ಬೆಂಗಳೂರು: ಕನ್ನಡಿಗ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ (Ricky Kej) ಈ ವರ್ಷದ ಗ್ರ್ಯಾಮಿ ಪ್ರಶಸ್ತಿ (Grammy Awards 2023) ಗೆದ್ದುಕೊಂಡಿದ್ದಾರೆ. ಈ ಮೂಲಕ ದೇಶಕ್ಕೆ, ನಾಡಿಗೆ ಹೆಮ್ಮೆ ತಂದಿರುವ ಈ ಸಂಗೀತ ನಿರ್ದೇಶಕನ ಮೂರನೇ ಗ್ರ್ಯಾಮಿ ಅವಾರ್ಡ್ ಇದಾಗಿದೆ. ಇದರೊಂದಿಗೆ, ಮೂರು ಗ್ರ್ಯಾಮಿ ಪ್ರಶಸ್ತಿ ಗಳಿಸಿರುವ ಏಕೈಕ ಜೀವಂತ ಭಾರತೀಯ ಸಂಗೀತ ನಿರ್ದೇಶಕ ಇವರಾಗಿದ್ದಾರೆ.
ತಮ್ಮ ಮ್ಯೂಸಿಕ್ ಆಡಿಯೋ ಆಲ್ಬಂ ʻಡಿವೈನ್ ಟೈಡ್ಸ್ʼಗೆ ʼಬೆಸ್ಟ್ ಇಮ್ಮರ್ಸಿವ್ ಆಡಿಯೋ ಆಲ್ಬಂʼ ವಿಭಾಗದಲ್ಲಿ ಪ್ರಶಸ್ತಿಯನ್ನು ರಿಕ್ಕಿ ಕೇಜ್ ಅವರು ಸಹ ಸಂಗೀತಗಾರ ಸ್ಟೀವರ್ಟ್ ಕೋಪ್‌ಲ್ಯಾಂಡ್ ಜತೆಗೆ ಹಂಚಿಕೊಂಡಿದ್ದಾರೆ. ಕೋಪ್‌ಲ್ಯಾಂಡ್ ಅವರು ಜನಪ್ರಿಯ ಬ್ರಿಟಿಷ್ ರಾಕ್ ಬ್ಯಾಂಡ್ ʻದಿ ಪೋಲಿಸ್ʼನ ಡ್ರಮ್ಮರ್ ಆಗಿದ್ದಾರೆ.
ಕಳೆದ ವರ್ಷ ಈ ಜೋಡಿಯ ಇನ್ನೊಂದು ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿಯ ʼಬೆಸ್ಟ್ ನ್ಯೂ ಏಜ್ ಆಲ್ಬಂʼ ವಿಭಾಗದಲ್ಲಿ ಪ್ರಶಸ್ತಿ ದೊರೆತಿತ್ತು. ಜಗತ್ತಿನಾದ್ಯಂತದ ಮ್ಯೂಸಿಕ್ ಆಲ್ಬಂಗಳಿಗೆ ಗ್ರ್ಯಾಮಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಡಿವೈನ್ ಟೈಡ್ಸ್- ಇದು ಒಂಬತ್ತು ಹಾಡುಗಳ ಮ್ಯೂಸಿಕ್ ಆಲ್ಬಂ. ಬೆಂಗಳೂರು ಮೂಲದ ರಿಕಿ ಕೇಜ್ ಅವರ ʻವಿಂಡ್ಸ್ ಆಫ್ ಸಂಸಾರʼ ಆಲ್ಬಂ 2015ರಲ್ಲಿ ಅವರಿಗೆ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಅದು ಬೆಸ್ಟ್ ನ್ಯೂ ಏಜ್ ವಿಭಾಗದಲ್ಲಿ.