| ಕೇಶವ ಮಳಗಿ
ದಶಕಗಳಿಂದ ಪತ್ರಕರ್ತರಾಗಿ, ಲೇಖಕರಾಗಿ, ಕಥೆಗಾರರಾಗಿ ಕಂ.ಕ. ಮೂರ್ತಿ ಕನ್ನಡದ ಓದುಗರಿಗೆ ಪರಿಚಿತರು. ವೃತ್ತಿಯಲ್ಲಿ ಅವರು ಪತ್ರಕರ್ತರಾದರೂ ಕನಸು- ವಾಸ್ತವ-ಕಲ್ಪನೆ ಮತ್ತು ಕನವರಿಕೆಗಳು ತುಂಬಿದ ಕಥೆಗಳನ್ನು ಬರೆಯುವುದು ಅವರಿಗೆ ಮೆಚ್ಚು. ಮೂರ್ತಿಯವರ ಅಂತರಂಗದ ತುಡಿತದ ಪ್ರತಿಬಿಂಬವಾಗಿ ಹದಿನೈದು ಕಥೆಗಳ ಈಗಿನ ಸಂಕಲನ ಓದುಗರ ಮುಂದಿದೆ.
ಮೂರ್ತಿಯವರು ಪತ್ರಕರ್ತರಾಗಿ, ಸಂವೇದನಾಶೀಲ ವ್ಯಕ್ತಿಯಾಗಿ ಕಂಡುಂಡ ಬದುಕು ಈ ಕಥಾಸಂಕಲನದ ಉದ್ದಕ್ಕೂ ಹರಡಿಕೊಂಡಿದೆ. ಇಲ್ಲಿನ ಬಹುಪಾಲು ಕಥೆಗಳ ಭಿತ್ತಿ ಮಲೆನಾಡಿನ ಸಾಮಾನ್ಯ ಜನರ ಬದುಕಿನ ಆಶೋತ್ತರ, ಕಷ್ಟಕಾರ್ಪಣ್ಯ, ಘನತೆ ತುಂಬಿದ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಮನುಷ್ಯರು ತೋರುವ ಛಲವಂತಿಕೆಗಳೇ ಆಗಿವೆ. ಅನುಭವವನ್ನು ಮರುಕಥಿಸುವಾಗ ಕಥೆಗಾರರು ತೋರುವ ಪಕ್ವ ನೋಟ ಕಥೆಗಳನ್ನು ಮೇಲುಸ್ತರಕ್ಕೇರಿಸಿವೆ. ಸಾಮಾನ್ಯರ ಜೀವನವನ್ನು ಸಂವೇದನಾಶೀಲತೆ ಮತ್ತು ಸಂಯಮಗಳಿಂದ ನಿರುಕಿಸುತ್ತ ಮೂರ್ತಿಯವರು ಕಟ್ಟುವ ಕಥೆಗಳಲ್ಲಿ ಕಥನಕೌಶಲ, ವಸ್ತುವಿಷಯ, ಶೈಲಿಗಳ ನಿರ್ವಹಣೆಯಲ್ಲಿ ತೋರುವ ನಿಪುಣತೆ ಓದನ್ನು ಹೃದ್ಯವಾಗಿಸುತ್ತವೆ.
ಇದನ್ನೂ ಓದಿ: ಹೊಸ ಪುಸ್ತಕ: Sunday read: ಹಿಂದೂ ಮಹಾಸಾಗರದ ಮೇಲೊಂದು ಮಹಾಜಾಲಕ್ಕೆ ನಾಂದಿ
ಇಲ್ಲಿ ಬಳಸಿರುವ ಮಾದರಿ ಜನಪ್ರಿಯ ಸಾಹಿತ್ಯಕ್ಕೆ ಹತ್ತಿರವಾಗಿರುವುದರಿಂದ ಓದುಗ ಹೆಚ್ಚು ಪರಿಶ್ರಮ ಪಡದೆ ತನ್ನದಾಗಿಸಿಕೊಳ್ಳಬಲ್ಲ. ಇಲ್ಲಿನ ಕೆಲವು ಕಥೆಗಳಲ್ಲಿ ದೊಡ್ಡವರ ಪಡಿಪಾಟಲಿನ ಬದುಕನ್ನು ಸಾಕ್ಷಿಪ್ರಜ್ಞೆಯಾಗಿ ಗ್ರಹಿಸುವ ಚಿಕ್ಕಮಕ್ಕಳ ಪಾತ್ರಗಳಿವೆ. ಅಂತೆಯೇ, ನಿಸ್ವಾರ್ಥದ, ಅಸಹಾಯಕ ಬದುಕನ್ನು ನಡೆಸುವ ಹೆಂಗಸರು ಒಂದು ಗಳಿಗೆಯಲ್ಲಿ ತೋರುವ ದಿಟ್ಟತನ ಮತ್ತು ತ್ಯಾಗಮಯ ಪಾತ್ರಗಳಿವೆ. ಇವೆಲ್ಲ ಇಂದಿಗೂ ಗ್ರಾಮಭಾರತದ ಬದುಕಿನ ಅವಿಭಾಜ್ಯ ಅಂಗವೇ ಆಗಿರುವುದರಿಂದ ಓದುಗ ಅವುಗಳೊಂದಿಗೆ ತಾದ್ಯಾತ್ಮತೆಯನ್ನು ಸಾಧಿಸಬಲ್ಲ.
ಶ್ರೀಗಂಧ ಕಥೆಯ ಶೀನ, ಕಾರುಣ್ಯ ಕಥೆಯ ಅಜ್ಜಿ, ಅನ್ನದೇವರು ಕಥೆಯ ಮಕ್ಕಳು, ಸಂತ ಕಥೆಯ ಅಯ್ಯನವರು, ಮುಸ್ಸಂಜೆ ಕಥೆಯ ರಾವ್, ಹೀಗೆ ಕಥೆ ಮತ್ತು ಪಾತ್ರಗಳು ಬೇರೆ ಬೇರೆ. ಆದರೆ, ಕಥೆಗಾರನ ಮಾಗಿದ ದೃಷ್ಟಿಕೋನವು ಈ ಪಾತ್ರಗಳು ಬದುಕಿನ ಕಹಿಯನ್ನು ನುಂಗಿ, ಆ ಗಳಿಗೆಯನ್ನು ಹೇಗೆ ತಿಳಿಯಾಗಿಸಿದರು ಮತ್ತು ಸಾರ್ಥಕಗೊಳಿಸಿದರು ಎಂಬುದರತ್ತ ಇರುವುದರಿಂದ ಹೊಸ ನೋಟ ಪ್ರಾಪ್ತವಾಗುತ್ತದೆ. ಇಲ್ಲಿನ ಕಥೆಗಳು ಓದುಗರನ್ನು ಆರ್ದಗೊಳಿಸಬಲ್ಲವು. ಒಂದು ಕಥೆಯಿಂದ ಸಮಾಜದ ವಿವಿಧ ಸ್ತರದ ಬದುಕಿನ ಚಿತ್ರಣ ಬಯಸಿದರೆ ಅದನ್ನು ಧಾರಾಳವಾಗಿ ನೀಡಬಲ್ಲವು. ಬದುಕಿನಲ್ಲಿ ಕಷ್ಟನಷ್ಟ, ಕಹಿಯೊಗರುಗಳಷ್ಟೇ ಅಲ್ಲ, ಅವುಗಳ ಹಿಂದೆ ಮನುಷ್ಯ ತನ್ನ ಹೋರಾಟದಿಂದಾಗಿಯೇ ಪಡೆದುಕೊಳ್ಳಬಹುದಾದ ಚಲನಶೀಲತೆಯಿದೆ ಎಂಬುದನ್ನು ಎತ್ತಿ ತೋರಿಸಬಲ್ಲವು.
ಇದನ್ನೂ ಓದಿ: ಹೊಸ ಪುಸ್ತಕ | ಮಾಯ ಮತ್ತು ಜೋಗದ ಬೆಳಕಿನಲ್ಲಿ | ಕಾಂತಾರದ ದಂತಕತೆ ಮತ್ತು ಮಾಯವಾಗುವ ದೈವಗಳು
ಕೃತಿ: ಅಮೃತಬಳ್ಳಿ ಮತ್ತು ಇತರ ಕಥೆಗಳು (ಕಥಾಸಂಕಲನ)
ಲೇಖಕ: ಕಂ.ಕ. ಮೂರ್ತಿ
ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಶನ್
ಬೆಲೆ: 190 ರೂ.