Site icon Vistara News

Sunday read | 110 ವರ್ಷಗಳ ಹಿಂದೆ, ಒಂದು ಹಡಗು ಮುಳುಗುವ ಮುನ್ನ

titanic

1912ರ ಏಪ್ರಿಲ್ 14ರ ರಾತ್ರಿ, ಯುರೋಪ್‌ನಿಂದ ಅಮೆರಿಕಕ್ಕೆ 2200 ಮಂದಿಯನ್ನು ತುಂಬಿಕೊಂಡು ಯಾನ ಹೊರಟಿದ್ದ ಬೃಹತ್ ಹಡಗು ಅಟ್ಲಾಂಟಿಕ್ ಸಮುದ್ರದ ನಡುಮಧ್ಯದಲ್ಲೆಲ್ಲೋ ನೀರ್ಗಲ್ಲಿಗೆ ಹೊಡೆದು ಬಿರುಕು ಬಿಟ್ಟಿತ್ತು. ನೌಕೆಯಲ್ಲಿ ನೀರು ತುಂಬಿಕೊಂಡು ಮುಳುಗಲಾರಂಭಿಸಿತು. ಹಡಗಿನ ತುಂಬ ಚೀರಾಟ.

ಅಂಥ ಭಯಾನಕ ಸ್ಥಿತಿಯಲ್ಲೂ ಯಾರೂ ಆ ಕಾಲದ ಸಮುದ್ರಯಾನ ಹಾಗೂ ಜೀವನದ ಶಿಷ್ಟಾಚಾರವನ್ನು ಮರೆತಿರಲಿಲ್ಲ. ಮಹಿಳೆಯರು ಹಾಗೂ ಮಕ್ಕಳನ್ನು ಮೊದಲು ಜೀವರಕ್ಷಕ ದೋಣಿಗಳಿಗೆ ಹತ್ತಿಸಿ ದೂರ ಕಳುಹಿಸಲಾಯಿತು. ಹೆಚ್ಚಿನ ಪುರುಷರು ಅಲ್ಲೇ ಉಳಿದರು.

ವಯೋವೃದ್ಧ ಇಸಿಡೋರ್ ಸ್ಟ್ರಾಸ್ ಹಡಗಿನಲ್ಲಿದ್ದ. ಆತ ಅಮೆರಿಕದ ಅಧ್ಯಕ್ಷರ ಸಲಹೆಗಾರ ಮತ್ತು ಕಾಂಗ್ರೆಸ್ ಸದಸ್ಯನಾಗಿದ್ದ. ಫ್ರಾನ್ಸ್‌ನಲ್ಲಿ ರಜೆ ಮುಗಿಸಿ ಹೆಂಡತಿ ಇಡಾ ಜತೆ ಮರಳುತ್ತಿದ್ದ. ಹಡಗು ಮುಳುಗುತ್ತಿದ್ದಾಗ ಲೈಫ್‌ಬೋಟ್ 8ರ ಸಿಬ್ಬಂದಿ ಇಡಾರನ್ನು ಹತ್ತಲು ಕರೆದರು. ಒಮ್ಮೆ ದೋಣಿ ಹತ್ತಲು ಮುಂದಾದ ಇಡಾ, ಕೊನೆಯ ಕ್ಷಣದಲ್ಲಿ ಮನಸು ಬದಲಾಯಿಸಿದರು. ಇಸಿಡೋರ್‌ಗೆ ಹೇಳಿದರು- ”ನಾವು ಇಷ್ಟು ವರ್ಷ ಜತೆಯಾಗಿ ಬದುಕಿದ್ದೇವೆ. ನೀವೆಲ್ಲಿ ಹೋಗುತ್ತೀರೋ, ನಾನಲ್ಲಿರುತ್ತೇನೆ…”

ಹತ್ತಿರ ಇದ್ದವರು ಆಕೆಯ ನಿಲುವನ್ನು ಬದಲಾಯಿಸಲು ಯತ್ನಿಸಿದರು. ಆಕೆ ಮಣಿಯಲಿಲ್ಲ. ದೋಣಿಯಲ್ಲಿದ್ದವರಾರೋ ಕೂಗಿದರು- ‘ನಿಮ್ಮಂಥ ವೃದ್ಧ ಜಂಟಲ್‌ಮನ್ ದೋಣಿ ಹತ್ತಿದರೆ ಯಾರೂ ಆಕ್ಷೇಪಿಸೋಲ್ಲ…ʼʼ ವೃದ್ಧ ಇಸಿಡೋರ್ ಉತ್ತರಿಸಿದರು- ʼʼಇತರ ಗಂಡಸರು ಹೋಗಲಿ, ಆಮೇಲೆ ನಾನು ಹೋಗುತ್ತೇನೆ…ʼʼ ಅಲ್ಲಿಗೆ ಎಲ್ಲ ನಿರ್ಧಾರವಾದಂತಾಯಿತು. ಇಡಾಳ ಸೇವಕಿ ದೋಣಿಗೆ ಹತ್ತಿದಳು. ವೃದ್ಧೆ ಇಡಾ ತಮ್ಮ ಕೋಟನ್ನು ಬಿಚ್ಚಿ ಆಕೆಗಿತ್ತರು. ದೋಣಿ ನೀರಿಗಿಳಿದು ದೂರವಾಗತೊಡಗಿದಂತೆ, ಮುಳುಗುತ್ತಿರುವ ಹಡಗಿನ ಡೆಕ್ಕಿನ ಮೇಲೆ ವೃದ್ಧ ದಂಪತಿ ತಡವರಿಸುತ್ತ ನಡೆದು ಹೋಗುತ್ತಿರುವುದನ್ನು ಎಲ್ಲರೂ ಕಂಡರು.

ಆತನ ಹೆಸರು ಥಾಮಸ್ ಆಂಡ್ರ್ಯೂಸ್. ಹಡಗಿನ ಯಾವ ನಟ್ಟು, ಬೋಲ್ಟು ಎಲ್ಲಿರಬೇಕು, ಪ್ರೊಫೆಲ್ಲರ್ ಎಲ್ಲಿರಬೇಕು, ಎಲ್ಲೆಲ್ಲಿ ಯಾವ್ಯಾವ ರೂಮುಗಳು, ದೊಡ್ಡ ಅಲೆಗಳ ಹೊಡೆತ ತಡೆದುಕೊಳ್ಳುವ ಬಗೆಯೆಂತು… ಇತ್ಯಾದಿ ಅಂಶಗಳನ್ನು ಚಿಂತಿಸಿ ರೂಪಿಸಿದವನು, ವಿನ್ಯಾಸಗೊಳಿಸಿದವನು ಆತ. ಹಡಗಿನ ಮೊದಲ ಯಾನ ಹೇಗಾಗುತ್ತದೆ ನೋಡುವ ಕುತೂಹಲದಿಂದ ಆತ ನೌಕೆಯೇರಿದ್ದ.

ಹಡಗು ಮುಳುಗುವ ಸಂದರ್ಭದಲ್ಲಿ ಆತ ಏನು ಮಾಡುತ್ತಿದ್ದ? ಹಡಗಿನ ಕ್ಯಾಪ್ಟನ್ ಸ್ಮಿತ್ ಜತೆಗೂಡಿ, ನೀರು ತುಂಬಿದ ಭಾಗಗಳಲ್ಲಿ ಓಡಾಡುತ್ತಿದ್ದ.

ಇನ್ನೆರಡು ಗಂಟೆಗಳಲ್ಲಿ ಹಡಗು ಸಂಪೂರ್ಣ ಮುಳುಗಿಹೋಗಲಿದೆ ಎಂಬ ಎಚ್ಚರಿಕೆಯನ್ನು ಪ್ರಯಾಣಿಕರಿಗೆ ಕೊಟ್ಟವನೇ ಅವನು. ಕೊನೆಯ ಬಾರಿಗೆ ಆತನನ್ನು ಕಂಡವನು ಒಬ್ಬ ಸೇವಕ. ಆಗ ಆತ ತನ್ನ ಮೊದಲ ದರ್ಜೆಯ ಸ್ಮೋಕಿಂಗ್ ಝೋನ್‌ನಲ್ಲಿ, ತನ್ನ ಕನಸು ನೀರಿನಲ್ಲಿ ಮುಳುಗಿಹೋಗುತ್ತಿರುವುದನ್ನು ನೋಡುತ್ತ ನಿಂತಿದ್ದ. ಆತನ ಲೈಫ್ ಜಾಕೆಟ್ ಅನಾಥವಾಗಿ ಬಳಿಯಲ್ಲಿ ಬಿದ್ದಿತ್ತು.

ಹಡಗಿನ ಮೂರನೇ ದರ್ಜೆಯಲ್ಲಿತ್ತು, ಸೇಜ್ ಕುಟುಂಬ, ಕುಟುಂಬದ ಎಲ್ಲ ಹನ್ನೊಂದು ಮಂದಿಯೂ ನೌಕೆಯಲ್ಲಿದ್ದರು. ಫ್ಲೋರಿಡಾದಲ್ಲೊಂದು ಹಣ್ಣಿನ ತೋಟ ಖರೀದಿಸಿದ್ದ ಅವರು, ಅಲ್ಲಿ ಜತೆಯಾಗಿ ಬದುಕು ಕಳೆಯಲು ಹೊರಟಿದ್ದರು. ಜತೆಗೆ ಐದು ಮಕ್ಕಳು ಕೂಡ. ಹಡಗು ಮುಳುಗುವ ಕೊನೆಯ ಕ್ಷಣದಲ್ಲಿ, ಸೇಜ್ ಕುಟುಂಬದ ಒಬ್ಬ ಸೊಸೆ ಲೈಫ್‌ಬೋಟ್ ಹತ್ತಿದಳು. ಕುಟುಂಬದ ಉಳಿದವರಾರೂ ಬೋಟ್ ಏರಿಲ್ಲವೆಂದು ಗೊತ್ತಾದ ಕೂಡಲೆ ಹಡಗಿಗೆ ಮರಳಿದಳು. ಈ ಹನ್ನೊಂದು ಮಂದಿಯಲ್ಲಿ ಒಬ್ಬೇ ಒಬ್ಬಳು ಬಿಟ್ಟರೆ, ಇನ್ಯಾರ ಶವವೂ ಸಿಗಲಿಲ್ಲ.

ಕ್ಯಾಪ್ಟನ್‌ ಸ್ಮಿತ್

ಹಡಗಿನ ಕ್ಯಾಪ್ಟನ್ ಸ್ಮಿತ್, ನೌಕಾಯಾನದಲ್ಲಿ ದಶಕಗಳ ಅನುಭವವಿದ್ದವನು. ವೈಟ್ ಸ್ಟಾರ್ ಲೈನ್ ಕಂಪನಿಯ ಅತಿ ಹಿರಿಯ ಕಪ್ತಾನ. ಎಲ್ಲ ಹಡಗುಗಳ ಮೊದಲ ಪ್ರಯಾಣಕ್ಕೆ ಈತನ ಅನುಭವವನ್ನೇ ಬಳಸಿಕೊಳ್ಳಲಾಗುತ್ತಿತ್ತು. ಈ ಸಲದ ಪ್ರಯಾಣ ಮುಗಿಸಿದ ಕೂಡಲೇ ಆತ ನಿವೃತ್ತನಾಗಲಿದ್ದ. ಕೊನೆಯ ಪ್ರಯಾಣದಲ್ಲಿ, ತಾನು ಅತಿವೇಗದಲ್ಲಿ ಅಟ್ಲಾಂಟಿಕ್ ಸಮುದ್ರವನ್ನು ದಾಟಿದೆನೆಂಬ ದಾಖಲೆಯನ್ನು ಬರೆಯಬೇಕು ಎಂಬುದು ಆತನ ಕನಸಾಗಿತ್ತು.

ಹೀಗಾಗಿ ಆತ ದಿನದಿಂದ ದಿನಕ್ಕೆ ಹಡಗಿನ ವೇಗವನ್ನು ಹೆಚ್ಚಿಸುತ್ತ ನಡೆದಿದ್ದ. ಆ ಸಮುದ್ರದಲ್ಲಿ ಅಡ್ಡಾಡುತ್ತಿದ್ದ ಇತರ ನೌಕೆಗಳು, ದಾರಿಯಲ್ಲಿ ದೊಡ್ಡ ದೊಡ್ಡ ನೀರ್ಗಲ್ಲುಗಳು ತೇಲಿ ಬರುತ್ತಿವೆ ಎಂದು ಎಚ್ಚರಿಕೆ ಕಳುಹಿಸಿದ್ದವು. ಆದರೆ ಸ್ಮಿತ್, ಆ ಬಗ್ಗೆ ಹೆಚ್ಚಿನ ಗಮನ ಕೊಡಲೇ ಇಲ್ಲ. ಯಮಸ್ವರೂಪಿ ಹಿಮಗಲ್ಲಿನ ಸನಿಹಕ್ಕೆ ಬಂದಾಗ ಹಡಗಿನ ವೇಗ ನಿಯಂತ್ರಣದಲ್ಲಿರಲಿಲ್ಲ.

ಕೊನೆಯ ಲೈಫ್ ಬೋಟ್ ಹಡಗು ಬಿಟ್ಟು ತೆರಳಿದಾಗ ಈತ ಡೆಕ್ ಮೇಲೆ ನಿಂತಿದ್ದ. ನೀರ್ಗಲ್ಲುಗಳ ಅಪಾಯ ಲೆಕ್ಕಿಸದೆ ಮುನ್ನುಗ್ಗಿ ಸಾವಿರಾರು ಜನರ ಮರಣಕ್ಕೆ ಕಾರಣನಾದದ್ದಕ್ಕೆ ಆತನಿಗೆ ಶಾಪ ಹಾಕಬೇಕೊ, ಮಹಿಳೆಯರು ಮಕ್ಕಳನ್ನು ರಕ್ಷಿಸಿ ತನ್ನ ಪಾಲಿಗೆ ಸಾವನ್ನು ಆಹ್ವಾನಿಸಿಕೊಂಡ ಧೀರೋದಾತ್ತತೆಗೆ ವಂದನೆ ಹೇಳಬೇಕೊ ಅರ್ಥವಾಗದ ಗೊಂದಲದಲ್ಲಿ ಉಳಿದವರಿದ್ದರು. ಸಿಗದೆ ಹೋದ ಸಾವಿರಾರು ಶವಗಳ ಪಟ್ಟಿಯಲ್ಲಿ ಈತನ ಹೆಸರೂ ಇದೆ: ಕ್ಯಾಪ್ಟನ್ ಎಡ್ವರ್ಡ್ ಸ್ಮಿತ್.

ಟೈಟಾನಿಕ್ ದುರಂತವೆಂದರೆ ನಮ್ಮ ಪಾಲಿಗೆ ಸಾವಿರ ಸಾವಿನ ನೆನಪಷ್ಟೇ ಅಲ್ಲ. ಅದು ಕತೆಗಳ ರೂಪದಲ್ಲಿ, ಪುಸ್ತಕಗಳ ರೂಪದಲ್ಲಿ, ಚರಿತ್ರೆಯ ಪಾಠದ ರೂಪದಲ್ಲಿ, ಸಿನಿಮಾದ ರೂಪದಲ್ಲಿ ನಮ್ಮವರೆಗೂ ಸಾಗಿ ಬಂದಿದೆ. ಇದರ ಬಗ್ಗೆ ಬಂದ ಪುಸ್ತಕಗಳ ಲೆಕ್ಕ ಇಟ್ಟವರಿಲ್ಲ. ಜೇಮ್ಸ್ ಕ್ಯಾಮೆರೂನ್‌ನ ಇದೇ ಹೆಸರಿನ ಸಿನಿಮಾ ನೋಡಿ ತಲ್ಲಣಗೊಳ್ಳದ, ಅಲ್ಲಿನ ಪ್ರೇಮ ವಿಷಾದ- ಶೋಕಗಳ ಜೀವಲೋಕವನ್ನು ಕಂಗಳಲ್ಲಿ ತುಂಬಿಕೊಳ್ಳದ ಸಿನಿಮಾ ಪ್ರೇಮಿಯಿಲ್ಲ. ಇಂದಿಗೂ, ಟೈಟಾನಿಕ್‌ ಕತೆ ಹೇಳುತ್ತೇನೆ ಎಂದು ಯಾರಾದರೂ ಕರೆದರೆ, ನಾವೆಲ್ಲ ಚಕ್ಕಳಮಕ್ಕಳ ಹಾಕಿ ಕುಳಿತೆವೇ.

ಟೈಟಾನಿಕ್ ಮುಳುಗುತ್ತಿದ್ದ ಸಂದರ್ಭ, ಅದರಲ್ಲಿನ ಪ್ರಯಾಣಿಕರ ಮನರಂಜನೆಗಾಗಿ ಬ್ಯಾಂಡ್‌ ನುಡಿಸುತ್ತಿದ್ದ ತಂಡ, ಹಡಗು ಮುಳುಗುವ ಕೊನೆಯ ಕ್ಷಣದವರೆಗೂ ಅದನ್ನು ನುಡಿಸುತ್ತಲೇ ಇತ್ತಂತೆ. ಇದನ್ನು ಕ್ಯಾಮೆರೂನ್ ಕೂಡ ತನ್ನ ಸಿನಿಮಾದಲ್ಲಿ ತೋರಿಸಿದ್ದಾನೆ. ಹಾಗೆ ನೋಡಿದರೆ, ಆ ಸಿನಿಮಾದಲ್ಲಿ ಬರುವ ಜಾಕ್ ಡಾಸನ್- ರೋಸ್ ಪ್ರೇಮ ಪ್ರಕರಣ ಬಿಟ್ಟರೆ, ಬೇರಾವೂದೂ ಅತಿರಂಜಿತ ಚಿತ್ರಣಗಳಲ್ಲ. ಮೊದಲ ದರ್ಜೆಯ ಪ್ರಯಾಣಿಕರು ಪಾರಾಗುವವರೆಗೂ ಮೂರನೇ ದರ್ಜೆಯ ಪ್ರಯಾಣಿಕರನ್ನು ತಡೆಹಿಡಿದಿಟ್ಟ ಕ್ರೌರ್ಯವೂ ನಿಜ; ಲೈಫ್‌ಬೋಟ್‌ಗಳಿಗೂ ಕೇಳಿಸುತ್ತಿದ್ದ ಬ್ಯಾಂಡ್‌ನ ವಿಷಾದಮಯ ಮಧುರ ನಿನಾದವೂ ನಿಜ. ಆದರೆ ಡಾಸನ್ ರೋಸ್‌ರಂಥ ಒಂದೇ ಒಂದು ಘಟನೆ ಅಲ್ಲಿ ನಡೆಯಲಿಲ್ಲ ಎಂದು ಖಚಿತವಾಗಿ ಹೇಳಬಹುದೆ?

ಟೈಟಾನಿಕ್ ವಿಸ್ಕೃತಿಗೆ ಸರಿಯಲು ಯುರೋಪ್- ಅಮೆರಿಕಗಳು ಬಿಡಲಿಲ್ಲ. ಅನೇಕ ಜನಪ್ರಿಯ ಸ್ಮೃತಿ, ಸಂಕೇತ, ರೂಪಕಗಳ ಮೂಲಕ ಅದನ್ನು ಜೀವಂತವಾಗಿಟ್ಟಿತು. ಅದು ನಮ್ಮ ರಾಮಾಯಣದಂತೆ, ತಲೆಮಾರಿನಿಂದ ತಲೆಮಾರಿಗೆ ಹೊಸ ಹೊಸ ಹುಟ್ಟುಗಳನ್ನು ಪಡೆಯುತ್ತಲೇ ಹೋಯಿತು.

ಇಂದಿಗೂ, ಮುಳುಗಿದ ಟೈಟಾನಿಕ್‌ನ ಹೊರನೋಟವಷ್ಟೇ ನಮಗೆ ಲಭ್ಯ. ಹೇಗಾದರೂ ಒಳಗಡೆಯ ಚಿತ್ರಣ ಪಡೆಯಲು ಸಾಧ್ಯವಾ ಎಂದು ವಿಜ್ಞಾನಿಗಳು ಪ್ರಯತ್ನಿಸುತ್ತಲೇ ಇದ್ದಾರೆ. ತುಕ್ಕು ಹಿಡಿದು ಮಣ್ಣಾಗುತ್ತಿರುವ ಹಡಗಿನ ಒಳಗೆ ಹೋಗುವ ಅಪಾಯ ಅವರು ಅರಿಯದ್ದಲ್ಲ.

ಟೈಟಾನಿಕ್ ಆಧುನಿಕ ಜನಪದ. ಅದರ ಬಗ್ಗೆ ಹೊಸ ಸುದ್ದಿಗಳೂ ಆಗೀಗ ಬರುತ್ತಿರುತ್ತವೆ. ಅದು ಮುಳುಗಿ ನೂರನೇ ವರ್ಷಾಚರಣೆ ನಡೆದಾಗಲಂತೂ ಎಲ್ಲರೂ ಅದರ ಬಗೆಗೆ ಮಾತನಾಡಿದರು. ಟೈಟಾನಿಕ್ ಸಿನಿಮಾದ ಮೂರು ಆಯಾಮದ ಆವೃತ್ತಿ ಬಿಡುಗಡೆಯಾಯಿತು. ನ್ಯಾಷನಲ್ ಜಿಯಾಗ್ರಫಿಕ್, ಡಿಸ್ಕವರಿಯಂತಹ ಚಾನೆಲ್‌ಗಳಲ್ಲೆಲ್ಲ ಅದರದೇ ಕಾರ್ಯಕ್ರಮಗಳು. ಟೈಟಾನಿಕ್ ಹೋದ ಹಾದಿಯಗುಂಟ ಸಾಗುವ ಸ್ಮಾರಕ ಯಾನವೊಂದನ್ನು ‘ಎಂಎಸ್ ಬಾಲೋರಲ್’ ಎಂಬ ಹಡಗಿನ ಮೂಲಕ ಆಯೋಜಿಸಲಾಯಿತು.

ಟೈಟಾನಿಕ್ ಮುಳುಗಿದ ಸ್ಥಳದಲ್ಲಿ, ಹಡಗಿನ ತುಕ್ಕು ಹಿಡಿದ ಭಾಗಗಳನ್ನು ಕರಗಿಸುತ್ತಿರುವ ಹೊಸ ಬ್ಯಾಕ್ಟಿರಿಯಾ ಜಾತಿಯೊಂದು ಪತ್ತೆಯಾಗಿದೆ. ಅದಕ್ಕೆ ‘ಹಾಲೋಮೊನಾಸ್ ಟೈಟಾನಿಕೇ’ ಎಂದು ಹೆಸರಿಡಲಾಗಿದೆ… ಹೀಗೇ ಸುದ್ದಿಗಳು.

ಸುದ್ದಿಗಳು ಹೇಗಾದರೂ ಇರಲಿ, ನೂರಾರು ವರ್ಷ ಕಳೆದರೂ ತನ್ನೆಡೆಗೆ ಎಲ್ಲರ ಮನ ಸೆಳೆಯುತ್ತಿರುವ ಟೈಟಾನಿಕ್‌ನ ಆಕರ್ಷಣೆಯಾದರೂ ಎಂಥದು? ಅದೊಂದು ರೂಪಕವೆನ್ನಬಹುದೆ? ಅದು ಮನುಕುಲದ ಸಾಧನೆಯ ಚರಮಸೀಮೆ ಹೇಗೋ ಹಾಗೇ, ಅಸಹಾಯಕತೆಯ ಪರಾಕಾಷ್ಠೆಯೂ ಹೌದು. ಹೀಗಾಗಿಯೇ ಅದೆಂದೂ ತೀರ ಸೇರದು; ನಮಗದರ ಕುತೂಹಲ ತೀರದು.

ಬಿಬಿಸಿಗೆ ಟೈಟಾನಿಕ್ ಬಗ್ಗೆ 2 ಗಂಟೆಗಳ ಡಾಕ್ಯುಮೆಂಟರಿ ಮಾಡಿದ ಜೇಮ್ಸ್ ಕ್ಯಾಮೆರೂನ್ ಹೇಳುತ್ತಾನೆ- “ಟೈಟಾನಿಕ್ ಮನುಕುಲದ ಪಾಲಿಗೆ ಒಡೆದ ಗಾಳಿಗುಳ್ಳೆ, 20ನೇ ಶತಮಾನದ ಆರಂಭದಲ್ಲಿ ಎಂಥ ಸಾಧನೆಯ ಅಬ್ಬರವಿತ್ತು! ಲಿಫ್ಟ್‌ಗಳು! ವಾಹನಗಳು! ವಿಮಾನಗಳು! ನಿಸ್ತಂತು
ರೇಡಿಯೊ! ಎಲ್ಲವೂ ಪರಮಾದ್ಭುತವಾಗಿ, ಮನುಷ್ಯನ ಸಾಧನೆಯ ಕೊನೆಯಿಲ್ಲದ ಮೆಟ್ಟಿಲುಗಳಾಗಿ ಕಾಣಿಸುತ್ತಿದ್ದವು. ಟೈಟಾನಿಕ್‌ನೊಂದಿಗೆ ಅಂತಿಮವಾಗಿ ಎಲ್ಲವೂ ಮುಳುಗಿದವು…’

ಅದು ಟೈಟಾನಿಕ್ ಘಟನೆಯ ಬಗ್ಗೆ ಮನುಷ್ಯ ಬರೆಯಬಹುದಾದ ಚರಮವಾಕ್ಯ.

Exit mobile version