೆಯ ದೀಪ ಹೇಗೆ ಕಾಣುತ್ತದೆ ಎಂಬುದನ್ನು ನೋಡುವ ಬಯಕೆ ನನಗೆʼ ಎಂದಳು ಸುಗುಣಿ. ʻಸರಿ, ಬರುವ ಶುಕ್ರವಾರವೇ ಇದಕ್ಕೆ ಅವಕಾಶ ಒದಗಿಸಲಾಗುವುದುʼ ಎಂದು ಅಪ್ಪಣೆ ಕೊಡಿಸಿದ ರಾಜ. ರಾಜಾಜ್ಞೆ ಅಂದ ಮೇಲೆ ಕೇಳಬೇಕೆ? ಬರುವ ಶುಕ್ರವಾರ ಸಂಜೆ ಯಾರ ಮನೆಯಲ್ಲೂ ದೀಪ ಹೊತ್ತಿಸುವ ಹಾಗಿಲ್ಲ ಎಂದು ಡಂಗುರ ಹೊಡೆಸಲಾಯಿತು.
ತನ್ನಲ್ಲಿದ್ದ ಕಡೆಯ ಒಡವೆಯನ್ನೂ ಮಾರಿದ ಸುಗುಣಿ, ಸಾವಿರಾರು ಹಣತೆಗಳನ್ನೂ ಅದಕ್ಕೆ ಹಾಕುವಷ್ಟು ಎಣ್ಣೆಯನ್ನೂ ಖರೀದಿಸಿದಳು. ಮನೆಗೆ ಬಂದವಳು ಮನೆಮಂದಿಯನ್ನೆಲ್ಲಾ ಕರೆದು, ʻನೋಡಿ, ಇವತ್ತು ಸಂಜೆ ಸಾವಿರ ದೀಪಗಳನ್ನು ನಮ್ಮ ಮನೆಯ ಒಳ-ಹೊರಗೆ ಹೊತ್ತಿಸಬೇಕು. ಒಬ್ಬರು ಹಿಂಬಾಗಿಲಲ್ಲಿ ಮತ್ತೊಬ್ಬರು ಮುಂಬಾಗಿಲಲ್ಲಿ ಕಾವಲಿರಿ. ಯಾರಾದರೂ ಲಕ್ಷಣವಾಗಿ ಅಲಂಕರಿಸಿಕೊಂಡ ಸ್ತ್ರೀಯರು ಮನೆಯೊಳಗೆ ಹೋಗಲು ಯತ್ನಿಸಿದರೆ, ಅವರನ್ನು ತಡೆಯಿರಿ. ಇನ್ನೆಂದೂ ಈ ಮನೆಯಿಂದ ಹೊರಗೆ ಹೋಗುವುದಿಲ್ಲ ಎಂದಾದರೆ ಮಾತ್ರ ಒಳಗೆ ಹೋಗಲು ಅವಕಾಶ ಎಂದು ಅವರಿಂದ ಮಾತು ಪಡೆಯಿರಿ. ಹಾಗೆಯೇ ಯಾವುದಾದರೂ ಸ್ತ್ರೀ ಮನೆಯಿಂದ ಹೊರಗೆ ಹೋಗಲು ಯತ್ನಿಸಿದರೆ ಅವಳನ್ನೂ ತಡೆದು, ಇನ್ನೆಂದಿಗೂ ಈ ಮನೆಗೆ ಹಿಂದಿರುಗಲಾರೆನೆಂಬಂತೆ ಮಾತು ಪಡೆಯಿರಿʼ ಎಂದು ವಿವರಿಸಿದಳು. ಇವಳೇನು ಮಾಡುತ್ತಿದ್ದಾಳೆ ಎಂಬುದು ಮನೆಯವರಿಗೆ ಸ್ಪಷ್ಟವಾಗದಿದ್ದರೂ, ಸುಗುಣಿಯ ಮಾತಿನಲ್ಲಿ ಪೂರ್ಣ ನಂಬಿಕೆಯಿತ್ತು.
ಇದನ್ನೂ ಓದಿ | ಮಕ್ಕಳ ಕಥೆ | ರಾಜಕುಮಾರಿ ಮತ್ತು ಬುರುಡೆ ಭೂತ
ಸಂಜೆಯಾಯಿತು. ಊರೆಲ್ಲ ಕತ್ತಲೆ. ವಿನೀತನ ಮನೆಯಲ್ಲಿ ಬೆಳ್ಳಂಬೆಳಕು! ಊರೊಳಗೆ ಬಂದ ಅಷ್ಟ ಲಕ್ಷ್ಮಿಯರಿಗೆ ಬೇರೆ ಯಾರ ಮನೆಯೊಳಗೆ ಹೋಗುವುದಕ್ಕೂ ಕತ್ತಲೆ. ನೇರ ಸುಗುಣಿಯ ಮನೆಯೆಡೆಗೆ ಬಂದರು. ಅವರನ್ನು ಬಾಗಿಲಲ್ಲಿ ತಡೆಯಲಾಯಿತು, ಇನ್ನೆಂದಿಗೂ ಮನೆಯಿಂದ ಹೊರಗೆ ಹೋಗೆ ಎಂಬಂತೆ ಮಾತನ್ನೂ ಪಡೆಯಲಾಯಿತು. ಅದಾಗಿ ಕೆಲವೇ ನಿಮಿಷಗಳಲ್ಲಿ ಸ್ತ್ರೀಯೊಬ್ಬಳು ಹೊರಗೆ ಬರುವುದಕ್ಕೆ ಯತ್ನಿಸಿದಳು. ಅವಳನ್ನೂ ತಡೆದ ಮನೆಮಂದಿ, ಇನ್ನೆಂದಿಗೂ ಈ ಮನೆಯೆಡೆಗೆ ಬರಬಾರದು ಎಂದು ಹೇಳಿದರು. ʻಇಲ್ಲ ಬರುವುದಿಲ್ಲ, ಇಷ್ಟೊಂದು ಬೆಳಕಿರುವಲ್ಲಿ, ಅಷ್ಟ ಲಕ್ಷ್ಮಿಯರೆಲ್ಲ ಇರುವಲ್ಲಿ, ಈ ದರಿದ್ರ ಲಕ್ಷ್ಮಿಗೇನು ಕೆಲಸ? ಇನ್ನು ಯಾವತ್ತೂ ಬರುವುದಿಲ್ಲʼ ಎಂದ ಆಕೆ ಕತ್ತಲಲ್ಲೇ ಕರಗಿಹೋದಳು. ಸುಗುಣಿಯ ಮನೆಯಲ್ಲಿ ಮತ್ತೆ ಸಮೃದ್ಧಿ ನೆಲೆಗೊಂಡಿತು. ಹಾಲು-ಹೈನ, ದವಸ-ಧಾನ್ಯ, ಸಿರಿ-ಸಂಪತ್ತು ಎಲ್ಲವೂ ಒದಗಿಬಂದವು. ಹಾಗಾಗಿ ಬೆಳಕಿನಿಂದ ಜ್ಞಾನ, ಸಿರಿ, ಸಮೃದ್ಧಿ ಎಲ್ಲವೂ ಬರತ್ತೆ ಅನ್ನುವ ನಂಬಿಕೆಗೆ ಈ ಕಥೆ ಪುಷ್ಟಿಕೊಡತ್ತೆ.