:: ಅಂಜನಾ ಹೆಗಡೆ
“ಒಂದು ಗುಡ್ ಮಾರ್ನಿಂಗ್ ಮೆಸೇಜು ಇಷ್ಟು ಡಿಫರನ್ಸ್ ಮಾಡುತ್ತೆ ಅಂತಾದ್ರೆ!”
ತನ್ನ ಕನ್ನಡ ಬೆರೆತ ಇಂಗ್ಲಿಷಿನಲ್ಲಿ ಜಾಮಿನಿ ಮಾತನಾಡಲು ಆರಂಭಿಸಿದಾಗ ಅವಳ ಕಣ್ಣುಗಳನ್ನೇ ದಿಟ್ಟಿಸಿದೆ. ಎಡಗೈಯಲ್ಲಿ ಊಟದ ತಟ್ಟೆಯನ್ನು ಹಿಡಿದುಕೊಂಡು ಬಲಗೈಯಲ್ಲಿರುವ ಚಮಚದಿಂದ ಎಲೆಕೋಸಿನ ಪಲ್ಯವನ್ನು ಅನ್ನಕ್ಕೆ ಕಲಸುವುದರಲ್ಲಿ ಮಗ್ನಳಾಗಿದ್ದ ಅವಳ ಕಣ್ಣುಗಳಲ್ಲಿ ಯಾವ ಭಾವವಿದೆಯೋ ತಿಳಿಯಲಿಲ್ಲ. ಅವಳು ಯಾವ ಗುಡ್ ಮಾರ್ನಿಂಗ್ ಮೆಸೇಜಿನ ಬಗ್ಗೆ ಮಾತನಾಡಲು ಹೊರಟಿದ್ದಾಳೋ ಅದು ಬಂದಿದೆಯೆನ್ನುವ ಕಾರಣಕ್ಕೆ ಸಂತೋಷವಾಗಿರಬಹುದೋ ಅಥವಾ ಬರಲಿಲ್ಲವೆಂದು ಬೇಸರದಲ್ಲಿದ್ದಾಳೋ ಒಂದೂ ಅರ್ಥವಾಗಲಿಲ್ಲ. ಅವಳು ಮುಖ ಮೇಲೆತ್ತುವುದನ್ನೇ ಕಾಯತೊಡಗಿದೆ.
ಅವಳು ಏನನ್ನು ಹೇಳಲಿದ್ದಾಳೆಯೋ ಅದನ್ನು ಕೇಳಿಸಿಕೊಳ್ಳಲೇಬೇಕಾಗಿತ್ತು ನಾನು. ನನ್ನ ಹೊರತಾಗಿ ಬೇರೆ ಯಾರಲ್ಲಿಯೂ ಅವಳು ಮನಸ್ಸುಬಿಚ್ಚಿ ಮಾತನಾಡುತ್ತಿರಲಿಲ್ಲ ಎನ್ನುವುದು ನನ್ನ ಭಾವನೆ. ತಾನಾಯಿತು ತನ್ನ ಕೆಲಸವಾಯಿತು ಎನ್ನುವಂತೆ ದಿನ ಕಳೆಯುತ್ತಿದ್ದ ಅವಳ ಮೇಲೆ ಯಾರಿಗೂ ವಿಶೇಷವಾದ ಕಾಳಜಿಯೂ ಇರಲಿಲ್ಲ. ಅವಳಿಗೂ ಅದರ ಅಗತ್ಯವಿರಲಿಲ್ಲ. ತಣ್ಣಗೆ ತನ್ನ ಪಾಡಿಗೆ ತಾನು ಬದುಕುತ್ತಿದ್ದ ಇಬ್ಬನಿಯಂಥ ಜಾಮಿನಿ ಯಾರ ಗುಡ್ ಮಾರ್ನಿಂಗ್ ಮೆಸೇಜಿನ ಬಗ್ಗೆ ಮಾತನಾಡುತ್ತಿರಬಹುದು ಎನ್ನುವ ಕುತೂಹಲದಲ್ಲಿಯೇ ನನ್ನ ಊಟದ ಬಾಕ್ಸಿನಲ್ಲಿದ್ದ ಇಡ್ಲಿಯನ್ನು ಅವಳ ತಟ್ಟೆಗೆ ಹಾಕಿದೆ. ಆಗಲಾದರೂ ಮುಖ ಮೇಲೆತ್ತಿ ಮಾತು ಮುಂದುವರಿಸಬಹುದೆಂದುಕೊಂಡಿದ್ದ ನನ್ನ ಊಹೆ ತಪ್ಪಾಯಿತು. ಅವಳು ಅದೇ ಎಲೆಕೋಸಿನ ಪಲ್ಯದೊಂದಿಗೆ ಇಡ್ಲಿಯನ್ನೂ ತಿಂದು ಮುಗಿಸಿ, ಅರ್ಧ ಮಿಗಿಸಿದ ಅನ್ನದೊಂದಿಗೆ ತಟ್ಟೆಯನ್ನೆತ್ತಿಕೊಂಡು ಕೈತೊಳೆಯಲು ಹೊರಟುಹೋದಳು. ನನ್ನ ಬಾಕ್ಸಿನಲ್ಲಿ ಉಳಿದಿದ್ದ ಕೆಂಪುಚಟ್ನಿ ಅರ್ಧಕ್ಕೇ ನಿಂತುಹೋದ ಜಾಮಿನಿಯ ಮಾತಿನಂತೆ ಭಾಸವಾಗಿ, ಮುಚ್ಚಳ ಹಾಕಿ ಪರ್ಸಿನೊಳಗೆ ಸೇರಿಸಿದೆ. ಅವಳು ಮಾತು ಮುಂದುವರಿಸುವುದನ್ನೇ ಕಾಯುತ್ತ, ಅವಳ ತಟ್ಟೆಗೆ ಚಟ್ನಿ ಹಾಕುವುದನ್ನೇ ಮರೆತಿದ್ದಕ್ಕೆ ನನ್ನ ಮೇಲೆಯೇ ಬೇಸರಿಸಿಕೊಳ್ಳುವುದರ ಹೊರತಾಗಿ ಬೇರೆ ದಾರಿ ಕಾಣಿಸಲಿಲ್ಲ.
ಊಟವಾದ ನಂತರ ಕೈತೊಳೆಯದೇ ವೆಟ್ ಟಿಶ್ಯೂ ಉಪಯೋಗಿಸುವ ನನ್ನ ಅಭ್ಯಾಸ ಜಾಮಿನಿಗೆ ಒಪ್ಪಿಗೆಯಾಗುತ್ತಿರಲಿಲ್ಲ. ನಾನು ಬಾಕ್ಸ್ ತಂದಿರದ ದಿನಗಳಲ್ಲಿ ಊಟ ಮುಗಿದಮೇಲೆ ಇಬ್ಬರ ತಟ್ಟೆಯನ್ನೂ ಅವಳೇ ಎತ್ತಿಕೊಂಡು ಹೋಗುವುದು ರೂಢಿ. ಹಾಗೆ ತಟ್ಟೆ ಎತ್ತುವಾಗಲೆಲ್ಲ ಅವಳು ತುಟಿಗಳನ್ನು ಸೊಟ್ಟ ಮಾಡಿಕೊಂಡು "ಐ ಹೇಟ್ ಯೂ" ಎನ್ನುತ್ತಿದ್ದಳು. ನಾನದನ್ನು ಇನ್ನಿಲ್ಲದಂತೆ ಪ್ರೀತಿಸುತ್ತೇನೆ. ಅವಳು ಮೊದಲಸಲ "ಹೇಟ್ ಯೂ" ಅಂದಾಗ ನಾನು ಪೆದ್ದುಪೆದ್ದಾಗಿ ನಕ್ಕಿದ್ದನ್ನು ನೋಡಿ, "ನಿಮ್ಮೂರಲ್ಲಿ ಇದಕ್ಕೂ ಸ್ಮೈಲ್ ಮಾಡ್ತಾರಾ? ನಾನು ಹೇಟ್ ಮಾಡ್ತೀನಿ ಅಂದಿದ್ದು ಮಾ, ಲವ್ಯೂ ಅಂತಲ್ಲ" ಎನ್ನುತ್ತ ಜುಟ್ಟು ಕುಣಿಸಿದ್ದಳು. ನೀಳವಾದ ಅವಳ ಬೆನ್ನಮೇಲೆ ಕೆಂಪುಬಣ್ಣದ ಹೈಲೈಟುಗಳಿರುವ ಜುಟ್ಟು ಆ ಕ್ಷಣಕ್ಕೆ ಬೆಟ್ಟದಲ್ಲಿ ಬಳುಕುವ ಗೌರಿಹೂವಿನಂತೆ ಕಾಣಿಸಿತ್ತು. ಹಾಗೆ ಥಟ್ಟನೆ ನೆನಪಾದ ಗೌರಿಹೂವಿಗೂ, ಮಣಿಪುರದ ಯಾವುದೋ ಹಳ್ಳಿಯಿಂದ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ ಜಾಮಿನಿಗೂ ಎಷ್ಟೆಲ್ಲ ಹೋಲಿಕೆಯಿದೆಯಲ್ಲ ಎನ್ನಿಸಿತ್ತು. ಆರೈಕೆಯನ್ನೇ ನಿರೀಕ್ಷಿಸದೆ ಅರಳುವ ಗೌರಿಹೂವಿನಂಥ ಸ್ವತಂತ್ರ ಪ್ರವೃತ್ತಿಯ ಜಾಮಿನಿ ಹೀಗೊಂದು ಮಾರ್ನಿಂಗ್ ಮೆಸೇಜಿನ ಸಲುವಾಗಿ ಅಧೀರಳಾಗುವುದೆಂದರೆ!
ಸರಿಸುಮಾರು ಮೂರು ಗಂಟೆಗಳ ಕಾಲ ನಡೆದ ಕ್ಲೈಂಟ್ ಮೀಟಿಂಗಿನ ನಂತರವೂ ಅವಳ ಮನಃಸ್ಥಿತಿಯಲ್ಲೇನೂ ಬದಲಾವಣೆಯಾದಂತೆ ಕಾಣಿಸಲಿಲ್ಲ. "ಕ್ಯಾ ಹೇ ಯಾರ್ ಯೇ ಲೋಗ್. ಚಲೋ ಏಕ್ ಕಾಫಿ ಪೀನಾ ಹೇ" ಎಂದವಳನ್ನು ಮರುಮಾತಿಲ್ಲದೆ ಹಿಂಬಾಲಿಸಿದೆ. ಮಧ್ಯರಾತ್ರಿಯ ಸಮಯದಲ್ಲಿ ತುಸು ಹೆಚ್ಚೇ ಸಿಹಿಯೆನ್ನಿಸುವ ಕಾಫಿಯನ್ನು ಮಗ್ ತುಂಬ ತುಂಬಿಕೊಂಡು, ಪ್ಯಾಂಟ್ರಿಯ ಪಕ್ಕ ಇರುವ ಮೀಟಿಂಗ್ ರೂಮಿನಲ್ಲಿ ಕುಡಿಯುತ್ತ ಕುಳಿತುಕೊಳ್ಳುವುದು ಅವಳ ದಿನಚರಿಯ ಭಾಗವಾಗಿತ್ತು. ಹಾಗೆ ಕಾಫಿ ಕುಡಿಯುವಾಗ ಬಲತೊಡೆಯ ಮೇಲೆ ಎಡಗಾಲಿನ ಭಾರವನ್ನೆಲ್ಲ ಹಾಕಿ, ದೂರದಿಂದ ಕಾಣುವ ರಿಂಗ್ ರೋಡಿನ ಮೇಲೆ ಹಾದುಹೋಗುವ ವಾಹನಗಳನ್ನು ತನ್ಮಯತೆಯಿಂದ ನೋಡುತ್ತ ಅವಳು ಸೃಷ್ಟಿಸಿಕೊಳ್ಳುತ್ತಿದ್ದ ಏಕಾಂತವನ್ನು ನಾನು ತುಂಬಾ ಪ್ರೀತಿಸುತ್ತೇನೆ; ಕಾಫಿ ಮಗ್ ಮೇಲಿರುವ ಕೆಂಪು ಟೀಶರ್ಟಿನ ಅವಳ ಫೋಟೋವನ್ನೂ; ನಮ್ಮಿಬ್ಬರ ನಡುವಿನ ಮೌನವನ್ನೂ! ಒಂದು ಹನಿ ಕಾಫಿಯನ್ನೂ ಹಾಳುಮಾಡದೆ ಕುಡಿದು ಮುಗಿಸಿ, ನನ್ನ ಮಗ್ಗನ್ನೂ ಹೊಳೆಯುವಂತೆ ತೊಳೆದು, ಡೆಸ್ಕಿನ ಮೇಲೆ ಜೋಡಿಸಿಟ್ಟು ಕೆಲಸಕ್ಕೆ ಕುಳಿತಳೆಂದರೆ ಮತ್ತದೇ ಮೌನ! ಆವತ್ತು ಮಾತ್ರ ತನ್ನ ಮಾಮೂಲು ಭಂಗಿಯಲ್ಲಿ ಕುಳಿತು ರಿಂಗ್ ರೋಡಿನ ಕಡೆಗೆ ನೋಡಿದವಳೇ, "ದೇಖೋ ಆ ವೆಹಿಕಲ್ಸ್ ಸೌಂಡ್ ನಮ್ಮವರೆಗೆ ಬರೋದೇ ಇಲ್ಲ. ಈ ಗ್ಲಾಸ್ ವಾಲ್ ಹತ್ರ ಬಂದು ವಾಪಸ್ ಹೋಗಿರುತ್ತೆ ಅಲ್ವಾ. ಲೈಟ್ ಮಾತ್ರ ಕಾಣ್ಸುತ್ತೆ, ಯಾವ ಲೈಟಿಗೆ ಯಾವ ಸೌಂಡ್ ಅನ್ನೋದು ಗೊತ್ತಾಗೋದೇ ಇಲ್ಲ" ಎನ್ನುತ್ತ ಕುಳಿತಲ್ಲಿಂದಲೇ ಕೊಂಚ ಬಾಗಿ ಗಾಜಿನ ಗೋಡೆಯನ್ನು ಸವರಿದಳು. ನಾನು ಅವಳ ಮಾತಿಗೆ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದೇ, " ಬಾ ಲಾಗೌಟ್ ಟೈಂ ಆಗ್ಹೋಯ್ತು" ಎಂದು ಅವಳನ್ನು ಎಬ್ಬಿಸಿಕೊಂಡು ಬಂದೆ.
ಸುತ್ತ ಇರುವ ಪ್ರಪಂಚ ಇನ್ನೇನು ಮಲಗಲಿದೆ ಎನ್ನುವ ಸಮಯದಲ್ಲಿ ಪಾಸ್ವರ್ಡುಗಳಾಗಿರುವ ಹಳೆಯ ಪ್ರೇಮಿಗಳನ್ನು, ಬಿಟ್ಟುಬಂದ ಊರುಗಳನ್ನು ನೆನಪಿಸಿಕೊಂಡು ಲಾಗಿನ್ ಆಗುವ ಇಡೀ ಫ್ಲೋರು ಆ ಗಾಜಿನ ಗೋಡೆಗಳಾಚೆ ಬೆಳಕು ಹರಿಯುವುದನ್ನೇ ಕಾಯುವುದು ಸಾಮಾನ್ಯವಾಗಿತ್ತು. ಹಾಗೊಂದು ರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಅವತರಿಸಿದ ಜಾಮಿನಿಯ ಗುಡ್ ಮಾರ್ನಿಂಗ್ ಮೆಸೇಜಿನ ಸಂಗತಿಯಿಂದಾಗಿ ಆ ಬೆಳಕಿಗೊಂದು ವಿಶೇಷ ಅರ್ಥ ಲಭ್ಯವಾಯಿತು. ಸುತ್ತ ಇರುವ ಇನ್ನೆಷ್ಟೋ ಜನರೂ ಇವಳಂತೆಯೇ ಯಾವುದೋ ಒಂದು ಮೆಸೇಜಿಗಾಗಿ ಕಾಯುತ್ತಿರಬಹುದೇ, ಹಾಗೆ ಇವರನ್ನು ತಲುಪುವ ಮಾರ್ನಿಂಗ್ ಮೆಸೇಜುಗಳು ಇವರ ನಡುಮಧ್ಯಾಹ್ನದ ನಿದ್ರೆಯನ್ನು ಸಲಹುವ ಸುಂದರ ಕನಸುಗಳಾಗಿರಬಹುದೇ ಎನ್ನುವ ಯೋಚನೆ ಆಗಾಗ ಹಾದುಹೋಗುತ್ತಿತ್ತು. ಯಾವುದೋ ಗಂಭೀರವಾದ ಮೀಟಿಂಗುಗಳಲ್ಲಿ, ಟ್ರೇನಿಂಗುಗಳಲ್ಲಿ ಮಾತನಾಡುತ್ತಿರುವವರ ಕಣ್ಣುಗಳನ್ನು ದಿಟ್ಟಿಸಿದರೆ ಅಲ್ಲಿಯೂ ಗುಡ್ ಮಾರ್ನಿಂಗ್ ಮೆಸೇಜಿನ ಪಸೆಯೊಂದು ಅಂಟಿಕೊಂಡಿರುವಂತೆ ಕಾಣಿಸಲಾರಂಭಿಸಿತು. ತಿಂಗಳಿಗೊಮ್ಮೆ ಪಾಸ್ವರ್ಡ್ ಬದಲಾಯಿಸಬೇಕೆಂಬ ಮೆಸೇಜು ಮಾನಿಟರ್ ಮೇಲೆ ಕಾಣಿಸಿಕೊಂಡಾಗಲೂ, ಎಲ್ಲರ ಬೆರಳುಗಳೂ ಆ ಮೆಸೇಜಿನವನ ಹೆಸರನ್ನೇ ಟೈಪ್ ಮಾಡುತ್ತಿರಬಹುದೆನ್ನುವ ಯೋಚನೆಯನ್ನು ತಡೆಹಿಡಿಯಲಾಗಲಿಲ್ಲ. ಆ ಅವನೇ ಇಲ್ಲಿ ಅವಳೂ ಆದಂತೆ, ಅವರಿಬ್ಬರ ನಡುವಿನ ವ್ಯತ್ಯಾಸಗಳೆಲ್ಲ ಒಂದೇ ಒಂದು ಮೆಸೇಜಿನಿಂದಾಗಿ ಕಾಣೆಯಾಗಿಹೋದಂತೆ, ಇಡೀ ಫ್ಲೋರಿಗೆ ಫ್ಲೋರೇ ಸಮಾನತೆಯ ಪ್ರಾಂಗಣವಾಗಿಹೋದಂಥ ಅನುಭವವಾಯಿತು. ಅದರೊಂದಿಗೇ ಈ ಜಾಮಿನಿಯ ಪಾಸ್ವರ್ಡ್ ಏನಿರಬಹುದೆನ್ನುವ ಕುತೂಹಲವೂ ಹುಟ್ಟಿಕೊಂಡಿತು.
ಒಂದು ಸಂಜೆ ಏಳೂವರೆಯ ಸುಮಾರಿಗೆ ಇನ್ನೇನು ಲಾಗಿನ್ ಆಗಬೇಕು ಎನ್ನುವಷ್ಟರಲ್ಲಿ ಫ್ಲೋರಿನ ತುಂಬಾ ಗುಸುಗುಸು ಶುರುವಾಗಿತ್ತು. "ಕಾಸ್ಟ್ ಮ್ಯಾನೇಜ್ ಮಾಡೋದು ಕಷ್ಟ ಆಗ್ತಿದ್ಯಂತೆ, ಪ್ರಾಸೆಸ್ ವಾಪಸ್ ಹೋಗ್ತಿದ್ಯಂತೆ, ಪ್ರಾಡಕ್ಟ್ ಸ್ಟಾಪ್ ಆಗ್ತಿದ್ಯಂತೆ" ಹೀಗೇ ಒಬ್ಬೊಬ್ಬರು ಒಂದೊಂದು ಸುದ್ದಿಯೊಂದಿಗೆ ಗುಂಪುಗೂಡಿ ಚರ್ಚಿಸುತ್ತಿದ್ದರು. ಜಾಮಿನಿ ಮಾತ್ರ ಯಾವತ್ತಿನಂತೆ ಯಾವ ವಿದ್ಯಮಾನವೂ ತನಗೆ ಸಂಬಂಧಪಟ್ಟಿಲ್ಲವೆನ್ನುವಂತೆ ಲಾಗಿನ್ ಆಗಿ ಈಮೇಲ್ ಓದಲಾರಂಭಿಸಿದಳು. ವಿಪಿಯೊಂದಿಗೆ ಮೀಟಿಂಗ್ ನಿಗದಿಯಾಗಿರುವ ಈಮೇಲ್ ನನಗೆ ತೋರಿಸುತ್ತ, "ಸೀ, ಕುಛ್ ತೊ ಹೇ" ಎಂದವಳೇ ಮತ್ತೆ ಮೌನಕ್ಕೆ ಜಾರಿದಳು. ಫ್ಲೋರಿನಲ್ಲಿ ಗುಸುಗುಸು ಆರಂಭವಾದಾಗಲೆಲ್ಲ ಅದರ ಹಿಂದೊಂದು ಗಹನವಾದ ಸಂಗತಿ ಇದ್ದೇ ಇರುತ್ತದೆಯೆನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದ್ದರೂ, ನಾಳೆಯಿಂದಲೇ ಫ್ಲೋರು ಖಾಲಿಮಾಡುವ ಪ್ರಕ್ರಿಯೆ ಆರಂಭವಾಗಲಿದೆಯೆನ್ನುವುದನ್ನು ಒಪ್ಪಿಕೊಳ್ಳಲು ಮಾತ್ರ ಯಾರಿಂದಲೂ ಸಾಧ್ಯವಾಗಲಿಲ್ಲ. ಹೀಗೆ ಒಟ್ಟಿಗೆ ಕುಳಿತು ಕಾಫಿ ಕುಡಿಯುವ ಸಮಯ ಮತ್ತೆ ಯಾವತ್ತೂ ಸಿಗದೇ ಹೋದರೆ ಎನ್ನುವ ಕಳವಳದಲ್ಲಿ ನಾನಿದ್ದರೆ, ಜಾಮಿನಿ ಮಾತ್ರ ಅದೇ ರಿಂಗ್ ರೋಡಿನ ವಾಹನಗಳನ್ನು ಕಣ್ಮರೆಯಾಗುವವರೆಗೂ ನೋಡುತ್ತ ಕುಳಿತಿದ್ದಳು. ಇವತ್ತಾದರೂ ಇವಳು ಒಂದಾದರೂ ಮಾತನ್ನಾಡಬಾರದೇ, ಕೆಲಸ ಹೋದರೆ ಹೋಗಲಿ ಗುಡ್ ಮಾರ್ನಿಂಗ್ ಮೆಸೇಜಿನ ವಿಷಯವನ್ನಾದರೂ ಮುಂದುವರಿಸಬಾರದೇ ಎಂದು ನಾನು ಅಲವತ್ತುಕೊಳ್ಳುತ್ತಿದ್ದರೆ ಎರಡೂ ಮಗ್ಗುಗಳೊಂದಿಗೆ ಪ್ಯಾಂಟ್ರಿಯೊಳಗೆ ಮರೆಯಾಗಿಹೋದಳು. ಡೆಸ್ಕಿಗೆ ಬಂದವಳೇ ತನ್ನ ಮಗ್ಗನ್ನು ನನ್ನ ಕೈಗೆ ಕೊಟ್ಟು, ನನ್ನದನ್ನು ತನ್ನ ಪರ್ಸಿನೊಳಗೆ ಸೇರಿಸುತ್ತ "ರಿಂಗ್ ರೋಡ್ ಮೆಮರೀಸ್! ನಾನು ರಿಸೈನ್ ಮಾಡಿ ಬೇರೆ ಜಾಬ್ ಸರ್ಚ್ ಮಾಡ್ತೀನಿ" ಎಂದು ಮಾತು ಮುಗಿಸಿದಳು.
ನಾನು ಅಲ್ಲಿಯೇ ಬೇರೆ ಟೀಮೊಂದಕ್ಕೆ ಶಿಫ್ಟ್ ಆದೆ. ಜಾಮಿನಿ ಬೇರೊಂದು ಕಂಪನಿಯಲ್ಲಿ ಒಳ್ಳೆಯ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದಾಳೆಂದು ಮುಕುಂದ್ ಹೇಳಿದ್ದು ಬಿಟ್ಟರೆ ಅವಳಾಗಿಯೇ ಏನನ್ನೂ ಹೇಳಲಿಲ್ಲ; ನಾನು ಕೇಳಲೂ ಇಲ್ಲ. ಎಲ್ಲ ಪ್ರಶ್ನೋತ್ತರಗಳ ಮಟ್ಟವನ್ನು ದಾಟಿ ನಮ್ಮ ಸ್ನೇಹ ಉಳಿದುಕೊಂಡಿತ್ತೋ ಅಥವಾ ಕಾಫಿ-ಡಿನ್ನರ್ ಬ್ರೇಕುಗಳನ್ನು ಮೀರಿದ ಸಂಬಂಧವೊಂದು ಹುಟ್ಟಿಕೊಂಡಿರಲೇ ಇಲ್ಲವೋ ಎನ್ನುವುದನ್ನು ನಿರ್ಧರಿಸಲಾಗಲೂ ಇಲ್ಲ. “ಶಿವ, ಚಂಡಿಪ್ರಸಾದ್, ಶಾಂತಲಾ ವೀಕೆಂಡಿನಲ್ಲಿ ಜಾಮಿನಿಯನ್ನು ಭೇಟಿಯಾಗಿದ್ದರಂತೆ. ನೀನು ಹೋಗಲಿಲ್ವಾ?” ಎಂದು ರಾಮ್ ಪ್ರಶ್ನಿಸಿದಾಗ, “ಎಲ್ಲಿದ್ದಾಳಂತೆ ಅವ್ಳು? ಆರಾಮಾಗಿದಾಳಾ?” ಎಂದು ತಿರುಗಿ ಪ್ರಶ್ನಿಸುವುದರ ಹೊರತಾಗಿ ಬೇರೇನೂ ತೋಚಲಿಲ್ಲ. ಅವಳನ್ನು ಒಮ್ಮೆಯಾದರೂ ಭೇಟಿಯಾಗಬೇಕೆಂಬ ಬಯಕೆ ನನ್ನಲ್ಲೇಕೆ ಹುಟ್ಟಿಕೊಳ್ಳಲಿಲ್ಲ, ಗೊತ್ತಿಲ್ಲ. ರಿಂಗ್ ರೋಡಿನ ಸದ್ದಿಲ್ಲದ ಚಲನೆ ನಮ್ಮಿಬ್ಬರನ್ನು ಹಿಡಿದು ಕೂರಿಸಿದಂತೆ ಇನ್ಯಾವ ಸಂಗತಿಯೂ ನಮ್ಮನ್ನು ಆಕರ್ಷಿಸಲಿಕ್ಕಿಲ್ಲ ಎನ್ನುವ ನಂಬಿಕೆಯೊಂದು ಗಟ್ಟಿಯಾಗಿಹೋಯಿತು. ಫಾರ್ವರ್ಡ್ ಗುಡ್ ಮಾರ್ನಿಂಗ್ ಮೆಸೇಜುಗಳು ಬಂದರೂ ಶೋಕೇಸಿನಲ್ಲಿಟ್ಟಿದ್ದ ಜಾಮಿನಿಯ ಕಾಫಿ ಮಗ್ಗಿನ ಕಡೆಗೆ ಬೇಡವೆಂದರೂ ದೃಷ್ಟಿ ಹೋಗುತ್ತಿತ್ತು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಕಿಂಡಿ
ಜಾಮಿನಿಯ ಮದುವೆಯಾಯಿತಂತೆ ಎನ್ನುವುದು ಕೂಡಾ ಮುಕುಂದ್ ಬಂದು ಹೇಳಿದಾಗಲೇ ನನಗೆ ಗೊತ್ತಾಗಿದ್ದು. "ಮಮ್ಮಿ ತುಂಬಾ ಫೋರ್ಸ್ ಮಾಡ್ತಿದಾರೆ ಮ್ಯಾರೇಜ್ ಅಂತ" ಎಂದು ಅವಳು ಯಾವಾಗಲೋ ಒಮ್ಮೆ ಊಟದ ಸಮಯದಲ್ಲಿ ಹೇಳಿದ್ದು ನೆನಪಿನಲ್ಲಿ ಉಳಿದಿತ್ತಾದರೂ, ಅಂಥದ್ದೊಂದು ಕನಸು ಅವಳ ಕಣ್ಣುಗಳಲ್ಲಿ ಹೊಳಪು ಮೂಡಿಸಿದ ನೆನಪಿರಲಿಲ್ಲ. "ಇದಾನಲ್ಲ ನಿನ್ನ ಮಾರ್ನಿಂಗ್ ಮೆಸೇಜಿನ ಹುಡುಗ" ಎಂದು ನಾನು ನಕ್ಕಾಗಲೂ ಅವಳು ನಿರ್ಲಿಪ್ತಳಾಗಿಯೇ ಇದ್ದಳು. ಹಾಗೊಂದು ಹೊಸ ಕನಸು ಅವಳಲ್ಲಿ ಹುಟ್ಟಿಕೊಂಡಿದ್ದಕ್ಕಾಗಿ ಸಂತೋಷಪಡಬೇಕೋ, ಬದುಕನ್ನೇ ಬದಲಿಸುವ ಅಂಥದ್ದೊಂದು ನಿರ್ಧಾರ ತೆಗೆದುಕೊಳ್ಳುವಾಗಲೂ ನನ್ನನ್ನು ನೆನಪಿಸಿಕೊಳ್ಳಲಿಲ್ಲವಲ್ಲ ಎಂದು ಬೇಸರಿಸಿಕೊಳ್ಳಬೇಕೋ ಎನ್ನುವ ನಿರ್ಧಾರಕ್ಕೂ ಬರಲಾಗಲಿಲ್ಲ. ಅವಳು ನನ್ನನ್ನು ಮರೆತಿದ್ದಾಳೆ ಎನ್ನುವುದನ್ನು ಮಾತ್ರ ಮನಸ್ಸು ಒಪ್ಪಲೇ ಇಲ್ಲ. ನಮ್ಮ ನಡುವಿನ ಮಾತುಕತೆಗಿಂತ ಮೌನವನ್ನೇ ಅವಳು ಹೆಚ್ಚು ಪ್ರೀತಿಸುತ್ತಿದ್ದಳೆನ್ನುವುದನ್ನು ನಾನು ಬಲ್ಲೆ. ಹಾಗೆ ಹೇಳದೆಯೇ ಉಳಿದುಹೋದ ಮಾತುಗಳನ್ನು, ಅರ್ಧಕ್ಕೇ ನಿಂತುಹೋದ ಅವಳೊಂದಿಗಿನ ಸಂಭಾಷಣೆಗಳನ್ನು ನಾನು ಪ್ರೀತಿಸುತ್ತಲೇ ಇರುತ್ತೇನೆ.
ಫಾರ್ವರ್ಡ್ ಮೆಸೇಜುಗಳನ್ನು ಓದುತ್ತ, ಪಾಸ್ವರ್ಡ್ ಬದಲಾಯಿಸುತ್ತ ಎರಡು ವರ್ಷಗಳು ಕಳೆದುಹೋಗಿದ್ದೇ ಗೊತ್ತಾಗಲಿಲ್ಲ. ಬೇರೆ ಟೀಮಿಗೆ ಹೋದರೂ ಶಿಫ್ಟ್ ಮಾತ್ರ ಬದಲಾಗಲಿಲ್ಲ. ಯಾವಾಗಲೋ ಒಮ್ಮೆ ಮೀಟಿಂಗಿಗೆಂದು ರಿಂಗ್ ರೋಡ್ ಕಾಣಿಸುವ ರೂಮಿಗೆ ಹೋದಾಗ ಜಾಮಿನಿಯ ನೆನಪು ತೀವ್ರವಾಗಿ ಕಾಡುತ್ತಿತ್ತು ಎನ್ನುವುದನ್ನು ಬಿಟ್ಟರೆ ಎಲ್ಲವೂ ಮಾಮೂಲಾಗಿಯೇ ಇತ್ತು. ಎಲ್ಲ ನೆನಪುಗಳ ಲಕ್ಷಣವೂ ಹಾಗೆಯೇ ಇರಬಹುದೇನೋ, ನೋವಿನದಿರಲೀ ನಲಿವಿನದಾಗಿರಲೀ ಕಾಲವೆನ್ನುವುದು ಅವುಗಳ ತೀವ್ರತೆಯನ್ನು ತನ್ನ ಹತೋಟಿಗೆ ತೆಗೆದುಕೊಂಡುಬಿಡುತ್ತದೆಯೇನೋ ಎನ್ನಿಸಿ ಕಳವಳ-ಸಮಾಧಾನಗಳೆರಡೂ ಒಟ್ಟೊಟ್ಟಿಗೇ ಅನುಭವಕ್ಕೆ ಸಿಗುತ್ತಿದ್ದವು.
ಒಂದು ಶುಕ್ರವಾರದ ಶಿಫ್ಟ್ ಮುಗಿಸಿ ಮನೆಗೆ ಬಂದು ಮಲಗಿದವಳಿಗೆ ಎಚ್ಚರವಾಗಿದ್ದು ಶನಿವಾರ ಸಂಜೆಯೇ. ಎದ್ದು ಮೊಬೈಲ್ ಮೇಲೆ ಕಣ್ಣಾಡಿಸಿದವಳಿಗೆ ಎಂಟ್ಹತ್ತು ಮೆಸೇಜುಗಳ ನಡುವೆ ಕಾಣಿಸಿದ್ದು ಜಾಮಿನಿಯ “ಗುಡ್ ಮಾರ್ನಿಂಗ್ ಡಿಯರ್”. ಸಂಜೆಯ ಹೊತ್ತಿನಲ್ಲಿ ಕಣ್ಣಿಗೆ ಬಿದ್ದ ಮಾರ್ನಿಂಗ್ ಮೆಸೇಜಿಗೆ ಹೇಗೆ ಪ್ರತಿಕ್ರಿಯಿಸುವುದೆಂದು ಗೊಂದಲವಾಗಿ, ನೂರಾರು ಎಮೋಜಿಗಳ ನಡುವೆ ಸದ್ದುಮಾಡದೆ ಕುಳಿತಿದ್ದ ಬಣ್ಣಬಣ್ಣದ ಹಾರ್ಟುಗಳನ್ನು ಹುಡುಕಿ ಕಳುಹಿಸಿದೆ. ತಕ್ಷಣವೇ ಅವಳಿಂದ ಬಂದ “ಮೀಟ್ ಮೀ ಒನ್ಸ್ ಪ್ಲೀಸ್” ಮೆಸೇಜಿಗೆ “ಓಕೆ” ಎಂದು ಉತ್ತರಿಸಿದ್ದು ನೆನಪಿದೆ; ಭೇಟಿಯಾಗದಿರಲು ಕಾರಣವೇನಿತ್ತು ಎನ್ನುವುದು ಮಾತ್ರ ನೆನಪಿಲ್ಲ. ಅಸಲಿಗೆ ನಾನು ಆ ಭೇಟಿಯನ್ನು ಮುಂದೂಡಿದ್ದೇನಷ್ಟೇ.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಚೆಕ್‍ಔಟ್
ಹಾಗೆ ನಾನು ಮುಂದೂಡಿದ್ದು ಕೇವಲ ಭೇಟಿಯನ್ನು ಮಾತ್ರ ಆಗಿರಲಿಲ್ಲ, ನಮ್ಮಿಬ್ಬರ ನಡುವೆ ಮತ್ತೆ ಸಂಭವಿಸಬಹುದಾಗಿದ್ದ ಅದೇ ಸುಂದರ ಮೌನವನ್ನು ಎನ್ನುವುದು ಅರಿವಿಗೆ ಬಂದಾಗ ತಡವಾಗಿಹೋಗಿತ್ತು. ಅವಳಿನ್ನು ಒಮ್ಮೆ ಕೂಡಾ ಒಂದೇ ಒಂದು ಮಾತಿಗೂ ಸಿಕ್ಕುವುದಿಲ್ಲ, ಬಯಸಿದರೂ ಆ ಚೆಂದದ ಮೌನ ಮತ್ತೆಂದೂ ಈ ಜನ್ಮದಲ್ಲಿ ಸಿಗುವುದಿಲ್ಲ ಎನ್ನುವುದು ತಿಳಿದಾಗ ಅತ್ತು ಸಮಾಧಾನ ಮಾಡಿಕೊಳ್ಳಬೇಕೆಂದರೂ ಸಾಧ್ಯವಾಗಲಿಲ್ಲ.
ಜಾಮಿನಿಯ ಸಾವಿನ ಸುದ್ದಿ ನನಗೆ ತಲುಪಿದ್ದು ಮುಕುಂದ್ ಕಳುಹಿಸಿದ ಮೆಸೇಜಿನ ಮುಖಾಂತರವೇ. ಈ ವೀಕೆಂಡಾದರೂ ಅವಳನ್ನು ಭೇಟಿಯಾಗಲೇಬೇಕು ಎನ್ನುವ ಯೋಚನೆಗೂ ನನಗೆ ಸಿಕ್ಕಿದ್ದು ನಾಲ್ಕೇ ದಿನಗಳ ಅವಕಾಶ. ಐದನೇ ದಿನವೇ ತಾನು ಬೆಂಗಳೂರನ್ನು ಬಿಟ್ಟು ಗಂಡನ ಮನೆಗೆ ಶಿಫ್ಟ್ ಆಗುತ್ತಿರುವುದಾಗಿಯೂ, ಅಲ್ಲಿಯೇ ಬೇರೆ ಕೆಲಸ ಹುಡುಕಿಕೊಳ್ಳಲು ಪ್ರಯತ್ನಿಸುವುದಾಗಿಯೂ ಅವಳು ಕಳುಹಿಸಿದ್ದ ಮೆಸೇಜನ್ನು ನಾನು ಓದಿದ್ದು ಕೂಡಾ ತಡವಾಗಿಯೇ. "ಆಲ್ ದಿ ಬೆಸ್ಟ್" ಎನ್ನುವುದೋ ಅಥವಾ "ಟೇಕ್ ಕೇರ್" ಹೇಳುವುದೋ ಗೊಂದಲವಾಗಿ, ಎರಡೂ ಬೇಡವೆಂದು ಕಳಿಸಿದ್ದ ಹೂವಿನ ಎಮೋಜಿಗಳು ಅವಳನ್ನು ತಲುಪಿರಲೇ ಇಲ್ಲ. ಅವಳು ಗಂಡನೊಂದಿಗೆ ಆರಾಮಾಗಿ ಸಮಯ ಕಳೆಯುತ್ತಿದ್ದಿರಬಹುದೆಂದು ಊಹಿಸಿ ಸುಮ್ಮನಾಗಿದ್ದು ನಾನು ಮಾಡಿದ ಮತ್ತೊಂದು ತಪ್ಪಾಗಿತ್ತು ಎನ್ನುವುದು ಅರ್ಥವಾಗಿದ್ದು ಮುಕುಂದ್ ಕಳುಹಿಸಿದ ಮೆಸೇಜ್ ಓದಿದಾಗಲೇ.
ಜಾಮಿನಿ ನನಗೆ ಮೆಸೇಜ್ ಮಾಡಿ ಎರಡೇ ಎರಡು ತಿಂಗಳಿಗೆ ಆ ಘಟನೆ ನಡೆದಿದ್ದು. ಮುಕುಂದನ ಯಾವ ಮೆಸೇಜಿಗೂ ಅವಳು ಉತ್ತರಿಸದೇ ಇದ್ದಾಗ ಅವನು ಅವಳಿಗೆ ಕರೆ ಮಾಡಿದ್ದ. ಅದನ್ನೂ ಸ್ವೀಕರಿಸದೇ ಇದ್ದಾಗ, ಮತ್ತೆಮತ್ತೆ ಪ್ರಯತ್ನಿಸಿದ್ದಕ್ಕೆ ಉತ್ತರಿಸಿದ್ದು ಅವಳ ಗಂಡನ ತಾಯಿ. ಆಕೆ ಹೇಳಿದ್ದಿಷ್ಟೇ, ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಜಾಮಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ; ಮತ್ತೆ ಅವಳನ್ನು ಸಂಪರ್ಕಿಸುವ ಪ್ರಯತ್ನ ಬೇಡ. ಅದಾಗಿ ಎರಡೇ ತಾಸಿಗೆ ಜಾಮಿನಿಯ ಫೇಸ್ಬುಕ್ ಪ್ರೊಫೈಲಿನಲ್ಲಿಯೂ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನುವ ಪೋಸ್ಟ್ ಕಾಣಿಸಿಕೊಂಡಿತ್ತು. ಎಲ್ಲರೂ ಅದನ್ನು ನಂಬಿಕೊಂಡು ಹಾಗೊಂದು ಸಾವನ್ನು ಒಪ್ಪಿಕೊಂಡರಾದರೂ ಇಲ್ಲಿ ನಾನು, ಅಲ್ಲಿ ಮುಕುಂದ್ ಇಬ್ಬರಿಗೂ ಜಾಮಿನಿಯಂಥ ಜಾಮಿನಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆನ್ನುವುದು ಒಪ್ಪಿಕೊಳ್ಳುವ ಸಂಗತಿಯಾಗಿರಲಿಲ್ಲ.
ಮುಕುಂದನಿಗೆ ಜಾಮಿನಿಯ ಬಹಳಷ್ಟು ಖಾಸಗಿ ವಿಷಯಗಳು ತಿಳಿದಿತ್ತೆನ್ನುವುದು ನನಗೆ ಗೊತ್ತಾಗಿದ್ದು ಅವಳ ಸಾವಿನ ನಂತರವೇ. ಒಂದೇ ಬಿಲ್ಡಿಂಗಿನಲ್ಲಿ ಕೆಲಸ ಮಾಡುತ್ತಿದ್ದ ನಾವು ಮೊದಲು ಎದುರುಬದುರಾದಾಗ ಹಾಯ್ ಹಲೋಗಳಿಗೆ ನಮ್ಮ ಪರಿಚಯವನ್ನು ಸೀಮಿತಗೊಳಿಸಿದ್ದರೂ, ಅವಳ ಸಾವಿನ ನಂತರ ದಿನಕ್ಕೊಮ್ಮೆಯಾದರೂ ಭೇಟಿಯಾಗಲಾರಂಭಿಸಿದೆವು. ನನಗೆ ಅವಳ ಮೌನ ಇಷ್ಟವಾದಂತೆ, ಅವನಿಗೆ ಅವಳ ಮಾತು ಪ್ರಿಯವಾಗಿತ್ತು ಎನ್ನುವುದು ನನಗೆ ಗೊತ್ತಾಗಿದ್ದೂ ಅವಳ ಸಾವಿನ ನಂತರವೇ. ನಾವು ಮೂವರೂ ಸೇರಿ ಸಂಭ್ರಮಿಸಬಹುದಾಗಿದ್ದ ಮಾತುಕತೆ, ಮೌನ, ನಗು ಎಲ್ಲವನ್ನೂ ಹೀಗೆ ಸಾವಿನೊಂದಿಗೆ ನೆನಪಿಸಿಕೊಳ್ಳಬೇಕಾಗಿಬಂದ ಪರಿಸ್ಥಿತಿಗೆ ನಾವಿಬ್ಬರೂ ನಮ್ಮನ್ನು ನಾವು ಶಪಿಸಿಕೊಂಡೆವು. ಅವನು ಯಾವ ಕಾರಣಕ್ಕೆ ಪಶ್ಚಾತ್ತಾಪಪಡುತ್ತಿದ್ದಾನೆ ಎನ್ನುವುದನ್ನು ಅವನು ಬಾಯಿಬಿಟ್ಟು ಹೇಳಲಿಲ್ಲ; ಅವಳು ನನ್ನನ್ನು ಭೇಟಿಯಾಗಲು ಬಯಸಿದ್ದ ವಿಷಯವನ್ನು ನಾನೂ ಬಾಯಿಬಿಡಲಿಲ್ಲ.
"ಅವಳು ಗುಡ್ ಮಾರ್ನಿಂಗ್ ಮೆಸೇಜಿಗೆ ಕೊಟ್ಟ ಇಂಪಾರ್ಟನ್ಸ್ ತನ್ನ ಲೈಫಿಗೆ ಕೊಟ್ಟಿದ್ದಿದ್ರೆ!?" ಜಾಮಿನಿಯ ಕನ್ನಡ ಬೆರೆತ ಇಂಗ್ಲಿಷಿನ ಧಾಟಿಯಲ್ಲಿಯೇ ಇದ್ದ ಮುಕುಂದನ ಮಾತಿಗೆ ಚಕಿತಳಾಗಿದ್ದೆ. ಅದ್ಯಾವುದೋ ಮೆಸೇಜಿನ ವಿಷಯ ನನಗಿಂತ ಜಾಸ್ತಿ ಈತನಿಗೆ ತಿಳಿದಿರಬಹುದೆನ್ನುವ ಯೋಚನೆಗೆ ಸಣ್ಣದೊಂದು ನೋವಿನ ಅನುಭವವಾಯಿತು. ತೋರಿಸಿಕೊಳ್ಳದೇ, "ಯಾವ ಗುಡ್ ಮಾರ್ನಿಂಗ್ ಮೆಸೇಜು?" ಎಂದೆ. ಅದೇನೂ ಅಂಥ ದೊಡ್ಡ ಸಂಗತಿಯಾಗಿರಲಿಕ್ಕಿಲ್ಲ ಎಂದು ಅವಳು ಬದುಕಿದ್ದಾಗ ನಿರ್ಲಕ್ಷ್ಯಿಸಿದ್ದ ಒಂದು ಮೆಸೇಜಿನ ವಿಷಯ , ಅವಳ ಸಾವಿಗೆ ಕಾರಣವನ್ನು ಕಂಡುಹಿಡಿಯಲು ನೆರವಾಗುವ ಆಶಾಕಿರಣದಂತೆ ಕಾಣಿಸಿಕೊಂಡಿತು. ನನ್ನ ಪ್ರಶ್ನೆಗೆ ಉತ್ತರ ನೀಡದೇ, "ನಾಳೆ ಸಿಗ್ತೀನಿ" ಎಂದು ಹೊರಟುಹೋದ ಮುಕುಂದನನ್ನೇ ನೋಡುತ್ತ ನಿಂತಿದ್ದೆ. ಈತನೇ ಇರಬಹುದೇ ಅವಳ ಹಗಲು-ರಾತ್ರಿಗಳ ನೆಮ್ಮದಿಯನ್ನು ನಿರ್ಧರಿಸುತ್ತಿದ್ದ ಮೆಸೇಜಿನ ಹುಡುಗ ಎನ್ನುವ ಸಂದೇಹವೂ ಹುಟ್ಟಿಕೊಂಡಿತು.
ಜಾಮಿನಿಯ ಪರಿಚಿತ ವಲಯದವರನ್ನೆಲ್ಲ ಹೇಗ್ಹೇಗೋ ಕಷ್ಟಪಟ್ಟು ಸಂಪರ್ಕಿಸಿ ಮಾಹಿತಿಗಳನ್ನು ಸಂಗ್ರಹಿಸತೊಡಗಿದ್ದ ಮುಕುಂದ್. ತಿಂಗಳುಗಟ್ಟಲೆ ಮುಂದುವರಿಸಿದ ಸತತ ಪ್ರಯತ್ನದ ಫಲವೆನ್ನುವಂತೆ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ್ದ ಕೂಡಾ. ಜಾಮಿನಿ ಮದುವೆಯಾಗಿದ್ದ ಹುಡುಗ ಮೂಲತಃ ಗುಜರಾತಿನವನು. ಇವಳು ಕೆಲಸಕ್ಕೆ ಸೇರಿಕೊಂಡಿದ್ದ ಕಂಪನಿಯಲ್ಲಿಯೇ ಮ್ಯಾನೇಜರ್ ಆಗಿದ್ದ. ತಂದೆ-ತಾಯಿಯರ ಒಬ್ಬನೇ ಮಗ. ಇವಳು ಅಂತಹ ಆಸಕ್ತಿ ತೋರಿಸದಿದ್ದರೂ ತನ್ನ ತಂದೆ-ತಾಯಿಯರನ್ನೂ, ಇವಳ ತಾಯಿಯನ್ನೂ ಒಪ್ಪಿಸಿ ಮದುವೆಯಾಗಿದ್ದ. ಮಗ ಇವಳನ್ನು ಮದುವೆಯಾಗಿದ್ದು ಅವನ ತಾಯಿಗೆ ಇಷ್ಟವಿರಲಿಲ್ಲವೆಂದೂ, ಒಂದಲ್ಲ ಒಂದು ಕಾರಣ ಹುಡುಕಿ ಇವಳ ಪ್ರತಿ ತಿಂಗಳ ಸಂಬಳವನ್ನು ತನ್ನ ಕೈಗೆ ತಂದುಕೊಡುವಂತೆ ತಾಕೀತು ಮಾಡುತ್ತಿದ್ದಳೆಂದೂ, ಮದುವೆಯಾದ ನಾಲ್ಕೇ ತಿಂಗಳಿಗೆ ಮೊಮ್ಮಗುವಿನ ಪ್ರಸ್ತಾಪ ಎತ್ತಿದ್ದಳೆಂದೂ ಮುಕುಂದ ಹೇಳುತ್ತ ಹೋದಾಗ ಅವಳು ಹುಟ್ಟುವ ಮುಂಚೆಯೇ ತೆರೆಕಂಡಿರಬಹುದಾದ ಸಾಂಸಾರಿಕ ಚಲನಚಿತ್ರವೊಂದರ ಕತೆಯನ್ನು ಕೇಳಿಸಿಕೊಳ್ಳುತ್ತಿರುವ ಅನುಭವವಾಗಿತ್ತು. ಅವಳಿಗೆ ತಂದೆಯಾಗಲೀ, ಒಡಹುಟ್ಟಿದವರಾಗಲೀ ಇರಲಿಲ್ಲವೆನ್ನುವ ವಿಷಯವೂ ಮುಕುಂದ ಹೇಳಿದಮೇಲೆಯೇ ನನಗೆ ಗೊತ್ತಾಗಿದ್ದು.
ಪ್ರತಿದಿನವೂ ಒಂದೊಂದು ಹೊಸ ಸಂಶೋಧನೆಯೊಂದಿಗೆ ಹಾಜರಾಗುತ್ತಿದ್ದ ಮುಕುಂದ ಹುಡುಕಿದ ಯಾವ ಕಾರಣಗಳಿಗೂ ಅವಳು ತನ್ನ ಇಡೀ ಬದುಕನ್ನೇ ಕೊಟ್ಟುಬಿಡುವಷ್ಟು ದುರ್ಬಲಳಲ್ಲ ಎಂದೇ ನಾನು ವಾದಿಸುತ್ತಿದ್ದೆ. ಅಷ್ಟಕ್ಕೂ ಜಾಮಿನಿ ಸತ್ತುಹೋಗಿದ್ದಾಳೆ ಎನ್ನುವುದನ್ನೇ ನಾನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅವಳು ಪ್ರತಿ ತಿಂಗಳೂ ಡಾಕ್ಟರ್ ಅಪಾಯ್ಟ್ಮೆಂಟ್ ಎಂದು ಓಡಾಡಿದ್ದು ತನಗೆ ಗೊತ್ತಿದೆ; ಕೆಲಸ ಬಿಟ್ಟಾದರೂ ಸರಿ ಮಗು ಮಾಡಿಕೊಳ್ಳಬೇಕು ಎನ್ನುವುದೇ ಅವಳ ಗೋಲ್ ಆಗಿತ್ತು ಎಂದು ಮುಕುಂದ್ ಹೇಳಿದಾಗ, ಗುಡ್ ಮಾರ್ನಿಂಗ್ ಮೆಸೇಜಿಗೆ ಹಂಬಲಿಸಿದಷ್ಟೇ ತೀವ್ರವಾಗಿ ಅವಳು ಮಗುವಿಗಾಗಿಯೂ ಹಂಬಲಿಸಿದ್ದಿರಬಹುದು ಎನ್ನುವ ಯೋಚನೆಯೇ ನೋವನ್ನುಂಟುಮಾಡಿತು. ಆ ನೋವನ್ನು ಹೇಳಿಕೊಳ್ಳಲೆಂದೇ ಅವಳು ನನ್ನನ್ನು ಭೇಟಿಯಾಗಲು ಬಯಸಿದ್ದಿರಬಹುದೇ, ಬೆಂಗಳೂರನ್ನು ಬಿಟ್ಟುಹೋಗುವ ನೋವನ್ನು ಕಡಿಮೆಮಾಡಿಕೊಳ್ಳಲು ನನ್ನ ಸಾಮೀಪ್ಯದ ಅಗತ್ಯ ಕಾಣಿಸಿಕೊಂಡಿರಬಹುದೇ, ಆ ಮಾರ್ನಿಂಗ್ ಮೆಸೇಜಿನ ನಿರೀಕ್ಷೆಯಲ್ಲಿ ಅವಳು ಸಾಯುವವರೆಗೂ ನೋವನ್ನನುಭವಿಸಿರಬಹುದೇ ಅಥವಾ ಅವಳ ಎಲ್ಲ ನೋವುಗಳ ಮೂಲ ಮುಕುಂದನೇ ಆಗಿರಬಹುದೇ! ಕೇಳಿಸಿಕೊಳ್ಳಲು ಅಲ್ಲಿ ನಾನಿರಲಿಲ್ಲ; ಹೇಳಲು ಈಗ ಇಲ್ಲಿ ಅವಳಿಲ್ಲ.
ಒಂದೇ ಒಂದು ಸಾವಿನೊಂದಿಗೆ ಅವಳು ಬಚ್ಚಿಟ್ಟುಕೊಂಡ ಗುಟ್ಟುಗಳು, ಹೊಟ್ಟೆಯಲ್ಲಿಟ್ಟುಕೊಂಡ ಮಾತುಗಳು ಎಲ್ಲವೂ ಉಳಿದುಹೋಗಿದ್ದವು ಅಲ್ಲಲ್ಲಿಯೇ. ಇನ್ನು ನಾನೆಷ್ಟೇ ಪ್ರಯತ್ನಪಟ್ಟರೂ ನಿಜಸ್ವರೂಪದಲ್ಲಿ ಅವು ನನ್ನನ್ನೆಂದೂ ತಲುಪಲಾರವು ಎನ್ನುವುದು ಅರಿವಾದಾಗ ಪಾಪಪ್ರಜ್ಞೆಯನ್ನು ಹೊರತುಪಡಿಸಿ ಇನ್ನೇನೂ ಉಳಿದುಕೊಂಡಿರಲು ಸಾಧ್ಯವೇ ಇರಲಿಲ್ಲ. ಒಮ್ಮೆ ಅವಳನ್ನು ಭೇಟಿಯಾಗಿದ್ದಿದ್ದರೆ ಸಾವನ್ನು ತಪ್ಪಿಸಬಹುದಿತ್ತೇ, ಭೇಟಿಯನ್ನು ಮುಂದೂಡದಿದ್ದರೆ ಸಾವನ್ನು ಮುಂದೂಡಬಹುದಾಗಿತ್ತೇ ಎನ್ನುವ ಪ್ರಶ್ನೆಗಳೆಲ್ಲ ನೋವಾಗಿ ಮಾರ್ಪಾಡಾಗಿ ಉಳಿದುಕೊಂಡವು ನನ್ನಲ್ಲಿಯೇ. ಅವಳ ನೋವೆಲ್ಲವೂ ನನ್ನದೇ ಆಗಿಹೋದಂತೆ; ನನ್ನ ನೋವಿಗೆ ಸಾವೇ ಇಲ್ಲದಿರುವಂತೆ! ಅವಳ ಮಾತಿಗಾಗಿ ಹಂಬಲಿಸುವ ನಾನು; ನನ್ನೊಂದಿಗಿನ ಮೌನವನ್ನು ಪ್ರೀತಿಸುವ ಅವಳು! "ನಿನ್ನ ಮೌನಕ್ಕಿಂತ ಜಾಸ್ತಿ ನಿನ್ನ ನಗುವನ್ನೂ, ಮಾತನ್ನೂ ಪ್ರೀತಿಸುತ್ತೇನೆ ನಾನು ಜಾಮಿನಿ" ಎಂದು ಬಾಯಿಬಿಟ್ಟು ಹೇಳುವ ಅವಕಾಶ ಒಂದೇ ಒಂದು ಸಲ ಸಿಗಬಾರದಿತ್ತೇ!
ಬಡಿಸದೇ ಉಳಿದುಹೋದ ಕೆಂಪುಚಟ್ನಿಯ ನೆನಪಿನ ಭಾರವನ್ನು ಹೊರಲಾರದಂಥ, ಸುಖ ನೀಡುತ್ತಿದ್ದ ಸಮಾನತೆಯ ಅನುಭವ ಸುಳ್ಳಾಗಿಹೋದಂಥ ಭಾವ!
ಮುಕುಂದ ಈಗಲೂ ಭೇಟಿಯಾಗುತ್ತಾನೆ. ನಮ್ಮ ಮಾತುಗಳಲ್ಲಿ ಜಾಮಿನಿ ಇನ್ನೂ ಜೀವಂತವಾಗಿಯೇ ಇದ್ದಾಳೆ; ನಮ್ಮ ನಡುವೆಯೇ ಸದ್ದುಮಾಡದೆ ಓಡಾಡಿಕೊಂಡಿರುವ ಹೆಣ್ಣುಮಕ್ಕಳ ಹೃದಯದಲ್ಲೂ! ಅವಳ ಸುಖ-ದುಃಖಗಳನ್ನು ನಿರ್ಧರಿಸುತ್ತಿದ್ದ ಆ ಗುಡ್ ಮಾರ್ನಿಂಗ್ ಮೆಸೇಜು ಇನ್ಯಾರದೋ ಹಗಲು-ರಾತ್ರಿಗಳ ಹಣೆಬರಹವನ್ನು ಬರೆಯುತ್ತಿರಬಹುದು! ರಿಂಗ್ ರೋಡಿನ ವಾಹನಗಳ ಸದ್ದು ಗೋಡೆಗಳಿಗೆ ಬಡಿದು ವಾಪಸ್ಸಾಗುತ್ತಿರಬಹುದು! ಮೌನವನ್ನು ಪ್ರೀತಿಸುವುದಕ್ಕೂ, ಸಹಿಸಿಕೊಳ್ಳುವುದಕ್ಕೂ, ಒಪ್ಪಿಕೊಳ್ಳುವುದಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಅವಳಲ್ಲದೇ ಇನ್ಯಾರು ಕಲಿಸಿಕೊಡಬಹುದಿತ್ತು!
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಮುಕ್ಕೋಡ್ಲು ಗ್ರಾಮ ಮತ್ತು ಅಂಚೆ