Site icon Vistara News

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಆತ್ಮದ ಗಿಡುಗ

atmada giduga short story manjunath latha

:: ಮಂಜುನಾಥ್‌ ಲತಾ

ಕತೆಗಾರ ರೂಪಕನಿಗೆ ಬಿದ್ದ ತುಣುಕು ಕನಸು

ಅತ್ತಲಿಂದೊಂದು ಹೆಣ್ಣು ಧ್ವನಿ; ಇತ್ತಲಿಂದೊಂದು ಗಂಡು ಧ್ವನಿ.

“ನಾನು ಸಾರ್… ಅವತ್ತು ನಿಮ್ಮ ಮನೆಗೆ ಬಂದಿದ್ದೆನಲ್ಲ ‘ಆತ್ಮಮಾರ್ಜಕ ತೈಲ’ ಮಾರೋಕೆ. ಅದು ನಾನೇ” ಎಂದಿತು ಹೆಣ್ಣು ಸ್ವರ.

ಕಿಸಕ್ಕನೆ ನಕ್ಕ ಗಂಡು ಧ್ವನಿ “ಅದ್ಯಾವುದು ಸಾರ್ ಆತ್ಮ ತೊಳೆಯೋ ಎಣ್ಣೆ? ದೇಹದ ಕೊಳೆ ತೊಳೀಬಹುದು. ಆತ್ಮದ ಜಿಡ್ಡು ಕಳೀಬಹುದಾ?” ಎಂದಿತು.

ಬೆಚ್ಚಿದವನಂತೆ ಎಚ್ಚರಗೊಂಡ ಕತೆಗಾರ ರೂಪಕ ‘ಇದೇನು? ನಾನು ಯೋಚಿಸಿದಂತೆ ಕತೆ ಸಾಗುತ್ತಿಲ್ಲವಲ್ಲ’ ಎಂದು ಆತಂಕದಿಂದ ಮತ್ತೆ ತಿದ್ದಲು ಕುಳಿತ.


ಎಂದೂ ಮುಖ ತಗ್ಗಿಸಿ ಕುಳಿತಿರದ ಚಿಂತಾಮಣಿ ತೋಳುಗಳ ಒಳಗೆ ಮುಖ ಹುದುಗಿಸಿದ್ದಳು; ಒಳಗೆ ತಳಮಳ ಕುದಿಯುತ್ತಲೇ ಇತ್ತು. ರೂಪಕ ಮನೆಯೊಳಗೆ ಬರುತ್ತಲೇ ಏನೋ ಹೇಳಬೇಕೆಂದುಕೊಂಡವಳು ಅವನ ಪ್ರಶ್ನೆಯನ್ನು ಎದುರುಗೊಂಡಳು.

“ನಿಮ್ಮ ನಿರ್ಧಾರ ಕ್ರೂರ ಅನ್ನಿಸ್ತಿಲ್ವೆ ಚಿಂತಾಮಣಿ?”

ಸ್ವಲ್ಪವೇ ಉಸಿರಾಟ ಹಿಡಿತಕ್ಕೆ ಬಂದವಳಂತೆ “ನಂಗೇನೋ ಕ್ರೂರ ಅನ್ನಿಸ್ತಿಲ್ಲ...ಆದ್ರೆ ಸ್ವಲ್ಪ ವಿಚಿತ್ರ ಅನ್ನಿಸ್ತಿದೆ ಅಷ್ಟೆ...” ಎನ್ನುತ್ತಾ ಬಿಕ್ಕಳಿಸಲು ಹೋದವಳು ಸುಮ್ಮನಾದಳು.

“ಅಂದ್ರೆ ? ಗಂಡ ಸಾಯ್ಬೇಕು ಅಂದುಕೊಳ್ಳೋದು ಕ್ರೌರ್ಯ, ಕೊಲೆಗೆ ಪ್ರಚೋದನೆ, ಕ್ರೈಂ ತಾನೆ?”

“ಇವುಗಳನ್ನ ವ್ಯತ್ಯಾಸ ಮಾಡಿ ನೋಡೋದ್ರಿಂದ ಬದಲಾವಣೆಯೇನೂ ಆಗೋದಿಲ್ಲ...”

ಚಿಂತಾಮಣಿಯ ಮಾತುಗಳ ಹಿಂದೆಯೇ ರೂಪಕನಿಗೆ ಕನಸು ಮರುಕಳಿಸಿದಂತಾಯಿತು. ತನ್ನ ಉಗುಳ ತಾನೇ ನುಂಗಿದಂತೆ ಅವನದೇ ಮಾತುಗಳು ಒಳಗೆ ಇಳಿಯತೊಡಗಿದವು: 

‘ನಾನು ಅಂದುಕೊಂಡದ್ದು ಇದಲ್ಲ…ನೀವು ನಿಮ್ಮ ನಿಮ್ಮ ಆತ್ಮಗಳ ತಿಕ್ಕಾಟದಲ್ಲಿ ತೊಡಗೋದ್ರಿಂದ ಹೆಚ್ಚು ಹೆಚ್ಚು ಹತ್ತಿರವಾಗಬಹುದು ಅಂತ ಆಲೋಚನೆ ಮಾಡ್ತಾ ಇದ್ದೆ…’

ಚಿಂತಾಮಣಿಯ ಬಿಕ್ಕಳಿಕೆ ಉಕ್ಕತೊಡಗುತ್ತಲೇ ಬಿಸಿಲಿಗೆ ಬಿದ್ದ ಹುಳುವಿನಂತೆ ಆಚೆ ಬಂದ ರೂಪಕ “ನಿಮಗೆ ನಿಜವಾಗಿಯೂ ಮಾತನಾಡಬೇಕೆನ್ನಿಸಿದ್ದರೆ ಮಾತಾಡಿ... ನನ್ನ ಒತ್ತಾಯವೇನೂ ಇಲ್ಲ...” ಎಂದ. 

“ನನ್ನ ಗಂಡ ದೈಹಿಕವಾಗಿ ಸತ್ತು ಹೋದರೆ ಚೆನ್ನ ಅಂತ ನನಗನ್ನಿಸಿದ್ದು ನಿಜ...ಯಾಕೆಂದರೆ ಅವನು ಹಾಗೆ ಮನಸ್ಸು ಕೊಂದುಕೊಂಡು ಬದುಕೋದನ್ನ ನೋಡುತ್ತಾ ನಾನು ಬದುಕೋದು ಸಾವಿಗಿಂತಲೂ ಹಿಂಸೆ...”

“ಹೊಡೆದು ಬಡಿದು ಹಿಂಸೆ ಕೊಡ್ತಾನಾ?”

“ ಓ! ನಿಮಗೆ ಹೊಡೆಯೋದು ಮಾತ್ರ ಹಿಂಸೆ ಅನ್ನಿಸುತ್ತಾ?”

“ ಇಲ್ಲ… ನನಗೆ ಎಲ್ಲಾ ಬಗೆಯ ಹಿಂಸೆಗಳ ಬಗ್ಗೆಯೂ ಗೊತ್ತು… ಯಾವುದು ಹೆಚ್ಚು ಕ್ರೂರ ಅಂತ ಯೋಚಿಸ್ತಿದ್ದೆ ಅಷ್ಟೆ…”

ಏನೂ ಹೇಳಲಾಗದವಳಂತೆ ಚಿಂತಾಮಣಿ ಮೇಲೇಳುತ್ತಲೇ ರೂಪಕ ಮತ್ತೆ ಕತೆಯ ಕನಸು ಬೀಳದಿರಲಿ ಎಂದು ಹಂಬಲಿಸಿದವನಂತೆ ಅಲ್ಲಿಂದ ಹೊರನಡೆದ. 

ವಿವೇಕ ಕೈಗಡಿಯಾರ ನೋಡನೋಡುತ್ತಲೇ ಬೈಕ್ ಓಡಿಸುತ್ತಾ ಪ್ರತಿಭಟನಾ ಸ್ಥಳಕ್ಕೆ ಬಂದು ತಲುಪಿದ. ಅದಾಗಲೇ ರಸ್ತೆಯ ಒಂದು ಮೂಲೆಯಲ್ಲಿ ಪ್ರತಿಭಟನಾನಿರತರ ಗುಂಪು ಸೇರಿತ್ತು. ಸುತ್ತಲೂ ಕಣ್ಣು ಹಾಯಿಸುತ್ತಾ ಹೆಂಗಸರೂ ಗಂಡಸರೂ ಸಮಪ್ರಮಾಣದಲ್ಲಿದ್ದಾರೆ ಎಂದುಕೊಂಡ. ಎಲ್ಲರ ಕೈಯಲ್ಲಿದ್ದ ಫಲಕಗಳ ಮೇಲೆ ‘ಸ್ತ್ರೀ ಚೈತನ್ಯ ವಿರೋಧಿಗಳಿಗೆ ಧಿಕ್ಕಾರ’, ‘ಮನೆಯೇ ಹೆಣ್ಣಿನ ಮೊದಲ ಬಂದಿಖಾನೆ’, ‘ಹೆಣ್ಣನ್ನೂ ನಿಮ್ಮಂತೆಯೇ ನೋಡಿ’ ಮುಂತಾಗಿ ಬರೆಯಲಾಗಿತ್ತು.

ವಿವೇಕನನ್ನು ಕಂಡ ಸಂಘಟನೆಯ ಮುಖಂಡ ಮೈಕ್ ಆನ್ ಮಾಡಿ “ಬಂಧುಗಳೇ, ನಮ್ಮನ್ನೆಲ್ಲ ಉದ್ದೇಶಿಸಿ ಚಿಂತಕರೂ, ಬರಹಗಾರರೂ ಆಗಿರುವ ವಿವೇಕ ಅವರು ಮಾತನಾಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ...” ಎಂದು ಘೋಷಿಸಿ ವಿವೇಕನ ಮುಂದೆ ಮೈಕ್ ಹಿಡಿದ. 

ದೀರ್ಘ ಉಸಿರಿನೊಂದಿಗೆ ವಿವೇಕ ಮಾತು ಆರಂಭಿಸಿದ:

“ನಾನು ನೇರ ವಿಷಯಕ್ಕೆ ಬರ್ತೇನೆ. ಶೋಷಣೆಗೆ ಒಂದೇ ಮುಖವಿಲ್ಲ. ಹಾಗೆಯೇ ಶೋಷಣೆ ಎನ್ನುವ ಪದಕ್ಕೂ ಒಂದೇ ಮುಖವಿಲ್ಲ. ನಮಗೆ ಇಂದು ನಿಜವಾಗಿಯೂ ಬೇಕಾಗಿರುವುದು ವಸ್ತುಸ್ಥಿತಿಯಲ್ಲ… ನಮ್ಮ ವೇದಿಕೆಗಳಿಗೆ ಅನುಕೂಲಕರವಾದ ಸ್ಥಿತಿ…”

ಮೇಲೆ ಎದ್ದವನೊಬ್ಬ “ ಸಬ್ಜೆಕ್ಟ್ ಮೇಲೆ ಮಾತಾಡಿ ಸಾರ್..!” ಎಂದು ಜೋರಾಗಿ ಕೂಗಿದ.

ವಿವೇಕ ಸಾವಧಾನದಿಂದ “ಈಗ ತಾನೇ ಹೇಳಿದೆ ಅಲ್ವೆ, ಸಬ್ಜೆಕ್ಟ್ ಅನ್ನೇ ಆಬ್ಜೆಕ್ಟಿವ್ ಆಗಿ ನೋಡಬೇಕು ಅಂತ. ಉದಾಹರಣೆಗೆ ನನ್ನ ಕುಟುಂಬವನ್ನೇ ತೆಗೆದುಕೊಳ್ಳಿ; ನನ್ನ ಹೆಂಡತಿಗೆ ನಾನು ಎಲ್ಲಾ ರೀತಿಯ ಮುಕ್ತತೆಯನ್ನೂ ಕೊಟ್ಟಿದ್ದೇನೆ. ಆದರೆ ಅವಳು ಅದನ್ನು ಬಳಸಿಕೊಳ್ಳುತ್ತಿಲ್ಲ. ಬದಲಾಗಿ ನನ್ನನ್ನೇ ಕೆಲವು ಕಟ್ಟುಪಾಡುಗಳಿಗೆ ಸಿಕ್ಕಿಸುತ್ತಾಳೆ. ಆದರೂ ನಾನು ಅದನ್ನು ಕಟ್ಟುಪಾಡು ಅಂದುಕೊಳ್ಳೋದಿಲ್ಲ…”

ಗುಂಪಿನಿಂದ ಮತ್ತೊಬ್ಬ “ಸಾರ್ ಸಮಸ್ಯೆನಾ ನೀವು ಪರ್ಸನಲೈಸ್ ಮಾಡ್ತಾ ಇದೀರಾ… ನಿಮ್ಮ ಫ್ಯಾಮಿಲಿ ಮ್ಯಾಟರ್‍ಗೂ ಇದಕ್ಕೂ ಏನ್ಸಾರ್ ಸಂಬಂಧ? ಯಾಕೆ ಚಳುವಳಿಯ ದಿಕ್ಕು ತಪ್ಪಿಸ್ತಿದ್ದೀರಾ?” ಎಂದು ಚೀರಿಕೊಂಡ.
ಸಭೆಯಲ್ಲಿ ಆರಂಭಗೊಂಡಿದ್ದ ಗುಸುಗುಸು ಗದ್ದಲವಾಗತೊಡಗಿತು. ಕುಳಿತವರಲ್ಲಿ ಕೆಲವರು ಎದ್ದು ಕೂಗಾಡತೊಡಗಿದರು. ವೇದಿಕೆಯತ್ತ ನುಗ್ಗಿದ ಒಬ್ಬ ವಿವೇಕನ ಕೈಯಿಂದ ಮೈಕ್ ಕಸಿದು “ದಯವಿಟ್ಟು ಗಲಾಟೆ ಮಾಡಬೇಡಿ…ಅವರು ಚಿಂತಕರು, ಅವರ ಮಾತು ಕೇಳಿಸಿಕೊಳ್ಳಿ” ಎಂದು ಕೂಗಿಕೊಳ್ಳತೊಡಗಿದ.

ಅಷ್ಟೂ ಹೊತ್ತಿನಿಂದ ಗುಂಪಿನಲ್ಲಿ ಕುಳಿತಿದ್ದ ಹೆಂಗಸೊಬ್ಬಳು ಇನ್ನು ತಡೆಯಲಾರೆ ಎಂಬಂತೆ ಎದ್ದು ನಿಂತು “ನಾವೂ ಆವಾಗಿಂದ ನೋಡ್ತಾ ಇದೀವಿ…ಇಲ್ಲಿ ಹೆಂಗಸ್ರು ಇದಾರೆ ಅನ್ನೋದನ್ನೂ ಮರೆತು ನೀವುನೀವೆ ಕಿರುಚಾಡ್ತಾ ಇದೀರಲ್ಲಾ ನೀವು ಯಾವ ಸೀಮೆ ಗಂಡಸ್ರಯ್ಯಾ…! ನಮಗೆ ರೇಷನ್ ಕಾರ್ಡ್ ಕೊಡಿಸ್ತೀವಿ ಅಂತ ಕರ್ಕೊಂಡ್ ಬಂದು ನಿಮ್ಮ ನಿಮ್ಮ ಮಾತುಗಳಿಗೇ ಜಗಳ ಆಡ್ತಾ ಇದೀರಲ್ಲಾ… ಮೊದಲು ರೇಷನ್ ಕಾರ್ಡ್ ಕೊಡ್ಸಿ ನಮ್ಗೆ; ಆಮೇಲೆ ನಿಮ್ಮ ಜಗಳ ಆಡುವಿರಂತೆ… ಯಾವನಯ್ಯ ನನ್ನನ್ನು ಕರ್ಕೊಂಡ ಬಂದವ್ನು…ಏ ತಿಮ್ಮಯ್ಯ ಎಲ್ಲಿದ್ದೀಯಾ?” ಎನ್ನುತ್ತಾ ಹುಡುಕತೊಡಗಿದಳು.

ಟೀವಿಯೊಳಗಿಂದ ಎದ್ದು ಬಂದ ಕಲ್ಪಿತಾ

‘ಸಂಕೋಲೆ’ ಧಾರಾವಾಹಿಯ ಮಾತುಗಳು ಚಿಂತಾಮಣಿಯ ಮೆದುಳು, ಕಣ್ಣು, ಕಿವಿಗಳನ್ನು ಹಿಂಡತೊಡಗಿದ್ದವು:

‘ನೀನು ಎಷ್ಟೇ ಪಲ್ಟಿ ಹೊಡೆದ್ರೂ ನನ್ನ ಮುಷ್ಟಿಯಿಂದಾಚೆ ಬದುಕಲಾರೆ.. ನಿನಗೆ ನಾನು ಸ್ವಾತಂತ್ರ್ಯ ಕೊಟ್ಟಿದೀನಿ, ಅದೂ ಹೆಂಗೆ ಗೊತ್ತಾ? ಹಗ್ಗ ಕಟ್ಟಿ ಮೇಯೋಕೆ ಬಿಟ್ಟಿರೋ ಹಸುವಿನ ಥರಾ..! ಆ ಸುತ್ತಳತೆಯಲ್ಲೇ ನೀನು ಎಷ್ಟು ಬೇಕಾದ್ರೂ ಮೇಯಬಹುದು… ಆದರೆ ನನ್ನ ಕೈಲಿರೋ ಹಗ್ಗ ಕಿತ್ಕೊಂಡು ಹೋಗೋಕೆ ಬಿಡೊಲ್ಲ..!’

‘ಏ ಫೂಲ್! ನೀನು ನನ್ನ ಕತ್ತಲ್ಲಿರೋ ತಾಳಿಗೆ ಕಟ್ಟಿರೋ ದಾರನಾ ನೇಣು ಕುಣಿಕೆ ಅಂತಾನೇ ಅಂದ್ಕೊಂಡು ತಾಳಿಸಮೇತ ಬಿಚ್ಚಿಟ್ಟಿದ್ದೀನಿ…ನೀನು ತಿಳ್ಕೊಂಡಿರಬಹುದು ಹಗ್ಗ ನನ್ನ ಕೈಲಿದೆ ಅಂತ…ಆ ಹಗ್ಗದ ತುದಿಯಲ್ಲಿರೋದು ಖಾಲಿ ಕುಣಿಕೆ ಅನ್ನೋದನ್ನ ನೀನಿನ್ನೂ ನೋಡ್ಕೊಂಡಿಲ್ಲ ಅಂತ ಕಾಣುತ್ತೆ..!’

ಎದ್ದು ಟೀವಿ ಆಫ್ ಮಾಡಿದ ಚಿಂತಾಮಣಿ ಗಡಿಯಾರ ನೋಡಿದಳು. ಆಕಳಿಕೆ ಮೈಯ್ಯನ್ನೆಲ್ಲ ತೀಡಿದಂತಾಗಿ ಮಲಗಲು ಒಳಕೋಣೆಗೆ ಹೆಜ್ಜೆ ಇಡುವಾಗಲೇ ಎದುರಿಗೆ ಬಂದ ಆಕೃತಿ ಕಂಡು ಬೆದರಿದವಳಂತೆ ನಿಂತಳು.
“ಯಾರು ನೀವು? ಬಾಗಿಲ ಚಿಲಕ ಹಾಕಿದೆಯಲ್ಲ ನೀವು ಹೇಗೆ ಬಂದ್ರಿ?”

“ನಾನು ಕಲ್ಪಿತಾ ಅಂತಾ… ಟೀವಿಯೊಳಗಿಂದ ಬಂದೆ…

“ ಏನು? ಟೀವಿಯೊಳಗಿಂದ ಬಂದ್ರಾ?”

“ಹೆದರಬೇಡಿ… ನೀವು ಈಗ ತಾನೆ ಟೀವೀಲಿ ನೋಡ್ತಿದ್ರಲ್ಲಾ ‘ಸಂಕೋಲೆ’ ಧಾರಾವಾಹಿ… ಆ ಸೀರಿಯಲ್‍ನ ಹೀರೋಯಿನ್ ನಾನೇ..!”

ಕತೆಗಾರನದ್ದೊಂದು ನಾಟಕದಂತಹ ಊಹೆ

ಕಲ್ಪಿತಾ: ನಾನು ಎಲ್ಲಿಂದ ಬಂದೆ ಅನ್ನೋದಕ್ಕಿಂತ ಯಾಕೆ ಬಂದೆ ಅನ್ನೋದಷ್ಟೇ ಮುಖ್ಯ…

ಚಿಂತಾಮಣಿ: ನೀವು ಬಂದಿದ್ದು ಬಹಳ ಸಂತೋಷ… ಬನ್ನಿ ಕೂತ್ಕೊಳ್ಳಿ…

ಕಲ್ಪಿತಾ: ಬೇಡ ಬಿಡಿ… ನಾನು ಪಾತ್ರ ಮಾಡುವಾಗಲೆಲ್ಲ ಓಡಾಡಿಕೊಂಡೇ ಮಾತಾಡಿ ಅಭ್ಯಾಸ…

ಚಿಂತಾಮಣಿ: ಆದ್ರೆ ನೀವು ಹಾಗೆ ನಿಮ್ಮ ಪಾತ್ರದ ರೀತಿಯಲ್ಲೇ ಮಾತಾಡೋಕೆ ಶುರು ಮಾಡಿದ್ರೆ ಸಹಜತೆ ಇರಲ್ಲವೇನೋ ಅಂತ ಭಾವಿಸಿದ್ದೆ…

ಕಲ್ಪಿತಾ: ಸತ್ಯ ಹೇಳೋಕೆ ಪಾತ್ರವಾದರೇನು, ನಿಜವ್ಯಕ್ತಿತ್ವ ಆದ್ರೆ ಏನು? ಅಲ್ಲಿ ಸೆಟ್‍ನಲ್ಲಿ ನೋಡಿದ್ರೆ ಆ ಡೈರೆಕ್ಟರ್ ಹೇಳಿಕೊಟ್ಟಂತೆ ಮಾಡ್ಬೇಕು; ನನ್ನ ಸ್ವಂತ ಮಾತುಗಳನ್ನ ಇಲ್ಲಾದ್ರೂ ಹುಡುಕೋಣ ಅಂತ ಇಲ್ಲಿಗೆ ಬಂದ್ರೆ ನೀವೂ ಆ ರೂಪಕನ ಹಾಗೇ ಮಾತಾಡ್ತಿದೀರಲ್ಲಾ…!

ಚಿಂತಾಮಣಿ: ಅಯ್ಯೋ ಅವನು ನನ್ನ ಗಂಡನಿಗೆ ಹಳೆಯ ಫ್ರೆಂಡ್ ಅಂತೆ… ಒಂಥರಾ ವಿಚಿತ್ರ ಮನುಷ್ಯ… ಸದಾ ನೀವೆಲ್ಲ ಯಾಕೆ ನನ್ನ ಆಲೋಚನೆಯ ಥರ, ನನ್ನ ಕತೆಯ ಚಿಂತನೆಗಳ ಥರ ನಡ್ಕೊಳ್ಳೋದಿಲ್ಲ ಅಂತಾನೇ ಇರ್ತಾನೆ…

ಕಲ್ಪಿತಾ: ಇಂಥವರನ್ನೆಲ್ಲ ಯಾಕೆ ಮನೆಯೊಳಗೆ ಸೇರಿಸ್ತೀರಿ..?

ಚಿಂತಾಮಣಿ: ನಾನೂ ಹಾಗೇ ಅನ್ಕೋತೀನಿ… ಆದ್ರೂ ಒಮ್ಮೊಮ್ಮೆ ಅವನು ನಮ್ಮೊಳಗಿನ ಕಥೆಯನ್ನೆಲ್ಲ ಕೇಳಿಸ್ಕೊಳ್ಳೋದ್ರಿಂದ, ಒಂದೊಂದ್ಸಲ ನಮ್ಮ ಸಮಸ್ಯೆಗಳಿಗೆ ಉತ್ತರಗಳನ್ನ ಹೇಳೋದ್ರಿಂದ ಏನೋ ಒಂಥರಾ ಸಮಾಧಾನ ಆಗ್ತಿರುತ್ತೆ…

ಕಲ್ಪಿತಾ: ಆದ್ರೆ ನೀವೇ ಹೇಳಿದ ಹಾಗೆ ಅವನ ಪರಿಹಾರಗಳು, ಉತ್ತರಗಳು ಅವನ ಕಥೆಯೊಳಗಿಂದಾನೇ ಬಂದಂಥವಾಗಿದ್ರೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ ಅನ್ಸುತ್ತಾ?

ಚಿಂತಾಮಣಿ: ಬನ್ನಿ ಕೂತ್ಕೊಂಡು ಮಾತಾಡೋಣ (ಕುರ್ಚಿಯತ್ತ ಕೈ ತೋರಿಸುವಳು. ಕಲ್ಪಿತಾ ಅವಳು ತೋರಿಸಿದ ಕುರ್ಚಿಯ ಮೇಲೆ ಕೂರದೆ ಎದುರಿಗಿರುವ ಕುರ್ಚಿಯ ಮೇಲೆ ಕೂರುವಳು.)

ಕಲ್ಪಿತಾ: ಸಾರಿ ಇಲ್ಲಿ ಕೂತಿದ್ದಕ್ಕೆ… ನನ್ನ ವೃತ್ತಿಗೂ ಬದುಕಿಗೂ ವ್ಯತ್ಯಾಸ ಗೊತ್ತಾಗದೆ ಹೀಗಾಗ್ತಿದೆ… ಸೆಟ್‍ನಲ್ಲಿ ಡೈರೆಕ್ಟರ್ ಹೇಳಿದ್ದನ್ನೆಲ್ಲ ಮಾಡಿ ಮಾಡಿ ನಿತ್ಯ ಜೀವನ್ದಲ್ಲೂ ಹಾಗೇ ಆಗ್ಬಿಡುತ್ತೇನೋ ಅಂತ ಯಾರಾದ್ರೂ ಏನಾದ್ರೂ ಹೇಳಿದ್ರೆ ಅದಕ್ಕೆ ವಿರುದ್ಧವಾದದ್ದನ್ನೇ ಮಾಡ್ತೀನಿ… (ನಗು) ನಾನು ಕೇಳಿದ್ದಕ್ಕೆ ನೀವು ಉತ್ತರ ಹೇಳ್ಲಿಲ್ಲ…

ಚಿಂತಾಮಣಿ: ಹೌದು… ಅನಿವಾರ್ಯತೆಯೋ ಏನೋ ಗೊತ್ತಿಲ್ಲ… ನಮ್ಮ ಸಂಕಟಗಳಿಗೆ, ಸಮಸ್ಯೆಗಳಿಗೆ ಎಲ್ಲಿಂದಲಾದರೂ ಸರಿ, ಸಮಾಧಾನ ಸಿಕ್ಕರೆ ಪಡೆದುಕೊಂಡುಬಿಡೋಣ ಅನ್ನಿಸುತ್ತೆ…

ಕಲ್ಪಿತಾ: ಅವು ಎಷ್ಟು ಕೃತಕವಾಗಿದ್ರೂನೂ ?

ಚಿಂತಾಮಣಿ: ಯಾಕಾಗಬಾರದು? ಫಾರ್ ಎಕ್ಸಾಂಪಲ್ ‘ಸಂಕೋಲೆ’ ಧಾರಾವಾಹೀಲಿ ನಿಮ್ಮ ಪಾತ್ರನೇ ನೋಡಿ… ಎಷ್ಟು ಮುಕ್ತವಾಗಿ, ಸ್ವತಂತ್ರವಾಗಿದೆ… ನಿಮ್ಮ ಕ್ಯಾರೆಕ್ಟರ್ ನನ್ನ ಏಕಾಂಗಿತನಕ್ಕೆ, ಬಂಧನದ ಸಂಕಟಗಳಿಗೆ ಎಷ್ಟೋ ಸಲ ಸಾಂತ್ವನ ಕೊಡುತ್ತೆ…

ಕಲ್ಪಿತಾ ಅವಳ ಮಾತಿಗೆ ಜೋರಾಗಿ ನಗುವಳು. ಅವಮಾನಿತಳಾದವಳಂತೆ ಚಿಂತಾಮಣಿಯ ಮುಖ ಸಿಟ್ಟಿನಿಂದ ಕೆಂಪಾಗುವುದು. ಅವಳ ಗಾಂಭೀರ್ಯ ನೋಡಿ ಕಲ್ಪಿತಾ ಒಂದರೆ ಗಳಿಗೆ ಮೌನ ವಹಿಸುವಳು. ನಂತರ ಅವಳ ಹತ್ತಿರಕ್ಕೆ ಹೋಗುವಳು. ಸಂತೈಸುವ ಧ್ವನಿಯಲ್ಲಿ ‘ನಿಜ ಹೇಳ್ಲಾ..?’ ಎಂದು ಚಿಂತಾಮಣಿಯ ಮುಖವನ್ನು ತನ್ನತ್ತ ತಿರುಗಿಸಿ ಕೇಳುವಳು:

‘ಟೀವಿಯಲ್ಲಿ ನಾನು ಹಾಗೆ ಸ್ತ್ರೀ ಸ್ವಾತಂತ್ರ್ಯದ ಪರಮೋಚ್ಛ ಪ್ರತಿನಿಧಿಯಾಗಿ ಕಾಣಿಸಿಕೊಂಡೋಳು, ನನ್ನ ಮನೆಯಲ್ಲಿ ಗಂಡನಿಂದ ಪ್ರತಿಕ್ಷಣವೂ ಹಿಂಸೆಗೆ ಒಳಗಾಗ್ತಿರೋಳೂ ಆಗಿರಬಹುದು ಅಂತ ನಿಮಗೆ ಯಾವಾಗಲಾದ್ರೂ ಅನ್ನಿಸಿದೆಯಾ?’

ನಡುವೆ ಸುಳಿವಾತ್ಮ ಚೇತನ

ಕತೆಗಾರ ರೂಪಕನ ಮನೆಗೆ ವಿವೇಕ ಬಂದಾಗ ಆತನ ಮನೆ ವಿಶಿಷ್ಟವೆಂಬಂತೆ ಕಾಣಿಸತೊಡಗಿತು. ಗೋಡೆಗಳ ಮೇಲೆ ಅರ್ಥವಾಗದ ಘೋಷಣೆಗಳಿದ್ದವು. ರೂಪಕ ‘ಇದೇ ನನ್ನ ಮನೆ, ಕೋಣೆ… ಚಿಂತನಾ ಲಹರಿಯ ಗೂಡು…ಎಲ್ಲಾ…’ ಎಂದು ಉದ್ಗರಿಸಿದ.

“ಯಾವಾಗಲೂ ಹೇಳ್ತಾ ಇರ್ತೀರಾ ಕತೆÉಯ ಬಗ್ಗೆ… ಕತೆ ಮಾತ್ರ ಹೇಳ್ಲೇ ಇಲ್ಲ…” ಎಂದ ವಿವೇಕ.

ಟೇಬಲ್ ಮೇಲಿಂದ ಜಿಗಿದು ಕುಳಿತು ಮತ್ತೊಂದು ಧಮ್ ಎಳೆಯುತ್ತಾ “ಕತೆ ಹೇಳೋದಲ್ಲ, ಇರೋದು… ನೀವೆಲ್ಲ ಇದೀರಲ್ಲ ಹಾಗೆ…” ಎಂದ ರೂಪಕ.

“ನಿಮ್ಮ ಕತೆಗೂ ನಮಗೂ ಏನು ಸಂಬಂಧ? ಯಾಕೆ ನಮ್ಮ ಮೇಲೆ ಹೀಗೆ ಸವಾರಿ ಮಾಡ್ತಿದೀರಾ?”

‘ಸವಾರಿ’ ಎಂಬ ಶಬ್ದ ಕೇಳುತ್ತಲೇ ಚೇತನ ಅಲ್ಲಿಗೆ ಬಂತು.

ಚೇತನ ಹೆಣ್ಣಿನ ಹಾಗೆಯೂ ತೋರದ, ಗಂಡಿನ ಹಾಗೆಯೂ ಇರದ ಎರಡರ ಸಮಭಾಗಗಳನ್ನೊಳಗೊಂಡ ರೂಪ. ಅದರ ಕಂಕುಳಲ್ಲೊಂದು ಬ್ಯಾಗು. ಚಪ್ಪಾಳೆ ತಟ್ಟುತ್ತಾ “ರೂಪಕ ಸಾಹೆಬ್ರೆ..! ಹೆಂಗಿದೆ ನಿಮ್ಮ ಕಥೆ ? ಸರಿಯಾದ ದಿಕ್ಕಲ್ಲಿ ಹೋಗ್ತಾ ಇದಿಯಾ? ಹಾಂ!’” ಎಂದು ನುಲಿಯಿತು.

ವಿವೇಕ ಮತ್ತು ರೂಪಕ ಇಬ್ಬರೂ ಹೊಸದಾಗಿ ನೋಡುವವರಂತೆ ಮೇಲಿಂದ ಕೆಳಕ್ಕೆ ನೋಡತೊಡಗಿದರು.

“ಯಾಕೆ ನನ್ನ ನೆನಪಿಲ್ವೆ ಹಾಂ!” ಎನ್ನುತ್ತಾ ಚೇತನ ಮತ್ತೆ ಸೊಂಟದ ಸೆರಗನ್ನು ಇಬ್ಬರ ಕೆನ್ನೆಗಳ ಮೇಲೂ ಆಡಿಸಿ ನುಲಿಯಿತು.

ರೂಪಕ ನನ್ನ ಸುತ್ತ ಭೂಮಿ ಸುತ್ತುತ್ತಿದೆಯೇನೋ ಅಂದುಕೊಂಡ. ‘ಇದು ಖಂಡಿತಾ ನಾನು ಸೃಷ್ಟಿಸಿದ ಪಾತ್ರವಲ್ಲ; ಅಥವಾ ಇರಬಹುದೆ? ಇದನ್ನ ಇಲ್ಲಿಗೆ ಕಳಿಸಿದೋರು ಯಾರು? ನಾನು ಹೆಣ್ಣು ಗಂಡಿನ ಕತೆಯನ್ನಷ್ಟೇ ಆಲೋಚನೆ ಮಾಡ್ತಿದೀನಿ. ಇದರದು ಯಾವ ಕೆಟಗರಿ? ನನ್ನ ಕತೆಯಲ್ಲಿ ಇದರದ್ದೇನೂ ಪಾತ್ರ ಇಲ್ವಲ್ಲ…’ ಎಂದು ಮತ್ತೆ ಮತ್ತೆ ನೆನಪಿಸಿಕೊಂಡ. ‘ಆತ್ಮಮಾರ್ಜಕ ತೈಲ’ ನೆನಪಾಗತೊಡಗಿತು…

“ಸರಿ ನಿನಗೆ ಇಲ್ಲೇನು ಕೆಲಸ?” ಎಂದ ಸಿಟ್ಟಿನಿಂದ.

“ವಿವೇಕ ಅವರು ತಮ್ಮ ಸ್ವಾತಂತ್ರ್ಯ ಕಳ್ಕೊಂಡಿದೀನಿ ಅಂತಾರೆ. ಅವರ ಮಿಸೆಸ್ ನನ್ನ ಸ್ವಾತಂತ್ರ್ಯಹರಣ ಆಯ್ತು ಅಂತಾರೆ…. ನೀವು ನಿಮ್ಮ ಪ್ರಶ್ನೆಗಳಿಂದ ಅವರಿಬ್ಬರನ್ನೂ ಮತ್ತಷ್ಟು ಇಕ್ಕಟ್ಟಿಗೆ ಸಿಕ್ಕಿಸ್ತಾ ಇದೀರಾ… ನಿಮಗೆಲ್ಲ ಭೂತ ಬಿಡಿಸೋಣ ಅಂತ..”

ರೂಪಕ ಸಿಟ್ಟಿನಿಂದ ಗದರುತ್ತಲೇ ಚೇತನ ಗೊಣಗಿಕೊಂಡು ವೈಯಾರದಿಂದ ಹೊರಟುಹೋಯಿತು. 

ವಿವೇಕ “ನಾನೇನೋ ನನ್ನ ಕತೆÉಗೊಂದು ಟ್ವಿಸ್ಟ್ ಕೊಡಿ ಅಂತ ನಿಮ್ಮನ್ನ ಕರ್ಕೊಂಡು ಬಂದ್ರೆ ನಿಮ್ಮ ಕತೇನೇ ಎತ್ತೆತ್ತಗೋ ಹೋಗ್ತಾ ಇದೆಯಲ್ಲಾ ಸಾರ್...!” ಎನ್ನುತ್ತಾ ಗೊಣಗತೊಡಗಿದ.

ರೂಪಕ “ಇರಿ ಸಾರ್...ಇಂಥದ್ದೇ ಇನ್ನೊಂದು ಭಾಗ ಇದೆ ಹೇಳ್ತೀನಿ... ನಿಮ್ಮ ಸಮಸ್ಯೆಗೆ ಉತ್ತರ ಸಿಗಬಹುದೇನೋ ನೋಡ್ತೀನಿ” ಎಂದು ಸಮಾಧಾನಿಸುವವನಂತೆ ಹೇಳತೊಡಗಿದ...

ಗಡಿಯಾರ ಹನ್ನೆರಡು ತೋರಿಸುವುದಕ್ಕೂ ಸ್ಕಂದನ ಮೊಬೈಲ್‍ಗೆ ಕಲ್ಪಿತಾಳ ‘ಇಂದು ನೈಟ್ ಶೂಟಿಂಗ್, ಮನೆಗೆ ಬರೋಕ್ಕಾಗಲ್ಲ’ ಎಂಬ ಮೆಸೇಜ್ ಬರುವುದಕ್ಕೂ, ಮಗು ಅಳುವ ಶಬ್ದ ಕೇಳಿಸುವುದಕ್ಕೂ ಸರಿಹೋಯಿತು.
‘ತಥ್! ಇದನ್ನ ಫೋನ್ ಮಾಡಿಯೂ ಹೇಳಬಹುದಿತ್ತಲ್ಲ’ ಎಂದು ಗೊಣಗಿಕೊಂಡ. ಅರ್ಧ ಗಂಟೆಯೂ ಕಳೆದಿಲ್ಲವೇನೋ, ಕಲ್ಪಿತಾ ಬಂದ ಸದ್ದಾಯಿತು.

“ಮೆಸೇಜ್ ಮಾಡಿ ಅರ್ಧ ಗಂಟೆ ಕಳೆಯುವಷ್ಟರಲ್ಲಿ ಬಂದಿದ್ದೀಯಲ್ಲ…. ನಾನು ಇನ್ನೊಬ್ಬಳೊಂದಿಗೆ ಮಲಗಿದ್ದಿನೇನೋ ಅಂತ ಕಂಡು ಹಿಡಿಯೋಕೆ ತಾನೆ?” ಎನ್ನುತ್ತಾ ಸ್ಕಂದ ಉರಿಯತೊಡಗಿದ.

“ ಯಾಕ್ರೀ ಏನೇನೋ ಕಲ್ಪಿಸ್ಕೋತಿದೀರಿ. ಡೈರೆಕ್ಟರ್ ಆರೋಗ್ಯ ಸರಿ ಇಲ್ದೆ ಶೂಟಿಂಗ್ ಪ್ಯಾಕಪ್ ಆಯ್ತು… ನೀವು ನಂಗೋಸ್ಕರ ಕಾಯೋದು ಬೇಡ ಅಂತಾ…”

ಅವಳ ಮಾತು ಮುಗಿಯುವಷ್ಟರಲ್ಲೇ ಸ್ಕಂದ “ನೀನು ಹತ್ತಿರದಲ್ಲಿರಬೇಕಾದ್ರೆ ಆ ಡೈರೆಕ್ಟರ್ ವಿನ್ಯಾಸ್‍ಗೇಕೆ ಆರೋಗ್ಯ ಕೆಡುತ್ತೆ?” ಎನ್ನುತ್ತ ಸಿಡುಕಿದ.

“ನಿಮ್ಮೊಬ್ಬರಿಗೇ ಅಲ್ಲ ಹಾಗೆ ಮಾತಾಡೋಕೆ ಬರೋದು..!”

“ ನಿಂಗೆ ಮಾತಾಡೋಕೂ ಬರುತ್ತೆ… ಆ್ಯಕ್ಟ್ ಮಾಡೋಕೂ ಬರುತ್ತೆ”

ಒಂದು ಅಸಹನೀಯ ಮೌನ ಇಬ್ಬರ ಮಧ್ಯೆ ಆವರಿಸುತ್ತಿದೆ ಎನ್ನುವುದು ಇಬ್ಬರಿಗೂ ಅರಿವಾಗತೊಡಗಿತು; ಇಬ್ಬರ ಮಧ್ಯೆ ಕಾಣದ್ದೊಂದು ಜ್ವಾಲೆ ಹೊತ್ತಿಕೊಳ್ಳುತ್ತಿದೆ ಅನ್ನಿಸತೊಡಗಿತು.


ಚೇತನ ಮನೆಗೆ ಬಂದ ವಿವೇಕ, ಸ್ಕಂದ ಇಬ್ಬರೂ ಬೆಚ್ಚಿದವರಂತೆ ನೋಡತೊಡಗಿದರು. ಗೋಡೆಯಲ್ಲಿ ಐದಾರು ಬಾಗಿಲು, ಹತ್ತಾರು ಕಿಟಕಿಗಳು. ಅರ್ಧನಾರೀಶ್ವರನ ಕಟೌಟ್. ತಂತಿಗಳ ಮೇಲೆ ಒಣಹಾಕಿರುವ ಹೆಂಗಸರು, ಗಂಡಸರ ಒಳಉಡುಪುಗಳು.

ಸ್ಕಂದ ವಿವೇಕನನ್ನು ಕಾಣುತ್ತಲೇ “ಚೇತನ ಅಂದ್ರೆ ನೀವೇನಾ?” ಎಂದ.

ವಿವೇಕ ಗಾಬರಿಯಿಂದ “ನಾನು ವಿವೇಕ ಅಂತ. ಚಿಂತಕ, ಹೋರಾಟಗಾರ, ಲೇಖಕ…” ಎನ್ನುತ್ತಾ ಇನ್ನೂ ಏನೋ ಹೇಳಹೋದವನು ಸುಮ್ಮನಾದ.

“ನಾನು ಸ್ಕಂದ. ಕಾಲೇಜು ಮೇಷ್ಟ್ರು….”

“ತಾವು ಬಂದ ಉದ್ದೇಶ?”

ಸ್ಕಂದ ತಡವರಿಸುತ್ತಾ “ಚೇತನ ಅವರನ್ನ ಕಾಲೇಜು ಫಂಕ್ಷನ್‍ಗೆ ಗೆಸ್ಟ್ ಆಗಿ ಇನ್ವೈಟ್ ಮಾಡ್ಬೇಕಿತ್ತು..”

“ನಾನೂ ಅವರದ್ದೊಂದು ಸಂದರ್ಶನ ತಗೋಬೇಕಿತ್ತು ಪತ್ರಿಕೆಗೆ” ಎಂದ ವಿವೇಕ ಕೃತಕವಾಗಿ ನಗುತ್ತಾ.

“ ಈ ವ್ಯಕ್ತಿ ಅಷ್ಟೊಂದು ಇಂಪಾರ್ಟೆಂಟ್ ಪರ್ಸನ್ನಾ?”

“ ಹಾಗೇನಿಲ್ಲ… ಅವರ ಜೊತೆ ಮಾತಾಡ್ತ ಮಾತಾಡ್ತಾ ವಿಶಿಷ್ಟ ವ್ಯಕ್ತಿ ಅಂತ ಗೊತ್ತಾಗುತ್ತೆ ಅಂತ ರೂಪಕ ಅವರು ಹೇಳಿದ್ರು…”

“ಅವರು ನಿಮಗೆ ಗೊತ್ತಾ?” ಎಂದು ಸ್ಕಂದ ಕಣ್ಣರಳಿಸಿದ.

“ಸ್ಕೌಂಡ್ರಲ್! ಎಲ್ಲರನ್ನೂ ದಿಕ್ಕು ತಪ್ಪಿಸ್ತಿರೋನು ಅವನೇ. ನಮ್ಮನ್ನೆಲ್ಲ ಮಿಸ್‍ಯೂಸ್ ಮಾಡ್ಕೋತಾ ಇದಾನೆ…” ಎನ್ನುತ್ತಾ ಇದ್ದಕ್ಕಿದ್ದಂತೆ ಸಿಟ್ಟಿನೊಂದಿಗೆ ಬೇಯತೊಡಗಿದ.

ಸ್ಕಂದ ಅರ್ಥವಾಗದವನಂತೆ “ನೀವು ಏನ್ ಹೇಳ್ತಿದೀರಾ ಸಾರ್? ಅವನ್ಯಾಕೆ ನಮ್ಮನ್ನ ಮಿಸ್‍ಯೂಸ್ ಮಾಡ್ಕೋತಾನೆ?” ಎಂದ.

“ನಿಮ್ಗೆ ಗೊತ್ತಾಗಲ್ಲಾರೀ… ಅವನ ಕೆಲಸಾನೇ ಅದು… ನಾನೇನೋ ನನ್ನ ಪರ್ಸನಲ್ ಪ್ರಾಬ್ಲಂ ಸಾಲ್ವ್ ಮಾಡ್ಕೊಳ್ಳೋಣ ಅಂತ ಇಲ್ಲಿಗ್ಬಂದ್ರೆ ಮಧ್ಯೆ ನಿಮ್ಮನ್ನ ಬಿಟ್ಟಿದ್ದಾನೆ… ರ್ಯಾಸ್ಕಲ್!” ಎಂದು ಸಿಡಿಮಿಡಿಗೊಳ್ಳುತ್ತಲೇ ಅಲ್ಲಿಂದ ಹೊರಟುಬಿಟ್ಟ.

ವಿವೇಕ ಹೊರಡುತ್ತಲೇ ಸ್ಕಂದ ಮನೆಯ ವಾತಾವರಣವನ್ನು ಮತ್ತೊಮ್ಮೆ ಅವಲೋಕಿಸತೊಡಗಿದ. ಒಣಹಾಕಿರುವ ಹೆಂಗಸರ ಒಳ ಉಡುಪುಗಳನ್ನು ಹತ್ತಿರದಿಂದ ಗಮನಿಸುತ್ತಾ ಅವುಗಳನ್ನು ಕೈಗೆ ತೆಗೆದುಕೊಂಡು ಉದ್ವೇಗದಿಂದ ಸವರತೊಡಗಿದ. ಉನ್ಮತ್ತನಂತೆ ಅವುಗಳನ್ನು ಮುಖಕ್ಕೆ ಒತ್ತಿಕೊಂಡು ಆನಂದಿಸಿದ. ತಕ್ಷಣವೇ ‘ಥು’ ಎಂದು ಅಸಹ್ಯದಿಂದ ದೂರಕ್ಕೆ ಎಸೆದ. ಅಷ್ಟರಲ್ಲಿ ಅಲ್ಲಿಯೇ ಇದ್ದ ಫೋನ್ ಸದ್ದಾಯಿತು.

ಅತ್ತಲಿಂದ ಚೇತನ ಮಾತು: “ನೀವು ಬಂದೀರ್ತೀರಾ ಅಂತ ಗೊತ್ತಿತ್ತು… ಅವ್ರೂ ಇದಾರಾ?”

ಸ್ಕಂದ ಗಾಬರಿಯಿಂದ “ಯಾರು ಯಾರು?” ಎಂದ.

“ಗಾಬರಿಯಾಗ್ಬೇಡಿ… ನಾನು ಕೇಳಿದ್ದು ವಿವೇಕ ಅವ್ರಿದ್ದಾರಾ ಅಂತ…” ಎಂದು ಹೇಳಿ ಫೋನ್ ಇಟ್ಟ ಸದ್ದಾಯಿತು.

ನಾನು ಇಲ್ಲಿಂದ ತೊಲಗಿದರೆ ಸಾಕು ಎಂದು ಅಂದುಕೊಳ್ಳುವಾಗಲೇ ರೂಪಕ ಎದುರಾದ. ಸ್ಕಂದ ಗಾಬರಿಯಿಂದ “ ಚೇತನ ಅವ್ರನ್ನ ನೋಡೋಕೆ ಬಂದಿದ್ದೆ…” ಎಂದು ತಡಬಡಾಯಿಸತೊಡಗಿದ.

“ ಏನಂದ್ರಿ ಸಾರ್? ನಿಮ್ಮಂಥವ್ರು ಯಕಃಶ್ಚಿತ್ ಈ ಎಡಬಿಡಂಗಿ ಹತ್ರಕ್ಕೆ ಬರೋದೆ…?”

“ ಮತ್ತೆ ನೀವು ನನ್ನ ಯಾವ ಸಮಸ್ಯೆಗೂ ಸರಿ ಕಾಣೋ ಪರಿಹಾರ ಹೇಳ್ತಾ ಇರ್ಲಿಲ್ವಲ್ಲ…”

“ ಹಾಗಾದ್ರೆ ತಾನು ಹೆಣ್ಣೋ ಗಂಡೋ ಅಂತ ಗೊತ್ತಿಲ್ದೆ ಇರೋ ಆ ಎಡಬಿಡಂಗಿ ಹತ್ರ ಸಲ್ಯೂಷನ್ ಇದೆಯಾ”? ಎನ್ನುತ್ತಾ ರೂಪಕ ನಗತೊಡಗಿದ. ಸ್ಕಂದ ನೋಡುತ್ತಲೇ ನಿಂತಿದ್ದ.


ದಣಿದು ಬಂದಿದ್ದ ವಿವೇಕ ಬ್ಯಾಗ್ ಎಸೆದು “ಚಿಂತೂ ಡಿಯರ್…ಒಂದು ಗ್ಲಾಸ್ ಜ್ಯೂಸ್ ಮಾಡ್ಕೊಡೋಕಾಗುತ್ತಾ?” ಎಂದು ಕೂಗಿದ. ಒಳಗಿಂದ ಬರುತ್ತಲೇ ಚಿಂತಾಮಣಿ “ಯಾವ ಉದ್ಧಾರದ ಕೆಲಸ ಮಾಡಿ ಬಂದಿದ್ದೀರಿ ಅಂತ ನಿಮಗೆ ಇಷ್ಟೊಂದು ಉಪಚಾರ?” ಎಂದಳು ತನ್ನದೇ ಧ್ವನಿಯಲ್ಲಿ.

“ ನೀನು ವ್ಯಂಗ್ಯ ಮಾಡಿದ್ರೂ ಅದರಲ್ಲಿ ನಾನು ಪ್ರೀತೀನ ಹುಡುಕ್ತೀನಿ…”

“ ಅದು ನಿಮ್ಮ ಭಂಡತನ! ”

“ಒಳಗಿಲ್ಲದೆ ಇದ್ರೂ ಹೊರಗಿನಿಂದ ಬೇಕಂತಲೇ ಆಡೋ ಈ ನಿನ್ನ ಒರಟು ಮಾತು ಜಾಸ್ತಿಯಾಗೋದು ಬೇಡ….” ಎಂದ ವಿವೇಕ ಸಿಟ್ಟಿನಿಂದ.

“ ಅದು ಗೊತ್ತಾಗಿದ್ರೂ ಯಾಕೆ ನೀವು ಇಲ್ಲದೆ ಇರೋದನ್ನ ಹುಡುಕ್ತೀರಿ..?”

“ ಯಾಕೆ ಅಂದ್ರೆ? ನೀನು ನನ್ನ ಹೆಂಡ್ತಿ! ನನ್ನ ಹೆಂಡತಿಯನ್ನ ನಾನು ಪ್ರೀತಿಯಿಂದ ಕಾಣೋದು ನಿಂಗೆ ಭಂಡತನವಾಗಿ ಕಾಣ್ಸುತ್ತಾ?”

“ ಪ್ರೀತಿ ಇದ್ರೆ ನೀವು ನಿಮ್ಮ ಕೆಲಸ ಬಿಟ್ಟು ನನ್ನ ಸಂಬಳದ ಮೇಲೆ ಬದುಕ್ತಿದ್ರಾ?”

“ ನಾನು ನಿನ್ನ ಲವ್ ಮಾಡ್ತಿದ್ದಾಗ ನಾನು ಮದುವೆಯಾದ ಮೇಲೆ ಕೆಲ್ಸ ಬಿಡ್ತೀನಿ ಅಂತ ಹೇಳಿದ್ದೆ ತಾನೆ? ನಾನು ನಿಜವಾಗಿಯೂ ಕೆಲಸ ಬಿಡ್ತೀನಿ ಅಂತ ಆವಾಗ ನಿಂಗೆ ಗೊತ್ತಾಗಿದ್ರೆ ನನ್ನನ್ನ ಮದ್ವೆ ಆಗ್ತಿರಲಿಲ್ವ? ನಾನು ನನ್ನ ಕೆಲಸ ಬಿಟ್ಟಿದ್ದು ಒಂದು ಚಳುವಳಿಗಾಗಿ, ಹೋರಾಟಕ್ಕಾಗಿ… ಅದರಲ್ಲೂ ನನ್ನ ಚಿಂತನೆ ಹೋರಾಟವೆಲ್ಲ ಹೆಣ್ಣಿನ ಸ್ವಾತಂತ್ರ್ಯಕ್ಕಾಗೇ ಹೆಚ್ಚು ವಿನಿಯೋಗವಾಗ್ತಿದೆ ಅನ್ನೋದು ನಿಂಗೆ ಗೊತ್ತು… ಹಾಗಾದ್ರೆ ನಾವಿಬ್ಬರೂ ಆಡಿದ ಪ್ರೀತಿಯ ಮಾತುಗಳು… ಆದರ್ಶ ಸಂಸಾರದ ಆಲೋಚನೆಗಳು ಎಲ್ಲ ಸುಳ್ಳಾ? ಅವತ್ತು ಟೀವಿ ಸಂದರ್ಶನದಲ್ಲಿ ನನ್ನ ಗಂಡನ ಹೋರಾಟಗಳಿಗೆ ಯಾವಾಗಲೂ ಬೆನ್ನೆಲುಬಾಗೇ ಇರ್ತೀನಿ ಅಂತ ಹೇಳಿದ್ದೆ ತಾನೆ? ”

ಒಂದೇ ಸಮನೆ ಮಾತನಾಡುತ್ತಲೇ ಇದ್ದ ವಿವೇಕ ಸುಧಾರಿಸಿಕೊಳ್ಳತೊಡಗಿದ; ‘ಬೀದಿ ಭಾಷಣವನ್ನು ಮನೆಯಲ್ಲೂ ಕವಣೆ ಕಲ್ಲುಗಳಂತೆ ಎಸೆಯತೊಡಗಿದೆನಾ’ ಎಂದು ಪ್ರಶ್ನಿಸಿಕೊಳ್ಳತೊಡಗಿದ ತನ್ನೊಳಗೆ.
ಕೇಳಿಸಿಕೊಳ್ಳುತ್ತಲೇ ಇದ್ದ ಚಿಂತಾಮಣಿ ಜಿದ್ದಿಗೆ ಬಿದ್ದವಳಂತೆ ಈಗ ಎದುರಿಗೆ ಎರಗಿದಳು:

“ದಾರಿದ್ರ್ಯದ ಸ್ಥಿತಿಯಲ್ಲಿ ಪ್ರೀತಿನಾ, ದಾಂಪತ್ಯನ ಹ್ಯಾಗೆ ಕಲ್ಪಿಸಿಕೊಳ್ತೀರಾ ನೀವು? ಸ್ತ್ರೀ ವಿಮೋಚನೆಯ ಚಳುವಳಿ ಮಾಡ್ತೀನಿ ಅಂತ ರಸ್ತೇಲೆ ಹೆಂಡ್ತಿ ಜೊತೆ ಮಲಗ್ತೀರಾ? ಪ್ರೀತಿ, ಚಳವಳಿ, ದಾಂಪತ್ಯ ಇವುಗಳಿಗೆಲ್ಲ ಅವುಗಳದ್ದೇ ಬೇರೆ ಬೇರೆ ಮುಖಗಳಿವೆ ಅಂತ ಬರಹಗಾರರಾಗಿರೋ ನಿಮಗೆ ಗೊತ್ತಿಲ್ವಾ? ನಿಮ್ಮ ಭಾಷಣದ ಹಾಗೇನೇ ನನ್ನ ಸ್ವಾತಂತ್ರ್ಯನೂ ಇರ್ಬೇಕು ಅಂತ ನೀವ್ಯಾಕೆ ಬಲವಂತ ಮಾಡ್ತೀರಾ? ಇಷ್ಟಕ್ಕೂ ನೀವು ನನಗೆ ಕೊಟ್ಟಿರೋ ಸ್ವಾತಂತ್ರ್ಯ ಯಾವುದು? ನಿಮ್ಮ ಸೋಮಾರಿತನದ ಭಾಷಣ, ಹೋರಾಟಗಳನ್ನ ಭದ್ರಪಡಿಸಿಕೊಳ್ಳೋಕೆ ನಾನು ದುಡಿತಕ್ಕೆ ಅಂಟಿಕೊಂಡೇ ಇರೋ ಸ್ವಾತಂತ್ರ್ಯದ ಊರುಗೋಲು ಕೊಡ್ತಾ ಇದೀರಾ? ನಾನು ಕೆಲಸಕ್ಕೆ ಹೋಗೋದನ್ನ ತಪ್ಪಿಸ್ಕೊಳ್ದೇ ಇರ್ಲಿ ಅಂತ ಅದನ್ನ ನೀವು ಕೊಟ್ಟಿರೋ ಸ್ವಾತಂತ್ರ್ಯ ಅಂತ ಕರೀತಾ ಇದೀರಾ…? ನೀವು ದುಡಿಯದೆ ಉಡಾಫೆಯ ಭಾಷಣಗಳನ್ನ ಮಾಡ್ಕೊಂಡು ಇರೋಕೆ ದುಡಿದು ನಿಮಗೆ ಅನ್ನ ಹಾಕ್ತಿದಿನಲ್ಲ… ನಾನೇ ತಾನೇ ಬೆನ್ನೆಲುಬು?”

ಹೇಳಿದ್ದು ಸಾಕೆನ್ನಿಸಿದವಳಂತೆ ಅಡುಗೆಮನೆಯತ್ತ ನಡೆದಳು.

ತಲೆ ಮೇಲೆ ಕೈ ಇಟ್ಟು ಕುಳಿತುಕೊಂಡಿದ್ದ ವಿವೇಕ ರೂಪಕನ ಧ್ವನಿ ಕೇಳಿ ಎದ್ದು ಕುಳಿತ. ಚಿಂತೆ ತೋರಗೊಡದವನಂತೆ “ಅದೇನ್ರಿ ನೀವು… ನಾನು ಹೋಗೋ ಜಾಗಕ್ಕೆ ಸ್ಕಂದ ಅನ್ನೋನ್ನ ಕಳ್ಸಿದ್ರಿ… ಅವನ್ಯಾರ್ರಿ?” ಎಂದ ಅರೆ ಮುನಿಸಿನೊಂದಿಗೆ.

ರೂಪಕ ಗುಟ್ಟು ಹೇಳುವವನಂತೆ “ ನಿಮ್ಮ ಮಿಸೆಸ್ ಮತ್ತು ಆ ಸ್ಕಂದ ಅವರ ಮಿಸೆಸ್‍ಗೆ ಅಷ್ಟೆಲ್ಲ ಚೈತನ್ಯ ತುಂಬ್ತಾ ಇರೋದೇ ಆ ಚೇತನ ಸಾರ್… ಅದರ ಮಾತು ಕೇಳಿಕೊಂಡೇ ನಿಮ್ಮ ಮಿಸೆಸ್ ನಿಮ್ ಆತ್ಮನ ಚುಚ್ಚೋ ಮಾತಾಡ್ತಾ ಇರೋದು… ನೀವು ನೋಡಿದ್ರೆ ಆ ಚೇತನ ಹತ್ರ ಹೋಗ್ತೀನಿ ಅಂತಿರಾ…” ಎಂದ.

“ಹಾಗಾದ್ರೆ ಆ ಚೇತನಗೆ ಬಹಳ ವಿಶಿಷ್ಟವಾದ ಶಕ್ತಿಯೇನೋ ಇರ್ಬೇಕು…” ಎನ್ನುತ್ತಾ ವಿವೇಕ ತಲೆ ಕೆರೆದುಕೊಂಡ.

“ ಆ ಶಿಖಂಡಿಗೆ ಯಾವ ಶಕ್ತಿ ಇದೆ ಸಾರ್… ನೀವೊಂದು..! ಇರಿ ಮುಂದಿನ ಕಥೆ ಹೇಳ್ತೀನಿ” ಎನ್ನುತ್ತಾ ವಿವೇಕನ ಪ್ರತಿಕ್ರಿಯೆಯನ್ನೂ ಕಾಯದೆ ಹೊರಟ.


ಚೇತನ ಬೀಡಾ ಜಗಿಯುತ್ತಾ ಉಗುಳುತ್ತಾ ಅದರ ತುಟಿ ಇನ್ನಷ್ಟು ಕೆಂಪಾಯಿತು. ಅದರ ಕೆಂದುಟಿಯ ನೋಡುತ್ತಾ ಚಿಂತಾಮಣಿ ಮತ್ತು ಕಲ್ಪಿತಾ ‘ನಮ್ಮ ತುಟಿಗಳೇಕೆ ಇಷ್ಟು ಕೆಂಪಾಗುವುದಿಲ್ಲ’ ಎಂದುಕೊಂಡವರಂತೆ ಒಬ್ಬರಿಗೊಬ್ಬರು ನೋಡಿಕೊಂಡರು.

ಇಬ್ಬರೂ ಮೌನವಾಗಿರುವುದನ್ನು ಕಂಡು ಚೇತನ “ಅಕ್ಕಂದಿರು ಯಾಕೆ ನನ್ನನ್ನ ಹುಡುಕಿಕೊಂಡು ಬಂದದ್ದು?” ಎಂದಿತು.

“ನಿಂಗೆ ಗೊತ್ತಿಲ್ದೆ ಇರೋದು ಏನಿದೆ? ನಮ್ಮ ಒಳಮನಸ್ಸುಗಳನ್ನೆಲ್ಲ ಜಾಲಾಡೋ ಶಕ್ತಿ ನಿನಗಿದೆ ಅಂತ ನಾವು ತಿಳ್ಕೊಂಡಿದೀವಿ…ಬಂದಿದೀವಿ” ಎಂದಳು ಚಿಂತಾಮಣಿ. ದನಿಗೂಡಿಸಿದಳು ಕಲ್ಪಿತಾ.

“ಹಾಗೆಲ್ಲ ಅನ್ಬೇಡಿ! ನನಗೆ ಗೊತ್ತಿರೋ ಅಷ್ಟು ಮಾತ್ರ ಗೊತ್ತು ಅಂತೀನಿ…”

“ನಿನಗೆ ಗೊತ್ತಿರೋದನ್ನೇ ಹೇಳು…” ಎಂದಳು ಕಲ್ಪಿತಾ ಅಸಹಾಯಕ ಧ್ವನಿಯಲ್ಲಿ.

ಕುರ್ಚಿಯಿಂದ ಮೇಲೆದ್ದ ಚೇತನ ವೈಯಾರದ ನಡಿಗೆಯಲ್ಲೇ ಸೆರಗು ಬೀಸುತ್ತಾ ಮಾತನಾಡಲಾರಂಭಿಸಿತು:

“ಚಿಂತಾಮಣಿ… ನೀನು ಯಾಕೆ ನಿನ್ನ ಗಂಡ ಸಾಯಲಿ ಅಂತ ಬಯಸೋದು? ಅವನು ದುಡಿಯದೆ ನಿನ್ನೊಬ್ಬಳನ್ನೇ ದುಡಿತಕ್ಕೆ ಹಚ್ಚಿರುವುದು ತಾನೆ ನಿಜವಾದ ಕಾರಣ? ಸತ್ತರೆ ಅವನ ಪೆನ್ಷನ್ ಹಣವೂ ನಿನಗೇ ಸಿಗುತ್ತದೆ ಎನ್ನುವುದೂ ಒಂದು ಕಾರಣ ತಾನೆ? ಕಲ್ಪಿತಾ… ನೈಟ್ ಶೂಟಿಂಗ್ ಇದೆ ಅಂತ ಅವತ್ತು ನಿನ್ನ ಗಂಡನಿಗೆ ಮೆಸೇಜ್ ಮಾಡಿದ್ದು ಅವನನ್ನ ಪರೀಕ್ಷೆ ಮಾಡೋಕೆ ತಾನೆ? ಯಾವುದಾದ್ರೂ ಹೆಂಗ್ಸನ್ನ ಕರೆದುಕೊಂಡು ಬಂದು ಮಲಗಿಸ್ಕೊತಾನೋ ಇಲ್ವೋ ಅಂತ ಟೆಸ್ಟ್ ಮಾಡೋಕೆ ತಾನೆ? ನಿನ್ನ ಮನಸ್ಸು ನಿನ್ನ ಗಂಡ ಯಾವಳನ್ನಾದ್ರೂ ಇಟ್ಕೊಳ್ಳಿ ಅಂತ ಬಯಸ್ತಿರೋದು ನಿಜ ತಾನೆ? ಇನ್ನೂ ನಿಮ್ಮೊಳಗಿನ ಕೆಲವು ನಿಜಗಳನ್ನ ಹೇಳಬೇಕಿದೆ. ಆದ್ರೆ ಎಲ್ಲವನ್ನೂ ಹೇಳ್ಬಿಟ್ರೆ ನಿಮಗೆ ಬದುಕಿನ ಬಗ್ಗೆ ರೇಜಿಗೆ ಹುಟ್ಟಬಹುದು. ಅಲ್ಲಿವರ್ಗೆ ನಿಮ್ಮ ಆತ್ಮಗಳು ಸರಿಯಾದ ದಿಕ್ಕಿನಲ್ಲಿ ಯೋಚಿಸ್ತಾವಾ ಅಂತ ಕಾಯೋಣ ತಡೀರಿ ಹಾಂ!”

ಚೇತನ ಮಾತುಗಳಿಗೆ ಅವರಿಬ್ಬರೂ ಬೆವರತೊಡಗಿದರು.

‘ಹೊತ್ತಾಯ್ತು ಚೇತನ… ಇನ್ನಾವ ಹೊಸ ಮಾತಿನ ಆಯುಧ ಚೂಪು ಮಾಡ್ಕೊಂಡು ಕೂತಿದ್ದಾನೋ ನನ್ನ ಗಂಡ ಗೊತ್ತಿಲ್ಲ…ನಾನಿನ್ನು ಬರ್ತೀನಿ…’ ಎಂದು ಚಿಂತಾಮಣಿಯೂ ‘ಹೌದ್ಹೌದು…ನಾನೂ ಹೋಗ್ಬೇಕು… ಬರ್ತೀನಿ ಚೇತನ’ ಎಂದು ಕಲ್ಪಿತಾಳೂ ಅವರವರ ಹಾದಿ ಹಿಡಿದರು.

ಅವರಿಬ್ಬರೂ ಅತ್ತ ಹೊರಡುತ್ತಲೇ ರೂಪಕ ಚೇತನ ಮನೆಗೆ ಬಂದವನೇ “ನೋಡು ನಾನು ನನ್ನ ಕತೆಯ ಉದ್ದೇಶಕ್ಕೆ ತಕ್ಕಂತೆ ನಡಿಸ್ತಿರೋ ಪಾತ್ರಗಳನ್ನ ನೀನು ಇಲ್ಲಸಲ್ಲದ್ದು ಹೇಳಿ ದಿಕ್ಕು ತಪ್ಪಿಸ್ಬೇಡ… ನಿನ್ನಿಂದಾಗಿ ನಂಗೆ ಕೆಟ್ಟ ಹೆಸರು ಬಂದ್ರೆ ನಾನು ನಿನ್ನನ್ನ ಸುಮ್ನೆ ಬಿಡಲ್ಲ…” ಎಂದು ಅದರ ಕುತ್ತಿಗೆ ಪಟ್ಟಿ ಹಿಡಿಯಹೋದವನು ಅದು ಸೆರಗಿನದ್ದೋ, ಶರಟಿನದ್ದೋ ಎಂದು ಗೊತ್ತಾಗದೆ ಗೊಂದಲಕ್ಕೆ ಬಿದ್ದು ಅದರ ತುಟಿಯ ಕೆಂಪನ್ನೇ ನೋಡುತ್ತಾ ನಿಂತ.

ಚೇತನ “ತಗಳಪ್ಪ! ಇರೋದನ್ನ ಬಿಚ್ಚಿಟ್ರೆ ಕೊಳೆ ಎಲ್ಲಿದೆ ಅಂತ ಗೊತ್ತಾಗಿ ಶುಚಿಯಾಗ್ಲಿ ಅಂತ ಹಾಗೆ ಮಾಡ್ತಿದೀನಿ…” ಅಂತು.

“ ಓಹೋ! ನೀನು ಮಹಾ ಸತ್ಯ ನುಡಿಸೋ ನಿಜ ಕಿನ್ನರಿ! ನಾನು ಬರೀ ಬುಡುಬುಡಿಕೆ ದಾಸಯ್ಯ! ಚೇತನ…ನೀನು ಯಾರೇ ಆಗಿರು, ನನ್ನ ಕತೆಯ ದಿಕ್ಕನ್ನ ಮಾತ್ರ ತಪ್ಪಿಸೋಕೆ ಆಗೊಲ್ಲ ತಿಳ್ಕೋ…!” ಎನ್ನುತ್ತಾ ರೇಗತೊಡಗಿದ ರೂಪಕ ಒಳಗೊಳಗೆ ‘ದೋಷ ಅವರದ್ದೇ ಇರಬೇಕು. ಕತೆಗಾರನಾಗಿ ಎಲ್ಲೋ ಒಂದು ಕಡೆ ಎಲ್ಲವೂ ನನ್ನ ಹಿಡಿತಕ್ಕೆ ಬರ್ತಾ ಇದೆ ಅಂದ್ಕೊಳ್ಳೋದೂ ತಪ್ಪೇನೋ’ ಅಂದುಕೊಂಡ.

ಉಳಿದ ಕನಸುಗಳು

ವಿವೇಕನ ಕಚೇರಿಯ ಗೋಡೆಯಲ್ಲಿ ಮಾಕ್ರ್ಸ್, ಗಾಂಧಿ, ಲೆನಿನ್, ಅಂಬೇಡ್ಕರ್, ನೀತ್ಸೆ ಇತ್ಯಾದಿ ಜಗಜ್ಞಾನಿಗಳು ನಗುತ್ತಿದ್ದರು.

ಸ್ಕಂದನನ್ನು ನೋಡುತ್ತಲೇ ವಿವೇಕ “ಬನ್ನಿ ಸಾರ್! ನಮ್ಮ ಹೋರಾಟದ ಕರ್ಮಸ್ಥಳಕ್ಕೆ, ನಮ್ಮ ಆಲೋಚನೆಗಳನ್ನ ರೂಪಿಸಿದ ಥಿಂಕ್ ಸ್ಕೂಲ್‍ಗೆ…” ಎಂದ.

“ಅವತ್ತು ನೀವು ನನ್ನನ್ನ ಗದರಿ ಹೋದಿರಲ್ಲ ಆ ಬೇಸರವನ್ನ ಮರೆಸೋಕೆ ಅಲ್ಲ ತಾನೆ ಈ ಮರ್ಯಾದೆ?” ಎಂದ ಸ್ಕಂದ ವಿವೇಕನ ಕೈ ಹಿಡಿದು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಹುರಿಮೀಸೆ

“ನೋಡಿ ಒಬ್ಬರ ಸುಳ್ಳು ಇನ್ನೊಬ್ಬರಿಗೆ ಗೊತ್ತಾದರೆ ಅವರಿಬ್ಬರಲ್ಲಿ ಎಷ್ಟು ಸಲಿಗೆ ಬೆಳೆಯುತ್ತೆ ಅಂತ…” ಎಂದ ವಿವೇಕ ತನ್ನೊಳಗೇ ಇನ್ನೊಂದು ಸುಳ್ಳಿನ ಬಳ್ಳಿ ಹಬ್ಬುತ್ತಿದೆಯೇನೋ ಎಂದು ನಡುಗತೊಡಗಿದ.

ಇಬ್ಬರ ಉಸಿರೂ ಒಬ್ಬರಿಗೊಬ್ಬರು ತಾಕುತ್ತಿದೆಯೇನೋ ಅಂದುಕೊಳ್ಳುವಾಗಲೇ ರೂಪಕ ಓಡೋಡಿ ಬಂದು “ಸಾರ್ ನಾನು ಅವತ್ತೇ ಹೇಳ್ದೆ… ಆ ಚೇತನ ಸರಿ ಇಲ್ಲ ಅಂತ… ನಿಮ್ಮ ಹೆಂಡ್ತಿಯರಿಬ್ಬರಿಗೂ ಚೇತನನೇ ಗೈಡ್ ಮಾಡಿ ಪೊಲೀಸ್ ಕಂಪ್ಲೇಂಟ್ ಕೊಡ್ಸಿರೋದು… ನೀವೇನೂ ಯೋಚ್ನೆ ಮಾಡ್ಬೇಡಿ ಸಾರ್… ಇಬ್ರೂ ಒಂದಷ್ಟು ದಿನ ಎಲ್ಲಾದ್ರೂ ತಲೆ ಮರೆಸ್ಕೊಂಡು ಇರಿ… ಡೆಲ್ಲಿಗೆ ಸೆಮಿನಾರ್‍ಗೆ ಹೋಗಿದ್ದಾರೆ ಅಂತ ನಾನು ಕತೆÉ ಹೆಣಿತೀನಿ… ಹೋಗಿ ಹೋಗಿ…” ಎಂದು ಅಲ್ಲಿಂದ ತಪ್ಪಿಸಿಕೊಂಡ.


ಕಲ್ಪಿತಾ ತನ್ನ ಮನೆಯೊಳಗೆ ವಿನ್ಯಾಸ್ ಕುಳಿತಿದ್ದುದನ್ನು ಕಂಡು ಬೆಚ್ಚಿದಳು. ಅವನ ಮಾತುಗಳು ತನ್ನೊಳಗಿನ ಮಾತುಗಳೆ, ಅಲ್ಲವೇ ಯೋಚಿಸತೊಡಗಿದಳು:

“ಅವನು ವಾಪಸ್ ಬರೋದಿಲ್ಲ ಅಂತ ನಂಗೆ ಗೊತ್ತಾಗಿದೆ… ನಿನ್ನ ಕಲೆಗೆ, ಅಂತಸ್ತು, ಅಭಿರುಚಿಗೆ ನಾನು ಸರಿಯಾದ ಜೋಡಿ ಅನ್ನಿಸೋದಿಲ್ವ?”

“ಅವನು ದೂರದಲ್ಲಿದ್ದಾಗ ಅವನ ಅಗತ್ಯ ಹೆಚ್ಚು ಕಾಡಿದ್ದು ನಿಜ. ನೀವು ಈಗ ನನ್ನನ್ನ ಬಯಸ್ತಿರೋವಾಗ ನನ್ನ ಗಂಡ ನಂಗೆ ಎಲ್ಲರಿಗಿಂತ ಹೆಚ್ಚು ಅಗತ್ಯ ಅನ್ನಿಸ್ತಿರೋದು ಇನ್ನೂ ನಿಜ..! ನನ್ನ ಗಂಡ ವಾಪಸ್ ಬರದೆ ಇದ್ರೆ ನಾನು ಖಂಡಿತ ನಿಮ್ಮೊಂದಿಗೆ ಇರ್ತೀನಿ…”

‘ಇದು ಕನಸಿನ ಗಾಳವೆ, ಇದಕ್ಕೆ ಸಿಕ್ಕ ಮೀನು ನಾನೆ?’ ಒದ್ದಾಡತೊಡಗಿದಳು ಕಲ್ಪಿತಾ.


ನಾವಿಬ್ಬರೂ ಬಂದೀಖಾನೆಯಂತಹ ಮನೆಯಲ್ಲಿದ್ದೇವೆ ಎನ್ನಿಸತೊಡಗಿತು ಸ್ಕಂದ ವಿವೇಕರಿಬ್ಬರಿಗೂ. ಸುತ್ತಲೂ ಗೋಡೆ; ಒಂದೇ ಕಿಟಕಿ.

ಸ್ಕಂದ ‘ನಾವು ಆ ರೂಪಕನ ಮಾತು ಕೇಳಿ ತಪ್ಪು ಮಾಡಿದ್ವೇನೋ ಅನ್ನಿಸ್ತಿದೆ ಸಾರ್’ ಅಂದರೆ, ವಿವೇಕ ‘ನಮ್ಮ ಹೆಂಡತಿಯರು ನಮ್ಮ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾರೆ ಅನ್ನೋದು ರೂಪಕನದ್ದೇ ಕತೆ ಅಂತ ಕಾಣುತ್ತೆ…’ ಎಂದ.

‘ಆದ್ರೆ ನಾವು ಆವತ್ತು ಇಲ್ಲಿಗೆ ಓಡಿ ಬಂದಾಗ ಖುಷಿಯಾಗಿದ್ದೂ ನಿಜ ತಾನೆ? ನಂಗಂತೂ ದೊಡ್ಡ ಬಿಡುಗಡೆ ಸಿಕ್ಕಂತಾಗಿತ್ತು… ಆದ್ರೆ ಈಗ ನಾವು ನಮ್ಮ ಹೆಂಡತಿಯರೊಂದಿಗೆ, ಮಗುವಿನೊಂದಿಗೆ ಮಾತಾಡ್ದೆ, ಜಗಳ ಆಡದೆ, ತಿಕ್ಕಾಟ ಇಲ್ದೆ, ಕನಿಷ್ಟ ಒಂದು ಪ್ರೀತಿ ಮಾತೂ ಇಲ್ದೆ ಇರೋದು ಜೈಲಿಗಿಂತ ಹಿಂಸೆ ಅನ್ನಿಸ್ತಿಲ್ವೆ?’

-ಹೀಗೆ ಅವರಿಬ್ಬರೂ ಮಾತಾಡಿಕೊಂಡು ಉದುರಿಸಿದ ಕೆಲವು ತುಣುಕುಗಳು ಇವು:

ಸ್ಕಂದ ಹೇಳಿದ್ದು: ನಮ್ಮ ಮನಸ್ಸನ್ನ ನಾವು ನಮ್ಮದೇ ಕಣ್ಣುಗಳಿಂದ ನೋಡಿಕೊಳ್ತಿದ್ದಾಗ ಘೋರ ಅನ್ನಿಸ್ತಿರಲಿಲ್ಲ… ಬೇರೆಯವರು ಅದನ್ನ ತೆರೆದಿಟ್ಟಾಗ ಪರಿಣಾಮ ಬೇರೆಯಾಗಿ ಕಾಣಿಸುತ್ತೆ… ಅದು ಎಂತಹ ಅನಾಹುತಕ್ಕೆ ಬೇಕಾದ್ರೂ ನೂಕಬಹುದು… ಆದ್ರೆ ಆ ರೂಪಕ ಅದನ್ನ ‘ಜ್ಞಾನಸ್ಫೋಟ’ ಅಂತಾನೆ… ಥು!

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಏಳು ಮಲ್ಲಿಗೆ ತೂಕದವಳು…

ವಿವೇಕ ಹೇಳಿದ್ದು: ನಾವು ನಮ್ಮ ಮನಸ್ಸಿಗೆ ಅನ್ನಿಸಿದ್ದನ್ನೆಲ್ಲ ಮಾತಾಡೋದು, ಹಾಗೆ ನಡ್ಕೊಳ್ಳೋದು; ಆಮೇಲೆ ದೂರ ಆಗಿ ನರಳೋದು ಎಲ್ಲ ಕಷ್ಟ ಅನ್ನಿಸ್ತಿದೆ… ಈ ರೂಪಕ, ಚೇತನ ಇಬ್ಬರ ಪರಿಚಯ ಆಗೋಕೂ ಮುಂಚೆ ನಮ್ಮ ಮನಸ್ಸಿನಲ್ಲಿ ನಡೆಯೋದೆಲ್ಲ ಗೊತ್ತಾಗ್ತಿದ್ರೂ ನಾವು ಹೀಗೆ ಸ್ಫೋಟಗೊಳ್ಳೋವಷ್ಟು ಮುಂದುವರೀತಿರಲಿಲ್ಲ..!

ಕನಸುಗಳಿಗೆ ತೆರೆ ಬೀಳೋ ಹೊತ್ತು

“ಏಳು ಅಣ್ಣಯ್ಯ! ನಿನ್ನಂಥೋನು ನನ್ನ ಕಾಲಿಗೆ ಬೀಳೋದಾ?”

ಮೇಲೆದ್ದ ರೂಪಕ “ನಾನು ನಿನ್ನ ಕಾಲಿಗೆ ಬಿದ್ದದ್ದನ್ನ ಯಾರೂ ನೋಡಿಲ್ಲ ತಾನೆ?” ಎಂದ ಅಳುಮೋರೆಯೊಂದಿಗೆ.

ಚೇತನ ಜೋರಾಗಿ ಚಪ್ಪಾಳೆ ತಟ್ಟುತ್ತಾ “ನಾನು ನೋಡಿದ್ದು ಸಾಕಲ್ವ? ಜಗತ್ತಿನ ಹೆಣ್ಣು-ಗಂಡೆಲ್ಲ ನೋಡಿದ ಹಾಗೇನೇ” ಎನ್ನುತ್ತಾ ನಕ್ಕಿತು.

ಸಮಾಧಾನಗೊಂಡ ರೂಪಕ “ನಾವಿಬ್ಬರೂ ನೋಡೋದು ಇನ್ನೂ ಇದೆ. ಕತೆಯ ಕನಸುಗಳು ಕೊನೆಗಾಣೋ ಹೊತ್ತು ಇದು…ನಡಿ” ಎಂದು ಅದರ ಕೈ ಹಿಡಿದು ಹೊರಡಿಸಿದ.


ಕಳ್ಳಹೆಜ್ಜೆಗಳನ್ನಿಟ್ಟ ವಿವೇಕ, ಚಿಂತಾಮಣಿ, ಸ್ಕಂದ, ಕಲ್ಪಿತಾ ಎಲ್ಲರ ಕೈಗಳಲ್ಲೂ ಹರಿತವಾದ ಚೂರಿಗಳಿದ್ದವು. ‘ರೂಪಕ’, ‘ಚೇತನ’ ಎಂಬ ನಾಮಫಲಕಗಳುಳ್ಳ ಎರಡೂ ಮನೆಗಳ ಒಳಗೆ ಮೆಲ್ಲನೆ ಒಬ್ಬರ ಹಿಂದೆ ಒಬ್ಬರು ಹೋಗಿ ಕೆಲ ಕ್ಷಣಗಳಲ್ಲೇ ಹೊರಬಂದು ಅವರು ಮಾತಾಡಿಕೊಂಡು ಹಿಗ್ಗಿದ್ದು ಹೀಗಿತ್ತು:

‘ಆಹಾ! ಕೊನೆಗೂ ಇವನ ಕತೆ ಮುಗಿಸ್ದೆ… ಇವನಿಂದ ತಾನೆ ಮನೆ, ಮನಸ್ಸಿಗೆ ನೆಮ್ಮದಿ ಇಲ್ಲ…!’

‘ಇದು ಹೆಣ್ಣೂ ಅಲ್ಲ, ಗಂಡೂ ಅಲ್ಲ! ನಮ್ಮ ನಡುವೆ ಸುಳಿದಾಡೋ ಆತ್ಮವಂತೆ! ಈ ಆತ್ಮವಿದ್ರೆ ತಾನೆ ಆತ್ಮವಿಮರ್ಶೆ, ಆತ್ಮ ನಿವೇದನೆ ಎಲ್ಲ… ಇದಿದ್ರೆ ತಾನೆ ನಮ್ಗೆಲ್ಲ ಆತ್ಮಸಾಕ್ಷಿ ಕಾಡೋದು..!’

ಹಾಗೆಯೇ ಅವರು ತಮ್ಮತಮ್ಮ ಚೂರಿಗಳ ಬಚ್ಟಿಟ್ಟುಕೊಂಡರು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಒಂದು ಗುಡ್ ಮಾರ್ನಿಂಗ್ ಮೆಸೇಜು

Exit mobile version