ಬಾವಲಿ ಮತ್ತು ಇಲಿಗಳು ಸ್ನೇಹಿತರಾಗಿದ್ದ ಕಾಲವದು. ಇಬ್ಬರಿಗೂ ಪ್ರತಿದಿನ ಒಬ್ಬರನ್ನೊಬ್ಬರು ನೋಡಲೇಬೇಕು ಎನ್ನುವಷ್ಟು ಆತ್ಮೀಯವಾಗಿದ್ದವು. ಬಾವಲಿ ತುಂಬಾ ರುಚಿಕಟ್ಟಾಗಿ ಅಡುಗೆ ಮಾಡುತ್ತಿತ್ತು. ಇಲಿ ಅದನ್ನು ಎಷ್ಟೇ ಖುಷಿಯಿಂದ ಉಣ್ಣುತ್ತಿತ್ತು.
ಒಮ್ಮೆ ಇಲಿಗೆ ಅನುಮಾನ ಬಂತು. ತನ್ನ ಮನೆಯಲ್ಲಿ ಮಡದಿ ಎಷ್ಟೇ ಪ್ರಯತ್ನಿಸಿದರೂ ಇಷ್ಟು ಚೆನ್ನಾದ ರುಚಿ ಇರುವುದಿಲ್ಲ ಅಡುಗೆಗೆ. ಹಾಗಾದರೆ ಈ ಬಾವಲಿ ಹೇಗೆ ಅಡುಗೆ ಮಾಡುತ್ತದೆ ಎಂಬುದಾಗಿ. ಅದನ್ನು ಕೇಳಿಯೂ ಬಿಟ್ಟಿತು ಇಲಿ.
ಅದಾ? ನಾನು ಅಡುಗೆ ಮಾಡುವಾಗ ನನ್ನನ್ನೇ ನಾನು ಕುದಿಸಿ ಅಡುಗೆ ಮಾಡುತ್ತೇನೆ. ಅದಕ್ಕಾಗಿ ಅದರ ರುಚಿ ಹೆಚ್ಚುತ್ತದೆʼ ಎಂದಿತು ಬಾವಲಿ. ಇದು ಹೇಗೆ ಸಾಧ್ಯ ಎಂಬುದೇ ಇಲಿಗೆ ಅರ್ಥವಾಗಲಿಲ್ಲ. ʻತೋರಿಸುತ್ತೇನೆ ತಾಳುʼ ಎಂದ ಬಾವಲಿ ದೊಡ್ಡದೊಂದು ಪಾತ್ರೆಯಲ್ಲಿ ನೀರು ಕುದಿಯಲಿಟ್ಟಿತು. ನೀರಿನಲ್ಲಿ ಗುಳ್ಳೆ ಬರುತ್ತಿದ್ದಂತೆ ತಾನೇ ನೀರೊಳಗೆ ಕುಳಿತುಕೊಂಡಿತು! ನೀರು ಸಾಕಷ್ಟು ಕುದ್ದಾದ ಮೇಲೆ ಅಲ್ಲಿಂದ ಮೇಲೆದ್ದ ಬಾವಲಿ ಅದೇ ನೀರನ್ನು ಅಡುಗೆಗೆ ಬಳಸಿತು.
ಇದನ್ನೂ ಓದಿ: ಮಕ್ಕಳ ಕಥೆ: ಆಮೆಯ ಚಿಪ್ಪಿನಲ್ಲಿ ಬಿರುಕು ಏಕಿದೆ?
ಅಡುಗೆ ರುಚಿಯಾಗಿತ್ತು. ʻಇದಾ ರಹಸ್ಯ!ʼ ಎಂದುಕೊಂಡಿತು ಇಲಿ. ಮನೆಗೆ ಹೋಗಿ ಮಡದಿಯಲ್ಲಿ ವಿಷಯ ತಿಳಿಸಿದ ಇಲಿ, ʻಇವತ್ತು ಅಡುಗೆಯನ್ನು ನಾನು ಮಾಡುತ್ತೇನೆ. ನೀನು ಪೇಟೆಗೆ ಹೋಗಿ ಇದಿಷ್ಟು ವಸ್ತುಗಳನ್ನು ತಾʼ ಎಂದು ಇಲಿಯಮ್ಮನನ್ನು ಹೊರಗೆ ಅಟ್ಟಿತು. ಹಾಗೆಯೆ ದೊಡ್ಡದೊಂದು ಪಾತ್ರೆಯಲ್ಲಿ ನೀರು ಕುದಿಯುತ್ತಿರುವಾಗ ತಾನದರಲ್ಲಿ ಕುಳಿತುಕೊಂಡಿತು. ಇಲಿಯಮ್ಮ ಪೇಟೆಯಿಂದ ಮರಳಿ ಮನೆಗೆ ಬರುವಷ್ಟರಲ್ಲಿ ಕುದಿಯುವ ನೀರಿನ ಪಾತ್ರೆಯಲ್ಲಿ ಅವಳ ಗಂಡ ಸತ್ತುಬಿದ್ದಿರುವುದು ಕಾಣಿಸಿತು. ಇದರಿಂದ ಶೋಕಿತಳಾದ ಇಲಿಯಮ್ಮ ರಾಜನಿಗೆ ದೂರು ನೀಡಿದಳು.
ಬಾವಲಿಯ ಮಾತಿನಿಂದಲೇ ಇಲಿ ಸತ್ತಿದ್ದು ಎಂದು ತೀರ್ಮಾನಿಸಿದ ರಾಜ, ಬಾವಲಿಯನ್ನು ಹುಡುಕಲು ತನ್ನ ಭಟರನ್ನು ಕಳುಹಿದ. ಬಾವಲಿ ಅವರಿಗೆ ಸಿಗದೆ ಪರಾರಿಯಾಯಿತು. ಅದಕ್ಕಾಗಿಯೇ ಇಂದಿಗೂ ಬಾವಲಿಗಳು ಹಗಲಿನಲ್ಲಿ ಹೊರಗೆ ಅಡ್ಡಾಡದೆ ರಾತ್ರಿ ಮಾತ್ರ ಹೊರಗೆ ಬರುತ್ತವಂತೆ.
ಇದನ್ನೂ ಓದಿ: ಮಕ್ಕಳ ಕಥೆ: ಆಮೆ ಕಾಡಿನ ರಾಜ ಆದದ್ದು ಹೇಗೆ?