Site icon Vistara News

Sunday Read: ಹೊಸ ಪುಸ್ತಕ: ರಾಮನೇನು ದೇವನೇ?

sunday read new book ramanenu devane

:: ಡಾ. ಕೆ.ಎಸ್‌. ಕಣ್ಣನ್‌

ಹೊಸ ಪುಸ್ತಕ: “ರಾಮನು (Sri Rama) ಮನುಷ್ಯನೋ ದೇವನೋ?” – ಎಂಬ ಪ್ರಶ್ನೆಗೆ ಉತ್ತರ ಕೊಡುವ ಕೃತಿ: “ರಾಮನೇನು ದೇವನೇ?” ತಾನು ಮನುಷ್ಯನೆಂದು ರಾಮನೇ ಹೇಳಿಕೊಂಡಿರುವುದುಂಟು; ರಾಮಾಯಣದ ಆರಂಭದಲ್ಲೂ, ನಾರದರನ್ನು ವಾಲ್ಮೀಕಿಗಳು ಕೇಳುವುದೂ ನಾನಾ ಗುಣಸಂಪನ್ನನಾದ ನರನ ಬಗ್ಗೆಯೇ; ಆಗ ನಾರದರು ಹೇಳುವುದೂ ಅಂತಹೊಬ್ಬ ಮನುಷ್ಯನ ಬಗ್ಗೆಯೇ.

ಆದರೂ, ನಮ್ಮ ಪರಂಪರೆಯಂತೂ ಸಾವಿರಾರು ವರ್ಷಗಳಿಂದ ರಾಮನನ್ನು ದೇವರೆಂದೇ ಪೂಜಿಸಿಕೊಂಡು ಬಂದಿದೆ. ಆತನ ಸುಗುಣ-ಸುರೂಪಗಳನ್ನೂ ಜೀವಿತ-ಸಂದೇಶಗಳನ್ನೂ ಸ್ಮರಿಸಿ ರೂಪಿಸಿ ಹಾಡಿ ಕೊಂಡಾಡಿ ವಿರಚಿತವಾದ ಕಾವ್ಯ-ನಾಟಕಗಳೆಷ್ಟು, ಚಿತ್ರ-ಶಿಲ್ಪಗಳೆಷ್ಟು, ಮಂದಿರ-ದೇವಾಲಯಗಳೆಷ್ಟು – ಲೆಕ್ಕವಿಡುವವರಾರು! “ಇಂತಹ ಭಾಷೆಯಲ್ಲಿ ಶ್ರೀರಾಮಚಂದ್ರನನ್ನು ಕುರಿತಾದ ಸ್ತುತಿಯಿಲ್ಲ”- ಎನ್ನಲಾಗುವ ಒಂದೇ ಒಂದು ಭಾರತೀಯಭಾಷೆಯಾದರೂ ಉಂಟೆ? ಹೀಗಿದ್ದರೂ, ಕೆಲ ಸಂಪ್ರದಾಯಸ್ಥರಿಗೂ ಒಮ್ಮೊಮ್ಮೆ ಸಂಶಯಗಳು ಮೂಡಿರುವುದುಂಟು. ಪಾಶ್ಚಾತ್ಯವಿಮರ್ಶಕರಂತೂ, “ರಾಮನನ್ನು ದೇವನೆಂದಿರುವ ಭಾಗಗಳೆಲ್ಲಾ ಪ್ರಕ್ಷಿಪ್ತವೇ ಆಗಿರಬೇಕು (ಎಂದರೆ, ಆಮೇಲೇ ಸೇರಿಸಿರುವಂತಹವಾಗಿರಬೇಕು)” – ಎಂಬುದಾಗಿಯೇ ತಮ್ಮ ತರ್ಕವನ್ನು ಆರಂಭಿಸುತ್ತಾರೆ. ಅಸೂಯಾಪ್ರೇರಿತವಾದ ದುರ್ಮದದಿಂದ, ಇತರಸಂಸ್ಕೃತಿಗಳನ್ನು ಹೀನಾಯಮಾಡುವ ಅವರ ಸಹಜಪ್ರವೃತ್ತಿಗಂತೂ ಸಾಕಷ್ಟೇ ನಿದರ್ಶನಗಳಿವೆ..

ಹಾಗಾದರೆ ರಾಮನ ದೈವತ್ವದ ವಾಸ್ತವಾಂಶವೇನು? – ಎಂಬ ಪ್ರಶ್ನೆಯನ್ನೇ, “ರಾಮನೇನು ದೇವನೇ?” – ಎಂಬ ಈಚೆಗಷ್ಟೆ ಪ್ರಕಾಶಿತವಾದ ಕೃತಿಯು ವಿಶ್ಲೇಷಿಸುತ್ತದೆ. ಇಷ್ಟು ಆಳವಾದ ವಿಶ್ಲೇಷಣೆ ಯಾವುದೇ (ಭಾರತೀಯ ಅಥವಾ ಬೇರೆ ದೇಶದ) ಭಾಷೆಯಲ್ಲೂ ಬಂದಿಲ್ಲವೆನ್ನಬಹುದು! ಈ ಕೃತಿಯನ್ನು ರಚಿಸಿದ ಪ್ರೊ. ಕೆ. ಎಸ್. ಕಣ್ಣನ್ ಅವರು ರಾಮಾಯಣದ ಎಲ್ಲ ಮುಖ್ಯಪ್ರಸಂಗಗಳನ್ನೂ ಕ್ರಮಬದ್ಧವಾಗಿ ಪರಿಶೀಲಿಸಿ ಇಲ್ಲಿ ವಿವರಿಸಿದ್ದಾರೆ. ವಾಲ್ಮೀಕಿರಾಮಾಯಣದ ಮೂಲವಾಕ್ಯಗಳನ್ನು ಅವಶ್ಯವಿರುವೆಡೆಯಲ್ಲೆಲ್ಲಾ ಇದಕ್ಕಾಗಿ ಉದ್ಧರಿಸಿದ್ದಾರೆ; ಸಾಮಾನ್ಯರಿಗೂ ಅರ್ಥವು ಸ್ಫುಟವಾಗಲೆಂದು ಅವುಗಳೆಲ್ಲದರ ಅನುವಾದ-ವಿವರಣೆಗಳನ್ನೂ ತಿಳಿಗನ್ನಡದಲ್ಲಿ ಕೊಟ್ಟಿದ್ದಾರೆ. ರಾಮಾಯಣದಿಂದ ಮಾತ್ರವಲ್ಲದೆ, ಇತರ ಹಲವು ಪ್ರಸಿದ್ಧಗ್ರಂಥಗಳಿಂದಲೂ ಸೇರಿದಂತೆ, ಸುಮಾರು 400ಕ್ಕೂ ಮೀರಿದ ಉದ್ಧೃತಿಗಳು ಈ ಕೃತಿಯಲ್ಲಿವೆ! ಅಷ್ಟೇ ಅಲ್ಲ, ಉಲ್ಲೇಖಗೊಂಡ ಸಮಸ್ತವಾಕ್ಯಗಳಿಗೂ ಆಕರ-ಅಧ್ಯಾಯ-ಶ್ಲೋಕಸಂಖ್ಯೆಗಳನ್ನು ಬಿಡದೇ ಸೂಚಿಸಲಾಗಿದೆ.

ಈ ಕೃತಿಯ ಲೇಖಕರಾದ ಪ್ರೊ. ಕೆ. ಎಸ್. ಕಣ್ಣನ್ ಅವರು ಮದ್ರಾಸಿನಲ್ಲಿಯ ಐಐಟಿಯಲ್ಲಿ ಪೀಠಪ್ರಾಧ್ಯಾಪಕರಾಗಿ ಕೆಲಸ ಮಾಡಿ ಈಚೆಗಷ್ಟೆ ನಿವೃತ್ತರಾಗಿರುವವರು. ಹೆಸರಾಂತ ಸಂಸ್ಕೃತ ವಿದ್ವಾಂಸರಾದ ಇವರು ಹಲವು ಪುಸ್ತಕಗಳನ್ನು ರಚಿಸಿದ್ದಾರೆ.

ಈ ಕೃತಿಯ ಆಯ್ದ ಭಾಗ ಇಲ್ಲಿದೆ:

“ರಾಮಾಯಣಾಖ್ಯಂ ಮಧು”

ಸೀತೆಯ ಚರಿತ – ರಾಮನ ಅಯನ

ಆದಿಕಾವ್ಯವೆಂದೇ ಪ್ರಸಿದ್ಧವಾದ ಕಾವ್ಯ, ವಾಲ್ಮೀಕಿ ರಾಮಾಯಣ. ಅದು ಚಿತ್ರಿಸುವುದು ರಾಮನ ಕಥೆಯನ್ನು, ಅರ್ಥಾತ್ ರಾಮನು ನಡೆದ ಹಾದಿಯನ್ನು. ಅಯನವೆಂದರೆ ಮಾರ್ಗ, ರಾಮನ ಅಯನವೇ ರಾಮಾಯಣ. ಸಂಧಿನಿಯಮದಿಂದಾಗಿ ʼಅಯನ’ದಲ್ಲಿಯ ʼನ’ಕಾರವು ʼಣ’ಕಾರವಾಗಿದೆ. ಅಯನವೆಂದರೆ ಮಾರ್ಗ, ಹೋಗುವಿಕೆ (ʼಅಯ ಗತʼ ಎಂದು ಧಾತು). ಅಷ್ಟನ್ನು ಮಾತ್ರ ಹೇಳುವುದು ರಾಮಾಯನ ಎನಿಸಿಕೊಳ್ಳುತ್ತದೆ. ಈ ರಾಮಾಯನವನ್ನು ಕುರಿತಾದ ಕಾವ್ಯ ಎನ್ನುವಲ್ಲಿ, ಆ ಕಾವ್ಯದ ಹೆಸರಾಗಿ ಬಂದಾಗ ನಕಾರವು ಣಕಾರವಾಗುತ್ತದೆ.

ರಾಮಾಯನವನ್ನು ಹೇಳುವ ಕಾವ್ಯದ ಹೆಸರು ರಾಮಾಯಣ. ರಾಮನು ಎಲ್ಲಿಂದ ಎಲ್ಲಿಗೆ ನಡೆದದ್ದು? ಅಯೋಧ್ಯೆಯಿಂದ ಹೊರಟು ಕೊನೆಗೆ ಅಯೋಧ್ಯೆಗೇ ಬಂದು ಸೇರಿದನಲ್ಲವೇ? ಅದುವೇ ರಾಮಾಯಣವಾಯಿತು. ಇನ್ನೂ ಮುಖ್ಯವಾದ ರಾಮಾಯನವೊಂದಿದೆ. ದಿವಿಯಿಂದ ಹೊರಟು ಭುವಿಯಲ್ಲಿ ಇದ್ದು ಮತ್ತೆ ದಿವಿಗೆ ಬಂದು ಸೇರಿದನಲ್ಲವೇ? ಅದುವೇ ನಿಜವಾದ ರಾಮಾಯಣ! ನಾವೂ ನಮ್ಮ ಮೂಲವನ್ನು ಸೇರಿಕೊಳ್ಳಲು ಹಿಡಿಯಬೇಕಾದ ಹಾದಿಯನ್ನು ಅರುಹುವ ಅಮರಕೃತಿಯಿದು. ರಾಮನು ಹೋದ ದಾರಿಯು ನಮಗೆ ಆದರ್ಶ. ರಾವಣನು ಹಾಕಿದ ಹೆಜ್ಜೆ ಆದರ್ಶವಲ್ಲ. ಈ ಭಾವವನ್ನು ತಿಳಿಸುವ ಗಾದೆ ಮಾತೊಂದು ಸಂಸ್ಕೃತದಲ್ಲಿದೆ: “ರಾಮನ ಹಾಗೆ ವರ್ತಿಸಬೇಕು. ರಾವಣನ ಹಾಗಲ್ಲ”.

ಪ್ರಪಂಚದಲ್ಲಿ ರಾಮನೊಬ್ಬನೇ ಒಳ್ಳೆಯವ ಎಂದೇನೂ ಇಲ್ಲವಲ್ಲ? ರಾವಣನೊಬ್ಬನೇ ಕೆಟ್ಟವ ಎಂದು ಕೂಡ ಅಲ್ಲವಲ್ಲವೇ? ಎಂದೇ, ʼರಾಮ’ನಿಗೊಂದು ʼಆದಿ’, ʼರಾವಣ’ನಿಗೊಂದು ʼಆದಿ’ ಸೇರಿಸಿದರು. ʼಆದಿ’ ಎಂದರೆ ʼಮೊದಲಾದʼ. ಅಲ್ಲಿಗೆ ಗಾದೆಯ ಪೂರ್ಣರೂಪ “ರಾಮ ಮೊದಲಾದವರ ಹಾಗೆ ಇರತಕ್ಕದ್ದು, ರಾವಣ ಮೊದಲಾದವರಂತೆ ಇರತಕ್ಕದ್ದಲ್ಲ”. ಗಾದೆ ಹೀಗೆ: ʼರಾಮಾssದಿವದ್ ವರ್ತಿತವ್ಯಂ, ನ ರಾವಣಾssದಿವತ್ʼ.

ರಾವಣನು ಪುಲಸ್ತ್ಯ ವಂಶದವನು. ಎಂದೇ ರಾವಣನು ʼಪೌಲಸ್ತ್ಯʼನೆನಿಸುವನು. ರಜೋಗುಣಭರಿತನಾಗಿದ್ದು ಧರ್ಮವನ್ನೂ ಅಮರರನ್ನೂ ಲೆಕ್ಕಿಸೆನೆನ್ನುವ ಆ ಅಹಂಕಾರಿಯ ಮಾರಣವೇ ಈ ಕಾವ್ಯ ಎಂದೇ ವಾಲ್ಮೀಕಿಗಳು ರಾಮಾಯಣವನ್ನು “ಪೌಲಸ್ತ್ಯವಧ” ಎಂದೂ ಕರೆದಿದ್ದಾರೆ. ರಾಮನು ಒಳ್ಳೆಯವನಿರಬಹುದು, ಸೀತೆಯು ಒಳ್ಳೆಯವಳಲ್ಲವೆ? ವಾಲ್ಮೀಕಿ ಮಹರ್ಷಿಯು ಗಂಡಸಾದ್ದರಿಂದ ಗಂಡಸಾದ ರಾಮನನ್ನೇ ಹೊಗಳಿದ್ದಾನೋ ಏನೋ? ಎಂದು ಸಂಶಯಪಡಬೇಕಿಲ್ಲ. ವಾಲ್ಮೀಕಿಗಳೇ ಹೇಳುವಂತೆ “ಸೀತಾಯಾಃ ಚರಿತಂ ಮಹತ್”: ಸೀತೆಯ ನಡೆಯೂ ರಾಮನದಷ್ಟೇ ಹಿರಿದಾದುದೇ.

ರಾಮನ ಹೆಸರೇ ಮಧುರವಾದದ್ದು.
ರಾಮೇತಿ ಮಧುರಾಂ ವಾಣೀಂ ವಿಶ್ವಾಮಿತ್ರೋsಭ್ಯಭಾಷತ | (1.21.9)
ಋಷಯೋ ರಾಮ ರಾಮೇತಿ ಮಧುರಾಂ ವಾಚಮ್ ಅಬ್ರುವನ್ (1.73.21)

ಸೀತೆಯ ಹೆಸರೂ ಮಧುರವೇ.
ಸೀತೇತಿ ಮಧುರಾಂ ವಾಣೀಂ ವ್ಯಾಹರನ್ ಪ್ರತಿಬುಧ್ಯತೇ । (5.34.42)

ರಾಮನು ಇಳಿದು ಬಂದವನೇ? ಮೇಲಕ್ಕೆ ಏರಿದವನೇ? ಸಂಶಯವೂ ಬರುವುದುಂಟು. ರಾಮನನ್ನು ನಾವು ಆದರಿಸುತ್ತೇವೆ, ಆರಾಧಿಸುತ್ತೇವೆ, ಪೂಜಿಸುತ್ತೇವೆ. ಆತನನ್ನು ದೇವರೆಂದೇ ಭಾವಿಸುತ್ತೇವೆ. ಆದರೆ, ಒಮ್ಮೊಮ್ಮೆ ಕೆಲವರಿಗೆ ಸ್ವಲ್ಪ ಸಂಶಯವೂ ಬರುವುದುಂಟು. ರಾಮನು ವಾಸ್ತವವಾಗಿ ದೇವನೇ? ಎಂದು. ಏಕೆ? ರಾಮನಲ್ಲೂ ಕೆಲವು ದೋಷಗಳು ಇದ್ದವಲ್ಲವೆ? ರಾಮನಲ್ಲೂ ಕೆಲವು ದೋಷಗಳು ಇದ್ದವಲ್ಲವೇ? ಮರೆಯಲ್ಲಿ ನಿಂತಲ್ಲವೇ ರಾಮನು ವಾಲಿಯನ್ನು ಕೊಂದದ್ದು? ಅದೇನು ದೊಡ್ಡ ಗುಣವೇ? ತನಗೆ ಯಾವ ದ್ರೋಹವನ್ನೂ ಮಾಡದಿದ್ದ ಸೀತೆಯನ್ನು, “ಅಘೋರಚಕ್ಷುಷ್ಕಳೂ ಅಪತಿಘ್ನಿಯೂ’ ಆದ ಕೈಹಿಡಿದ ಮಡದಿಯನ್ನು – ರಾಮನು ಪರಿತ್ಯಾಗ ಮಾಡಲಿಲ್ಲವೇ? ಅದರಲ್ಲಿ ದೋಷವಿಲ್ಲವೇ? ಎಂದು ʼಕೇಳುವವರುಂಟು’ ಎನ್ನುವುದಕ್ಕಿಂತ, ನಮಗೇ ಕೆಲವೊಮ್ಮೆ ಹಾಗೆನ್ನಿಸಲೂಬಹುದು.

ಕೃತಿ: ರಾಮನೇನು ದೇವನೇ?
ಪ್ರಕಾಶಕರು: ಶ್ರೀ ಭಾರತೀ ಪ್ರಕಾಶನ, ಬೆಂಗಳೂರು
ಪುಟ: 200, ಬೆಲೆ: ರೂ. 200.
ಪ್ರತಿಗಳಿಗೆ: 95915 42454

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

Exit mobile version