Site icon Vistara News

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಹುಣಸೇಹೂವು‌

deepada malli story hunisehuvu

:: ದೀಪದ ಮಲ್ಲಿ

ಅಪ್ಪಯ್ಯನ ಗಂಟುಭುಜದ ಮ್ಯಾಕೆ ಆಕಡೀಕೊಂದು ಕಾಲು ಈಕಡೀಕೊಂದು ಕಾಲು ಇಳೆಬಿಟ್ಟು ಕುಂತಿದ್ದ ನಂಗೆ ಒಂಭತ್ತೋ ಹತ್ತೋ ವಯ್ಸು. ದನಗೊಳ್‌ ಮಾರಕ್ಕೆ ಸಂತೆಗೆ ಒಂಟಿದ್ದೋನ ಬೆನ್ನಿಗೆ ಬಿದ್ದು ನಾನೂ ಓಡಿದ್ನಿ. ಎಲ್ಡೂ ಕೈಲಿ ಎಲ್ಡು ದನ ಇಡ್ಕಂಡ್ ಒಂಟಿದ್ದ ಅಪ್ಪಯ್ಯ ಇಂದಿಂದ್ಕೆ ಓಡ್ತಾ ಬತ್ತಿದ್ದೋಳ್ಗೆ ʼಬಾರ್ಗೋಲ್ನಿಂದ ಬಾರ್ಸೇನುʼ ಅಂತ ದೂರದಿಂದ್ಲೇ ಕೈ ತೋರ್ದ. ನಾನಾದ್ರೂವೆ ಮೂಗ ಹೊಳ್ಗೆ ಕೈ ತೂರ್ಸಿ ತೀಡ್ತಾ ಬಗೀತಾ, ಮತ್ತ ಆಗೀಗ ಕಪಾಳಕ್ಕ ಎಂಜ್ಲ ಬಳ್ಕತಾ ಮೆತ್ತಾ ಅಳೂವಂಗೆ ನಾಟ್ಕ ಮಾಡ್ತಾ ನಡೀತಿದ್ನಿ. ʼಇನ್ನೀ ಪೀಡೆ ಬಿಡನಾರ್ಳುʼ ಅನ್ಸಿ ಅಪ್ಪಯ್ಯನೂ ಒಸಿ ನಿಧಾನುಸ್ದ. ಅದು ಗೊತ್ತಾದೇಟ್ಗೆ ನಾನೂ ದಿಬಿದಿಬಿ ನಡ್ದು ಜೊತ್ಗೆ ಹೆಜ್ಜೆ ಕೂಡುಸ್ದೆ. ಗಾವ್ದ ದೂರ ಸವೆಯೋದ್ರೊಳ್ಗೆ ಒಂದ್ ದನದ ಹಗ್ಗ ನನ್ ಕೈಲಿತ್ತು.

ಒಂದೀಟ್ ನಡ್ಯದು‌, ಹಗ್ಗವ ಎಲ್ಡೂ ಕಾಲ್ಸುತ್ತಾ ಚಕ್ರದಂಗೆ ಸುತ್ತದು, ನದಿ-ದಡ ಆಡದು, ಮತ್ತ ನಡ್ಯದು. ಇನ್ನೀಟ್ ದೂರ ಓದ್ಮ್ಯಾಕೆ ದನಗೋಳಿಗಿಂತಾ ಮುಂದೋಡದು, ಹಗ್ಗವ ಕಾಲಿಂದ ಮೆಟ್ಟದು, ಇನ್ನೇನು ದನ‌ ನನ್‌ ದಾಟಿ ಮುಂದೋಡ್ತು ಅನ್ನೂವಾಗ ಕಾಲ ತಗ್ದು ಹಗ್ಗ ಕೈಲಿ ಇಡ್ಯದು. ಈತೀತರ ತರಳೆ ಆಟಗಳ್ನೆಲ್ಲಾ ಅಪ್ಪಯ್ಯನೂ ನೋಡುತ್ಲೇ ಸುಮ್ಕೆ ಬತ್ತಿದ್ದ. ಯಾವಾಗ್ ಹಗ್ಗ ತಗ್ದು ಕುತ್ಗೇಗೇ ಸುತ್ಕಂಡು ಜಂಬುಸ್ತಾ ನಿಂತ್ಕಂಡ್ನೋ, ಅದೆಲ್ಲಿತ್ತೋ ಆ ಕ್ವಾಪ… ಹಾದಿಬದಿ ಹುಣ್ಸೇ ಮರ್ದಿಂದ ಬೆತ್ತ ಸಿಗ್ದು ಚಟೀರಂತ ಪಿರ್ರೆಗೆ ಒಂದು ಬಿಟ್ಟ. ಆಗ ಎಂಜ್ಲೇನು? ನೆತ್ರ… ನೆತ್ರ ಸುರೀತು ಕಣ್ಲಿಂದ. ಬಿಕ್ಕಿ ಬಿಕ್ಕಿ ಅಳ್ತಾ ಕುಂಡೆನೋವಿಗೆ ಓಡಾಕೂ ಆಗ್ದೆ ನಡ್ಯಾಕೂ ಬಾರ್ದೆ ಕುಂತ್ಕಂಬುಟ್ಟೆ. ʼಶನಿಮುಂಡೇದುʼ ಅಪ್ಪಯ್ಯ ಬೈಕೋತ್ಲೆ ಹೆಗ್ಲಮ್ಯಾಕೆ ಕುಂಡ್ರುಸ್ಕೊಂಡ.  ಅಂಗೆ ಎಲ್ಡೂ ಕಾಲ ಭುಜಕ್ಕೆ ಜೋತಾಡ್ಸಿ ಸವಾರಿ ಹೊಂಟೋಳು ಸಂತೆ ಸೇರೋತ್ಗೆ ಸೂರ್ಯ ಮನೀಗೋಗೋ ಕುಸೀಲಿದ್ದ.

ಸಂತೆಮಾಳ್ದಾಗೆ ನನ್ನ ಕುಂಡೆನೋವಿಗೆ ಗಾಳಿ ಸೋಕ್ಲಂತ ಫ್ರಾಕಿನ ಫ್ರಿಲ್ಲನ್ನ ಬೀಸಣ್ಗೆ ತರ ಬೀಸ್ಕಾತ ಗಿರಗಿರನೆ ಸುತ್ತಿದ್ನಿ. ಅಪ್ಪಯ್ಯ ಅಲ್ಲೆಲ್ಲೋ ಗುಂಪ್ನಾಗೆ ಕೈಮ್ಯಾಕೆ ಚೌಕ ಮುಸ್ಕಾಕಿ ಬೆಳ್ಳು ಎಣುಸ್ತಿದ್ದ. ಒಂದೊಂದ್ ಸಲ್ಕೆ ಮೈಮೇಲೆ ದ್ಯಾವ್ರು ಬಂದಂಗೆ ಜೋರಾಗಿ “ಊಹೂಹೂ ಆಗಕ್ಕಿಲ್ಲ ತಗೀತಗೀರಿ, ನನ್‌ ಎಂಡ್ರು ಮಕ್ಳುನ್ನೂ ಹಿಂಗ್‌ ಸಾಕಿಲ್ಲ ನಾನು, ಹಂಗ್‌ ಸಾಕಿವ್ನಿ ದನಗೋಳ, ನಡ್ರಿ ಬೇರೆ ನೋಡೋಗ್ರಿ” ಅಂತ ಕೈಕೆಡವಿ ಕೂಗ್ತಿದ್ದ. ಇಂಗೆ ಸುಮಾರೊತ್ತು ಕಾಯದು, ಇನ್ನೊಂದೀಟ್‌ ಜನ ಬರದು, ವಾಗದು, ಹೆಗ್ಲ ಮ್ಯಾಲಿಂದ ಚೌಕ ಇಳ್ಸದು, ಬೆಳ್ಳು ಎಣುಸದು, ಮತ್ತ ಕೈ ಒದ್ರಿ ಬಂದು ಕುಂತ್ಕಳದು ನಡೀತಿತ್ತು.

ನಾನೂ ಗಿರಗಿರ ಸುತ್ತದು, ಯಾನಾಗ್ತೈತೆ ಅಂತ ಎಟಕ್ಸಿ ನೋಡದು, ಮತ್ತ ಸುತ್ತದು

ಗಿರಗಿರಗಿರಗಿರ..ಗಿರಗಿರ.. ಗಿರ.. ಗಿ..ರ..

**

ಮನೀಗೆ ಅಂತ ಇದ್ದುದ್ದು ಎಲ್ಡು ದನವೆಂಬೋ ಆಸ್ತಿ, ಅರ್ಧ ಎಕ್ರೆ ಏರಿ ಮಗ್ಲ ಹೊಲ. ಸುತ್ಲ ಹತ್ತಾರು ಎಕ್ರೇಲಿ ಧಾನ್ಯಲಕ್ಸ್ಮಿ ಮೈಮರ್ತು ಕುಣ್ಯೋಳು. ನಮ್ಮೊಲ್ದಾಗ್‌ ಮಾತ್ರ ಇರೋಬರೋ ಅನಿಷ್ಟಗೋಳ್ನೂ ತಂದು ಸುರ್ಯೋಳು. ಅಪ್ಪಯ್ನೂ ರೆಟ್ಟೆಬೀಳುವಂಗೆ ದುಡ್ಯೋ ಆಸಾಮಿನೇ ಒಂದು ಕಾಲ್ದಾಗೆ. ಆದ್ರೂ ಯಾತುಕ್‌ ಕೈ ಮಡುಗುದ್ರೂ ಕೈಗತ್ತಲಾರ್ದ ಲತ್ತೆ ಮನ್ಷಾ ಅಂತ ಊರ್ನೋರಿಗೆಲ್ಲಾ ಗೊತ್ತಾಗೋಗಿತ್ತು. ಹೊಲ್ದ ನಡೂಕೆ ಒಂದು ಹುಣಸೇ ಮರವಿತ್ತು. ಅದು ಮಾತ್ರ ನಾಕೂರಿಗೂ ಹಂಚಿ ಚೆಲ್ಲಾಡುವಂಗೆ ಸೋರಾಕ್ತಿತ್ತು. ಆದ್ರೇನು? ಬದಕನ್ನೋ ಹೊಳೆ ಸೆಳವಲ್ಲಿ ಈ ಹುಣಸೇಣ್ಣ ಎಷ್ಟು ತೊಳೆದ್ರೂ ದಕ್ತಿರ್ನಿಲ್ಲಾ ಅನ್ನಿ.

ಇನ್ನ ಅವ್ವನೆಂಬೋ ಮಾಯ್ಕಾತಿ ಹೆಂಗ್ಸು ಮನೆ ಬೀದಿ ಒಂದ್ಕೂ ಕ್ಯಾರೇ ಅಂತಿರನಿಲ್ಲ. ನಡುಬೀದಿಯಾಗೆ ಸೀರೆ ಮಂಡಿಗಂಟ ಎತ್ತಿ ನಿಂತಾಂದ್ರೆ ಜಟ್ಟಿ ಜಟ್ಟಿ ಕಂಡಂಗೆ ಕಾಣೋಳು. ಉದ್ರೋ ಸೀರೇನಾ ನಿಂತನಿಡದಾಗೇ ಬಿಗ್ದು ಕಟ್ಟಿ ಅವರಿವ್ರ ಹೊಲ-ಗದ್ದೆ ಮಾಡೋಳು. ನಾಕ್‌ ಬೀದಿ ಹೆಣ್ಣಾಳ್ಗೊಳ್ಗೆ ಇವ್ಳೇ ಲೀಡ್ರು.‌ ಬಾಯಿ ಬೊಂಬಾಯಿ. ಮನ್ಯಾಗೂ ಆಟೇ. ಒಂದು ಕಿತ ಬೇಸಿ ಬಡುದ್ರೆ ಮುಗ್ತು ಅಲ್ಲಿಗೆ. ಉಪ್ಪು ಅಂಗದೆ ಹುಳಿ ಇಂಗದೆ ಅಂತೇನಾರ ವರಾತ ತಗುದ್ರೆ ತಿಕದ ಮ್ಯಾಲೆ ಒದ್ಯೋಳು. ಅವ್ಳು ನಡ ಬಗ್ಗಿಸಿ ಹೊಲ್ದಾಗೆ ದಿನಗಟ್ಳೆ ದುಡುದ್ರೆ ನಮ್ಮನ್ಲಿ ಒಲೆ ಉರ್ಯಾದು. ಅದ್ಕ ಅಪ್ಪಯ್ಯನೂ ತನ್ನ ಕೈಲಾಗ್ದೇ ಇರೋವತ್ಗೆ ಇವ್ಳಾದ್ರೂ ಮನೆ ನಡುಸ್ತಾವ್ಳಲ್ಲ ಅಂತ ಅನ್ಕೂಲದ ಕಡೀಗ್ ವಾಲಿದ್ದ. ಊರ್ ಗಂಡುಸ್ರು ಚಂದ್ರಣ್ಣನ ಟೀ ಅಂಗ್ಡೀ ಮುಂದೆ ಕಾಲಾಡುಸ್ತಾ ಕುಂತು ಅವ್ವ ಹೊಲದಿಂದ ಕ್ಯಾಮೆ ಮುಗ್ಸಿ ಸೀದಾ ಗೌಡ್ರ ಕೆಳ್ಮನೇಗೆ ಹೋದುದ್ನ ಕಂಡುದಾಗಿ ಆಡ್ಕತಿದ್ರೂ ಅಪ್ಪಯ್ಯ ತನ್ನದಲ್ದ ಇಷ್ಯ ಅನ್ನೂವಂಗೇ ಸುಮ್ಕಿರ್ತಿದ್ದ. ಅವ್ವಯ್ಯ ರಾತ್ರೆ ಹೊತ್ಗೆ ಮನೀಗ್ಬಂದು ನೀರು-ಸಾರು ನೋಡೋಳು. ಒಟ್ನಾಗೆ ಅವ್ವನ ಒಡ್ಲ ಬೆಂಕೀಲಿ ಅಪ್ಪಯ್ಯನ ಹುಳುಕೆಲ್ಲಾ ನಚ್ಗೆ ಮೈಕಾಸಿಕೊಳ್ತಿತ್ತು.

ಇಂಗಿರುವಾಗ ಒಂದಿನ ನನ್ನ ಮಲುಗ್ಸಿ ಅವ್ವ-ಅಪ್ಪಯ್ಯ ಎಂಡ ಕುಡೀತಾ ಕುಂತಿದ್ರು. ಮಾತಿಗ್ಮಾತು ಬೆಳ್ದು ಸ್ಯಾನೆ ಜೋರು ಜಗಳುಕ್ಕೆ ತಿರುಗ್ತು. ಮೊದ್ಮೊದ್ಲು ಇಂತ ಜಗ್ಳ ಹೊಯ್ದಾಟ ಭಯ ಅನುಸುದ್ರೂ ಆಮೇಕಾಮೇಕೆ ಎಲ್ಕಾ ರೂಡ್ಯಾಗಿ ನಾನೂ ಧಿಮ್‌ ಅಂತ ಮಲ್ಗಿ ನಿದ್ದೆ ವಡೀತಿದ್ದೆ.. ಅಂಗೇ ನಿದ್ದೆ ವೋಗಿದ್ ಆ ದಿನ ಒಂದುಸಣ್ಣ್ ಮಾತ್ಗೆ ಬಡ್ದಾಡ್ಕಂಡು ಅಪ್ಪ ಹೆಂಡದ್ ಸೀಸೆ ತೆಗ್ದು ನೆಲುಕ್ ಬಡುದ್ನಂತೆ. ಪಕ್ಕದಾಗೇ ಅಚ್ಚಿಟ್ಟಿದ್ದ ಬುಡ್ಡಿದೀಪ ಭಗ್ಗನೆ ಒತ್ಕೊಂಡು ಅವ್ವನ ಮಕ ಮುಸುಡಿ ಎಲ್ಲಾ ಚಣದಾಗೆ ಅರ್ಧಂಬರ್ಧ ಬೆಂದೋಯ್ತು. ಅಪ್ಪಯ್ಯ ತಾನು ಬೇಕಂತ ಮಾಡಿಲ್ಲಾ ಅಂತ ವದ್ರುತಾನೇ ಇದ್ದ.

ಅವ್ವ ತಿಂಗ್ಳಾನ ಆಸ್ಪತ್ರೆ ಸೇರಿ ಸುಮಾರಾಗಿ ಗುಣವಾದ್ಲು. ನಂಗ್ ಮಾತ್ರ ಅವ್ವನ ಮಕ ನೋಡಕ್ಕ ವಾಕ್ರಿಕೆ ಬಂದೋಗದು. ಅವ್ವ ಮೊದ್ಲಿನಂಗಿರನಿಲ್ಲ. ಚಂದ ಮೊದ್ಲಿನಂಗಿರ್ನಿಲ್ಲ, ಖದರ್ರೂ ಮೊದ್ಲಿನಂಗಿರ್ನಿಲ್ಲ. ಯಾರ ಗದ್ದೆಮಾಡಕ್ಕೂ ಹೋಗ್ತಿರನಿಲ್ಲ. ಅವ್ಳ ಬೆನ್ನಿಗೆ ಗೌಡ್ರೌವ್ರೆ ಅನ್ನೋದಕ್ಕೇ ಜತೆಗಾರ್ರು ಅವ್ಳನ್ನ ʼಅಕ್ಕಾʼ ಅಂತಿದ್ರು. ಗೌಡ್ರೇನೂ ಅವ್ಳನ್ನ ಪಕ್ದಾಗೆ ಕೂರ್ಸಿ ಪಟ್ಟುದ್‌ ರಾಣಿ ಅನ್ದೇವೋದ್ರೂ ಆಳುಕಾಳಿಗೆಲ್ಲಾ ʼಅಕ್ಕʼಳಾದ್ದೇ ಅವ್ಳಿಗೆ ಕೊಂಬು ಬಂದಿತ್ತು. ಆ ಕೊಂಬಿನ ದವಲತ್ತನ್ನ ಅಪ್ಪನೂ ಆಗ್ಗಾಗ್ಲೇ ಸವರಿ ಮೀಸೆ ತಿರುವ್ತಿದ್ದಾ ಅನ್ನಿ. ಇಂಗೆ ʼಅಕ್ಕʼಳಾಗಿದ್ದ ಸುಟ್ಟಮೊಕದ ಅವ್ವನ್ನ ಗೌಡ್ರು ʼಬಿಟ್ರುʼ ಅನ್ನೋ ಸುದ್ದಿ ಅಬ್ಬಕ್ಕೆ ನಮ್ಮಳ್ಳೀಗೇನು ವಾರೊಪ್ಪತ್ತೂ ಬೇಕಾಗ್ನಿಲ್ಲ.

ಆಸ್ಪತ್ರೆಲಿದ್ದ ಅವ್ವನ ಚಿಕ್ಪುಟ್ಟ ಔಷಧಿ ಖರ್ಚಿಗೂ ಅಪ್ಪಯ್ಯನತ್ರ ಕಾಸಿರ್ನಿಲ್ಲ. ಆಗೆಲ್ಲಾ ಅಪ್ಪಯ್ಯ ಗೌಡರ ಮನೆ ಮುಂದೆ ಕುಕ್ಕುರುಗಾಲಲ್ಲಿ ಕಾದು ಕುಂತಿರ್ತಿದ್ದ. ಒಂದೆರೆಡು ಸಲ ಪಂಚೆ ಮ್ಯಾಕೆತ್ತಿ ಚೆಡ್ಡಿ ಜೇಬಿಂದ ಕಾಸು ಎಣಿಸಿ ಕೊಟ್ಟಿದ್ದ ಗೌಡ್ರು, ಆಮೇಕಾಮೇಕೆ ಸಿಡಿಮಿಡಿಗುಟ್ಟೋರು. ಅಪ್ಪಯ್ಯ ಅಂತಾದ್ಕೇನು ನೊಂದ್ಕೋತಿರ್ನಿಲ್ಲ. ಗೌಡ್ರ ಕಳ್ಳು ಚುರ್ರನ್ಲಿ ಅಂತವ ನನ್ನೂ ಜತೀಗ್‌ ಕರ್ಕೋವೋಗ್ತಿದ್ದ. ನನ್ನ ದೆಸೆಲಿಂದ ಖರ್ಚಿಗೀಟು ಕಾಸಾಗ್ತಿತ್ತು. ಮೊದಲೆಲ್ಲಾ ನಾಕಾರ್ ನೋಟು ಸಿಗ್ತಿತ್ತು. ಆಮೇಕಾಮೇಕೆ ಚಿಲ್ರೇಗ್‌ ಬಂದು, ತಿಂಗಳಾಗೋರೊಳ್ಗೆ ಅದೂ ನಿಂತೋತು.

ಇದೆಲ್ಲಾ ಕಂಡಿದ್ದ ಊರಮಂದಿ ಅವ್ವನಿಂದ ʼಗಂಗಕ್ಕಾʼ ಪಟ್ಟ ಕಿತ್ಕಂಡು ʼಗಂಗೀʼ ಅಂತ ಕೊಟ್ಟಿದ್ರು. ಮನ್ಯಾಗೆ ಗಂಜಿಗೂ ಗತಿಗೆಟ್ಟು ನಿಂತಿದ್ದೊ. ನಂಗೆ ಸ್ಕೂಲ್ನಾಗೆ ಕೊಡ್ತಿದ್ದ ಸೀಯುಂಡೆ ಇಟ್ಟುಮಿದ್ದಿ ದಿನ ದೂಡ್ತಿದ್ದೋ. ಒಂದಿನ ನನ್ನ ಸ್ಕೂಲು ಬೆಲ್‌ ಒಡ್ಯೋವತ್ಗೆ ಅವ್ವ ಹುಣಸೆ ಮರಕ್ಕೆ ನೇಣಾಕಂಡ್‌ ಪ್ರಾಣ ಬಿಟ್ಟಿದ್ಳು. ಅವ್ಳು ಅದ್ಯಾವಾಗ ಹಗ್ಗ ಬಿಗುತ್ಕಂಡ್ಳೋ ಏನೋ, ಜನ ನೋಡೋವತ್ಗೆ ಸುಟ್ಟಗಾಯ್ದಿಂದ ಮೊದ್ಲೇ ವಿಕಾರಾಗಿದ್ದೋಳ ಮೈ ಇನ್ನೂ ಊದ್ಕಂಡು ನೊಣ ಮುತ್ಕತ್ತಿತ್ತು. ಯವ್ವಾ.., ಅದ್ನಂತ್ರೂ ನೋಡ್‌ ಬಾರ.

ಗೌಡ್ರೇ ಮುಂದ ನಿಂತು ಮಣ್ಮಾಡ್ಸುದ್ರು. ಕೈಕಟ್ಟಿ ಸುಮ್ಕೆ ಮೂಲೆಲಿ ನಿಂತಿದ್ದ ಅಪ್ಪಯ್ಯನ್ನ ʼನೀ ಯಾರಾ? ಯಾವೂರಾ?ʼ ಅಂತ್ಲೂ ಯಾರೂ ಕೇಳ್ನಿಲ್ಲ. ರಾತ್ರಿ ದೀಪ ಹಚ್ಚಿಟ್ಟ ಅಪ್ಪಯ್ಯ “ಎಲ್ಡ್‌ ಬಾಳಣ್ಣು ಮಡಗಿವ್ನಿ, ಉಂಡ್ ಮನಿಕ” ಅಂತೇಳಿ ಹೊತ್ನಂತೆ ಮನಿಕಂಡ. ನಂಗೆ ರಾತ್ರಿಯೆಲ್ಲಾ ಅವ್ವನ ಮೈಮ್ಯಾಕೆ ಆರ್ತಿದ್ದ ನೊಣಗಳದ್ದೇ ನೆಪ್ಪು. ಅದೇಟ್‌ ಕಿತ ಎಣುಸುದ್ರೂ ಒಟ್ಟು ಏಸ್ನೊಣ ಬಂದ್ವೆಂದು ಲೆಕ್ಕ ಸಿಗ್ತಿರನಿಲ್ಲ. ತಿರ್ತಿರ್ಗಿ ಅವ್ವನ ಎಣ ಮಲುಸಿದ್‌ ಜಾಗ ನೆಪ್ಪ್ಮಾಡ್ಕಂಡು ಮತ್ತ ಮೊದ್ಲಿಂದಾ ನೊಣಗೊಳ್ ಲೆಕ್ಕ ಇಡಕ್ಕ ಸ್ಯಾನೆ ಕಷ್ಟ್ ಬಿದ್ದೆ. ಲೆಕ್ಕ ಸಿಗ್ನೇ ಇಲ್ಲ, ಕಡೀಕೆ ನೊಣಗೊಳೆಲ್ಲಾ ಮಾಯ್ವಾಗಿ ಅವ್ವನ ಮಕವೇ ಕಾಣ್ಸಕ್‌ಸುರುವಾತು. ದಿಗ್ಲಾಗಿ ಗುಬ್ರಾಕಂಡ್‌ಮನಿಕಂಬುಟ್ಟೆ.

ಬೆಳ್ಗೆ ನಾ ಯಾಳೋ ವತ್ಗೇ ಅಪ್ಪಯ್ಯ ದನಗೋಳ ಮೈತಿಕ್ತಿದ್ದ. ಕಣ್ಣುಜ್ತಾ ನಿಂತಿದ್ದೋಳ್ಗೆ “ಬಿರ್ನೆ ಮಕ ತೊಳ್ಕಂಡು ಇಸ್ಕೂಲಿಗೊಂಡು, ನಾ ದೊಡ್ ಜಾತ್ರೆಗೋಗಿ ಹೊತ್ನಂತೆ ಬತ್ತೀನಿ” ಅಂದ. ನೆನ್ನೆ ಇನ್ನಾ ಅವ್ವನ್ನ ಮಣ್ಣುಮಾಡಿ ಬಂದೀವಿ. ಇವತ್ತು ಅಪ್ಪಯ್ಯನೂ ಮನ್ಯಾಗೆ ಇರದಿಲ್ಲಾ? ಸ್ಕೂಲಿಗೋದ್ರೆ ಎಲ್ರೂ ಅವ್ವನ ಸುದ್ದೀನೇ ಕೇಳ್ತಾರೆ “ಅದ್ಯಾಕಂಗ್‌ ಮಾಡ್ಕಂಡ್ಳು ನಿಮ್ಮವ್ವ? ನಿಮ್ಮಪ್ಪಯ್ಯ ಏನಾದ್ರೂ ಬೋತಾ?” ಅಂತ ಒಂದಾಗುತ್ಲೆ ಒಂದು ಮಾತು ಕೇಳ್ತಾರೆ. ಇದೆಲ್ಲಾ ನೆಪ್ಪಾಗಿ ನಾನೂ ಜಾತ್ರೆಗೆ ಬತ್ತೀನಂತ ಕಾಲು ಕಟ್ಟಿದ್ದೆ.

**

ಇನ್ನೇನು ಕತ್ಲು ಕವೀತು ಅನ್ನೋವತ್ಗೆ ಅಪ್ಪಯ್ಯನ ವ್ಯಾಪಾರ ಕುದ್ರುದಂಗೆ ಕಾಣುಸ್ತು. ಮೊದಲ್ನೇಕಿತ ಮುಖದಾಗೆ ರವಷ್ಟು ನಗೀನ್ ಎಳೆ ಅಂಗಂಗೇ ತೇಲೋದಂಗೆ. ಕಾಸು ಚಡ್ಡಿಜೇಬ್ಲಿ ಮಡ್ಗಿ, ದನಗೋಳ್ನ ಗೂಟದಿಂದ ಕಟ್ಟುಬಿಚ್ಚಿ ಒಪ್ಸಿ, ಹೆಗ್ಲ ಮೇಲಿದ್ದ ಬಿಳಿ ಚೌಕ ಇಳ್ಸಿ ವಣುಲ್ಲಿನ ಮ್ಯಾಕೆ ಹಾಸ್ದ. ಚೌಕದ ತುಂಬೆಲ್ಲಾ ಕೆಂಪುಕೆಂಪಾದ ರಕ್ತುದ್ ಕಲೆ. ಕೈ ಎಲ್ಲಾರ ಕೊಯ್ಕೊಂತಾ ಅಂತ ತಿರುಗ್ಸಿ ಮುರುಗ್ಸಿ ನೋಡ್ಕಂಡ. ಅಂಗೇನೂ ಇರನಿಲ್ಲ. ಅಂಗೀನ್ನೊಮ್ಮೆ ನೋಡ್ದ. ತೋಳಮ್ಯಾಕೆ ಭುಜದ್‌ ಮ್ಯಾಕೆ ರಕ್ತ. ಅರುಚ್ಚನಂಗೆ ಅಂಗಿ ಕಳಚಿ ಮೈಕೈ ನೋಡ್ಕಂಡ. ಯಾತರದ ಗಾಯವೂ ಬಾವೂ ಕಾಣ್ನಿಲ್ಲ.

ಇಟ್ಟಾಡಿದ್ದ ಹುಲ್ನಾಗೆ ಜಡೆ ಎಣೀತಾ ಕುಂತಿದ್ದ ನನ್ನ ಕಡೀಗೊಮ್ಮೆ ನೋಡ್ದ. ನಾನಾದ್ರೂವೆ ಕುಂಡೆಗೆ ಬಿದ್ದ ಹುಣಸೇ ಛಡಿ ಏಟ್ಗೆ ಚರ್ಮ ಕಿತ್ತು ರಕ್ತ ಜಿನುಗ್ತಿತ್ತಲಾ. ಅದ್ನ ಅಪ್ಪಯ್ಯನ ಹೆಗ್ಲ ಮ್ಯಾಲಿದ್ದಾಗ್ಲೇ ಚೌಕ ತಕ್ಕಂಡು ತೀಡಿದ್ದು ನೆಪ್ಪಾತು. ಬಾಯ್ಬುಟ್ಟು ಯೋಳ್ದೆ ಏನೂ ಅರೀದ ಕೂಸ್ನಂಗೆ ಪಿಳಿಪಿಳಿ ಕಣ್ಣು‌ ಬಿಡ್ಕಂಡ್ ಕುಂತೆ.  ಎಲ್ಡ್ ಚಣ ಎವೆಯಿಕ್ದೆ ನೋಡ್ದ ಅಪ್ಪಯ್ಯ ಮತ್ತ ಮಾರುದ್ದುದ್ದ್ ಚೌಕ ತಕ್ಕಂಡು ಕೊಡ್ವಿ ನಂಗೆ ನಡ ಸುತ್ಲೂ ಎಲ್ಡ್ ಸುತ್ತು ಸುತ್ತಿ ಜಟ್ಟಿಯಂಗೆ ಮೋಟುಗಚ್ಚೆ ಹಾಕಿ, ಹೊದ್ಯೋಕಂತ ತಂದಿದ್ದ ದುಪ್ಟೀನ ಮ್ಯಾಲೊಂದು ಲುಂಗಿಯಂಗೆ ಸುತ್ದ. ಪಕ್ದೂರ್ನ ಬಂಡಿವಯ್ಯನ್ ತಾವ ಮಾತಾಡ್ಕಂಬಂದು ಸರ್ರಾತ್ರೀನಾಗೇ ಕುಂಡ್ರುಸ್ಕಂಡು ಹೊಂಟ.

ಅಪ್ಪಯ್ಯ ನಂಗೆ ಚರ್ಮಸುಲ್ಯೋವಂಗೆ ಬಾರ್ಸಿದ್ದುಕ್ಕೆ ಸ್ಯಾನೆ ನೊಂದ್ಕಂಡೌನೆ ಅನುಸ್ತು. ಯಾವೊತ್ಲೂ ನನ್ನ ಎತ್ತಾಡ್ಸದಿರಾ ಅಪ್ಪಯ್ಯನ ಈ ಹೊಸ ರೀತೀಗೆ ಒಳೊಳ್ಗೆ ಖುಸಿ ಆತು. ಪಾಪಚ್ಚಿ ಅಪ್ಪಯ್ಯ ಅಂತ್ಲೂ ಅನುಸ್ತು.

ಊರು ಮುಟ್ದಾಗ ನನ್ನ ಮನ್ಯಾಗೇ ಬುಟ್ಟು ಅಪ್ಪಯ್ಯ, ಗೌಡ್ರ ಅಟ್ಟೀತಕ್ಕೋದ. ಮೊನ್ಮೊನ್ನೆ ಗೌಡ್ರ ಮಗ ಮಯೇಸಣ್ಣನ್ನ ಮದ್ವೆ ಮಾಡ್ಕಂದು ಬಂದಿತ್ತಲ್ಲಾ ಶೀಲಕ್ಕ, ಆವಕ್ನೇ ಮನೇತಕ್‌ ಬಂದು ನನ್ನ ಅವ್ರಟ್ಟೀತಕ್‌ ಕರ್ಕೊವೋತು. ಆಟೊತ್ಗೆ ಅಪ್ಪಯ್ಯ ಸುತ್ತಿದ್‌ಪಂಚೆಲ್ಲಾ ರಕುತ್ವೋ ರಕ್ತ. ಅದ ಬಿಚ್ದೇಟ್ಗೆ ತೊಡೆ ಸಂದ್ಲಿಂದ ಅಂಗೇ ಹರೀತ್ಲೇ ಇತ್ತು. ಅಕ್ಕ ಹಿತ್ಲುಗ್‌ಕರ್ಕೊವೋಗಿ ನೀರ್‌ಬುಟ್ಟು ತೊಳ್ಕ ಅಂದ್ಳು. ನಾ ತೊಳೀತ್ಲೇ ಇದ್ನಿ, ರಕ್ತ ಸುರೀತ್ಲೇ ಇತ್ತು. ಅಕ್ಕ ಬಿರ್ಬಿರ್ನೆ ಅವ್ಳ್ದೇ ಹಳೇ ಲಂಗವ ಹರ್ದು ಒಂದು ಒಳ್ಬಟ್ಟೆ ಒಳೀಕೆ ದೋಣಿಯಂಗೆ ಮಡುಚಿಟ್ಟು ಅದು ಉದ್ರೋಗದಂಗೆ ಅಡೀಲಿಂದ ಪಿನ್ನ ಹಾಕಿ “ಇಕಳ್ಳವ್ವಿ, ಹಾಕ್ಕ ಇದಾ” ಅಂತ ಕೊಡ್ತು.  ರಾತ್ರೆ ಅಲ್ಲೇ ಮನಿಕಂಡಿದ್ದೆ. ಅಕ್ಕಾ ಅದೇನೇನೋ ಹೇಳುತ್ಲೇ ಇತ್ತು.

**

ದನ ಮಾರಿದ ಮ್ಯಾಕೆ ಅಪ್ಪಯ್ಯ ಗದ್ದೇನೂ ಮಾರ್ಕಂಡ್ನಂತೆ. ʼಸಣ್ಣೀರ ಮೂರೂ ಬಿಟ್ಟ ಊರೂ ಬಿಟ್ಟʼ ಅಂತ ಗೌಡ್ರಟ್ಟೀ ಮುಂದ ಜನ ಆಡ್ಕಳೌರು. ಆ ಮಾತ್ಗೆ ಗೌಡ್ರೂ ಎಲೆ ಅಡಿಕೆ ಕ್ಯಾಕ್ರುಸಿ ನಗಾಡೋರು. ನಾನು ಯಾವಾಗೂನೂ ಶೀಲಕ್ಕನ ಜೊತ್ಗೇ ಇರ್ತಿದ್ದೆ. ಅಕ್ಕ ಬಿಮ್ಮನ್ಸೆ ಅಂತ ಎಲ್ರೂ ಸಡಗ್ರ ಮಾಡ್ತಿದ್ರು. ಮನೆ ಕೆಲ್ಸುಕ್ಕೆ ಆಳಾಯ್ತದೆ ಅಂತ ಗೌಡ್ತೌನೋರು ನನ್ನ ಅಲ್ಲೇ ಮಡಿಕ್ಕಂಡಿದ್ರು. ಶೀಲಕ್ಕ ಇಲ್ಲೇ ನೀರಾಕಂತು. ಆಮ್ಯಾಕೆ ಅವ್ರವ್ವ ಬಂದು ಬಾಣ್ತನುಕ್ಕ ಕರ್ಕೊವೋದ್ರು.

**

ನಂಗೆ ಒಂದ್‌ ವಾರ್ಲಿಂದ ಜರ, ಒಂದೇ ಸಮ್ಕೆ ವಾಂತಿ. ಜೊತ್ಗೆ ಅಳಾಂದ್ರೆ ಅಳ. ಅಪ್ಪಯ್ಯ- ಅವ್ವ ನೆಪ್ಪಾಗೋರು. ಊರ್ಲಿಂದ ಶೀಲಕ್ಕ ಮಗೀನೆತ್ಕಂಡು ಬಂತು. ನನ್ನ ನೋಡಕ್ಕ ಬಿರ್ನೆ ಬಂದ್ಬುಟದ ಅಕ್ಕಾ ಅಂತ ನಾ ತಿಳ್ಕಂಡ್ನಿ. ಗಾಡಿ ಬಂದು ನಿಂತೇಟ್ಗೆ ನಾನೇ ಓಡೋಗಿ ಮಗೀನ ನೋಡನ, ಆಡ್ಸನ ಅಂತಿದ್ನಿ. ಸುಡೋ ಮೈಯ್ಯ ಮ್ಯಾಕೆತ್ತಕ್ಕೂ ಆಗ್ದೇವೋತು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ನೆಲೆ

ಅಕ್ಕ ಅಂಗ್ಳ ದಾಟಿ ನಡುಮನೆಗೆ ಬಂದೋಳೇ “ಎಲ್ಲವ್ಳೆ ಬ್ಯಾವರ್ಸಿ ಮುಂಡೆ” ಅಂತ ಅರ್ಚಂಡ್ಳು. ಕದ ಸರ್ಸಿ ಬಾನ್ದಕ್ವಾಣೆಲಿದ್ದ ನನ್‌ ನೋಡ್ದೋಳೇ ಮಗ ಕಂಕ್ಳಲ್ಲಿ ಇರುವಂಗೇ ಜಾಡ್ಸಿ ಒದ್ಲು. ಅವ್ಳು ಒದ್ದೇಟ್ಗೇ ಜರ ಬಂದ್‌ ನಳ್ತಿದ್ದ ನಾನು, ಧೂಳಿಡ್ದ್‌ ಕುಂತಿದ್ದ ಬಾನ ಒಂದೇ ತರ್ಕೆ ಬಿದ್ದೋದೋ.

“ಲೌಡಿ ಮುಂಡೆ ಈಗ ಎದೆ ಚಿಗ್ರುತಾದೆ, ನಂ ಗಂಡನ್ನ ಮಗ್ಲಲ್ಲಿ ಮನೀಕತಿಯೇನೇ ಚಿನಾಲಿ”

ಗೌಡ್ರು ಮನೇಲಿ ಇರ್ನಿಲ್ಲಾ. ಮಯೇಸಣ್ಣನೂ ಇದ್ದಂಕಾಣೆ.

“ನಾ ಮನೀಕಂತಿರ್ನಿಲ್ಲಾ, ಅಣ್ಣನೇ ಬಂದು ಮನಿಕಂತಿತ್ತು. ಯಾರ್ಗಾನಾ ಏಳುದ್ರೆ ನಿಮ್ಮವ್ವ ವೋದ್ಕಡೀಕೇ ನಿನ್ನೂ ಕಳುಸ್ಬುಡ್ತೀನಿ ಅಂತ ಎದುರ್ಸ್ತು” ಅಂತಂದೇಬುಟ್ಟೆ. ಅವ್ವೋರು ಬಾಯ್‌ ಮ್ಯಾಕೆ ಕೈಔರಿ “ಬಾಯಿ ಬುಟ್ರೆ ಒನ್ಕೆ ಗಿಡುವ್ಬುತೀನಿ ಬ್ಯಾವರ್ಸಿಮುಂಡೆ” ಅಂತ ಜುಟ್ಟಿಡ್ದು ಗುಂಜಾಡುದ್ರು.

ಶೀಲಕ್ಕನ ಅವ್ವ ಗೌಡ್ತೌವ್ವೋರನ್ನ ಕರ್ಕೊವೋಗಿ ಕಿವೀಲಿ ಏನೋ ಹೇಳುದ್ರು. ಚೀಲ್ದಿಂದ ಅದ್ಯಾತರುದ್ದೋ ಉಂಡೆ ತಕ್ಕಟ್ರು. ಮಗ ಒಂದೇ ಸಮ್ಕ ಅಳ್ತಿತ್ತು. ಶೀಲಕ್ಕ ಕೂದ್ಲ ಕೆದ್ರಿ ರಾಚಸಿ ಅಂಗೆ ಕಾಣೋಳು. ನಂಗೆ ಮಗ ಅಳಾದು ಕೇಳ್ಬಾರ. ಎತ್ಕಬೇಕು ಅಂತ ಸ್ಯಾನೆ ಆಸೆ ಆಗ್ತಿತ್ತು. ಅವ್ವೋರು ಆ ಉಂಡೆನ ಒಂದು ಗಳಾಸ್‌ ನೀರ್ಗಾಕಿ ಗೊಟ್ಕಾಸಿ ಕಲುಸಿ ನನ್ ಬಾಯಿ ತೆಗ್ಸಿ ಗಟಗಟಾಂತ ಊದ್ಬುಟ್ರು.

ನೆಲ ಸಾರ್ಸ ಸಗ್ಣೀ ನೀರ್ಗಿಂತ ಕಡೆಯಾಗಿತ್ತದು. ನಂಗೆ ವಾಂತಿ ಬರೋಂಗಾಗದು. ಅವ್ರು ಯೋಳ್ದಂಗೆ ಕೇಳ್ದೆವೋದ್ರೆ ಮತ್ತೆಲ್ಡು ಬೀಳ್ತದಂತ ಸುಮ್ನೆ ಕುಡ್ಕಂಡೆ ಅತ್ಗೆ.

**

ರಾತ್ರಿಯೆಲ್ಲಾ ಶೀಲಕ್ಕ ಜೋರಾಗಿ ಅಳಾದು, ತಲ್ತಲೆ ಚಚ್ಕೊಳದು, ಮಯೇಸಣ್ಣಂಗೆ ಗೌಡ್ರು ಹೊಡ್ಕೋಕ್ಕೋಗೋರು, ಅವ್ವೋರು “ನೀವು ಅದ್ರ ಅಮ್ಮನ್ನ ಮಡಿಕಂಡಿರ್ನಿಲ್ವೇ? ಅದ್ಕೇ ನಿಮ್ಮಗ್ನೂ ನಾ ಏನ್ ಕಮ್ಮಿ ಅಂತ ಗೂಟ ನಿಲ್ಸಕ್ಕೋಗೋನೆ” ಅಂತ ಗದ್ರಿ ಮಗನ್ನ ಬುಡುಸ್ಕಂಡ್ರು. ಬೀಗ್ತಿ ಮುಂದ ಮಾತು ಬೆಳುಸ್ಲಾರದಲೆ ಗೌಡ್ರೂ ಸುಮ್ಕಾದ್ರು.

ಆಮೇಕೆ ನಂಗೆ ಯಾರೂ ಯಾನೂ ಅನ್ನಿಲ್ಲ, ಆಡ್ನಿಲ್ಲ. ಪಾಪಚ್ಚಿ ಗೌಡ್ತೌವ್ವೋರೇ ಗಂಜಿ ಕಾಸಿ ಕೊಟ್ರು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪಿಂಕ್ ಟ್ರಂಪೆಟ್

ಬೆಳ್ಗೆ ಕಣ್ಣು ಬಿಡೋಕ್ಕಾಗದಂಗೆ ಜಾಸ್ತಿ ಜರ ಅಮ್ರುಕಂತು. ಈ ಚಂದುದಾಗೆ ಹೊರಗ್‌ಬ್ಯಾರೆ ಆದೆ. ಏಟ್‌ ಬಟ್ಟೆ ಮಡುಗುದ್ರೂ ತೊಪ್ಪೆಯಾಗದು. ಕಳ್ಳು ಪಚ್ಚಿ ಎಲ್ಲಾ ಅಂಗೇ ಉದ್ರೋಯ್ತದೇನೋ ಅನ್ನುವಂಗೆ ಕಿಬ್ಬಟ್ಟೆ ನೋಯದು. ನಂಗೆ ಎದ್ದು ನಡ್ಯಾಕೂ ಆಯ್ತಿರ್ನಿಲ್ಲ. ಎಲ್ರೂ ಗಾಬ್ರಿ, ಗಡಿಬಿಡಿ ಮಾಡೋರೇಯಾ. ಗೌಡ್ರೇ ಮುಂದ ನಿಂತು ಆಸ್ಪತ್ರೆ ತೋರ್ಸಕ್ಕ ಗಾಡಿ ಕಟ್ಸುದ್ರು. ಗೌಡ್ತೌವ್ವೋರು ನನ್ನ ಕೈಯಿಡ್ಕಂಡ್ ಕರ್ಕಂಬಂದು‌ ಗಾಡ್ಯಾಗ್ ಕುಂಡ್ರುಸುದ್ರು. ಶೀಲಕ್ಕಾ ಯಾತ್ಕೂ ಇರ್ಲೇಳೇ ಅಂತ ಒಂಜತೆ ಬಟ್ಟೆ, ಒಳಬಟ್ಟೇನೆಲ್ಲಾ ಒಂದು ಬ್ಯಾಗಿಗಾಕಿ ಗಾಡೀಲಿಡ್ತು. ನಂಗೆ ಅವ್ರ ಮಕ ಕಂಡು ʼಗೊಳೋʼ ಅಂತ ಅಳ ಬಂತು. ಗೌಡ್ರು, ಗೌಡ್ತವ್ವೋರು, ಶೀಲಕ್ಕಾ, ಅವ್ರವ್ವಾ ಎಲ್ಲಾ ಯೇಟೊಳ್ಳೆ ಜನಾ ಅಂತ. ಆ ಮಯೇಸಣ್ಣನ್ನ ಮಾತ್ರ ಬುಟ್ಟು. ಜರಕ್ಕ ನೆತ್ತಿ ಕಾದೆಂಚಾದಂಗಾಗಿತ್ತು. ಕಣ್ಣು ಬೆಂಕಿ ಕೆಂಡದಂಗ ಸುಡೋದು. ಆದ್ರಾಗೂ ಕಣ್ಣು ಮಯೇಸಣ್ಣನ್ನ ಹುಡುಕ್ತು. ಕಾಣಿಸ್ನಿಲ್ಲ. ಗಾಡಿ ಒಡ್ಯೋ ನಿಂಗಣ್ಣಂಗೆ ಗೌಡ್ರು ದುಡ್ಡು ಕೊಟ್ಟು “ಬಿರ್ನೆ ತೋರ್ಕೊಂಡ್‌ ಬಾರ್ಲಾ, ಮಳ್ಗಾಲ ಬ್ಯಾರೆ” ಅಂತಂದ್ರು. ಅದ್ಕೆ ನಂಗೆ ಅವ್ರಂದ್ರೆ ಸ್ಯಾನೆ ಇಷ್ಟ. ಅಪ್ಪಯ್ಯಂಗಿಂತ್ಲೂ ಒಸಿ ಜಾಸ್ತಿನೇ ಅನ್ನಿ.

**

ಗೋರ್ಮೆಂಟ್‌ ಆಸ್ಪತ್ರೆ ಪಕ್ಕದಳ್ಳೀಯಾಗೇ ಇದ್ರೂ ನಿಂಗಣ್ಣ ಗಾಡಿ ಒಡ್ಕೊಂಡು ಪ್ಯಾಟೆಗ್ ಬಂದಿದ್ದ. ಓ ನಂಗೇನೋ ದೊಡ್ದಾಗೇ ಆಗ್ಬುಟದೆ ಅಂತ ದಿಗ್ಲಾತು. ಆಸ್ಪತ್ರೆ ಬಾಗ್ಲಲ್ಲಿ ಗಾಡಿಂದ ನನ್ನ ಇಳ್ಸಿ “ನೀ ಒಳಕ್ಕೋಗಿ ಸಾಲಲ್ಲಿ ಕುಂತ್ಕಂಡಿರವ್ವಾ, ನಾ ದನುಕ್ಕೆ ಹುಲ್ಲಾಕ್‌ ಬತ್ತೀನಿ” ಅಂತಂದ. ನಾ ಒಳಕ್ಕೋದೆ. ಕುಂತ್ಕಂಡೆ. ನಿಂಗಣ್ಣ ಏಟೊತ್ತಾದ್ರೂ ಬರ್ನೇ ಇಲ್ಲಾ. ನಾನೂ ಜರದಾಗೇ ಒಳ್ಗೂ ಆಚ್ಕೂ ಸ್ಯಾನೆ ಓಡಾಡೋಡಾಡಿ ಸುಸ್ತಾಯ್ತು. ಆಮ್ಯಾಕೆ ಅಲ್ಲೇ ಎಲ್ಲೋ ಬಿದ್ದೋಗ್ಬುಟ್ನಂತೆ.

ಎಚ್ಚರಾಗೋದ್ರಾಗೆ ಯಾವ್ದೋ ಮಂಚದ್‌ ಮ್ಯಾಕೆ ಮನುಗ್ಸಿದ್ರು. ನಿಂಗಣ್ಣ ಎಲ್ಲಾ ಅಂತ ಕೇಳುದ್ಕೆ “ಯಾವ್‌ ನಿಂಗಣ್ನೂ ಕಾಣೆ, ಬೋರೈನೂ ಕಾಣೆ, ಮನಿಕ” ಅಂತು ಸಿಸ್ಟ್ರಕ್ಕ. ಆವಕ್ನೂ ಸ್ಯಾನೆ ಒಳ್ಳೇವ್ರು. ಪಾಪಚ್ಚಿ, ಔಷ್ದಿ ಮಾತ್ರೆಗೆ ನಂತಾವ ದುಡ್ಡಿರ್ನಿಲ್ಲಾಂತ ನಾ ಮನಿಕಂಡಿದ್ದಾಗ ವಾಲೆ ಬಿಚ್ಕಂಡಿದ್ರಂತ. ನಂಗೆ ಗ್ಯಾನೇ ಇರ್ನಿಲ್ಲ ಆ ಕಡೀಕೆ. ಅಕ್ಕನೇ ಯೋಳ್ತು. ಕಿವಿ ಮುಟ್ಕಂಡೆ. ಅವ್ವ ಆಸ ಪಟ್ಟು ನೆಪ್ಪಿಗಿರ್ಲಿ ಅಂತ ಒಟ್ಟೆಗಿಲ್ದೇವೋದಾಗ್ಲೂ ಬಿಚ್ಚುಸಾಕೆ ಬಿಡ್ದೆವೋಗಿದ್ದ ಕಿವಿಗುಂಡು ಅದು. ಆವಕ್ಕನ್ನ ನೋಡ್ದಾಗೆಲ್ಲಾ ನಂಗೆ ಶೀಲಕ್ನೇ ನೆಪ್ಪಾಗೋರು. ಕಡೀಕೂ ಶೀಲಕ್ಕನ್ ಮಗೀನ ನಾ ಆಡ್ಸಕ್ಕಾಗ್ನಿಲ್ಲಾಂತ ಅಳಾನೇ ಬತ್ತದೆ.

***

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪರವೇಶ್ಮಸ್ಥನ ಫಿಕ್ಹ್‌ ಪ್ರಸಂಗವು…

Exit mobile version