Site icon Vistara News

Sunday read | ಮುದ ನೀಡುವ ಮುಲ್ಲಾ ನಸ್ರುದ್ದೀನ್‌ ಕತೆಗಳು

mulla

ಮನೆಗೆ ಮೂರು ಕಾಸು ಬೆಲೆ

ಒಮ್ಮೆ, ಊರಿನ ಮುಖಂಡನಿಗೂ ಮುಲ್ಲಾ ನಸ್ರುದ್ದೀನ್‌ಗೂ ವಾಗ್ವಾದವಾಯಿತು. ರಾಜನ ಕುದುರೆ ಕಪ್ಪು ಎಂದು ಮುಖಂಡನೂ, ಬಿಳಿ ಎಂದೂ ನಸ್ರುದ್ದೀನನೂ ವಾದಿಸಿದರು. ಪಂಥ ಮಾಡಿಕೊಂಡರು. ಪಂಥದ ಪ್ರಕಾರ, ಸೋತವರು ಅವರ ಮನೆ ಮಾರಿ ಬಂದ ಹಣವನ್ನು ಗೆದ್ದವರಿಗೆ ಕೊಡಬೇಕು.

ರಾಜ ಬರುವಾಗ ನೋಡುತ್ತಾರೆ, ಕುದುರೆ ಕಪ್ಪು ಬಣ್ಣದ್ದಾಗಿದೆ. ಮುಖಂಡ ಗೆದ್ದಿದ್ದ. ಮುಲ್ಲಾನಿಗೆ ಪೇಚಿಗಿಟ್ಟುಕೊಂಡಿತು. ಗ್ರಾಮಸ್ಥರೆಲ್ಲರೂ ಈಗ ಮುಲ್ಲಾ ಏನು ಮಾಡುತ್ತಾನೆ ನೋಡೋಣ ಎಂದು ಕುತೂಹಲದಿಂದ ಅವನ ಮನೆ ಮುಂದೆ ಸೇರಿದರು.

ಮುಲ್ಲಾ ಹೊರಗೆ ಬಂದು ತಮಟೆ ಬಡಿದ. ʼʼಕೇಳಿರೋ ಕೇಳಿರಿ. ನಾನು ನಿಯಮದ ಪ್ರಕಾರ ನನ್ನ ಮನೆ ಮಾರಿ ಬಂದ ಹಣವನ್ನು ಊರಿನ ಮುಖಂಡನಿಗೆ ಕೊಡುತ್ತೇನೆ. ಆದರೆ ಕೊಂಡುಕೊಳ್ಳುವವರಿಗೆ ಒಂದು ಶರತ್ತು. ನನ್ನ ಬೆಕ್ಕು ಮತ್ತು ನನ್ನ ಮನೆಯನ್ನು ಜೊತೆಯಾಗಿ ಕೊಂಡುಕೊಳ್ಳಬೇಕು. ಮನೆಯ ಬೆಲೆ ಒಂದು ದಿನಾರ್!‌ʼʼ

ʼʼಬೆಕ್ಕಿನ ಬೆಲೆಯೇನಪ್ಪಾ?ʼʼ ಯಾರೋ ಕೇಳಿದರು.

ʼʼಹತ್ತುಸಾವಿರ ದಿನಾರ್!‌ʼʼ ಮುಲ್ಲಾ ಉತ್ತರಿಸಿದ.


ತಲೆಕೂದಲಿಗೆ ಯಾವ ಬಣ್ಣ?

ಮುಲ್ಲಾ ನಸ್ರುದ್ದೀನ್‌ ರಾಜನ ಆಸ್ಥಾನದಲ್ಲಿದ್ದ. ರಾಜ ಕೋಪಿಷ್ಠ. ಒಂದು ದಿನ ಅವನು ಕ್ಷೌರಿಕನ ಮೂಲಕ ತಲೆಕೂದಲು ಕತ್ತರಿಸಿಕೊಳ್ಳುತ್ತಿದ್ದ. ಕ್ಷೌರಿಕನ ಬಳಿ ಕೇಳಿದ- ʼʼನನ್ನ ಕೂದಲು ಹೇಗಿದೆ?ʼʼ

ಕ್ಷೌರಿಕ ಉತ್ತರಿಸಿದ ʼʼಎಲ್ಲಾ ಕೂದಲೂ ಬಿಳಿಯದಾಗಿದೆ ಪ್ರಭುʼʼ.

ರಾಜನಿಗೆ ಸಿಟ್ಟು ಬಂತು. ʼʼಇವನನ್ನು ಆರು ತಿಂಗಳು ಜೈಲಿಗೆ ಹಾಕಿರಿʼʼ ಎಂದು ಆಜ್ಞಾಪಿಸಿದ. ನಂತರ ಅಲ್ಲೇ ಇದ್ದ ಸೇನಾ ದಳವಾಯಿಯನ್ನು ಕರೆದು ʼʼನೀನು ಹೇಳು, ನನ್ನ ತಲೆಕೂದಲು ಹೇಗಿದೆ?ʼʼ ಕೇಳಿದ.

ʼʼಪ್ರಭು, ನಿಮ್ಮ ಕೂದಲು ಅಲ್ಲಲ್ಲಿ ಸ್ವಲ್ಪ ಬಿಳಿಯದಾಗಿದೆ ಅಷ್ಟೇʼʼ ಎಂದ ದಳವಾಯಿ.

ರಾಜ ಕಿಡಿಕಿಡಿಯಾದ. ʼʼಯಾರಲ್ಲಿ, ಇವನನ್ನೂ ಮೂರು ತಿಂಗಳು ಜೈಲಿಗೆ ಹಾಕಿʼʼ ಎಂದು ಆಜ್ಞಾಪಿಸಿದ. ನಂತರ ಅಲ್ಲಿದ್ದ ವಜೀರನ ಕಡೆಗೆ ತಿರುಗಿ, ವಜೀರ, ನೀವಾದರೂ ಸತ್ಯ ಹೇಳಿʼʼ ಎಂದು ಕೇಳಿದ.

ಇಷ್ಟು ಹೊತ್ತಿಗೆ ಹುಷಾರಾಗಿದ್ದ ವಜೀರ, ʼʼಪ್ರಭು, ನಿಮ್ಮ ತಲೆಕೂದಲೆಲ್ಲಾ ಕಪ್ಪುಕಪ್ಪಾಗಿ ಮಿನುಗುತ್ತಿದೆʼʼ ಎಂದು ಹೇಳಿದ. ರಾಜನಿಗೆ ಇನ್ನೂ ಸಿಟ್ಟು ಬಂತು. ʼʼಸುಳ್ಳುಬುರುಕ! ಸುಳ್ಳು ಹೇಳುತ್ತೀಯಾ? ಇವನನ್ನೂ ಮೂರು ತಿಂಗಳು ಜೈಲಿಗೆ ಹಾಕಿʼʼ ಎಂದು ಆಜ್ಞಾಪಿಸಿದ.

ನಂತರ ಮೂಲೆಯಲ್ಲಿ ನಿಂತಿದ್ದ ಮುಲ್ಲಾ ನಸ್ರುದ್ದೀನನನ್ನು ಕರೆದ. ʼʼಮುಲ್ಲಾ, ನೀನು ಹೇಳು, ನನ್ನ ತಲೆಕೂದಲು ಹೇಗಿದೆ?ʼʼ

ಮುಲ್ಲಾ ಹೇಳಿದ- ʼʼಪ್ರಭು, ನನಗೆ ಹಲವು ವರ್ಷಗಳಿಂದ ಬಣ್ಣಗುರುಡುತನ ಇದೆ, ಯಾವ ಬಣ್ಣವೂ ಸರಿಯಾಗಿ ಕಾಣಿಸುವುದಿಲ್ಲ. ಮೇಲಾಗಿ, ನನ್ನ ತಲೆ ಬೋಳು. ಇದಕ್ಕಿಂತ ತಲೆತುಂಬ ಕೂದಲಿರುವ ನಿಮ್ಮ ತಲೆಯೇ ಎಷ್ಟೋ ವಾಸಿಯಲ್ಲವೇ?ʼʼ ಎಂದ.

ಇದನ್ನೂ ಓದಿ: ಮಕ್ಕಳ ಕಥೆ: ಸಹೋದರರ ಉಗ್ರಾಣದಲ್ಲಿ ಧಾನ್ಯ ಯಾಕೆ ಕಡಿಮೆ ಆಗಲಿಲ್ಲ?


ಖರ್ಜೂರದ ಬದಲು ಕುಂಬಳಕಾಯಿ

ಒಂದು ಮಧ್ಯಾಹ್ನ ಬಿಸಿಲಲ್ಲಿ ನಡೆದ ಮುಲ್ಲಾ ನಡೆಯುತ್ತಾ ಬಂದು ಸುಸ್ತಾಗಿ, ಒಂದು ಖರ್ಜೂರದ ಮರದ ಕೆಳಗೆ ನಿಂತ. ಮೇಲೆ ನೋಡಿದಾಗ ಹಣ್ಣಾದ ಖರ್ಜೂರ ಕಾಣಿಸಿತು. ಅವನ ತಲೆಯಲ್ಲಿ ಒಂದು ಯೋಚನೆ.

“ಈ ದೇವರು ದೊಡ್ಡ ದೊಡ್ಡ ಹಣ್ಣುಗಳನ್ನೆಲ್ಲಾ ನೆಲದ ಮೇಲೆ ಬಳ್ಳಿಗಳಲ್ಲಿ ಇಟ್ಟಿದ್ದಾನೆ. ಉದಾಹರಣೆಗೆ ಕುಂಬಳಕಾಯಿ, ಚೀನಿಕಾಯಿ, ಇಂಥವು. ಆದರೆ ಸಣ್ಣಪುಟ್ಟ ಹಣ್ಣುಗಳನ್ನೆಲ್ಲ ಮರದಲ್ಲಿ ಎತ್ತರದಲ್ಲಿಟ್ಟಿದ್ದಾನೆ- ಖರ್ಜೂರ, ಗೇರುಬೀಜ, ಮಾವು, ಇಂಥವು. ಈ ದೇವರ ಸೃಷ್ಟಿ ಸರಿಯಿಲ್ಲʼʼ

ಅಷ್ಟರಲ್ಲಿ ಒಂದು ಖರ್ಜೂರದ ಹಣ್ಣು ತೊಟ್ಟು ಕಳಚಿಕೊಂಡು ತೊಪ್ಪನೆ ಮುಲ್ಲಾನ ನೆತ್ತಿಯ ಮೇಲೆ ಬಿತ್ತು.

ನೆತ್ತಿ ಉಜ್ಜಿಕೊಳ್ಳುತ್ತಾ ಮುಲ್ಲಾ ಹೇಳಿದ, ʼʼಓ ದೇವರೇ, ನೀನು ದೊಡ್ಡವನು. ಕುಂಬಳಕಾಯಿಯನ್ನು ಮರದ ಮೇಲೆ ಇಡದೇ ಇದ್ದುದೇ ಒಳ್ಳೆಯದಾಯಿತು! ಖರ್ಜೂರದ ಬದಲು ಕುಂಬಳಕಾಯಿ ಇದ್ದಿದ್ದರೆ ನನ್ನ ಕತೆಯೇನು!ʼʼ


ದೇವರ ಸೇವಕ

ಮುಲ್ಲಾ ಒಂದು ಹೋಟೆಲ್‌ನ ಮುಂದೆ ಒಂದು ಪುಟ್ಟ ಬಟ್ಟಲು ಹಿಡಿದು ಕುಳಿತಿದ್ದ. ಅದರಲ್ಲಿ ತಿಳಿಗಂಜಿ, ಉಪ್ಪಿನಕಾಯಿ ಮಾತ್ರವಿತ್ತು. ಬಡವನಾದ ಅವನಿಗೆ ಇಡೀ ದಿನದಲ್ಲಿ ಸಿಗುತ್ತಿದ್ದುದು ಅಷ್ಟೇ.

ಅಷ್ಟರಲ್ಲಿ ಅಲ್ಲಿ ಶ್ರೀಮಂತನಾದ ಒಬ್ಬ ವ್ಯಕ್ತಿ ಕುದುರೆಯ ಮೇಲೆ, ರೇಷ್ಮೆ ಬಟ್ಟೆ ಧರಿಸಿ, ರುಮಾಲು ತೊಟ್ಟು, ಠಾಕುಠೀಕಾಗಿ ಹಾದುಹೋದ.

ʼʼಅವನ್ಯಾರು?ʼʼ ಎಂದು ಮುಲ್ಲಾ ಯಾರನ್ನೋ ಪ್ರಶ್ನಸಿದ. ʼʼಅವನು ಸುಲ್ತಾನನ ಸೇವಕ.ʼʼ ಎಂದು ಅವರು ಉತ್ತರಿಸಿದರು. ಮುಲ್ಲಾ ಆಕಾಶದ ಕಡೆಗೆ ತಿರುಗಿ ʼʼಓಹ್‌ ದೇವರೇ, ಅವನು ಸುಲ್ತಾನನ ಸೇವಕ. ನಾನು ನಿನ್ನ ಸೇವಕ. ನಿನ್ನ ಸೇವಕನಿಗಿಂತ ಸುಲ್ತಾನನ ಸೇವಕನ ಸ್ಥಿತಿಯೇ ಉತ್ತಮವಾಗಿದೆ! ಇದು ನಿನಗೆ ಸರಿ ಎನಿಸುತ್ತದೆಯೇ?ʼʼ ಎಂದು ಪ್ರಶ್ನಿಸಿದ.

ಇದನ್ನೂ ಓದಿ: ಮಕ್ಕಳ ಕಥೆ | ರಾಜಕುಮಾರನ ಹೊಟ್ಟೆಯೊಳಗಿನ ಹಾವು

Exit mobile version