Site icon Vistara News

ಮಕ್ಕಳ ಕಥೆ: ಮೊಸಳೆಗೆ ಹೆಂಡತಿ ಹುಡುಕಿದ ನರಿ

jackal

ಒಂದಾನೊಂದು ಕಾಡಿನ ನದಿಯೊಂದರಲ್ಲಿ ಮೊಸಳೆಯೊಂದು ವಾಸಿಸುತ್ತಿತ್ತು. ನದಿಯ ಇಕ್ಕೆಲಗಳಲ್ಲಿ ಸಮೃದ್ಧವಾದ ಕಾಡಿತ್ತು. ನದಿಯ ಎಡದಂಡೆಯ ಮೇಲೆ ಆನೆಯೊಂದು ಸತ್ತುಬಿದ್ದಿದ್ದು, ಬಲದಂಡೆಯಲ್ಲಿದ್ದ ನರಿಯ ಕಣ್ಣಿಗೆ ಬಿತ್ತು. ಅದನ್ನೀಗ ತಿನ್ನಬೇಕಲ್ಲ ಎಂದು ಯೋಚಿಸಿತು ನರಿ.

ಆದರೆ ಎರಡೂ ದಂಡೆಗಳ ನಡುವೆ ದೊಡ್ಡ ನದಿ ಹರಿಯುತ್ತಿದ್ದು, ದಾಟುವುದು ಹೇಗೆ ಎಂದು ನರಿ ಆಲೋಚಿಸಿತು. ನದಿಯಲ್ಲಿ ಮೊಸಳೆಯೊಂದು ವಾಸಿಸುವ ವಿಷಯ ಅದರ ಗಮನಕ್ಕೆ ಬರುತ್ತಿದ್ದಂತೆ, ʻಗೆಳೆಯಾʼ ಎಂದು ಜೋರಾಗಿ ಕೂಗಿ ಕರೆಯಿತು. ಈವರೆಗೆ ಯಾರೊಂದಿಗೂ ಹೆಚ್ಚು ಮಾತನಾಡಿ ಅಭ್ಯಾಸವಿರದಿದ್ದ ಮೊಸಳೆಗೆ ತನ್ನ ಬಾಗಿಲಿಗೆ ಯಾರು ಬಂದಿದ್ದು ಎಂದು ಅಚ್ಚರಿಯಾಯಿತು. ನೀರಿನ ಮೇಲೆ ಬಂದು ನೋಡಿದರೆ ನರಿ! ಬಂದಿದ್ದು ಏಕೆಂದು ಕೇಳಿತು ಮೊಸಳೆ.

ʻʻಪಾಪ! ಸದಾ ಒಬ್ಬನೇ ಇರುತ್ತೀಯಲ್ಲ ಈ ನೀರಿನಲ್ಲಿ ಬೇಸರವಾಗುವುದಿಲ್ಲವೇ? ನಿನಗೊಂದು ಹೆಂಡತಿಯನ್ನಾದರೂ ಹುಡುಕೋಣವೋ ಎಂದು ಯೋಚಿಸುತ್ತಿದ್ದೆʼʼ ಎಂದು ಪ್ರಾರಂಭಿಸಿತು ನರಿ. ಈ ಮಾತು ಕೇಳುತ್ತಿದ್ದಂತೆ ಮೊಸಳೆಗೆ ಮಹದಾನಂದವಾಯಿತು. ʻʻಹೌದಲ್ಲಾ! ಒಂದು ಮದುವೆಯನ್ನಾದರೂ ಮಾಡಿಕೊಳ್ಳಬಹುದಿತ್ತು. ಈವರೆಗೆ ಅದನ್ನೂ ಯೋಚಿಸದೆ ಒಬ್ಬನೇ ಇದ್ದೆʼʼ ಎಂದುಕೊಂಡ ಮೊಸಳೆ, ʻʻಆಗಲಿ ನರಿಯಣ್ಣಾ. ನನಗೆ ಹೆಂಡತಿಯನ್ನು ಎಲ್ಲಿಂದ, ಹೇಗೆ ಹುಡುಕುತ್ತೀ?ʼʼ ಎಂದು ಕೇಳಿತು.

ಇದರಿಂದ ಉತ್ತೇಜಿತಗೊಂಡ ನರಿ, ʻʻನದಿಯ ಆಚೆಯ ದಡದಲ್ಲಿ ನಿನಗೆ ನೆಂಟಸ್ತಿಕೆ ಬೆಳೆಸುವಂಥವರು ಇದ್ದಾರೆ. ಅವರಲ್ಲಿ ಮಾತಾಡುತ್ತೇನೆ. ಆದರೆ ಆಚೆಯ ದಡಕ್ಕೆ ಹೋಗುವುದು ಹೇಗೆ ಎಂಬುದೇ ತಿಳಿಯುತ್ತಿಲ್ಲʼʼ ಎಂದು ಪೆಚ್ಚು ಮುಖ ಮಾಡಿತು.

ಅದಕ್ಕೆ ಮೊಸಳೆಯು, ʻʻಅದೇನು ದೊಡ್ಡ ವಿಷಯವಲ್ಲ, ನಾನು ದಾಟಿಸುತ್ತೇನೆ, ಬಾʼʼ ಎಂದು ಕರೆದು, ಅದನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ನದಿಯ ಆಚೆಯ ದಡಕ್ಕೆ ಕರೆದೊಯ್ದಿತು. ದಡ ತಲುಪಿದ ನರಿ ಕತ್ತಲಾಗುವವರೆಗೆ ಆನೆಯ ದೇಹವನ್ನು ತಿಂದು ನದಿಯ ಬಳಿ ಬಂತು.

ʻʻನನಗೆ ಹೆಂಡತಿ ಸಿಕ್ಕಳೇ ನರಿಯಣ್ಣ?ʼʼ ಮೊಸಳೆ ವಿಚಾರಿಸಿತು. ʻʻನೋಡಿ ಮಾತಾಡಿದ್ದೇನೆ ಗೆಳೆಯಾ. ಆದರೆ ಒಂದೇ ದಿನದಲ್ಲಿ ನೆಂಟಸ್ತಿಕೆ ಎಲ್ಲಿ ಕೂಡುತ್ತದೆ? ಹಾಗಾಗಿ ನಾಳೆ ಮತ್ತೆ ಬರಬೇಕು. ಈಗ ಆಚೆ ದಡಕ್ಕೆ ಬಿಡುತ್ತೀಯಾ?ʼʼ ಕೇಳಿತು ನರಿ. ಅದರ ಮಾತನ್ನು ನಂಬಿದ ಮೊಸಳೆ ನದಿಯನ್ನು ಆಚೆ ದಡಕ್ಕೆ ತಲುಪಿಸಿತು.

ಇದನ್ನೂ ಓದಿ: ಮಕ್ಕಳ ಕಥೆ: ಬಡವ ಓಂದಾ ಮತ್ತು ಪಿಟೀಲು ಭೂತ

ಮಾರನೇ ದಿನ ಮತ್ತೆ ಬಂದ ನರಿ, ʻಗೆಳೆಯಾʼ ಎಂದು ಕೂಗಿತು. ಸರಸರನೇ ಬಂದ ಮೊಸಳೆ ಅದನ್ನು ಆಚೆಯ ದಡಕ್ಕೆ ತಲುಪಿಸಿತು. ಸಂಜೆಯವರೆಗೂ ಹೊಟ್ಟೆ ಬಿರಿಯುವಷ್ಟು ತಿಂದ ನರಿ, ರಾತ್ರಿಯಾಗುವಷ್ಟರಲ್ಲಿ ನದಿಯ ಬಳಿ ಬಂತು. ʻʻನೆಂಟಸ್ತಿಕೆ ಕುದುರಿತೇ ನರಿಯಣ್ಣ?ʼʼ ಕೇಳಿತು ಮೊಸಳೆ. ʻʻಆದಂತೆಯೇ. ಆದರೆ ಹುಡುಗಿಯನ್ನು ನಾಳೆ ಕರೆದುಕೊಂಡು ಬರುತ್ತಾರಂತೆ. ಹಾಗಾಗಿ ನಾಳೆ ಮತ್ತೆ ಬರಬೇಕು ನಾನು. ಇಷ್ಟೊಂದು ಅಲೆದಾಟ ಕಷ್ಟವೇ. ಆದರೆ ನೀನು ನನ್ನ ಗೆಳೆಯನಾದ್ದಕ್ಕೆ ಇದನ್ನೆಲ್ಲಾ ಮಾಡುತ್ತಿದ್ದೇನೆʼʼ ಎಂದ ನರಿ ಸುರಕ್ಷಿತವಾಗಿ ಮೊಸಳೆಯ ಬೆನ್ನೇರಿ ಆಚೆಯ ದಡ ಸೇರಿತು.

ಮೂರನೇ ದಿನವೂ ಬಂತು ನರಿ. ʻʻಇವತ್ತಾದರೂ ಹೆಂಡತಿ ಸಿಕ್ಕರೆ ಒಳ್ಳೆಯದಿತ್ತುʼʼ ಎಂದುಕೊಳ್ಳುತ್ತಾ ನರಿಯನ್ನು ಆಚೆಯ ದಡ ತಲುಪಿಸಿತು ಮೊಸಳೆ. ಮೂರನೇ ದಿನ ನರಿ ಯಥೇಚ್ಛ ತಿನ್ನುವಷ್ಟರಲ್ಲಿ ಆನೆಯ ದೇಹ ಖಾಲಿಯಾಗಿತ್ತು. ಸಾಯಂಕಾಲ ಮರಳಿ ಬರುತ್ತಿದ್ದಂತೆ, ʻʻಹೆಂಡತಿ ಎಲ್ಲಿ ನರಿಯೇ? ಇಂದೂ ಒಬ್ಬನೇ ಬಂದೆಯಲ್ಲʼʼ ಎಂದು ಬೇಸರದಿಂದ ಕೇಳಿತು ಮೊಸಳೆ. ʻʻನಿನಗೆ ಹೇಳುವ ವಿಷಯವಿದೆ. ಇಲ್ಲಿಂದ ಹೇಳಲಾಗದು. ನಿನ್ನ ಬೆನ್ನ ಮೇಲೆಯೇ ಕುಳಿತುಕೊಳ್ಳಬೇಕು ನಾನುʼʼ ಎನ್ನುತ್ತಾ ಮೊಸಳೆಯ ಬೆನ್ನೇರಿತು ನರಿ. ʻʻಹುಡುಗಿಯನ್ನು ಕರೆತಂದಿದ್ದಾರೆ. ಆದರೆ ಅವಳಿಗೆ ನಿನ್ನ ಬಳಿಯೊಮ್ಮೆ ಮಾತನಾಡಬೇಕಂತೆ. ಯಾವತ್ತು ಆದೀತು ಎಂದೆಲ್ಲಾ ಕೇಳಿದರು. ನಿನ್ನನ್ನು ಕೇಳದೆ ಏನೆಂದು ಉತ್ತರಿಸಲಿ? ಹಾಗಾಗಿ ಮರಳಿ ಬಂದಿದ್ದೇನೆʼʼ ಎಂದೆಲ್ಲಾ ಮಾತಾಡುವಷ್ಟರಲ್ಲಿ ಆಚೆಯ ದಡ ಬಂದಿತ್ತು.

ʻʻಹಾಗಾದರೆ ನನ್ನ ಮದುವೆ ಯಾವತ್ತು ನರಿಯಣ್ಣಾ?ʼʼ ಕೇಳಿತು ಮೊಸಳೆ. ಛಂಗನೆ ದಡಕ್ಕೆ ಹಾರಿದ ನರಿ, ʻʻಮೂರ್ಖ! ನಿನಗ್ಯಾವ ಮದುವೆ? ನಿನಗೆ ಹೆಂಡತಿಯನ್ನು ಹುಡುಕುವುದಕ್ಕೆ ನನಗೇನು ಮರುಳೇ? ಆಚೆಯ ದಡದಲ್ಲಿ ಬಿದ್ದಿದ್ದ ಆನೆಯನ್ನು ಮೂರು ದಿನ ಕೂಡಿ ತಿಂದು ಮುಗಿಸಿದ್ದೇನೆ. ಇನ್ನು ಇಲ್ಯಾಕೆ ಬರಲಿ? ಬೇಕಿದ್ದರೆ ನಿನ್ನ ಹೆಂಡತಿಯನ್ನು ನೀನೇ ಹುಡುಕಿಕೋʼʼ ಎಂದ ನರಿ ಪರಾರಿಯಾಯಿತು. ಪೆದ್ದ ಮೊಸಳೆ ಪೆಚ್ಚು ಮುಖದಿಂದ ನೋಡುತ್ತಿತ್ತು.

ಇದನ್ನೂ ಓದಿ: ಮಕ್ಕಳ ಕಥೆ: ಕಾಡುಪಾಲಾದ ಹೆಂಡತಿಯೂ ಸನ್ಯಾಸಿಯ ವರವೂ

Exit mobile version