Site icon Vistara News

ವಿಸ್ತಾರ ಸಂಪಾದಕೀಯ | ಕನ್ನಡ ನಾಡಿನ ನುಡಿ ತೇರ ಎಳೆಯೋಣ ಬನ್ನಿ

kannada sahitya sammelana

ಪ್ರತಿ ವರ್ಷ ನಡೆಯುತ್ತಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕೊರೊನಾ ಕಾರಣದಿಂದಾಗಿ ಎರಡು ವರ್ಷಗಳಿಂದ ನಡೆದಿರಲಿಲ್ಲ. ಕನ್ನಡ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳಿಗೆ ಈ ಬಗ್ಗೆ ಬೇಸರವಿತ್ತು. ಕೊರೊನಾ ಸಾಂಕ್ರಾಮಿಕ ತೀವ್ರತೆ ತಗ್ಗಿದ ಕಾರಣ, ‘ಏಲಕ್ಕಿ ನಾಡು’ ಹಾವೇರಿಯಲ್ಲಿ 86ನೇ ಕನ್ನಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಶುಕ್ರವಾರ(ಜನವರಿ 6)ರಿಂದ ಮೂರು ದಿನಗಳ ಕಾಲ ನಡೆಯಲಿದೆ. ನಾಡಿನ ಹಿರಿಯ ಸಾಹಿತಿ, ಕವಿ ಡಾ. ದೊಡ್ಡರಂಗೇಗೌಡ ಅವರ ಸರ್ವಾಧ್ಯಕ್ಷತೆಯಲ್ಲಿ ‘ನುಡಿ ಜಾತ್ರೆ’ ವಿಜೃಂಭಣೆಯಿಂದ ತೆರೆದುಕೊಳ್ಳಲಿದೆ. ನಮ್ಮ ನಾಡು ಚರ್ಚೆ, ಸಂವಾದ ಮತ್ತು ಅಭಿಪ್ರಾಯಭೇದಕ್ಕೆ ಯಾವತ್ತೂ ವೇದಿಕೆಯಾಗಿದೆ. ಅದೇ ರೀತಿ, ಈ ಸಾಹಿತ್ಯ ಸಮ್ಮೇಳನವೂ ವಿವಾದದಿಂದ ಹೊರತಾಗಿಲ್ಲ ಮತ್ತು ಪ್ರತಿ ಸಮ್ಮೇಳನದ ವೇಳೆ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಅದನ್ನು ಅಲ್ಲಿಗೇ ಬಿಟ್ಟು ಕನ್ನಡಿಗರು ಸಂಭ್ರಮ, ಸಡಗರ ಮತ್ತು ಉತ್ಸಾಹದಿಂದ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದರಲ್ಲಿ ಅನುಮಾನ ಇಲ್ಲ.

ಹೆಸರೇ ಹೇಳುವಂತೆ ಇದು ಸಾಹಿತ್ಯದ ಸಮ್ಮೇಳನ; ಆದರೆ ಇದಕ್ಕೆ ಜಾತ್ರೆಯ ಸ್ವರೂಪವಿದೆ; ಯಾತ್ರೆಯ ಗುಣವಿದೆ. ಹಾಗಾಗಿ ಯಾವುದೇ ಬಣ, ಪಕ್ಷ, ಜಾತಿ, ಧರ್ಮದ ಕಿತ್ತಾಟಗಳು ಸಮ್ಮೇಳನದ ಮೂಲ ಉದ್ದೇಶಕ್ಕೆ ಭಂಗ ತರಲಾರವು. ಇವುಗಳನ್ನು ಮೀರಿ, ಕನ್ನಡಿಗರ ನುಡಿ ಜಾತ್ರೆ ಇಂದಿಗೂ ಯಶಸ್ವಿಯಾಗುತ್ತಲೇ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಅವರ ಊರಿನಲ್ಲಿ ಸಮ್ಮೇಳನ ನಡೆಯುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆಗಳು ಗರಿಗೆದರಿವೆ. ಶಿಶುನಾಳ ಶರೀಫರಂಥ ಸಮನ್ವಯ ಕವಿ, ಸೂಫಿ ಸಂತರ ಊರಿನಲ್ಲಿ ನಡೆಯುತ್ತಿರುವ ಸಮ್ಮೇಳನ ಸಾಹಿತ್ಯದಲ್ಲಿ ಜಾತಿ ಧರ್ಮಗಳ ಭೇದ ಅಳಿಸಲಿ. ಜೊತೆಗೆ, ಕಿತ್ತೂರು ಕರ್ನಾಟಕದ ಸಾಹಿತ್ಯ- ಸಾಂಸ್ಕೃತಿಕ ಶ್ರೀಮಂತಿಕೆ ನಾಡಿಗೆ ತಿಳಿಸುವ ಕೆಲಸಕ್ಕೆ ಈ ಸಮ್ಮೇಳ ವೇದಿಕೆಯಾಗಲಿ.

ಕನ್ನಡ ನಾಡು ಮತ್ತು ನುಡಿ ಎದುರಿಸುತ್ತಿರುವ ವರ್ತಮಾನದ ತಲ್ಲಣಗಳು, ಸಮಕಾಲೀನ ಸಮಸ್ಯೆಗಳು ಹಾಗೂ ಭವಿಷ್ಯದ ಸವಾಲುಗಳ ಕುರಿತು ಚರ್ಚೆಗೆ ಸಾಹಿತ್ಯ ಸಮ್ಮೇಳನವು ವೇದಿಕೆಯನ್ನು ಒದಗಿಸುತ್ತಾ ಬಂದಿದೆ. ಈವರೆಗೆ ನಡೆದ ಸಮ್ಮೇಳನಗಳು ಒಂದಲ್ಲ ಒಂದು ಕಾರಣದಿಂದ, ಹುಟ್ಟುಹಾಕಿದ ಚರ್ಚೆಯ ಕಾರಣದಿಂದ ವೈಶಿಷ್ಟ್ಯವನ್ನು ಸಾಧಿಸುತ್ತಾ ಬಂದಿವೆ. ಇದು ಸಮ್ಮೇಳನದ ಉದ್ದೇಶವೂ ಹೌದು. ಜಾಗತಿಕರಣದ ಈ ಜಮಾನಾದಲ್ಲಿ ಕನ್ನಡವನ್ನು ಹೆಚ್ಚು ಪ್ರಸ್ತುತಗೊಳಿಸುವುದು, ಅನ್ನದ ಭಾಷೆಯಾಗಿ ರೂಪಿಸುವುದು ಈಗಿನ ಜರೂರಾಗಿದೆ. ಜತೆಗೆ, ನಮ್ಮ ವಿದೇಶಿ-ಸ್ವದೇಶಿ ಭಾಷೆಗಳ ಹೇರಿಕೆಯಿಂದ ತಪ್ಪಿಸಿಕೊಳ್ಳುವ ಬಗೆಯನ್ನು ಕಂಡುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಾವೇರಿ ಸಾಹಿತ್ಯ ಸಮ್ಮೇಳನವು ಒಂದು ನಿರ್ದಿಷ್ಟ ದಿಕ್ಸೂಚಿಯನ್ನು ಒದಗಿಸುವ ಕೆಲಸವನ್ನು ಮಾಡಬೇಕು. ಆಗ, ಇದಕ್ಕೆ ಸಾರ್ಥಕತೆ ದಕ್ಕುತ್ತದೆ.

ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಸಮ್ಮೇಳನ ನಡೆಯುವುದು ಹೌದಾದರೂ, ಆರ್ಥಿಕ ಚೈತನ್ಯವನ್ನು ಸರ್ಕಾರವೇ ತುಂಬುತ್ತದೆ. ಪ್ರತಿ ಸಮ್ಮೇಳನಕ್ಕೆ ಹಣಕಾಸಿನ ನೆರವು ಒದಗಿಸುತ್ತದೆ. ಹಾಗಾಗಿ, ಕೆಲವೊಮ್ಮೆ ಅದು ರಾಜಕೀಯ ವೇದಿಕೆಯಾದ ಉದಾಹರಣೆಗಳಿವೆ. ಅದಕ್ಕೆ ಹಾವೇರಿ ಸಮ್ಮೇಳನವು ಅವಕಾಶವನ್ನು ಮಾಡಿಕೊಡಬಾರದು. ಇದು ಶುದ್ಧಾನುಶುದ್ಧ ನಾಡಿ-ನುಡಿಯ ಕಾರ್ಯಕ್ರಮ. ಹಾಗಾಗಿ, ರಾಜಕೀಯ ಭಾಷಣಗಳಿಗೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಪರಿಷತ್ ಜವಾಬ್ದಾರಿಯನ್ನು ಹೊರಬೇಕಿದೆ.

ನಾಡಿನ ವಿವಿಧ ಪ್ರದೇಶಗಳಲ್ಲಿ ಸಮ್ಮೇಳನ ನಡೆಯುವುದರಿಂದ ಆಯಾ ಭಾಗದ ವೈಶಿಷ್ಟ್ಯ, ಇತಿಹಾಸ, ಸ್ಥಳ ವಿಶೇಷಗಳು, ಹೆಚ್ಚುಗಾರಿಕೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ. ಜತೆಗೆ, ವ್ಯಾಪಾರ-ವಹಿವಾಟು ದೃಷ್ಟಿಯಿಂದಲೂ ಸಮ್ಮೇಳನಗಳು ಹೆಚ್ಚು ಹೆಚ್ಚು ಪ್ರಸ್ತುತವಾಗುತ್ತ ಬಂದಿವೆ. ವಿಶೇಷವಾಗಿ ಪುಸ್ತಕ ವ್ಯಾಪಾರವು ಸಮ್ಮೇಳನದ ಪ್ರಮುಖ ಆಕರ್ಷಣೆ ಆಗಿರುತ್ತದೆ. ಬಹಳಷ್ಟು ಜನರು ಪುಸ್ತಕಗಳನ್ನು ಖರೀದಿಸುವುದಕ್ಕಾಗಿಯೇ ಸಮ್ಮೇಳನ ಬರುತ್ತಾರೆ. ಇದಕ್ಕೆ ಈ ಹಿಂದಿನ ಸಮ್ಮೇಳನಗಳು ಸಾಕ್ಷಿಯಾಗಿವೆ.

86ನೇ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಪಟ್ಟಿ ವಿಭಿನ್ನವಾಗಿದೆ. ಸಾಕಷ್ಟು ಹೊಸ ವಿಷಯಗಳಿಗೆ ಮಣೆ ಹಾಕಲಾಗಿದೆ. ಭಿನ್ನ, ವಿಭಿನ್ನ ಗೋಷ್ಠಿಗಳಿವೆ. ಎಲ್ಲವೂ ವೇಳಾಪಟ್ಟಿಯಂತೆ ನಡೆಯಲಿ. ಯಾವುದೇ ಪ್ರಮಾದಕ್ಕೆ ಅವಕಾಶ ಇಲ್ಲದಂತೆ ಸಮ್ಮೇಳನ ಯಶಸ್ವಿಯಾಗಲಿ. ಈ ಹಿಂದಿನ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಸ್ಥಿತಿ ಏನಾಗಿವೆ ಎಂಬುದು ಎಲ್ಲರಿಗೂ ಗೊತ್ತು. ಹಾವೇರಿ ಸಮ್ಮೇಳನವು ಈ ನಿಟ್ಟಿನಲ್ಲಿ ವಿಭಿನ್ನ ಹಾದಿ ತುಳಿದು, ಅರ್ಥಪೂರ್ಣ ಮತ್ತು ಕಾರ್ಯಸಾಧುವಾಗುವ ನಿರ್ಣಯ ಕೈಗೊಳ್ಳಲಿ. ಈ ಸಾಹಿತ್ಯ ಸಮ್ಮೇಳನ ಕನ್ನಡ ನಾಡು-ನುಡಿಯ ಹಿರಿಮೆಯನ್ನು ಮೆರೆಸಲಿ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಬೆಂಗಳೂರಿಗೆ ಕ್ರೈಂ ಸಿಟಿ ಎಂಬ ಕಳಂಕ ಬರುವುದನ್ನು ತಪ್ಪಿಸಿ

Exit mobile version