ಕಲೆ/ಸಾಹಿತ್ಯ
ಮಕ್ಕಳ ಕಥೆ: ಮೊಸಳೆಗೆ ಹೆಂಡತಿ ಹುಡುಕಿದ ನರಿ
ನದಿಯಲ್ಲಿದ್ದ ಮೊಸಳೆಗೆ ಮದುವೆಯಾಗಲು ಹುಡುಗಿ ಹುಡುಕಲು ಮುಂದಾಯಿತು ಕುತಂತ್ರಿ ನರಿ. ಕೊನೆಗೂ ಮೊಸಳೆಗೆ ಹುಡುಗಿ ಸಿಕ್ಕಿತೇ? ಈ ಮಕ್ಕಳ ಕಥೆ ಓದಿ.
ಒಂದಾನೊಂದು ಕಾಡಿನ ನದಿಯೊಂದರಲ್ಲಿ ಮೊಸಳೆಯೊಂದು ವಾಸಿಸುತ್ತಿತ್ತು. ನದಿಯ ಇಕ್ಕೆಲಗಳಲ್ಲಿ ಸಮೃದ್ಧವಾದ ಕಾಡಿತ್ತು. ನದಿಯ ಎಡದಂಡೆಯ ಮೇಲೆ ಆನೆಯೊಂದು ಸತ್ತುಬಿದ್ದಿದ್ದು, ಬಲದಂಡೆಯಲ್ಲಿದ್ದ ನರಿಯ ಕಣ್ಣಿಗೆ ಬಿತ್ತು. ಅದನ್ನೀಗ ತಿನ್ನಬೇಕಲ್ಲ ಎಂದು ಯೋಚಿಸಿತು ನರಿ.
ಆದರೆ ಎರಡೂ ದಂಡೆಗಳ ನಡುವೆ ದೊಡ್ಡ ನದಿ ಹರಿಯುತ್ತಿದ್ದು, ದಾಟುವುದು ಹೇಗೆ ಎಂದು ನರಿ ಆಲೋಚಿಸಿತು. ನದಿಯಲ್ಲಿ ಮೊಸಳೆಯೊಂದು ವಾಸಿಸುವ ವಿಷಯ ಅದರ ಗಮನಕ್ಕೆ ಬರುತ್ತಿದ್ದಂತೆ, ʻಗೆಳೆಯಾʼ ಎಂದು ಜೋರಾಗಿ ಕೂಗಿ ಕರೆಯಿತು. ಈವರೆಗೆ ಯಾರೊಂದಿಗೂ ಹೆಚ್ಚು ಮಾತನಾಡಿ ಅಭ್ಯಾಸವಿರದಿದ್ದ ಮೊಸಳೆಗೆ ತನ್ನ ಬಾಗಿಲಿಗೆ ಯಾರು ಬಂದಿದ್ದು ಎಂದು ಅಚ್ಚರಿಯಾಯಿತು. ನೀರಿನ ಮೇಲೆ ಬಂದು ನೋಡಿದರೆ ನರಿ! ಬಂದಿದ್ದು ಏಕೆಂದು ಕೇಳಿತು ಮೊಸಳೆ.
ʻʻಪಾಪ! ಸದಾ ಒಬ್ಬನೇ ಇರುತ್ತೀಯಲ್ಲ ಈ ನೀರಿನಲ್ಲಿ ಬೇಸರವಾಗುವುದಿಲ್ಲವೇ? ನಿನಗೊಂದು ಹೆಂಡತಿಯನ್ನಾದರೂ ಹುಡುಕೋಣವೋ ಎಂದು ಯೋಚಿಸುತ್ತಿದ್ದೆʼʼ ಎಂದು ಪ್ರಾರಂಭಿಸಿತು ನರಿ. ಈ ಮಾತು ಕೇಳುತ್ತಿದ್ದಂತೆ ಮೊಸಳೆಗೆ ಮಹದಾನಂದವಾಯಿತು. ʻʻಹೌದಲ್ಲಾ! ಒಂದು ಮದುವೆಯನ್ನಾದರೂ ಮಾಡಿಕೊಳ್ಳಬಹುದಿತ್ತು. ಈವರೆಗೆ ಅದನ್ನೂ ಯೋಚಿಸದೆ ಒಬ್ಬನೇ ಇದ್ದೆʼʼ ಎಂದುಕೊಂಡ ಮೊಸಳೆ, ʻʻಆಗಲಿ ನರಿಯಣ್ಣಾ. ನನಗೆ ಹೆಂಡತಿಯನ್ನು ಎಲ್ಲಿಂದ, ಹೇಗೆ ಹುಡುಕುತ್ತೀ?ʼʼ ಎಂದು ಕೇಳಿತು.
ಇದರಿಂದ ಉತ್ತೇಜಿತಗೊಂಡ ನರಿ, ʻʻನದಿಯ ಆಚೆಯ ದಡದಲ್ಲಿ ನಿನಗೆ ನೆಂಟಸ್ತಿಕೆ ಬೆಳೆಸುವಂಥವರು ಇದ್ದಾರೆ. ಅವರಲ್ಲಿ ಮಾತಾಡುತ್ತೇನೆ. ಆದರೆ ಆಚೆಯ ದಡಕ್ಕೆ ಹೋಗುವುದು ಹೇಗೆ ಎಂಬುದೇ ತಿಳಿಯುತ್ತಿಲ್ಲʼʼ ಎಂದು ಪೆಚ್ಚು ಮುಖ ಮಾಡಿತು.
ಅದಕ್ಕೆ ಮೊಸಳೆಯು, ʻʻಅದೇನು ದೊಡ್ಡ ವಿಷಯವಲ್ಲ, ನಾನು ದಾಟಿಸುತ್ತೇನೆ, ಬಾʼʼ ಎಂದು ಕರೆದು, ಅದನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ನದಿಯ ಆಚೆಯ ದಡಕ್ಕೆ ಕರೆದೊಯ್ದಿತು. ದಡ ತಲುಪಿದ ನರಿ ಕತ್ತಲಾಗುವವರೆಗೆ ಆನೆಯ ದೇಹವನ್ನು ತಿಂದು ನದಿಯ ಬಳಿ ಬಂತು.
ʻʻನನಗೆ ಹೆಂಡತಿ ಸಿಕ್ಕಳೇ ನರಿಯಣ್ಣ?ʼʼ ಮೊಸಳೆ ವಿಚಾರಿಸಿತು. ʻʻನೋಡಿ ಮಾತಾಡಿದ್ದೇನೆ ಗೆಳೆಯಾ. ಆದರೆ ಒಂದೇ ದಿನದಲ್ಲಿ ನೆಂಟಸ್ತಿಕೆ ಎಲ್ಲಿ ಕೂಡುತ್ತದೆ? ಹಾಗಾಗಿ ನಾಳೆ ಮತ್ತೆ ಬರಬೇಕು. ಈಗ ಆಚೆ ದಡಕ್ಕೆ ಬಿಡುತ್ತೀಯಾ?ʼʼ ಕೇಳಿತು ನರಿ. ಅದರ ಮಾತನ್ನು ನಂಬಿದ ಮೊಸಳೆ ನದಿಯನ್ನು ಆಚೆ ದಡಕ್ಕೆ ತಲುಪಿಸಿತು.
ಇದನ್ನೂ ಓದಿ: ಮಕ್ಕಳ ಕಥೆ: ಬಡವ ಓಂದಾ ಮತ್ತು ಪಿಟೀಲು ಭೂತ
ಮಾರನೇ ದಿನ ಮತ್ತೆ ಬಂದ ನರಿ, ʻಗೆಳೆಯಾʼ ಎಂದು ಕೂಗಿತು. ಸರಸರನೇ ಬಂದ ಮೊಸಳೆ ಅದನ್ನು ಆಚೆಯ ದಡಕ್ಕೆ ತಲುಪಿಸಿತು. ಸಂಜೆಯವರೆಗೂ ಹೊಟ್ಟೆ ಬಿರಿಯುವಷ್ಟು ತಿಂದ ನರಿ, ರಾತ್ರಿಯಾಗುವಷ್ಟರಲ್ಲಿ ನದಿಯ ಬಳಿ ಬಂತು. ʻʻನೆಂಟಸ್ತಿಕೆ ಕುದುರಿತೇ ನರಿಯಣ್ಣ?ʼʼ ಕೇಳಿತು ಮೊಸಳೆ. ʻʻಆದಂತೆಯೇ. ಆದರೆ ಹುಡುಗಿಯನ್ನು ನಾಳೆ ಕರೆದುಕೊಂಡು ಬರುತ್ತಾರಂತೆ. ಹಾಗಾಗಿ ನಾಳೆ ಮತ್ತೆ ಬರಬೇಕು ನಾನು. ಇಷ್ಟೊಂದು ಅಲೆದಾಟ ಕಷ್ಟವೇ. ಆದರೆ ನೀನು ನನ್ನ ಗೆಳೆಯನಾದ್ದಕ್ಕೆ ಇದನ್ನೆಲ್ಲಾ ಮಾಡುತ್ತಿದ್ದೇನೆʼʼ ಎಂದ ನರಿ ಸುರಕ್ಷಿತವಾಗಿ ಮೊಸಳೆಯ ಬೆನ್ನೇರಿ ಆಚೆಯ ದಡ ಸೇರಿತು.
ಮೂರನೇ ದಿನವೂ ಬಂತು ನರಿ. ʻʻಇವತ್ತಾದರೂ ಹೆಂಡತಿ ಸಿಕ್ಕರೆ ಒಳ್ಳೆಯದಿತ್ತುʼʼ ಎಂದುಕೊಳ್ಳುತ್ತಾ ನರಿಯನ್ನು ಆಚೆಯ ದಡ ತಲುಪಿಸಿತು ಮೊಸಳೆ. ಮೂರನೇ ದಿನ ನರಿ ಯಥೇಚ್ಛ ತಿನ್ನುವಷ್ಟರಲ್ಲಿ ಆನೆಯ ದೇಹ ಖಾಲಿಯಾಗಿತ್ತು. ಸಾಯಂಕಾಲ ಮರಳಿ ಬರುತ್ತಿದ್ದಂತೆ, ʻʻಹೆಂಡತಿ ಎಲ್ಲಿ ನರಿಯೇ? ಇಂದೂ ಒಬ್ಬನೇ ಬಂದೆಯಲ್ಲʼʼ ಎಂದು ಬೇಸರದಿಂದ ಕೇಳಿತು ಮೊಸಳೆ. ʻʻನಿನಗೆ ಹೇಳುವ ವಿಷಯವಿದೆ. ಇಲ್ಲಿಂದ ಹೇಳಲಾಗದು. ನಿನ್ನ ಬೆನ್ನ ಮೇಲೆಯೇ ಕುಳಿತುಕೊಳ್ಳಬೇಕು ನಾನುʼʼ ಎನ್ನುತ್ತಾ ಮೊಸಳೆಯ ಬೆನ್ನೇರಿತು ನರಿ. ʻʻಹುಡುಗಿಯನ್ನು ಕರೆತಂದಿದ್ದಾರೆ. ಆದರೆ ಅವಳಿಗೆ ನಿನ್ನ ಬಳಿಯೊಮ್ಮೆ ಮಾತನಾಡಬೇಕಂತೆ. ಯಾವತ್ತು ಆದೀತು ಎಂದೆಲ್ಲಾ ಕೇಳಿದರು. ನಿನ್ನನ್ನು ಕೇಳದೆ ಏನೆಂದು ಉತ್ತರಿಸಲಿ? ಹಾಗಾಗಿ ಮರಳಿ ಬಂದಿದ್ದೇನೆʼʼ ಎಂದೆಲ್ಲಾ ಮಾತಾಡುವಷ್ಟರಲ್ಲಿ ಆಚೆಯ ದಡ ಬಂದಿತ್ತು.
ʻʻಹಾಗಾದರೆ ನನ್ನ ಮದುವೆ ಯಾವತ್ತು ನರಿಯಣ್ಣಾ?ʼʼ ಕೇಳಿತು ಮೊಸಳೆ. ಛಂಗನೆ ದಡಕ್ಕೆ ಹಾರಿದ ನರಿ, ʻʻಮೂರ್ಖ! ನಿನಗ್ಯಾವ ಮದುವೆ? ನಿನಗೆ ಹೆಂಡತಿಯನ್ನು ಹುಡುಕುವುದಕ್ಕೆ ನನಗೇನು ಮರುಳೇ? ಆಚೆಯ ದಡದಲ್ಲಿ ಬಿದ್ದಿದ್ದ ಆನೆಯನ್ನು ಮೂರು ದಿನ ಕೂಡಿ ತಿಂದು ಮುಗಿಸಿದ್ದೇನೆ. ಇನ್ನು ಇಲ್ಯಾಕೆ ಬರಲಿ? ಬೇಕಿದ್ದರೆ ನಿನ್ನ ಹೆಂಡತಿಯನ್ನು ನೀನೇ ಹುಡುಕಿಕೋʼʼ ಎಂದ ನರಿ ಪರಾರಿಯಾಯಿತು. ಪೆದ್ದ ಮೊಸಳೆ ಪೆಚ್ಚು ಮುಖದಿಂದ ನೋಡುತ್ತಿತ್ತು.
ಇದನ್ನೂ ಓದಿ: ಮಕ್ಕಳ ಕಥೆ: ಕಾಡುಪಾಲಾದ ಹೆಂಡತಿಯೂ ಸನ್ಯಾಸಿಯ ವರವೂ
ಕಲೆ/ಸಾಹಿತ್ಯ
Yakshagana Show: ಅ.7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ
Yakshagana Show: ಮದರ್ ಫೌಂಡೇಶನ್ ಅರ್ಪಿಸುವ ಯಕ್ಷನೂಪುರ ʼರಾಜಾ ತ್ರೀʼ ಕಾರ್ಯಕ್ರಮವನ್ನು ಸ್ವರ್ಣರೇಖಾ ಇಂಟಿರಿಯರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವಿಸ್ತಾರ ನ್ಯೂಸ್ ಚಾನೆಲ್ ಮಾಧ್ಯಮ ಸಹಯೋಗ ನೀಡಿದೆ.
ಬೆಂಗಳೂರು: ರಾಜ್ ಭಟ್ ಜಕ್ಕೂರು ಅವರ ಸಂಯೋಜನೆಯಲ್ಲಿ ಜಲವಳ್ಳಿ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಅಕ್ಟೋಬರ್ 7ರಂದು ರಾತ್ರಿ 9.30ಕ್ಕೆ ನಗರ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ರತ್ನಾಪುರದ ರಾಮ ವಿರಚಿತ ʼರಾಜಾ ಮಯೂರಕೇತನʼ, ಗುಂಡೂ ಸೀತಾರಾಮಯ್ಯ ವಿರಚಿತ ʼರಾಜಾ ಮಥುರಾನಿಕೇತನ ಹಾಗೂ ಅಜ್ಞಾನ ಕವಿ ವಿರಚಿತ ʼರಾಜಾ ಉರಗಕೇತನʼ ಯಕ್ಷಗಾನ ಪ್ರಸಂಗ (Yakshagana Show) ಪ್ರದರ್ಶನವಾಗಲಿದೆ.
ಮದರ್ ಫೌಂಡೇಶನ್ ಅರ್ಪಿಸುವ ಕಾರ್ಯಕ್ರಮವನ್ನು ಸ್ವರ್ಣರೇಖಾ ಇಂಟಿರಿಯರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವಿಸ್ತಾರ ನ್ಯೂಸ್ ಚಾನೆಲ್ ಮಾಧ್ಯಮ ಸಹಯೋಗ ನೀಡಿದೆ.
ಕೊಳಗಿ, ಜನ್ಸಾಲೆ, ಮೂಡುಬೆಳ್ಳೆ, ಬ್ರಹ್ಮೂರು ಅವರ ಗಾನ ರಸಧಾರೆ, ಅನಿರುದ್ಧ್, ಶಶಾಂಕ್, ಶ್ರೀನಿವಾಸ್ ಪ್ರಭು, ಸುಜನ್ ಹಾಗೂ ಅರುಣ ಅವರ ಚಂಡೆ ಮದ್ದಳೆಯ ಜೇಂಕಾರದಲ್ಲಿ ʼರಾಜಾ ತ್ರೀʼ ಪ್ರದರ್ಶನ ಮೂಡಿಬರಲಿದೆ.
ರತ್ನಾಪುರದ ರಾಮ ವಿರಚಿತ ʼರಾಜಾ ಮಯೂರಕೇತನʼ ಪ್ರಸಂಗದಲ್ಲಿ ತಾಮ್ರಧ್ವಜನಾಗಿ ವಿದ್ಯಾಧರ್ ಜಲವಳ್ಳಿ, ಮಯೂರಧ್ವಜನಾಗಿ ಮಂಕಿ ಈಶ್ವರ್ ನಾಯ್ಕ, ಕೃಷ್ಣನಾಗಿ ನಿಲ್ಕೋಡು ಶಂಕರ ಹೆಗಡೆ, ಅರ್ಜುನನಾಗಿ ಹೆನ್ನಾಬೈಲ್ ವಿಶ್ವನಾಥ್, ಹಾಸ್ಯ ಪಾತ್ರಗಳಲ್ಲಿ ರಮೇಶ್ ಭಂಡಾರಿ, ಸಿತಾರಾಮ ಕುಮಾರ್ ಅಭಿನಯಿಸಲಿದ್ದಾರೆ.
ಇದನ್ನೂ ಓದಿ | ದಶಮುಖ ಅಂಕಣ: ಕೋಶ ಓದಲಾಗದಿದ್ದರೆ ದೇಶವನ್ನಾದರೂ ಸುತ್ತಿ!
ಗುಂಡೂ ಸೀತಾರಾಮಯ್ಯ ವಿರಚಿತ ʼರಾಜಾ ಮಥುರಾನಿಕೇತನʼ ಪ್ರದರ್ಶನದಲ್ಲಿ ಕಂಸನಾಗಿ ತೀರ್ಥಹಳ್ಳಿ ಗೋಪಾಲಾಚಾರ್, ಉಗ್ರಸೇನಾ ಪಾತ್ರದಲ್ಲಿ ಪ್ರಸನ್ನ ಶೆಟ್ಟಿಗಾರ್, ರುಚಿಮತಿಯಾಗಿ ಸಂತೋಷ್ ಹಿಲಿಯಾಣ, ದೂತನಾಗಿ ಸೀತಾರಾಮ್ ಕುಮಾರ್, ಬ್ರಾಹ್ಮಣನಾಗಿ ಶ್ರೀಧರ್ ಕಾಸರಕೋಡು, ಮಾಗಧ ಆಗಿ ನಾಗರಾಜ ಭಂಡಾರಿ, ಆಸ್ತೀಯಾಗಿ ಉದಯ ಕಡಬಾಳ್, ಪಾಸ್ತಿಯಾಗಿ ಹರೀಶ್ ಜಪ್ತಿ, ದೃಮಿಳ ಆಗಿ ಕಾರ್ತಿಕ್ ಕಣ್ಣಿ ಬಣ್ಣ ಹಚ್ಚಲಿದ್ದಾರೆ.
ಅಜ್ಞಾತ ಕವಿ ವಿರಚಿತ ʼʼರಾಜಾ ಉರಗಕೇತನʼ ಯಕ್ಷಗಾನದಲ್ಲಿ ರಾಜೇಶ್ ಭಂಡಾರಿ, ಪ್ರಕಾಶ್ ಕಿರಾಡಿ, ವಿಶ್ವನಾಥ್ ಹೆನ್ನಾಬೈಲ್ ಅವರು (ಕೌರವ, ಭೀಮ, ಕೃಷ್ಣ ಪಾತ್ರದಲ್ಲಿ), ವಿನಾಯಕ ಗುಂಡುಬಾಳ, ಕಾರ್ತಿಕ್ ಹೆಗಡೆ, ಶ್ರೀಕಾಂತ್ ರಟ್ಟಾಡಿ, ನಾಗರಾಜ್ ದೇವಲ್ಕುಂದ ಪ್ರಮುಖ ಪಾತ್ರಗಳಲ್ಲಿ ರಂಜಿಸಲಿದ್ದಾರೆ.
ಪ್ರವೇಶ ದರ ಇರಲಿದ್ದು, ಮುಂಗಡ ಟಿಕೆಟ್ ಬುಕಿಂಗ್‌ಗಾಗಿ ರಾಜ್ ಭಟ್ ಮೊ.9019776411 ಸಂಪರ್ಕಿಸಿ.
ಕಲೆ/ಸಾಹಿತ್ಯ
Sunday Read: ಹೊಸ ಪುಸ್ತಕ: ಯಾಬ್ಲಿ: ಯಥಾಪ್ರಕಾರ
ಎಚ್. ಆರ್ ರಮೇಶ ಅವರು ಸಣ್ಣಕಥೆಗಳ ಸಂಕಲನ ʼಯಾಬ್ಲಿʼ ಇಂದು ಬಿಡುಗಡೆಯಾಗುತ್ತಿದೆ. ಈ ಸಂಕಲನದಿಂದ ಒಂದು ಕಥೆಯ ಆಯ್ದ ಭಾಗ ಇಲ್ಲಿದೆ. ಇದು ಇಂದಿನ Sunday read.
:: ಎಚ್.ಆರ್ ರಮೇಶ
ಸಾವಜ್ಜಿಗೆ ರಾತ್ರಿ ನಿದ್ರೆಯಲ್ಲಿ ಕನಸು. ಭೂಮಿ ಸುಟ್ಟು ಹೋಗಿತ್ತು. ಸುಡುವ ಬೆಂಕಿಯ ಝಳದಲ್ಲಿ ಒಂದು ಬಿಳಿಯ ಹಂಸ ಹಾರಿ ಹೋಗುತ್ತಿತ್ತು ಆಕಾಶದ ಕಡೆ ಮುಖಮಾಡಿ. ಸಾವಜ್ಜಿ ನೋಡುತ್ತಲೇ ಇದ್ದಳು ಅದನ್ನು. ಅಂತರಿಕ್ಷದಲ್ಲಿ ಅದು ಹಾರಿಹೋಗುತ್ತಿತ್ತು. ಅದನ್ನು ಸಾವಜ್ಜಿ ನೋಡುತ್ತಲೇ ಇದ್ದಳು. ಸಾವಜ್ಜಿ ಅದನ್ನು ನೋಡುತ್ತಲೇ ಇದ್ದಳು. ಕಲ್ಲು ನೀರು ಕರಗುವ ಹೊತ್ತು ಈ ಕನಸು ಬಿದ್ದ ಹೊತ್ತು. ಅದು ಕರಗದೆ ಹಾಗೇ ಇತ್ತು ಅವಳ ಸುಕ್ಕುಗಳ ಮೇಲೆ ಅಡುಗೆ ಕೋಣೆಯ ಕಿಟಕಿಯಿಂದ ಸೂರ್ಯನ ಕಿರಣಗಳು ಹರಿದು ಹೋಗುವ ತನಕ. ಅವಳ ಕೆನ್ನೆಗಳ ಮೇಲೆ ಮೂಡಿದ್ದ ಸುಕ್ಕುಗಳು ನುಣುಪು ಬೆಣಚು ಕಲ್ಲುಗಳಾಗಿದ್ದವು. ಬೆಣಚು ಕಲ್ಲುಗಳ ಸಂದುಗೊಂದುಗಳಲ್ಲೆಲ್ಲ ಜುಳು ಜುಳು ಸದ್ದುಮಾಡಿಕೊಂಡು ಹರಿವ ತೊರೆಯ ನೀರು ಅವಳ ಕೆನ್ನೆಯ ಸುಕ್ಕುಗಳ ಮೇಲೆ ಹರಿವ ಸೂರ್ಯನ ಕಿರಣಗಳು. ಎಚ್ಚರವಾಯಿತು.
ಎದ್ದಳು ನಿಧಾನ. ಮಾಳಿಗೆ ಮನೆಯ ನಡುಮನೆಯಲ್ಲಿ ಮಲಗಿದ್ದಳು. ಗೋಡೆಯ ಮೇಲೆ ನೇತುಹಾಕಿದ್ದ ಶಿವನ ಪಟಕ್ಕೆ ಕೈ ಮುಗಿದು, ‘ಶಿವನೇ ಏನೇಳ್ಲಪ್ಪ ನಿನ್ನ ಮಯಿಮೇನ, ಇಷ್ಟು ದಿನ ಕರಕಂಬದ್ದಲ್ಲಪ್ಪ, ಏನೇಳ್ಲಿ ನಿನ್ನ ಪವಾಡಕೆ’ ಎಂದುಕೊಳ್ಳುತ್ತ ನಿಧಾನ ಎದ್ದಳು. ಹಳೆಯ ಸೀರೆಗಳನ್ನು ಒಂದಕ್ಕೊಂದು ಸೇರಿಸಿ ಹೊಲೆದು, ಮೆತ್ತನೆಯ ಹಾಸಿಗೆಯ ಥರ ಮಾಡಿಕೊಂಡಿದ್ದ ಅದನ್ನು ನೀಟಾಗಿ, ಚೌಕಾಕಾರದಲ್ಲಿ ಮಡಿಚಿ, ಆ ನಡುಮನೆಯ ಕೋಣೆಯ ತಾನು ಮಲಗಿದ್ದ ಬಲಭಾಗದ ಮೂಲೆಯಲ್ಲಿ ಅದನ್ನು ಮತ್ತು ಅದರ ಜೊತೆಗೆ ದಿಂಬನ್ನು ಇಟ್ಟಳು. ದಿಂಬಿಗೆ ಹಳೆಯ ಸೀರೆಯನ್ನು ಕವರನ್ನಾಗಿ ಹೊಲಿದಿದ್ದು, ಅದರಲ್ಲಿನ ಹೂವಿನ ಚಿತ್ರಗಳು ಎಣ್ಣೆಯ ಜಿಡ್ಡಿಗೆ ತಮ್ಮ ಕಳೆಯನ್ನು ಕಳೆದುಕೊಂಡಿದ್ದವು. ಎದ್ದು, ಬಾಗಿಲ ಹಿಂದೆ ಇದ್ದ ಮರದ ಅಗಳಿಯನ್ನು ಸರಿಸಿ ಬಾಗಿಲನ್ನು ಹಿಂದಕ್ಕೆ ಎಳೆದುಕೊಂಡಳು. ಇವಳು ಬಾಗಿಲು ತೆಗೆಯುವುದನ್ನೇ ಕಾಯುತ್ತಿತ್ತೇನೋ ಎಂಬಂತಿದ್ದ ಹೊರಗಿದ್ದ ಬೆಳಗಿನ ಬೆಳಕು, ಇವಳು ಬಾಗಿಲನ್ನು ತೆಗೆಯುತ್ತಿದ್ದಂತೇ ಒಳನುಗ್ಗಿತು.
ತುಸು ಎತ್ತರದ ಹೊಸ್ತಿಲನ್ನು ನಿಧಾನ ದಾಟಿ, ಬೆಳಕನ್ನು ಸೀಳಿಕೊಂಡು ಹೊರನಡೆದು, ಮನೆಯ ಬಲಗಡೆ ಸಂದಿಯಲ್ಲಿ ಅವಳ ಗಂಡನಕಾಲದ ಪುಟ್ಟ ಶೌಚಾಲಯಕ್ಕೆ ಹೋಗಿ ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಿ, ಹೊರಗಿನ ಗುಡಾಣದಲ್ಲಿರುವ ನೀರನ್ನು ಗುಡಾಣದ ಮುಚ್ಚುಳದ ಮೇಲೆ ಕಾಲದ ಸಾಕ್ಷಿಯೆಂಬಂತೆ ಇದ್ದ ಲಬಿಕಿದ ಅಲ್ಯುಮಿನಿಯಮ್ ತಂಬಿಗೆಯಲ್ಲಿ ತುಂಬಿಸಿಕೊಂಡು, ಮತ್ತೊಮ್ಮೆ ಕೈ ತೊಳೆದು, ಕಾಲಿನ ಹಿಮ್ಮಡಿಯು ನೆನೆಯುವಂತೆ ಎರಡೂ ಪಾದಗಳ ಮೇಲೆ ನೀರನ್ನು ಹಾಕಿಕೊಂಡು ಒಳನಡೆದಳು. ಅಡುಗೆ ಕೋಣೆಯು ನಡುಮನೆಗೆ ಹೊಂದಿಕೊಂಡಿತ್ತು. ನಿಧಾನ ಅಡುಗೆ ಕೋಣೆಯೊಳಗೆ ಪಾದಗಳ ಇಡತೊಡಗಿದಳು. ಒಲೆಯ ಪಕ್ಕ ಇದ್ದ ಬಚ್ಚಲು ಮನೆಗೆ ಎಡ್ಲಿಯಲ್ಲಿ ತಾಮ್ರದ ತಂಬಿಗೆಯನ್ನು ಅದ್ದಿದಳು. ಆಗ ಅಲ್ಲಿ ನೀರು ತಂಬಿಗೆ ಒಳಗಡೆ ಸೇರುವ ಗುಡುಗುಡು ಸದ್ದು. ನೀರು ತುಂಬಿಸಿಕೊಂಡು, ಇದ್ದಿಲಿನ ಪುಡಿಯಲ್ಲಿ ಹಲ್ಲುಗಳನ್ನು ಉಜ್ಜಿ, ಮುಖವನ್ನು ತೊಳೆದುಕೊಂಡು, ನಿಧಾನ ಬಚ್ಚಲಿಗೆ ಅಡ್ಡಲಾಗಿಟ್ಟಿದ್ದ ಕಲ್ಲನ್ನು ದಾಟಿ ಹೊರ ನಡೆದಳು. ಸೂರ್ಯನ ಕಿರಣಗಳು ಅವಳ ಬೆನ್ನಿನ ಮೇಲೆ ಬಂಗಾರದ ನೀರನ್ನು ಸುರಿಯುತ್ತಿರುವಂತೆ ಕಾಣುತ್ತಿತ್ತು. ನಡುಮನೆಯ ಎಡಭಾಗದ ಗೋಡೆಗೆ ಸಮೀಪ ಬಿದಿರಿನ ಒಂದು ಉದ್ದನೆಯ ಗಳವನ್ನು ತೆಂಗಿನ ಹುರಿಯಲ್ಲಿ ಜಂತೆಯ ತೊಲೆಗೆ ಕಟ್ಟಿ ನೇತು ಬಿಡಲಾಗಿತ್ತು. ಆ ದಂಡಿಗೆಯ ಮೇಲೆ ಸೀರೆ, ರವಿಕೆ, ಮತ್ತಿತರೆ ಬಟ್ಟೆಗಳನ್ನು ಮಡಿಚಿ ನೇತುಹಾಕಲಾಗಿತ್ತು.
ಅದರ ಮೇಲೆ ನೇತಾಡುತ್ತಿದ್ದ ಟವಲನ್ನು ಎಳೆದುಕೊಂಡು, ಅದರಿಂದ ಮುಖವನ್ನು ಒರೆಸಿ ಕೊಂಡು, ಅದನ್ನು ಮತ್ತೆ ತನ್ನ ಭುಜದ ಮೇಲೆ ಹಾಕಿಕೊಂಡು ಮುಂದಕ್ಕೆ ಹೆಜ್ಜೆಗಳನ್ನು ಇಟ್ಟಳು. ಅವಳ ಮನೆ ಪಶ್ಚಿಮಾಭಿಮುಖವಾಗಿದ್ದುದರಿಂದ, ಸೂರ್ಯ ಕಾಣಿದಿದ್ದರೂ, ಅವಳ ಮನೆಯ ಬಾಗಿಲಿನ ಕಡೆ ಅಂದರೆ ಪೂರ್ವ ದಿಕ್ಕಿನ ಕಡೆ ತಿರುಗಿ ಒಂದು ನಮಸ್ಕಾರ ಹಾಕಿದಳು. ಹಾಕಿ, ಮನೆಯ ಮುಂಭಾಗದ ಬಲಗಡೆಯಲ್ಲಿ ಇಬ್ಬರು ಕುಳಿತುಕೊಳ್ಳಬಹುದಾಗಿದ್ದ ಒಂದು ಸಣ್ಣಕಲ್ಲು ಹಾಸಿನ ಕೆಳಗೆ ಕೈ ಹಾಕಿ ಪೊರಕೆಯನ್ನು ತೆಗೆದುಕೊಂಡಳು. ಕಸ ಗುಡಿಸಿ, ಅಲ್ಲೆ ಗುಡಾಣದಲ್ಲಿದ್ದ ನೀರನ್ನು ತಂಬಿಗೆಯಲ್ಲಿ ತುಂಬಿಕೊಂಡು ಬಾಗಿಲಿಗೆ ನೀರನ್ನು ಚಿಮುಕಿಸಿದಳು. ಮುಂಬಾಗಿಲಿನ ಕೈಗೆಟುಕುವ ಎತ್ತರದಲ್ಲಿದ್ದ ಒಂದು ಪುಟ್ಟ ಗೂಡೊಳಗೆ ಕೈ ಹಾಕಿ ಅರಿಶಿಣ, ಕುಂಕುಮ ಮತ್ತು ರಂಗೋಲಿ ಹಿಟ್ಟು ಇದ್ದ ಒಂದು ಬಟ್ಟಲನ್ನು ತೆಗೆದುಕೊಂಡು, ಹೊಸ್ತಿಲ ಮೇಲೆ ಮೂರುಕಡೆ ಮೂರು ಗೆರೆಗಳನ್ನು, ಅವುಗಳ ಅಂತರದಲ್ಲಿ ಸುರುಳಿಯಾಕಾರದ ಚಕ್ರ, ಇಂಟು ಆಕಾರದ ಎರಡು ಎಲೆಗಳಂತಿರುವ ಎಳೆಗಳನ್ನು ಎಳೆದು, ಹೊಸ್ತಿಲಿನ ಮುಂಭಾಗಕ್ಕೆ ಕುಂಕುಮ ಮತ್ತು ಅರಿಶಿಣವನ್ನು ಇಟ್ಟಳು. ಮನೆಯ ಅಂಗಳಕ್ಕೆ ದಾರಿಗೆ ಹೊಂದಿಕೊಂಡು ಮರದಂತೆ ಬೆಳೆದಿದ್ದ ಎಕ್ಕದ ಹೂವುಗಳನ್ನು ಕಿತ್ತು ಇಟ್ಟಳು. ಅದರ ಪಕ್ಕದಲ್ಲೇ ಇದ್ದ ಮಧ್ಯಾಹ್ನ ಮಲ್ಲಿಗೆ ಹೂವು ಸಂಜೆ ಅರಳಿದ್ದರಿಂದ, ಮುದುಡಿ ಮಲಗಿದ್ದವು. ಕೆಲವು ಗಿಡದ ಬುಡದಲ್ಲಿ ಬಿದ್ದಿದ್ದವು. ತಂಬಿಗೆಯಲ್ಲಿ ಉಳಿದಿದ್ದ ನೀರಿನಲ್ಲಿ ಕೈಗಳನ್ನು ತೊಳೆದುಕೊಂಡು, ಭುಜದ ಮೇಲೆ ಹಾಕಿಕೊಂಡಿದ್ದ ಟವಲನ್ನು ಮನೆಯ ಮುಂಭಾಗದ ಗೋಡೆಗೆ ಮತ್ತು ಅಂಗಳದ ಗೂಟಕ್ಕೆ ಕಟ್ಟಿದ್ದ ತಂತಿಯ ಮೇಲೆ ನೇತುಹಾಕಿ ಒಳ ನಡೆದಳು.
ಸಾವಜ್ಜಿಯ ಮಾಳಿಗೆ ಮನೆ, ಎರಡು ಕೋಣೆಗಳಿದ್ದರೂ, ತುಂಬಾ ವಿಶಾಲವಾಗಿತ್ತು. ಮನೆಯ ಅಡುಗೆ ಕೋಣೆಯು ಐದಾರು ಜನ ಕೂತು ಊಟ ಮಾಡುವಷ್ಟು ವಿಶಾಲ ವಾಗಿತ್ತು. ಮೂಲೆಯಲ್ಲಿ ಮಣ್ಣಿನ ಸೋರೆಗಳನ್ನು ಹೈಕಳು ಲಗೋರಿ ಆಟವಾಡುವಾಗ ಒಂದರ ಮೇಲೊಂದು ಜೋಡಿಸುವ ಬಿಲ್ಲೆಗಳಂತೆ ಜೋಡಿಸಿಡಲಾಗಿತ್ತು. ನೀರು ಕುಡಿಯಲು ಕಂಚಿನ ವೃತ್ತಾಕಾರದ ಗಿಂಡಿ, ಅದರ ಪಕ್ಕ ಒಂದು ಸ್ಟೀಲಿನ ಕೊಳಗ ಅದರ ಪಕ್ಕ ಮಣ್ಣಿನ ಗುಡಾಣ. ತರಕಾರಿಗಳನ್ನು ಇಡಲು ಜಾಲರ ರೂಪದ ನೇತಾಡುವ ಬುಟ್ಟಿಯನ್ನು ಗೋಡೆಗೆ ಮೊಳೆ ಹೊಡೆದು ನೇತುಹಾಕಲಾಗಿತ್ತು. ಅಡುಗೆ ಮನೆಯಲ್ಲಿ ಮೂರು ಕಂಬಗಳಿದ್ದವು. ಅವುಗಳಿಗೆ ಹುರಮಂಜನ್ನು ಬಳಿಯಲಾಗಿತ್ತು. ಅಡುಗೆ ಕೋಣೆಯ ಬಾಗಿಲ ಮೇಲೆ ಇಡಲಾಗಿದ್ದ ಅಡ್ಡಕಲ್ಲಿನ ಮೇಲೆ ಐದಾರು ತಾಮ್ರದ, ಸ್ಟೀಲಿನ ಡಬ್ಬಿಗಳಿದ್ದವು. ಮೂರು ನಿಲುವುಗಳಿದ್ದು, ಒಂದರಲ್ಲಿ ಹಾಲಿನ ಬಟ್ಟಲು, ಮತ್ತೊಂದರಲ್ಲಿ ಕುಂಬಳಕಾಯಿ ಇದ್ದು, ಮೂರನೆಯದು ಖಾಲಿಯಿತ್ತು. ಅಡುಗೆ ಕೋಣೆಯ ಬಲಭಾಗದಲ್ಲಿ ಪುಟ್ಟದಾದ ದೇವರಗೂಡು. ಅದರಲ್ಲಿ ಹುಲಿ ವಾಹನದ ಮೇಲೆ ಕುಳಿತುಕೊಂಡಿರುವ ದೇವಿಯ ಚಿತ್ರ. ಅದಕ್ಕೆ ಗಾಜಿನ ಕಟ್ಟನ್ನು ಹಾಕಲಾಗಿತ್ತು. ಕುಂಕುಮ, ವಿಭೂತಿ, ಮತ್ತು ಅಂಟಿಕೊಂಡಿದ್ದ ಬಸವನ ಪಾದದ ಹೂವುಗಳು. ಫೋಟೋದ ಮುಂದೆ ಒಂದು ದಪ್ಪನೆಯ ಪುಸ್ತಕ. ಅದರ ಮೇಲೆಲ್ಲ ವಿಭೂತಿ, ಕುಂಕುಮ, ತೀರ್ಥದ ಕಲೆಗಳು. ಅದರ ಪಕ್ಕದಲ್ಲಿ ವಿಭೂತಿ, ಕುಂಕುಮ, ಅರಿಶಿಣ. ವಿಭೂತಿಯನ್ನು ಎತ್ತಿಕೊಂಡು ತನ್ನ ಬಲಗೈಯ ಮೂರು ಅಂಗೈ ಬೆರಳುಗಳಿಗೆ ಅದನ್ನು ಬಳಿದುಕೊಂಡು ಆ ಮೂರು ಬೆರಳುಗಳಿಂದ ತನ್ನ ಹಣೆಯ ಮೇಲೆ ಮೂರು ಅಡ್ಡ ವಿಭೂತಿಯ ಗೆರೆಗಳನ್ನು ಎಳೆದುಕೊಂಡಳು. ಮತ್ತು ಉಂಗುರದ ಬೆರಳ ತುದಿಯಿಂದ ಒಂದಿಷ್ಟಗÀಲದ ಕುಂಕುಮವನ್ನು ತನ್ನ ಎರಡು ಹುಬ್ಬುಗಳ ನಡುವೆ ಹಚ್ಚಿಕೊಂಡಳು. ದೇವಿ ಫೋಟೋದ ಪಕ್ಕ ಬಿದಿರಿನ ಕೊಳವೆಯಲ್ಲಿದ್ದ ಊದುಬತ್ತಿಗಳಲ್ಲಿ ಎರಡನ್ನು ಹೊರಗೆ ಎಳೆದುಕೊಂಡು ಅಲ್ಲೇ ದೇವರ ಗೂಡಲ್ಲಿದ್ದ ಬೆಂಕಿಪೊಟ್ಟಣವನ್ನು ಹುಡುಕಿ ತೆಗೆದು, ಕಡ್ಡಿಯನ್ನು ಗೀರಿ ಊದುಬತ್ತಿಗಳ ತುದಿಗೆ ತಾಗಿಸಿದಳು. ಹಳದಿ ಮತ್ತು ಕೆಂಪು ಮಿಶ್ರಿತ ಪುಟ್ಟದಾದ ಜ್ವಾಲೆ ಎರಡು ಸೆಕೆಂಡು ಮೂಡಿ, ಊದುಬತ್ತಿಯ ತುದಿಯಲ್ಲಿ ಕೆಂಡದ ಬಣ್ಣದಕಿಡಿ ಮಾತ್ರ ಸ್ಠಾಪಿತಗೊಂಡಿತು. ಗೊಂಡು, ಪರಿಮಳದ ಹೊಗೆ ಆ ಅಡುಗೆ ಕೋಣೆಯಲ್ಲಿ ಹಬ್ಬತೊಡಗಿತು.
ಅವುಗಳನ್ನು ಬಲಗೈಯಲ್ಲಿ ಹಿಡಿದು ಫೋಟೋಕ್ಕೆ ಮೂರುಸಲ ಬೆಳಗಿದಳು. ಅಡುಗೆ ಕೋಣೆಯ ನಡುವಲ್ಲಿ ನೇತಾಡುತ್ತಿದ್ದ ಹಾಲಿನ ನೆಲುವಿನ ಬಳಿ ಹೋಗಿ, ಅದರಲ್ಲಿದ್ದ ಬಟ್ಟಲನ್ನು ಎತ್ತಿಕೊಂಡು, ಅದರೊಳಗಿದ್ದ ಹಾಲನ್ನು ಒಂದು ಪುಟ್ಟ ಪಾತ್ರೆಯಲ್ಲಿ ಸುರುವಿದಳು. ಎರಡು ಒಲೆಗಳು ಅವುಗಳ ಹಿಂದೆ ಎರಡು ಮೂರು ಚಿಕ್ಕ ಪಾತ್ರೆಗಳನ್ನು ಇಡಬಹುದಾದಷ್ಟು ಜಾಗವಿತ್ತು. ಎಡಗಡೆಯ ಒಲೆಯ ಪಕ್ಕ ಎಡಲಿ. ಅದರ ಪಕ್ಕ ಅಡ್ಡಲಾಗಿ ಒಂದು ಆಳು ಉದ್ದದ ಮದ್ದಕ್ಕನ ಹಳ್ಳಿ ಕಲ್ಲು. ಅದರಾಚೆ ಬಚ್ಚಲು. ಮನೆಯ ಗೋಡೆಗೆ ಹೊಂದಿಕೊಂಡಂತಿದ್ದ ಅದು ಅಡ್ಡವಾಗಿ ದಾಟಿ ಹೋಗಬಹುದಾದ ಎತ್ತರದ ಕಲ್ಲನ್ನು ಹೊಂದಿತ್ತು. ಮತ್ತು ಬಿದಿರಿನ ಅಡ್ಡ ಬಾಗಿಲನ್ನು ಹೊಂದಿತ್ತು. ಆ ಬಚ್ಚಲಿನ ಒಳಗೆ ಒಂದು ಪುಟ್ಟ ಕಿಟಕಿಯೂ ಇತ್ತು. ಬಲ ಒಲೆಯ ಪಕ್ಕ ಒಂದು ಆಳು ಕುಳಿತುಕೊಂಡಾಗ ಇರುವ ಎತ್ತರದಷ್ಟು ಇಟ್ಟಿಗೆ ತಡೆಗೋಡೆ. ಅದರ ಆಚೆ ಸೌದೆಗಳನ್ನು ಪೇರಿಸಿ ಇಡಲಾಗಿತ್ತು. ಅದರ ಪಕ್ಕ ಒಂದೆರಡು ಮೂರು ಅಡಿ ದೂರದಲ್ಲಿ ನುಸಿರೋಗ ಬಂದು ಒಳಗೆ ಟೊಳ್ಳಾಗಿರುವ ತೆಂಗಿನಮರದ ಥರ ಉದ್ದನೆಯ ಕಡಗೋಲು ತಾನೇನು ಮಾಡುತ್ತಿದ್ದೆ ಎನ್ನುವುದರ ನೆನಪು ಇಲ್ಲದೆ ನಿಸ್ತೇಜಗೊಂಡು ನಿಂತಿತ್ತು ಗೋಡೆಗೆ ಒರಗಿ. ಇದರ ಎದುರಿನ ಗೋಡೆಯ ಹತ್ತಿರ ಒಂದು ಸಣ್ಣದಾದ ಪೆಟ್ಟಿಗೆ ಅನಾದಿಕಾಲದಿಂದ ಮಲಗಿದಂತೆ ಇತ್ತು. ಒಲೆಯ ಹಿಂಭಾಗದ ಹಾಸಿನ ಮೇಲಿನ ಮೂಲೆಯಲ್ಲಿ ಬೆಕ್ಕು ತಪಸ್ಸಿಗೆ ಕುಳಿತ ಮುನಿಯಂತೆ ಇತ್ತು. ಸಾವಜ್ಜಿ ಹಾಲನ್ನು ಸುರುವ ಸದ್ದಿಗೆ ಎಚ್ಚರಗೊಂಡು ಅಥವಾ ಎಚ್ಚರವಾಗಿತ್ತೇನೋ, ಆ ಕಡೆ ಕಣ್ಣು ನೆಟ್ಟಿತು. ನೆಟ್ಟು ನನಗೂ ಅದಕ್ಕೂ ಸಂಬಂಧವಿಲ್ಲ ವೇನೋ ಎನ್ನುವಂತೆ ಮತ್ತೆ ಕಣ್ಣು ಮುಚ್ಚಿಕೊಂಡಿತು. ಇದನ್ನು ಕಂಡು ಅವಳು ನಕ್ಕಳು. ಹಾಲಿನ ಪಾತ್ರೆಯನ್ನು ಹಿಡಿದುಕೊಂಡು ಒಲೆಯ ಹತ್ತಿರ ಹೋಗಿ, ಒಲೆಯ ಮೇಲೆ ಇಟ್ಟಳು.
ಒಲೆಯ ಮುಂದೆ ಕುಳಿತರೆ ಕೈಗೆ ತಾಗುವ ಅಂತರದಲ್ಲಿ ಒಂದು ಮರದ ಕಂಬ. ಅದರ ಬುಡದಲ್ಲಿ ಇದ್ದ ಮಣೆಯನ್ನು ಎಳೆದುಕೊಂಡು ಅದರ ಮೇಲೆ ಕುಳಿತಳು. ಪಾತ್ರೆಯನ್ನು ಮತ್ತೆ ತೆಗೆದು ತನ್ನ ಪಕ್ಕ ಇಟ್ಟುಕೊಂಡಳು. ತಂಬಿಗೆಯನ್ನು ತೆಗೆದುಕೊಂಡು ಎಡಲಿಯಲ್ಲಿ ನೀರನ್ನು ತುಂಬಿಕೊಂಡು ಪಕ್ಕಕ್ಕೆ ಇಟ್ಟುಕೊಂಡಳು. ಸೌದೆಗಳನ್ನು ಪೇರಿಸಿಟ್ಟ ಜಾಗದಲ್ಲಿ ಎರಡು ಅಂಗೈಯಗಲದ ಚಚ್ಚೌಕಾಕಾರದ ಮರದ ಹಲಗೆಯನ್ನು ತೆಗೆದುಕೊಂಡು, ಅದನ್ನು ಎಡಗೈಯಲ್ಲಿ ಹಿಡಿದು, ಬಲಗೈಯಲ್ಲಿ ಸೌದೆಯ ಬಳಿಯೇ ಇದ್ದ ಕಾಯಿಯ ಮೇಲಿನ ಚಿಪ್ಪನ್ನು ಎತ್ತಿಕೊಂಡು ಒಲೆಗಳಲ್ಲಿದ್ದ ಬೂದಿಯನ್ನು ಎಳೆದುಕೊಂಡಳು. ಅದನ್ನು ಸೌದೆಯ ಮುಂಭಾಗಕ್ಕೆ ಇಟ್ಟು, ಮತ್ತೆ ಕೈಗಳನ್ನು ತೊಳೆದುಕೊಂಡು ಹಾಲಿನ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಮುಚ್ಚುಳವನ್ನು ಮುಚ್ಚಿದಳು ಸೌದೆಗಳಲ್ಲಿ ಪುರಳೆಗಳಂತವುಗಳನ್ನು ಆಯ್ದುಕೊಂಡು, ಮುರಿದು, ಒಲೆ ಯೊಳಗೆ ಇಟ್ಟಳು. ನಂತರ ಒಲೆಯ ಹಾಸಿನ ಒಂದು ಜಾಗದಲ್ಲಿ ಇದ್ದ ಬೆಂಕಿಪೊಟ್ಟಣವನ್ನು ಒಂದು ಪುಟ್ಟ ಸೀಮೆ ಎಣ್ಣೆಯ ಬುಡ್ಡಿಗೆ ಹಚ್ಚಿ ಅದರ ಜ್ವಾಲೆಗೆ ಕೆಲವು ಪುರುಳೆಗಳನ್ನು ಹಿಡಿದು ಅವು ಹೊತ್ತಿಕೊಂಡಾಗ ಅವನ್ನು ಈಗಾಗಲೇ ಒಲೆಯಲ್ಲಿ ಇಟ್ಟಿದ್ದ ಪುರುಳೆಗಳಿಗೆ ತುಸು ತಾಗಿಸಿ ಬೆಂಕಿ ಮಾಡಿದಳು. ಆಮೇಲೆ ಒಂದೆರಡಮೂರು ಗಟ್ಟಿ ಸೌದೆಗಳನ್ನು ಎತ್ತಿಕೊಂಡು ಒಲೆಯಲ್ಲಿ ಇಟ್ಟಳು. ಬೆಂಕಿ ನಿಧಾನವಾಗಿ ಎಲ್ಲ ಸೌದೆಗಳಿಗೆ ಹಬ್ಬತೊಡಗಿತು. ಈಗ ಮುಚ್ಚಳವನ್ನು ತೆರೆದಳು. ಎದ್ದು ಅಡುಗೆ ಕೋಣೆಯ ಬಾಗಿಲಿನ ಒಳ ನಿಲುವಿನ ಮೇಲೆ ಇದ್ದ ಡಬ್ಬ ಒಂದನ್ನು ಎತ್ತಿಕೊಂಡು ತನ್ನ ಅಂಗೈಯಿಯ ಬೊಗಸೆಯಲ್ಲಿ ಬೆಲ್ಲದ ಪುಡಿಯನ್ನು ಸುರುವಿಕೊಂಡು, ವಾಪಸ್ಸು ಒಲೆಯ ಹತ್ತಿರ ಬಂದು ಅದನ್ನು ಹಾಲಿನಲ್ಲಿ ಸುರುವಿದಳು. ಉಕ್ಕುತ್ತಿದ್ದ ಹಾಲು ಇದನ್ನು ಹಾಕುತ್ತಿದ್ದ ಹಾಗೆ ಡೌನಾಗತೊಡಗಿತು. ಒಲೆಯ ಹಿಂಭಾಗದ ಗೋಡೆಗೆ ಒಂದು ಪುಟ್ಟಗೂಡು ಹೊಂದಿಕೊಂಡಿತ್ತು.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಪುನರ್ನವ: ಅಳಿದುಳಿದ ಕುರುಕ್ಷೇತ್ರದಲ್ಲಿ
ಆ ಗೂಡಿನ ಒಳಗಡೆ ಕೈ ಹಾಕಿ ಒಂದು ಸಣ್ಣದಾದ, ಹೊಗೆ ಮತ್ತು ಮಸಿಗೆ ಕಪ್ಪಾಗಿರುವ, ತಾಮ್ರದ ಡಬ್ಬಿಯನ್ನು ಎತ್ತಿಕೊಂಡಳು. ಅದರ ಮುಚ್ಚಳ ವನ್ನು ಬಿಚ್ಚಿ ಅದರೊಳಗಿನ ಚಿಕ್ಕ ಚಮಚದಲ್ಲಿ ಅದರೊಳಗಿದ್ದ ಕಾಫಿ ಪುಡಿಯನ್ನು ತುಂಬಿಕೊಂಡು ಒಲೆಯ ಮೇಲಿನ ಪಾತ್ರೆಗೆ ಸುರುವಿ ಡಬ್ಬಿಯನ್ನು ತನ್ನ ಸ್ವಸ್ಥಳಕ್ಕೆ ತಲುಪಿಸಿದಳು. ಹಾಲಿನ ಪಾತ್ರೆಯನ್ನು ಇಳಿಸಿ, ಅಲ್ಲೇ ಗೋಡೆಯ ಮೊಳೆಯೊಂದಕ್ಕೆ ನೇತು ಹಾಕಲ್ಪಟ್ಟ ಸೋಸುವ ಜಾಲರವನ್ನು ಎತ್ತಿಕೊಂಡು, ಅದರ ಪಕ್ಕ ಮರದ ರಿಪೀಸನ್ನು ಗೋಡೆಯ ಎರಡು ಮೊಳೆಗಳ ಮೇಲಿಟ್ಟು ಅದರ ಮೇಲೆ ಮಗುಚಿ ಇಟ್ಟಿದ್ದ ಐದಾರು ಸ್ಟೀಲಿನ ಕಪ್ಪುಗಳಲ್ಲಿ ಒಂದನ್ನು ಎತ್ತಿಕೊಂಡು ಅದರಲ್ಲಿ ಸೋಸಿದಳು. ಕಿಟಕಿಯಿಂದ ತೂರಿ ಬರುತ್ತಿದ್ದ ಸೂರ್ಯನ ಬೆಳಕಿಗೆ ಮನೆಯೊಳಗಿನ ಧೂಳಿನ ಕಣಗಳು ಮತ್ತು ಅವುಗಳ ಜೊತೆಗೆ ಹೊಗೆ ಆಟವಾಡುತ್ತಿದ್ದವು ಬೆಳಕಿನ ಓರೆಯಾಕಾರದ ದಾರಿ ಮಾಡಿಕೊಂಡು. ಗವಾಕ್ಷಿಯಿಂದ ಇನ್ನೂ ಬೆಳಕು ನಿಚ್ಚಳವಾಗಿ ಹರಿದು ಬರುತ್ತಿರು ವಂತೆ ಕಾಣುತ್ತಿರಲಿಲ್ಲ. ಅವಳು ಕಾಫಿಯನ್ನು ಕುಡಿಯಲು ಬಲಗೈಯನ್ನು ಆಡಿಸುವಾಗ ಅವಳ ಕೈಯಲ್ಲಿದ್ದ ಎರಡೋ ಮೂರೋ ಬಳೆಗಳು ಒಂದು ಹಿನ್ನಲೆ ಸಂಗೀತವನ್ನು ಒದಗಿಸುತ್ತಿದ್ದವು. ಸ್ಟೀಲಿನ ಕಪ್ಪಿನ ಮೇಲೆ ಅವಳ ಪುಟ್ಟದಾದ ಆಕೃತಿ ಮೂಡಿತ್ತು. ಅವಳು ಕುಡಿಯುವ ಸಂದರ್ಭದಲ್ಲೆ ಅವಳ ಮನಸ್ಸು ಇನ್ನು ಒಂದು ಗಂಟೆ ಅಥವಾ ಒಂದೂವರೆ ಗಂಟೆಯಲ್ಲಿ ಅವಳು ಮಾಡಬಹುದಾಗಿದ್ದ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು, ಜೀರಿಗೆ, ಎಳ್ಳು ಹಾಕಿ ರಾಗಿಯ ತಪ್ಪಲೆ ರೊಟ್ಟಿಯನ್ನು ರೂಪಿಸುತ್ತಿತ್ತು.
ಕಸಗುಡಿಸಿ, ಕಸವನ್ನು ಮತ್ತು ಬೂದಿಯನ್ನು ಒಂದು ಮೊರದಲ್ಲಿ ತುಂಬಿಕೊಂಡು ಮನೆಯ ಹಿಂಭಾಗದ ತಿಪ್ಪೆಗೆ ಹಾಕಿ, ನಂತರ ಒಂದು, ಒಂದೂವರೆ ಗಂಟೆಯಲ್ಲಿ ಇದೂ ಆಗಿ, ಮುಂಬಾಗಿಲಿನಿಂದ ಹಗಲಿನ ಬೆಳಕು ಒಳಗಡೆ ಬಂದು ಸೆಟ್ಲಾಗತೊಡಗುತ್ತಿತ್ತು. ಆ ಬೆಳಕಿನಲ್ಲಿ ನಡುಮನೆಯಲ್ಲಿ ಕುಳಿತು ರೊಟ್ಟಿಯ ಕೊನೆಯ ತುತ್ತನ್ನು ಮುಗಿಸಿ ಕೈ ತೊಳೆದುಕೊಳ್ಳುತ್ತಿದ್ದಳು. ಅಷ್ಟೊತ್ತಿಗೆ, ಅಜ್ಜಿ ಅಜ್ಜಿ ಎಂದು ಪುಟ್ಟ ಹುಡುಗಿ ಕೂಗಿಕೊಂಡು ಬಂದಳು. ‘ಯಾಕೆ ರಶ್ಮಿ, ಏನಾಯ್ತೆ, ನಿಮ್ಮಪ್ಪ, ದೊಡ್ಡಪ್ಪ ಮತ್ತೆ ಗುದ್ದಾಡ್ತಿದರೇನೆ?’ ಎಂದು ಕೇಳಿದಳು. ‘ಅಜ್ಜಿ ಇಬ್ಬರೂ ಮನೆ ಮುಂದಿನ ತೆಂಗಿನ ಮರದ ಬೇಲಿಯೊಳಗಡೆ ಬಿದ್ದಿದ್ದಾರೆ’ ಎಂದಳು. ‘ಮೂರು ಬಿಟ್ಟೋವು, ನನ್ನ ಹೊಟ್ಟೆಗೆ ಯಾಕರ ಹುಟ್ಟಿದವೋ ಏನೋ’ ಎಂದು ಶಪಿಸಿಕೊಂಡಳು. ಮೂರು ದಿನದ ಹಿಂದೆ, ಅಂದರೆ, ಇವೊತ್ತು ಸೋಮವಾರ ಅಲ್ಲವೆ, ಭಾನುವಾರ, ಶನಿವಾರ, ಹ್ಞಾ ಶುಕ್ರವಾರ ಮಧ್ಯಾಹ್ನ ಹೀಗಾಗಿತ್ತು: ಸಾರು ಮಾಡಲು ಸೊಪ್ಪು ಕಿತ್ತುಕೊಂಡು ಬರಲು ಹೊಲದ ಕಡೆ ಹೋಗಿದ್ದ ಅವಳು ತನ್ನ ಚಿಕ್ಕ ಮಗ ರಂಗ ಮತ್ತು ದೊಡ್ಡ ಮಗ ಓಬ ಇಬ್ಬರೂ ಒಬ್ಬರಿಗೊಬ್ಬರು ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು ಸೆಣಸಾಟಕ್ಕೆ ಇಳಿದಿದ್ದುದನ್ನು ಕಂಡಿದ್ದಳು. ಥೂ ಮಾನಮರ್ಯಾದೆ ಇಲ್ಲದವೆ, ಯಾಕರ ಹುಟ್ಟಿದರೋ, ನಿಮ್ಮಪ್ಪ ಹೋದನು ಹೋದ ತಣ್ಣಗೆ, ನನ್ನೂ ಅವನ ಜೊತೆ ಕರಕೊಂಡು ಹೋಗಬಾರದಿತ್ತ, ಈ ಎಲ್ಡು ನೇತ್ರಗಳಿಂದ ಏನೆಲ್ಲ ನೋಡಬೇಕೋ ಎಂದು ಮಡಿಲಲ್ಲಿ ಸೊಪ್ಪನ್ನು ಬಿಗಿಯಾಗಿ ಕಟ್ಟಿಕೊಂಡು ಅವರನ್ನು ಬಿಡಿಸಲು ಹೋಗಿದ್ದಳು. ಚಿಕ್ಕ ಮಗ ರಂಗ ‘ನಿಮ್ಮವ್ವನ್ನ ನೀನ್ಯಾಕೆ ಬಂದೆ ಹೋಗೆ ಇಲ್ಲಿ’ ಎಂದು ಅವಳನ್ನು ದೂಡಿದ. ಅವಳು ಮಾರುದೂರ ಹೋಗಿ ಬಿದ್ದಳು. ‘ದೊಡ್ಡೋನು ಅನ್ನಿಸಿಕೊಂಡೋನು ನಿನಗೂ ಬುದ್ದೀ ಇಲ್ಲವೇನಲೇ ಓಬ, ಅವನು ದೂಕಿದರೂ ಸುಮ್ಮನಿದಿಯಾ ಎಂದು ಬೈದುಕೊಳ್ಳುತ್ತ ಸಾಯಿರಿ, ನಿಮ್ಮಿಂದ ಯಾವ ದೇಶ ಉದ್ಧಾರ ಆಗಬೇಕು, ಯಾವ ಕೇರಿಗೆ ಒಳ್ಳೆದು ಆಗಬೇಕು, ಹೊಲ ಉಳಿಸಿದ್ದಕ್ಕೆ ನಿಮಗೆ ಇಷ್ಟೊಂದು ಧಿಮಾಕು, ಅವಾಗ್ಲೆ ಎಲ್ಲ ಮಾರಿದ್ದಿದ್ದರೆ ಚೆನ್ನಾಗಿರ್ತಿತ್ತು’ ಎಂದು ಬೈದುಕೊಂಡ ತನ್ನನ್ನು ತಾನೇ ಶಪಿಸಿಕೊಳ್ಳುತ್ತ ಮನೆಯ ಕಡೆ ಬಂದಿದ್ದಳು.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಎಡಬಲಗಳ ಸುತ್ತಮುತ್ತ: ಮಾತಿನ ಧೂಳು
ಕೃತಿ: ಯಾಬ್ಲಿ (ಸಣ್ಣಕತೆಗಳು)
ಲೇಖಕ: ಎಚ್. ಆರ್ ರಮೇಶ
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 160 ರೂ.
ಕಲೆ/ಸಾಹಿತ್ಯ
Narendra Modi : ಕಲಾವಿದನ ಕುಂಚ, ಕೃತಕ ಬುದ್ಧಿಮತ್ತೆ ಸೇರಿಕೊಂಡರೆ ಪ್ರಕೃತಿಯಲ್ಲೇ ಕಾಣುತ್ತದೆ ಮೋದಿ ಮುಖ
“ನೀವೂ ಅವರನ್ನು ನೋಡಿದ್ದೀರಾ?” ಎಂದು ಕಲಾವಿದ ಮಾಧವ್ ಕೊಹ್ಲಿ ಅವರು ಕೃತಕ ಬುದ್ಧಿ ಮತ್ತೆಯ ನೆರವಿನಿಂದ ತಾವು ರಚಿಸಿದ ಮೋದಿ (Narendra Modi) ಚಿತ್ರವನ್ನು ಹಂಚಿಕೊಂಡಿದ್ದಾರೆ.
ನವ ದೆಹಲಿ: ಸೃಜನಶೀಲತೆಯ ಎಲ್ಲೆ ಮೀರುವುದಕ್ಕೆ ಕೃತಕ ಬುದ್ಧಿಮತ್ತೆ ನೆರವಾಗುತ್ತಿದೆ. ಅಚ್ಚರಿ ಮೂಡಿಸುವಂಥ ಚಿತ್ರಗಳನ್ನು ರಚಿಸಲು ಕಲಾವಿದರು ವಿಭಿನ್ನ ಎಐ-ಚಾಲಿತ ಸಾಧನಗಳನ್ನು ಹೆಚ್ಚಾಗಿ ಬಳಸಲು ಆರಂಭಿಸಿದ್ದಾರೆ. ಮಾಧವ್ ಕೊಹ್ಲಿ ಅಂತಹ ಕಲಾವಿದರಲ್ಲಿ ಒಬ್ಬರು, ಅವರು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮೋಡಿಮಾಡುವ ದೃಶ್ಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿನ ಸೃಷ್ಟಿಗಳಲ್ಲಿ ಒಂದು ದ್ವೀಪದ ಚಿತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ಮುಖವನ್ನು ತೋರಿಸಲಾಗಿದೆ. ಆದಾಗ್ಯೂ, ತಂತ್ರಜ್ಞಾನವನ್ನು ತಮ್ಮ ಕಲಾತ್ಮಕ ಅಭಿವ್ಯಕ್ತಿಯೊಂದಿಗೆ ಹೇಗೆ ಬೆರೆಸಿದರು ಮತ್ತು ನರೇಂದ್ರ ಮೋದಿಯವರ ಮುಖದ ರೂಪರೇಖೆಯನ್ನು ರೂಪಿಸುವ ರೀತಿಯಲ್ಲಿ ಚಿತ್ರವನ್ನು ಹೇಗೆ ರಚಿಸಿದರು ಎಂಬುದು ವಿಸ್ಮಯವೇ ಸರಿ.
Do you see him too? pic.twitter.com/QjJzO4fBbF
— Madhav Kohli (@mvdhav) September 23, 2023
ಕೊಹ್ಲಿ ತಮ್ಮ ಸೃಷ್ಟಿಯನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದು, ನೀವು ಅವರನ್ನು ಸಹ ನೋಡುತ್ತೀರಾ? ಎಂಬ ಒಂದು ಸಾಲಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಚಿತ್ರವು ಅಸ್ತಮಿಸುವ ಸೂರ್ಯನ ಕಿರಣಗಳು ಸಾಗಿ ಬರುವ ಆಕಾಶದ ಹಿನ್ನೆಲೆಯಲ್ಲಿ ಸಣ್ಣ ಮತ್ತು ಸುಂದರ ದ್ವೀಪವನ್ನು ತೋರಿಸುತ್ತದೆ. ಮೊದಲ ನೋಟದಲ್ಲಿ, ನೋಡುಗನಿಗೆ ಪ್ರಧಾನಿಯ ಮುಖವನ್ನು ಕಾಣದಿರಬಹುದು. ಆಧರೆ ಸೂಕ್ಷ್ಮವಾಗಿ ನೋಡಿದರೆ ಮುಖ ಕಾಣುವುದು ಸ್ಪಷ್ಟ.
ಇದನ್ನೂ ಓದಿ : Women’s Reservation Bill : ಮಹಿಳಾ ಮೀಸಲಾತಿ ವಿರೋಧಿಸಿದವರಿಗೆ ಭೀತಿ ಶುರುವಾಗಿದೆ; ಮೋದಿ ಲೇವಡಿ
ಈ ಟ್ವೀಟ್ ಅನ್ನು ಕೆಲವು ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ ಅದು 2,500 ವೀಕ್ಷಣೆಗಳನ್ನು ಕಂಡಿದೆ. ಎಕ್ಸ್ ಬಳಕೆದಾರರೊಬ್ಬರು ಪೋಸ್ಟ್ಗೆ ಪ್ರತಿಕ್ರಿಯಿಸುವಾಗ ಇದು ಅದ್ಭುತ ಎಂದು ಬರೆದಿದ್ದಾರೆ. ಚಿತ್ರವನ್ನು ರಚಿಸಲು ಯಾವ ಅಪ್ಲಿಕೇಶನ್ ಅನ್ನು ಬಳಸಲಾಗಿದೆ ಎಂದು ಇನ್ನೊಬ್ಬ ವ್ಯಕ್ತಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕೊಹ್ಲಿ, Stable diffusion ಎಂದು ಉತ್ತರಿಸಿದ್ದಾರೆ.
ಇದು ಕೃತಕ ಬುದ್ಧಿಮತ್ತೆ ಪ್ಲಾಟ್ ಫಾರ್ಮ್ ಆಗಿದ್ದು, ಬಳಕೆದಾರರು ವಿವರಣಾತ್ಮಕ ಚಿತ್ರಗಳನ್ನು ರಚಿಸಬಹುದು. ಪ್ಲಾಟ್ಫಾರ್ಮ್ನ ಅಧಿಕೃತ ವೆಬ್ಸೈಟ್ ಪ್ರಕಾರ, ಬಳಕೆದಾರರು ಎಐ ಚಿತ್ರಗಳನ್ನು “ಸಣ್ಣ ಪ್ರಾಂಪ್ಟ್ಗಳೊಂದಿಗೆ ರಚಿಸಬಹುದು. ಚಿತ್ರಗಳೊಳಗೆ ಪದಗಳನ್ನು ರಚಿಸಬಹುದು.
ಕಲೆ/ಸಾಹಿತ್ಯ
Booker Prize 2023: ಭಾರತೀಯ ಮೂಲದ ಚೇತನಾ ಮಾರೂ ಕೃತಿ ʼವೆಸ್ಟರ್ನ್ ಲೇನ್ʼ ಬೂಕರ್ ಪ್ರಶಸ್ತಿಯ ಶಾರ್ಟ್‌ಲಿಸ್ಟ್‌ಗೆ
ಚೇತನಾ ಮಾರೂ ಅವರ ʼವೆಸ್ಟರ್ನ್ ಲೇನ್’ ಗೋಪಿ ಎಂಬ 11 ವರ್ಷದ ಬ್ರಿಟಿಷ್ ಗುಜರಾತಿ ಹುಡುಗಿ ಮತ್ತು ಅವಳ ಕುಟುಂಬದೊಂದಿಗೆ ಅವಳ ಸಂಬಂಧದ ಸುತ್ತಲಿನ ಕಥೆಯಾಗಿದೆ.
ಹೊಸದಿಲ್ಲಿ: ಭಾರತೀಯ ಮೂಲದ ಲೇಖಕಿ ಚೇತನಾ ಮಾರೂ (Chetna Maroo) ಅವರ ಕಾದಂಬರಿ ʼವೆಸ್ಟರ್ನ್ ಲೇನ್ʼ (Western lane) ಈ ವರ್ಷದ ಬೂಕರ್ ಪ್ರಶಸ್ತಿಯ (Booker Prize 2023) ಶಾರ್ಟ್ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.
ಬೂಕರ್ ಪ್ರಶಸ್ತಿ 2023ರ (Booker Award 2023) ತೀರ್ಪುಗಾರರ ಸಮಿತಿಯು 13 ಕೃತಿಗಳ ಲಾಂಗ್‌ಲಿಸ್ಟ್ ಮಾಡಿದ ಪಟ್ಟಿಯಿಂದ ಆರು ಕಾದಂಬರಿಗಳ ಅಂತಿಮ ಪಟ್ಟಿಯನ್ನು ಗುರುವಾರ ಪ್ರಕಟಿಸಿತು. ಬೂಕರ್ ಡಜನ್ ಎಂದು ಇದನ್ನು ಕರೆಯಲಾಗುತ್ತದೆ. ಇವುಗಳನ್ನು ಕಳೆದ ವರ್ಷ ಅಕ್ಟೋಬರ್ ಮತ್ತು ಈ ವರ್ಷದ ಸೆಪ್ಟೆಂಬರ್ ನಡುವೆ ಪ್ರಕಟಿಸಲಾದ 163 ಪುಸ್ತಕಗಳಿಂದ ಆಯ್ಕೆ ಮಾಡಲಾಗಿದೆ.
ಭಾರತೀಯ ಮೂಲದ ಲಂಡನ್ ನಿವಾಸಿ ಲೇಖಕಿ ಚೇತನಾ ಮಾರೂ ಅವರ ಚೊಚ್ಚಲ ಕಾದಂಬರಿ ʼವೆಸ್ಟರ್ನ್ ಲೇನ್’ ಪಟ್ಟಿಗೆ ಸೇರಿಕೊಂಡಿದೆ. ಪಟ್ಟಿಯಲ್ಲಿರುವ ಇತರ ಕೃತಿಗಳೆಂದರೆ ಪಾಲ್ ಲಿಂಚ್ (ಐರ್ಲೆಂಡ್) ಅವರ ಪ್ರಾಫೆಟ್ ಸಾಂಗ್, ಪಾಲ್ ಮುರ್ರೆ (ಐರ್ಲೆಂಡ್) ಅವರ ದಿ ಬೀ ಸ್ಟಿಂಗ್, ಸಾರಾ ಬರ್ನ್‌ಸ್ಟೈನ್ (ಕೆನಡಾ) ಅವರ ಸ್ಟಡಿ ಫಾರ್ ಒಬೀಡಿಯೆನ್ಸ್, ಜೊನಾಥನ್ ಎಸ್ಕೋಫರಿ (ಯುಎಸ್) ಅವರ ಇಫ್ ಐ ಸರ್ವೈವ್ ಯು, ಮತ್ತು ಪಾಲ್ ಹಾರ್ಡಿಂಗ್ (ಯುಎಸ್) ಅವರ ದಿಸ್ ಅದರ್ ಈಡನ್ (ಯುಎಸ್).
ಚೇತನಾ ಮಾರೂ ಅವರ ʼವೆಸ್ಟರ್ನ್ ಲೇನ್’ ಗೋಪಿ ಎಂಬ 11 ವರ್ಷದ ಬ್ರಿಟಿಷ್ ಗುಜರಾತಿ ಹುಡುಗಿ ಮತ್ತು ಅವಳ ಕುಟುಂಬದೊಂದಿಗೆ ಅವಳ ಸಂಬಂಧದ ಸುತ್ತಲಿನ ಕಥೆಯಾಗಿದೆ. ಈ ಕಾದಂಬರಿಯು ವಲಸಿಗ ತಂದೆ ತನ್ನ ಕುಟುಂಬವನ್ನು ಏಕಪೋಷಕನಾಗಿ ಬೆಳೆಸುವ ಕಥೆಯನ್ನು ವಿಸ್ತರಿಸುತ್ತದೆ. ಸ್ಕ್ವಾಷ್ ಕ್ರೀಡೆಯನ್ನು ಸಂಕೀರ್ಣ ಮಾನವ ಭಾವನೆಗಳಿಗೆ ರೂಪಕವಾಗಿ ಬಳಸಿದ್ದಕ್ಕಾಗಿ ಬೂಕರ್ ನ್ಯಾಯಾಧೀಶರು ಈ ಪುಸ್ತಕವನ್ನು ಶ್ಲಾಘಿಸಿದ್ದಾರೆ.
ಚೇತನಾ ಮಾರೂ ಅವರ ಪ್ರಕಾರ ʼʼಇದೊಂದು ಕ್ರೀಡಾ ಕಾದಂಬರಿ. ಇದು ಭವಿಷ್ಯದ ಕಾದಂಬರಿ, ಆಂತರಿಕ ಕಾದಂಬರಿ, ದುಃಖದ ಬಗೆಗಿನ ಕಾದಂಬರಿ, ವಲಸಿಗರ ಅನುಭವದ ಕಾದಂಬರಿ ಎಂದೂ ಕರೆಯಬಹುದು.ʼʼ
ಬೂಕರ್ ಪ್ರಶಸ್ತಿಯ ವಿಜೇತರನ್ನು ನವೆಂಬರ್ 26ರಂದು ಘೋಷಿಸಲಾಗುತ್ತದೆ. ಗೆದ್ದವರು £50,000 (50.92 ಲಕ್ಷ ರೂ.) ಬಹುಮಾನ ಪಡೆಯುತ್ತಾರೆ. ಶಾರ್ಟ್ ಲಿಸ್ಟ್‌ನಲ್ಲಿರುವ ಇತರರಿಗೆ £2,500 (2.54 ಲಕ್ಷ ರೂ.) ದೊರೆಯುತ್ತದೆ. ಈ ಪ್ರತಿಷ್ಠಿತ ಪ್ರಶಸ್ತಿಯು ಪ್ರಪಂಚದ ಯಾವುದೇ ಕಡೆ ಇಂಗ್ಲಿಷ್‌ನಲ್ಲಿ ಬರೆಯಲ್ಪಟ್ಟ ಕಾದಂಬರಿಗಳಿಗೆ ಮೀಸಲಾಗಿದೆ.
ಇದನ್ನೂ ಓದಿ: Booker award: ಭಾರತೀಯ ಲೇಖಕಿ ಗೀತಾಂಜಲಿ ಶ್ರೀ ಕಾದಂಬರಿಗೆ ಮನ್ನಣೆ
-
ದೇಶ14 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ22 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ಸುವಚನ9 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ15 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ದೇಶ15 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್21 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ22 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್18 hours ago
Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್