:: ಚೀಮನಹಳ್ಳಿ ರಮೇಶ್‌ಬಾಬು
ರಾತ್ರಿಯೆಲ್ಲ ಧೋ ಎಂದು ಸುರಿದ ಮಳೆ ಮುಂಜಾನೆ ಆರು ಗಂಟೆಯಾದರು ನಿಂತಿರಲಿಲ್ಲ. ಜಿಟಿಯುತ್ತಲೆ ಇತ್ತು. ಅರ್ಧ ಮುಕ್ಕಾಲು ಗಂಟೆಗೊಮ್ಮೆ ಸರವುಗಳಲ್ಲಿ ಜಡಿಯುತ್ತಲೆ ಇತ್ತು. ಅದು ಅಕಾಲಿಕ ಮಳೆಯೇನೂ ಆಗಿರಲಿಲ್ಲ. ಮುಂಗಾರು ಆಗಲೆ ಶುರುವಾಗಿತ್ತು. ಬೆಂಗಳೂರಿನಲ್ಲಿ ಮಳೆಗಾಲ ಶುರುವಾಯಿತೆಂದರೆ ನಿಯಮಿತವಾಗಿ ಸಂಜೆ ಹೊತ್ತು ಅಥವಾ ರಾತ್ರಿ ಇಂತಿಷ್ಟು ಹೊತ್ತಿಗೆ ಎಂಬಂತೆ ವೇಳಾಪಟ್ಟಿ ಹಾಕಿಕೊಂಡಂತೆ ಸುರಿಯುವ ಮಳೆ, ಅಪರೂಪಕ್ಕೆ ರಾತ್ರಿಯೆಲ್ಲಾ ಸುರಿಯುವುದೂ ಉಂಟು. ರಾಜಕಾಲುವೆ ಹಿಡಿಸದೆ ಅಥವ ಮತ್ತೆಲ್ಲೊ ತಡೆಯುಂಟಾಗಿ ಅದು ಉಕ್ಕಿ ಬಡಾವಣೆಗೆ ನುಗ್ಗಿತ್ತು. ಹೊಸ ಬಡಾವಣೆಯ ಮನೆಗಳನ್ನು ಎತ್ತರಿಸಿ ಕಟ್ಟಿದ್ದುದರಿಂದ ಬಹುತೇಕ ಮನೆಗಳಿಗೆ ನೀರು ನುಗ್ಗಿಲ್ಲವಾದರು ತಗ್ಗಿನಲ್ಲಿರುವ ಒಂದಷ್ಟು ಮನೆಗಳಿಗೆ ಕಾಟ ಕೊಡಲು ಶುರುಹಚ್ಚಿಕೊಂಡಿತ್ತು. ನಡುವಯಸ್ಸಿನ ಹೆಂಗಸೊಬ್ಬಳು ರಸ್ತೆಗೆ ಬಂದು ಹರಿಯುತ್ತಿರುವ ನೀರಿನಲ್ಲಿ ಕಾಲುಗಳನ್ನು ಎಳೆಯುತ್ತಾ ಎತ್ತರಿಸಿದ ದನಿಯಲ್ಲಿ ಯಾರಿಗೋ ಶಾಪ ಹಾಕುತ್ತಲಿದ್ದಳು. ನಟಿಕೆ ಮುರಿದು ‘ಆಹಾ ನಮ್ಮಪ್ಪಗಳುರಾ…ಆರಾಮಾಗಿರಿ’ ಎನ್ನುತ್ತಾ ತನ್ನ ಮನೆಯ ಒಳಗೆ ನಡೆದಳು. ಆ ಮನೆಯಲ್ಲಿಯೂ ಮೊಣಕಾಲುದ್ದಕ್ಕೆ ನೀರು ನಿಂತಿತ್ತು. ಅದೇ ಮನೆಯ ಎದುರಿಗಿರುವ ನಲವತ್ತು ಐವತ್ತರ ಅಳತೆಯ ಖಾಲಿ ಸೈಟಿಗೂ ನೀರು ನುಗ್ಗಿತ್ತು. ಆ ಸೈಟಿನಲ್ಲಿ ಒಂದು ಬದಿಗೆ ಉದ್ದಕ್ಕೆ ನಾಲಕ್ಕು ಶೆಡ್ಡುಗಳಿದ್ದವು. ಹಾಲೋ ಬ್ರಿಕ್ಸ್‍ನಿಂದ ಗೋಡೆಗಳನ್ನು ಐದು ಅಡಿಗಳವರೆಗೆ ಎತ್ತರಿಸಿ ಅದರ ಮೇಲೆ ಕಬ್ಬಿಣದ ಶೀಟುಗಳನ್ನು ಹಾಸಲಾಗಿತ್ತು. ಅವುಗಳಿಗೆ ತುಕ್ಕು ಹಿಡಿದು ಅಲ್ಲಲ್ಲಿ ಆಗಿದ್ದ ತೂತುಗಳ ಮೇಲೆ ಮುರಿದ ಸಿಮೆಂಟ್ ಶೀಟಿನ ತುಂಡುಗಳನ್ನು ಇಡಲಾಗಿತ್ತು. ಎಲ್ಲಾ ಶೆಡ್ಡುಗಳೂ ರಾತ್ರಿ ಬಿದ್ದ ಮಳೆಗೆ ನಲುಗಿ ಮುದುಡಿ ಕುಳಿತಿರುವಂತೆ ಕಾಣುತ್ತಿದ್ದವು.
ಸುಕನ್ಯಳಿಗೆ ಕುರುಡು ಬಡಿದಂತಾಗಿ ತನ್ನ ಶೆಡ್ಡಿನ ಮುಂದೆ ನಿಂತುಕೊಂಡಳು. ರಾತ್ರಿಯೆಲ್ಲಾ ಆ ಕತ್ತಲಿನ ಮಳೆಯಲ್ಲಿ ನಿದ್ದೆಗೆಟ್ಟಿದ್ದಳು. ಶೆಡ್ಡು ರಾತ್ರಿಯೆಲ್ಲ ತೊಟ್ಟಿಕ್ಕುತ್ತಲೆ ಇತ್ತು. ಶಬ್ದ ಬಂದ ಕಡೆಗೆ ಸಿಕ್ಕ ಪಾತ್ರೆಯನ್ನು ಇಟ್ಟು ಸುಮ್ಮನೆ ಕೂರುತ್ತಿದ್ದಳು. ರಾತ್ರಿಯೆಲ್ಲ ಹೀಗೇ ಸಾಗಿತ್ತು. ಗಂಡ ರಾಮಾಂಜಿ ಮಾತ್ರ ಅಲುಗಾಡದೆ ಬಿದ್ದಿದ್ದ. ರಾತ್ರಿ ಬರುವಾಗ ವಿಪರೀತವೆ ಕುಡಿದುಕೊಂಡು ಬಂದಿದ್ದ. ಜೊತೆಗೆ ‘ನಂಗಿಷ್ಟ ಇಲ್ಲ…ನೀನು…ನೀನು’ ಎಂದು ಅಸ್ಪಷ್ಟವಾಗಿ ಏನೇನೊ ಗೊಣಗಿಕೊಳ್ಳುತ್ತಾ ಪ್ರಜ್ಞಾಹೀನನಾದವನಂತೆ ಬಿದ್ದುಕೊಂಡಿದ್ದ. ಮುಂಜಾವು ಐದುಗಂಟೆಯ ವೇಳೆಗೆ ಶೆಡ್ಡಿಗೆ ನೀರು ನುಗ್ಗಿದಾಗ ಗಾಬರಿಗೊಂಡು ರಾಮಾಂಜಿಗೆ ಬೆನ್ನ ಮೇಲೆ ಬಡಿದು ಎಬ್ಬಿಸಿದ್ದಳು. ಎದ್ದವನೆ ತಲೆಯನ್ನು ಒಮ್ಮೆ ವದರಿ ನಂತರ ಏನೂ ಆಗಿಲ್ಲವೆಂಬಂತೆ ಒಳಗೆ ನುಗ್ಗಿದ ನೀರನ್ನು ನೋಡುತ್ತಾ ಅಲ್ಲೆ ಪಕ್ಕದಲ್ಲಿದ್ದ ರಾಗಿ ಮೂಟೆಯ ಮೇಲೆ ಕುಳಿತುಬಿಟ್ಟ. ಅದೂ ಬಹುಪಾಲು ಮುಳಿಗಿಹೋಗಿತ್ತು. ಹತ್ತು ಕೇಜಿ ರಾಗಿ. ಈಚೆಗಷ್ಟೆ ತಂದಿದ್ದು. ಕರುಳು ಕಿವುಚಿದ ಹಾಗಾಯಿತು. ಮತ್ತಷ್ಟು ಸಾಲ ಮತ್ತಷ್ಟು ಬಡ್ಡಿ ಎಂದುಕೊಂಡಳು. ಕೈಗೆ ಸಿಕ್ಕ ಪಾತ್ರೆಯಲ್ಲಿ ನೀರನ್ನು ಅಚೆ ಹಾಕತೊಡಗಿದಳು. ಹಾಗೆ ಬಹಳ ಹೊತ್ತು ಹಾಕುತ್ತಲೆ ಇದ್ದಳು.
ವ್ಯರ್ಥಪ್ರಯತ್ನವೆಂದು ಗೊತ್ತಿದ್ದರು ಪ್ರಯತ್ನ ಮಾಡಬೇಕಲ್ಲ ಎಂಬ ಜಿದ್ದಿಗೆ ಬಿದ್ದವಳಂತೆ ದಣಿಯತೊಡಗಿದಳು. ಕೊನೆಗೆ ಸೋಲನ್ನು ಒಪ್ಪಿಕೊಂಡವಳಂತೆ ‘ಅಯ್ಯೊ ಗ್ರಹಚಾರವೆ’ ಎಂದುಕೊಳ್ಳುತ್ತಾ ಆಚೆ ಬಂದದ್ದು.
ರಾಮಾಂಜಿ ಒಳಗೆ ಮೊಳಕಾಲುದ್ದದ ನೀರಿನಲ್ಲೆ ರಾಗಿ ಮೂಟೆಯ ಮೇಲೆ ಖಿನ್ನನಾಗಿ ಕುಳಿತಿದ್ದ. ಅದು ಇತ್ತೀಚಿನ ದಿನಗಳಲ್ಲಿ ಅವಳಿಗೆ ಹೊಸದೇನೂ ಆಗಿರಲಿಲ್ಲ. ಬಹಳವೆ ಬದಲಾವಣೆಯಾಗಿದೆ ಅವನಲ್ಲಿ ಎಂದುಕೊಂಡಳು. ಜೊತೆಗೆ ಇಳಿದು ಹೋಗಿದ್ದಾನೆ ಸಹ. ಮೊದಲು ಅಪರೂಪಕ್ಕೆ ಕುಡಿಯುತ್ತಿದ್ದ ವ್ಯಕ್ತಿ ಈಗ ಪ್ರತಿದಿನವೂ ಕುಡಿದುಕೊಂಡು ಬಂದು ಹೊರಳಾಡುತ್ತಾನೆ. ಅವರು ಆ ಜಾಗಕ್ಕೆ ಬಂದು ಬಹಳ ದಿನಗಳೇನೂ ಆಗಿರಲಿಲ್ಲ. ಈ ಮೊದಲು ಇದ್ದ ಶೆಡ್ಡಿನ ಜಾಗದಲ್ಲಿ ಆ ಸೈಟಿನ ಮಾಲಿಕ ಅಲ್ಲೊಂದು ಅಪಾರ್ಟ್‍ಮೆಂಟ್ ಕಟ್ಟಿಸುವ ಸಲುವಾಗಿ ಅಲ್ಲಿದ್ದವರನ್ನೆಲ್ಲಾ ಹೊರಡಲು ತಿಳಿಸಿದ್ದ. ಆಗ ರಾಮಾಂಜಿ ಮತ್ತೆಲ್ಲಿಗೆ ಹೋಗುವುದು ಎಂಬುದು ಗೊತ್ತಾಗದೆ ಚಿಂತೆ ಹೊತ್ತು ಕುಳಿತಿದ್ದ.
ಅಂತ ಸಮಯದಲ್ಲೆ ಅವನ ಮೇಸ್ತ್ರಿ ಈಗಿರುವ ಜಾಗವನ್ನು ತೋರಿಸಿ ಅದು ತನಗೆ ಗೊತ್ತಿರುವವರದ್ದೆ. ಎರಡು ವರ್ಷಗಳ ಮಟ್ಟಿಗೆ ತೊಂದರೆ ಇಲ್ಲ ಎಂದು ತಿಳಿಸಿದ್ದ. ಮೇಸ್ತ್ರಿಯೆ ಕಟ್ಟಿಸಿಕೊಟ್ಟ ಆರಡಿ ಅಗಲದ ಎಂಟಡಿ ಉದ್ದದ ಶೆಡ್ಡು. ಜೊತೆಗೆ ತಿಂಗಳಿಗೆ ಜಾಗದ ಬಾಡಿಗೆ ಲೆಕ್ಕ ಎಂದು ಸಾವಿರ ರುಪಾಯಿ ಅವನ ಕೈಗೆ ಕೊಡಬೇಕು. ಇಂತಹ ನಾಲಕ್ಕು ಶೆಡ್ಡುಗಳಿವೆ ಆ ಜಾಗದಲ್ಲಿ. ಮೇಸ್ತ್ರಿಯ ಜೇಬಿಗೆ ತಿಂಗಳಿಗೆ ನಾಲಕ್ಕು ಸಾವಿರ. ಮತ್ತು ಇಂತಹ ಶೆಡ್ಡುಗಳನ್ನು ಹಲವಾರು ಕಡೆ ಕಟ್ಟಿಸಿಕೊಟ್ಟಿರುವ ಅವನು ಸಾಕಷ್ಟು ಆದಾಯವನ್ನು ಇದರಿಂದಲೆ ದುಡಿಯುತ್ತಾನೆ. ಜೊತೆಗೆ ಮೇಸ್ತ್ರಿಯ ಕೆಲಸ. ರಾಮಾಂಜಿಗೆ ಈ ಮೇಸ್ತ್ರಿ ಸಲೀಸಾಗಿ ಎಷ್ಟೊಂದು ದುಡಿಯುತ್ತಾನೆ ಎಂದು ಹಲವುಬಾರಿ ಅನಿಸಿದ್ದೂ ಉಂಟು. ಅಂತಹ ಚಾಲಾಕಿತನವನ್ನು ರೂಢಿಸಿಕೊಳ್ಳಲಾಗದ ತನ್ನ ದಡ್ಡತನವನ್ನೊ ಅಯೋಗ್ಯತನವನ್ನೊ ಹಳಿದುಕೊಂಡು ಸುಮ್ಮನಾಗುತ್ತಿದ್ದ. ತಾನು ಸಣ್ಣವನಿದ್ದಾಗ ಊರ ಪಟೇಲ ತನ್ನ ಹುರಿಮೀಸೆಯನ್ನು ತಿರುವಿಕೊಳ್ಳುತ್ತಾ ಬೀದಿಗಳಲ್ಲಿ ಅಡ್ಡಾಡುತ್ತಿದ್ದುದು ನೆನಪಾಗತೊಡಗಿತು. ಈಗಲೂ ಅದೇ ಹುರಿಮೀಸೆ. ಇಡೀ ನಗರವೆ ಹುರಿಮೀಸೆಯನ್ನು ತಿರುವುತ್ತಾ ಗಹಗಹಿಸಿ ನಗುತ್ತಿರುವಂತೆ ಅನಿಸತೊಡಗಿತು. ಎದ್ದು ಆಚೆ ಬಂದವನೆ ‘ನಡೀ…ಊರಿಗೆ ಹೊಂಟುಬಿಡುವ. ಸಾಕಾಗೋಗಿದೆ ಇಲ್ಲಿ’ ಎಂದು ತನ್ನ ಮುಂದೆ ಹರಿಯುತ್ತಿರುವ ನೀರಿನ ಕಡೆಗೆ ನೋಡುತ್ತಾ ಸುಕನ್ಯಳಲ್ಲಿ ಹೇಳಿದ. ಅವಳು ಅವನ ಕಡಗೆ ನೋಡಿದಳು. ತನ್ನ ಮುಖವನ್ನು ದಿಟ್ಟಿಸಿ ಆ ಮಾತು ಹೇಳಲಿ ಎಂದು ಅಪೇಕ್ಷೆ ಪಟ್ಟಳು. ಅವನ ನೋಟ ಹರಿವ ನೀರಿನ ಮೇಲೆಯೆ ನೆಟ್ಟಿತ್ತು. ಆ ಸೈಟಿನ ಮತ್ತೊಂದು ತುದಿಗಿರುವ ಮಣ್ಣನ್ನು ಎತ್ತಿ ನೀರು ಹರಿದು ಹೋಗಲು ಅನುವು ಮಾಡಿಕೊಡುವ ಪ್ರಯತ್ನದಲ್ಲಿ ಒಂದಷ್ಟು ಜನರಿದ್ದರು. ಪಕ್ಕದ ಶೆಡ್ಡಿನ ಮತ್ತು ಕೊನೆ ಶೆಡ್ಡಿನ ಇಬ್ಬರು ಸನಿಕೆಗಳನ್ನು ಹಿಡಿದು ಆ ಕೆಲಸದಲ್ಲಿ ತೊಡಗಿದ್ದರು. ಅವರ ಜೊತೆಗೆ ಮತ್ತೊಂದಷ್ಟು ಜನ. ಅವರನ್ನು ಸುತ್ತುವರೆದ ಮಕ್ಕಳ ಸಂಭ್ರಮ ಇಡೀ ಬಡಾವಣೆಗೆ ಕೇಳಿಸುತ್ತಿತ್ತು. ಅಷ್ಟು ದೂರದಲ್ಲಿ ತೇಲಿಕೊಂಡು ಹೋಗುತ್ತಿದ್ದ ಹಾವನ್ನು ಕಂಡು ಒಬ್ಬ ಹುಡುಗ ಭಯದಲ್ಲಿ ‘ಲೇ ಹಾವು’ ಎಂದು ಕೂಗಿದ. ಆಗಲೆ ಮಣ್ಣನ್ನು ಒಂದಷ್ಟು ಅಗೆದದ್ದರಿಂದ ನೀರಿನ ಹರಿವು ಆ ಕಡೆಗೆ ತಿರುಗಿತ್ತು. ಹಾಗಾಗಿ ಹಾವೂ ಸಹ ಆ ಕಡೆಗೆ ತೇಲಿಕೊಂಡು ಹೋಯಿತು. ಅಲ್ಲೆ ಮಣ್ಣು ಅಗೆಯುತ್ತಿದ್ದ ವ್ಯಕ್ತಿಯೊಬ್ಬ ‘ಲೆ ನಾಗಪಾಮುರ’ ಎನ್ನುತ್ತಾ ಸನಿಕೆಯನ್ನು ತಿರುಗಿಸಿ ಅದರ ತಲೆಗೆ ಬಡಿದ. ಅದು ಒದ್ದಾಡುತ್ತಾ ಹರಿವಿನಲ್ಲಿ ಕೊಚ್ಚಿಕೊಂಡು ಹೋಯಿತು.
ಸುಕನ್ಯ ‘ಏನ್ ಉಳಿಸಿದ್ದೀಯಂತ ಊರಿಗೆ ವೋಗೊದು. ಎಲ್ಲಾ ನೀಸ್ಕಂಡಾಯ್ತಲ್ಲ’ ಎಂದು ರೇಗಿದಳು. ‘ಏನ್ ನಾನ ನೀಸಿದ್ದು? ವೋಗಿ ನಮ್ಮಪ್ಪನುಕನ್ನು’ ಅವನೂ ದನಿಯನ್ನು ಏರಿಸಿ ನುಡಿದ.
‘ನಿಮ್ಮಪ್ಪನುಕೆ ಅನ್ನಕ್ಕೆ ಎಲ್ಲಿ ಸಿಗ್ತಾನೆ? ಏನ್ ಸಮಾದಿ ಕಟ್ಸಿದೀಯ? ಅದಕು ಜಾಗ ಇಲ್ದೆ ಸುಟ್ಟಾಕ್ಬುಟ್ಟೆ’ ಅವಳ ಅಸಹನೆಯೂ ಕಟ್ಟೆಯೊಡೆಯಲು ಹಾತೊರೆಯುತ್ತಿತ್ತು. ಆ ಶೆಡ್ಡಿನ ಇಕ್ಕಟ್ಟಿನಲ್ಲಿ ಅದಕ್ಕೊಂದಕ್ಕೆ ಜಾಗ ಇರುವುದು ಎಂಬಂತೆ ಅದು ಆಗಾಗ ಇಣುಕುತ್ತಲೆ ಇರುತ್ತದೆ. ರಾಮಾಂಜಿ ಸುಕನ್ಯಳ ಕಡೆಗೇ ನೋಡತೊಡಗಿದ. ಜುಟ್ಟು ಹಿಡಿದು ಬೆನ್ನಿಗೆ ದಪದಪನೆ ಗುದ್ದಬೇಕನಿಸಿತು. ಅಷ್ಟರಲ್ಲಿ ಅವನಿಗೆ ತನ್ನ ತಂದೆಯ ಮುಖ ಕಣ್ಣಮುಂದೆ ಬಂದು ‘ಎಲ್ಲಾ ಆ ನಾಲಾಯಕ್ ಮಗನಿಂದ್ಲೆ ಆಗಿದ್ದು. ಆಳ್ಮಾಡ್ಬುಟ್ಟ ನಮ್ಮುನ್ನ. ನಡುನೀರಿಗೆ ತಳ್ಳಿ ವೋಗ್ಬಿಟ್ಟ’ ಎಂದು ಗೊಣಗತೊಡಗಿದ.
ಅದು ಬರೋಬ್ಬರಿ ಇಪ್ಪತೈದು ವರ್ಷಗಳ ಹಿಂದಿನ ಮಾತು. ರಾಮಾಂಜಿಗೆ ಆಗಿನ್ನೂ ಆರೇಳು ವರ್ಷಗಳ ವಯಸ್ಸು. ರಾಮಾಂಜಿಯ ತಂದೆ ಕ್ರಿಷ್ಣಪ್ಪ ಊರಲ್ಲಿರುವ ಎಲ್ಲಾ ಜಮೀನು, ಮನೆ ಮಾರಿಕೊಂಡು ಹೆಂಡತಿ ಮಕ್ಕಳ ಸಮೇತ ಬೆಂಗಳೂರು ಸೇರಿದ್ದ. ಕ್ರಿಷ್ಣಪ್ಪನ ಅಪ್ಪ ರಾಮಪ್ಪ ಊರ ಪಟೇಲರ ಬಳಿ ಸಾಲ ತೀರಿಸಲಾಗದೆ ದುಡಿದೂ ದುಡಿದೂ ಹೈರಾಣಾಗಿ ಊರವರ ಮತ್ತು ಸಂಬಂಧಿಕರ ಗುಟ್ಟಿನ ಮಾತುಕತೆಯಲ್ಲಿ ಅವನ ವಿಷಯವೂ ಸೇರಿಕೊಂಡು ಕುಗ್ಗಿಹೋಗಿದ್ದ. ಚಕ್ರಬಡ್ಡಿಯ ಸುಳಿಯಿಂದ ಆಚೆ ಬರಲಾಗದೆ ಉಸಿರುಗಟ್ಟಿದಂತಾಗಿತ್ತು. ಹೇಗೋ ಮಾಡಿ ಒಂದಷ್ಟು ಲಂಚ ಕೊಟ್ಟು ಬ್ಯಾಂಕ್ ಲೋನ್ ಮಾಡಿ ಪಟೇಲರ ಸಾಲವನ್ನು ತೀರಸಲು ಪ್ರಯತ್ನಿಸಿದ್ದ. ಆದರೂ ಒಂದಷ್ಟು ಉಳಿದಿತ್ತು. ಮತ್ತದು ಬೆಟ್ಟದಂತೆ ಬೆಳೆದುಕೊಳ್ಳುತ್ತಲೆ ಹೋಗುತ್ತದೆಂಬುದೂ ಗೊತ್ತಿತ್ತು. ಜೊತೆಗೆ ಸಾಲ ಕೊಟ್ಟಿದ್ದ ಬೇರೆಯವರು ರಾಮಪ್ಪನ ಮನೆಯ ಮುಂದೆ ಪಟೇಲರ ಸಾಲ ಮಾತ್ರ ತೀರಿಸಿದ್ರೆ ನಮ್ಮದನ್ನು ಯಾರು ನಿಮ್ಮಪ್ಪ ತೀರಿಸ್ತಾನ ಎಂದು ಗಲಾಟೆಗೆ ಇಳಿದಿದ್ದರು. ಮತ್ತೆ ಪಟೇಲರ ಬಳಿ ಸಾಲ ಮಾಡುತ್ತಲೇ ಹೋದ. ಅತ್ತ ಬ್ಯಾಂಕಿನ ಕಡೆಯೂ ಮುಖಮಾಡದೆ ವರ್ಷಗಳು ಉರುಳತೊಡಗಿದವು.
ಎರಡೂ ಕಡೆಯೂ ವಿಕಾರವಾಗಿ ಬೆಳೆದುಕೊಂಡ ಗುಡ್ಡೆ ಅವನನ್ನು ಬುಡಕ್ಕೆ ಹಾಕಿಕೊಂಡು ಸವಕಲು ಮಾಡಿಬಿಟ್ಟಿತ್ತು. ಊರೊಳಗೆ ಸಾಲ ತೀರಿಸಲಾಗದೆ ಹೆಂಡತಿಯನ್ನು ಪಟೇಲರಿಗೆ ಅಡವಿಟ್ಟಿದ್ದಾನೆಂಬ ಗುಸುಗುಸು ಅವನನ್ನು ಪ್ರತಿಕ್ಷಣವೂ ಇರಿಯುತ್ತಲಿತ್ತು. ಒಂದು ಮುಂಜಾನೆ ಕೋಳಿಕೂಗುವ ಮುಂಚೆಯೆ ಮನೆಯಿಂದ ಹೊರಟು ನೇರ ಪಟೇಲರ ಹುಣಸೆ ತೋಪಿಗೆ ನುಗ್ಗಿ ನೇಣುಬಿಗಿದುಕೊಂಡು ಎಲ್ಲದರಿಂದ ಮುಕ್ತಿ ಪಡೆದುಕೊಂಡವನಂತೆ ನೇತಾಡಿಬಿಟ್ಟದ್ದ. ಅದಾದ ಒಂದಷ್ಟು ದಿನಗಳಿಗೆ ಕ್ರಿಷ್ಣಪ್ಪ ತಾನು ಇಲ್ಲೇ ಇದ್ದರೆ ತನ್ನದೂ ಇದೇ ಗತಿ ಎಂದು ಭಾವಿಸಿ ಇರುವ ಎಲ್ಲವನ್ನೂ ಮಾರಿ ಸಾಲ ತೀರಿಸಿ ಉಳಿದ ಒಂದಷ್ಟನ್ನು ಎತ್ತಿಕೊಂಡು ಬೆಂಗಳೂರು ಸೇರಿದ್ದು. ತಾನು, ಅಮ್ಮ, ಹೆಂಡತಿ ಮತ್ತು ಒಬ್ಬನೇ ಮಗ. ಸಣ್ಣ ಸಂಸಾರ ಹೇಗೋ ಬದುಕಬಹುದು ಎಂದುಕೊಂಡಿದ್ದ. ಬೆಂಗಳೂರಿನಲ್ಲಿ ಟೈಲರಿಂಗ್ ಮಾಡಿದರೆ ಒಳ್ಳೆಯ ಆದಾಯವೆಂದು ಕೇಳಿದ್ದ. ಅದರಲ್ಲೂ ಹೆಂಗಸರ ಬಟ್ಟೆಗಳನ್ನು ಹೊಲಿಯುವುದೆಂದರೆ ಬೆಂಗಳೂರಿನಲ್ಲಿ ಡಾಕ್ಟರ್‍ಗಿರಿ ಮಾಡಿದಷ್ಟೆ ಲಾಭದಾಯಕವೆಂದು ಕೇಳಿ ಲೇಡೀಸ್ ಟೈಲರ್ ಸಹ ಆದ. ಶುರುವಿನಲ್ಲಿ ವ್ಯಾಪಾರ ಚನ್ನಾಗಿಯೆ ಇತ್ತು. ಒಂದಷ್ಟು ದುಡ್ಡು ಕೈಗೆ ಬರುತ್ತಿದ್ದಂತೆ ಬಣ್ಣ ಬಣ್ಣದ ಚೂಡಿದಾರ್‍ಗಳ ಮೋಹಕ್ಕೆ ಸಿಲುಕಿ ಬಿಡಿಸಿಕೊಳ್ಳಲಾಗದ ಸುಖದ ವ್ಯಸನಕ್ಕೆ ಒಗ್ಗಿ ಹೋಗಿದ್ದ. ಅದರ ಜೊತೆಗೆ ಕುಡಿತ, ಕಾರ್ಡು ಹೀಗೆ ಅವನ ವ್ಯಸನಗಳು ವೃದ್ಧಿಯಾಗುತ್ತಲೇ ಹೋದವು. ಒಂದು ಬಿಸಿಲೇರಿದ ಮದ್ಯಾಹ್ನದಲ್ಲಿ ಈ ಟೈಲರಿಂಗ್ ಕೆಲಸ ಬಾಳ ಕಷ್ಟ ರಿಯಲ್ ಎಸ್ಟೇಟ್ ಕೆಲಸಕ್ಕೆ ಇಳಿದರೆ ಲಕ್ಷಗಟ್ಟಲೆ ಜೇಬಿಗಿಳಿಸಬಹುದು ಎಂದು ಅಂದಾಜಿಸಿ ಅಂಗಡಿಯ ಬಾಗಿಲು ಎಳೆದಿದ್ದ. ಅಲ್ಲಿ ಶೋಕಿಗಳು ಮತ್ತೊಂದು ಮಜಲಿಗೆ ತಲುಪಿ ವಿಜೃಂಭಿಸತೊಡಗಿದ. ಅದೆ ಕೊರಗಿನಲ್ಲೆ ಕ್ರಿಷ್ಣಪ್ಪನ ತಾಯಿ ತೀರಿಕೊಂಡದ್ದು. ಮತ್ತು ಅದೇ ಸಮಯದಲ್ಲೆ ರಾಮಾಂಜಿ ಕಾಲೇಜು ಮೆಟ್ಟಿಲು ಹತ್ತಲಾಗದೆ ಗಾರೆ ಕೆಲಸಕ್ಕೆ ಸೇರಿಕೊಂಡದ್ದು. ಕೃಷ್ಣಪ್ಪನ ಕುಡಿತ ಮತ್ತು ಶೋಕಿಗಳು ಅವನನ್ನು ಬಲಿ ತೆಗೆದುಕೊಳ್ಳಲು ಬಹಳ ದಿನಗಳೇನೂ ತೆಗೆದುಕೊಳ್ಳಲಿಲ್ಲ. ಅಷ್ಟರಲ್ಲಾಗಲೆ ಅವರು ಸಣ್ಣ ಬಾಡಿಗೆ ಮನೆಯಿಂದ ಶೆಡ್ಡಿನ ವಾಸಕ್ಕೆ ಒಗ್ಗಿಕೊಳ್ಳಲು ಶುರುಹಚ್ಚಿಕೊಂಡಿದ್ದರು. ರಾಮಾಂಜಿಯ ತಾಯಿ ತನ್ನ ಸಂಬಂಧದಲ್ಲೆ ಇದ್ದ ಕೂಲಿಕಾರರ ಮನೆಯ ಸುಕನ್ಯಳನ್ನು ತಂದು ಮಗನಿಗೆ ಕಟ್ಟಿ ಕಣ್ಣುಮುಚ್ಚಿದ್ದಳು.
ಅಂದಿನಿಂದಲೂ ರಾಮಾಂಜಿ ಗಾರೆ ಕೆಲಸವನ್ನೆ ಮುಂದುವರೆಸಿದ್ದಾನೆ. ಆದರೆ ತನ್ನ ತಾತನಿಂದ ಬಂದಂತ ಸಾಲದ ಬಳುವಳಿ ಅವನನ್ನೂ ತಬ್ಬಿಕೊಂಡಿತ್ತು. ಊರ ಕಡೆಯಿಂದ ಬಂದು ರಿಯಲ್ ಎಸ್ಟೇಟ್ ವ್ಯಾಪಾರಕ್ಕಿಳಿದು ಐದಾರು ವರ್ಷಗಳಲ್ಲಿಯೆ ಕೋಟ್ಯಾದಿಪತಿಗಳಾಗಿದ್ದ ಉದಾಹರಣೆಗಳು ಅವನ ಮುಂದಿದ್ದವು. ತನ್ನೂರಿನವನೆ ಆದ ಗೆಂಗಿರೆಡ್ಡಿ ಅದೇ ರಿಯಲ್ ಎಸ್ಟೇಟ್‍ನಿಂದ ಬಂಗಲೆ ಕಾರು ಸಂಪಾದಿಸಿ ಜೊತೆಗೆ ಈಗ ಕಾರ್ಪೊರೇಟರ್ ಸಹ ಆಗಿಬಿಟ್ಟಿದ್ದಾನೆ. ಅವನಂತೆ ತಾನೂ ಯಾಕಾಗಬಾರದು ಎಂದು ಅನ್ನಿಸಿ ಮೊದಲಿಗೆ ಬಾಡಿಗೆ ಮನೆಗಳ ಬ್ರೋಕರ್ ಕೆಲಸವನ್ನು ಶುರುಮಾಡಿದ್ದ. ಮಾತಿನ ಚಾಲಾಕಿತನವೆ ಇಲ್ಲದ ತನ್ನಂತವನಿಗೆ ಅಂತಹ ಕೆಲಸ ಕಷ್ಟವೂ ಹಿಂಸೆಯೂ ಅನಿಸಿ ಮತ್ತೆ ಗಾರೆಕೆಲಸಕ್ಕೆ ಮರಳಿದ್ದ. ಅಷ್ಟರಲ್ಲಾಗಲೆ ಸಾಲ ಬೆಳೆದಿತ್ತು. ತನ್ನೂರಿನವನೆ ಎಂಬ ಸಲುಗೆಯಿಂದ ಗೆಂಗಿರೆಡ್ಡಿಯ ಮನೆಯ ಗೇಟಿನ ಬಳಿ ಕಾದು ಸಾಲಕೇಳಿ ಅಡ ಇಡಲು ಏನೂ ಸಿಗದಾಗಿ ವಾಪಸ್ಸು ಬಂದಿದ್ದ. ಆಗ ಸಿಕ್ಕಿದ್ದೆ ಮೇಸ್ತ್ರಿ ಮಂಜಪ್ಪ. ‘ಲೇ ರಾಮಾಂಜಿ ಸಾಲ ಕೊಡ್ತೀನಿ ಕನ್ಲ. ಆದ್ರೆ ವಾರದ ಪೇಮೆಂಟ್‍ನಲ್ಲಿ ಅದರ ಬಡ್ಡಿ ಯಿಡ್ಕಂಡು ಉಳಿದಿದ್ದನ್ನ ಕೊಡ್ತೀನಿ’ ಎಂದು ಹೇಳಿ ಸಾಲ ಕೊಡಲು ಶುರುಮಾಡಿದ್ದ.
ಸುಕನ್ಯ ಇನ್ನೂ ರಾಮಾಂಜಿಯ ಕಡೆಗೆ ನೋಡುತ್ತಲೆ ಇದ್ದಳು. ಮತ್ತೆ ಅವನು ‘ವೋಗ್ಲಿ ನಿಮ್ಮೂರಿಗಾದ್ರು ವೋಗೋಣ ನಡಿ. ಮಗ ಎಂಗೂ ಅಲ್ಲೆ ಅವುನಲ್ವೆ. ಅವುನ್ನ ಜತೇಗೆ ಇಟ್ಕಂಡು ಕೂಲಿನಾಲಿ ಮಾಡಿನಾದ್ರು ಓದ್ಸೋಣ’ ಎಂದು ನುಡಿದ. ಅವಳು ಗಂಡನ ಕಡೆಗೆ ನೋಡುತ್ತಲೆ ಇದ್ದಳು. ಮಗ ರಾಜೇಶ ಕಣ್ಣಮುಂದೆ ಬರತೊಡಗಿದ. ಇಲ್ಲೆ ಇದ್ದರೆ ಅವನ ಓದೂ ಹಾಳಾಗುತ್ತದೆಂದು ತಿಳಿದ ಸುಕನ್ಯಳ ತಾಯಿ ರಾಜೇಶನನ್ನು ತನ್ನ ಹಳ್ಳಿಗೆ ಕರೆದುಕೊಂಡು ಹೋಗಿ ಒಂದನೆ ಕ್ಲಾಸಿಗೆ ಸೇರಿಸಿ ಆರುತಿಂಗಳಾಗಿದೆ. ಸುಕನ್ಯಳಿಗೆ ಮಗನ ಮುಖ ಕಣ್ಣ ಮುಂದೆ ಬಂದು ಹಿತವೆನಿಸತೊಡಗಿತು. ಎಷ್ಟುದಿನಗಳಾಯಿತಲ್ಲವೆ ಅವನನ್ನು ಮುದ್ದಾಡಿ ಎಂದುಕೊಂಡಳು.
‘ಏನಮ್ಮಿ ವೋಗೋಣ?’ ರಾಮಾಂಜಿ ಮತ್ತೆ ತಗ್ಗಿದ ದನಿಯಲ್ಲಿ ಕೇಳಿದ. ಸುಕನ್ಯ ಕೆರಳಿದಳು. ಅವಳ ಕಂಗಳು ಕೆಂಪಗಾಗತೊಡಗಿದವು. ಇಂತಾ ಸ್ಥಿತೀಲಿ ಹೋಗಿ ಅಮ್ಮನ ಮನೆಯಲ್ಲಿ ಇಳಿದರೆ ಸರೀಕರು ಏನಂದುಕೊಂಡಾರು. ಹೋಗಲಿ ಅಣ್ಣ ಅತ್ತಿಗೆಯ ದೃಷ್ಟಿಯಲ್ಲಿ ಸಣ್ಣವರಾಗಿಬಿಡುವುದಿಲ್ಲವೆ. ಅವರು ಅಂದದ್ದನ್ನು ಅನ್ನಿಸಿಕೊಂಡು ಅವರ ಅಂಕೆಯಲ್ಲಿ ಮುದುಡಿ ಬದುಕುವುದಕ್ಕಿಂತ ಇದೇ ಉತ್ತಮ ಅನಿಸತೊಡಗಿತು. ‘ಹಾ ಯಾಕೆ ನಿಮ್ಮಗಳ ಅಂಟು ರೋಗಾನ ಅವನ್ಕು ಅಂಟಿಸೋಕಾ?’ ಎಂದು ಗಂಡನ ಎದುರು ಉರಿದಳು. ಅವಳ ಉರಿ ಅವನಿಗೆ ತಾಕಿ ದೇಹದ ಸಾರವೆಲ್ಲ ಹೀರಿದಂತಾಗಿ ನಿಸ್ಸಾರಗೊಳ್ಳತೊಡಗಿದ. ಕುಗ್ಗಿಹೋದ. ಮತ್ತೆ ಒಳಗೆ ನಡೆದು ಮೂಟೆಯ ಮೇಲೆ ಕುಳಿತುಕೊಂಡು ತನ್ನ ಎಂದಿನ ಮೌನದ ಚಿಪ್ಪಿನೊಳಗೆ ತೂರಿಕೊಂಡ. ಅವಳು ಅವನ ಕಡೆಗೆ ನೋಡತೊಡಗಿದಳು. ಅವನ ಸ್ಥಿತಿಯನ್ನು ಕಂಡು ತಾನು ಹಾಗೆ ನುಡಿಯಬಾರದಿತ್ತೇನೊ ಎಂದುಕೊಂಡಳು. ಅವನು ಹಾಗೆ ಬಚ್ಚಿಟ್ಟುಕೊಳ್ಳುವುದು, ಬೆಂಗಳೂರು ಬಿಟ್ಟು ಹೋಗೋಣ ಎನ್ನುವುದು, ಅತಿಯಾಗಿ ಕುಡಿದುಕೊಂಡು ಬರುವುದು…ಎಲ್ಲವೂ ಇತ್ತೀಚಿನ ದಿನಗಳಲ್ಲಾಗಿರುವ ಬದಲಾವಣೆಗಳೆ. ಅಪ್ಪಿತಪ್ಪಿ ತನ್ನ ವಿಷಯವೇನಾದರು ಗೊತ್ತಾಯಿತೆ ಅಥವಾ ತನ್ನಲ್ಲೇನಾದರು ಬದಲಾವಣೆಗಳನ್ನು ರಾಮಾಂಜಿ ಗಮನಿಸಿಬಿಟ್ಟನೆ ಎಂಬ ಯೋಚನೆ ಬಂದು ಅವಳ ಮೈ ಆ ಮಳೆಯಲ್ಲೂ ಸಣ್ಣಗೆ ಬೆವರಿದ ಹಾಗಾಯಿತು. ತಾವಿರುವ ಖಾಲಿ ಸೈಟಿನ ಪಕ್ಕದಲ್ಲಿರುವ ಮನೆಯ ಕಡೆಗೆ ನೋಡಿದಳು. ಭವ್ಯವಾದ ಡೂಪ್ಲೆಕ್ಸ್ ಮನೆ. ಆ ಮನೆಗೆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ ಹದಿನೈದು ದಿನಗಳಾಗಿದೆ. ಹಿಂದಿನ ದಿನವೂ ಆ ಮನೆಯ ಮಾಲೀಕ ಅವರ ಶೆಡ್ಡಿನ ಬಳಿ ಬಂದು ‘ಯಾಕಮ್ಮ ಕೆಲಸಕ್ಕೆ ಬರ್ತಿಲ್ಲ, ಕೂಲಿ ಸಾಲ್ತಿಲ್ವ? ಬೇಕಾದ್ರೆ ಇನ್ನೂ ಒಂದು ಸಾವಿರ ಹೆಚ್ಚಿಗೆ ಕೊಡ್ತೀನಿ. ನಾಳೆ ಬಂದ್ಬಿಡು’ ಎಂದು ನುಡಿದಿದ್ದ. ಅವಳಿಗೆ ಅವನ ಮುಖಕ್ಕೆ ಕ್ಯಾಕರಿಸಿ ಉಗಿಯಬೇಕನಿಸಿತು. ಅವನು ಹೊರಡುತ್ತಿದ್ದಂತೆ ಎಂಜಲನ್ನು ಒಟ್ಟುಗೂಡಿಸಿ ‘ತುಫಕ್’ ಎಂದು ಚರಂಡಿಗೆ ಉಗಿದಿದ್ದಳು
ಮೂರು ತಿಂಗಳುಗಳ ಹಿಂದೆ ಬಂಗಲೆಗೆ ಮನೆಗೆಲಸಕ್ಕೆಂದು ಸೇರಿದ್ದಳು. ತಿಂಗಳಿಗೆ ಎರಡುಸಾವಿರ. ಇರುವುದು ಒಬ್ಬನೆ ಮನುಷ್ಯ. ಮಕ್ಕಳಿಬ್ಬರು ಅಮೆರಿಕದಲ್ಲಿ ದುಡಿಯುತ್ತಿದ್ದರೆ ಹೆಂಡತಿ ತೀರಿಕೊಂಡು ಹಲವು ವರ್ಷಗಳಾಗಿದೆ. ಆಗಲಿಂದಲೂ ಒಂಟಿ ಜೀವನ. ತಿಂಗಳಿಗೆ ಎಂಬತ್ತು ಸಾವರಿ ಪೆನ್ಷನ್. ಜೊತೆಗೆ ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸ್. ಆ ವಯಸ್ಸಿನಲ್ಲು ಫಳಫಳನೆ ಹೊಳೆವ ಟೀಶರ್ಟುಗಳನ್ನು ಹಾಕಿಕೊಂಡು ಓಡಾಡುವುದು ರೂಢಿಯಾಗಿತ್ತು. ಸುಕನ್ಯಳು ಮನೆಗೆಲಸಕ್ಕೆ ಸೇರಿ ಒಂದು ತಿಂಗಳಾಗಿತ್ತಷ್ಟೆ. ಒಂದು ಮದ್ಯಾಹ್ನ ಕಸ ಗುಡಿಸುತ್ತಿರಬೇಕಾದರೆ ಹಿಂದಿನಿಂದ ಬಂದು ಸುಕನ್ಯಳ ಮೇಲೆ ಎರಗಿದ್ದ. ಅವಳು ಶುರುವಿನಲ್ಲಿ ಸಾಕಷ್ಟು ಕೊಸರಾಡಿದ್ದಳು. ಅವನು ‘ಒಂದ್ಸಾರಿಗೆ ಎರಡು ಸಾವಿರ ಕೊಡ್ತೀನಿ’ ಎನ್ನುತ್ತಾ ಅವಳ ಕತ್ತಿನ ಭಾಗವನ್ನು ಮೂಸತೊಡಗಿದ. ಅವಳು ಕೊಸರುವುದನ್ನು ಕಮ್ಮಿಮಾಡಿದಳು. ಅವಳ ಮೈಯೂ ಸಾಕಷ್ಟು ಜಡಗಟ್ಟಿಹೋಗಿತ್ತು. ಗಾರೆ ಕೆಲಸ ಮುಗಿಸಿಕೊಂಡು ಸುಸ್ತಾಗಿ ಬರುವ ರಾಮಾಂಜಿ ಒಂದಷ್ಟು ಹೊಟ್ಟೆಗಿಳಿಸಿ ಮಲಗಿಬಿಡುತ್ತಾನೆ. ಎಷ್ಟು ದಿನಗಳಾದವು ಎಂದುಕೊಳ್ಳುತ್ತಾ ತೆರೆದುಕೊಂಡಿದ್ದಳು. ಅವನ ಪಟ್ಟುಗಳು ಅವಳನ್ನು ಹರಿಯುವಂತೆ ಮಾಡಿದವು. ಎಷ್ಟೊಂದು ರಸವತ್ತಾಗಿದಿ…ನೀನು ಸಹಜ ಸುಂದರಿ ಎನ್ನುತ್ತಲೆ ಸವಾರಿ ಮಾಡಿದ್ದ. ವಯಸ್ಸಾಗಿದ್ದರೂ ಎಣ್ಣೆಗೆಂಪಿನ ಮುದ್ದಾದ ಮುಖ. ಅರಳುತ್ತಾ ಖುಷಿಗೊಂಡಿದ್ದಳು. ಕೆಲಸ ಮುಗಿದ ಮೇಲೆ ಕಾಸು ಕೊಡಿ ಎಂದು ಅಂಗೈ ಅಗಲಿಸಿದ್ದಳು. ಅವಳಿಗೆ ಅದರ ಅವಶ್ಯಕತೆ ಹೆಚ್ಚಾಗಿ ಇತ್ತು. ಹೇಗೋ ಒಂದಷ್ಟು ದುಡ್ಡು ಹೊಂದಿಸಿಕೊಂಡು ಗಂಡನ ಸಾಲವೊಂದು ತೀರಿಬಿಟ್ಟರೆ ನೆಮ್ಮದಿಯಾಗಿ ಬದುಕಬಹುದು ಎಂಬ ಕನಸನ್ನು ಕಂಡಿದ್ದಳು. ಆದರವನು ನಾಳೆ ಬಾ ಒಟ್ಟಿಗೆ ಎರಡೂ ಸೇರಿಸಿ ಕೊಡ್ತೀನಿ ಎಂದಿದ್ದ. ಹಾಗೇ ದಿನಗಳು ಉರುಳಿದವು. ಎರಡು, ಮೂರು, ನಾಲಕ್ಕು ಹೀಗೇ ಮೂವತ್ತಾದವು. ಒಂದು ಲಕ್ಷ ಆದಾಗ ಒಟ್ಟಿಗೆ ಬಡ್ಡಿ ಸೇರಿಸಿ ಕೊಡುವೆ ಎಂದ. ಅವಳಿಗೆ ಅನುಮಾನ ಬರಲು ಶುರುವಾಗತೊಡಗಿತು.
ಮತ್ತೊಂದು ದಿನ ‘ನಂಗೊಂದು ಮಗೂನ ಹೆತ್ತುಕೊಡು. ಈಗಾಗಿರುವ ದುಡ್ಡಿಗೆ ಒಂದು ಲಕ್ಷ ಬೋನಸ್ಸು ಸೇರಿಸಿ ಕೊಡ್ತೀನಿ’ ಎಂದ. ಯಾಕೋ ಅವನ ಪಟ್ಟುಗಳು ಅಸಹ್ಯವೆನಿಸತೊಡಗಿದವು. ಹಾಗು ತನ್ನ ಜೊತೆ ಸರಿಯಾಗಿ ಆಟವಾಡುತ್ತಲಿದ್ದಾನೆ ಅನಿಸಿಬಿಟ್ಟಿತು. ಒಂದು ವೇಳೆ ಅವನ ಬೀಜ ತನ್ನೊಳಗೆ ಈಗಾಗಲೆ ಮೊಳೆತುಬಿಟ್ಟಿದ್ದರೆ ಎಂಬ ಸಂಶಯ ಬಂದು ದಿಗಿಲುಗೊಂಡಳು. ಈ ರಾಜ ಬುದ್ದಿ ಮತ್ತೊಂದು ರಾಜ್ಯವನ್ನು ಆಕ್ರಮಿಸಿಕೊಳ್ಳಲು ಏನೆಲ್ಲಾ ಮಾಡುತ್ತದಲ್ಲವೆ ಎಂದನಿಸಿತು. ಕಡೆಯದಾಗಿ ಕೊಡುವಿರೋ ಇಲ್ಲವೋ ಎಂದು ದಬಾಯಿಸಿದ್ದಳು. ಅವನು ನಗುತ್ತಲೆ ‘ಹೇಳಿದೆನಲ್ಲ ನಿನ್ನ ಹೊಟ್ಟೇಲಿ ನನ್ನ ಮಗು ಬೆಳೀಬೇಕು… ಆಗ ಕೊಡ್ತೀನಿ’ ಎಂದು ವಿಕಾರವಾಗಿ ಹೇಳಿದ್ದ. ಅವಳಿಗೆ ತನ್ನ ಅಸಹಾಯಕತೆ ಅವನ ವಿಸ್ತರಣೆಯ ಹೆದ್ದಾರಿ ಅನ್ನಿಸಿ ಕೆನ್ನೆಗೆ ರಪ್ಪನೆ ಒಂದು ಬಾರಿಸಿದ್ದಳು. ಅವನು ನಗುತ್ತಲೆ ಇದ್ದ. ಬರದೆ ಎಲ್ಲಿ ಹೋಗ್ತಿ ಹೋಗು ಎಂದು ಗಹಗಹಿಸಿದ್ದ. ಅದೇ ಕೊನೆ. ಈಗ ಮತ್ತೆ ಬಂದು ಕೆಲಸದ ನೆಪದಲ್ಲಿ ಕರೆಯುತ್ತಿದ್ದಾನೆ. ಕೊನೆಯದಾಗಿ ಹೋಗಿ ಅವನ ಬೀಜಾಸುರ ಬಯಕೆ ಮತ್ತೆಂದೂ ಪುಟಿಯದ ಹಾಗೆ ಮಾಡಿಬರಲೆ ಎಂದುಕೊಂಡಳು. ಶೆಡ್ಡಿನ ಒಳಗೆ ಇಣುಕಿದಳು. ರಾಮಾಂಜಿ ಮುಳ್ಳುಪೊದೆಯೊಳಗೆ ಸಿಲುಕಿ ಬಿಡಿಸಿಕೊಳ್ಳಲಾಗದ ಅಸಹಾಯಕತೆಯನ್ನು ಹೊದ್ದವನಂತೆ ಕುಳಿತಿದ್ದ.
ಸೈಟಿನಲ್ಲಿ ತುಂಬಿದ್ದ ಬಹುತೇಕ ನೀರು ಇಳಿದು ಹೋಗಿತ್ತು. ಶೆಡ್ಡಿನೊಳಗೆ ಒಂದಷ್ಟು ನಿಂತಿತ್ತು. ಪಕ್ಕದ ಶೆಡ್ಡಿನ ಹೆಂಗಸು ‘ವೋ…ಯಮ್ಮೋ… ಇದೇಮಿ ವಾನರ ಬಾಬು…ಮಾ ಊರ್ಲೊ ಇಲಾಂಟಿ ವಾನ ಎಪ್ಪಡು ಸೂಡ್ಲೆ’ ಎಂದು ನುಡಿದಳು. ಅವಳ ಮಾತಿನಲ್ಲಿ ಸಂಭ್ರಮ, ಆತಂಕ, ಅಸಹಾಯಕತೆ ಎಲ್ಲವೂ ಸೇರಿಕೊಂಡಿದ್ದವು. ತುಸು ಎದುರಿಗೆ ಎರಡು ಇಲಿಗಳು ಮೈಯನ್ನು ಒದರುತ್ತಾ ಪುಟಪುಟನೆ ಸಾಗತೊಡಗಿದವು. ಸುಕನ್ಯ ಶೆಡ್ಡಿನೊಳಗೆ ನಡೆದು ಒಂದು ತಟ್ಟೆಯನ್ನು ತೆಗೆದುಕೊಂಡು ನೀರನ್ನು ಮೊಗೆಮೊಗೆದು ಆಚೆ ಚೆಲ್ಲತೊಡಗಿದಳು. ಸಹಾಯಕ್ಕೆ ರಾಮಾಂಜಿಯನ್ನು ಕರೆದಳು. ಅವನು ಧರಿಸಿರುವ ಚಿಪ್ಪು ಗಟ್ಟಿಯಾಗಿತ್ತು. ಸಂವೇದನೆಯೂ ಇಲ್ಲದಷ್ಟು ನಿರ್ಜೀವಗೊಂಡಿತ್ತು. ಅವಳು ಒಂದಷ್ಟು ನೀರನ್ನು ಎತ್ತಿಹಾಕಿದಳು. ತನಗೆ ಇನ್ನು ಸಾಧ್ಯವಿಲ್ಲ ಎಂದನಿಸತೊಡಗಿತು. ಕಣ್ಣುಗಳು ನಿಸ್ಸಾರಗೊಂಡಿದ್ದವು. ಹೀಗೇ ತೇವದಲ್ಲೆ ಮಲಗಿಕೊಂಡು ನಿದ್ದೆಗೆ ಜಾರಿಬಿಡಬೇಕು ಅನಿಸತೊಡಗಿತು. ಪ್ರಪಂಚದಲ್ಲಿ ನಿದ್ದೆಗಿರುವಷ್ಟು ತಾಕತ್ತು ಬೇರೇನಕ್ಕೂ ಇಲ್ಲವೆಂದುಕೊಂಡಳು. ಸತ್ತಂತೆ ಬಿದ್ದುಬಿಡುವುದು ಸಾಮಾನ್ಯದ ಮಾತೆ? ಮತ್ತೆ ಎದ್ದು ಹಿಂದಿನದೆಲ್ಲವನ್ನು ಬೆನ್ನಿಗೆ ಹಾಕಿಕೊಂಡು ನಡೆಯುವುದೂ ಅಷ್ಟೆ. ರಾಮಾಂಜಿಯ ಹತ್ತಿರ ನಡೆದು ಅವನ ತೊಡೆಗೆ ತಲೆಯನ್ನು ಆನಿಸಿ ವಿರಮಿಸಲು ಪ್ರಯತ್ನಿಸತೊಡಗಿದಳು. ಯಾಕೊ ರಾಮಾಂಜಿಯ ಮುಖವನ್ನೊಮ್ಮೆ ನೋಡಬೇಕನಿಸಿ ತುಸು ಹೊರಳಿದಳು. ಅವನ ಕಂಗಳು ಒದ್ದೆಯಾಗಿದ್ದವು. ಕೋಲು ಮುಖದಲ್ಲಿ ಮೂಳೆಗಳು ಇಣುಕಲು ಹವಣಿಸುತ್ತಿದ್ದವು. ಹಣೆ ನಿಸ್ಸಾರಗೊಂಡಿತ್ತು. ಸಿಕ್ಕುಗಟ್ಟಿದ್ದ ಕೂದಲು ಒದ್ದೆಯಾಗಿರುವುದರಿಂದ ಮತ್ತಷ್ಟು ಕುಗ್ಗಿರುವಂತೆ ಅನಿಸತೊಡಗಿತು. ರಾಮಾಂಜಿ ಅಳುತ್ತಿದ್ದಾನೆಯೆ? ಎದ್ದು ಅವನ ಪಕ್ಕದಲ್ಲಿ ಕುಳಿತು ಅವನ ತಲೆಯನ್ನು ತನ್ನೆದೆಯೊಳಗೆ ಹುದುಗಿಸಿಕೊಂಡು ‘ರಾಮಾಂಜಿ ಏನಾಯ್ತು?’ ಎಂದು ಕೇಳಿದಳು. ಅವನು ‘ನಾವು ಊರಿಗೆ ಹೊಂಟುಬಿಡುವ. ನಮ್ಗೆ ಈ ಊರು ಆಗಲ್ಲ’ ಎಂದು ನುಡಿದು ಬಿಕ್ಕತೊಡಗಿದ. ‘ಅಲ್ಲಿ ವೋದ್ರು ಇದೆ ಕತೆ ಅಲ್ವೆ. ಎಲ್ಲಾ ಕಡೆ ಬದುಕೂನು ಒಂದೆ ತರಾ ಇರುತ್ತೆ. ಮನುಷ್ಯರು ಬೇರ್ಬೇರಾಗಿ ಕಾಣ್ತಾರೆ ಅಷ್ಟೆ’ ಅವಳು ತಿಳಿ ಹೇಳಲು ಪ್ರಯತ್ನಿಸಿದಳು. ಅದಕ್ಕವನು ‘ಅದೆಲ್ಲ ನಂಗೊತ್ತಿಲ್ಲ ವೋಗೋಣ ಅಷ್ಟೆ’ ಎಂದು ನುಡಿದು ಮಗುವಿನ ಹಟವನ್ನು ಹೊದ್ದುಕೊಂಡ.
‘ಯಾಕೆ? ಯಾರಾದ್ರು ಎನಾದ್ರು ಅಂದ್ರ? ನನ್ನ ಬಗ್ಗೆ ಏನಾದ್ರು ಕೆಟ್ಟುದಾಗಿ… ಬದುಕೋಕಂತ ನಾಕಾರು ಕಡೆ ಮುಸ್ರೆ ತಿಕ್ಕೋಳು ನಾನು’ ಅವಳು ಗದ್ಗದಿತಳಾಗತೊಡಗಿದಳು. ಅವನಿಗೆ ಏನು ಹೇಳಬೇಕೊ ತೋಚಲಿಲ್ಲ. ‘ಆ ಮೇಸ್ತ್ರಿ ದಿನದ ಕೂಲೀಲಿ ಅರ್ದ ಬಡ್ಡೀಗೆ ಯಿಡ್ಕಂಡು ಕೊಡ್ತಾನೆ. ಬದುಕೋದೆಂಗೆ. ಇಂಗೆ ನಾ ಸಾಯೋವರ್ಗು ದುಡಿದ್ರು ಅಸಲು ತೀರಾಕಿಲ್ಲ. ಜತೀಗೆ ಕುಡ್ತ ಬೇರೆ ಜಾಸ್ತಿ ಮಾಡಿವ್ನಿ. ಒಳಗಿನ್ನೋವ್ನ ತಡಿಯೋದೆಂಗೆ’ ಅವನು ಮತ್ತೂ ಬಿಕ್ಕತೊಡಗಿದ. ‘ಆ ಮಾತ್ರ ಹೆಲ್ಪ್ ಮಾಡ್ತಾವ್ನಲ್ಲ ಮೇಸ್ತ್ರಿ. ಬೇಕು ಅಂದಾಗ ಅರ್ಜೆಂಟಿಗೆ ಕೊಡ್ತಾನಲ್ಲ’ ಅವಳು ಸಮಾಧಾನದ ಮಾತುಗಳನ್ನಾಡತೊಡಗಿದಳು. ‘ಅಯ್ಯೋ ನಿಂಗೆ ಗೊತ್ತಿಲ್ಲ ಅವನೊಂದು ಕೆಟ್ಟಪ್ರಾಣಿ’ ಅವನ ಮೈ ಕಂಪಿಸಲು ಶುರುಹಚ್ಚತೊಡಗಿತು. ಮೇಸ್ತ್ರಿ ಮಂಜು ಕೇಳುತ್ತಿರುವುದನ್ನು ಸುಕನ್ಯಳ ಬಳಿ ಹೇಗೆ ಹೇಳುವುದು ಎಂದು ತೋಚದೆ ಹಿಂಸೆ ಪಡತೊಡಗಿದ. ಕಳೆದ ಎರಡುವಾರಗಳಿಂದ ಅವನು ಪೀಡಿಸುತ್ತಿರುವ ವಿಷಯವನ್ನು ಹೇಳಿ ಹಗುರಾಗುವ ಬಗೆ ಅವನಿಗೆ ಕಾಣದಾಗಿತ್ತು. ಮತ್ತೆ ಮೌನದ ಚಿಪ್ಪಿನೊಳಗೆ ಖಿನ್ನತೆಯ ಮುಸುಕೆಳೆದುಕೊಂಡು ತೂರಿಕೊಂಡ. ಎರಡು ವಾರಗಳ ಹಿಂದೆ ಆ ವಾರದ ಪೇಮೆಂಟ್ ಕೊಡುವಾಗ ಮೇಸ್ತ್ರಿ ರಾಮಾಂಜಿಯನ್ನು ತುಸು ಪಕ್ಕಕ್ಕೆ ಕರೆದುಕೊಂಡು ಹೋಗಿದ್ದ. ಆಗ ಅವನು ‘ಲೇ ರಾಮಾಂಜಿ ಇಂಗೆ ಆದ್ರೆ ನೀ ನನ್ನ ಅಸಲು ತೀರಿಸೋದಾದ್ರು ಯೆಂಗೊ. ಬಡ್ಡೀಗೆ ಯಣಗಾಡ್ತಾ ಇದೀಯ’ ಎಂದಿದ್ದ. ಅದಕ್ಕೆ ರಾಮಾಂಜಿ ‘ಹೌದಣ್ಣೊ ಬಾಳ ಕಸ್ಟ ಆಗ್ತಿದೆ. ಎಣ್ತೀಗೆ ಒಂದು ಸೀರೆ ಕೊಡಿಸ್ಲಿಕ್ಕೆ ಆಗ್ತಿಲ್ಲ. ಜಾಸ್ತಿ ಸಂಪಾದ್ನೆ ಮಾಡೊ ಐಡಿಯಾ ಏನಾರ ಇದ್ರೆ ಯೇಳಣ್ಣೊ’ ಎಂದು ಆಸೆ ಹೊತ್ತು ಕೇಳಿದ್ದ. ಅದಕ್ಕೆ ಮೇಸ್ತ್ರಿ ತುಸು ಅಕ್ಕಪಕ್ಕ ನೋಡಿ ಯಾರೂ ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡು ‘ಲೇ ರಾಮಾಂಜಿ, ನಿನ್ನೆಂಡ್ರು ಪಸಂದಾಗಿದ್ದಾಳೆ. ಏನ್ ಚಂದಕಿದಾಳೋ. ಎಣ್ತಿ ಅಂದ್ರೆ ಅಂಗಿರಬೇಕು ನೋಡು. ನಮ್ಮ ತಾತ್ನ ಕಾಲ್ದಿಂದ್ಲೂ ನಾಕಾರು ಕಡೆ ವಲ ಮಾಡೊ ಸಂಪ್ರದಾಯ ನಮ್ದು. ಒಂದು ವಾರ ನನ್ನ ಜತೀಗೆ ಕಳಿಸ್ಬಿಡು. ನಂದೂ ಅಂತ ಒಂದು ಬೀಜ ಅಲ್ಲಿ ಮೊಳಕೆ ಹೊಡೆಯೋ ತನಕ ಅಸ್ಟೆ. ಆಮೇಕೆ ನಮ್ಮಪ್ಪನಾಣೇಗೂ ಅವುಳ್ನ ಮುಟ್ಟಾಕಿಲ್ಲ. ನೀನ್ ನನ್ನ ಸಾಲಾನೂ ತೀರಿಸಂಗಿಲ್ಲ. ಹುಂ…ಏನಂತಿ ಯೋಚ್ನೆ ಮಾಡು’ ಎಂದು ನುಡಿದಿದ್ದ.
ಅಂದಿನಿಂದಲೂ ದಿನಾ ಅದೇ ಮಾತು. ಹಿಂಸೆಯೆನಿಸಿ ವಾಕರಿಕೆ ಬರುವಷ್ಟು ಕುಡಿದುಕೊಂಡು ಬರುವುದನ್ನು ರೂಢಿ ಮಾಡಿಕೊಂಡಿದ್ದ. ಎಲ್ಲಿ ಹೋದರೂ ಆ ಮಾತು ಅವನನ್ನು ಹಿಂಬಾಲಿಸುತ್ತಲಿತ್ತು. ಕುಡಿಯದೆ ಮಲಗಿಕೊಂಡರೆ ಕನಸಿನಲ್ಲಿ ತನ್ನೂರಿನ ಹುರಿಮೀಸೆಯ ಪಟೇಲ ಬಂದು ತನ್ನನ್ನು ಕೆಳಗೆ ಹಾಕಿಕೊಂಡು ತಕಥೈ ಕುಣಿಯುತ್ತಲಿದ್ದ. ಹಾಗೆ ಕುಣಿಯುವಾಗ ಅವನ ತುಳಿತಕ್ಕೆ ಸಿಕ್ಕ ತನ್ನ ವೃಷಣಗಳು ಪುಡಿಪುಡಿಯಾಗಿ ತಡೆಯಲಾಗದ ಹಿಂಸೆಯೆನಿಸಿ ಎದ್ದು ಕೂರುತ್ತಲಿದ್ದ. ಇವೆಲ್ಲವನ್ನೂ ಸುಕನ್ಯಳ ಬಳಿ ಹೇಗೆ ಹೇಳುವುದು? ಅವನು ಕೂತೇ ಇದ್ದ. ಸುಕನ್ಯ ಎದ್ದವಳೆ ಇನ್ನು ಇವತ್ತು ಅಡುಗೆ ಅಂತ ಏನೂ ಮಾಡಲಿಕ್ಕಾಗುವುದಿಲ್ಲ ಎಂದುಕೊಂಡು ‘ಬನ್ನಾದ್ರು ತರ್ತೀನಿ’ ಎಂದು ಎದ್ದಳು. ರಾಮಾಂಜಿ ಮತ್ತೆ ‘ಬನ್ನು ಬೇಡ. ಊರಿಗೆ ವೋಗೋಣ’ ಎಂದು ಮತ್ತೆ ಅದನ್ನೇ ನುಡಿದ. ಅವಳಿಗೆ ರೇಗಿ ಹೋಯಿತು ‘ಊರು ಊರು ಅಂತ ಸಾಯ್ತಿದೀಯಲ್ಲ. ಅಲ್ಲಿ ಅಣ್ಣ ಅತ್ತಿಗೇಗೆ ಬದುಕು ಕಸ್ಟ. ಅದರಲ್ಲಿ ನಮ್ಮ ಮಗೂನ ಓದಿಸ್ಕೊಂಡು ಸಾಕ್ತಿದಾರೆ. ಅದರ ಜತೀಗೆ ನಿನ್ನೂ ಸಾಕ್ಬೇಕೊ. ಏನ್ ಬದುಕು ನಿಂದು’ ಎಂದು ತುಸು ಗಟ್ಟಿಯಾಗೆ ಪಕ್ಕದ ಶೆಡ್ಡುಗಳವರಿಗೂ ಕೇಳಿಸುವ ಹಾಗೆ ನುಡಿದು ಅಲ್ಲೆ ಟ್ರಂಕಿನ ಮೇಲಿದ್ದ ಡಬ್ಬಿಯಿಂದ ಇಪ್ಪತ್ತು ರುಪಾಯಿಯ ನೋಟನ್ನು ಎತ್ತಿಕೊಂಡು ನಡೆದುಬಿಟ್ಟಳು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಏಳು ಮಲ್ಲಿಗೆ ತೂಕದವಳು…
ಅವಳು ಶೆಡ್ಡಿನಿಂದ ಬೇಕರಿಗೆ ನಡೆದು ಹೋಗಲು ಕನಿಷ್ಟ ಏಳೆಂಟು ನಿಮಿಷಗಳಾದರು ಬೇಕು. ತುಸು ನಿಧಾನವಾಗೆ ನಡೆದಳು. ರಾತ್ರಿ ನಿದ್ದೆಗೆಟ್ಟಿದ್ದುದರಿಂದ ದೇಹದಲ್ಲಿ ಎಂದಿನ ಹುರುಪು ಇದ್ದಿರಲಿಲ್ಲ. ಎರಡು ಬನ್ನು ಜೊತೆಗೆ ರಾಮಾಂಜಿಗೆ ಇಷ್ಟವಾದ ಬಿಸ್ಕೆಟ್ ಪ್ಯಾಕೆಟ್ಟೊಂದನ್ನು ಪಡೆದುಕೊಂಡು ಹಿಂತಿರುಗಿದಳು. ತಾನು ಹೊರಡುವಾಗ ತೆಗೆದೆ ಇದ್ದ ಶೆಡ್ಡಿನ ಬಾಗಿಲು ಈಗ ಮುಕ್ಕಾಲು ಭಾಗ ಮುಚ್ಚಿಕೊಂಡಿತ್ತು. ಒಳಗೆ ತಳ್ಳಿದಳು. ರಾಮಾಂಜಿ ಶೆಡ್ಡಿನ ಶೀಟಿಗೆ ನೇತಾಡುತ್ತಲಿದ್ದ. ಒಂದು ಕ್ಷಣ ಮಾತು ಹೊರಡದೆ ಅವನನ್ನೆ ನೋಡುತ್ತಾ ನಿಂತುಬಿಟ್ಟಳು. ಬಾಗಿದ ಮೀಸೆ ಆಲದ ಬಿಳಲುಗಳಂತೆ ನೆಲ ನೋಡುತ್ತಲಿತ್ತು. ಎರಡೂ ಕಾಲುಗಳನ್ನು ಮಡಚಿಕೊಂಡಿದ್ದ. ಅವಳು ಕಂಪಿಸತೊಡಗಿದಳು. ನಂತರ ಎದೆಬಡಿದುಕೊಳ್ಳುತ್ತಾ ಆಚೆ ಬಂದಳು. ಇಡೀ ನಗರಕ್ಕೆ ಕೇಳಿಸುವ ಹಾಗೆ ಕಿರುಚತೊಡಗಿದಳು. ಪಕ್ಕದ ಶೆಡ್ಡುಗಳವರು ಮತ್ತು ಆ ರಸ್ತೆಯ ಒಂದಷ್ಟು ಜನ ಅಲ್ಲಿಗೆ ಬಂದರು. ಒಬ್ಬರು ಅವನು ಬಿಗಿದುಕೊಂಡಿದ್ದ ಕುಣಿಕೆಯನ್ನು ಬಿಡಿಸಿ ಕೆಳಗಿಳಿಸಿದರು. ನಂತರ ಉಸಿರಾಟವನ್ನು ಪರೀಕ್ಷಿಸಿ ಸತ್ತಿರುವುದನ್ನು ಖಾತ್ರಿಪಡಿಸಿಕೊಂಡು ಪೊಲೀಸಿಗೆ ಫೋನ್ ಮಾಡಿದರು. ಸ್ವಲ್ಪ ಹೊತ್ತಿಗೆ ಪೊಲೀಸರೂ ಬಂದಾಯ್ತು. ಮೇಸ್ತ್ರಿ ಮಂಜನಿಗೂ ವಿಷಯ ತಿಳಿದು ಆಗಮಿಸಿದ. ಸುಕನ್ಯ ಅತ್ತೂಅತ್ತು ಸುಸ್ತಾಗಿ ಬಿಕ್ಕತೊಡಗಿದ್ದಳು. ರಾಮಾಂಜಿ ಊರಿಗೆ ಹೋಗೋಣ ಎಂದು ಹೇಳಿದಾಗ ಆಯ್ತು ಹೋಗೋಣ ಅಂದಿದ್ದರೆ ಬದುಕುತ್ತಿದ್ದನೇನೊ ಎಂಬ ಯೋಚನೆ ಬಂದು ದುಃಖ ಮತ್ತಷ್ಟು ಉಕ್ಕತೊಡಗಿತು. ಗಂಡನನ್ನು ತಾನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ ಎಂದನಿಸತೊಡಗಿತು. ಇಷ್ಟು ದಿನ ಅದೆಷ್ಟು ದುಃಖ, ಅವಮಾನವನ್ನು ಹೊತ್ತುಕೊಂಡು ತಿರುಗಿದನೋ… ಅದೂ ಅಲ್ಲದೆ ಆ ಪುಟ್ಟ ಶೆಡ್ಡಿನಲ್ಲಿ ಅವನು ಕಾಲುಗಳನ್ನು ಮಡಚಿಕೊಂಡು ನೇಣು ಬಿಗಿದುಕೊಂಡಿದ್ದ ಚಿತ್ರ ಕಣ್ಣ ಮುಂದೆ ಪದೇಪದೆ ಬರತೊಡಗಿತು. ಒದ್ದಾಡುವಾಗಲು ಅದು ಹೇಗೆ ಕಾಲುಗಳನ್ನು ಮಡಚಿಕೊಂಡೆ ಇದ್ದ? ಅವಳ ಕಂಗಳು ಉಕ್ಕತೊಡಗಿದವು. ಜೊತೆಗೆ ಅವನ ಸಾವಿಗೆ ತಾನೆ ಕಾರಣಳಾಗಿಬಿಟ್ಟೆ ಎಂಬ ಪಾಪ ಪ್ರಜ್ಞೆಯೂ ಅವಳನ್ನು ಕಾಡತೊಡಗಿತು.
ಪೊಲೀಸರು ತಮ್ಮ ಕೆಲಸ ಮುಗಿಸಿ ಶವವನ್ನು ಪೋಸ್ಟ್‌ಮಾರ್ಟಮ್‍ಗೆ ಕಳಿಸಲು ಹೇಳುತ್ತಿದ್ದರು. ಸುಕನ್ಯ ‘ಪೋಸ್ಟ್ ಮಾರ್ಟಮ್ ಯಾಕೆ? ಬಾಡೀನ ಊರಿಗೆ ತಕೊಂಡೋಗ್ತೇನೆ’ ಎಂದು ಕಷ್ಟದಲ್ಲೆ ನುಡಿದಳು. ಅಷ್ಟರಲ್ಲಿ ಮೇಸ್ತ್ರಿ ಅವಳ ಹತ್ತಿರ ಬಂದು ‘ಅದೆಲ್ಲಾ ಪ್ರೊಸೀಜರ್ರು ಸುಕನ್ಯಾ. ನೇಣಾಕ್ಕಂಡಿರೋದಲ್ವಾ… ಮಾಡ್ಲೆಬೇಕು. ಜತೇಗೆ ಆಂಬುಲೆನ್ಸು, ಹಾಸ್ಪೆಟಲ್ ಚಾರ್ಜು ಅಂತೇಳಿ ಹತ್ತು ಸಾವಿರದ ಮೇಲೆ ಖರ್ಚಾಗಬಹುದು’ ಎಂದು ನುಡಿದ. ಅದಕ್ಕವಳು ನನ್ನ ಬಳಿ ಅಷ್ಟು ದುಡ್ಡು ಇಲ್ಲ ಎಂದಳು. ಮೇಸ್ತ್ರಿ ‘ನೀನೇನು ಚಿಂತೆ ಮಾಡ್ಬೇಡ ಸುಕನ್ಯ. ನಾನಿಲ್ವೆ? ಎಲ್ಲಾ ನೋಡ್ಕೋತೀನಿ’ ಎಂದು ಉತ್ಸಾಹದಲ್ಲಿ ನುಡಿದ. ಅವಳಿಗೆ ಏನೋ ಒಂದು ಆಸರೆ ಸಿಕ್ಕಂತಾಗಿ ತುಸು ನಿರಾಳವಾಗಿ ಉಸಿರಾಡಿದಳು. ನಂತರ ಶವವನ್ನು ಊರಿಗೆ ತೆಗೆದುಕೊಂಡು ಹೋಗುವ ವಿಷಯ ನೆನಪಿಗೆ ಬಂದು ಅದಕ್ಕೂ ತನ್ನ ಬಳಿ ಕಾಸು ಇಲ್ಲ ಎಂದು ನುಡಿದಳು. ಮೇಸ್ತ್ರಿ ಅದೇ ಉತ್ಸಾಹದಲ್ಲೆ ‘ನನ್ನ ಕಾರಿಲ್ವೆ…ಅದರಲ್ಲೆ ವೋಗೋಣ. ದುಡ್ಡೂ ಉಳಿಯುತ್ತೆ. ಎಲ್ಲಾ ಮುಗಿದ ಮೇಲೆ ನಾನು ವಾಪಸ್ಸು ಬರುವೆ. ನೀನು ತಿಥಿ ಮುಗಿಸಿಕೊಂಡು ಬಂದುಬಿಡು. ನನ್ನ ಬಳಿಯೆ ಒಳ್ಳೆ ಕೆಲಸ ಕೊಡುವೆ. ಸಾಲ ತೀರಬೇಕಲ್ಲವೆ’ ಎಂದು ನುಡಿದ. ಸುಕನ್ಯಾ ಮೇಸ್ತ್ರಿಯ ಮುಖದ ಕಡೆಗೇ ನೋಡತೊಡಗಿದಳು. ವ್ಯವಹಾರದಲ್ಲಿ ಪಳಗಿರುವ ಮುಖ ಅನಿಸಿತು. ಹೇಗೋ ಸದ್ಯದ ತುರ್ತು ಮುಗಿದರೆ ಸಾಕು. ಮುಂದಿನದು ನೋಡಿಕೊಂಡರಾಯಿತು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಒಂದು ಗುಡ್ ಮಾರ್ನಿಂಗ್ ಮೆಸೇಜು
ಎದುರುಗೊಳ್ಳುವುದೇನು ಹೊಸತೆ ಎಂದುಕೊಂಡಳು. ಅವನು ಧೈರ್ಯವಾಗಿರು ಎನ್ನುತ್ತಾ ಬೆನ್ನನ್ನು ತಟ್ಟಿದ. ವಿಚಿತ್ರವಾಗಿ ನಗುತ್ತಾ ಅವಳ ತುಟಿಗಳ ಕಡೆಗೇ ನೋಡತೊಡಗಿದ. ಅವಳು ಅವೆಲ್ಲವನ್ನು ಗಮನಿಸುವಷ್ಟು ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದಳು. ಮೇಸ್ತ್ರಿ ಜೇಬಿನಿಂದ ಮೊಬೈಲು ತೆಗೆದು ಯಾವುದೊ ನಂಬರ್ ಹುಡುಕುತ್ತಾ ರಸ್ತೆಗಿಳಿದ. ಅಷ್ಟರಲ್ಲಿ ಇನ್ಸ್‌ಪೆಕ್ಟರ್ ಸುಕನ್ಯಾಳ ಬಳಿಗೆ ಬಂದು ಏನನ್ನೋ ಬರೆದುಕೊಳ್ಳುತ್ತಾ ‘ನಿನ್ನ ಗಂಡನ ಸಾವಿಗೆ ಬೇರೆ ಯಾರಾದ್ರು ಕಾರಣ ಆಗಿದ್ರೆ ಹೇಳಮ್ಮ. ಅಥವಾ ಯಾರ ಮೇಲಾದ್ರು ಅನುಮಾನ ಇದ್ರೆ…ಯಾಕೇಂದ್ರೆ ಡೆಥ್ ನೋಟೇನು ಸಿಕ್ಕಿಲ್ಲ’ ಎಂದು ನುಡಿದ. ಸುಕನ್ಯಾ ಯೋಚಿಸತೊಡಗಿದಳು. ತಾನೆ ಅವನ ಸಾವಿಗೆ ಕಾರಣ ಅಂತ ಹೇಳಿಬಿಡಲೆ. ಮಹಾ ಏನು ಮಾಡಿಯಾರು? ಎಂದುಕೊಂಡಳು. ಹಾಗೇನಾದರು ಆಗಿ ತಾನು ಜೈಲು ಸೇರಿಬಿಟ್ಟರೆ ತನ್ನ ಮಗನ ಗತಿ? ಅವಳ ಮೈ ಕಂಪಿಸತೊಡಗಿತು. ಈ ಪಾಪ ಪ್ರಜ್ಞೆ ಇನ್ನೂ ಬಹಳ ದಿನ ತನ್ನನ್ನು ಕಾಡಲಿದೆ ಎಂದುಕೊಂಡಳು. ರಾಮಾಂಜಿ ಸತ್ತಿದ್ದು ಮೇಸ್ತ್ರಿಯ ಕಾಟದಿಂದಲ್ಲವೆ. ಬಡ್ಡಿಗೆ ಬಡ್ಡಿ ಲೆಕ್ಕ ಹಾಕಿ ಹಿಂಸೆ ಕೊಟ್ಟಿದ್ದ. ಅವನ ಹೆಸರು ಹೇಳಿಬಿಡಲೆ ಎಂಬ ಯೋಚನೆಯೂ ಅವಳಲ್ಲಿ ಬಂದುಹೋಯಿತು.
ಹಾಗೇನಾದರು ಹೇಳಿಬಿಟ್ಟರೆ ಈ ಪೊಲೀಸು, ಅಂಬುಲೆನ್ಸು, ಹಾಸ್ಪೆಟಲ್ಲು, ಊರಿಗೆ ಹೋಗುವ ವ್ಯವಸ್ಥೆ…ಎಲ್ಲವೂ ಕಣ್ಣಮುಂದೆ ಬಂದು ಕುಸಿಯತೊಡಗಿದಳು. ಇನ್ಸ್‍ಪೆಕ್ಟರ್ ‘ಏನಮ್ಮಾ… ಯಾರ ಮೇಲಾದ್ರು ಡೌಟಿದೆಯಾ’ ಮತ್ತೊಮ್ಮೆ ಕೇಳಿದ. ಸುಕನ್ಯಾ ‘ಇಲ್ಲಾ ಸಾರ್…’ ಎಂದು ಬಿಕ್ಕುತ್ತಲೆ ತಲೆಯನ್ನು ಅಲ್ಲಾಡಿಸಿದಳು. ಇನ್‌ಸ್ಪೆಪೆಕ್ಟರ್ ‘ಲೇ ಬಾಡೀನ ಪೋಸ್ಟ್ ಮಾರ್ಟಮ್‍ಗೆ ಕಳಿಸೋ…ರಿಪೋರ್ಟ್ ಬರ್ಲಿ ಆಮೇಲೆ ನೋಡುವ’ ಎನ್ನುತ್ತಾ ನಡೆಯತೊಡಗಿದ. ಅಷ್ಟರಲ್ಲಿ ದಿಗ್ಗನೆ ಮೇಲೆದ್ದ ಸುಕನ್ಯ ‘ಸಾರ್’ ಎಂದು ಕರೆದಳು. ಇನ್ಸ್ಪೆಕ್ಟರ್ ತಿರುಗಿನೋಡಿದ. ಅವಳು ನಿಂತ ಭಂಗಿಗೆ ವಿಚಿತ್ರವಾದ ತಾಕತ್ತು ಆವರಿಸಿಕೊಂಡಿತ್ತು. ಮಳೆ ಇನ್ನೂ ಹನಿಯುತ್ತಲೇ ಇತ್ತು. ರಾತ್ರಿಯೆಲ್ಲಾ ಅಷ್ಟು ಜಡಿದಿದ್ದರೂ ಇನ್ನೂ ತನ್ನಲ್ಲಿ ತಾಕತ್ತಿದೆ ಎನ್ನುವ ಹಾಗೆ ಬೀಳುತ್ತಲೇ ಇತ್ತು. ಆ ಖಾಲಿ ಸೈಟಿನ ಶೆಡ್ಡುಗಳೂ ನಡುಬಗ್ಗಿಸಿ ಆಕಾಶಕ್ಕೆ ಬೆನ್ನು ಮಾಡಿದ ಭಂಗಿಯಲ್ಲಿ ಕೈಕಾಲುಗಳನ್ನು ನೆಲಕ್ಕೆ ಊರಿದ್ದವು. ಸುಕನ್ಯ ಸ್ವಲ್ಪ ಹೊತ್ತು ಸುಮ್ಮನೆ ತಲೆ ಬಗ್ಗಿಸಿ ಏನೋ ಯೋಚಿಸುತ್ತಿರುವಂತೆ ನಿಂತುಬಿಟ್ಟಳು. ಇನ್ಸ್‌ಪೆಕ್ಟರ್ ‘ಏನಮ್ಮಾ’ ಎಂದು ಕೇಳಿದ. ಅವಳು ನಿಧಾನಕ್ಕೆ ತಲೆಯನ್ನು ಎತ್ತಿ ತನ್ನೆದುರಿಗಿರುವ ಮನೆಯ ಕಡೆಗೆ ಕೈತೋರಿಸುತ್ತಾ ‘ಆ ಬಂಗ್ಲೆ ಪ್ರಾಣೀನೆ ನನ್ನ ಗಂಡ ಸಾಯಲು ಕಾರಣ’ ಎಂದು ನುಡಿದುಬಿಟ್ಟಳು. ಅಲ್ಲಿರುವ ಎಲ್ಲರೂ ಆ ಬಂಗಲೆಯ ಕಡೆಗೆ ನೋಡತೊಡಗಿದರು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಕಿಂಡಿ