ನಮ್ಮೆಲ್ಲರ ಹೋರಾಟ ಇರುವುದೇ ಹೊಟ್ಟೆ ತುಂಬಿಸುವುದಕ್ಕೆ. ಆಹಾರ ಮೊದಲು. ಹೊಟ್ಟೆ ತುಂಬಿದ ನಂತರವೇ ಎಲ್ಲಾ. ನಾನು ಆರಂಭದಲ್ಲಿ ಕೆಲಸ ಮಾಡಿದಾಗ ನನಗೆ ಸಿಕ್ಕ ಸಂಭಾವನೆ ೨೫೦ ರೂಪಾಯಿ. ದುಡಿಮೆ ಹೊಟ್ಟೆಪಾಡಿಗೆ ಮತ್ತು ಖುಷಿಗೂ ಆದಾಗ ನಾವು ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತೇವೆ. ನನ್ನ ದುಡಿಮೆ ನನ್ನ ಖುಷಿಯೂ ಆಗಿತ್ತು. ಹೊಟ್ಟೆ ತುಂಬಿಸುವ ಹೋರಾಟವೂ ಆಗಿತ್ತು. ಹಾಗಂತ ನಾನು ದುಡ್ಡಿಗಾಗಿ ಕೆಲಸ ಮಾಡಿದವನಲ್ಲ. ನನ್ನ ಕೆಲಸ ನಾನು ಚೆನ್ನಾಗಿ ಮಾಡಬೇಕು ಎಂಬ ತುಡಿತದಿಂದ ದುಡಿದೆ. ೨೫೦ ರೂಪಾಯಿ ನಂತರ ೭೫೦ ರೂಪಾಯಿ ಸಂಭಾವನೆ ಸಿಕ್ಕಿತು. ದಿನ ಕಳೆಯುತ್ತಾ ೧೫೦೦ ರೂಪಾಯಿ ದುಡಿಯುವ ಮಟ್ಟಕ್ಕೆ ಬೆಳೆದೆ. ಮುಂದೆ ದಿನಕ್ಕೆ ೩೫೦೦೦ ರೂಪಾಯಿ ಸಂಭಾವನೆ ಗಳಿಸುವ ದಿನ ಬಂತು. ಕಡೆಗೆ ಸಿನಿಮಾವೊಂದಕ್ಕೆ ನಾನು ೧ ಲಕ್ಷ ರೂಪಾಯಿ ಸಂಭಾವನೆ ಪಡೆದೆ. ಅಷ್ಟು ಹೊತ್ತಿಗಾಗಲೇ ಹತ್ತು ವರ್ಷಗಳನ್ನು ನಾನು ಇಂಡಸ್ಟ್ರಿಯಲ್ಲಿ ಕಳೆದುಬಿಟ್ಟಿದ್ದೆ.
ನಾನು ಮೊದಲು ಓಡಾಡುತ್ತಿದ್ದ ವಾಹನ ಎಂದರೆ ಅದು ಲೂನಾ. ಲೂನಾದಲ್ಲಿ ಸುತ್ತಾಡುತ್ತಿದ್ದೆ. ಅನಂತರ ಟಿವಿಎಸ್ ಬಂತು. ಯಮಹಾ ಬೈಕ್ ಖರೀದಿಸಿದೆ. ಅಲ್ಲಿಂದ ಪ್ರೀಮಿಯರ್ ಪದ್ಮಿನಿ ಕಾರಿನ ಒಡೆಯನಾದೆ. ಎಸ್ಟೀಮ್, ಸ್ಕೋಡಾ ಕಾರುಗಳೆಲ್ಲಾ ಆದ ಮೇಲೆ ಈಗ ಆಡಿ. ಹೀಗೆ ಹಂತಹಂತವಾಗಿ ಎಲ್ಲರ ಜೀವನವೂ ಮುಂದುವರಿಯುತ್ತದೆ. ಅದಕ್ಕೆ ಬೇಕಾಗಿರುವುದು constant, consistent, smart effort.
ಮಾಡಲೇಬೇಕಾದ ಕೆಲಸಗಳ ಪಟ್ಟಿ
೧. ಪ್ರಾಕ್ಟೀಸ್ ಮಾಡಬೇಕು
ಪ್ರಾಕ್ಟೀಸ್ ಮಾಡುತ್ತಿದ್ದರೆ ಯಾವುದೇ ಕಷ್ಟದ ಕೆಲಸಗಳು ಕೂಡ ಸುಲಭವಾಗಿ ಬಿಡುತ್ತವೆ. ಕೆಲವು ಕೌಶಲಗಳು ಪ್ರಾಕ್ಟೀಸ್ ಮಾಡದೇ ಇದ್ದಾಗ ಭಾರಿ ಭಯ ಹುಟ್ಟಿಸುತ್ತಿರುತ್ತವೆ. ಪ್ರಾಕ್ಟೀಸ್ ಮಾಡುತ್ತಾ ಮಾಡುತ್ತಾ ತುಂಬಾ ಸುಲಭವಾಗಿ ಬಿಡುತ್ತದೆ.
೨. ಫಲಿತಾಂಶ ಕೊಡಬೇಕು
ಯಾವುದೇ ಕೆಲಸ ಹಿಡಿದ ಮೇಲೆ ಅದಕ್ಕೆ ಸೂಕ್ತವಾದ ಫಲಿತಾಂಶ ನೀಡಬೇಕು. ವರ್ಷವಿಡೀ ಓದಿ ವರ್ಷಾಂತ್ಯದಲ್ಲಿ ಪರೀಕ್ಷೆಯೇ ಬರೆಯದಿದ್ದರೆ ಅದಕ್ಕೆ ಅರ್ಥವಿಲ್ಲ. ನೀವು ಯಾವುದೇ ಕೆಲಸ ಮಾಡಿ ಅದಕ್ಕೆ ಫಲಿತಾಂಶ ಸಿಗುವ ಹಾಗೆ ನೋಡಿಕೊಳ್ಳಿ.
೩. ನೆರವು ಕೇಳುವುದರಲ್ಲಿ ತಪ್ಪಿಲ್ಲ
ನಾವು ಬಹಳ ಸಲ ನೆರವು ಕೇಳುವ ಸಂದರ್ಭ ಬಂದಾಗಲೂ ನೆರವು ಕೇಳಲು ಹಿಂದೇಟು ಹೊಡೆಯುತ್ತೇವೆ. ಯಾರು ನಮಗೆ ನಿಜವಾಗಿಯೂ ಸಹಾಯ ಮಾಡಬಲ್ಲರೋ ಬೆಳೆಯುವ ಹಂತದಲ್ಲಿ ಅವರ ನೆರವು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ.
೪. ತಪ್ಪುಗಳ ಕುರಿತು ತಲೆ ಕೆಡಿಸಿಕೊಳ್ಳದಿರಿ
ತಪ್ಪುಗಳು ಮಾಡುವುದು ಸಹಜ. ಹಾಗಂತ ತಪ್ಪಾಯಿತು ಅಂತ ತಲೆ ಕೆಡಿಸಿಕೊಂಡು ಕೂರುವುದರಲ್ಲಿ ಅರ್ಥವಿಲ್ಲ. ಆ ತಪ್ಪುಗಳಿಂದ ಪಾಠ ಕಲಿಯಬೇಕು. ಮತ್ತದೇ ತಪ್ಪುಗಳನ್ನು ಮಾಡಬಾರದು.
೫. ಸಣ್ಣ ವಿಷಯಗಳೇ ದೊಡ್ಡದು
ನಮ್ಮ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಬ್ಬರು ಲೆಕ್ಚರರ್ ಇದ್ದರು. ಅವರು ಹೇಳುತ್ತಿದ್ದ ಒಂದು ಮಾತು ಇವತ್ತಿಗೂ ನೆನಪಿದೆ. Small things though small by themselves make big things appear bigger. ಸಣ್ಣ ವಿಷಯಗಳು ಸಣ್ಣದಾಗಿದ್ದರೂ ದೊಡ್ಡ ವಿಚಾರಗಳನ್ನು ಇನ್ನೂ ದೊಡ್ಡದಾಗಿ ಕಾಣಿಸುವ ಹಾಗೆ ಮಾಡುತ್ತವೆ ಅಂತ ಆ ಮಾತಿನ ತಾತ್ಪರ್ಯ. ಉದಾಹರಣೆಗೆ ಪ್ಲೀಸ್, ಥ್ಯಾಂಕ್ಯೂ ಎಂದು ಹೇಳುತ್ತಿರುತ್ತೇವೆ. ಅವೆಲ್ಲಾ ಸಣ್ಣ ವಿಷಯಗಳು. ಆದರೆ ಆ ಸಣ್ಣ ವಿಷಯಗಳೇ ಬದುಕಲ್ಲಿ ತುಂಬಾ ದೊಡ್ಡದಾಗಿ ಸಹಾಯ ಮಾಡುತ್ತವೆ.
೬. ಉತ್ತಮ ನಡವಳಿಕೆ
ಉತ್ತಮ ನಡವಳಿಕೆಗೆ ಯಾವತ್ತೂ ಸೋಲಿಲ್ಲ. ಉತ್ತಮ ನಡವಳಿಕೆ ಇದ್ದರೆ ನಿಮಗೆ ಇನ್ನೊಬ್ಬರ ಮೇಲೆ ಅಕ್ಕರೆ ಇದೆ ಅಂತರ್ಥ. ಇನ್ನೊಬ್ಬರ ಸಮಯವನ್ನು ನೀವು ಗೌರವಿಸುತ್ತೀರಿ ಅಂತರ್ಥ. ಮತ್ತೊಬ್ಬರ ಭಾವನೆಗಳನ್ನು ಗೌರವಿಸುತ್ತೀರಿ ಅಂತರ್ಥ. ಆದುದರಿಂದಲೇ ಉತ್ತಮ ನಡವಳಿಕೆ ಹೊಂದಿದಷ್ಟೂ ಮನಸ್ಸಿಗೆ ಹತ್ತಿರವಾಗುತ್ತೀರಿ.
೭. ನನ್ನ ತ್ಯಾಗರಾಜ ಅಂತಾರೆ, ನೀವೂ ತ್ಯಾಗರಾಜ ಆಗಿ
ತಕ್ಷಣದ ಲಾಭ ಸಿಗಬೇಕು ಎಂಬ ಮನಸ್ಥಿತಿ ಇರಬಾರದು. ಕೆಲವು ಕೆಲಸಗಳಲ್ಲಿ, ವಿಚಾರಗಳಲ್ಲಿ ತಕ್ಷಣದ ಲಾಭ ಸಿಗುವುದಿಲ್ಲ. ಇನ್ಯಾವತ್ತೋ ಒಂದಿನ ಲಾಭ ಸಿಗುತ್ತದೆ. ಹಾಗಾಗಿ ತಕ್ಷಣದ ಲಾಭಗಳನ್ನು ತ್ಯಾಗ ಮಾಡಬೇಕು. ದೂರದ ಲಾಭಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ತಕ್ಷಣ ಸಿಗುವ ಕ್ಷಣಿಕ ಸುಖಕ್ಕಿಂತ ನಿಮ್ಮ ಜೀವನದಲ್ಲೇ ಜೊತೆಯಲ್ಲೇ ದೀರ್ಘಕಾಲ ಇರುವ ಸುಖವನ್ನು ಹುಡುಕಿಕೊಂಡು ಹೋಗಬೇಕು. ಎಷ್ಟೋ ಜನ ೧೦ ನಿಮಿಷದ ಸುಖಕ್ಕಾಗಿ ಇಡೀ ಜೀವನವನ್ನೇ ಕಳೆದುಕೊಂಡವರಿದ್ದಾರೆ. ಆ ಕಾರಣಕ್ಕೆ ತಕ್ಷಣದ ಸುಖಗಳತ್ತ ವಾಲುವುದು ಬೇಡ.
೮. ಅವಮಾನಗಳಾಗುತ್ತವೆ, ಕೆಟ್ಟ ಘಟನೆಗಳು ಜರುಗುತ್ತವೆ, ಆಗಬಾರದ್ದೆಲ್ಲಾ ಆಗಿ ಹೋಗುತ್ತವೆ. ಆದರೆ ಅವೆಲ್ಲವೂ ಸಹಜ. ಈ ಯಾವುದಕ್ಕೂ ಕುಗ್ಗಬಾರದು.
೯. ದಿರಿಸು
ಹಲವು ಸಲ ನೀವು ಧರಿಸುವ ಬಟ್ಟೆಗಳು ಇನ್ನೊಬ್ಬರಿಗೆ ನಿಮ್ಮ ಮೇಲೆ ಆಗುವಂತಹ ಫಸ್ಟ್ ಇಂಪ್ರೆಷನ್‌ಗೆ ಕಾರಣವಾಗುತ್ತವೆ. ಇನ್ನೊಬ್ಬರನ್ನು ಭೇಟಿ ಮಾಡಲು ಹೋದಾಗ ಅಥವಾ ಒಂದು ಕಾರ್ಯಕ್ರಮಕ್ಕೆ ಹೋದಾಗ ಸರಿಯಾದ ದಿರಿಸು ಧರಿಸುವುದು ಆ ವ್ಯಕ್ತಿಗೆ ಅಥವಾ ಆ ಕಾರ್ಯಕ್ರಮಕ್ಕೆ ನೀವು ಕೊಡುವ ಗೌರವ. ಹಾಗಾಗಿ ನೀವು ಧರಿಸುವ ಬಟ್ಟೆಗಳು ನೀಟಾಗಿ, ಕ್ಲೀನಾಗಿ, ಸರಳವಾಗಿದ್ದರೂ ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತಹ ಬಟ್ಟೆಯನ್ನು ಧರಿಸುವುದು ಒಳ್ಳೆಯದು. ಯಾವ ಬಟ್ಟೆ ಧರಿಸಿದರೂ ಜೊತೆಗೆ ಒಂದು ಆತ್ಮೀಯವಾದ ಮುಗುಳ್ನಗೆ -ಫಸ್ಟ್ ಇಂಪ್ರೆಷನ್‌ಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ | Sunday Read | ಹೊಸ ಪುಸ್ತಕ | ಇದಿರು ನೋಟದ ಪ್ರತಿಮೆಗಳು
೧೦. ಪ್ರತಿದಿನ ಕರೆಕ್ಷನ್ ಮಾಡಿಕೊಳ್ಳುತ್ತಾ ಇರಬೇಕು
ನಿಮ್ಮ ಪ್ರತಿಭೆಗಿಂತ, ನೀವು ಎಷ್ಟು ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಹೋಗುತ್ತೀರಿ ಅನ್ನುವುದು ಮುಖ್ಯ. ಕಾರು ಓಡಿಸಬೇಕಾದರೆ ನಮಗೇ ಗೊತ್ತಿಲ್ಲದೆ ಕ್ಲಚ್ ಅಮುಕುತ್ತೇವೆ, ಸ್ಟಿಯರಿಂಗ್ ತಿರುಗಿಸುತ್ತೇವೆ, ಮಿರರ್ ಸರಿ ಮಾಡಿಕೊಳ್ಳುತ್ತೇವೆ, ಹಿಂದೆ ಬರುತ್ತಿರುವವನಿಗೆ ದಾರಿ ಮಾಡಿಕೊಡುತ್ತೇವೆ. ನಮ್ಮ ಅಕ್ಕಪಕ್ಕ ಇಷ್ಟೆಲ್ಲಾ ಜರುಗುತ್ತಿರುತ್ತದೆ. ಹೀಗೆ ನಮ್ಮ ಬದುಕು ಕೂಡ ಅಟೋ ಕರೆಕ್ಷನ್ ಮೋಡ್‌ನಲ್ಲಿ ಇರುತ್ತದೆ. ಅಕ್ಕಪಕ್ಕ ಏನೇನು ನಡೆಯುತ್ತಿದ್ದರೂ ನಿಮಗೆ ಗೊತ್ತೇ ಆಗದಂತೆ ಮುಂದೆ ಹೋಗುತ್ತಾ ಇರುತ್ತದೆ. ಎಲ್ಲವೂ ಕರೆಕ್ಟ್ ಆಯಿತು ಎಂದು ಯಾರೂ ಯಾವತ್ತೂ ಹೇಳಲು ಸಾಧ್ಯವೇ ಇಲ್ಲ. ಅದೊಂದು ಜರ್ನಿ ಇದ್ದಂತೆ. ನಾವು ನಮ್ಮನ್ನು ಕರೆಕ್ಟ್ ಮಾಡಿಕೊಳ್ಳುತ್ತಲೇ ಇರುತ್ತೇವೆ.
೧೧. ರಿಚಾರ್ಜ್ ಮಾಡಿಕೊಳ್ಳಿ
ಬ್ಯಾಟರಿ ಚಾರ್ಜ್ ಮಾಡಿದಂತೆ ನಿಮ್ಮನ್ನು ನೀವು ರಿಚಾರ್ಜ್ ಮಾಡಿಕೊಳ್ಳಬೇಕು. ಒಬ್ಬೊಬ್ಬರಿಗೆ ಒಂದೊಂದು ರೀತಿಯ ರಿಚಾರ್ಜ್ ಮಾಡುವ ಪದ್ಧತಿಗಳಿರುತ್ತವೆ. ಕೆಲವರು ಪ್ರವಾಸ ಹೋದರೆ ರಿಚಾರ್ಜ್ ಆಗುತ್ತಾರೆ. ಹಲವರು ಸಿನಿಮಾ ನೋಡಿದಾಗ, ಸಂಗೀತ ಕೇಳಿದಾಗ, ಧ್ಯಾನಸ್ಥರಾದಾಗ ರಿಚಾರ್ಜ್ ಆಗುತ್ತಾರೆ. ನಿಮ್ಮ ಶೈಲಿ ಯಾವುದು ಎಂದು ನೀವು ತಿಳಿದುಕೊಳ್ಳಿ ಮತ್ತು ರಿಚಾರ್ಜ್ ಆಗಿ. ನಿಮ್ಮೊಳಗಿನ ಉತ್ಸಾಹದ ಬ್ಯಾಟರಿ ಡ್ರೈ ಆಗೋಕೆ ಯಾವತ್ತೂ ಬಿಡಬೇಡಿ.
೧೨. ಶಿಸ್ತು ಇರಲಿ
ಎಲ್ಲದಕ್ಕೂ ಒಂದು ಜಾಗ ಇರುತ್ತದೆ. ಎಲ್ಲದಕ್ಕೂ ಒಂದು ಟೈಮ್ ಇರುತ್ತದೆ. ಆಯಾಯ ಜಾಗದಲ್ಲಿ ಆಯಾಯ ವಸ್ತುಗಳನ್ನು ಇಡಬೇಕು. ಕಾಗದ ಅಥವಾ ವಸ್ತುಗಳನ್ನು ಅಲ್ಲಿಟ್ಟೆ, ಇಲ್ಲಿಟ್ಟೆ, ಎಲ್ಲಿಟ್ಟೆ ಎಂದು ಹುಡುಕುವುದಕ್ಕಿಂತ ಎಲ್ಲವನ್ನೂ ಸರಿಯಾದ ಜಾಗದಲ್ಲಿ ಇಟ್ಟರೆ ಸಮಯ, ಶ್ರಮ ಎರಡೂ ಉಳಿಯುತ್ತದೆ. ಬೇಡದೇ ಇರುವ ಫೈಲ್‌ಗಳನ್ನು ಡಿಲೀಟ್ ಮಾಡುವುದು, ಬೇಡದಿರುವ ವಸ್ತುಗಳನ್ನು ಖಾಲಿ ಮಾಡುವುದು ಎಲ್ಲವೂ ಬಹಳ ಸಹಾಯ ಮಾಡುತ್ತದೆ.
೧೩. ನಿಮ್ಮ ಕೊಡುಗೆ ಇರುವಂತೆ ನೋಡಿಕೊಳ್ಳಿ
ನೀವು ಎಲ್ಲೇ ಇರಿ, ಯಾರ ಜೊತೆಯೇ ಇರಿ ನಿಮ್ಮ ವ್ಯಾಲ್ಯೂವನ್ನು ಸೇರಿಸಿ. ಆ ಕ್ಷಣಕ್ಕೆ ನಿಮ್ಮದೊಂದು ಕೊಡುಗೆ ಇರಬೇಕು. ನಿಮ್ಮ ಜೊತೆ ಇರುವ ಇನ್ನೊಬ್ಬ ವ್ಯಕ್ತಿಯ ಬದುಕಲ್ಲಿ ಏನೋ ಒಂದು ವ್ಯಾಲ್ಯೂ ಸೇರಿಸಬೇಕು. ಅಲ್ಲಿನ ವಾತಾವರಣ ಹಿತ ಮಾಡಲಿಕ್ಕಾದರೆ ಮಾಡಿ, ಒಂದೊಳ್ಳೆ ವಿಷಯ ಹಂಚಿಕೊಳ್ಳಲು ಸಾಧ್ಯವಾದರೆ ಹಂಚಿಕೊಳ್ಳಿ. ಏನೋ ಒಂದು ಕೆಲಸ ಮಾಡಿ. ನಿಮ್ಮಿಂದಾಗಿ ಆ ಕ್ಷಣದ ಮಹತ್ವ ಹೆಚ್ಚಾಗಬೇಕು. ನಿಮ್ಮಿಂದಾಗಿ ಹೊಸ ವಿಚಾರ ಹೊಳೆಯುವುದೋ, ಹೊಸ ಭಾವ ಮೊಳೆಯುವುದೋ ಆಗಬೇಕು.
ಕನಸು ಕಾಣುವುದಷ್ಟೇ ಅಲ್ಲ, ಕೆಲಸ ಮಾಡಿ
ಕೆಲವರಿಗೆ ತಾವು ತುಂಬಾ ದುಡ್ಡು ಮಾಡಬೇಕು ಅನ್ನುವ ಆಸೆ ಇರುತ್ತದೆ. ಇನ್ನು ಕೆಲವರಿಗೆ ತಾನು ಭಾರಿ ಹೆಸರು ಮಾಡಬೇಕು ಅನ್ನುವುದಿರುತ್ತದೆ. ಪ್ರತಿಯೊಬ್ಬರಿಗೂ ಅವರವರ ಕಲ್ಪನೆಗಳು ಇದ್ದೇ ಇರುತ್ತವೆ. ಈ ಎಲ್ಲಾ ಕಲ್ಪನೆಗಳು ಸೃಷ್ಟಿಯಾಗುವುದು ಮೆದುಳಲ್ಲಿ.
ಇದನ್ನೂ ಓದಿ | Sunday read | ಹೊಸ ಪುಸ್ತಕ | ಎಲ್ಲರೂ ಕುರುಡರಾದಾಗ ಉಳಿದ ಒಬ್ಬಳೇ ಮಹಿಳೆಯ ಕಥೆ
ನಾನು ಕೆಲವೇ ಸಮಯದಲ್ಲಿ ಚಂದ್ರನ ಮೇಲಿರುತ್ತೇನೆ ಅಂತ ಕಲ್ಪಿಸಿಕೊಳ್ಳುವುದು ಸುಲಭ. ಹಾಗೆ ಕಲ್ಪಿಸಿಕೊಂಡ ಕೆಲವೇ ಕ್ಷಣಕ್ಕೆ ಮತ್ತೊಂದು ಸತ್ಯ ಹೊಳೆಯುತ್ತದೆ. ಅರೆ, ಈಗಾಗಲೇ ಬೇರೆಯವರು ಚಂದ್ರನ ಮೇಲೆ ಕಾಲಿಟ್ಟಿದ್ದಾರಲ್ಲ ಅಂತ. ಅದು ವಾಸ್ತವ.
ಏನೋ ಆಗಬೇಕು ಅಂತ ಅಂದುಕೊಳ್ಳುವುದು ಬೇರೆ, ಏನೋ ಆಗಬೇಕು ಅಂತಂದುಕೊಂಡು ಅದನ್ನು ಸಾಽಸಲು ಪ್ರಯತ್ನ ಪಡುವುದು ಬೇರೆ. ನಾನು ಸಚಿನ್ ತೆಂಡೂಲ್ಕರ್ ಥರ ಆಗಬೇಕು ಎಂದುಕೊಳ್ಳುವುದು ಕಲ್ಪನೆ. ಬರೀ ಕಲ್ಪಿಸಿಕೊಂಡರೆ ಪ್ರಯೋಜನವಾಗುವುದಿಲ್ಲ. ನಾನು ಸಚಿನ್ ತೆಂಡೂಲ್ಕರ್ ಥರ ಆಗಬೇಕು ಅಂತಂದುಕೊಂಡು ಮುಂಜಾವ ಎದ್ದು ಬ್ಯಾಟ್ ಹಿಡಿದು ಮೈದಾನಕ್ಕೆ ಹೋಗಿ ಶ್ರಮ ಪಟ್ಟರೆ ಮಾತ್ರ ತೆಂಡೂಲ್ಕರ್ ಥರ ಅಲ್ಲದೇ ಇದ್ದರೂ ಒಳ್ಳೆಯ ಕ್ರಿಕೆಟರ್ ಅಂತೂ ಆಗಬಹುದು. ಬಿಲ್ ಗೇಟ್ಸ್ ಥರ ಆಗಬೇಕು ಅಂತ ಸುಮಾರು ಜನ ಅಂದುಕೊಳ್ಳುತ್ತಾರೆ. ಆದರೆ ಬಿಲ್‌ಗೇಟ್ಸ್ ಆ ಜಾಗಕ್ಕೆ ಬರಲು ಪಟ್ಟ ಶ್ರಮದ ಬಗ್ಗೆ ಯೋಚಿಸಬೇಕು. ಅದಕ್ಕಿಂತ ಹೆಚ್ಚಿನ ಶ್ರಮಪಟ್ಟರೆ ಮಾತ್ರ ಬಿಲ್ ಗೇಟ್ಸ್ ಥರ ಆಗಬಹುದೇನೋ.
ಈ ಗೆಲುವಿನ ಪಯಣದಲ್ಲಿ ನಿಮಗೆ ಸಹಾಯ ಮಾಡುವುದಕ್ಕೆ ನಿಮ್ಮ ಸುತ್ತಮುತ್ತಲಿನಲ್ಲೇ ತುಂಬಾ ಒಳ್ಳೆಯ ಸಂಪನ್ಮೂಲಗಳು ಇವೆ.
ಮೆದುಳು ಎಂಬ ಅತಿ ದೊಡ್ಡ ಸಂಪನ್ಮೂಲ
ರಿಯಲ್ ಎಸ್ಟೇಟ್ ಕೆಲಸ ಮಾಡಿ ಎತ್ತರಕ್ಕೆ ಹೋದವರನ್ನು ಸಮಾಜ ಗಮನಿಸುತ್ತಿರುತ್ತದೆ. ಒಂದು ಸಮಯದಲ್ಲಿ ನಮಗೂ ಜಮೀನು ಇದ್ದರೆ ನಾವೂ ರಿಯಲ್ ಎಸ್ಟೇಟ್ ಮಾಡಿದ್ದರೆ ಬೆಳೆಯುತ್ತಿದ್ದೆವು ಅನ್ನಿಸಬಹುದು. ಆದರೆ ನಮ್ಮಲ್ಲೂ ಜಾಗ ಇದೆ. ಆ ಜಾಗವನ್ನು ಬಳಸಿಕೊಂಡರೆ ನಾವೂ ಅದ್ಭುತವಾಗಿ ಬೆಳೆಯಬಹುದು. ಆ ಜಾಗದ ಹೆಸರು ಮೆದುಳು.
ಮೆದುಳೇ ನಮ್ಮ ನಿಜವಾದ ಸಂಪನ್ಮೂಲ. ಮೀಟರ್‌ನಿಂದ ಅಳೆಯುವುದಕ್ಕೆ ಮೆದುಳು ಸಣ್ಣ ಜಾಗ ಆಗಿರಬಹುದು. ಆದರೆ ಅದಕ್ಕಿರುವ ಅಗಾಧವಾದ ಶಕ್ತಿಯ ಮುಂದೆ ಬೇರೆ ಯಾವುದೂ ಇಲ್ಲ. ಆ ಜಾಗವನ್ನು ಸರಿಯಾಗಿ ಬಳಸಿಕೊಂಡರೆ ನೀವು ಎಷ್ಟು ಎತ್ತರಕ್ಕೆ ಬೇಕಾದರೂ ಹೋಗಬಹುದು. ಹೇಗೆ ಬಳಸಬೇಕು ಅನ್ನುವುದನ್ನು ತಿಳಿದುಕೊಳ್ಳಬೇಕಷ್ಟೇ.
ನಮ್ಮ ದೇಹವನ್ನು ಟ್ವಿನ್ ಇಂಜಿನ್ ಇರುವ ಗಾಡಿ ಎಂದುಕೊಂಡರೆ ಒಂದು ಇಂಜಿನ್ ಯೋಚನೆ, ಇನ್ನೊಂದು ಭಾವನೆ. ಇವೆರಡರಿಂದಲೇ ನೀವು ಮೇಲಕ್ಕೆ ಹೋಗಬಹುದು ಅಥವಾ ಕೆಳಕ್ಕೂ ಹೋಗಬಹುದು. ಇಂಟರೆಸ್ಟಿಂಗ್ ಅಂದರೆ ಇವೆರಡಕ್ಕೂ ಕಾರಣ ಮೆದುಳು. ಹಾಗಾಗಿ ಮೆದುಳನ್ನು ಚೆನ್ನಾಗಿಟ್ಟುಕೊಳ್ಳಬೇಕು. ಕೆಲಸ ಕೊಡಬೇಕು. ಹೊಸ ವಿಚಾರಗಳನ್ನು ಕಲಿಯುತ್ತಿರಬೇಕು.
ಕೃತಿ: ಪ್ರೀತಿಯಿಂದ ರಮೇಶ್- ಯಶಸ್ಸಿನ ಸರಳ ಸೂತ್ರಗಳು
ಲೇಖಕ: ರಮೇಶ್ ಅರವಿಂದ್
ಪ್ರಕಾಶನ: ಸಾವಣ್ಣ ಪ್ರಕಾಶನ, ಬೆಂಗಳೂರು
ಇದನ್ನೂ ಓದಿ | Sunday Read | ಹೊಸ ಪುಸ್ತಕ | ಚಲಂನ ಪ್ರಣಯ ಚರಿತ್ರೆ ಗಿಡಗಳ ಕೆಳಗೆ