ಸ್ಪರ್ಧೆಗೆ ಬಂದ 1,118 ಕತೆಗಳಲ್ಲಿ ಮೊದಲ ಬಹುಮಾನ ತನ್ನದಾಗಿಸಿಕೊಂಡ ಕಥೆ ಇಲ್ಲಿದೆ
:: ಚಂದ್ರಶೇಖರ ಡಿ.ಆರ್.
“ಓಓಓಓಓಹ್
ಆರು ಕೋಳಿ ನಿನಗೆ
ಸೂರಬೆಲ್ಲ ನಿನಗೆ
ದಾವಣಿ ಕುರಿಕೋಳಿ ನಿನಗಿಲ್ಲಿ…
ದಾವಣಿ ಕುರಿಕೋಳಿ ನಿನಗಿಲ್ಲಿ…
ಗ್ರಾಮ ಕಾದಿರುವ ಗರತೀಗೆ…”
ಅಸಾದಿ ಉನ್ಮತ್ತನಾಗಿ ಹಾಡುತ್ತಿದ್ದ. ಪ್ರತಿ ಪದಗಳಾದ ಮೇಲೂ ತಮಟೆಯಂತಿರುವ ರಣ ಹಲಗೆ ನೆಲಕ್ಕೆ ಅಭಿಮುಖವಾಗಿ ಹಿಡಿದು ಬಡಿಯುತ್ತಾ ಮುಂದುವರೆಯುತ್ತಿದ್ದ. ಪ್ರತೀ ಬಾರಿ ಹಾಡಿನ ಸಾಲು ಹೇಳಿ ನಿಂತಾಗಲೂ ವಾದ್ಯಗಳು ಜೋರಾಗುತ್ತಿದ್ದವು. ಅಸಾದಿಯ ಪದಗಳಿಗೆ ಶ್ಲೀಲ-ಅಶ್ಲೀಲಗಳ ಗಡಿಯಿಲ್ಲ. ಇದು ಕೊಂಡಮ್ಮ ದೇವಿ ಸಮ್ಮುಖದಲ್ಲಿ ನಡೆಯುತ್ತಿರುವ ಘಟನಾವಳಿಗಳು. ಕಳಸ ಹೊತ್ತು ನಿಂತ ಹೆಣ್ಣುಮಗಳು ಹಿಂದೆಮುಂದೆ ತೂಗುತ್ತಿದ್ದಾಳೆ. ಕೆಳ ಅರ್ಧಬಾಗ ಚಿವುಟಿ ಹೊಂಬಾಳೆಯ ತುದಿಗೆ ಜೋಡಿಸಿದ್ದ ಕನಕಾಂಬರ ಮತ್ತು ಮಲ್ಲಿಗೆ ಹೂಗಳು ತೂಗುವಿಕೆಗೆ ಅನುಗುಣವಾಗಿ ಹೊಂಬಾಳೆ ಗರಿಗಳೊಂದಿಗೆ ಒಯ್ದಾಡುತ್ತಿವೆ. ಅದೇ ಸಮಯಕ್ಕೆ ಸೋಮನನ್ನು ಹೊತ್ತಿದ್ದ ರಂಗಯ್ಯನ ಆಗಮನವಾಗಿತು. ಒಂದೊಂದೆ ಹೆಜ್ಜೆ ತಮಟೆ, ಅರೆ, ದೋಣಿನ ಲಯಕ್ಕೆ ಅನುಗುಣವಾಗಿ ಭೂಮಿಗೆ ದೊಪ್ಪನೆ ಇಡುತ್ತಿದ್ದಾನೆ. ಕುಣಿತದಲ್ಲಿ ತನ್ಮಯತೆಯಿದೆ ಅವ್ಯಕ್ತ ಆಲಾಪವಿದೆ. ಸುಮಾರು ಇಪ್ಪತ್ತರ ಆಸುಪಾಸಿನ ವಯಸ್ಸು ಕಟ್ಟುಮಸ್ತಾದ ದೇಹ. ಎಲ್ಲರೂ ಎಲ್ಲವೂ ನಿಶ್ಯಬ್ಧ. ವಾದ್ಯಗೋಷ್ಟಿಗಳದಷ್ಟೇ ಅಬ್ಬರ. ಒಂದೋ ರಂಗನ ಪಾದ ಮರಗಟ್ಟಿ ನಿಲ್ಲಬೇಕು, ಇಲ್ಲ ದೇವಿಯೇ ಎದ್ದು ಬಂದು ಸಾಕು ಎನಬೇಕು.
ಕಥೆಯ ಬಗ್ಗೆ ತೀರ್ಪುಗಾರರು ಬರೆದ ಟಿಪ್ಪಣಿ ಇಲ್ಲಿದೆ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೀರ್ಪುಗಾರರ ಟಿಪ್ಪಣಿ: ಸಾಮಾಜಿಕ ಪ್ರಸ್ತುತತೆಯೇ ಜೀವಾಳವಾಗಿರುವ ಕತೆಗಳು
ಬೂತಾಳೆ ಮರದಿಂದ ತಯಾರಿಸಿದ ಸೋಮನ ಮುಖವಾಡ. ಅಗಲವಾದ ಹಣೆ, ವಿಶಾಲವಾದ ಕಣ್ಣು, ಕಿವಿ, ದೊಡ್ಡ ಮೂಗು. ಬಿದಿರಿನಿಂದ ರಂಗಯ್ಯನ ಹಿಂದೆ ಕಮಾನಿನಂತೆ ರಚಿಸಿ ವಿವಿಧ ಬಣ್ಣ ಬಣ್ಣದ ಸೀರೆಗಳನ್ನು ಇಳಿಬಿಟ್ಟು ಪ್ರಭಾವಳಿಯನ್ನು ರಚಿಸಲಾಗಿದೆ. ಕಾಲಿಗೆ ಗೆಜ್ಜೆ, ಕೈಗಳಿಗೆ ಕಡಗಗಳು, ಹಾಗೆ ಮೂರೇ ಬೆರಳಿದ್ದ ಎಡಕೈಯಲ್ಲಿ ಬೆಳ್ಳಿ ಕಟ್ಟಿನ ನೀಳವಾದ ಬೆತ್ತ. ಕೊಂಡಮ್ಮಳಿಗೆ ಇಬ್ಬರು ಸೋಮರು ಅಂಗರಕ್ಷಕರು. ರೌದ್ರನಾದ ಕೆಂಪುಸೋಮನಿಗೆ ನಾಮಬಳಿದಿದ್ದಾರೆ. ಹಳದಿ ಬಣ್ಣದ ಸೋಮ ವಿಭೂತಿ ಬಳಿದುಕೊಂಡ ಸೌಮ್ಯಮೂರ್ತಿ. ರಂಗನ ತಮ್ಮ ಸುಮ್ಮನೆ ಹೊತ್ತು ನಿಂತಿದ್ದಾನೆ. ಸುತ್ತ ಹತ್ತು ಹಳ್ಳಿಗಳನ್ನು ಹುಡುಕಿದರೂ ಹದಿನೈದು ಕೆ.ಜಿ.ಗೂ ಮಿಕ್ಕಿ ತೂಕದ ರೌದ್ರ ಸೋಮನನ್ನು ರಂಗಯ್ಯನಂತೆ ಹೊತ್ತು ಕುಣಿಯುವವರು ಯಾರೂ ಇಲ್ಲ. ಇಲ್ಲಿ ಯಾವುದಕ್ಕೂ ಪ್ರಶ್ನೆಯೂ ಇಲ್ಲ ಉತ್ತರವೂ ಇಲ್ಲ.
ಮಾರನೇದಿನ ಕೊಂಡಮ್ಮ ದೇವಿಯ ದೇವಾಲಯದ ಮುಂದೆ ವಿಶೇಷ ಕೊಂಡ ವ್ಯವಸ್ಥೆ. ಎಲ್ಲರೂ ಭಕ್ತಿ ಭಾವದಿಂದ ಮೈಮರೆತರು. ಇಲ್ಲದ್ದನ್ನು ತಾಯಿಯ ಹತ್ತಿರ ಬೇಡಿಕೊಂಡರು. ತಮ್ಮೊಳಗಿನ ಬೇಗೆಯನ್ನೂ ಕಾವನ್ನೂ ದೇವಿಯ ಮುಂದೆ ತುಳಿದು ಹೋಗಬೇಕು. ಸೋಮನ ಹೊತ್ತೇ ಮೊದಲನೆಯವನಾಗಿ ಕೊಂಡ ತುಳಿದು, ಅದರ ಕಾವು ತಣಿಯುವ ಮೊದಲೇ ಸಿರಾದ ಬೇವಿನಹಳ್ಳಿಯ ಕಲಾತಂಡದೊಟ್ಟಿಗೆ ರಂಗಯ್ಯ ಮರೆಯಾದ. ಹೋಗುವಾಗ ಹಟ್ಟಿಗಳೆಡೆ ಒಮ್ಮೆ ತಿರುಗಿದವ ಮತ್ತೆ ತಿರುಗಲಿಲ್ಲ. ಅಲ್ಲಿಂದ ಅವನ ಸುಳಿವೆ ಇಲ್ಲ. ಬೆಂಗಳೂರಿಗೆ ಯಾವುದೋ ಕೆಲಸದ ನಿಮಿತ್ತಾ ಹೋದ ಊರವರೊಬ್ಬರು ಯಾವುದೋ ಕಲೋತ್ಸವದಲ್ಲಿ ಕಂಡರಂತೆ. ಆಮೇಲೆ ಅವನ ಬಗ್ಗೆ ಒಂದು ಮಾತೂ ಇಲ್ಲ.
**
ಸಾಕವ್ವ ಕರ್ ಮೀನ್ ಸಾರ್ ಮಾಡಿ ಊಟಕ್ಕಿಟ್ಟು ಆಚೆ ಬಂದು ನೋಡೊದ್ರೊಳಗೆ ಒಟ್ಟು ಮಾಡಿದ್ದ ಕಸಾನೆಲ್ಲಾ ಪಿಳ್ಳೆಗುಳ್ನ ಬೆನ್ನಿಗಾಕಂಡು ಓಡಾಡ್ತಿದ್ದ ರತ್ನಿ ಯಾಟೆ ಕೆದಕಿ ಹಾಕಿತ್ತು. ಪಿಳ್ಳೆಗುಳ್ನ ನೆನ್ನೆ ಹಂಗೆ ಹದ್ದು ಕದ್ದೋಯ್ವಾಗ ಮತ್ತೆ ತಡಿಬಾರ್ದು ಅನ್ಕಂಡು ಶಪಿಸುತ್ತಾ, ಮತ್ತೆ ಗುಡಿಸಿಹಾಕಲು ಸೊಂಪ್ಲಿನ ಕಡೆ ತೆಂಗಿನ್ ಗರಿ ಪರ್ಕೆ ತೆಗೆದುಕೊಳ್ಳುವುದಕ್ಕೆ ಹೋದಳು. ಒಳಗೆ ಕೂತು ಬೆಂದ ಕಡ್ಲೆಕಾಳಿಗೆ ಕರಿಮೀನು ತೋಯಿಸಿ ಮೆಲ್ಲುತ್ತಿದ್ದ ನರಸಿಂಹಯ್ಯ ಜನ್ರ ಬಾಯಲ್ಲಿ ಬರಬರುತ್ತ ನರಸುಮ್ಮಣ್ಣನಿಗೆ ಹೆಂಡತಿ ಹೊರಗೆ ನಿಂತು ಹೇಳುತ್ತಿದ್ದ ಯಾವ ಮಾತುಗಳು ಕಿವಿಯ ಮೇಲೆ ಬೀಳುತ್ತಿರಲಿಲ್ಲ. ಕೆಲವು ದಿನಗಳಿಂದ ಅವನು ಅನ್ಯಮನಸ್ಕನಾಗಿ ಇರುವುದಕ್ಕೆ ಬಲವಾದ ಕಾರಣಗಳು ಇದ್ದವು.
ಜೀವನೋಪಾಯಕ್ಕೆ ಅಂತ ಇದ್ದ ತಮಟೆಯ ಚರ್ಮ ಸವೆದು ಹರಿದು ತಿಂಗಳಾಗುತ್ತಾ ಬಂದಿದೆ. ದುಸ್ತರ ಬದುಕು. ಪಕ್ಕದೂರು ದೊಡ್ಡಮಧುರೆ ಮತ್ತು ಸ್ವಾಂದೇನಾಹಳ್ಳಿಯಲ್ಲಿ ಮುಂದಿನ ತಿಂಗಳು ಜಾತ್ರೆಗೆ ಕಡಿಯುವ ಕೋಣದ ಚರ್ಮಕ್ಕೆ ಇನ್ನಿಲ್ಲದಂತೆ ಕಾಯುವ ಹಾಗೆ ಆಗಿದೆ. ಮಗಳು ಪುಟ್ಟಕ್ಕನನ್ನು ಕೊಟ್ಟಿರುವುದು ಅದೇ ದೊಡ್ಡ ಮಧುರೆಗೆ.ತುಂಬಾ ಅನುಕೂಲಸ್ಥರೇನಲ್ಲದಿದ್ದರೂ ಅಳಿಯ ಪಕ್ಕದ ಸ್ವಾಂದೇನಾಹಳ್ಳಿಯಲ್ಲಿ ಬಂಡೆ ಕೆಲಸಕ್ಕೆ ಹೋಗುತ್ತಾನೆ. ಮಗಳ ಬದುಕು ಹೇಗೋ ಕಟ್ಟಿಕೊಂಡಿದೆ. ಜಾತ್ರೆಗೆ ಮಗಳ ಮನೆಗೆ ಹೋಗುವ ಶಾಸ್ತ್ರವು ಜೊತೆಗೆ ನಡೆಯುತ್ತದೆ. ಅದಾಗಿ ತಮಟೆಗೆ ಚರ್ಮ ಸಿಕ್ಕರೆ ಸುತ್ತ ಊರುಗಳಲ್ಲಿ ನಡೆಯುವ ಜಾತ್ರೆ, ಸಾವಿನ ಮನೆಗಳು ಮತ್ತು ಊರ ಸುದ್ದಿ ಸಾರುವುದು ಇದನ್ನೆಲ್ಲಾ ಮಾಡಿಕೊಂಡು ಹೇಗೋ ಜೀವನ ಒಂದು ಹದಕ್ಕೆ ಬರುತ್ತದೆ. ಮೊದಲಾದರೆ ಮರಿ-ಕೋಣ ಬಲಿಕೊಡುವವರು ತಮಟೆಯವರಿಗಾಗೆ ಮಿಸಲಿಟ್ಟು ಕೊಡುತ್ತಿದ್ದರು. ಕಾಲ ಬದಲಾಗಿ ಆ ಸಂಪ್ರದಾಯವೂ ಮುರುಟಿಹೋಗಿದೆ. ಬರಗಾಲವಾದದ್ದರಿಂದ ಕೂಲಿ ಕೆಲಸವು ಅಷ್ಟಾಗಿ ಸಿಗುತ್ತಿಲ್ಲ. ಇದೆಲ್ಲಾ ಯೋಚನೆಗಳಲ್ಲಿ ನರಸುಮ್ಮಣ್ಣ ಮುಳುಗಿಹೋಗಿದ್ದಾನೆ. ನೆನಪಿನ ದೋಣಿ ಹಿಮ್ಮುಕವಾಗಿ ಚಲಿಸುತ್ತಿತ್ತು.
ಸುಮಾರು ಅರವತ್ತರ ದಶಕ. ದೇವರಾಯನದುರ್ಗದ ತಪ್ಪಲಲ್ಲಿ ಇದ್ದ ಕೊಂಡಜ್ಜಿ ಗ್ರಾಮದ ಹೊಲೆ-ಮಾದಿಗರ ಕೇರಿ ಗೊತ್ತಿದ್ದು ಗೊತ್ತಿಲ್ಲದೇ ಭಾರತದ ಭೂಪಟದಲ್ಲಿ ಉಚಿತವಾಗಿ ಬರುವ ಶ್ರೀಲಂಕಾದ ಹಾಗೆ ಊರ ಹೊರಗೆ ಐದಾರು ಹಟ್ಟಿಗಳಿಗೆ ವ್ಯಾಪಿಸಿ ಊರಿನ ಭಾಗವಾ ಅನ್ನುವ ಅನುಮಾನದೊಟ್ಟಿಗೆ ಇತ್ತು. ಈ ಕಡೆ ಹಟ್ಟಿಯ ಮೊದಲನೆ ಮನೆಯಲ್ಲಿ ಸೀನಿದರೆ ಕೊನೆಯ ಸಾಲಿನ ಕೊನೆಯ ಮನೆಯ ಕೆಂಪಣ್ಣನೂ ಯಾರ ಸೀನೆಂದು ಊಹಿಸುವಷ್ಟು ಚಿಕ್ಕ ಪ್ರಪಂಚ. ಮೇಗಳ ಹಟ್ಟಿಯ ಮೂಲೆ ಮನೆಯವರ ಹೊಲ-ತೋಟದಲ್ಲಿ ಕೂಲಿ ಕೆಲಸ, ಬಡಗಿ, ಚಮ್ಮಾರಿಕೆ ಇವು ಮುಖ್ಯ ಕಸುಬುಗಳು. ಆಗಾಗ್ಗೆ ಹಟ್ಟಿಯಲ್ಲಿ ತಮಟೆಯ ಸದ್ದು ಊರನ್ನೇ ಎಚ್ಚರಿಸುತ್ತಿತ್ತು. ಅದು ಕುಂಭಿಯ ಮನೆ.
ಕಥಾಸ್ಪರ್ಧೆಯ ಬಹುಮಾನ ವಿರತಣೆ : ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ ಚಂದ್ರಶೇಖರ್
ತಮಟೆ ಕುಂಭಯ್ಯನಿಗೆ ಇಬ್ಬರು ಮಕ್ಕಳು. ರಂಗಯ್ಯ ಮತ್ತು ನರಸಿಂಹಯ್ಯ. ದೇವರಾಯನದುರ್ಗದ ಕುಂಭಿ ನರಸಿಂಹನಿಗೆ ಹರಕೆ ಹೊತ್ತು ಹುಟ್ಟಿದ ಕಾರಣಕ್ಕೆ ಮಗನಿಗೂ ದೇವರ ಹೆಸರೇ ಇಟ್ಟಿದ್ದರು. ಚಿಕ್ಕವಯಸ್ಸಿಂದ ತಮಟೆ, ಹರೆ, ದೋಣು, ನಗಾರಿಯ ಬಗ್ಗೆ ಆಸಕ್ತಿ ಹುಟ್ಟಿ ಅವರಿವರ ಹಿಂದೆ ತಿರುಗಿ ತಮಟೆ ಬಾರಿಸುವುದು ಚರ್ಮ ಹದಗೊಳಿಸಿ ವಾದ್ಯ ಕಟ್ಟುವ ಕಲೆಯನ್ನು ಕರಗತ ಮಾಡಿಕೊಂಡಿದ್ದ. ಎರಡನೇ ಮಗ ಹುಟ್ಟಿ ಐದಾರು ವರ್ಷಕ್ಕೆ ಹೆಂಡತಿ ಜ್ವರವೆಂದು ಮಲಗಿ ಮತ್ತೆ ಉಸಿರಾಡಿರಲಿಲ್ಲ. ಅವನ ಕೋಪದ ಜ್ವಾಲೆ ಪರಿಚಯವಿದ್ದುದರಿಂದ ಯಾರು ಅವನಿಗೆ ಹೆಣ್ಣು ಕೊಡಲು ಮುಂದೆ ಬಂದಿರಲಿಲ್ಲ. ಇಬ್ಬರು ಮಕ್ಕಳಾದ ಮೇಲೆ ದೇವರ ಮೇಲಿದ್ದ ಭಕ್ತಿಗೋ ಊರಿನ ಕೊಂಡಮ್ಮತಾಯಿಯ ಅನುಗ್ರಹವೋ ಇಬ್ಬರು ಮಕ್ಕಳಿಗೂ ತಮಟೆ ಕಟ್ಟುವುದು ಮತ್ತು ಕೊಂಡಮ್ಮಳಿಗೆ ಅಂಗರಕ್ಷಕರಂತಿದ್ದ ಸೋಮರ ಕುಣಿತ ಕಲಿಸಿ ಬದುಕು ಹಸನು ಮಾಡಬೇಕೆಂದು ತವಕಿಸುತ್ತಿದ್ದ.
ಮೊದಲ ಮಗ ರಂಗಯ್ಯನಿಗೆ ಅದೆಷ್ಟು ಬಾರಿ ತೀಡಿ ತಿದ್ದಿದರೂ ತಮಟೆ ಚರ್ಮ ಹೊಸೆಯುವ ಕಲೆ ಒದಗಿಬರಲಿಲ್ಲ. ಸೋಮನ ಕುಣಿತದಲ್ಲಿ ನೈಪುಣ್ಯತೆ ಇದ್ದರೂ ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಿದುದರಿಂದ ಅದರಿಂದ ಬರುತ್ತಿದ್ದ ಆದಾಯವು ಅಷ್ಟಕಷ್ಟೆ. ಪ್ರತೀಕಾರವೆಂಬಂತೆ ಬಂದು ಹೋದವರ ಮುಂದೆ ಮಗನ ದಡ್ಡತನಕ್ಕೆ ಬಯ್ಯೋದು ಅವಮಾನಿಸೋದು ತುಚ್ಛವಾಗಿ ಮಾತನಾಡಿ ಹೀಯಾಳಿಸುವುದು ಯಥೇಚ್ಛವಾಗಿ ನಡೆಯುತ್ತಿತ್ತು. ಅವತ್ತೊಂದು ದಿನ ರಂಗಯ್ಯನ ಸಂಯಮದ ಕಟ್ಟೆಯೂ ಓಡೆದಿತ್ತು. ಅವತ್ತು ಮಗ ಗೊತ್ತಾಗದಂತೆ ಬಿಸಿಲಿಗೆ ಒಣಗಲು ಇಟ್ಟಿದ ಅಪರೂಪಕ್ಕೆ ಸಿಕ್ಕಿದ ಎರಡು ಮೂರು ಕರ ಈದ ದನದ ಚರ್ಮ ತುಳಿದ ಕಾರಣಕ್ಕೆ ವ್ಯಾಘ್ರನಾದ ಕುಂಭಯ್ಯ ಮಗನ ಮೇಲೆ ಹಾರಿಹಾಯ್ದಿದ್ದ. ದುಡಿಯುವ ಮಾರ್ಗ ಹಿಡಿತಿಲ್ಲ ಎನ್ನೋ ಕೋಪಕ್ಕೆ ಕಾಲಲ್ಲಿ ಒದ್ದು ಜುಟ್ಟು ಹಿಡಿದು ಕೊಂಡಮ್ಮನ ದೇವಸ್ಥಾನದ ಕೊಂಡ ಹಾಯುವ ಜಾಗದಲ್ಲಿ ಎಳೆದುಹಾಕಿ ಬಂದಿದ್ದ. ವ್ಯಾಕುಲನಾದ ರಂಗಯ್ಯ, ಮನೆಗೆ ರೊಯ್ಯನೆ ಬಂದು ಕಡಗೋಲು ತೆಗೆದುಕೊಂಡು ಎಡಗೈ ಹೆಬ್ಬೆರಳು ತೋರ್ಬೆರಳೆರಡನ್ನೂ ಕಡಿದುಕೊಂಡಿದ್ದ. ಸುದ್ದಿ ಕೇಳಿ ಹಟ್ಟಿಗೆ ಹಟ್ಟಿಯೇ ಬೆಚ್ಚಿ ಬಿದ್ದಿತ್ತು.ಇನ್ಯಾವತ್ತು ತಮಟೆ ವಿಚಾರ ಮಗನ ಮುಂದೆ ಮಾತನಾಡಲು ತಂದೆಗೆ ಧೈರ್ಯ ಬರಲಿಲ್ಲ.ಮಗ ತಮಟೆಯನ್ನು ಮುಟ್ಟಲು ಆಗಲಿಲ್ಲ.
ಅದಾದ ಮೇಲೆ ರಂಗಯ್ಯ ಮೊದಲಿನಂತೆ ಇರಲಿಲ್ಲ. ತಂದೆಯನ್ನು ಮಾತಾಡಿಸದೇ ತನ್ನ ಪಾಡಿಗೆ ತಾನಿರುತ್ತಿದ್ದ. ಕರಗತ ಮಾಡಿಕೊಂಡಿದ್ದ ಸೋಮನ ಕುಣಿತ ಕೊಂಡಮ್ಮನ ಜಾತ್ರೆಯ ದಿನ ತಂದೆಯನ್ನೇ ಚಕಿತಗೊಳಿಸಿತ್ತು. ದೈತ್ಯ ಕೋರೆಹಲ್ಲು ಚಿತ್ರ ಎದೆ ಎಲುಬನ್ನು ಇರಿಯುವಂತಿತ್ತು. ಸೋಮನ ಮೂಗಿನಿಂದ ಹೊರಬರುತ್ತಿದ್ದ ಬಿಸಿಯುಸಿರು ಸುಡುವಂತಿತ್ತು. ದೇವಿಯ ಒಂದು ಅಂಶಕ್ಕೇ ಕೇಡೆಸಗಿ ಪಾಪದ ಕೆಲಸ ಮಾಡಿದೆ ಎಂದು ಪಶ್ಚಾತಾಪದಲ್ಲಿ ಹಾಸಿಗೆ ಹಿಡಿದ ಕುಂಭಿ ತಿಂಗಳ ಜಾತ್ರೆಯಷ್ಟೊತ್ತಿಗೆ ಮಣ್ಣು ಸೇರಿದ. ಮಣ್ಣಿನ ದಿನ ರಂಗಯ್ಯನನ್ನ ಊರಿನವರು ಎಷ್ಟು ಹುಡುಕಿದರೂ ಎಲ್ಲಿಯೂ ಕಾಣಲಿಲ್ಲ. ಊರೂರು ಅಲೆಯುತ್ತಾ ಸೋಮ ಕುಣಿಯುತ್ತಾ ರಂಗಯ್ಯ ತನ್ನದೇ ದಾರಿಯಲ್ಲಿ ಆನೆಯಾಗತೊಡಗಿದ. ಕುಣಿಯುವ ಮುಂಚೆ ಸೋಮನ ಮುಂದೆ ಒಂದೆರಡು ನಿಮಿಷ ಕುಳಿತಿರುತ್ತಿದ್ದ ರಂಗಯ್ಯನ ಕಣ್ಣುಗಳು ನಿಗಿನಿಗಿ ಉರಿಯೋ ಕೆಂಡದಂತಾಗಿರುತ್ತಿದ್ದವು. ಬದುಕಲು ದಾರಿ ಅರಸುತ್ತಾ ಅಲೆಯುತ್ತಿದ್ದವನಿಗೆ ಸೋಮನ ಕುಣಿತ ಕೈಹಿಡಿದಿತ್ತು.
ಎರಡನೇ ಮಗನಿಗೆ ತಮಟೆ ಕಟ್ಟುವುದು ಒಲಿದು ಬಂದಿತ್ತು. ಧ್ಯಾನಸ್ಥನಾಗಿ ಕುಳಿತು, ತಂದ ಚರ್ಮವನ್ನು ನೆಲಕ್ಕೆ ಹರವಿ ಮೂರು ದಿನ ಸುಡು ಬಿಸಿಲಲ್ಲಿ ಎಳ್ಳಷ್ಟೂ ಹರಿಯದಂತೆ ಮೊಳೆ ಹೊಡೆದು, ಕುಂತು ಜತನದಿಂದ ಒಣಗಿಸುವುದು. ಒಣಗಿದ ಚರ್ಮ ನಿರಿಗೆ ಮಾಡಿ ಸುತ್ತಿ ನಂತರ ಅದನ್ನು ಕೆಲಕಾಲ ನೀರಲ್ಲಿ ನೆನೆಸಿಟ್ಟು, ನೆಂದ ಚರ್ಮವನ್ನು ಹರವಿ ಅದರ ಒಳಹೊರಗೆ ಕೊಳೆಯನ್ನು ವೈನ ಮಾಡಿ ತೆಗಿಯುತ್ತಿದ್ದ. ನೆಂದು ಹದವಾದ ಚರ್ಮದ ಕೂದಲನ್ನು ರಂಪಿನಿಂದ ತೆಗೆಯಬೇಕು. ಹಿಂದೆ ಮುಂದೆ ಚರ್ಮ ಕಸರನ್ನು ತೆಗೆದಾಗ ಅದು ಚರ್ಮದ ರೂಪ ಬಿಟ್ಟು ಬಿಳಿಹಾಳೆಯಂತಾಗುತ್ತಿತ್ತು. ಇಲ್ಲಿಗೆ ಸಂತಸದ ನಿಟ್ಟುಸಿರು. ಕೊನೆಗೆ ಹಸುವಿನ ಚರ್ಮದ ಲಾಡಿಯಂತ ಎಳೆಯಿಂದ ದುಂಡನೆಯ ಆಕಾರದ ಕಬ್ಬಿಣಕ್ಕೆ ಎಳೆದು ಕಟ್ಟಬೇಕು. ಇದೆಲ್ಲವೂ ಏಕಾಂತದಲ್ಲಿ ತುಂಬು ಭಕುತಿಯಿಂದ ಕೂತು ನರಸುಮ್ಮ ಮಾಡುತ್ತಿದ್ದ. ಅಣ್ಣ ತಮ್ಮಂದಿರಲ್ಲಿ ಅದೆಂತಾ ವೈರುಧ್ಯ, ಎರಡೂ ಭಕ್ತಿಯ ವಿಭಿನ್ನ ಮಾರ್ಗಗಳು. ಒಂದು ಬಿಟ್ಟರೆ ಒಂದಿಲ್ಲ.
ಅಣ್ಣ ರಂಗ ಕುಣಿಯುತ್ತಿದ್ದ ಸೋಮ, ಅಧಿಕ ದೈಹಿಕ ಕ್ಷಮತೆ ಬೇಡುವ ಕುಣಿತ. ಅಷ್ಟಾಗಿ ಅದರಲ್ಲಿ ನೈಪುಣ್ಯತೆಯನ್ನು ಸುತ್ತಲಿನ ಊರಿನ ಯಾವ ಗಂಡಾಳು ಹೊಂದಿರಲಿಲ್ಲ. ಹಳದಿ ಸೋಮನ ಜವಾಬ್ದಾರಿಯನ್ನು ನರಸುಮ್ಮ ಹೊತ್ತು ಕೆಲಕಾಲ ಸುಮ್ಮನೆ ನಿಂತಿರುತ್ತಿದ್ದ.ಅದಕ್ಕೆ ದೊರೆಯುತ್ತಿದ್ದ ಕಾಸು ಅಷ್ಟಕ್ಕಷ್ಟೆ. ಅದನ್ನ ಯಾರಾದರೂ ಮಾಡುತ್ತಿದ್ದರು. ಬಹುಮುಖ್ಯವಾಗಿ ತಮಟೆ ಕಟ್ಟುವುದ ನೆಚ್ಚಿಕೊಂಡಿದ್ದರಿಂದ ಕೋಣ, ದನ ಹಾಗು ಎರಡು ಮೂರು ಮರಿ ಹಾಕಿದ ಆಡಿನ ಚರ್ಮ ಸಿಕ್ಕಾಗ ಸಿದ್ಧಪಡಿಸಿಕೊಂಡಿರುತ್ತಿದ್ದ.
ಇದೆಲ್ಲಾ ಆಗಿ ಮೂರು ದಶಕಗಳು ಸಂದಿವೆ. ನರಸುಮ್ಮನಿಗೂ ಐವತ್ತು ಹತ್ತಿರ ವರ್ಷವಾಗಿದೆ. ಚರ್ಮವೂ ಸುಕ್ಕುಗಟ್ಟಿ ಇಳಿವಯಸ್ಸನ್ನು ಸಾರಿ ಹೇಳುತ್ತಿದೆ. ಜೀವನ ಮೊದಲಿನಂತೆ ಇಲ್ಲ. ಅದ್ಯಾವುದೋ ಸಂಘಟನೆಗಳ ಪರಿಣಾಮ ಜಾನುವಾರುಗಳ ಚರ್ಮ ಕೂಡ ಈಗ ಮೊದಲಿನಂತೆ ಸಿಗುತ್ತಿಲ್ಲ. ಸತ್ತದನದ ಬಳಿಯೂ ಹೋಗಬಾರದೆಂದು ಅದ್ಯಾರೋ ಬಂದು ತಾಕೀತು ಮಾಡಿದ್ದಾರೆ. ಚರ್ಮ ವಾದ್ಯಕ್ಕೆ ಪರ್ಯಾಯವಾಗಿ ಪ್ಲಾಸ್ಟಿಕ್ಕಿನಿಂದ ತಯಾರಿಸಿದ ವಾದ್ಯಗಳು ಕ್ಯಾತ್ಸಂದ್ರ ಸಂತೆಯಲ್ಲಿ ಸಿಗಲು ಶುರುವಾಗಿವೆ . ಅಪ್ಪ ಸತ್ತ ಮೂರನೇ ವರ್ಷದ ಜಾತ್ರೆಯ ದಿನ ಸೋಮನ ಕುಣಿಯುತ್ತಾ ರಂಗಯ್ಯ ಕೆಂಡ ತುಳಿದು ಪರವೂರಿನವರೊಂದಿಗೆ ಮರೆಯಾದವನು ಇಷ್ಟು ವರ್ಷವಾದರೂ ತಿರುಗಿ ಮನೆ ಕಡೆ ನೋಡಿಲ್ಲ. ಪ್ರತೀ ವರ್ಷ ಮಾರ್ನಾಮಿ ಹಬ್ಬಕ್ಕೆ ಅಪ್ಪನಿಗೆ ಎಡೆ ಇಡುವಾಗ ಅಣ್ಣನೂ ನೆನಪಾಗುತ್ತಿದ್ದ.
ಅವತ್ತು ಹಟ್ಟಿಯ ಬಾಗಿಲಲ್ಲಿ ಎರಡು ಮರದ ಕುರ್ಚಿಗಳು ನೆಲವೂರಿದ್ದವು. ಅದರಲ್ಲಿ ಎಡಭಾಗಕ್ಕೆ ಬಾಬು ಜಗಜೀವನ್ ರಾಮ್ ಬಲಭಾಗದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಗಳು. “ನೋಡಿ ನಿಮಗೆಲ್ಲಾ ಶಿಕ್ಷಣ ಇಲ್ಲ. ನಿಮಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟದ ಮನೋಭಾವ ಬೆಳೆಸಿಕೊಳ್ಳೋದು ತುಂಬಾ ಮುಖ್ಯ. ಸರ್ಕಾರ ಜಾನುವಾರು ವಧೆ ನಿಷೇಧ ವಿಧೇಯಕವನ್ನು ವಿರೋಧದ ಮಧ್ಯೆಯೂ ಜಾರಿಗೆ ತರುವ ಪ್ರಯತ್ನ ಮಾಡ್ತಿದೆ. ಪಕ್ಕದೂರಿನಲ್ಲಿ ಸತ್ತ ದನ ಮುಟ್ಟಿದ್ದಕ್ಕೆ ನಮ್ಮವರನ್ನ ಜೈಲಿಗೆ ಹಾಕಿದ್ದಾರೆ” ದಲಿತ ಸಂಘಟನೆಯ ಮುಖ್ಯಸ್ಥರೊಬ್ಬರು ನೀಲಿ ಬಣ್ಣದ ಶಾಲು ಹೆಗಲಿಗೇರಿಸಿಕೊಂಡು ಮಾತನಾಡುತ್ತಿದ್ದರು “ ಪ್ರಭುತ್ವದ ಕೆಲಸ ಎಂದೂ ಜನರ ತಟ್ಟೆಯಲ್ಲಿ ಏನಿರಬೇಕು ಎಂದು ಹೇಳುವುದಲ್ಲ. ಊಟ ಬಟ್ಟೆ ವಸತಿ ಇವು ಮೂಲಭೂತ ಅಗತ್ಯಗಳು.ಸಾಂವಿಧಾನಿಕವಾಗಿ ಯಾವುದೇ ತೊಡಕುಗಳಿಲ್ಲದೇ ಯಾವೊಂದೂ ಭೇದಭಾವವಿಲ್ಲದೆ ದೊರೆಯುವಂತಾಗಬೇಕು. ಇದು ಸಂವಿಧಾನದ ಆಶಯ”
“ಭೌಗೋಳಿಕವಾಗಿ ಅಷ್ಟೆ ಅಲ್ಲ ಆಹಾರದ ವಿಧಾನದಲ್ಲೂ ವೈವಿಧ್ಯತೆ ಇರುವ ದೇಶ ನಮ್ಮದು. ಮಠದ ಸ್ವಾಮಿಗಳು ಇಂದು ಶಾಲೆಯ ಮಕ್ಕಳಿಗೆ ಕೊಡುವ ಊಟದಲ್ಲಿ ನೇರವಾಗಿ ಅದು ಕೊಡಬೇಡಿ ಇದು ಕೊಡಿ ಅಂತ ಹೇಳುತ್ತಾರೆ. ಲೌಕಿಕ ಜಗತ್ತಿನ ಜೊತೆ ಅವರಿಗೆಂತಾ ನಂಟು. ಅದರಿಂದ ಅವರು ಸಾಧಿಸಬಲ್ಲಂತ ಸಾಮಾಜಿಕ ಬದಲಾವಣೆಯಾದರೂ ಏನು? ಅಪೌಷ್ಟಿಕತೆಯಿಂದ ಬಳಲುತ್ತಿರುವ ಬಡವರ ಮಕ್ಕಳ ಬಗೆಗೆ ಇವರಿಗೇನಾದರೂ ಕಾಳಜಿ ಇದೆಯಾ, ಅದಕ್ಕೇನಾದರೂ ಇವರ ಬಳಿ ಉತ್ತರ ಇದೆಯಾ?. ನಮ್ಮಗಳ ಸಹನೆ ನಮ್ಮ ದುರ್ಬಲತೆ ಅಲ್ಲ.ನಮಗೂ ಧ್ವನಿ ಇದೆ ಹೋರಟದ ಕಿಚ್ಚು ನಮ್ಮ ಎದೆಯಲ್ಲಿ ಇದೆ. ಆ ಕಿಚ್ಚಿನಿಂದ ಅಸಮಾನತೆ ಸುಡೋ ಶಕ್ತಿ ಇದೆ ಅಂತ ನಿರೂಪಿಸೋ ಸಮಯ ಬಂದಿದೆ.” ರೋಷದಿಂದ ಅವರು ಮಾತಾಡುತ್ತಿದ್ದರು. ಮುಂದಿನ ತಿಂಗಳು ಡಿ.ಸಿ. ಆಫೀಸಿನ ಎದುರಿನ ಅಮಾನಿಕೆರೆ ಅಂಗಳದಲ್ಲಿ ಇದರ ವಿರುದ್ಧ ನಡೆಯುವ ತಮಟೆ ಚಳುವಳಿಗೆ ತಪ್ಪಿಸದೇ ಬಂದು ನಿಮ್ಮ ಪ್ರತಿರೋಧ ದಾಖಲಿಸಿ ಎಂದು ಕೆಲವು ಕರಪತ್ರ ಕೊಟ್ಟು ಹೊರಟು ಹೋದರು. ಜೀವನ ಮರುಕ್ಷಣವೇ ತನ್ನ ಹಳಿಗೆ ಮರಳಿತು.
“ತಮಟೆ ಇದ್ರೆ ಬಾ ಜೊತೆ ಹೋಗನ” ಸೀನಪ್ಪ ಮೂರ್ನಾಲ್ಕು ಜನರೊಟ್ಟಿಗೆ ಚೇಳೂರಿನ ಕರಿಯಮ್ಮ ದೇವರಿಗೆ ವಾದ್ಯಕ್ಕೆ ಹೋಗುವಾಗ ಅಂದಿದ್ದ. ಮೂರ್ನಾಲ್ಕು ದಿನದ ಜಾತ್ರೆಯಾದ್ದರಿಂದ ಒಳ್ಳೆ ದುಡಿಮೆಯಂತೂ ಆಗುತ್ತಿತ್ತು.
“ನೀನೇ ನೋಡಿದ್ಯಲ್ಲಾ ಎಂಗೆ ಆಗೈತೆ ಅಂತ. ಮಧುರೆ ಜಾತ್ರೆ ಆಗ್ಲಿ. ಆ ನಮ್ಮವ್ವ ಕಣ್ ಬಿಟ್ರೆ ವರ್ಸ್ವೆಲ್ಲಾ ಉಣ್ಬೋದು”
ಸ್ವಲ್ಪ ಹಿಂಜರಿಕೆಯಿಂದಲೆ ಸೀನಪ್ಪ “ಹಂಗೆ ಆಗ್ಲಿ. ಬರೋ ಹಂಗಿದ್ರೆ ಮೊಟಣ್ಣನ್ ತಮಟೆ ವಡಿವಂತೆ. ಅವ್ನಿಗೆ ಒಂದೀಟ್ ಕಾಸ್ ಕೊಟ್ರೆ ನಡಿತೈತೆ. ಅವ್ನು ಬತ್ತಾ ಇಲ್ಲ” ಎನ್ನುತ್ತಾ ತಮಟೆಯ ಹಿಂಬದಿ ಹುರಿ ಬಿಗಿಗೊಳಿಸಿದ.
ರೊಚ್ಚಿಗೆದ್ದ ನರಸುಮ್ಮಣ್ಣ “ಅಯ್ಯೋ ಅವ್ನ ಮಕಕ್ ನನ್ ಎಕ್ಡ ಸಿಗಾಕ. ತಮಟೆ ಚರ್ಮ ಇದ್ರು ಇಲ್ಲ ಅಂತಾನೆ. ಅವ್ನಂತಾವ್ ಏನ್ ಕೇಳದು ಬಿಡ ಸೀನಪ್ಪ” ಮೊಟಣ್ಣನ ಬುದ್ಧಿ ಗೊತ್ತಿದ್ದರಿಂದ ಸೀನಪ್ಪ ಮತ್ತೂ ಬಲವಂತ ಮಾಡುವುದಕ್ಕೆ ಹೋಗಲಿಲ್ಲ
ಏನೋ ಜ್ಞಾಪಿಸಿಕೊಂಡವನಂತೆ ಮರಳಿ “ಮೊನ್ನೆ ಸ್ವಾಂದೇನಾಹಳ್ಳಿ ಯಜಮಾನ್ರು ಸಿಕ್ಕಿದ್ರು. ಆ ಊರಿನ ಮಾರಮ್ಮನ್ ಜಾತ್ರೆಗೆ ಕುಂಭಿ ಮನೆಯಿಂದ ಸೋಮನ ಕುಣಿಸೋಕೆ ಇದ್ರೆ ಹೇಳು ಅಂತ ಅಂದ್ರು. ಕೇಳಿ ಹೇಳ್ತಿನಿ ಅಂದೆ ”
ಸೋಮ ಎನ್ನುತ್ತಲೆ ಮ್ಲಾನವದನನಾದ ನರಸುಮ್ಮ “ ನಿಂಗೆ ಗೊತ್ತಲ್ಲ ಸೀನಪ್ಪ. ಹತ್ ಹದಿನೈದು ಕೆಜಿ ಸೋಮನ್ನ ಕುಣಿಸೋ ತ್ರಾಣ ನನಗಿಲ್ಲ. ವಯಸ್ಸಿನ ಹುಡುಗುರೇ ಹಿಂದೆ ಮುಂದೆ ನೋಡ್ತಾರೆ ಈಗ. ನಂಕೈಲಿ ಆಗಕಿಲ್ಲ ಬಿಡು”.
ತಡವಾಯಿತು ಎನ್ನುತ್ತಾ. ತನ್ನ ಬೆಟಾಲಿಯನ್ನು ಬೆನ್ನಿಗಂಟಿಕೊಂಡು ಸೀನಪ್ಪ ಹೊರಟುಹೋದ. ತಮಟೆ ಅರೆಗಳನ್ನು ನೋಡಿ ತಾನೇನೊ ಗುಂಪಿಗೆ ಸೇರದ ಪದವಾಗಿಬಿಟ್ಟೆನಾ ಎಂದು ಎನಿಸತೊಡಗಿತು.
ಕೊನೆಯ ಬಾರಿ ಮೊಟಣ್ಣನ ತಮಟೆ ಬಡಿದದ್ದಕ್ಕೆ ಬಂದ ಐವತ್ತು ರೂಪಯಿಯಲ್ಲಿ ನಲವತ್ತು ಅವನೆ ಇಸಿದು ಕೊಂಡಿದ್ದ. ಮೂವತ್ತಕ್ಕೆ ಮಾತಾಡಿದ್ದನಾದರೂ “ಹತ್ತು ಇರಲಿ. ಮುಂದಿನ ಸಲಿ ಹೋಗುವಾಗ ಅದಕ್ಕೆ ಸಮಾ ಮಾಡ್ಕಳನ” ಎಂದು ಹೇಳಿ ತೆಪ್ಪಗಾಗಿಸಿದ್ದ. ಉಚ್ಚೇಲಿ ಮೀನ್ ಹಿಡಿಯೋ ಅಂತವನ ಬಳಿ ಸಹಾಯ ಕೇಳಿದ್ದೆ ತಪ್ಪು ಅನಿಸಿತು. ದೊಡ್ಡ ಮಧುರೆ ಜಾತ್ರೆ ಮುಗಿದು ಇದೆಲ್ಲದರಿಂದ ಬೇಗ ಮುಕ್ತಿ ಸಿಕ್ಕರೆ ಸಾಕಿತ್ತು.
ಹೆಂಡತಿ ಸಾಕವ್ವನೊಟ್ಟಿಗೆ ಐದು ಮೈಲಿ ದೂರದ ದೊಡ್ಡ ಮಧುರೆಗೆ ನಡೆದುಹೋಗುತ್ತಿದ್ದರು.ಮಧ್ಯಾಹ್ನದ ಉರಿಬಿಸಿಲು ಕರಗಿ ತಂಪೊತ್ತು ಆವರಿಸಿದಾಗ ಹೊರಟು ಕತ್ತಲು ಕವಿಯುವ ಮೊದಲೆ ಮಗಳ ಮನೆ ಸೇರಿದರು. ತಂದೆ ತಾಯಿಯ ಕಂಡು ಮಗಳು ಪುಟ್ಟಕ್ಕನ ಸಂತಸ ಇಮ್ಮಡಿಯಾಯಿತು.”ಇದ್ಯಾಕಪ್ಪ ಕಣ್ ಎಲ್ಲಾ ಒಳಿಕ್ ಹೋದಂಗೆ ಆಗೈತೆ. ಉಷಾರಿಲ್ವಾ??” ಅಂತೆಲ್ಲಾ ವಿಚಾರಿಸತೊಡಗಿದಳು. ವಯಸ್ಸಾಗುತ್ತಿರುವ ಕೊಡುಗೆಗಳು ಎಂದು ಹೇಳಿ ಮಗಳಿಗರ ಸುಮ್ಮನಾಗಿಸಿದ.ಮಗಳಿಗೆ ಎಂತದೋ ಆತಂಕ. ಮಕ್ಕಳಿಗೆ ತಮ್ಮ ಪೋಷಕರಿಗೆ ವಯಸ್ಸಾಗುತ್ತಿದೆ ಎಂದು ಅರಿವಾಗದತೊಡಗಿದಾಗ ಒಂದು ಬಗೆಯ ದಿಗಿಲಾಗುತ್ತದೆ. ಕಣ್ಣಿನ ತುಂಬ ನೀರು ತುಂಬಿಕೊಂಡು”ಇಲ್ಲೆ ಬಂದು ಇರಪ್ಪ. ನಮ್ಜೊತೆನೆ” ಎಂದಳು. ಅಳಿಯನ ದುಡಿಮೆಯ ಅರಿವಿದ್ದುದರಿಂದ ಇದನ್ನು ನಯವಾಗೆ ತಿರಸ್ಕರಿಸಿದ.ಮಗಳು ಸುಮ್ಮನಾದಳು. ಅಳಿಯನು ಜಾತ್ರೆ ಗಡಿಬಿಡಿಯಲ್ಲಿ ತೊಡಗಿಕೊಂಡಿದ್ದ. ಮನೆಯಲ್ಲಿ ಮರುದಿನದಿಂದ ಹಬ್ಬದ ಸಂಭ್ರಮ.
ಪ್ರತೀ ಸಲದಂತೆ ಬೆಳಗ್ಗೆ ಆರಕ್ಕೆಲ್ಲಾ ಕೋಣದ ಬಲಿ ನಡೆಯುತ್ತಿತ್ತು. ಸರಸುಮ್ಮನಿಗೆ ರಾತ್ರಿಯೆಲ್ಲಾ ನಿದ್ದೆ ಸರಿಯಾಗಿ ಬರಲಿಲ್ಲ. ಕಣ್ಣು ಮುಚ್ಚಿದರೆ ತಮಟೆಯ ಸದ್ದು ಕಿವಿ ತುಂಬುತ್ತಿತ್ತು. ಇನ್ನು ಕತ್ತಲು ಇರುವಾಗಲೆ ಒಂದು ಚೂರಿ ಗೋಣಿಚೀಲ ಕೈಲಿಡಿದು ಬರಬರನೆ ಹೆಜ್ಜೆ ಹಾಕತೊಡಗಿದ. ಬಿಳಿ ಪಂಚೆ. ದೊಗಲೆ ಅಂಗಿ. ಮಣಿಕಟ್ಟಿನವರೆಗೂ ಬಂದ ಅಂಗಿಯ ತೋಳು. ಅರ್ಧ ತುಂಡಾಗಿದ್ದ ಅಂಗಿಯ ತೋಳಿನ ಗುಂಡಿಗಳು. ದೇವಸ್ಥಾನದ ಬಳಿ ಬಂದರೆ ಅಲ್ಲಿ ಎಲ್ಲವು ಖಾಲಿ. ಬೆಳಗ್ಗೆ ಇನ್ನು ಕತ್ತಲೆ ಇರುವಾಗಲೆ ಬಂದಿದ್ದರಿಂದ ಕೊಂಚ ಸಮಯ ಆಗಬಹುದೆಂದು ಕಾಯಬೇಕೆಂದುಕೊಂಡ. ಆದರೆ ವಧಾಸ್ಥಂಭದಲ್ಲಿ ಕೋಣ ಕಾಣದೆ ಇರುವುದ ಕಂಡು ದಿಗಿಲಾಯಿತು. ಕರಿಕವರಿನಲ್ಲಿ ಗುಡ್ಡೆಬಾಡು ತುಂಬಿ ನಡೆಯುತ್ತಿದ್ದವರೊಬ್ಬರು ಕಣ್ಣಿಗೆ ಬಿದ್ದರು. ಕೋಣವಧೆಯ ಬಗ್ಗೆ ಅವರ ಬಳಿ ವಿಚಾರಿಸಿದ. ಜಿಲ್ಲಾಡಳಿತಕ್ಕೆ ಹೆದರಿ ಹತ್ತಿರದ ಮಾವಿನ ತೋಪಿನಲ್ಲಿ ಕೋಣವಧೆ ನಡೆಯುತ್ತಿದ್ದುದನ್ನ ಅವರು ಹೇಳಿ ನಿಲ್ಲದೇ ಹೊರಟುಹೋದರು. ಆತಂಕಗೊಂಡು ಬೇಗ ಬೇಗನೆ ಹೆಜ್ಜೆ ಹಾಕುತ್ತಿದ್ದ ನರಸುಮ್ಮನ ಉಸಿರಾಟ ಜೋರಾಗುತ್ತಾ ಹೋಯಿತು. ಅಲ್ಲಿ ಹೋಗುವಷ್ಟರಲ್ಲಿ ಎಲ್ಲಾ ಕಾರ್ಯವು ಆಗಲೇ ಮುಗಿದಿತ್ತು. ಉಳಿದಿದ್ದ ಮೂರ್ನಾಲ್ಕು ಗುಡ್ಡೆ ಮಾಂಸಕ್ಕಾಗಿ ದುಡ್ಡು ಕೊಟ್ಟಿದ್ದ ಜನರಿಗೆ ಯುವಕರು ಕಾಯುತ್ತಿದ್ದರು. ಕೋಣ ಕಡಿಯುವ ಅಜಾನುಬಾಹು ತಲವಾರನನ್ನು ವಿಚಾರಿಸಿದಾಗ, ಮೇಲಿಂದ ಕೆಳಗೆ ಇವನನ್ನು ಕೆಕ್ಕರಿಸಿ ” ಇಂತ ವತ್ನಲ್ಲಿ ಕೋಣ ಕಡ್ದಿದ್ದೆ ಹೆಚ್ಚು ಅಂತದ್ರಲ್ಲಿ ಚಕ್ಕಳ ಯಾವನ್ ನೋಡ್ಕೊಂಡ್ ಕುತ್ಕೊತಾನೆ. ಅಲ್ಲೆ ಬೇಲಿ ಮೇಲೆ ಎಸ್ದಿರ್ಬೇಕು ನೋಡು..” ಎನ್ನುತ್ತಾ ಬಾಯಲ್ಲಿದ್ದ ಬಿಡಿಯ ತುಂಡು ಹೊರತೆಗೆದು ಅದರ ಅಂಡಿನ ಮೇಲೆ ನಯವಾಗಿ ನಾಟಿದ. ಬೆಳ್ಳಗಾಗಿದ್ದ ಬೂದಿ ಮೂರ್ನಾಲ್ಕು ಹೋಳಾಗಿ ನೆಲದ ಮೇಲೆ ಬಿದ್ದಿತು. ನರಸುಮ್ಮನಿಗೆ ಎದೆಯೇ ಒಡೆದು ಹೋದಂತಾಯಿತು. ಅಳಿಯನಿಗೆ ಹೇಳಿದ್ದನಾದರೂ ಗಲಾಟೆಯ ಮಧ್ಯೆ ಮತ್ತೆ ಜ್ಞಾಪಿಸುವುದನ್ನು ಮರೆತಿದ್ದ. ಅವನು ಕೈತೋರಿಸಿದ ಬೇಲಿಯ ಕಡೆ ಓಡತೊಡಗಿದ. ಅಲ್ಲಿ ಹೋದಾಗ ಅಲ್ಲಿದ್ದ ದೃಶ್ಯ ಕಂಡು ಯಾರೋ ಕರುಳು ಹೊರಗೆಳೆದಂತಾಯಿತು. ಮಾಂಸದ ವಾಸನೆ ಅರಸಿ ಬಂದಿದ್ದ ಬೀದಿನಾಯಿಗಳು ಹಸಿ ಕೋಣದ ಚರ್ಮವನ್ನು ದರದರನೆ ಎಳೆದು ತಿನ್ನುತ್ತಿದ್ದವು. ಎಳೆದೆಳೆದು ಸುಸ್ತಾಗಿದ್ದ ನಾಯಿಗಳು ನಾಲಿಗೆ ಹೊರಚಾಚಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದವು. ಅದಾಗಲೆ ತುಂಡು ತುಂಡಾದ ಅಂಗೈ ಅಗಲ ಚರ್ಮ ಅಲ್ಲಲ್ಲಿ ಬಿದ್ದಿದ್ದವು. ಸಾವರಿಸಿಕೊಳ್ಳುತ್ತಾ ಭಾರವಾದ ಹೆಜ್ಜೆ ಇಡುತ್ತಾ ಮಗಳ ಮನೆಯ ದಾರಿ ಹಿಡಿದ. ಹೋಗುವಾಗ ಇದ್ದ ನಾಲ್ಕು ಗುಡ್ಡೆ ಮಾಂಸವೂ ಖಾಲಿಯಾಗಿತ್ತು.
ದೇವಸ್ಥಾನ ಹಾದು ಹೋಗುವಾಗ ನಾಡಿದ್ದು ನಡೆಯುವ ಸ್ವಾಂದೇನಾಹಳ್ಳಿಯ ಜಾತ್ರೆ ನೆನಪಿಗೆ ಬಂದು ಹೊಸ ಚೈತನ್ಯ ಮೂಡಿದಂತಾಯಿತು. ಬೇಗ ಹೋಗಿ ಕಾದರೆ ಸಿಗುಬಹುದಾದ ಸಾಧ್ಯತೆಯೂ ನೆನಪಿಗೆ ಬಂತು. ಬೆಳಗ್ಗೆ ಏನೂ ತಿನ್ನದೆ ಬಂದಿದ್ದಕ್ಕೋ ಹೆಚ್ಚು ಓಡಾಡಿದ್ದಕ್ಕೋ ಹಸಿವು ಹೊಟ್ಟೆಯನ್ನು ಸುಡುತ್ತಿರುವ ಅನುಭವವಾಯಿತು.ಅಲ್ಲೂ ಹಿಂಗೆ ಏನಾದರೂ ಆಗಿದ್ದರೆ ಅನಿಸಿ ಮತ್ತೂ ದಿಗಿಲುಗೊಂಡ. ಇತ್ತಕಡೆ ಸಾಕವ್ವ ತಟ್ಟೆಯ ಮುಂದೆ ಕೂತು ಗಂಡನಿಗೆ ಕಾಯುತ್ತಿದ್ದಳು. ಸ್ವಲ್ಪ ಹೊತ್ತು ಕಾದು ಅಳಿಯನನ್ನು ಕಳುಹಿಸುವ ಯೋಚನೆಯಲ್ಲಿದ್ದಳು. ನರಸುಮ್ಮನಿಗೆ ವರ್ಷದ ಕೂಳಿನ ಮುಂದೆ ಎಲ್ಲವೂ ನಗಣ್ಯ ಎನಿಸಿತು. ಮನೆಯ ದಾರಿಯ ಕಡೆ ತಿರುಗಲಿಲ್ಲ.
ದೊಡ್ಡ ಮಧುರೆಯ ಕೆರೆಯ ಏರಿ ಹತ್ತಿ ಇಳಿದರೆ ಸ್ವಾಂದೇನಾಹಳ್ಳಿಗೆ ಎರಡು ಮೈಲಿಯ ದಾರಿ. ನೀರಿಲ್ಲದೆ ಬಣಗುಡುತ್ತಿದ್ದ ಮಧುರೆಯ ಕೆರೆ ಇವನ ದಾಹ ತೀರಿಸುವ ಶಕ್ತಿಯನ್ನು ಕಳೆದುಕೊಂಡಿತ್ತು. ಊರು ಹತ್ತಿರವಾಗುತ್ತ ಹೆಜ್ಜೆಗಳು ಶಕ್ತಿ ಕಳೆದುಕೊಳ್ಳುತ್ತಿದ್ದವು. ಕಂಕುಳಲ್ಲಿ ಇದ್ದ ಗೋಣಿಚೀಲ ಬೆವರನ್ನ ಹೊದ್ದಿಕೊಂಡಿತ್ತು. ಮಾರಮ್ಮ ಗುಡಿಯ ಬಳಿ ಬರುತ್ತಿದ್ದಂತೆ ಕೋಣ ಕಂಡಂತಾಗಿ ಹೊಸ ಚೈತನ್ಯ ಮೂಡಿತು. ತನ್ನ ಮುಂದಿದ್ದ ಸಾವನ್ನು ಕಡೆಗಣಿಸಿ ತಂದು ಹಾಕಿದ್ದ ಒಣ ಹುಲ್ಲನ್ನು ಸಾವಕಾಶವಾಗಿ ಮೆಲ್ಲುತ್ತಿತ್ತು. ಕಣ್ಣು ಎವೆಯಿಕ್ಕದೆ ಅದನ್ನೆ ನರಸುಮ್ಮ ನೋಡುತ್ತಿದ್ದ. ಇನ್ನೆರಡು ದಿನ ಜೀವ ಹಿಂಗಿದರೂ ಈ ಜಾಗ ಬಿಟ್ಟು ಒಂದಿಂಚೂ ಕದಲಬಾರದೆಂದು ನಿರ್ಧರಿಸಿದ. ನಿಧಾನವಾಗಿ ಅದರ ಹತ್ತಿರ ಹೋಗಬೇಕೆಂದೆನಿಸಿತು.
ಹತ್ತಿರವಾಗುತ್ತಿದ್ದಂತೆ ಯಾರೋ ಕೈ ಹಿಡಿದು ಜಗ್ಗಿದರೆನಿಸಿ ತಿರುಗಿದ. ಖಾಕಿ ಬಟ್ಟೆ ತೊಟ್ಟಿದ್ದ ಕ್ಯಾತ್ಸಂದ್ರ ಠಾಣೆಯ ದಪ್ಪೆದಾರ್ “ನಿಂತ್ಕಳೋ ಕುಡುಕ್ ಬೇವರ್ಸಿ ನನ್ ಮಗನೆ. ಎಲ್ಲಿಗ್ ದನ ನುಗ್ದಂಗೆ ನುಗ್ತಿದ್ಯಾ…” ಎನ್ನುತ್ತಾ ಹಿಂಬದಿ ಕೊರಳಪಟ್ಟಿ ಹಿಡಿದು ಎಳೆದು ಬಿಸಾಡಿದ.ಬಿದ್ದ ರಭಸಕ್ಕೆ ಮೈಯೆಲ್ಲಾ ಕೊಂಚ ಮಣ್ಣಾದಂತಾಯಿತು. ಯಾವುದೋ ಟೆಂಪೊ ಹಿಂಬದಿಯಿಂದ ಒಂದು ಹಲಗೆ ಇಳಿಬಿಟ್ಟು ಕೋಣವನ್ನು ಅದರ ಮೂಲಕ ಅದರೊಳಗೆ ಹತ್ತಿಸಿದರು. “ತುಮಕೂರು ಜಿಲ್ಲಾಡಳಿತ” ಎಂದು ವಾಹನದ ಮೇಲೆ ಮಾಡಿದ್ದ ಪೈಂಟು ಅಲ್ಲಲ್ಲಿ ಬಣ್ಣ ಕಳೆದುಕೊಂಡಿತ್ತು. ಜಿಲ್ಲಾಡಳಿತದ ವತಿಯಿಂದ ಬಂದಿದ್ದ ಒಂದಿಬ್ಬರು ಊರಿನ ಗೋಡೆಯ ಮೇಲೆ ನಿಷೇಧ ಕಾಯ್ದೆಯ ಪೋಸ್ಟರ್ ಅಂಟಿಸಿದರು. ಕೋಣ ತನ್ನ ಬಾಯಲ್ಲಿದ್ದ ಒಣ ಹುಲ್ಲು ಹಾಗೆ ನಿಧಾನವಾಗಿ ಮೆಲ್ಲುತ್ತಾ ಟೆಂಪೋದೊಳಗಿಂದ ನಿರ್ಭಾವುಕತೆಯಿಂದ ಊರ ಜನರನ್ನು ನೋಡುತ್ತಿತ್ತು. ಟೆಂಪೋಗಾಡಿ ದೂಳಿನ ಮರೆಯಲ್ಲಿ ಕಾಣದಾಯಿತು. ಅದರ ಹಿಂದೆ ಕ್ಯಾತ್ಸಂದ್ರ ಪೋಲೀಸರ ಗಾಡಿ ಕೂಡ ಓಡತೊಡಗಿತು. ಊರಿನ ಯಾವ ಗಂಡಾಳೂ ಇದನ್ನು ತಡೆಯಲಿಲ್ಲ.
ಸಾವರಿಸಿಕೊಂಡು ಎದ್ದ ನರಸುಮ್ಮನಿಗೆ ಆಕಾಶವೇ ಕಳಚಿ ತನ್ನ ಮೇಲೆ ಬಿದ್ದಂತಾಯಿತು. ಜಾತ್ರೆಯ ಸಿದ್ದತೆಯಲ್ಲಿದ್ದ ಊರಿನ ಹಟ್ಟಿಯ ಯಜಮಾನ್ರು ಕೂಡ ವಾಹನ ತಡೆಯದೆ ಹಾಗೆ ನಿಂತಿದ್ದರು. ದೇವಾಲಯದ ಪ್ರಾಂಗಣದಲ್ಲಿ ಜಾತ್ರೆಯ ಸಿದ್ಧತೆಗೆ ವಾದ್ಯ ಹೊತ್ತಿದ್ದ ಸ್ವಾಂದೆನಹಳ್ಳಿಯ ಯುವಕರು “ನೆನ್ನೆನೆ ಕಡ್ದಾಕಿದ್ರೆ ಆಗಿರದು ಮದ್ರೆ ಹುಡ್ಗುರಂಗೆ…” ಎನ್ನುತ್ತಾ ತಪ್ಪಿದ ಅವಕಾಶಕ್ಕೆ ಕೈ ಕೈ ಹಿಸುಕಿಕೊಂಡರು. ನರಸುಮ್ಮನಿಗೆ ಕಣ್ಣಿಗೆ ಕತ್ತಲು ಕವಿದಂತಾಯಿತು. ಕಣ್ಣಿಂದ ಧಾರಾಕಾರವಾಗಿ ನೀರು ಹರಿಯಲು ಶುರುವಾದವು. ತಂದೆ ಕುಂಭಯ್ಯ, ಹೆಂಡತಿ ಸಾಕವ್ವ, ಸೀನಪ್ಪ, ಮೊಟಪ್ಪ, ಮಗಳು ಪುಟ್ಟವ್ವ ಎಲ್ಲರೂ ಕಣ್ಣ ಮುಂದೆ ಬಂದರು. ಚೀಲ ಚೂರಿ ಬಿಸುಟು ಮಾರಮ್ಮ ಗುಡಿಯ ಮುಂದೆ ನಿಂತು ರೋಧಿಸತೊಡಗಿದ. ಕೆಲವರಿಗಷ್ಟೆ ಅಲ್ಲಿ ಪರಿಚಯವಿದ್ದುದರಿಂದ ಕಂಡೂ ಕಾಣದಂತೆ ಸುಮ್ಮನಾದರು.
ಕಾಲುಗಳನ್ನು ಅಲ್ಲಿಂದ ಕೀಳಲಾಗಲಿಲ್ಲ. ದಪ್ಪೆದಾರ್ ಬಿಸುಟ ರಭಸಕ್ಕೆ ಕಾಲ್ಬೆರಳ ಸಂದುಗಳಿಂದ ರಕ್ತ ಒಸರತೊಡಗಿತು. ಉರುಳುತ್ತಾ ಅವನು ಕೊಂಡ ಹಾಕುವ ಜಾಗದಲ್ಲಿ ಬಿದ್ದಿದ್ದ. ಅಣ್ಣ ರಂಗಯ್ಯ ಗಾಢವಾಗಿ ನೆನಪಾಗತೊಡಗಿದ. ಮಾರಮ್ಮನ ದೇವಾಲಯದ ಬಾಗಿಲು ತೆರೆದಿತ್ತು. ವಾಪಸ್ಸಾಗುತ್ತಿದ್ದ ಊರ ಜನರು ಆಗುತ್ತಿದ್ದ ಅನಿಶ್ಚಿತ ಘಟನೆ ಕಂಡು ತಿರುಗಿನಿಂತರು. ರೌದ್ರ ಸೋಮನನ್ನು ಹೊತ್ತ ನರಸುಮ್ಮ ಕೋಣವಧೆಯ ಜಾಗದಲ್ಲಿ ನಿಂತು ಉನ್ಮತ್ತನಾಗಿ ಕುಣಿಯತೊಡಗಿದ. ಪ್ರತೀ ಹೆಜ್ಜೆಗೂ ನೆಲ ಕಂಪಿಸಿದಂತಾಗುತ್ತಿತ್ತು. ವಾದ್ಯ ಹೊತ್ತಿದ್ದ ಹುಡುಗರು ತಮಗರಿವಿಲ್ಲದಂತೆ ಶುರುಮಾಡಿದರು. ತಮಟೆ ಹರೆ ದೋಣು ಜಿದ್ದಿಗೆ ಬಿದ್ದವಂತೆ ಊರಿನ ಸುತ್ತ ಆದೆಷ್ಟೋ ಶತಮಾನಗಳಿಂದ ನಿಂತಿದ್ದ ಬೆಟ್ಟಗುಡ್ಡಗಳು ಪ್ರತಿಧ್ವನಿಸುವಂತೆ ಬಾರಿಸತೊಡಗಿದವು. ಊರಿನ ಜನ ಅಪ್ರಚೋದಿತರಾಗಿ ಕೈಮುಗಿದು ನಿಂತರು. ಯಾರೋ ಒಂದು ಬಿಂದಿಗೆಯಲ್ಲಿ ನೀರು ತಂದು ರಕ್ತ ಒಸರುತ್ತಿದ್ದ ನರಸುಮ್ಮನ ಕಾಲಿಗೆ ನೀರು ಸುರಿದು ಅರಿಶಿಣ ಕುಂಕುಮ ಇಟ್ಟರು. ದೇವಸ್ಥಾನದ ಆವರಣದಲ್ಲಿ ಕುಣಿದ ಮೇಲೆ ಬಂದ ದಾರಿಯ ಕಡೆಗೆ ಹಜ್ಜೆಗಳು ಹೋಗತೊಡಗಿದವು. ಕುಣಿಯುತ್ತಾ ದೊಡ್ಡ ಮಧುರೆ ಕೆರೆ ಏರಿ ಮೂಲಕ ಕೊಂಡಜ್ಜಿ ದಾರಿ ಹಿಡಿದಾಗಿತ್ತು. ಬಂದ ದಾರಿಯಲ್ಲಿ ವಾದ್ಯಗಳು ಹೆಜ್ಜೆಗಳಿಗೆ ಅನುಗುಣವಾಗಿ ಝೇಂಕರಿಸುತ್ತಿದ್ದವು. ಸಾಕವ್ವ ಆಗಲೇ ಗಂಡನನ್ನು ಹುಡುಕಿಕೊಂಡು ಊರ ದಾರಿಯಲ್ಲಿ ಕಾಯುತ್ತಿದ್ದಳು. ಗಂಡನನ್ನು ಕಂಡು ದಿಗ್ಬ್ರಾಂತಳಾದಳು. ನರಸುಮ್ಮನಿಗೆ ಯಾರೂ ಕಣ್ಣಿಗೆ ಬೀಳುತ್ತಿರಲಿಲ್ಲ. ಕೊಂಡಜ್ಜಿಗೆ ಬರುವಷ್ಟರಲ್ಲಿ ಮೂರು ಊರಿನ ವಾದ್ಯದವರು ಜೊತೆಗೂಡಿದ್ದರು. ದಿನ ರಾತ್ರಿಗಳು ಉರುಳಿದರೂ ಸೋಮನ ಕುಣಿತ ನಿಲ್ಲಲಿಲ್ಲ. ತ್ರಾಣ ಇರೋಗಂಟ ಕುಣಿತ ಸಾಗಬೇಕಿತ್ತು.
ಕಥೆಗಾರರ ಪರಿಚಯ:
ಚಂದ್ರಶೇಖರ ಡಿ.ಆರ್.
ತುಮಕೂರಿನಲ್ಲಿ ಹುಟ್ಟಿ ಬೆಳೆದು ಇದೀಗ ಹತ್ತು ವರ್ಷದಿಂದ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಸೇವೆ. ಪ್ರಸಕ್ತ ಮಧುಗಿರಿಯಲ್ಲಿ ಡೆಪ್ಯುಟಿ ಮ್ಯಾನೇಜರ್. ಅಕ್ಷರಗಳೆಂದರೆ ಖುಷಿ.