ಒಂದೂರು. ಅಲ್ಲೊಬ್ಬ ಬಡ ಶ್ರಮಜೀವಿಯಿದ್ದ. ದಿನವಿಡೀ ಗಿರಣಿಯಲ್ಲಿ ಕೆಲಸ ಮಾಡಿ, ಧಾನ್ಯಗಳನ್ನು ಹಿಟ್ಟು ಮಾಡುತ್ತಿದ್ದ. ಅವನಿಗೊಬ್ಬಳು ಮಗಳಿದ್ದಳು. ತನ್ನಲ್ಲಿ ಹಿಟ್ಟು ಮಾಡಿಸಲು ಬರುವ ಎಲ್ಲರನ್ನೂ ನಾನಾ ರೀತಿಯ ಕಥೆಗಳನ್ನು ಹೇಳಿ ಬಡವ ರಂಜಿಸುತ್ತಿದ್ದ.
ಒಂದು ದಿನ ಊರಿನ ರಾಜ ಅವನಲ್ಲಿಗೆ ಬಂದ. ಎಂದಿನಂತೆ ನಾನಾ ರೀತಿಯ ಕಥೆಗಳನ್ನು ಹೇಳಿ ರಂಜಿಸುತ್ತಿದ್ದ ಬಡವ, ತನ್ನ ಮಗಳು ಎಷ್ಟೊಂದು ಜಾಣೆ ಎಂಬುದನ್ನೂ ಹೆಮ್ಮೆಯಿಂದ ವರ್ಣಿಸುತ್ತಿದ್ದ. ಇದನ್ನು ಕೇಳುತ್ತಿದ್ದ ರಾಜನ ಕುತೂಹಲ ಹೆಚ್ಚಿತು. ಅವನನ್ನು ತನ್ನ ಬಳಿಗೆ ಕರೆದ. ‘ʼಏನಂಥ ವಿಶೇಷತೆಯಿದೆ ನಿನ್ನ ಮಗಳ ಗುಣದಲ್ಲಿ?ʼ’ ಎಂದು ಆತನನ್ನು ಪ್ರಶ್ನಿಸಿದ.
ಇವನಿಗೋ, ತನ್ನ ಮಗಳ ಹೆಚ್ಚುಗಾರಿಕೆಯನ್ನು ಬಣ್ಣಿಸುವ ಆತುರ. ಸರಿಯೋ ತಪ್ಪೋ ಯೋಚಿಸದೆ ರಾಜನಲ್ಲಿ- “ಏನೆಂದು ಬಣ್ಣಿಸಲಿ ಮಹಾರಾಜ? ನನ್ನ ಮಗಳೆಂಥ ಜಾಣೆ ಎಂದರೆ ಹುಲ್ಲನ್ನೂ ಚಿನ್ನವನ್ನಾಗಿ ಮಾಡಬಲ್ಲಳು!ʼ’ ಎಂದುಬಿಟ್ಟ. ರಾಜನಿಗೆ ಅಚ್ಚರಿಯಾಯಿತು. ‘ʻಹೌದೇ! ಸರಿ, ಅವಳನ್ನು ನನ್ನ ಅರಮನೆಗೆ ಕರೆದುಕೊಂಡು ಬಾ. ನಾನದನ್ನು ಪರೀಕ್ಷಿಸಬೇಕಿದೆʼ’ ಎಂದುಬಿಟ್ಟ ಅರಸ. ಹೌಹಾರಿದ ಬಡವ, ‘ʻಮಹಾಸ್ವಾಮಿ, ನಾನು ಹೇಳಿದ್ದು… ನನ್ನ ಮಾತಿನ ಅರ್ಥ…ʼ’ ಊಹುಂ! ಏನು ಹೇಳುವುದಕ್ಕೂ ತಡವಾಗಿತ್ತು. ಆಜ್ಞೆಯನ್ನು ಮಾಡಿದ ಅರಸ ಅರಮನೆಗೆ ಹಿಂದಿರುಗಿಯಾಗಿತ್ತು.
ರಾಜನ ಆದೇಶದಂತೆ, ಬಡವನ ಮಗಳು ಅರಮನೆಗೆ ಹೋದಳು. ಅವಳನ್ನು ಒಂದು ಕೋಣೆಗೆ ಕರೆದೊಯ್ದ ರಾಜ, ‘ʼಏ ಹುಡುಗಿ! ಈ ಕೋಣೆಯಲ್ಲಿರುವ ಹುಲ್ಲನ್ನೆಲ್ಲಾ ನಾಳೆ ಬೆಳಗಾಗುವುದರೊಳಗೆ ಚಿನ್ನವನ್ನಾಗಿ ಮಾಡು. ಇಲ್ಲದಿದ್ದರೆ ನಿನ್ನ ಜೀವ ಉಳಿಯುವುದಿಲ್ಲʼ’ ಎಂದು ಹೇಳಿ, ಬಾಗಿಲು ಹಾಕಿಕೊಂಡು ನಡೆದುಬಿಟ್ಟ. ಪಾಪದ ಹುಡುಗಿ, ಒಂಟಿಯಾಗಿ ಕುಳಿತು ಯೋಚಿಸತೊಡಗಿದಳು. ಹುಲ್ಲನ್ನು ಚಿನ್ನವನ್ನಾಗಿ ಮಾಡುವುದು ಗೊತ್ತಿದ್ದರೆ ತಾನೇಕೆ ಹೀಗಿರುತ್ತಿದ್ದೆ! ‘ʻನಾನೇ ಏನು, ಇದು ಯಾರಿಂದಲೂ ಅಸಾಧ್ಯʼ’ ಎಂದು ತನ್ನಷ್ಟಕ್ಕೆ ಹೇಳಿಕೊಂಡಳು.
‘ʻಯಾರಿಂದಲೂ ಅಸಾಧ್ಯ ಎಂದ ಹಾಗಾಯ್ತುʼ’ ಎನ್ನುತ್ತಾ ಪುಟ್ಟ ಕಿನ್ನರನೊಬ್ಬ ಅವಳೆದುರು ಪ್ರತ್ಯಕ್ಷನಾದ. ‘ʻನೀನೆಲ್ಲಿಂದ ಬಂದೆ?ʼ’ ಬೆಚ್ಚಿದ ಹುಡುಗಿ ಅವನನ್ನು ಪ್ರಶ್ನಿಸಿದಳು.
‘ʻಎಲ್ಲಿಂದಲೋ ಬಂದೆ, ಆ ವಿಷಯ ಬಿಡು. ಈಗ ನಿನ್ನ ಜೀವ ಉಳಿಸಬಲ್ಲೆ. ಆದರೆ ಅದಕ್ಕೆ ನೀನು ಬೆಲೆ ಕೊಡಬೇಕಾಗುತ್ತದೆʼ’ ಎಂದ ಆ ಕಿನ್ನರ. ‘ʻಬೆಲೆ…? ನಿನಗೆ ಕೊಡುವಂಥದ್ದು ನನ್ನಲ್ಲಿ ಏನೂ ಇಲ್ಲವಲ್ಲʼ’ ಎಂದಳು ಹುಡುಗಿ.
‘ʻಹೆಚ್ಚೇನೂ ಬೇಡ. ನಿನಗೆ ತುಂಬ ಪ್ರೀತಿಯಾಗುವಂಥದ್ದು ಕೊಡು. ಈಗ ನಿನ್ನ ಕೊರಳಲ್ಲಿರುವ ಸರವನ್ನು ಕೊಡಬೇಕುʼ’ ಎಂದ ಕಿನ್ನರ. ಕೊರಳ ಸರ ನನಗೆ ಪ್ರೀತಿಯಾಗಿದ್ದೇ ಹೌದು. ಆದರೆ ನನ್ನ ಜೀವಕ್ಕಿಂತ ಅದು ಹೆಚ್ಚಲ್ಲವಲ್ಲ ಎಂದು ಯೋಚಿಸಿದ ಹುಡುಗಿ, ಒಪ್ಪಿಕೊಂಡಳು.
ರಾತ್ರಿಯಿಡೀ ಕೆಲಸ ಮಾಡಿದ ಕಿನ್ನರ, ಅಷ್ಟೂ ಹುಲ್ಲನ್ನು ಚಿನ್ನದ ದಾರವನ್ನಾಗಿ ಮಾಡಿಟ್ಟು, ಹುಡುಗಿಯ ಸರವನ್ನು ಪಡೆದು ಮಾಯವಾದ. ಬೆಳಗಾಗುತ್ತಿದ್ದಂತೆ ಕೋಣೆಯ ಬಾಗಿಲು ತೆರೆದ ರಾಜನಿಗೆ ಖುಷಿಯೋ ಖುಷಿ. ರಾಜ ಹೇಗಿದ್ದರೂ ತನ್ನನ್ನು ಮನೆಗೆ ಹೋಗಲು ಬಿಡುತ್ತಾನೆಂದು ಭಾವಿಸಿದ್ದ ಹುಡುಗಿಗೆ ನಿರಾಶೆಯಾಗುವಂತೆ, ಅವಳನ್ನು ಇನ್ನೊಂದು ದೊಡ್ಡ ಕೋಣೆಗೆ ಕರೆದೊಯ್ದ. ಅಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹುಲ್ಲು ಪೇರಿಸಿಡಲಾಗಿತ್ತು. ಇವೆಲ್ಲವನ್ನೂ ಬೆಳಗಿನೊಳಗೆ ಚಿನ್ನ ಮಾಡದಿದ್ದರೆ ನಿನಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದ ಅರಸ ಹೊರನಡೆದ. ಹುಡುಗಿ ತಲೆಮೇಲೆ ಕೈ ಹೊತ್ತು ಕುಳಿತಳು.
ಮತ್ತೆ ಬಂದ ಕಿನ್ನರ. ʼʻಈ ಬಾರಿ ನಿನಗೆ ಕೊಡಲು ನನ್ನಲ್ಲಿ ಏನೂ ಇಲ್ಲʼʼ ಎಂದಳು ಹುಡುಗಿ.
ʼʻನಿನ್ನ ಬೆರಳಲ್ಲಿ ಉಂಗುರ ಇದೆಯಲ್ಲ, ಅದು ಸಾಕುʼʼ ಎಂದ ಕಿನ್ನರ. ಬೇರೆ ದಾರಿ ಕಾಣದೆ ಹುಡುಗಿ ಒಪ್ಪಿಕೊಂಡಳು. ಅಷ್ಟೂ ಹುಲ್ಲನ್ನು ಚಿನ್ನದ ಎಳೆಗಳನ್ನಾಗಿ ಮಾಡಿದ ಕಿನ್ನರ, ಉಂಗುರವನ್ನು ಪಡೆದು ಮಾಯವಾದ. ಬೆಳಗಾಯಿತು, ರಾಜ ಬಂದ. ಎರಡು ಕೋಣೆಗಳ ತುಂಬಾ ಚಿನ್ನವನ್ನು ಕಂಡ ರಾಜನಿಗೆ ಮೂರನೇ ಕೋಣೆಯಲ್ಲೂ ಚಿನ್ನ ತುಂಬಿಕೊಳ್ಳುವ ಆಸೆ ಬಾರದಿದ್ದೀತೆ! ಸರಿ, ಹುಡುಗಿಯನ್ನು ಹುಲ್ಲು ತುಂಬಿಸಿದ್ದ ಇನ್ನೊಂದು ತುಂಬಾ ದೊಡ್ಡ ಕೊಠಡಿಗೆ ಕಳುಹಿಸಲಾಯಿತು. ಇದು ಇನ್ನೆಷ್ಟು ದಿನ ಹೀಗೆಯೇ ನಡೆಯುತ್ತದೆ ಎಂಬುದು ತಿಳಿಯದೆ ಹುಡುಗಿಗೆ ಹೆದರಿಕೆಯಾಗತೊಡಗಿತು.
ಈ ಬಾರಿಯೂ ಕಿನ್ನರ ಬಂದಿದ್ದು ಹೌದು. ಆದರೆ ʼʻನೀನು ಬರುತ್ತೀಯೆಂದು ಗೊತ್ತಿತ್ತು. ಆದರೆ ನೀನೀಗ ಸಹಾಯ ಮಾಡಿದರೆ ನೀಡುವುದಕ್ಕೆ ನನ್ನಲ್ಲಿ ನಿಜಕ್ಕೂ ಏನೂ ಇಲ್ಲ. ಹೋಗು ಇಲ್ಲಿಂದʼʼ ಎಂದು ಹುಡುಗಿ ಬೇಡಿಕೊಂಡಳು. ಅವಳ ಮಾತಿನತ್ತ ಗಮನ ನೀಡದ ಕಿನ್ನರ ಹುಲ್ಲನ್ನು ಚಿನ್ನ ಮಾಡತೊಡಗಿದ. ʼʻನಿನ್ನಿಂದ ಏನನ್ನು ಪಡೆಯಬೇಕೋ ನಾನು ಪಡೆಯುತ್ತೇನೆ. ಈಗ ಮೊದಲು ನಿನ್ನ ಜೀವ ಉಳಿಯಬೇಡವೆʼʼ ಎನ್ನುತ್ತ ರಾತ್ರಿಯಿಡೀ ಕೆಲಸ ಮಾಡಿದ. ಕೆಲಸ ನಿಲ್ಲಿಸುವಂತೆ ಹುಡುಗಿ ಮತ್ತೆ ಮತ್ತೆ ಬೇಡುತ್ತಲೇ ಇದ್ದಳು. ಬೆಳಗಾಗುತ್ತಿದ್ದಂತೆ ಕೆಲಸ ಮುಗಿಸಿದ ಕಿನ್ನರ, ʻʼಈಗ ಕೊಡುವುದಕ್ಕೆ ನಿನ್ನಲ್ಲಿ ಏನೂ ಇಲ್ಲ. ಆದರೆ ಮುಂದೊಂದು ದಿನ ನೀನು ರಾಣಿಯಾದರೆ, ನಿನಗೆ ಹುಟ್ಟುವ ಮೊದಲ ಮಗುವನ್ನು ನನಗೆ ನೀಡಬೇಕುʼʼ ಎಂದು ಹೇಳಿದ.
ʼʻಇದೆಂಥ ಮಾತು. ಮೊದಲನೇದಾಗಿ ನಾನು ರಾಣಿಯಾಗುವುದು ಸಾಧ್ಯವಿಲ್ಲ. ಹಾಗೊಮ್ಮೆ ಆದರೂ ನನ್ನ ಮಗುವನ್ನು ನಿನಗೇಕೆ ಕೊಡಬೇಕು? ನಿನ್ನ ಸಹಾಯ ಬೇಡವೆಂದು ನಾ ಹೇಳಿದ್ದೆ. ಅದೆಲ್ಲಾ ಆಗುವುದಿಲ್ಲʼʼ ಎಂದಳು ಹುಡುಗಿ. ʼʻಮಾತು ಕೊಟ್ಟಾಯಿತು. ನಿನ್ನ ಕೆಲಸ ಮಾಡಿಕೊಟ್ಟಿದ್ದೇನೆ. ಮತ್ತೆ ಬರುತ್ತೇನೆʼʼ ಎಂದ ಕಿನ್ನರ ಮಾಯವಾದ. ಈ ಬಾರಿ ಕೋಣೆಯ ಒಳಗೆ ಬಂದಿದ್ದು ರಾಜನಲ್ಲ, ರಾಜಕುಮಾರ!
ಇದನ್ನೂ ಓದಿ: ಮಕ್ಕಳ ಕಥೆ: ಮೂವರನ್ನು ರಕ್ಷಿಸಿದವನ ಕತೆ ಏನಾಯಿತು?
ʼʻಹೇಗಿದ್ದೀರಿ? ನನ್ನ ತಂದೆಯಿಂದಾಗಿ ನೀವು ತುಂಬಾ ಕೆಲಸ ಮಾಡಬೇಕಾಯಿತಲ್ಲವೇ?ʼʼ ಕೇಳಿದ ರಾಜಕುಮಾರ.
ʼʻಕೆಲಸ ಮಾಡಿದ್ದು ಹೌದುʼʼ ಎಂದಳು ಹುಡುಗಿ.
ʼʻನಾನು ರಾಜನಾದರೆ ಯಾರನ್ನೂ ಹೀಗೆಲ್ಲ ಕಷ್ಟಕ್ಕೆ ನೂಕುವುದಿಲ್ಲ. ಹುಲ್ಲನ್ನೆಲ್ಲ ಚಿನ್ನವನ್ನಾಗಿ ಮಾಡಿದ ಹುಡುಗಿಯನ್ನು ವಿವಾಹವಾಗುವಂತೆ ನನ್ನ ತಂದೆ ನನಗೆ ಹೇಳಿದ್ದರು. ಆದರೆ ನಿಮಗೆ ಅರಮನೆಯ ಜೀವನ ಬೇಡ ಎನಿಸಿದರೆ, ಇಲ್ಲಿಂದ ಹೋಗಲು ನಿಮಗೆ ಸ್ವಾತಂತ್ರ್ಯ ನೀಡಿದ್ದೇನೆʼʼ ಎಂದು ಹೇಳಿದ ರಾಜಕುಮಾರ. ಇವನು ತನ್ನ ತಂದೆಯಂತಲ್ಲ, ಒಳ್ಳೆಯವನು ಎನಿಸಿತು ಹುಡುಗಿಗೆ. ಅವನನ್ನು ಮದುವೆಯಾಗುವುದಕ್ಕೆ ಒಪ್ಪಿದಳು.
ಕೆಲವು ಕಾಲ ಕಳೆಯಿತು. ರಾಜನಿಗೆ ವಯಸ್ಸಾಗಿ ತೀರಿಕೊಂಡ. ರಾಜಕುಮಾರನೇ ರಾಜನಾದ. ಅವನ ಹೆಂಡತಿ ರಾಣಿಯಾದಳು. ಕೆಲವು ಸಮಯದ ನಂತರ ಅವರಿಗೊಂದು ಮುದ್ದಾದ ಮಗು ಹುಟ್ಟಿತು. ಇಷ್ಟರಲ್ಲಾಗಲೇ ಕಿನ್ನರನ ಜೊತೆಗಿನ ಮಾತನ್ನು ರಾಣಿ ಮರೆತೇಬಿಟ್ಟದ್ದಳು. ಆದರೆ ಆತ ಮರೆಯಬೇಕಲ್ಲ! ರಾಣಿ ಮಗುವಿನೊಂದಿಗೆ ಆಟವಾಡುತ್ತಿದ್ದಾಗ ಕಿನ್ನರ ಪ್ರತ್ಯಕ್ಷನಾದ.
ʼʻನೀನೇಕೆ ಬಂದೆ?ʼʼ ರಾಣಿ ಕೇಳಿದಳು.
ʼʻನೀನು ಕೊಟ್ಟ ಮಾತಿನಂತೆ ನಿನ್ನ ಮಗುವೀಗ ನನ್ನದು. ಕೊಡು, ಕೊಡುʼʼ ಕೈ ಚಾಚಿದ ಕಿನ್ನರ.
ತನ್ನ ಮಗುವನ್ನು ಭದ್ರವಾಗಿ ಹಿಡಿದುಕೊಂಡ ರಾಣಿ, ʼʻನಿನ್ನ ಶರತ್ತಿಗೆ ನಾನೆಂದೂ ಒಪ್ಪಿರಲಿಲ್ಲ. ನಿನಗೆ ಬೇಕಾದ ಬೇರೆಯ ವಸ್ತುಗಳನ್ನು ಕೇಳು. ಕೊಡುತೇನೆ. ದುಡ್ಡು-ಬಂಗಾರ ಬೇಕೆ?ʼʼ ಕೇಳಿದಳು.
ʼʻಚಿನ್ನವನ್ನು ನಾನೇ ಮಾಡಬಲ್ಲೆ. ಅದೆಲ್ಲ ಬೇಡʼʼ ಎಂದ ಕಿನ್ನರ.
ʼʻಅರಮನೆ, ಸೇವಕರು ಬೇಕೆ?ʼʼ ಕೇಳಿದಳು ರಾಣಿ.
ʼʻನಾನೆಲ್ಲಿರುತ್ತೇನೆ ಎಂಬುದು ನನಗೇ ಗೊತ್ತಿಲ್ಲ. ಅವೆಲ್ಲಾ ದಂಡ. ನಾನ್ಯಾರೆಂಬುದು ಯಾರಿಗೂ ಗೊತ್ತಿಲ್ಲ.ʼʼ ಎಂದ ಕಿನ್ನರ.
ʼʻನೀನ್ಯಾರು ಎಂಬುದನ್ನು ನಾನು ಹುಡುಕುತ್ತೇನೆʼʼ ಸವಾಲೆಸೆದಳು ರಾಣಿ
ʼʻನಿಜಕ್ಕೂ…? ನನ್ನ ನಿಜವಾದ ಹೆಸರನ್ನು ನೀನು ಹೇಳಿದೆ ಎಂದಾದರೆ ನಾನು ಸೋಲೊಪ್ಪಿಕೊಳ್ಳುತ್ತೇನೆ. ಮೂರು ದಿನಗಳ ಸಮಯ ಕೊಡುತ್ತೇನೆ. ನೀ ಸೋತರೆ, ನಿನ್ನ ಮಗು ನನ್ನದು. ಆದರೆ ಈ ವಿಷಯವನ್ನು ನೀನು ಯಾರಲ್ಲೂ ಹೇಳುವಂತಿಲ್ಲʼʼ ಎಂದು ಮಾಯವಾದ ಕಿನ್ನರ.
ರಾಣಿಗೆ ಸಂತೋಷವಾಯಿತು. ಹೆಸರು ತಾನೆ! ಖಂಡಿತಾ ಹುಡುಕಬಹುದು ಎಂದುಕೊಂಡ ಆಕೆ, ತನಗೆ ತಿಳಿದಿರುವ ಹೆಸರುಗಳನ್ನೆಲ್ಲಾ ಪಟ್ಟಿ ಮಾಡತೊಡಗಿದಳು. ರಾತ್ರಿ ಕಿನ್ನರ ಬಂದ. ಪಟ್ಟಿಯನ್ನು ಹಿಡಿದ ರಾಣಿ, ಓದುತ್ತಾ ಹೋದಳು. ʼʻಛೇ! ಇವೆಲ್ಲಾ ಯಾವುದೂ ಅಲ್ಲ. ನಾಳೆ ಬರುತ್ತೇನೆ. ಮತ್ತೆ ಪ್ರಯತ್ನಿಸುʼʼ ಎಂದು ಮಾಯವಾದ ಕಿನ್ನರ.
ಈ ಕಥೆಯನ್ನೂ ಓದಿ: ಮಕ್ಕಳ ಕಥೆ: ಮಕ್ಕಳಿಗೆ ಅಬ್ದುಲ್ ಕಲಾಂ ಹೇಳಿದ ಎರಡು ಕತೆಗಳು
ಈ ಬಾರಿ ಅರಮನೆಯ ಗ್ರಂಥಾಲಯಕ್ಕೆ ಭೇಟಿ ನೀಡಿದ ರಾಣಿ, ಚಿತ್ರ-ವಿಚಿತ್ರವಾದ ಹೆಸರುಗಳನ್ನೆಲ್ಲಾ ಪಟ್ಟಿ ಮಾಡಿದಳು. ಯಾವ್ಯಾವುದೋ ದೇಶ-ಭಾಷೆಯ ಹೆಸರುಗಳೆಲ್ಲಾ ಅವಳಿಗೆ ದೊರೆತವು. ರಾತ್ರಿ ಕಿನ್ನರ ಬರುತ್ತಿದ್ದಂತೆ, ಅವುಗಳನ್ನೆಲ್ಲಾ ಓದತೊಡಗಿದಳು. ಆಗ ಜೋರಾಗಿ ನಗತೊಡಗಿದ ಕಿನ್ನರ, ʼʻನನ್ನ ಹೆಸರಿನ ಹತ್ತಿರಕ್ಕೂ ನೀನು ಬರಲಿಲ್ಲ ರಾಣಿ. ನಾಳೆ ರಾತ್ರಿಯೊಂದು ಅವಕಾಶ. ನಿನ್ನ ಮಗು ಎಂತಿದ್ದರೂ ನನ್ನದೇʼʼ ಎಂದು ಸಂತೋಷದಿಂದ ತೆರಳಿದ. ರಾಣಿ ತೀವ್ರ ಶೋಕದಲ್ಲಿ ಮುಳುಗಿದಳು.
ಸಂಜೆಯಾಗುತ್ತಿದ್ದಂತೆ ಬೇಸರದಿಂದ ಅರಮನೆಯಿಂದ ಹೊರಬಂದ ರಾಣಿ, ಸಮೀಪದ ಕಾಡಿನತ್ತ ಒಬ್ಬಳೇ ನಡೆಯತೊಡಗಿದಳು. ಹೇಗಾದರೂ ಮಾಡಿ ಅವಳಿಗೆ ತನ್ನ ಮಗುವನ್ನು ಉಳಿಸಿಕೊಳ್ಳಬೇಕಿತ್ತು. ಸಮೀಪದ ಸರೋವರವನ್ನು ದಾಟಿ ಮುಂದೆ ಹೋಗುತ್ತಿದ್ದಂತೆ, ಯಾವುದೋ ವಿಚಿತ್ರವಾದ ಧ್ವನಿ ಕೇಳಿಬರುತ್ತಿತ್ತು. ಈ ಸ್ವರವನ್ನೆಲ್ಲೋ ಕೇಳಿದ್ದೇನೆ ಅಂದುಕೊಂಡ ಆಕೆ, ಧ್ವನಿ ಬಂದ ದಿಕ್ಕಿಗೆ ತೆರಳಿದಳು. ಅಲ್ಲೊಂದು ಹಾಳುಬಿದ್ದ ಕಲ್ಲಿನ ಮಂಟಪವಿತ್ತು. ಅದರ ಬಳಿಗೆ ಸಣ್ಣ ಬೆಂಕಿಯೊಂದು ಉರಿಯುತ್ತಿತ್ತು. ಅದರ ಮುಂದೆ ವಿಚಿತ್ರ ಆಕೃತಿಯೊಂದು ಕುಣಿಯುತ್ತಿತ್ತು. ಮರೆಯಲ್ಲಿ ನಿಂತು ನೋಡುತ್ತಿದ್ದ ರಾಣಿಗೆ ಅಚ್ಚರಿಯಾಯಿತು. ಅದೇ ಕಿನ್ನರ!
ಇಂದು ರಾತ್ರಿ ನನ್ನ ಕನಸು ನನಸಾಗುತ್ತದೆ
ನನಗೆ ಮುದ್ದಾದ ಮಗುವೊಂದು ದೊರೆಯುತ್ತದೆ
ನನ್ನ ಹೆಸರು ರಂಪೆಲ್‌ಸ್ಟಿಟ್ಸ್ಕಿನ್ (Rumpelstiltskin) ಎಂದು
ರಾಣಿಗೆ ಗೊತ್ತಾಗುವುದಿಲ್ಲ ಎಂದೆಂದೂ
ಎಂದು ಜೋರಾಗಿ ಹಾಡಿಕೊಂಡು ಕುಣಿಯುತ್ತಿದ್ದ ಆತ!
ಅವನಿಗೆ ಗೊತ್ತಾಗದಂತೆ ರಾಣಿ ಅಲ್ಲಿಂದ ಹಿಂದಿರುಗಿದಳು. ರಾತ್ರಿಯಾಯಿತು. ಕುಣಿದಾಡುತ್ತಲೇ ಬಂದ ಕಿನ್ನರ. ರಾಣಿ ಎಂದಿನಂತೆ ತನ್ನ ಪಟ್ಟಿಯನ್ನು ಓದಿದಳು. ʼʻಛೇ! ಇವೆಲ್ಲಾ ಯಾವುದೂ ಅಲ್ಲ ನನ್ನ ಹೆಸರು. ಕಡೆಯದೊಂದು ಅವಕಾಶ… ಹೇಳಿಬಿಡು. ಆಗದಿದ್ದರೆ ಮಗು ಕೊಡುʼʼ ಎಂದ ಕಿನ್ನರ.
ʼʻನಿನ್ನ ಹೆಸರು ರಂಪೆಲ್‌ಸ್ಟಿಟ್ಸ್ಕಿನ್ʼʼ ಎಂದಳು ರಾಣಿ. ಆಘಾತದಿಂದ ಹುಚ್ಚನಂತಾದ ಕಿನ್ನರ ಕೋಪದಿಂದ ನೆಲವನ್ನು ಜೋರಾಗಿ ಗುದ್ದಿದ. ದೊಡ್ಡದೊಂದು ಬಾವಿಯಂತೆ ಬಾಯಿಬಿಟ್ಟ ನೆಲ, ಅವನನ್ನು ಒಳಗೆಳೆದುಕೊಂಡಿತು. ಅಂದೇ ಕೊನೆ. ಮತ್ತೆ ಅವನನ್ನು ಯಾರೂ ನೋಡಲಿಲ್ಲ. ರಾಣಿ ತನ್ನ ರಾಜ ಮತ್ತು ಮಗುವಿನೊಂದಿಗೆ ಸುಖವಾಗಿದ್ದಳು.
ಇದನ್ನೂ ಓದಿ: ಮಕ್ಕಳ ಕಥೆ: ಮುಲಾನಾ ಎಂಬ ದಿಟ್ಟ ಹುಡುಗಿ