ಒಂದಾನೊಂದು ಊರಿನಲ್ಲಿ ಬಡವನೊಬ್ಬ ತನ್ನ ಒಬ್ಬನೇ ಮಗನೊಂದಿಗೆ ವಾಸವಾಗಿದ್ದ. ಕೆಲ ದಿನಗಳ ಬಳಿಕ ಆ ಬಡವ ಕಾಲವಾದ ನಂತರ, ಅವರ ಮಗ ಒಬ್ಬೊಂಟಿಯಾದ. ಅವನ ಬಳಿ ಹೆಚ್ಚಿನ ಆಸ್ತಿಯೂ ಇರಲಿಲ್ಲ. ಒಂದು ನಾಯಿ, ಒಂದು ಬೆಕ್ಕು, ಸ್ವಲ್ಪ ಭೂಮಿ ಮತ್ತು ಕೆಲವು ಕಿತ್ತಳೆ ಹಣ್ಣಿನ ಮರಗಳು ಮಾತ್ರ ಅವನ ಬಳಿ ಇದ್ದವು.
ತನ್ನ ನಾಯಿಯನ್ನು ಆತ ನೆರೆಮನೆಯವರಿಗೆ ಮಾರಿದ. ಹಾಗೆಯೇ ಭೂಮಿ ಮತ್ತು ಹಣ್ಣಿನ ಮರಗಳನ್ನೂ ಆತ ವಿಕ್ರಯಿಸಿದ. ಬೆಕ್ಕು ಮಾತ್ರ ಅವನ ಬಳಿ ಉಳಿಯಿತು. ತನ್ನ ಆಸ್ತಿಯನ್ನು ಮಾರಾಟ ಮಾಡಿದ್ದರಿಂದ ಬಂದ ದುಡ್ಡನ್ನೆಲ್ಲಾ ಸೇರಿಸಿ ಆತ ಒಂದು ಪಿಟೀಲು ಖರೀದಿಸಿದ. ಬಹಳ ಕಾಲದಿಂದ ಆತನಿಗೆ ಪಿಟೀಲು ನುಡಿಸಬೇಕೆಂದು ಆಸೆಯಿತ್ತು. ಆದರೆ ಖರೀದಿಸಲು ಹಣವಿರಲಿಲ್ಲ. ಈಗ ಆ ಆಸೆ ನೆರವೇರಿತು. ಒಂಟಿಯಾಗಿ ಇರುತ್ತಿದ್ದರಿಂದ ಅವನೊಂದಿಗೆ ಮಾತಾಡಲು ಯಾರೂ ಇರಲಿಲ್ಲ. ಹಾಗಾಗಿ ತನ್ನ ಮನದ ಮಾತುಗಳನ್ನೆಲ್ಲಾ ಪಿಟೀಲಿನ ಮೂಲಕ ಹಾಡಾಗಿ ಹರಿಸಿದ. ಇದರಿಂದ ಜಗತ್ತಿನ ಅತಿ ಸುಂದರ ಸಂಗೀತ ಸೃಷ್ಟಿಯಾಯಿತು.
ಕೆಲಸವನ್ನು ಅರಸುತ್ತಾ ಅರಸನ ಅರಮನೆಗೆ ತೆರಳಿದ ಹುಡುಗ. ಅಲ್ಲಿ ರಾಜನ ಕುರಿಗಳನ್ನು ಕಾಯುವುದಕ್ಕೆ ತನ್ನನ್ನು ನೇಮಿಸಿಕೊಳ್ಳುವಂತೆ ಕೋರಿದ. ಆದರೆ ರಾಜನ ಬಳಿ ಈಗಾಗಲೇ ಸಾಕಷ್ಟು ಕುರಿಗಾಹಿಗಳಿದ್ದರು. ತನಗೆ ಕೆಲಸ ದೊರೆಯಲಿಲ್ಲವೆಂದು ಹೆಚ್ಚು ತಲೆಕೆಡಿಸಿಕೊಳ್ಳದ ಆತ, ಗೊಂಡಾರಣ್ಯದೊಳಗೆ ಹೋಗಿ ಪಿಟೀಲು ನುಡಿಸತೊಡಗಿದ. ಅವನು ನುಡಿಸಿದ ಸಂಗೀತ ಎಲ್ಲೆಡೆ ಅಲೆಯಲೆಯಾಗಿ ತೇಲಿಬರತೊಡಗಿತು. ಸಮೀಪದ ಹುಲ್ಲುಗಾವಲಿನಲ್ಲಿ ರಾಜನ ಅರಮನೆಯ ಕುರಿಗಳು ಮೇಯುತ್ತಿದ್ದವು. ಅವುಗಳ ಬೆನ್ನಿಗೆ ಕುರಿಗಾಹಿಗಳೂ ಇದ್ದರು. ಹುಡುಗನ ಸಂಗೀತವನ್ನು ಕೇಳಿದ ಕುರಿಗಳು ಅದರೆಡೆಗೆ ನಡೆಯಲಾರಂಭಿಸಿದವು.
ಇದ್ದಕ್ಕಿದ್ದಂತೆ ತಮ್ಮ ಕುರಿಗಳೆಲ್ಲಾ ಎಲ್ಲಿ ಹೋದವು ಎಂಬುದು ಅದನ್ನು ಕಾಯುವವರಿಗೆ ತಿಳಿಯಲಿಲ್ಲ. ಅವರೆಲ್ಲಾ ಅರಣ್ಯದ ಒಳಗೆ ಹೋಗಿ ಹುಡುಕತೊಡಗಿದರು. ಸಂಗೀತದ ರವವನ್ನರಸಿ ಕುರುಬರು ನಡೆಯುತ್ತಿದ್ದರೆ, ಅವರಿಗೆ ಒಂದೊಂದು ಬಾರಿ ಒಂದೊಂದು ದಿಕ್ಕಿನಿಂದ ಪಿಟೀಲಿನ ದನಿ ಕೇಳಿಬರುತ್ತಿತ್ತು. ಹುಡುಕೀಹುಡುಕಿ ಸುಸ್ತಾದ ಕುರುಬರು, ಇನ್ನು ಕಾಡಿನಲ್ಲಿ ತಾವೂ ಕಳೆದು ಹೋಗಬಹುದೆಂದು ಹೆದರಿ ಅರಮನೆಗೆ ಮರಳಿದರು.
ಮಂದೆಯಿಂದ ಬೇರ್ಪಟ್ಟ ಕುರಿಗಳು ಸಂಗೀತದ ದಿಕ್ಕಿಗೇ ಹೆಜ್ಜೆ ಹಾಕುತ್ತಾ ಬಂದು ಹುಡುಗ ಮತ್ತು ಬೆಕ್ಕಿರುವಲ್ಲಿಗೆ ತಲುಪಿದವು. ಕುರಿಗಳನ್ನು ನೋಡಿದ ಹುಡುಗನಿಗೆ ಸಂತೋಷವಾಯಿತು. ಇದರಿಂದ ಆನಂದದ ಗೀತೆಯೊಂದನ್ನು ಆತ ನುಡಿಸತೊಡಗಿದ. ಬೆಕ್ಕಿನೊಂದಿಗೆ ಕುರಿಗಳೆಲ್ಲಾ ನರ್ತಿಸತೊಡಗಿದವು. ಇವನ ಸಂಗೀತ ಕೇಳಿ ಹಂದಿಗಳ ಹಿಂಡೊಂದು ಅಲ್ಲಿಗೆ ಬಂತು. ಸಂತೋಷದಿಂದ ಅವೂ ನರ್ತಿಸತೊಡಗಿದವು. ಬೆನ್ನಿಗೇ ಮಂಗಗಳ ಹಿಂಡೊಂದು ಅಲ್ಲಿಗೆ ಹಾರಿತು. ಸಂತಸಕ್ಕೆ ಅವು ಕುಣಿಯುತ್ತಾ ಸಿಕ್ಕಾಪಟ್ಟೆ ಗದ್ದಲ ಮಾಡತೊಡಗಿದವು. ಇದರಿಂದ ಪಿಟೀಲು ನುಡಿಸುವುದನ್ನು ನಿಲ್ಲಿಸುವುದಾಗಿ ಹುಡುಗ ಗದರಿದ. ಮಂಗಗಳು ಗಲಾಟೆ ಕಡಿಮೆ ಮಾಡಿಕೊಂಡು ಕುಣಿಯತೊಡಗಿದವು.
ಹಂದಿ ಮತ್ತು ಮುಳ್ಳುಹಂದಿಗಳಿಗೂ ಈ ಸಂಗೀತ ಕೇಳಿತು. ಈ ಸಂಗೀತ ನೃತ್ಯದ ದಿಬ್ಬಣಕ್ಕೆ ಈ ಪ್ರಾಣಿಗಳೂ ಸೇರಿಕೊಂಡವು. ಜಿಂಕೆ, ಮೊಲಗಳಿಂದ ಹಿಡಿದು ಕಾಡುಬೆಕ್ಕು ಹುಲಿಯವರೆಗೆ ನಾನಾ ರೀತಿಯ ಪ್ರಾಣಿಗಳು ಸಂತೋಷದಿಂದ ಈ ದಿಬ್ಬಣದಲ್ಲಿ ಕುಣಿಯುತ್ತಾ ಹೊರಟವು. ಹಾವುಗಳಿಗೆ ತಮಗೂ ಕಾಲಿದ್ದಿದ್ದರೆ ಒಳ್ಳೆಯದು ಎನಿಸುವಷ್ಟು ಈ ದೃಶ್ಯ ಆಕರ್ಷಕವಾಗಿತ್ತು. ಹಕ್ಕಿಗಳು ತಮಗೆ ತೋಚಿದ ರೀತಿಯಲ್ಲಿ ಹಾರಿ-ಕುಣಿದು-ಕುಪ್ಪಳಿಸಿದವು. ಆ ಕಾಡಿನಲ್ಲಿ ಕಾಲಿರುವ ಎಲ್ಲಾ ಪ್ರಾಣಿಗಳೂ ತಮಗೆ ಬಂದಂತೆ ಕುಣಿಯುತ್ತಿದ್ದವು.
ಇದನ್ನೂ ಓದಿ: ಮಕ್ಕಳ ಕಥೆ: ಹಾಡು ಮಾರಾಟಕ್ಕಿದೆ!
ಗೀತ-ನೃತ್ಯಗಳೊಂದಿಗೆ ನಲಿದಾಡುತ್ತಾ ಹೋಗುತ್ತಿದ್ದ ಹುಡುಗ ಮತ್ತವನ ಪ್ರಾಣಿಗಳ ದಿಬ್ಬಣ, ದೈತ್ಯರ ಸಾಮ್ರಾಜ್ಯದ ಬಾಗಿಲಿಗೆ ಬಂದು ನಿಂತಿತು. ಇವರನ್ನು ನೋಡಿ ನಕ್ಕೂನಕ್ಕೂ ಬಿದ್ದೇ ಹೋಗುವಷ್ಟಾದ ದ್ವಾರಪಾಲಕರು ಅವರನ್ನು ದೈತ್ಯ ರಾಜನ ಬಳಿಗೆ ಕರೆದೊಯ್ದರು. ರಾಜ ಸಹ ತನ್ನ ಸಿಂಹಾಸನದಿಂದ ಕೆಳಗೆ ಬಿದ್ದೇ ಹೋಗುವಂತೆ ನಗತೊಡಗಿದ. ಅವನ ನಗುವಿಗೆ ಭೂಮಿಯೆಲ್ಲಾ ನಡುಗತೊಡಗಿತು. ಎಲ್ಲರಿಗೂ ಅವನ ಕೋಪದ ಘರ್ಜನೆಯನ್ನು ಮಾತ್ರವೇ ಕೇಳಿ ಗೊತ್ತಿದ್ದರಿಂದ, ಈ ನಗುವಿನ ಸ್ವರೂಪ ಹೆದರಿಕೆ ಹುಟ್ಟಿಸಿಬಿಟ್ಟತು! ರಾಜನಿಗಂತೂ ತನಗೂ ಕುಣಿಯಲು ಬಂದಿದ್ದರೆ ಎನಿಸಿದ್ದು ಸತ್ಯ. ʻಸದ್ಯ! ಕುಣಿಯಲು ಬಾರದೆ ಬಚಾವಾದೆವುʼ ಎಂದು ಉಳಿದವರು ಭಾವಿಸಿದ್ದೂ ಸತ್ಯ. ದೈತ್ಯ ರಾಜನಿಗೊಬ್ಬಳು ದೈತ್ಯ ಕುಮಾರಿಯಿದ್ದಳು. ಅವಳಿಗೆ ಹುಟ್ಟಿನಿಂದ ನಗುವೇ ಬಂದಿರಲಿಲ್ಲ. ಅವಳನ್ನು ನಗಿಸಿದವರಿಗೆ ಅರ್ಧ ರಾಜ್ಯವನ್ನೇ ಕೊಡುವುದಾಗಿ ರಾಜ ಹಿಂದೆಯೇ ಡಂಗುರ ಸಾರಿದ್ದ. ಆದರೆ ಎಲ್ಲಾ ವ್ಯರ್ಥವಾಗಿತ್ತು.
ಇದೀಗ ಈ ಹುಡುಗನ ದಿಬ್ಬಣವನ್ನು ರಾಜಕುಮಾರಿಯ ಬಳಿಗೆ ಕಳುಹಿಸಿಕೊಡಲಾಯಿತು. ಇವರನ್ನೆಲ್ಲಾ ನೋಡುತ್ತಿದ್ದಂತೆ ಎಂದೂ ಕಾಣದ ಸಂತೋಷ, ನಗು ಅವಳ ಸುಂದರ ಮೊಗದಲ್ಲಿ ಮೂಡಿಬಂತು. ರಾಜನಿಗಂತೂ ಹೇಳತೀರದಷ್ಟು ಸಂತೋಷ.
ಈಗ ಹುಡುಗನೂ ದೈತ್ಯರ ಅರ್ಧ ರಾಜ್ಯದ ಒಡೆಯ. ದೈತ್ಯರೆಲ್ಲಾ ಅವನ ಸೇವೆಗೆಂದೇ ಇರುತ್ತಿದ್ದರು. ಅವನೊಂದಿಗೆ ಬಂದ ಪ್ರಾಣಿಗಳೆಲ್ಲಾ ದೈತ್ಯರಂತೆಯೇ ಬೆಳೆದರೆ, ಹುಡುಗ-ರಾಜ, ಪಿಟೀಲು ಮತ್ತು ಅವನ ಬೆಕ್ಕು ಮಾತ್ರ ಮೂಲ ಸ್ವರೂಪದಲ್ಲೇ ಉಳಿದರು.
ಇದನ್ನೂ ಓದಿ: ಮಕ್ಕಳ ಕಥೆ: ಹಂದಿ ನೀಡಿದ ಅದೃಷ್ಟದ ಉಂಗುರ