Site icon Vistara News

ಕೋಟಿ ಮೀರಿತು ನೋಂದಣಿ: ಕೋಟಿ ಕಂಠ ಗಾಯನಕ್ಕೆ ಅಭೂತಪೂರ್ವ ಸ್ಪಂದನೆ

koti kantha gayana

ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಇದೇ ಅಕ್ಟೋಬರ್‌ ೨೮ ರಂದು ಆಯೋಜಿಸಿರುವ ” ಕೋಟಿ ಕಂಠ ಗಾಯನ” ಕಾರ್ಯಕ್ರಮದಲ್ಲಿ ಭಾಗವಹಿಸಲು ಬರೋಬ್ಬರಿ ೧ ಕೋಟಿ ೧೦ ಲಕ್ಷ ಜನರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದು, ನಿರೀಕ್ಷೆಗೂ ಮೀರಿ ಜನಸ್ಪಂದನೆ ವ್ಯಕ್ತವಾಗಿದೆ.

ದೇಶ- ವಿದೇಶಗಳಿಂದ ಈ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಕನ್ನಡಿಗರು ಉತ್ಸಾಹದಿಂದ ಮುಂದೆ ಬಂದಿದ್ದು, ಅಕ್ಟೋಬರ್ ೨೮ರಂದು ಕೋಟಿ ಕಂಠ ಗಳಲ್ಲಿ ಕನ್ನಡದ ವೃಂದ ಗಾಯನ ಮೊಳಗಿ ದಾಖಲೆ ಸೃಷ್ಟಿಯಾಗಲಿದೆ.

ಈ ಕಾರ್ಯಕ್ರಮ ನಿಮಿತ್ತ ಇಲಾಖೆ ವತಿಯಿಂದ ಪ್ರತ್ಯೇಕ ಕ್ಯೂ ಆರ್ ಕೋಡ್ ಆರಂಭಿಸಲಾಗಿದ್ದು, ಇದರಲ್ಲಿ ೨೯ ರಾಜ್ಯಗಳು ಹಾಗೂ ೨೫ ರಾಷ್ಟ್ರಗಳಿಂದ ಕನ್ನಡ ಪ್ರೇಮಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಕ್ಯೂ ಆರ್ ಕೋಡ್ ನಲ್ಲಿ ೧.೧ ಕೋಟಿ ಹೆಸರು ನೋಂದಣಿಯಾಗಿತ್ತು. ಬುಧವಾರ ಈ ಸಂಖ್ಯೆ೧.೧೦ ಕೋಟಿಗೆ ತಲುಪಿದೆ. ಮುಂದಿ‌ನ ಎರಡು ದಿನಗಳಲ್ಲಿ ಈ ಸಂಖ್ಯೆ ೧.೫೦ ಕೋಟಿ ಮೀರಲಿದೆ ಎಂಬ ನಿರೀಕ್ಷೆಯಿದೆ.

ಈ ಕಾರ್ಯಕ್ರಮದ ನಿಮಿತ್ತ ಸಚಿವ ಸುನಿಲ್‌ಕುಮಾರ್ ನೇತೃತ್ವದಲ್ಲಿ ೫೦ ಕ್ಕೂ ಹೆಚ್ಚು ಸಭೆಗಳು ನಡೆದಿವೆ.‌ ಆಟೊ ಚಾಲಕರ ಸಂಘ, ಮಹಿಳಾ ಸ್ವಸಹಾಯ ಸಂಘ, ಸಹಕಾರಿ ಬ್ಯಾಂಕ್, ಗ್ರಾಮ ಪಂಚಾಯಿತಿ, ಐಟಿಬಿಟಿ ಉದ್ಯೋಗಿಗಳು, ವಿಶ್ವವಿದ್ಯಾಲಯ, ಶಾಲಾ- ಕಾಲೇಜು, ಚಾಲಕ ಸಂಘ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಸಂಘಟನೆಗಳ ಜತೆಗೆ ಸಚಿವರು ಸಭೆ ನಡೆಸಿದ್ದಾರೆ.

ಆರು ಗೀತೆ
ಅಕ್ಟೋಬರ್‌ ೨೮ರಂದು ಬೆಳಗ್ಗೆ ನಡೆಯುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ” , ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚಲುವ ಕನ್ನಡನಾಡು,  ಡಾ.ಚನ್ನವೀರ ಕಣವಿ ಅವರ “ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ “, ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮವಾ “ , ಡಾ.ಡಿ.ಎಸ್.ಕರ್ಕಿಯವರ “ಹಚ್ಚೇವು ಕನ್ನಡದ ದೀಪ “ ಹಾಗೂ ಡಾ. ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು “ ಎಂಬ ಆರು ಗೀತೆಗಳನ್ನು ಕೋಟಿ ಕಂಠಗಳಲ್ಲಿ ಹಾಡಲಾಗುತ್ತದೆ

ಎಲ್ಲೆಲ್ಲಿ ಕಾರ್ಯಕ್ರಮ
ರಾಜ್ಯ, ಗಡಿನಾಡು, ಸಾಗರೋತ್ತರ ಹೊರತುಪಡಿಸಿ ರಾಜ್ಯದ ಹದಿನೈದು ಸ್ಥಳಗಳಲ್ಲಿ ವಿಶೇಷ ಕಾರ್ತಕ್ರಮ ಆಯೋಜಿಸಲಾಗಿದೆ. ವಿಧಾನಸೌಧದ ಮೆಟ್ಟಿಲು, ಗಾಂಧಿ ಪ್ರತಿಮೆ, ಹೈಕೋರ್ಟ್, ಕಂಠೀರವ ಕ್ರೀಡಾಂಗಣ, ವಿಮಾನ, ರೈಲು, ಚಿತ್ರದುರ್ಗದ ಕೋಟೆ, ಕಡಲ ತೀರಗಳಲ್ಲಿ ಕನ್ನಡದ ಗೀತೆ ಮೊಳಗಲಿದೆ.

ಇದನ್ನೂ ಓದಿ | Audio | ನಾಡಗೀತೆಗೆ ಅನಂತಸ್ವಾಮಿ ಧಾಟಿ, ಪೂರ್ಣ ಸಾಹಿತ್ಯ: ದಶಕದ ಗೊಂದಲಕ್ಕೆ ರಾಜ್ಯ ಸರ್ಕಾರದಿಂದ ತೆರೆ

Exit mobile version