Site icon Vistara News

ಮಕ್ಕಳ ಕಥೆ | ಕಾಗದದ ಒಳಗೆ ಬೆಂಕಿ, ಗಾಳಿ, ಸಂಗೀತ ಹಿಡಿದಿಟ್ಟಳಾ ಹುಡುಗಿ!

children story

ಚೀನಾ ದೇಶದ ಒಂದೂರಿನಲ್ಲಿ ತಂದೆಯೊಬ್ಬ ತನ್ನ ನಾಲ್ವರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಅವನ ಮೊದಲ ಮೂವರು ಮಕ್ಕಳಿಗೆ ಮದುವೆಯಾಗಿ, ಮೂವರು ಸೊಸೆಯಂದಿರೂ ಮನೆಗೆ ಬಂದಿದ್ದರು. ಒಂದೆರಡು ವರ್ಷಗಳ ಅಂತರದಲ್ಲೇ ಮೂವರು ಹುಡುಗರು ಮದುವೆಯಾಗಿದ್ದು ಮಾತ್ರವಲ್ಲದೆ, ಅವರ ಹೆಂಡತಿಯರು ಒಂದೇ ಊರಿನ ಗೆಳತಿಯರಾಗಿದ್ದರು.

ನಾಲ್ವರು ಸಹೋದರರ ತಾಯಿ ಕಾಲವಾಗಿ ಕೆಲವು ಸಮಯವಾದ್ದರಿಂದ ಹೊಸದಾಗಿ ಬಂದ ಸೊಸೆಯರಿಗೆ ಮನೆಯಲ್ಲಿ ಅತ್ತೆಯಿರಲಿಲ್ಲ. ಎಲ್ಲಾ ಹೊಣೆಯನ್ನೂ ಈ ಹುಡುಗಿಯರು ತಾವೇ ನಿಭಾಯಿಸಿಕೊಳ್ಳಬೇಕಿತ್ತು. ಆದರೆ ಇಲ್ಲೊಂದು ಸಮಸ್ಯೆಯಿತ್ತು. ಇವರೆಲ್ಲರಿಗೂ ಪದೇಪದೆ ತಮ್ಮ ತಾಯಿಯನ್ನು ನೋಡುವ ಬಯಕೆಯಾಗುತ್ತಿತ್ತು. ಹಾಗಾಗಿ ತಮ್ಮ ತವರೂರಿಗೆ ಹೋಗಿ ಬರುವುದಕ್ಕೆ ಅವಕಾಶ ನೀಡಬೇಕೆಂದು ಮಾವನನ್ನು ಆಗಾಗ ಕೇಳುತ್ತಿದ್ದರು. ಮೊದಲಿಗೆ ಮಾವನೂ ಸಮ್ಮತಿಸಿದ್ದ. ಆದರೆ ಅವರು ಮತ್ತೆ ಮತ್ತೆ ಇದನ್ನೇ ಕೇಳತೊಡಗಿದಾಗ ಅವನಿಗೂ ಕಿರಿಕಿರಿಯಾಗತೊಡಗಿತು. ಈ ಸೊಸೆಯರಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದ.

ಮತ್ತೊಮ್ಮೆ ಅವರು ತಮ್ಮ ತವರಿಗೆ ಹೋಗಲು ಅನುಮತಿ ಬೇಡಿದಾಗ ಅವರಿಗೆ ಅನುಮತಿಯನ್ನು ಕೊಟ್ಟ, ಜೊತೆಗೊಂದು ಶರತ್ತನ್ನೂ ಇಟ್ಟ. ʻನೀವೆಲ್ಲ ತವರಿಗೆ ಹೋಗಲು ಅನುಮತಿ ನೀಡದಷ್ಟು ಕಠಿಣ ಮನಸ್ಸಿನವ ನಾನಲ್ಲ. ಆದರೆ ನಿಮ್ಮ ತವರಿನಿಂದ ಬರುವಾಗ ಒಬ್ಬೊಬ್ಬರೂ ನನಗಾಗಿ ನಾ ಕೇಳಿದ್ದನ್ನು ತರಬೇಕುʼ ಎಂದು ನುಡಿದ. ಹಿಂದೆ-ಮುಂದೆ ವಿಚಾರ ಮಾಡದೆ ಹುಡುಗಿಯರೆಲ್ಲಾ ಇದಕ್ಕೆ ಒಪ್ಪಿದರು. ಅವರಿಗೀಗ ತಾಯಿ ಮನೆಗೆ ಹೋಗುವುದು ಮಾತ್ರವೇ ಮುಖ್ಯವಾಗಿತ್ತು. ʻನಿಮ್ಮಲ್ಲೊಬ್ಬಳು ಕಾಗದದಲ್ಲಿ ಬೆಂಕಿಯನ್ನು, ಇನ್ನೊಬ್ಬಳು, ಕಾಗದದಲ್ಲಿ ಗಾಳಿಯನ್ನು, ಮತ್ತೊಬ್ಬಳು ಗಾಳಿಯಲ್ಲಿ ಸಂಗೀತವನ್ನೂ ನನಗಾಗಿ ತರಬೇಕು. ತರಲಾಗದಿದ್ದರೆ ಮರಳಿ ಮನೆಗೆ ಬರಬೇಡಿʼ ಎಂಬ ವಿಚಿತ್ರ ಶರತ್ತನ್ನಿಟ್ಟ. ಮೂವರೂ ಹೆಚ್ಚು ಯೋಚಿಸದೆ ಇವನ್ನೆಲ್ಲಾ ತರುತ್ತೇವೆ ಎಂದು ಮಾತು ಕೊಟ್ಟು ಹೊರಟರು.

ತವರಿನ ದಾರಿಯಲ್ಲಿ ನಡೆಯುತ್ತಾ ಹೋಗುವಾಗ ಇವರ ಬಾಯಿಗೆ ಬಿಡುವೇ ಇರಲಿಲ್ಲ. ಅಲ್ಲಿ ಊರಿಗೆ ಹೋದ ಮೇಲೆ ಏನು ಮಾಡಬೇಕು, ಯಾರಾರನ್ನೆಲ್ಲಾ ಕಾಣಬೇಕು, ಏನೇನನ್ನೆಲ್ಲಾ ತಿನ್ನಬೇಕು ಎಂದೆಲ್ಲಾ ಹರಟುತ್ತಾ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಒಬ್ಬಳ ಕಾಲಿನ ಚಪ್ಪಲಿಯ ಉಂಗುಷ್ಠ ಕಿತ್ತು ಬಂತು. ಅದನ್ನು ಸರಿಮಾಡಲು ಎಲ್ಲರೂ ನಿಂತರು. ತವರೂರೇನೋ ಹತ್ತಿರವಿದೆ, ಹೇಗೂ ನಡೆದುಬಿಡಬಹುದು. ಆದರೆ ಮರಳಿ ಬರುವಾಗಲೂ ಇವಳ ಚಪ್ಪಲಿ ಹೀಗೇ ಇದ್ದರೆ ನಡೆಯುವುದು ಹೇಗೆ ಎಂಬ ವಿಚಾರ ಎಲ್ಲರಿಗೂ ಬಂತು. ಆ ಸಂದರ್ಭದಲ್ಲಿ ಎಲ್ಲರಿಗೂ ನೆನಪಾಗಿದ್ದು, ಮರಳಿ ಬರುವಾಗ ಏನೇನು ತರಬೇಕು ಎಂಬ ಮಾವನ ಶರತ್ತು.

ʻಇಂಥ ವಿಚಿತ್ರ ವಸ್ತುಗಳನ್ನು ಯಾರಿಗಾದರೂ ತರುವುದಕ್ಕೆ ಸಾಧ್ಯವೇ? ಅಂತೂ ನಾವೆಲ್ಲ ಇನ್ನು ಮರಳಿ ಮನೆಗೆ ಹೋಗುವಂತಿಲ್ಲʼ ಎಂದು ಗಾಬರಿಗೊಂಡು ಎಲ್ಲರೂ ಕುಳಿತು ಅಳತೊಡಗಿದರು. ಅವರೆಲ್ಲಾ ಹೀಗೆ ಅಳುತ್ತಾ ಕುಳಿತಾಗ, ಕುದುರೆಯ ಸವಾರಿ ಮಾಡುತ್ತಾ ಹುಡುಗಿಯೊಬ್ಬಳು ಆ ದಿಕ್ಕಿಗೆ ಬಂದಳು. ಇವರ ಶೋಕ ಕಂಡು ಕುತೂಹಲಗೊಂಡು, ವಿಚಾರಿಸಿದಳು. ತಮ್ಮ ಮಾವನ ಶರತ್ತನ್ನು ತಿಳಿಸಿದ ಹುಡುಗಿಯರು, ಇನ್ನು ತಮಗೆ ಮನೆಯಿಲ್ಲ ಎಂದು ದುಃಖಿತರಾದರು.

ಇದನ್ನೂ ಓದಿ: ಮಕ್ಕಳ ಕಥೆ: ಕಾಡುಪಾಲಾದ ಹೆಂಡತಿಯೂ ಸನ್ಯಾಸಿಯ ವರವೂ

ʻಇಷ್ಟೇನಾ? ಬನ್ನಿ ನನ್ನ ಜೊತೆಗೆ. ಹೆದರಿದರೆ ಯಾವ ಕೆಲಸವೂ ಆಗುವುದಿಲ್ಲʼ ಎಂದು ಅವರನ್ನು ತನ್ನ ಮನೆಗೆ ಕರೆದೊಯ್ದಳು. ʻಬೆಂಕಿಯನ್ನು ಕಾಗದದಲ್ಲಿ ತರಬೇಕು ತಾನೆ…ನೋಡಿಲ್ಲಿʼ ಎನ್ನುತ್ತಾ ಕಾಗದದ ಆಕಾಶದೀಪವೊಂದನ್ನು ಮುಂದಿಟ್ಟಳು. ಇನ್ನೊಬ್ಬಳ ಬಳಿ ಬಂದು, ʻಗಾಳಿಯನ್ನು ಕಾಗದದಲ್ಲಿ ತರಬೇಕಲ್ಲವೇ, ಇಗೋʼ ಎನ್ನುತ್ತಾ ಕಾಗದದ ಬೀಸಣಿಕೆಯನ್ನು ಕೈಗೆ ಕೊಟ್ಟಳು. ಮೂರನೆಯವಳ ಬಳಿ, ʻಗಾಳಿಯಲ್ಲಿ ಸಂಗೀತವೇನೂ ಕಷ್ಟವಲ್ಲ, ತೆಗೆದುಕೋʼ ಎಂದು ಮಧುರ ನಿನಾದ ಹೊರಡಿಸುವ ಗಾಳಿ ಗಂಟೆಯೊಂದನ್ನು ಕೈಗಿತ್ತಳು. ಮೂವರಿಗೂ ಸಂತೋಷವಾಯಿತು. ನೆಮ್ಮದಿಯಿಂದ ತಾಯಿ ಮನೆಗೆ ಹೋಗಿ ನಾಲ್ಕಾರು ದಿನ ಇದ್ದು, ಮನೆಗೆ ಮರಳಿದರು.

ಅವರನ್ನು ಕಾಣುತ್ತಿದ್ದಂತೆ ಕೆಂಡಾಮಂಡಲವಾದ ಅವರ ಮಾವ, ʻನಿಮಗೇನು ಹೇಳಿ-ಕೇಳಿ ಮಾಡುವವರು ಯಾರೂ ಇಲ್ಲವೇ? ಎಷ್ಟು ದಿನವಾಯಿತು ನೀವೆಲ್ಲ ತವರಿಗೆ ಹೋಗಿ? ನಾ ಕೇಳಿದ್ದ ವಸ್ತುಗಳೆಲ್ಲಾ ಎಲ್ಲಿ?ʼ ಎಂದು ಅಬ್ಬರಿಸಿದ. ಮೂವರು ತಾವು ತಂದಿದ್ದ ವಸ್ತುಗಳನ್ನು ಮುಂದಿಟ್ಟರು. ಮಾವನಿಗೆ ಆಶ್ಚರ್ಯವಾಯಿತು. ʻನೀವೆಲ್ಲಾ ಇಷ್ಟೊಂದು ಬುದ್ಧಿವಂತರಾದದ್ದು ಹೇಗೆ?ʼ ಎಂದು ಕೇಳಿದ. ಇವರು ತಮಗೆ ಕುದುರೆಯ ಮೇಲಿನ ಚತುರ ಹುಡುಗಿ ಸಿಕ್ಕ ಕಥೆಯನ್ನೆಲ್ಲಾ ಹೇಳಿದರು. ʻಅವಳಿಗೆ ಮದುವೆಯಾಗಿದೆಯೇ?ʼ ಮಾವ ಮರುಪ್ರಶ್ನೆ ಕೇಳಿದ. ಇಲ್ಲವೆಂದರು ಸೊಸೆಯರು. ʻಹಾಗಿದ್ದರೆ ಅವಳನ್ನು ಹುಡುಕಿ ತನ್ನಿ. ಅವಳು ಒಪ್ಪಿದರೆ ನನ್ನ ಕೊನೆಯ ಮಗನಿಗೆ ವಧುವಾಗಿಸಿಕೊಳ್ಳುತ್ತೇನೆʼ ಎಂದ ಆತನ ಸಂತೋಷದಿಂದ.

ಹೀಗೆ ಚತುರ ಹುಡುಗಿ ಆ ಮನೆಯ ಕೊನೆಯ ಸೊಸೆಯಾದಳು. ಆದರೆ ಆಕೆ ಎಲ್ಲರಿಗಿಂತ ಬುದ್ಧಿವಂತೆ ಎಂಬ ಕಾರಣಕ್ಕೆ ಆಕೆಯನ್ನು ಆ ಮನೆಯ ಯಜಮಾನಿ ಎಂದು ಮಾವ ಘೋಷಿಸಿದ. ಆನಂತರದಿಂದ ಎಲ್ಲರೂ ಒಟ್ಟಾಗಿ ಸುಖವಾಗಿದ್ದರು.

ಇದನ್ನೂ ಓದಿ: ಮಕ್ಕಳ ಕಥೆ: ಮೊಸಳೆಗೆ ಹೆಂಡತಿ ಹುಡುಕಿದ ನರಿ

Exit mobile version