Site icon Vistara News

ಮಕ್ಕಳ ಕಥೆ: ಆನೆ ಬಾಲ ಹಿಡಿದು ಸ್ವರ್ಗಕ್ಕೆ ಹೋದ ಗೋಪಾಲ

trip to heaven

ಒಂದಾನೊಂದು ಊರಿನಲ್ಲಿ ಗೋಪಾಲ ಎಂಬೊಬ್ಬ ನೇಕಾರ ವಾಸಿಸುತ್ತಿದ್ದ. ಚಂದದ ರೇಷ್ಮೆ ಸೀರೆಗಳನ್ನು ನೇಯುತ್ತಿದ್ದ ಆತ, ಅದನ್ನು ಪೇಟೆ ಬೀದಿಯಲ್ಲಿದ್ದ ತನ್ನ ಸಣ್ಣ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ. ದಿನದ ವ್ಯಾಪಾರ ಚನ್ನಾಗಿಯೇ ಇರುತ್ತಿದ್ದರಿಂದ ಆತ ನೆಮ್ಮದಿಯಿಂದ ಬದುಕುತ್ತಿದ್ದ.

ಎಲ್ಲರಿಗೂ ಇರುವಂತೆ ಅವನಿಗೆ ಆಸೆಗಳಿದ್ದವು. ಆತನ ಅಕ್ಕಪಕ್ಕದ ಅಂಗಡಿಯವರಿಗೆ ದೊಡ್ಡ ಅಂಗಡಿ ಇಡಬೇಕು, ದೊಡ್ಡ ಮನೆ ಕಟ್ಟಿಸಬೇಕು, ರಾಜನೊಂದಿಗೆ ಕುಳಿತು ಮೃಷ್ಟಾನ್ನ ಉಣ್ಣಬೇಕು… ಎಂಬಂಥ ಏನೇನೋ ಆಸೆಗಳಿದ್ದವು. ಆದರೆ ಗೋಪಾಲನಿಗೆ ಹಾಗಲ್ಲ, ಜೀವಂತ ಇರುವಾಗಲೇ ಸ್ವರ್ಗಕ್ಕೊಮ್ಮೆ ಹೋಗಿಬರಬೇಕೆಂಬ ಆಸೆಯಿತ್ತು! ತನ್ನ ಈ ಬಯಕೆ ನೆರವೇರಿಸಿಕೊಳ್ಳಲು ಆತ ಹಲವರಲ್ಲಿ ʻದಾರಿ ಯಾವುದು ಸ್ವರ್ಗಕ್ಕೆ?ʼ ಎಂದು ಕೇಳುತ್ತಾ ಅಲೆದಾಡಿದ್ದುಂಟು. ಆದರೆ ಇಂಥ ಪ್ರಶ್ನೆಗೆ ಉತ್ತರ ಯಾರಲ್ಲಿ ತಾನೇ ಇದ್ದೀತು?

ಒಂದು ಬಾರಿ ಸರ್ವಜ್ಞ ಸನ್ಯಾಸಿಯೊಬ್ಬ ಆ ಊರಿಗೆ ಬಂದ. ಊರಿನ ಜನರೆಲ್ಲಾ ತಮ್ಮ ಪ್ರಶ್ನೆಗಳನ್ನು ಆತನಲ್ಲಿ ಕೇಳುತ್ತಿದ್ದರು. ಈ ಅವಕಾಶವನ್ನು ಗೋಪಾಲ ಹೇಗೆ ಬಿಟ್ಟಾನು? ಅವನಲ್ಲಿಯೂ ಹೋಗಿ ಸ್ವರ್ಗದ ದಾರಿ ಯಾವುದು ಎಂದು ತಿಳಿಸುವಂತೆ ದುಂಬಾಲು ಬಿದ್ದ. ಹಾಗೆಲ್ಲಾ ಸ್ವರ್ಗಕ್ಕೆ ಹೋಗಿ ಬರುವುದಕ್ಕೆ ಸ್ವರ್ಗವೇನು ನೆಂಟರ ಮನೆಯೆ ಎಂದು ಸನ್ಯಾಸಿ ನಾನಾ ರೀತಿಯಲ್ಲಿ ತಿಳಿಹೇಳಿದರೂ ಗೋಪಾಲ ಕೇಳಲಿಲ್ಲ. ಇವನ ಕಾಟ ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿದ ಸನ್ಯಾಸಿ, ಸಣ್ಣ ತೊರೆಯೊಂದರ ದಂಡೆಯ ಮೇಲೆ ಒಂಟಿ ಕಾಲಲ್ಲಿ ನಿಂತು 24 ತಾಸು ನಾರಾಯಣ ಜಪ ಮಾಡಿದರೆ ಸ್ವರ್ಗದ ದಾರಿ ತೆರೆಯುತ್ತದೆ ಎಂದು ಹೇಳಿದ. ಗೋಪಾಲನ ಸಂತೋಷಕ್ಕೆ ಮಿತಿಯೇ ಇಲ್ಲ. ಅಂತೂ ದಾರಿ ಸಿಕ್ಕಿತು ಎಂದು ತೊರೆಯೊಂದರ ದಂಡೆಯತ್ತ ತೆರಳಿದ.

ಸನ್ಯಾಸಿ ಹೇಳಿದಂತೆಯೇ ಮಾಡಿದ ಗೋಪಾಲ. ನಡುರಾತ್ರಿಯ ಹೊತ್ತಿಗೆ ಆಗಸದಲ್ಲಿ ಬೆಳ್ಳಿ ಬೆಳಕೊಂದು ಪ್ರತ್ಯಕ್ಷವಾಯಿತು. ಸಣ್ಣದಾಗಿದ್ದ ಆ ಬೆಳಕು ನಿಧಾನವಾಗಿ ಕೆಳಗಿಳಿಯುತ್ತಾ ದೊಡ್ಡದಾಯಿತು. ಹತ್ತಿರ ಬಂದಾಗ ನೋಡಿದರೆ… ಇಂದ್ರನ ಬಿಳಿಯಾನೆ, ಐರಾವತ! ಕುಣಿದಾಡುವಷ್ಟು ಖುಷಿಯಾಯಿತು ಗೋಪಾಲನಿಗೆ. ಆದರೆ ನೋಡನೋಡುತ್ತಿದ್ದಂತೆಯೇ ಆ ಐರಾವತ ಮರಳಿ ಹೊರಟಿತು. ಗೋಪಾಲ ಓಡುತ್ತಾ ಹೋಗಿ ಅದರ ಬಾಲ ಹಿಡಿದ. ಐರಾವತ ಮೇಲೇರುತ್ತಿದ್ದಂತೆಯೇ, ಅದರೊಂದಿಗೆ ನೇತಾಡುತ್ತಾ ಗೋಪಾಲನೂ ಮೇಲೇರಿದ. ಆನೆ ನಿಲ್ಲುತ್ತಿದ್ದಂತೆಯೇ ಕೈ ಒದರಿಕೊಳ್ಳುತ್ತಾ ಕೆಳಗಿಳಿದ ಗೋಪಾಲ.

ನೋಡುತ್ತಾನೆ… ಸ್ವರ್ಗ! ಎಲ್ಲೆಡೆ ಮೋಡ ಮುಸುಕಿದ ವಾತಾವರಣ, ಆದರೂ ಬೆಚ್ಚಗಿತ್ತು. ನಾನಾ ಬಗೆಯ ಭಕ್ಷ್ಯ-ಭೋಜ್ಯಗಳು, ಆದರೆ ಅಂಥ ಹಸಿವಿರಲಿಲ್ಲ, ಸುರಕನ್ನಿಕೆಯರ ನೃತ್ಯ, ಅಮೃತ ಸುಧೆಯಂಥ ಗಾಯನ, ನೋಡಿದಷ್ಟೂ ತಣಿಯಲಿಲ್ಲ… ಚಂದವೋ ಚಂದ! ಎಲ್ಲೆಡೆ ನೋಡಿ, ಓಡಾಡಿ ಗೋಪಾಲ ಸಂತೋಷಗೊಂಡ. ಇದನ್ನೀಗ ಭೂಮಿಯಲ್ಲಿರುವ ತನ್ನ ಗೆಳೆಯರಿಗೆ ಹೇಳಬೇಕಲ್ಲ… ಐರಾವತದ ಮುಂದಿನ ಪ್ರಯಾಣದಲ್ಲಿ ಮತ್ತೆ ಅದರ ಬಾಲಕ್ಕೆ ಜೋತು ಬಿದ್ದ ಗೋಪಾಲ. ಎಂದಿನಂತೆ ರಾತ್ರಿಯಾಗುವಷ್ಟರಲ್ಲಿ ಅವನೂರಲ್ಲಿ ಇಳಿಸಿತು ಐರಾವತ.

ಓಡುತ್ತಾ ಕುಣಿಯುತ್ತಾ ಮನೆಗೆ ಬಂದ ಗೋಪಾಲ, ಸ್ವರ್ಗದ ಕಥೆಗಳನ್ನು ರಂಗುರಂಗಾಗಿ ವರ್ಣಿಸಿದ. ʻನೀನೊಬ್ಬನೇ ನೋಡಿದರೆ ಸಾಕಾ ಸ್ವರ್ಗವನ್ನು, ನಮಗೂ ತೋರಿಸುʼ ಎಂದವರು ದುಂಬಾಲು ಬಿದ್ದರು.

ಗೋಪಾಲನಿಗೂ ಅವರ ಬಗ್ಗೆ ಕನಿಕರ ಬಂತು. ತೊರೆಯ ಬಳಿ ಬಂದು ಎಲ್ಲರೂ ಒಂಟಿ ಕಾಲಲ್ಲಿ ಧ್ಯಾನ ಮಾಡಬೇಕು ಎಂದು ಹೇಳಿದ. ಇದಕ್ಕೆ ಒಪ್ಪಿದವರೆಲ್ಲರೂ ತೊರೆಯ ಬಳಿ ಬಂದು ಜಪಿಸತೊಡಗಿದರು. ರಾತ್ರಿಯಾಯಿತು, ಬೆಳ್ಳಿ ಬೆಳಕಿನೊಂದಿಗೆ ಐರಾವತಿ ಬಂತು. ಎಲ್ಲರಿಗೂ ತನ್ನೊಂದಿಗೆ ಬರುವಂತೆ ಹೇಳಿದ ಗೋಪಾಲ ಓಡುತ್ತಾ ಹೋಗಿ ಅದರ ಬಾಲ ಹಿಡಿದ. ಗೋಪಾಲನ ಕಾಲನ್ನು ಹಣ್ಣು ಮಾರುವವ ಹಿಡಿದ, ಅವನ ಕಾಲನ್ನು ಮಿಠಾಯಿ ಮಾರುವವ ಹಿಡಿದ, ಅವನ ಕಾಲನ್ನು ಗೊಂಬೆ ಮಾರುವವ ಹಿಡಿದ. ಹೀಗೆ ದೊಡ್ಡ ಸರಪಳಿಯಾಯಿತು. ಕೆಳಗಿನಿಂದ ನೋಡಿದರೆ ಬೆಳ್ಳಿಬೆಳಕಿನ ಗಾಳಿಪಟಕ್ಕೆ ಊ…ದ್ದನೇ ಬಾಲಗೋಸಿ ನೇತಾಡುತ್ತಿರುವಂತೆ ಕಾಣುತ್ತಿತ್ತು.

ಐರಾವತದ ಬಾಲಕ್ಕೆ ಜೋತಾಡುತ್ತಿದ್ದ ಎಲ್ಲರ ಬಾಯಲ್ಲೂ ಸ್ವರ್ಗದ್ದೇ ಮಾತು. ಹಣ್ಣು ಮಾರುವವನಿಗೆ ಒಂದುಪಾಯ ಹೊಳೆಯಿತು. ʻಸ್ವರ್ಗದಲ್ಲಿ ತುಂಬಾ ಸಿಹಿಯಾದ ಹಣ್ಣುಗಳು ದೊರೆಯುತ್ತವಂತೆ. ನಾನು ಅಲ್ಲಿಯೇ ಒಂದು ಹಣ್ಣಿನಂಗಡಿ ತೆರೆಯುತೇನೆʼ ಎಂದು ಆತ.

ಮಿಠಾಯಿ ಮಾರುವವ ಹೇಗೆ ಸುಮ್ಮನಿದ್ದಾನು? ʻದೇವತೆಗಳು ತಿಂಡಿಪೋತರು. ಅವರಿಗಾಗಿಯೇ ದೊಡ್ಡದೊಂದು ಮಿಠಾಯಿ ಅಂಗಡಿ ತೆರೆಯುತ್ತೇನೆʼ ಎಂದ ಆತ ಹೇಳುತ್ತಿದ್ದಂತೆಯೇ ಗೋಪಾಲನ ಕಿವಿಯೂ ಚುರುಕಾಯಿತು. ಅರೆ! ಇವರನ್ನೆಲ್ಲಾ ಕರೆತಂದಿದ್ದು ತಾನು. ತನಗಿಂತ ಮೊದಲೇ ಇವರು ಸ್ವರ್ಗದಲ್ಲಿ ಅಂಗಡಿ ತೆರೆಯುತ್ತಾರೆಂದರೆ…!

ʻನಿಮಗಿಂತ ಮೊದಲೇ ನಾನು ಅಂಗಡಿ ಇಡುತ್ತೇನೆ. ದೇವರುಗಳಿಗೆ ಪಟ್ಟೆ-ಪೀತಾಂಬರ ಬಲುಪ್ರೀತಿ. ಅವರಿಗಾಗಿ ದೊಡ್ಡ ವಸ್ತ್ರಗಳನ್ನು ನೇಯುತ್ತೇನೆ. ದೊಡ್ಡದೆಂದರೆ ಈ…ಷ್ಟು ದೊಡ್ಡದುʼ ಎಂದು ತನ್ನ ಕೈ ಅಗಲ ಮಾಡಿ ತೋರಿಸಿದ. ಬೆಳ್ಳಿಬೆಳಕಿನ ಗಾಳಿಪಟದ ಹಿಂದಿದ್ದ ಉದ್ದನೇ ಬಾಲಂಗೋಸಿ ಕಡಿದು ಮೇಲಿಂದ ಭೂಮಿಗೆ ಬಿತ್ತು. ಆಯ್ತಲ್ಲ! ಮಾಡುತ್ತಿರುವ ಕೆಲಸದ ಮೇಲೆ ನಿಗಾ ಇರಬೇಕೆಂಬ ಹಿರಿಯರ ಮಾತು ಸುಳ್ಳಲ್ಲ.

Exit mobile version