Site icon Vistara News

Sunday Read | ಇವು ಬದುಕು ಬದಲಿಸುವ ಕೃತಿಗಳು, ಒಮ್ಮೆಯಾದರೂ ಓದಿ!

books

| ದೀಕ್ಷಾ ರವಿಕುಮಾರ್

ಜೀವನದಲ್ಲಿ ಸೋತೆವು ಎಂದೆನಿಸಿದಾಗ, ಏಕತಾನತೆ ಮೂಡಿದಾಗ ನಮ್ಮನ್ನು ಮುಂದುವರೆಯುವಂತೆ ಮಾಡಲು ಒಂದು ಸಣ್ಣ ಭರವಸೆಯ ಮಾತೇ ಸಾಕು. ಆದರೆ ಎಲ್ಲ ಸಂದರ್ಭದಲ್ಲೂ ನಮ್ಮಲ್ಲಿ ಸ್ಪೂರ್ತಿ ತುಂಬುವ ಮಾತನಾಡಲು ನಮ್ಮ ಸುತ್ತಲು ಯಾರಾದರೊಬ್ಬರು ಇರುತ್ತಾರೆಂದು ನಂಬುವುದು ಸರಿಯಲ್ಲ. ಹೀಗೆ ಸ್ಪೂರ್ತಿ ತುಂಬಿ, ಮುನ್ನಡೆಯಲು ಯಾರೂ ಇಲ್ಲದ ಸಂದರ್ಭದಲ್ಲಿ ಪುಸ್ತಕಗಳು ನಮ್ಮ ನೆರವಿಗೆ ಬರುತ್ತವೆ.

ಒಬ್ಬ ಜ್ಞಾನಿಯ ಹಾಗೆ ಪುಸ್ತಕವೂ ಕೂಡ ನಿಮ್ಮಲ್ಲಿನ ಕುಂದು-ಕೊರತೆಗಳನ್ನು ಒಪ್ಪಿಕೊಂಡು, ನಿಮ್ಮನ್ನು ನೀವು ಪ್ರೀತಿಸಿ, ಜೀವನದಲ್ಲಿ ಬರುವ ಅಡೆತಡೆಗಳನ್ನು ಎದುರಿಸಲು ಹೇಳಿಕೊಡುತ್ತದೆ. ಮಾನವನ ಸ್ನೇಹಿತ ಎನ್ನುವ ಮಾತಿಗೆ ತಕ್ಕಂತೆ ಪುಸ್ತಕಗಳು ನಮಗೆ ಸಹಾಯ ಮಾಡುತ್ತವೆ. ಸಂದರ್ಭಕ್ಕೆ ಸರಿಯಾಗಿ ಪುಸ್ತಕವನ್ನು ಆರಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಯಾವುದೇ ಸಮಯದಲ್ಲಿ ಸ್ವಯಂ ಸಹಾಯ ಪುಸ್ತಕಗಳು ಹಾಗು ಸ್ಪೂರ್ತಿದಾಯಕ ಪುಸ್ತಕಗಳನ್ನು ಓದುವುದರಿಂದ ಮಾನಸಿಕ ಶಾಂತಿ ಪಡೆಯಬಹುದು. ನಿಮ್ಮ ಬಳಿ ಇರಬೇಕಾದ ಸ್ಪೂರ್ತಿದಾಯಕ ಪುಸ್ತಕಗಳ ಪಟ್ಟಿ ಇಲ್ಲಿದೆ.

೧. ʼದ ಆಲ್ಕೆಮಿಸ್ಟ್‌ʼ – ಪೌಲೋ ಕೋಯೆಲೋ

80ಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದಗೊಂಡಿರುವ ʼದ ಆಲ್ಕೆಮಿಸ್ಟ್‌ʼ ಜಗತ್ತಿನಾದ್ಯಂತ ಮಿಲಿಯನ್‌ಗೂ ಹೆಚ್ಚು ಪ್ರತಿಗಳ ಮಾರಾಟ ಕಂಡಿದೆ.

1988ರಲ್ಲಿ ಮೊದಲು ಪ್ರಕಟಗೊಂಡ ಈ ಪುಸ್ತಕವನ್ನು ಮೊದಲಿಗೆ ಜನರು ಅಷ್ಟಾಗಿ ಮೆಚ್ಚಲಿಲ್ಲ. “ನಿಮಗೆ ಏನಾದರು ಬೇಕೆಂದಿದ್ದರೆ ಸಂಪೂರ್ಣ ಬ್ರಹ್ಮಾಂಡವೇ ಅದನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ” ಎಂದು ಬರೆದುಕೊಂಡಿರುವ ಬರಹಗಾರ ಆ ಮಾತನ್ನು ಅನುಸರಿಸಿ, ಎದೆಗುಂದಲಿಲ್ಲ. ಅವನ ನಂಬಿಕೆಯಂತೆಯೇ ಈ ಪುಸ್ತಕವು ಬೆಸ್ಟ್‌ಸೆಲ್ಲರ್‌ ಎನಿಸಿಕೊಂಡಿತು. ಸದ್ಯ ಜೀವಂತ ಲೇಖಕರ ಪುಸ್ತಕಗಳಲ್ಲಿ ಅತಿ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ ಪುಸ್ತಕ ಎನ್ನುವ ಗಿನ್ನೆಸ್‌ ದಾಖಲೆ ಈ ಪುಸ್ತಕದ ಪಾಲಾಗಿದೆ.

ಸ್ಯಾಂಟಿಯಾಗೋ ಎನ್ನುವ ಕುರಿಗಾಹಿ ಹುಡುಗನ ಕಥೆಯನ್ನು ಈ ಪುಸ್ತಕ ಹೇಳುತ್ತದೆ. ಆತ ಭೌತಿಕ ಖಜಾನೆಯನ್ನು ಅರಸಿ ಜಗತ್ತನ್ನು ಸುತ್ತುವಾಗ ವಿವಿಧ ರೀತಿಯ ಜನರನ್ನು ಭೇಟಿ ಮಾಡುತ್ತಾನೆ. ಈ ಅನುಭವಗಳು ಆತನ ಹೃದಯವನ್ನು ಸ್ಪರ್ಷಿಸಿ, ಆತ ದುಡ್ಡಿಗಿಂತಲೂ ಮುಖ್ಯವಾದುದ್ದನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತವೆ.

ವಿಧಿ ಮತ್ತು ಸ್ವಯಂ ಹುಡುಕಾಟದ ಈ ಪುಸ್ತಕದಲ್ಲಿ ಕಷ್ಟವನ್ನು ಎದುರಿಸುವುದು, ಆತ್ಮವಿಶ್ವಾಸ ಹೊಂದುವುದು ಮತ್ತು ನಮ್ಮ ಕನಸನ್ನು ಹಿಂಬಾಲಿಸುವುದರ ಕುರಿತು ಬಹಳಷ್ಟು ಜೀವನ ಪಾಠಗಳಿವೆ.

೨. ʼಮ್ಯಾನ್ಸ್‌ ಸರ್ಚ್‌ ಫಾರ್‌ ಮೀನಿಂಗ್‌ʼ – ವಿಕ್ಟರ್‌ ಇ. ಫ್ರಾಂಕ್ಲ್‌

ಮನೋವಿಜ್ಞಾನಿ ವಿಕ್ಟರ್‌ ಇ. ಫ್ರಾಂಕ್ಲ್‌ ಅವರ ಸ್ಪೂರ್ತಿದಾಯಕ ಪುಸ್ತಕಗಳಲ್ಲಿ ಒಂದಾದ ಈ ಪುಸ್ತಕ, ನಾಜ಼ಿ ಸಾವಿನ ಶಿಬಿರಗಳಲ್ಲಿನ ಅನುಭವ ಮತ್ತು ಆತನ ಬಳಿ ಬರುವವರ ಕಥೆಗಳಿಂದ ಕೂಡಿದೆ. ಸರಳ ಭಾಷೆಯಲ್ಲಿರುವ ಈ ಪುಸ್ತಕದಲ್ಲಿ ಕಷ್ಟಗಳಿಂದ ತಪ್ಪಿಸಿಕೊಳ್ಳಲು ಮತ್ತು ಅದನ್ನು ಮರೆಯಲು ಸಾಧ್ಯವಿಲ್ಲ, ಆದರೆ ಅವುಗಳನ್ನು ಆರೋಗ್ಯಕರ ರೀತಿಯಲ್ಲಿ ಹೇಗೆ ಸಂಭಾಳಿಸಬೇಕು ಎಂದು ಹೇಳಿದ್ದಾರೆ.

ಈ ಪುಸ್ತಕವು ಹಿಂದೆ ನಡೆದಿರುವುದರ ಬಗ್ಗೆ ತಿಳುವಳಿಕೆಯನ್ನು ನೀಡಿ ಉತ್ಸುಕತೆಯಿಂದ ಭವಿಷ್ಯದೆಡೆಗೆ ನಡೆಯುವುದು ಹೇಗೆ ಎಂಬುದನ್ನು ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುವುದರ ಮೂಲಕ ಹೇಳುತ್ತದೆ. ಮನುಷ್ಯನು ಜೀವನದಲ್ಲಿ ಅರ್ಥವನ್ನು ಹುಡುಕುತ್ತಾನೆ ಎನ್ನುವುದನ್ನು ಲೋಗೋಥೆರಪಿ ಎನ್ನುವ ವಿಷಯದ ಮೂಲಕ ಬರಹಗಾರ ಪರಿಚಯಿಸುತ್ತಾನೆ.

೩. ʼಯೂ ಆರ್‌ ಅ ಬ್ಯಾಡಾಸ್‌ : ಹೌ ಟು ಸ್ಟಾಪ್‌ ಡೌಟಿಂಗ್‌ ಯುವರ್‌ ಗ್ರೇಟ್‌ನೆಸ್‌ ಆಂಡ್‌ ಸ್ಟಾರ್ಟ್‌ ಲಿವಿಂಗ್‌ ಎನ್ ಆವ್‌ಸಮ್‌ ಲೈಫ್‌ʼ – ಜೆನ್‌ ಸಿನ್‌ಸೆರೊ

ಲೆಕ್ಕವಿಲ್ಲದಷ್ಟು ಜನರಿಗೆ ಜೀವನ ಪಾಠವನ್ನು ನೀಡಿ ಅವರ ಜೀವನದ ದಿಕ್ಕನ್ನೇ ಬದಲಿಸಲು ಸಹಾಯ ಮಾಡಿರುವ #1 ನ್ಯೂ ಯಾರ್ಕ್‌ ಟೈಮ್ಸ್‌ ಬೆಸ್ಟ್‌ಸೆಲ್ಲಿಂಗ್‌ ಬರಹಗಾರ್ತಿ ಜೆನ್‌ ಸಿನ್‌ಸೆರೊ ಅವರು ಈ ಪುಸ್ತಕವನ್ನು ಬರೆದಿದ್ದಾರೆ.

ಸಾಮಾನ್ಯ ಸ್ವಯಂ ಸಹಾಯ ಪುಸ್ತಕಗಳ ಬರವಣಿಗೆ ಶೈಲಿಗಿಂತ ವಿಭಿನ್ನವಾದ ಮನೋರಂಜಕ ದೃಷ್ಟಿಕೋನದಲ್ಲಿ ಈ ಪುಸ್ತಕವನ್ನು ಬರೆಯಲಾಗಿದೆ. ಇದರಲ್ಲಿರುವ ಪುಟ್ಟ ಅಧ್ಯಾಯಗಳು, ಸರಳ ಚಟುವಟಿಕೆಗಳು ಹಾಗು ಸಲಹೆಗಳು ಈ ಪುಸ್ತಕವನ್ನು ಎಲ್ಲರೂ ಮೆಚ್ಚುವಂತೆ ಮಾಡಿದೆ.

೪. ‘ದ 7 ಹ್ಯಾಬಿಟ್ಸ್‌ ಆಫ್‌ ಹೈಲಿ ಎಫೆಕ್ಟೀವ್‌ ಪೀಪಲ್:‌ ಪವರ್‌ಫುಲ್‌ ಲೆಸನ್ಸ್‌ ಇನ್‌ ಪರ್ಸನಲ್‌ ಚೇಂಜ್‌ʼ – ಸ್ಟೀವನ್‌ ಆರ್‌. ಕೋವಿ

40 ಮಿಲಿಯನ್‌ಗೂ ಹೆಚ್ಚು ಪ್ರತಿಗಳು ಮಾರಾಟವಾಗಿರುವ ಈ ಪುಸ್ತಕವು ಮೂರು ದಶಕಗಳಿಂದ ಜನರಲ್ಲಿ ಸ್ಪೂರ್ತಿ ತುಂಬುತ್ತಿದೆ. ಇದರಲ್ಲಿ ನೀಡಲಾಗಿರುವ ಏಳು ಅಭ್ಯಾಸಗಳು ಸರಳವಾಗಿದ್ದು, ವೈಯಕ್ತಿಕ ಅಭಿವೃದ್ಧಿಯಲ್ಲಿ ಸಹಾಯ ಮಾಡುತ್ತವೆ.

ಪ್ರಾಕ್ಟಿಕಲ್‌ ರೀತಿಯಲ್ಲಿ ಕಷ್ಟಗಳನ್ನು ಎದುರಿಸುವ ಬಗ್ಗೆ ಮಾತನಾಡುವ ಈ ಪುಸ್ತಕವು, ನ್ಯಾಯಯುತವಾಗಿ ಬದುಕುವುದು ಹೇಗೆ ಎನ್ನುವುದನ್ನು ಹೇಳಿಕೊಡುತ್ತದೆ.

೫. ʼದ ಪವರ್‌ ಆಫ್‌ ಪಾಸಿಟಿವ್‌ ಥಿಂಕಿಂಗ್‌ʼ – ಡಾ. ನಾರ್ಮನ್‌ ವಿನ್ಸೆಂಟ್‌ ಪೀಲೆ

“ಓದುಗರಿಗೆ ಸಂತೋಷದ, ಸಂತೃಪ್ತಿಯ ಜೀವನವನ್ನು ನಡೆಸಲು ಸಹಾಯ ಮಾಡುವ ಏಕೈಕ ಉದ್ದೇಶದಿಂದ ಈ ಪುಸ್ತಕವನ್ನು ಬರೆಯಲಾಗಿದೆ,” ಎಂದು ಬೋಧಕ ನಾರ್ಮನ್‌ ವಿನ್ಸೆಂಟ್‌ ಪೀಲೆ ಹೇಳಿದ್ದಾರೆ. ಜಗತ್ತಿನಾದ್ಯಂತ ಮಿಲಯನ್‌ಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಸ್ಪೂರ್ತಿ ನೀಡಿರುವ ಈ ಪುಸ್ತಕ ಅದರ ಕಾರ್ಯದಲ್ಲಿ ಸಫಲವಾಗಿದೆ ಎಂದು ಹೇಳಬಹುದು.

ಓದುಗರಲ್ಲಿ ಕನಸು ಮತ್ತು ಆಕಾಂಕ್ಷೆಗಳನ್ನು ಪೂರೈಸುವ ಹುಮ್ಮಸ್ಸನ್ನು ಈ ಪುಸ್ತಕ ನೀಡಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ.

೬. ‘ಮೇಕ್‌ ಯುವರ್‌ ಬೆಡ್:‌ ಸ್ಮಾಲ್‌ ಥಿಂಗ್ಸ್‌ ದಾಟ್‌ ಕ್ಯಾನ್‌ ಚೇಂಜ್‌ ಯುವರ್‌ ಲೈಫ್…‌ ಆಂಡ್‌ ಮೇಬಿ ದ ವರ್ಲ್ಡ್‌ʼ – ವಿಲಿಯಂ ಎಚ್.‌ ಮೆಕ್‌ರೇವನ್‌

ಅಮೆರಿಕದ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿರುವ ಅಡ್ಮಿರಲ್‌ ವಿಲಿಯಂ ಎಚ್.‌ ಮೆಕ್‌ರೇವನ್‌, 2014ರಲ್ಲಿ ಟೆಕ್ಸಸ್‌ ವಿಶ್ವವಿದ್ಯಾಲಯದ ಆರಂಭಿಕ ದಿನದಲ್ಲಿ ಭಾಗವಹಿಸಿದಾಗ ಅಲ್ಲಿನ, “ಇಲ್ಲಿ ಆರಂಭವಾಗುವುದು ಜಗತ್ತನ್ನೇ ಬದಲಾಯಿಸುತ್ತದೇ” (ವಾಟ್‌ ಸ್ಟಾರ್ಟ್ಸ್‌ ಹಿಯರ್‌ ಚೇಂಜಸ್‌ ದ ವರ್ಲ್ಡ್) ಎಂಬ ಅಡಿಬರಹದಿಂದ ಸ್ಪೂರ್ತಿ ಪಡೆದು, “ನೀವು ಜಗತ್ತನ್ನು ಬದಲಾಯಿಸಬೇಕಾದರೆ ನಿಮ್ಮ ಹಾಸಿಗೆಯನ್ನು ಸರಿ ಮಾಡುವುದರಿಂದ ಆರಂಭಿಸಿ,” ಎಂದು ಹೇಳಿದರು. ಅವರು ನೇವಿ ಸೀಲ್‌ ತರಬೇತಿಯಲ್ಲಿ ಕಲಿತ ಕೆಲವೊಂದು ವಿಷಯಗಳನ್ನೂ ಹಂಚಿಕೊಂಡರು.

ಈ ವಿಡಿಯೋ ವೈರಲ್‌ ಆಗಲು ಆರಂಭಿಸಿದಾಗ, ಮೆಕ್‌ರೇವನ್‌ ಅವರ ಜೀವನ ಮತ್ತು ಸೇನಾ ಸೇವೆಯ ದಿನಗಳನ್ನು ನೆನೆಸಿಕೊಳ್ಳುತ್ತಾ ಪುಸ್ತಕವನ್ನು ಬರೆದರು. ಅವರು ಎದುರಿಸಿದ ಕಷ್ಟಗಳು ಮತ್ತು ಅವರು ಕಲಿತ ಪಾಠಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಅವರ ಸರಳ ಸಲಹೆ ಕತ್ತಲೆಯಲ್ಲಿ ಬೆಳಕಿನಂತೆ ಭಾಸವಾಗುತ್ತವೆ.

೭. ʼದ ಸಟಲ್‌ ಆರ್ಟ್‌ ಆಫ್‌ ನಾಟ್‌ ಗಿವಿಂಗ್‌ ಫ*: ಅ ಕೌಂಟರ್‌ಇಂಟ್ಯೂಟೀವ್‌ ಅಪ್ರೋಚ್‌ ಟು ಲಿವಿಂಗ್‌ ಅ ಗುಡ್‌ ಲೈಫ್‌ʼ – ಮಾರ್ಕ್‌ ಮಾನ್ಸನ್‌

ಮಾನ್ಸನ್‌ ಅವರು ಈ ಪುಸ್ತಕದಲ್ಲಿ ಅಮೇರಿಕದ ಸಮಾಜ ಅನುಸರಿಸುವ ʼಧನಾತ್ಮಕ ಯೋಚನೆʼ ಮತ್ತು ʼಫೀಲ್‌-ಗುಡ್‌ʼ ಮಾದರಿಯನ್ನು ಟೀಕಿಸುತ್ತಾರೆ.

ಜೀವನ ಆಟ ಆಡಿದಷ್ಟು ಸುಲಭವಲ್ಲ. ನಾವು ಜೀವಿಸುತ್ತಿರುವುದಕ್ಕಾಗಿ ನಮ್ಮನ್ನು ಗುರುತಿಸಬೇಕು ಎನ್ನುವುದು ತಪ್ಪು ಎಂದು ಈ ಪುಸ್ತಕ ಹೇಳುತ್ತದೆ. ಹೊಸ ಪೀಳಿಗೆಯನ್ನು ಕಲ್ಪನಾಲೋಕದಿಂದ ಹೊರ ತರಲು ಬೇಕಾದ ಕಟು ಸತ್ಯಗಳನ್ನು ಇದು ಒದಗಿಸುತ್ತದೆ.

ಸಮಾಜದಲ್ಲಿ ಗೆಲ್ಲುವವರೊಂದಿಗೆ ಸೋಲುವವರೂ ಇರುತ್ತಾರೆ. ಎಲ್ಲರೂ ಅಸಮಾನ್ಯರಾಗಲು ಸಾಧ್ಯವಿಲ್ಲ. ಇದು ಅನ್ಯಾಯವೆನಿಸಿದರೂ ಸತ್ಯವಾಗಿರುವುದರಿಂದ ನಾವು ಇದನ್ನು ಒಪ್ಪಿಕೊಂಡು ನಡೆಯುವುದು ಒಳ್ಳೆಯದು. ಎಲ್ಲ ಸಂದರ್ಭದಲ್ಲಿ ಖುಷಿಯಾಗಿರಲು ಸಾಧ್ಯವಿಲ್ಲ ಎಂಬುದನ್ನು ಬರಹಗಾರ ಪ್ರತಿಪಾದಿಸುತ್ತಾನೆ. ನಮ್ಮ ಸ್ವಂತಿಕೆಯಲ್ಲಿ ನೆಲೆ ಕಾಣುವುದರಿಂದ ನಮ್ಮ ಪ್ರೀತಿಯನ್ನು ಪಡೆಯಲು ಅರ್ಹರಿರುವವರನ್ನು ನಾವು ಹುಡುಕಿಕೊಳ್ಳಬಹುದು ಎಂದೂ ಹೇಳಲಾಗಿದೆ.‌

೮. ‘ದ ಫೋರ್‌ ಅಗ್ರಿಮೆಂಟ್ಸ್‌ʼ – ಡಾನ್‌ ಮಿಗೆಲ್‌ ರೂಯಿಜ್‌

ಸಂತೋಷದ ಜೀವನವನ್ನು ನಡೆಸುವುದು ಹೇಗೆ ಎಂಬುದನ್ನು ಸುಲಭವಾದ ಮಾರ್ಗಗಳ ಮೂಲಕ ಡಾನ್‌ ಮಿಗೆಲ್‌ ರೂಯಿಜ್‌ ಅವರು ʼದ ಫೋರ್‌ ಅಗ್ರಿಮೆಂಟ್ಸ್‌ʼ ಎಂಬ ಪುಸ್ತಕದಲ್ಲಿ ಹೇಳಿದ್ದಾರೆ.

ನ್ಯೂ ಯಾರ್ಕ್‌ ಟೈಮ್ಸ್‌ ಬೆಸ್ಟ್‌ಸೆಲ್ಲರ್‌ ಆದ ಈ ಪುಸ್ತಕದಲ್ಲಿ ಆಂತರಿಕ ಸಂತೋಷವನ್ನು ಕಾಣಲು ಬೇಕಾದ ಪಾಠಗಳನ್ನು ಹೇಳಲಾಗಿದೆ. ಮಕ್ಕಳನ್ನು ʼಪಳಗಿಸುವುದಕ್ಕೆʼ ಪ್ರಾಮುಖ್ಯತೆ ನೀಡುವ ಸಮಾಜದಲ್ಲಿ ನಾವು ಬದುಕುತ್ತೇವೆ. ಬಹುಮಾನ ಮತ್ತು ಶಿಕ್ಷೆಗಳ ಪದ್ಧತಿಯ ಮೂಲಕ ಜೀವಿಸುವುದನ್ನು ಕಲಿಯುತ್ತೇವೆ. ನಾವು ಬೆಳೆದು ದೊಡ್ಡವರಾಗುವಷ್ಟರಲ್ಲಿ ನಮ್ಮಲ್ಲಿ ಒಂದು ʼಪರ್ಫೆಕ್ಟ್‌ʼ ಎನಿಸಿಕೊಳ್ಳುವ ಚಿತ್ರವು ಮೂಡಿರುತ್ತದೆ. ಇದು ನಮ್ಮನ್ನು ನಾವು ಶಿಕ್ಷಿಸಿಕೊಳ್ಳುವಂತೆ ಮಾಡುತ್ತದೆ.

ಪುರಾತನ ಟೋಲ್ಟೆಕ್‌ ಜ್ಞಾನವನ್ನು ಆಧಾರವನ್ನಾಗಿಸಿಕೊಂಡು ಬರಹಗಾರ, ಈ ಸಮಾಜ ಹಾಕುವ ಕಟ್ಟಲೆಗಳಿಂದ ಹೊರಬಂದು ನಿಜವಾದ ಸ್ವಾತಂತ್ರ್ಯ, ಖುಷಿ ಹಾಗು ಪ್ರೀತಿ ಪಡೆಯುವುದು ಹೇಗೆ ಎಂದು ಈ ಪುಸ್ತಕದ ಮೂಲಕ ತಿಳಿಸಿದ್ದಾರೆ.

೯. ʼಥಿಂಕ್‌ ಆಂಡ್‌ ಗ್ರೋ ರಿಚ್‌ʼ – ನಪೋಲಿಯನ್‌ ಹಿಲ್

ಅಮೇರಿಕದಲ್ಲಿ ʼದ ಗ್ರೇಟ್‌ ಡಿಪ್ರೆಶನ್‌ʼ ಇಂದ ಆದ ತೊಂದರೆಗಳು ಜನರ ಮನಸ್ಸಿನಲ್ಲಿ ಇನ್ನೂ ಹಸಿಯಾಗಿರುವಾಗಲೇ ಈ ಪುಸ್ತಕವನ್ನು ಪ್ರಕಟಿಸಲಾಯಿತು. ಇದು ಇದರ ಯಶಸ್ಸಿಗೆ ಕಾರಣವಾಯಿತು.

ಆಂಡ್ರೂ ಕಾರ್ನೇಜಿ, ಹೆನ್ರಿ ಫೋರ್ಡ್‌, ಥಾಮಸ್‌ ಎಡಿಸನ್‌ರಂತಹ ಮಿಲಿಯನೇರ್‌ಗಳ ಕಥೆಗಳನ್ನು ಹಿಲ್‌ ಈ ಪುಸ್ತಕದಲ್ಲಿ ಹೇಳುತ್ತಾರೆ. ಈ ಕಥೆಗಳ ಮೂಲಕ ತಮ್ಮ ತತ್ವಗಳನ್ನು ಪ್ರತಿಪಾದಿಸುತ್ತಾರೆ. ಸಮಕಾಲೀನ ಮಿಲಿಯನೇರ್‌ ಹಾಗು ಬಿಲಿಯನೇರ್‌ಗಳಾದ ಬಿಲ್‌ ಗೇಟ್ಸ್‌, ಡೇವ್‌ ಥಾಮಸ್‌ರಂತಹವರ ಕಥೆಗಳನ್ನು ಸೇರಿಸಿ, ಪ್ರಖ್ಯಾತ ಬರಹಗಾರ ಆರ್ಥರ್‌ ಆರ್.‌ ಪೆಲ್‌ ಈ ಪುಸ್ತಕವನ್ನು ಮರುಪ್ರಕಟಿಸಿದರು. ಈ ಕಥೆಗಳು ಇದರಲ್ಲಿ ಹೇಳುವ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡಿ, ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ.

೧೦. ʼಹೌ ಟು ವಿನ್‌ ಫ್ರೆಂಡ್ಸ್‌ ಆಂಡ್‌ ಇನ್ಫ್ಲೂಯೆನ್ಸ್‌ ಪೀಪಲ್‌ʼ – ಡೇಲ್‌ ಕಾರ್ನೇಜಿ

1936ರಲ್ಲಿ ಪ್ರಕಟವಾದ ಈ ಪುಸ್ತಕವು 15 ಮಿಲಿಯನ್‌ಗೂ ಹೆಚ್ಚು ಪ್ರತಿಗಳ ಮಾರಾಟವನ್ನು ಕಂಡಿದೆ. ವೈಯಕ್ತಿಕ ಹಾಗು ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಲು ಅನುಸರಿಸಬೇಕಾದ ಮಾರ್ಗಗಳನ್ನು ಈ ಪುಸ್ತಕ ನೀಡುತ್ತದೆ.

ಅಬ್ರಾಹಂ ಲಿಂಕನ್‌ರ ಜೀವನಗಾಥೆಯನ್ನು ಬರೆದಿರುವ ಡೇಲ್‌ ಕಾರ್ನೇಜಿ ಅವರ ಕುರಿತ ಉಲ್ಲೇಖಗಳನ್ನು ಈ ಪುಸ್ತಕದಲ್ಲೂ ನೀಡಿದ್ದಾರೆ. ತಮ್ಮ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಯೋಚಿಸುತ್ತಿರುವವರಿಗೆ ಈ ಪುಸ್ತಕ ಒಳ್ಳೆಯ ಮಾರ್ಗದರ್ಶನವನ್ನು ನೀಡುತ್ತದೆ.

೧೧. ʼರಿಚ್‌ ಡ್ಯಾಡ್‌ ಪೂರ್‌ ಡ್ಯಾಡ್‌ʼ – ರಾಬರ್ಟ್‌ ಟಿ. ಕಿಯೋಸಾಕಿ

ಕೈ ತುಂಬ ದುಡ್ಡಿಟ್ಟುಕೊಂಡು ʼಮನಿ ಕಾಂಟ್‌ ಬೈ ಹ್ಯಾಪಿನೆಸ್‌ʼ ಎನ್ನುವುದು ಸುಲಭ. ಆದರೆ, ನಿಜ ಏನೆಂದು ದುಡ್ಡಿಲ್ಲದವರು ಅರಿತಿರುತ್ತಾರೆ. ಬಿಡುಗಡೆಗೊಂಡ 25 ವರ್ಷಗಳ ನಂತರವೂ ʼರಿಚ್‌ ಡ್ಯಾಡ್‌ ಪೂರ್‌ ಡ್ಯಾಡ್‌ʼ ವೈಯಕ್ತಿಕ ಹಣಕಾಸಿನ ಕುರಿತ ಪುಸ್ತಕಗಳಲ್ಲಿ ಮೊದಲನೇ ಸ್ಥಾನದಲ್ಲಿದೆ.

ಪುಸ್ತಕದಲ್ಲಿ ಎರಡು ಭಿನ್ನ ಮನಸ್ಥಿತಿಯುಳ್ಳ ಎರಡು ಅಪ್ಪಂದಿರ ಕಥೆಗಳನ್ನು ಹೇಳಲಾಗಿದೆ. ಈ ಪುಸ್ತಕವನ್ನು ಕಿಯೋಸಾಕಿ ಅವರ ನಿಜ ಜೀವನವನ್ನು ಆಧಾರವನ್ನಾಗಿರಿಸಿಕೊಂಡು ಬರೆಯಲಾಗಿದೆ. ಪೂರ್‌ ಡ್ಯಾಡ್‌ (ಬಡವ ತಂದೆ) — ಕಿಯೋಸಾಕಿಯವರ ನಿಜವಾದ ತಂದೆ, ಹಾಗು ರಿಚ್‌ ಡ್ಯಾಡ್‌ (ಶ್ರೀಮಂತ ತಂದೆ) — ಕಿಯೋಸಾಕಿಯವರ ಸ್ನೇಹಿತನ ತಂದೆ, ನೀಡುವ ಸಲಹೆಗಳು ಹಾಗು ಅವರು ಜೀವನವನ್ನು ಗ್ರಹಿಸುವ ರೀತಿ ಕಿಯೋಸಾಕಿ ಅವರು ಹಣಕಾಸಿನ ಪ್ರಪಂಚದ ಬಗೆಗಿನ ಸತ್ಯವನ್ನು ಅರಿಯಲು ಸಹಾಯ ಮಾಡುತ್ತದೆ.

ಶ್ರೀಮಂತರಾಗಲು ಹೆಚ್ಚು ದುಡಿಯಬೇಕು, ಹಣಕಾಸಿನ ಜ್ಞಾನವನ್ನು ಪಡೆಯಲು ಶಾಲೆಗಿಂತ ಸೂಕ್ತ ಜಾಗವಿಲ್ಲ ಹಾಗು ಮನೆಗಿಂತ ದೊಡ್ಡದಾದ ಆಸ್ತಿಯಿಲ್ಲ ಎಂಬ ಹಳೆ ತಲೆಮಾರಿನ ಯೋಚನೆಗಳು ಸುಳ್ಳು ಎಂದು ಈ ಪುಸ್ತಕ ಪ್ರತಿಪಾದಿಸುತ್ತದೆ. ವ್ಯಾವಹಾರಿಕ ಜ್ಞಾನವನ್ನು ಹೆಚ್ಚಿಸಿಕೊಂಡು, ಆರ್ಥಿಕ ಪರಿಸ್ಥಿತಿಯನ್ನು ವೃದ್ಧಿಸಿಕೊಳ್ಳಲು ಈ ಪುಸ್ತಕ ಸಹಾಯ ಮಾಡುತ್ತದೆ.

೧೨. ʼಗ್ರಿಟ್‌ʼ – ಎಂಜೆಲಾ ಡಕ್‌ವರ್ಥ್‌
ಯಶಸ್ಸಿಗಾಗಿ ಹಪಹಪಿಸುತ್ತಿರುವವರಿಗೆ ಇದು ಸರಿಯಾದ ಪುಸ್ತಕ. ಯಶಸ್ಸನ್ನು ಪಡೆಯಲು ಪ್ರತಿಭೆಗಿಂತಲೂ ಸಾಧಿಸಬೇಕು ಎನ್ನುವ ಮನೋಭಾವ ಮುಖ್ಯವೆಂದು ಮನಃಶಾಸ್ತ್ರಜ್ಞೆ ಎಂಜೆಲಾ ಡಕ್‌ವರ್ಥ್‌ ಹೇಳುತ್ತಾರೆ. ಸ್ವಂತ ಅನುಭವ ಹಾಗು ಸಾಧಕರೊಂದಿಗಿನ ಸಂವಾದದಿಂದ ಅವರು ತಮ್ಮ ಹೈಪೋಥಿಸಿಸ್‌ ಅನ್ನು ಪರೀಕ್ಷಿಸಿದ್ದಾರೆ. ಯಶಸ್ಸು, ನೀವು ಎಷ್ಟು ಬದ್ಧರಾಗಿದ್ದೀರಿ ಎನ್ನುವುದರಿಂದ ದೊರೆಯುತ್ತದೆಯೇ ಹೊರತು, ನೀವು ಎಷ್ಟು ಬುದ್ಧಿವಂತರು ಎಂಬುದರಿಂದಲ್ಲ ಎಂದು ಬರಹಗಾರ್ತಿ ಪುಸ್ತಕದ ಕೊನೆಯಲ್ಲಿ ಹೇಳುತ್ತಾರೆ.

೧೩. ʼಮೈಂಡ್‌ಸೆಟ್:‌ ದ ನ್ಯೂ ಸೈಕಾಲಜಿ ಆಫ್‌ ಸಕ್ಸೆಸ್‌ʼ – ಕ್ಯಾರೋಲ್‌ ಎಸ್.‌ ಡ್ವೆಕ್‌

ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಪ್ರಖ್ಯಾತ ಮನಃಶಾಸ್ತ್ರಜ್ಞೆ ಕ್ಯಾರೋಲ್‌ ಡ್ವೆಕ್‌ ಅವರು ನಮಗೆ ʼಬೆಳವಣಿಗೆ ಮನೋಭಾವʼಕ್ಕೆ ಪರಿಚಯಿಸಿ, ಅದು ಹೇಗೆ ಯಶಸ್ಸನ್ನು ಮರುವ್ಯಾಖ್ಯಾನಿಸಿ ನಮ್ಮ ಸ್ವಯಂ ವೃದ್ಧಿಯಲ್ಲಿ ಸಹಾಯ ಮಾಡುತ್ತದೆ ಎಂದು ಈ ಪುಸ್ತಕದ ಮೂಲಕ ಹೇಳಿದ್ದಾರೆ.

ಈ ಪುಸ್ತಕದ ಬಗ್ಗೆ ಮಾತನಾಡಿದ ಬಿಲ್‌ ಗೇಟ್ಸ್‌, “ಚತುರವಾದ ಅಧ್ಯಯನಗಳು ಹಾಗು ನಮ್ಮನ್ನು ಪುಸ್ತಕದಲ್ಲಿ ತೊಡಗಿಸುವಂತಹ ಬರವಣಿಗೆಯ ಮೂಲಕ ನಮ್ಮ ಸಾಮರ್ಥ್ಯದ ಬಗ್ಗೆ ನಮಗಿರುವ ನಂಬಿಕೆಗಳು ನಮ್ಮ ಕಲಿಕೆ ಹಾಗು ನಾವು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದರ ಮೇಲೆ ಡ್ವೆಕ್‌ ಬೆಳಕು ಚೆಲ್ಲಿದ್ದಾರೆ,” ಎಂದು ಹೇಳಿದ್ದಾರೆ.

ವರ್ಷಗಳ ಅಧ್ಯಯನದ ನಂತರ ಬರಹಗಾರ್ತಿ ಯಶಸ್ಸಿಗೆ ಬೇಕಾದ ಸರಳ ಮಾರ್ಗ, ಸರಿಯಾದ ಮನಸ್ಥಿತಿ ಎಂದು ಕಂಡುಕೊಂಡಿದ್ದಾರೆ. ನೀವು ನಿಮ್ಮ ಸಾಮರ್ಥ್ಯ ಹಾಗು ಪ್ರತಿಭೆಯನ್ನು ಹೇಗೆ ಗುರುತಿಸುತ್ತೀರಿ ಎನ್ನುವುದರ ಮೇಲೆ ಶಾಲೆ, ಕಾಲೇಜು, ಕ್ರೀಡೆ ಅಥವಾ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತೀರ್ಣರಾಗುವುದು ಅವಲಂಬಿಸುತ್ತದೆ. ಈ ಪುಸ್ತಕವು ನಿಮ್ಮನ್ನು ನೀವು ಅಪ್‌ಗ್ರೇಡ್‌ ಮಾಡಿಕೊಂಡು, ನಿತ್ಯವೂ ಸ್ಪೂರ್ತಿದಾಯಕ ಮನಸ್ಥಿತಿಯಿಂದಿದ್ದು ಜೀವನದಲ್ಲಿ ಸಾಧನೆ ಮಾಡಲು ಸಹಾಯ ಮಾಡುತ್ತದೆ.

೧೪. ʼಚೂಸ್‌ ಯುವರ್‌ಸೆಲ್ಫ್‌ʼ – ಜೇಮ್ಸ್‌ ಆಲ್ಟುಕರ್‌

ಈ ಪುಸ್ತಕವು ನಿಜ ಜಗತ್ತಿನ ಹಲವು ವಿಷಯಗಳ ಕುರಿತು ಮಾತನಾಡುತ್ತದೆ. ಜೀವನವು ಊಹಿಸಲು ಅಸಾಧ್ಯವಾಗಿದ್ದು, ವಿದ್ಯಾಭ್ಯಾಸ, ಕೆಲಸ, ಸರ್ಕಾರ ಅಥವಾ ನಿವೃತ್ತಿ, ಯಾವುದೂ ನಾವೆಂದುಕೊಂಡತೆ ಆಗಲು ಸಾಧ್ಯವಿಲ್ಲ. ಹೊಸ ಆರ್ಥಿಕ ವ್ಯವಸ್ಥೆ ಹಾಗು ತಂತ್ರಜ್ಞಾನಗಳ ಪರಿಚಯವು ಮಧ್ಯವರ್ತಿಗಳನ್ನು ಕಡಿಮೆಯಾಗಿಸುತ್ತಿದೆ. ಇದರೊಂದಿಗೆ ಇದೇ ತಂತ್ರಜ್ಞಾನ ಹಾಗು ಆರ್ಥಿಕ ವ್ಯವಸ್ಥೆ ಯಾರ ಸಹಾಯವೂ ಇಲ್ಲದೇ ಶ್ರೀಮಂತರಾಗಲು ಹೊಸ ಅವಕಾಶಗಳನ್ನು ಹುಟ್ಟುಹಾಕುತ್ತಿವೆ.

ನೀವು ಯಶಸ್ಸನ್ನು ಸಾಧಿಸಬಹುದಾದ ಒಂದು ಹೊಸ ಪ್ರಪಂಚವನ್ನು ಕಟ್ಟಿಕೊಳ್ಳುವುದು ಹೇಗೆ ಎಂದು ಈ ಪುಸ್ತಕವು ಹೇಳುತ್ತದೆ. ಯಶಸ್ವಿ ಉದ್ಯಮಿ, ಚೆಸ್‌ ಆಟಗಾರ, ಹೂಡಿಕೆದಾರ ಹಾಗು ಬರಹಗಾರ ಜೇಮ್ಸ್‌ ಆಲ್ಟುಕರ್‌ ಅವರು ಸ್ವಂತ ಅನುಭವಗಳ ಮೂಲಕ ಸಲಹೆ ಮತ್ತು ಜೀವನ ಪಾಠಗಳನ್ನು ಹೇಳಿದ್ದಾರೆ.

೧೫. ʼಗರ್ಲ್‌ ಸ್ಟಾಪ್‌ ಅಪೋಲೊಜೈಸಿಂಗ್‌ʼ – ರೆಚೆಲ್‌ ಹಾಲ್ಲಿಸ್‌

ಆಕಾಂಕ್ಷೆಗಳಿಟ್ಟುಕೊಂಡಿರುವುದಕ್ಕೆ ಕ್ಷಮೆಯಾಚಿಸುವುದನ್ನು ಬಿಡಿ ಎಂದು ಮಹಿಳೆಯರಿಗೆ ಮನವರಿಕೆ ಮಾಡಲು ರೆಚೆಲ್‌ ಹಾಲ್ಲಿಸ್‌ ಅವರು ಈ ಪುಸ್ತಕವನ್ನು ಬರೆದಿದ್ದಾರೆ.

ಸಮಾಜದ ಟೀಕೆಗೆ ಗುರಿಯಾಗುವ ಭಯ, ತಮ್ಮಲ್ಲೆನೋ ಕೊರತೆಯಿದೆ ಎನ್ನುವ ಭಾವನೆ ಹಾಗು ತಾಯಿಯಾಗಿ ಮತ್ತು ಮಡದಿಯಾಗಿ ತಾವು ತಮ್ಮ ಕರ್ತವ್ಯವನ್ನು ಪೂರೈಸುತ್ತಿಲ್ಲ ಎಂಬ ಗೊಂದಲಗಳು ಮಹಿಳೆಯರು ಅವರ ಸಂಪೂರ್ಣ ಸಾಮರ್ಥ್ಯವನ್ನು ಅರಿಯುವುದರಿಂದ ತಡೆಯುತ್ತದೆ.

ಈ ಪುಸ್ತಕದ ಮೂಲಕ ಹಾಲ್ಲಿಸ್‌ ಮಹಿಳೆಯರಲ್ಲಿ ಅವರ ಕನಸುಗಳನ್ನು ಆತ್ಮವಿಶ್ವಾಸದಿಂದ ಹಿಂಬಾಲಿಸಬೇಕು ಎಂದು ಕೇಳಿಕೊಳ್ಳುತ್ತಾರೆ. ಅವರ ಸ್ಪೂರ್ತಿದಾಯಕ ಶಬ್ದಗಳು ಹೆಣ್ಣುಮಕ್ಕಳಿಗೆ ಅವರ ಆಸೆ-ಆಕಾಂಕ್ಷೆಗಳನ್ನು ಗುರುತಿಸಿ ಅವುಗಳನ್ನು ಹಿಂಬಾಲಿಸುವಂತೆ ಕರೆ ನೀಡುತ್ತವೆ.

Exit mobile version