Site icon Vistara News

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು

short story dadapeer jyman
ದಾದಾಪೀರ್‌ ಜೈಮನ್

:: ದಾದಾಪೀರ್‌ ಜೈಮನ್

ಕನಸಿನಲ್ಲೊಬ್ಬ ಹುಡುಗ ಬರುತ್ತಾನೆ. ಉದ್ದಗೆ ಬೆಳೆದ ಕೂದಲಿದೆ. ಬರಿಮೈ ಹಾಗೂ ಅನಾಥ ಪಾದಗಳ ಅವನ ಕೈಯಲ್ಲೊಂದು ಕಟ್ಟಿಗೆಯ ಕೋಲಿದೆ. ಅದನ್ನು ಚಮತ್ಕಾರದ ಮಂತ್ರದಂಡದಂತೆ ಹಿಡಿದು ಗಾಳಿಯಲ್ಲಿ ಬೀಸುತ್ತಾ ಬರುತ್ತಾನೆ. ಚಿತ್ರವಿಚಿತ್ರಗಳನ್ನು ಸೃಷ್ಟಿಸುತ್ತಾ ನಡೆಯುತ್ತಿದ್ದಾನೆ. ಮೊದಲು ಊರಿನ ದಿಡ್ಡಿಬಾಗಿಲು ಪ್ರವೇಶಿಸುತ್ತಾನೆ. ಊರ ಗಲ್ಲಿಗಳ ತುಂಬಾ ಅಡ್ಡಾಡುತ್ತಾನೆ. ಕುಣಿಯುತ್ತಾನೆ. ಓಡುತ್ತಾನೆ. ಮಾಂತ್ರಿಕನ ಹಾಗೆ ನಡೆಯುತ್ತಾನೆ. ಒಮ್ಮೊಮ್ಮೆ ತೆವಳುತ್ತಾನೆ… ಮೆಲ್ಲಗೆ ಮನೆಯೊಳಗೆ ಲಗ್ಗೆ ಇಡುತ್ತಾನೆ. ಕಿಟಕಿಯ ಪೊಳಕುಗಳಿಂದ ಕೋಣೆಗಳಲ್ಲೂ ಇಣುಕುತ್ತಾನೆ. ಕೈಯಲ್ಲಿ ಗಾಳಿಗುದ್ದಾಟ ನಡೆಸುತ್ತಲೇ ಇದ್ದಾನೆ. ಅವನು ಮಾತನಾಡುತ್ತಿಲ್ಲ. ಬಹುಷಃ ಅವನಿಗೆ ಭಾಷೆಯಿಲ್ಲ. ಅಥವಾ ಅವನಿಗೆ ಇಡೀ ಪ್ರಪಂಚದ  ಭಾಷೆಯೆಲ್ಲಾ ಒಂದೇ ಎನಿಸುತ್ತಿರಬಹುದು…  ಅದೆಷ್ಟೋ ಹೊತ್ತು ಕನ್ನಡಿಯ ಮುಂದೆ ಕುಳಿತುಕೊಳ್ಳುತ್ತಾನೆ. ಮಹಾಮೌನದದಲ್ಲಿ ತನ್ನ ಪ್ರತಿಬಿಂಬವನ್ನೇ ನೋಡುತ್ತಾ ಕೈಗೋಲನ್ನು ಮತ್ತೆ ಆಡಿಸುವಾಗ ಅದು ಎರಡಾಗುವ ಚಮತ್ಕಾರವನ್ನು ಕಂಡು ಜೋರಾಗಿ ನಗುತ್ತಾನೆ. ಅದೇ ಹೊತ್ತಿಗೆ ನಾನವನನ್ನು ನೋಡಿಬಿಡುತ್ತೇನೆ. ಅವನೂ ನನ್ನನ್ನು ನೋಡಿ ಮುಗುಳ್ನಕ್ಕು ನನ್ನ ಮುಂದೆ ಅವನ ಕೈಗೋಲನ್ನು ವೃತ್ತಾಕಾರವಾಗಿ ತಿರುಗಿಸುತ್ತಾನೆ. ಅವನನ್ನು ಕರೆಯಲು ನನಗೆ ಮಾತು ಬರುವುದಿಲ್ಲ. ನಾಲಗೆಯ ತುದಿವರೆಗೂ ಬಂದದ್ದು ಮಾತಾಗುವುದಿಲ್ಲ. ಇನ್ನೇನು ಮಾತಾಯಿತು ಎನ್ನುವಲ್ಲಿಗೆ ಮುಗಿಲುsss ಎಂದು ಜೋರಾಗಿ ಕೂಗಿ ಎಚ್ಚರಾಗುತ್ತೇನೆ. ಕಣ್ಣು ಬಿಟ್ಟಾಗ ಏದುಸಿರು ಬಿಡುತ್ತಿರುತ್ತೇನೆ. ಹಣೆಯ ಮೇಲೆ ಬೆವರಿನ ಹನಿಗಳು ಕಿತ್ತು ಬರುತ್ತವೆ. ಇವರು ಪ್ರತಿದಿನ ಅದೇ ಸಮಾಧಾನದಿಂದ ಎದ್ದು ನನ್ನ ಬೆನ್ನದಡವಿ ನೀರು ಕೊಟ್ಟು ಸ್ವಲ್ಪ ಹೊತ್ತು ದಿಂಬಿಗಾನಿಸಿ ಕೂರಿಸಿ ದೊಡ್ಡ ದೀಪ ಹತ್ತಿಸಿ ಫ್ಯಾನನ್ನು ಚೂರು ಜೋರು ಮಾಡಿ ಬೆನ್ನದಡವುತ್ತಾ ನಿದ್ದೆ ಹೋಗುತ್ತಾರೆ. ನಾನು ಅದೆಷ್ಟೋ ಹೊತ್ತು ಕೂತೆ ಇರುತ್ತೇನೆ.

*** 

ನನಗಿದನ್ನೆಲ್ಲಾ ಖಂಡಿತಾ ಬರೆಯಬೇಕಿರಲಿಲ್ಲ. ಏಕೆಂದರೆ ನನಗೆ ಇತ್ತೀಚಿಗೆ ನನ್ನ ಗಂಡನ ಹಾಗೆ ಈ ಜಗತ್ತನ್ನು ಉದ್ಧರಿಸಬೇಕೆನ್ನುವ ಯಾವ ಹಕೀಕತ್ತೂ ಇಲ್ಲ. ಅವರ ಹಾಗೆ ನಾನೀಗ ಪೊಲಿಟಿಕಲ್ ಜೀವಿಯೂ ಅಲ್ಲ. ಜಗತ್ತು ಕರೆಯುವ ಹಾಗೆ ಆಂದೋಲನ ಜೀವಿಯೂ ಅಲ್ಲ. ನಾನೊಬ್ಬಳು ತಾಯಿ. ಕೇವಲ ತಾಯಿ. ಅದರ ಬಗ್ಗೆಯೂ ನನಗೆ ಗೊಂದಲವಿದೆ. ನನ್ನನ್ನು ಇದನ್ನೆಲ್ಲಾ ಬರೆಯಹಚ್ಚಿರುವುದು ನನ್ನ ಥೆರಪಿಸ್ಟ್ ಸುಮಾ. ಮತ್ತೆ ಮತ್ತೆ ಕನಸಿನಲ್ಲಿ ಸುಳಿಯುವ ಆ ಹುಡುಗನ ಚಿತ್ರ. ನಿದ್ದೆ ಇಲ್ಲದ ರಾತ್ರಿಗಳು. ಭಯ. ಇವೆಲ್ಲದರಿಂದ ಹೊರಬರಲು ಬರೆವುದೊಂದೇ ದಾರಿ ಅಂದಳು ಸುಮಾ!  ಚಳುವಳಿಗಳ ಕರಪತ್ರಗಳ ಕಂಟೆಂಟನ್ನು ಸಲೀಸಾಗಿ ಬರೆಯುತ್ತಿದ್ದ ನಾನು ನನ್ನ ಡೈರಿಯನ್ನು ದಿನನಿತ್ಯ ಬರೆಯಲೇ ಇಲ್ಲ. ‘ಭೂಮಿ ಪ್ರಕಾಶನ’ ಸಂಸ್ಥೆಯ ಒಡತಿಯಾದ ಮೇಲೂ ಅದೆಷ್ಟೇ ಪುಸ್ತಕಗಳನ್ನು ಓದಿದರೂ, ನಮ್ಮ ಪ್ರಕಾಶನ ಸಂಸ್ಥೆಯಿಂದ ಬೆಳಕಿಗೆ ಬಂದ ಪುಸ್ತಕಗಳಿಗೆ ಪ್ರಕಾಶಕಿಯ ಮಾತುಗಳನ್ನು ಬರೆಯುವಾಗಲೂ ಅದು ನನ್ನ ಖಾಸಗಿ ಬದುಕಿನ ವಿಮರ್ಶೆಯ ಹತ್ತಿರಕ್ಕೂ ಸುಳಿಯಲಿಲ್ಲ. ಅಥವಾ ಅದರಿಂದ ದೂರವಿರುವ ಪುಸ್ತಕಗಳನ್ನು ಮಾತ್ರ ನಾನು ಪ್ರಕಾಶಿಸಿದೆನೆ? ಜಗತ್ತಿನಲ್ಲಿ ಎರಡೇ ಇರುವುದು ಒಂದು ಪಂಜರ ಮತ್ತೊಂದು ಅದರಿಂದ ತಪ್ಪಿಸಿಕೊಳ್ಳುವುದು. ಟ್ರ್ಯಾಪ್ ಅಂಡ್ ಎಸ್ಕೇಪ್. ಮತ್ತದಕ್ಕೆ ನಾವು ಕೊಟ್ಟುಕೊಳ್ಳುವ ಕಾರಣಗಳು. ನಾನು ನನ್ನಿಂದ ಬರಿ ತಪ್ಪಿಸಿಕೊಂಡು ಬಂದೆನೆ? ಹೊರಗಡೆಯಿಂದ ನೋಡಿದಾಗ ಎಲ್ಲಾ ಸರಿಯಾಗಿಯೇ ಇದೆ ಅನಿಸುತ್ತದಲ್ಲ! ಈಗ ಮಕ್ಕಳಿಬ್ಬರು ಬೆಳೆದು ದೊಡ್ಡವರಾಗಿ ಕೇಳುವ ಪ್ರಶ್ನೆಗಳು ನನ್ನ ಇಡೀ ಜೀವನವನ್ನು ಅಣಕಿಸುವ ಸಂದರ್ಭ ಬಂದಿದೆಯಾದ್ದರಿಂದ ಈಗ ಬರೆಯದೆ ವಿಧಿಯಿಲ್ಲವೆನಿಸುತ್ತಿದೆಯೇ?  ನನ್ನ ಅಸ್ತಿತ್ವವನ್ನು ಮರು ಕಟ್ಟಿಕೊಳ್ಳುವುದು ಎಂದರೆ ಬರೆಯುವುದು ಎಂದರ್ಥವೇ? ಈಗ ಎಲ್ಲದಕ್ಕೂ ಕಾರಣಗಳನ್ನು ಹೆಕ್ಕಿಕೊಳ್ಳಬೇಕೇ? ಅದಕ್ಕಿದು ತಕ್ಕನಾದ ವಯಸ್ಸೇ? ಹೀಗೆ ಯೋಚಿಸುವಾಗ ಸುಮಾ ಹೇಳಿದ್ದು ನೆನಪಾಗುತ್ತದೆ ‘ಯು ಜಸ್ಟ್ ರೈಟ್ ಭಾಗೀರಥಿ. ಜಸ್ಟ್ ರೈಟ್ ಫಾರ್ ಯುವರ್ ಸೆಲ್ಫ್’. ಅಥವಾ ಕನಸಿನಲ್ಲಿ ಬರುವ ಆ ಹುಡುಗ ಬರೆಯಲೇ ಬೇಕೆಂದು ಹಠ ಹಿಡಿದಿದ್ದಾನೆಯೇ? ನಾನು ಯಾವುದಕ್ಕಾಗಿ ಬರೆಯುತ್ತೇನೆ? 

*** 

ನಾನು ಭಾಗೀರಥಿ. ಗಂಡನ ಹೆಸರು ಪ್ರಸಾದ್. ನಮಗಿಬ್ಬರು ಮಕ್ಕಳು ಭೂಮಿ ಮತ್ತು ಮುಗಿಲು. ಮನೆಯಲ್ಲಿ ವಸು ಚಿಕ್ಕಿ ಕೂಡ ಇದ್ದಾರೆ. ನಾನೊಂದು ಪ್ರಕಾಶನ ಸಂಸ್ಥೆ ನಡೆಸುತ್ತೇನೆ. ಭೂಮಿ ಪ್ರಕಾಶನ. ಅದು ಮೊದಲ ಮಗಳ ಮುದ್ದಿನ ಕಾರಣಕ್ಕೆ ಇಟ್ಟ ಹೆಸರು. ಮುಗಿಲು ನನ್ನ ಮಗ. ಮದುವೆಯ ವಯಸ್ಸಾಗಿದೆ. ಪ್ರಸಾದ್ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಆರ್. ಟಿ. ನಗರದ ಮುಖ್ಯಮಂತ್ರಿಗಳ ಖಾಸಗಿ ಮನೆಯಿಂದ ಒಂದು ಮುನ್ನೂರು ಮೀಟರ್ ದಾಟಿದರೆ ನಮ್ಮ ಮನೆ. ಸ್ವಿಮ್ಮಿಂಗ್ ಪೂಲ್ ಇರುವ ಮನೆ. ಮುಗಿಲು ಹುಟ್ಟಿದ ಮೇಲೆ ಈ ಮನೆಗೆ ಬಂದದ್ದು! ಪ್ರಸಾದ್ ಮತ್ತೆ ನಾನು ವಿಶ್ವವಿದ್ಯಾಲಯದಿಂದ ಸ್ನೇಹಿತರು. ಆಗಿನಿಂದಲೇ ನಾವು ಜನಪರ ಚಳುವಳಿಗಳಲ್ಲಿ, ವಿದ್ಯಾರ್ಥಿ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದೆವು. ವಿದ್ಯಾರ್ಥಿ ಸಂಘಟನೆಗಳ, ಸಾಂಸ್ಕೃತಿಕ ಸಂಘಗಳ ನಾಯಕರಾಗಿದ್ದ ನಾವು ಪ್ರೇಮಿಗಳೂ ಆದೆವು. ಕ್ರಾಂತಿಯ ಕಿಚ್ಚು ಪ್ರೇಮದ ಕಿಚ್ಚು ಒಳಗೊಳಗೇ ಇಬ್ಬರನ್ನೂ ಭಸ್ಮ ಮಾಡುತ್ತಿತ್ತು. ವಾರಕ್ಕೊಮ್ಮೆ ಹೋಟೆಲ್ ರೂಮುಗಳಲ್ಲಿ ಒಬ್ಬರ ತೆಕ್ಕೆಯಲ್ಲಿ ಮತ್ತೊಬ್ಬರು ಒಂದಾಗುವಾಗ ನಾವೇ ಶಿವ ಶಿವೆಯರೆಂದರೆನಿಸಿಹೋಗುತ್ತಿತ್ತು. ಇಬ್ಬರಿಗೂ ಮದುವೆ ಎನ್ನುವ ವಿಷಯದಲ್ಲಿ ನಂಬಿಕೆಯಿರಲಿಲ್ಲ. ಹೇಗೂ ಒಟ್ಟಿಗೆ ಇರುವುದೇ ನಿಜವೆಂದ ಮೇಲೆ ಮದುವೆಯಾಗುವುದರಲ್ಲಿ ತಪ್ಪೇನು ಅಂದುಕೊಳ್ಳುವಾಗಲೇ ಮದುವೆಯೂ ಆಯಿತು. ನನ್ನ ಮತ್ತು ಅವನ ನಡುವೆ ಮೊದಲ ಬಾರಿಗೆ ಮನಸ್ತಾಪ ಬಂದಿದ್ದು ಮಗುವಿನ ವಿಷಯದಲ್ಲಿ. ನನಗೆ ಮಕ್ಕಳೆಂದರೆ ಆಗುತ್ತಿರಲಿಲ್ಲ. ನನ್ನ ದೇಹದಿಂದ ಏನೋ ಒಂದು ಹೊರಗಡೆ ಬರುತ್ತದೆ ಎನ್ನುವ ಕಲ್ಪನೆಯೇ ನನ್ನ ದೇಹದಲ್ಲಿ ಮುಳ್ಳು ಮೂಡಿಸುತ್ತಿತ್ತು. ಆದರೆ ಪ್ರಸಾದನಿಗೆ ಮಕ್ಕಳೆಂದರೆ ಪಂಚಪ್ರಾಣ. ಇಂತಹ ಕೆಟ್ಟ ಪ್ರಪಂಚದಲ್ಲಿ ಮಕ್ಕಳನ್ನು ಹುಟ್ಟಿಸುವ ಐಡಿಯಾಕ್ಕೇನೆ ಹೆದರುತ್ತಿದ್ದನಾದರೂ ಒಳಗೊಳಗೇ ಮಗು ಇದ್ದರೆ ಚೆನ್ನ ಎನಿಸುವ ಇರಾದೆಯೂ ಇತ್ತು. ಕೊನೆಗೂ ಈ ದ್ವಂದ್ವವನ್ನು ದಾಟಿ ನಮಗೆ ಮಕ್ಕಳಾಯಿತು. ಇಷ್ಟು ಬರೆದು ಕನ್ನಡಿಯನ್ನು ನೋಡಿದೆ. ಆ ಕೈಗೋಲಿನ ಹುಡುಗ ಕನ್ನಡಿ ನೋಡುತ್ತಾ ಮುಗುಳ್ನಗುತ್ತಿದ್ದ. 

*** 

ಮೊನ್ನೆ ಇವರು ಫೋನಿನಲ್ಲಿ ಜೋರಾಗಿ ಕೂಗುತ್ತಿದ್ದರು. ‘ಏನ್ರೋ ಇವತ್ತು ಫುಲ್ ಐಟಿ ಸೆಲ್ ನನ್ನ ಟಾರ್ಗೆಟ್ ಮಾಡ್ತಿದೆ. ಏನ್ ಸಮಾಚಾರ? ನಾನು ಮೊನ್ನೆ ಹಾಕಿದ ಪೋಸ್ಟ್ ಇಂದ ಫುಲ್ ಉರಿದು ಹೋಗಿದ್ಯಾ? ಇರ್ಲಾ! ನಾನೂ ನೋಡಿಕೊಳ್ತೀನಿ.’ ಎಂದು ಜೋರಾಗಿ ವದರಿ ಫೋನಿಟ್ಟರು. ಇಡೀ ಸೋಶಿಯಲ್ ನೆಟ್ವರ್ಕಿಂಗ್ ಸೈಟ್ ತುಂಬಾ ಇವರ ವೈಯಕ್ತಿಕ ಜೀವನದ ಬಗ್ಗೆ ಹೊಲಸು ಬರೆದಿದ್ದರು. ಇವರು ಬೈ ಸೆಕ್ಷುಯಲ್ ಎನ್ನುವ ವಿಷಯ ಹೇಗೋ ತಿಳಿದು ಇವರ ಗೇ ಬಾಯ್ ಫ್ರೆಂಡ್ ಜೊತೆ ಇದ್ದ ಫೋಟೋಗಳನ್ನು ಸೆರೆ ಹಿಡಿದು ಅವೆಲ್ಲ ಕಡೆ ಹರಿದಾಡುತ್ತಿದ್ದವು. ಇವೆಲ್ಲದರಲ್ಲಿ ಪಾಪ ಆ ಹುಡುಗ ಸಿಕ್ಕಿಹಾಕಿಕೊಂಡಿದ್ದ. ಆಗ ಆ ಹುಡುಗನ ಖಾಸಗಿತನದ ಬಗ್ಗೆ ಯಾರೂ ಕಿಂಚಿತ್ ಯೋಚನೆಯನ್ನೂ ಮಾಡಿರಲಿಲ್ಲ. ನನ್ನ ಮೇಲೆ ಕಾಳಜಿ ತೋರಿ ಒಂದಿಷ್ಟು ಪೋಸ್ಟುಗಳೂ ಕೂಡ ಬಂದಿದ್ದವು. ನನಗೇ ಇಲ್ಲದ ಸಮಸ್ಯೆ ಇವರಿಗೆ ಅದು ಹೇಗೋ ಹುಟ್ಟಿಕೊಂಡಿತ್ತು?! ಇಲ್ಲ ಇಲ್ಲ, ನನಗೆ ಆಗಾಗ ಹೊಟ್ಟೆಕಿಚ್ಚಾಗುತ್ತಿತ್ತು. ಒಬ್ಬರನ್ನು ಹಂಚಿಕೊಳ್ಳುವುದು ತುಂಬಾ ಕಷ್ಟ. ಅದು ನಮ್ಮ ಪ್ರೀತಿ ಪಾತ್ರರನ್ನು ಮತ್ತೊಬ್ಬರ ಜೊತೆಗೆ ಹಂಚಿಕೊಳ್ಳುವುದು ಆಗುವುದೇ ಇಲ್ಲ. ಆಮೇಲೆ ಈ ಹೊಟ್ಟೆಕಿಚ್ಚನ್ನು ನಿಯಂತ್ರಿಸೋದು ಎಷ್ಟು ಕಷ್ಟ?! ಗೋಡೆಗೆ ತಟ್ಟಿದ ಸಗಣಿ ಬೆರಣಿಯ ಹಾಗೆ ಮುಖದ ಮೇಲೆ ಕಾಣುತ್ತದೆ. (ಇದಿಷ್ಟು ನಿಜವನ್ನು ಒಪ್ಪಿಕೊಳ್ಳದೆ ಇದ್ದರೆ ನನಗಷ್ಟೇ ಕಾಣುವ ಹುಡುಗನಿಗೆ ಕೋಪ ಬರುತ್ತಿತ್ತು. ಅವನಾಗ ನನ್ನತ್ತ ತಿರುಗಿ ತನ್ನ ಮಂತ್ರದಂಡವನ್ನು ಪ್ರಯೋಗ ಮಾಡಿದ್ದರೆ?! ಭಯ!!! )  ಹಾಗಂತ ಇವರೇನೂ ಸಾಚಾ ಅಂತೇನೂ ನಾನು ಹೇಳುತ್ತಿಲ್ಲ. ಮತ್ತೊಮ್ಮೆ ಯಾರೋ ಇವರ ಫ್ರೆಂಡ್ ಮನೆಗೆ ಬಂದಾಗ ‘ಆ ರಾಜಕಾರಣಿದು ಬಹಳ ಆಗಿದೆ ಮಾರ್ರೆ. ಆ ಮನುಷ್ಯ ಹೆಣ್ಣುಮಕ್ಕಳ ವಿಷ್ಯದಲ್ಲಿ ತುಂಬಾ ವೀಕಂತೆ! ಚೂರು ವಿಚಾರಿಸಿ ಹೇಳಿ. ಹನಿ ಟ್ರ್ಯಾಪ್ ವ್ಯವಸ್ಥೆ ಮಾಡುವ!’ ಎಂದು ಹೇಳಿದ್ದನ್ನ ನಾನೇ ಕೇಳಿಸಿಕೊಂಡಿದ್ದೇನೆ. ನನಗೀಗ ಭಯ. ಎಲ್ಲಿ ಏನಾಗಿಬಿಡುತ್ತದೋ ಎನ್ನುವ ಭಯ. ನಾನು ಮೊದಮೊದಲಿಗೆ ತುಂಬಾ ಧೈರ್ಯವಂತೆಯಾಗಿದ್ದೆ. ಮಕ್ಕಳು ಹುಟ್ಟಿದ ಮೇಲೆ ನಾನಿಷ್ಟು ಮೆತ್ತಗಾದೆನೆ? ತಾಯಿಯಾಗುವುದೆಂದರೆ ಅಳ್ಳಕವಾಗುವುದೇ? ನನ್ನ ಮತ್ತು ಪ್ರಸಾದ್ ನಡುವೆ ಹೇಳತೀರದ ಒಂದು ಪವರ್ ಡೈನಾಮಿಕ್ಸ್ ಯಾಕೆ ಮೂಡುತ್ತಿದೆ? ಅದಕ್ಕೆ ನಾನೇ ಅವಕಾಶ ಮಾಡಿಕೊಡುತ್ತಿರುವೆನೆ? ತಾಯಿಯಾದಾಗಿನಿಂದಲೇ ಇದೆಲ್ಲ ಶುರುವಾಯಿತೇ? ಅಥವಾ ಇದು ಪ್ರಸಾದನ ಹುನ್ನಾರ ಮಾತ್ರವಲ್ಲ ಅಲ್ಲವೇ?!! ತಾಯಿಯಾದರೂ ನಾನು ನಿಜವಾದ ತಾಯಿಯಾದೆನೆ?  

ಹುಡುಗ ಅದ್ಯಾಕೋ ಚೂರು ಹೊತ್ತು ಆ ಕಡ್ಡಿ ಆಡಿಸುವುದನ್ನು ನಿಲ್ಲಿಸಿ ಕನ್ನಡಿಯ ಶೂನ್ಯದೊಳಗೆ ದಿಟ್ಟಿಸಿದ. 

***

ಪ್ರಸಾದನ ರಾಜಕೀಯ ಜೀವನ ಉನ್ನತ ಮಟ್ಟಕ್ಕೆ ಹೋಗುವುದಿತ್ತು. ಇದರ ನಡುವೆ ಅವನ ಖಾಸಗಿ ಜೀವನದ ದೃಶ್ಯಗಳು ಹೊರಬಂದಿದ್ದವು. ರಾಜಕಾರಣದಲ್ಲಿ ಒಳಗೊಳಗೆ ಏನಾದರೂ ಮಾಡಿಕೋ ಆದರೆ ಹೊರಗಡೆ ಬಂದರೆ ಅದನ್ನು ವೋಟ್ ಬ್ಯಾಂಕಿಗೆ ಪೂರಕವಾಗಿ ಬಳಸುವ ಅವಕಾಶ ಅದಕ್ಕಿರಬೇಕು. ಪಕ್ಷಕ್ಕೆ ಅದು ಮುಜುಗರ ತರಿಸುವ ವಿಷಯವಾಗಿರಬಾರದು ಎನ್ನುವುದು ತೀರಾ ಕಾಮನ್ ಸೆನ್ಸ್ ಮಟ್ಟಿಗಿನ ವಿಷಯವೇ! ಇವರ ದೃಶ್ಯಗಳು ಹೊರಗಡೆ ಬಂದಾಗ ಇವರು ತುಂಬಾ ಒದ್ದಾಡಿ ಹೋಗಿದ್ದರು. ನಾನೇ ‘ ‘ನಿಮ್ಮ ಓರಿಯಂಟೇಷನ್ ಬಗ್ಗೆ ಮೊದಲೇ ಗೊತ್ತಿತ್ತು. ಲೆಟ್ಸ್ ಗೆಟೌಟ್ ಆಫ್ ಬೈಫೋಬಿಯಾ! ಬೈಫೋಬಿಯಾ ಈಸ್ ನಾಟ್ ಅ ಫೇಸ್. ಇಟ್ಸ್ ಅ ಚಾಯ್ಸ್ ಅಂತ ನಾನು ಟ್ವಿಟರಿನಲ್ಲಿ ಹಾಕಬಲ್ಲೆ. ಅದು ನನ್ನ ಪಬ್ಲಿಷಿಂಗ್ ಜೀವನಕ್ಕೆ ಯಾವುದೇ ತೊಂದರೆ ಮಾಡಲ್ಲ. ಅದಕ್ಕಿಂತ ಹೆಚ್ಚಿಗೆ ನನಗೆ ಮಾಡಕ್ಕಾಗಲ್ಲ.’ ಎಂದೆ. ಹಾಗೆ ಮಾಡಿದೆ ಕೂಡ. ಅದಾದ ಮೇಲೆ ಅವರಿಗೇ ಸಮಸ್ಯೆ ಇಲ್ಲವೆಂದ ಮೇಲೆ ನಮಗೇನು ಎಂದು ಸುಮ್ಮನೆ ಬಿಟ್ಟಿತ್ತಾದರೂ ಇವರನ್ನು ಸಂಶಯಾಸ್ಪದ ದೃಷ್ಟಿಯಿಂದ ನೋಡುವುದು ಇದ್ದೇ ಇತ್ತು. ಕಡೆಗೆ ಅವರ ಪಕ್ಷ ಪ್ರಸಾದನ ಲೈಂಗಿಕ ಅಸ್ಮಿತೆಯನ್ನೂ ಒಂದು ರಾಜಕಾರಣದ ದಾಳವಾಗಿ ಬಳಸಿತ್ತು. ‘ದಿ ಫಸ್ಟ್ ಕ್ವೀರ್ ಪರ್ಸನ್ ಟು ಗೆಟ್ ಟಿಕೆಟ್.’ ಎಂದು ಘೋಷಿಸಿತ್ತು. ಇವೆಲ್ಲವೂ ರಾಜಕೀಯ ಜೀವನವನ್ನು ಸಲೀಸು ಮಾಡಿತ್ತು. ಈ ನಡುವೆ ಭೂಮಿ ಮತ್ತು ಮುಗಿಲು ವಿಷಯ ಕೂಡ ಮೀಡಿಯಾದಿಂದ ಹೊರಗಡೆ ಬಂದರೆ ಅದನ್ನು ಎದುರಿಸುವುದು ಹೇಗೆ ಎನ್ನವುದು ಪ್ರಸಾದನ ಹೊಸ ತಲೆನೋವಾಗಿತ್ತು. ಅದಕ್ಕೆ ಸರಿಯಾಗಿ ಮುಗಿಲು ನಮ್ಮ ಮನೆ ಬಿಟ್ಟು ಹೊರಟು ಹೋಗಿದ್ದ. 

ಹುಡುಗ ಈಗ ತನ್ನ ಕೈಗೋಲಿನ ಮೇಲೆ ಬಿದ್ದ ಧೂಳನ್ನು ಬಾಯಿಯಿಂದ ಊದಿ ತೆಗೆಯುತ್ತಿದ್ದ. 

***

ನನಗೆ ಮೊದಲ ಹೆರಿಗೆಯಾದ ದಿನ ಅಷ್ಟೊಂದು ಸಂತಸ ಇಡೀ ಆಸ್ಪತ್ರೆಯಲ್ಲಿ ಇರಲಿಲ್ಲ. ನರ್ಸ್ ಮೆತ್ತಗೆ ಬಂದು ಅವಳ ಲೋಕಲ್ ಭಾಷೆಯಲ್ಲಿ ‘ಈ ಮಗುಗೆ ಏನಿದೆ ಅಂತಾನೆ ಗೊತ್ತಾಗ್ತಾ ಇಲ್ಲ, ಪಾಪ!’ ಎಂದು ಬೇಜಾರಿನಲ್ಲೊ, ಹೇವರಿಕೆಯಲ್ಲೊ, ಕೊಂಕಿನಲ್ಲೊ, ಹಾಸ್ಯದಲ್ಲೊ ಮತ್ತೇನೋ ಭಾವದಲ್ಲಿ ಹೇಳಿದ್ದಳು. ಅವಳ ಮುಖಭಾವ ಏನಾಗಿತ್ತು ಎಂಬುದು ನನಗೆ ಇವತ್ತಿಗೂ ಅರ್ಥವಾಗಿಲ್ಲ. ನಾನಾಗ ‘ನನ್ನ ಕೂಸೆಲ್ಲಿ?’ ಎಂದು ಕೇಳಿದೆ. ಮೆಲ್ಲಗೆ ಅದಕ್ಕೆ ಸುತ್ತಿದ್ದ ಬಟ್ಟೆ ತೆಗೆದು ನೋಡಿದರೆ ಜನನಾಂಗ ಪೂರ್ತಿ ಬೆಳೆದಿರಲಿಲ್ಲ. ಅದು ಹುಡುಗನ ಶಿಶ್ನದಂತೆ ಕಾಣುತ್ತಿದ್ದರೂ ಅದು ಯೋನಿಯೊ ಶಿಶ್ನವೋ ತಿಳಿಯುತ್ತಿರಲಿಲ್ಲ. ನನ್ನ ಕಣ್ಣುಗಳಲ್ಲಿ ಧಾರಾಕಾರ ನೀರು. ಮೊದಲ ಬಾರಿಗೆ ‘ಅಯ್ಯೋ ಶಿವನೇ!’ ಎನ್ನುವ ಉದ್ಘಾರ ನನ್ನಿಂದ ಹೊರಬಿದ್ದಿತ್ತು. ಆ ಅಯ್ಯೋ ಶಿವನೇ ಎಂದದ್ದು ಮಗುವಿನ ಮೇಲಿನ ಕನಿಕರದಿಂದಲಾ ಅಥವಾ ನನ್ನನ್ನು ಯಾಕೆ ಇಂಥ ಘೋರವಾದ ಪರಿಸ್ಥಿತಿಯ ಪಾಲುದಾರಳನ್ನಾಗಿ ಮಾಡಿದೆ ಎನ್ನುವ ಕಾರಣದಿಂದಲಾ? ನಾನೊಬ್ಬ ವಿಚಿತ್ರವಾದ ಕೂಸನ್ನು ಹೆತ್ತೆ ಎನ್ನುವ ಭಾವದಿಂದಲಾ? ಏನೇ ಆಗಲಿ ನನ್ನ ಈ ಕೂಸನ್ನು ಬೆಳೆಸಬೇಕು ಎನ್ನುವ ಜಿದ್ದಿನಿಂದಲಾ? ಯಾಕೆ ನಾನು ಅಯ್ಯೋ ಶಿವನೇ ಎಂದಿದ್ದೆ? ನನ್ನ ಮೇಲೆ ಅಗಾಧ ಪ್ರೀತಿ ಇದೆ ಎಂದುಕೊಂಡಿದ್ದ ನನ್ನ ಶಿವ ಅದೆಷ್ಟೋ ಹೊತ್ತು ನನ್ನ ಹತ್ತಿರ ಸುಳಿಯಲೇ ಇಲ್ಲ. ನಮ್ಮ ನಡುವಿನ ಮೊದಲ ಮೌನದ ಬಿರುಕು ಅಲ್ಲಿಂದಲೇ ಆರಂಭವಾಗಿತ್ತು. ಅದರಾಚೆಗೆ ನನ್ನೊಳಗೊಬ್ಬ ತಾಯಿ ಹುಟ್ಟಿದ್ದಳು. ಅಥವಾ ನನ್ನೊಳಗಿನ ಜಿದ್ದಿಗೆ ತಾಯಿ ಎನ್ನುವ ಭಾವ ಅಂಟಿಸಿಕೊಂಡೆನಾ? ಡಾಕ್ಟರ್ ಬಂದು ಯು ಹ್ಯಾವ್ ಆನ್ ಇಂಟೆರ್ ಸೆಕ್ಸ್ ಕಿಡ್.  ಪ್ರತಿ ಐವತ್ತು ಸಾವಿರದಲ್ಲಿ ಒಂದು ಮಗು ಹೀಗಾಗುತ್ತದೆ. ತುಂಬಾ ಸುಲಭದ ಆಯ್ಕೆಯೆಂದರೆ ಶಿಶ್ನವನ್ನು ಸರ್ಜರಿಯ ಮೂಲಕ ತೆಗೆದು ಯೋನಿ ಆಗಿಸುವುದು. ಚಿಕ್ಕ ವಯಸ್ಸಾದ್ದರಿಂದ ಬೇಗನೆ ಗುಣವಾಗುತ್ತದೆ ಎಂದರು. ಪ್ರಸಾದನಿಗೆ ನನ್ನ ಮೇಲೆ ಹೇಳಲಾಗದ ಹೇವರಿಕೆಯೋ ಏನೋ ಕಡೆಗೂ ಒಪ್ಪಿದ. ಅಸಾಧ್ಯ ಮೌನಗಳ ನಡುವೆ ಮಗುವಿಗೆ ಸರ್ಜರಿ ಆಯಿತು. ಅದಕ್ಕೆ ಭೂಮಿ ಎಂದು ಹೆಸರಿಟ್ಟೆವು. ನನಗೆ ಭೂಮಿ ಮೇಲೆ ಇನ್ನಿಲ್ಲದ ಮುದ್ದು. ಅಥವಾ ಪ್ರಸಾದ್ ಗೆ ಭೂಮಿಯ ಮೇಲೆ ಅಸಡ್ಡೆಯಿದ್ದದ್ದರಿಂದ ನಾನು ಮುದ್ದುವನ್ನು ನನ್ನ ಮೇಲೆ ಹೇರಿಕೊಂಡೆನೇ? ಯೋಚಿಸಿದರೆ ಕಾರಣಗಳು ಗೋಜಲು ಗೋಜಲು. 

ಹುಡುಗ ಕನ್ನಡಿಯನ್ನು ಕ್ಯಾನ್ವಾಸ್ ಆಗಿಸಿ ಕೈಗೋಲನ್ನು ಬ್ರಷ್ ಮಾಡಿಕೊಂಡು ಅದರ ಮೇಲೆ ಚಿತ್ರ ಬಿಡಿಸುತ್ತಿದ್ದ. ಅದರ ಮೇಲೆ ಯಾವ ಬಣ್ಣವೂ ಮೂಡುತ್ತಿರಲಿಲ್ಲ. ಅಥವಾ ನನಗದು ಕಾಣುತ್ತಿರಲಿಲ್ಲ. 

*** 

ಒಂದಿಷ್ಟು ಕಾಲ ನನ್ನ ಮತ್ತು ಪ್ರಸಾದ್ ನಡುವೆ ಈಗೀಗ ಸಹಿಸಲಸಾಧ್ಯವಾದ ಮೌನ ತುಂಬಿಹೋಗಿತ್ತು.  ಒಂದು ಇಂಟೆರ್ ಸೆಕ್ಸ್ ಚೈಲ್ಡ್ ಎಂದಾಗ ಹಾರ್ಡ್ ಕೋರ್ ಪ್ರೊಗ್ರೆಸ್ಸಿವ್ ಆಗಿದ್ದ ಪ್ರಸಾದ್, ತಾನೊಬ್ಬ ಬೈ ಸೆಕ್ಷುಯಲ್ ಎನ್ನುವ ವಿಚಾರವೇ ಅವನ ರಾಜಕಾರಣದ ಪ್ರಯಾಣಕ್ಕೆ ವರ ಮಾಡಿಕೊಂಡ ಮನುಷ್ಯ ಈ ಹೊತ್ತಿನಲ್ಲಿ ಇಲ್ಲವಾಗಿದ್ದ. ಅಥವಾ ಅವನೊಳಗೂ ಒಂದು ಅಂತರ್ಯುದ್ಧ ನಡೆಯುತ್ತಿದ್ದಿರಬಹುದೇ? ಮಾತುಗಳು ನಿಂತಾಗ ಮೌನದೊಳಗೆ ಅಡಗಿ ಕುಳಿತ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ನಾನು ಭೂಮಿಯನ್ನು ನಿರ್ವಹಿಸುತ್ತಲೇ ಭೂಮಿ ಪ್ರಕಾಶನವನ್ನೂ ಕಟ್ಟಿದೆ. ಅದ್ಯಾಕೋ ಭೂಮಿ ಹುಡುಗರ ಡ್ರೆಸ್ಸನ್ನ ಹಾಕಿಕೊಳ್ಳುವುದನ್ನೇ ಇಷ್ಟ ಪಡುತ್ತಿದ್ದಳು. ಪ್ರಸಾದನನ್ನ ಕೇಳಿದರೆ ನಮಗೆ ‘ಅವಳಿಗೆ ಹೇಗೆ ಬೇಕೋ ಹಾಗಿರಲಿ ಭಾಗಿ. ಒತ್ತಾಯ ಮಾಡ್ಬೇಡ.’ ಎಂದನಾದರೂ ಅವನ ಹಿಂದಿನ ಮಾತಿನ ಅರ್ಥ ನನಗೆ ಈ ಅಂತರ್ಲಿಂಗಿ ಮಗುವಿನ ಬಗ್ಗೆ ಹೇಳದೆ ಇದ್ದರೇನೇ ಒಳ್ಳೇದು ಅನ್ನುವ ಅರ್ಥವಿತ್ತೇ?! ನನಗೆ ಈ ನಡುವೆ ಮಗು, ಇವರ ರಾಜಕಾರಣ, ಪ್ರಕಾಶನ ಸಂಸ್ಥೆ, ಮನೆಗೆಲಸ ಎಲ್ಲವೂ ಒಂದು ರೀತಿ ಮಗ್ಗುಲು ಮಾಡುತ್ತಿದ್ದವು. ಮನೆಯಲ್ಲಿ ಸಹಾಯಕ್ಕೆಂದು ವಸು ಚಿಕ್ಕಿ ಇದ್ದರೂ ಅದು ನನಗೆ ಒಮ್ಮೊಮ್ಮೆ ಅವರ ಇರುವೆ ಇರಿಟೇಟ್ ಮಾಡುತ್ತಿತ್ತು. 

**

ಪ್ರಸಾದ್ ಕೆಲಸ ಮಾಡುತ್ತಿದ್ದ ಪಕ್ಷದಲ್ಲಿ ಒಬ್ಬ ಹೆಣ್ಣುಮಗಳಿದ್ದಳು. ಧಾರಾವಾಹಿ ಕ್ಷೇತ್ರದಿಂದ ಬಂದ ಆ ಹೆಣ್ಣುಮಗಳು ಇದ್ದಕ್ಕಿದ್ದಂತೆ ತಮ್ಮ ಸೆಕ್ಯೂಲರ್ ಪಕ್ಷ ತೊರೆದು ಮಹಾ ನಾಸ್ತಿಕಳಂತಿದ್ದ ಹೆಣ್ಣುಮಗಳು ಆಸ್ತಿಕ ಪಕ್ಷಕ್ಕೆ ಸೇರಿ ಮಠ ಮಾನ್ಯ ತಿರುಗಿ ಮಹಾ ದೈವಭಕ್ತೆಯಾಗಿ ಕೈಲಾಸ ಪೀಠ ಕಟ್ಟುತ್ತೇನೆ ಎಂದು ಕುಳಿತ ನಿತ್ಯಕಾಮ ಪ್ರಭುಗಳ ಪಟ್ಟಾ ಶಿಷ್ಯೆಯಾಗಿ ಹೋದದ್ದು ನಮ್ಮ ಹೈ ಪೊಲಿಟಿಕಲ್ ಪಾರ್ಟಿಗಳಲ್ಲಿ ಆಡಿಕೊಳ್ಳುವ ವಿಷಯವಾಗಿತ್ತಾದರೂ ಅದಕ್ಕೆಲ್ಲಾ ಅವಳ ವಿಕಲಚೇತನ ಮಗು ಅದಕ್ಕೆ ಕಾರಣ ಎಂದು ಗೊತ್ತಾದಾಗ ನಡುಗಿಹೋಗಿದ್ದೆ. ಅದನ್ನೊಮ್ಮೆ ದೆಹಲಿಯಲ್ಲೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸಿ ವಾಪಾಸಾಗುವಾಗ ಪ್ರಸಾದ್ ಮೆತ್ತಗೆ ನನಗೆ ಹರ್ಟ್ ಆಗದೆ ಇರುವ ರೀತಿಯಲ್ಲಿ ಹೇಳಿದ್ದರು. ವಸು ಚಿಕ್ಕಿ ಒಬ್ಬ ತಾಯಿ ತನ್ನ ಮಗುವಿಗಾಗಿ ಅದೆಂತಹ ತ್ಯಾಗಕ್ಕಾಗಿಯಾದರೂ ತಯಾರಾಗ್ತಾಳೆ ಭಾಗಿ…’  ಎನ್ನುವ ಮಾತು ಹೇಳಿದ್ದರು. ಅದಕ್ಕೆ ನಾನಾಗ ‘ಚಿಕ್ಕಿ ಪ್ಲೀಸ್. ನಿಮಗೆ ಮದುವೆಯೇ ಆಗಿಲ್ಲ. ಸುಮ್ಮನೆ ಆರು ಮಕ್ಕಳು ಹಡೆದವರ ಹಾಗೆ ಆಡ್ಬೇಡಿ.’ ಎನ್ನುವ ಕಠೋರ ಹುಂಬ ಮಾತುಗಳನ್ನು ಆಡಿದ್ದೆ. ಚಿಕ್ಕಿ ಎಂದಿನಂತೆ ಕಣ್ಣುಗಳಲ್ಲಿ ನೀರು ತುಂಬಿಕೊಂಡು ಮುಸಿ ಮುಸಿ ಅಳತೊಡಗಿದರು. ಡ್ರೈವ್ ಮಾಡುತ್ತಿದ್ದ ಪ್ರಸಾದ್ ಹಿಂತಿರುಗಿ ನನ್ನನ್ನು ಕೆಂಡದ ಕಣ್ಣುಗಳಲ್ಲಿ ನೋಡಿದರು. ಪಕ್ಕದಲ್ಲಿಯೇ ಕೂತಿದ್ದ ಭೂಮಿ, ಚಿಕ್ಕಿ ಅಳುವುದನ್ನು ನೋಡಿ ಇವಳೂ ಜೋರಾಗಿ ದುಃಖಿಸಿ ಅಳಲು ಶುರು ಮಾಡಿದಳು. ನಾನೊಂದು ಛಟೀರ್ ಎಂದು ಭೂಮಿಯ ಕೆನ್ನೆಗೆ ಬಿಗಿದೆ. ಮತ್ತೆ ತಾರುಮಾರು ಒಂದಾಗುವಂತೆ ಚೀರತೊಡಗಿದಳು. ಕೂಸು ಹುಟ್ಟಿದಾಗ ಕ್ಯಾರೇ ಎನ್ನದವರು ಗಾಡಿಯನ್ನು ಪಕ್ಕಕ್ಕೆ ಹಾಕಿ ಮಗುವನ್ನು ರಮಿಸಲು ಕರೆದೊಯ್ದರು. ನಾನು ಮುಖ ಊದಿಸಿಕೊಂಡು ಕೂತಿದ್ದೆ. ನಾನು ಯಾಕೆ ಹಾಗೆ ಹೇಳಿದೆ? ಭೂಮಿ ನನ್ನ ಬಿಟ್ಟು ವಸು ಚಿಕ್ಕಿಯ ಜೊತೆಗೆ ಹತ್ತಿರವಾಗುತ್ತಿದ್ದದ್ದು ನನಗೆ ಸಹಿಸಲು ಆಗುತ್ತಿರಲಿಲ್ಲ… ಆ ಉರಿ ನನ್ನಿಂದ ಆ ಮಾತುಗಳನ್ನು ಆಡಿಸಿದ್ದವು. 

ಕನಸಿನ ಹುಡುಗ ಕೋಣೆಯ ತುಂಬಾ ಶತಪಥ ತಿರುಗುತ್ತಿದ್ದ. 

***  

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ

ಊರಿನಲ್ಲಿಯೂ ಅಮ್ಮನಿಗೆ ವಸು ಚಿಕ್ಕಿಯ ಕಂಡರೆ ಆಗುತ್ತಿರಲಿಲ್ಲ. ಮದುವೆಯೇ ಆಗದೆ ಹಾಗೆ ಉಳಿದುಬಿಟ್ಟ ವಸು ಚಿಕ್ಕಿಯನ್ನು ಅಮ್ಮ ಗೋಳು ಹೊಯ್ದುಕೊಳ್ಳುತ್ತಿದ್ದಳು. ಅಪ್ಪನಿಲ್ಲದೆ ಇರುವಾಗ ‘ಇವಳೊಂದು ಗೊಡ್ಡೆಮ್ಮೆ’ ಎಂದು ಆಡಿಕೊಳ್ಳುತ್ತಿದ್ದುದನ್ನು ಕೇಳಿದ್ದ ನಾನು ಅಪ್ಪನಿದ್ದಾಗ ‘ಚಿಕ್ಕಿ ಗೊಡ್ಡೆಮ್ಮೆ, ಗೊಡ್ಡೆಮ್ಮೆ ಚಿಕ್ಕಿ’ ಎಂದು ಅವಳನ್ನು ಅಣಕಿಸುವಾಗ ಹಿಂದೆ ನಿಂತಿದ್ದ ಅಪ್ಪ ಮೊದಲಬಾರಿಗೆ ನನ್ನ ಕೆನ್ನೆಗೆ ಬಿಗಿದಿದ್ದರು. ಅವರು ಬಿಗಿದ ಏಟಿಗೆ ನನಗೆ ತಲೆಸುತ್ತು ಬರುವುದೊಂದು ಬಾಕಿ. ಅಪ್ಪನ ಎರಡನೇ ಸಂಬಂಧದ ಸಲುವಾಗಿ ರಸಿಕಸಿ ಮಾಡುತ್ತಿದ್ದ ಅಮ್ಮ ಅಂದು ನನ್ನ ಸಹಾಯಕ್ಕೆ ಬಂದಿರಲಿಲ್ಲ… 

ಅದೇ ಅಮ್ಮ ಅಂದು ರಾತ್ರಿ ವಸು ಚಿಕ್ಕಮ್ಮನ್ನ ಉಸ್ ಅನಿಸಬೇಡವೇ ಆ ಕನ್ಯೆಯ ಶಾಪ ನಮ್ಮ ಮನೆಗೆ ಒಳ್ಳೇದು ಮಾಡೋದಿಲ್ಲ. ಕಡೆಗೆ ಅಮ್ಮ ಅಪ್ಪ ಸತ್ತು ವಸು ಚಿಕ್ಕಮ್ಮ ನಮ್ಮ ಜೊತೆಗೆ ಇದ್ದುಬಿಟ್ಟರು ನನಗೆ ಅವಳ ಮೇಲೆ ಅಂತ ಅಕ್ಕರೆಯೇನು ಇರಲಿಲ್ಲ.  ತಾಯಿಯ ಸೆಡವು, ತಾಯಿಯ ಹೊಟ್ಟೆಕಿಚ್ಚು ಕಲ್ಲನ್ನು ಭಸ್ಮ ಮಾಡಿಬಿಡುತ್ತದೆನೋ…ವಸುಧ ಚಿಕ್ಕಿ ನನ್ನ ಅಜ್ಜನಿಗೆ ಅನಾಥಾಲಯದಲ್ಲಿ ಸಿಕ್ಕ ಮಗು. ಅವಳನ್ನು ಮನೆಗೆ ತಂದು ಮನೆಗೆಲಸಾಕ್ಕಾಗಿ ಉಳಿಸಿಕೊಂಡುಬಿಟ್ಟದ್ದಕ್ಕೆ ಅವಳಿಗೆ ಬೇಸರ ಇಲ್ಲವಾದರೂ ಅನಾಥಾಲಯದಲ್ಲಿದ್ದರೆ ಇಲ್ಲಿಂದಕ್ಕಿಂತ ಜೋರು ಜೀವನ ಸಿಗುತ್ತಿತ್ತೇನೋ ಎನ್ನುವ ಕನಸು ಅವಳ ಕಡೆಯಿಂದ ಮುಳ್ಳಿನ ಮಾತಾಡಿಸುತ್ತವೆ. ವಸು ಚಿಕ್ಕಿ ಓಡಿಹೋಗಬಹುದಿತ್ತು. ಆದರೆ ವಸು ಚಿಕ್ಕಿ ಹೋಗಲಿಲ್ಲ. ಮನೆಯಲ್ಲೇ ಚಾಕರಿ ಮಾಡಿಕೊಂಡು ಅಮ್ಮನ ಸಹಾಯಕಿಯಾಗಿಯೇ ಉಳಿದು ನಮ್ಮ ಮನೆಗೂ ಬಂದು ನನ್ನ ಮಕ್ಕಳಿಗೂ ಹತ್ತಿರವಾಗಿಬಿಟ್ಟಳು! ಅಮ್ಮನಿಗೆ ವಸು ಚಿಕ್ಕಿ ಮತ್ತು ನನ್ನಪ್ಪನಿಗೆ ಸಂಬಂಧವಿದೆ ಎನ್ನುವ ಸಂಶಯವಿದ್ದದ್ದರಿಂದ ಅವಳು ಒಂದಷ್ಟು ಕಾಲ ಚಿಕ್ಕಿಯನ್ನು ಸೊಸೆಯ ತರ ನಡೆಸಿಕೊಂಡಳು. ಕಡೆಗೆ ಅಪ್ಪ ಸತ್ತು ಅಮ್ಮ ಹಾಸಿಗೆ ಹಿಡಿದಾಗ ಚಿಕ್ಕಿಯೇ ಅಮ್ಮನನ್ನು ತೊಳೆದು ಬಳಿದು ಮಾಡಿದ್ದಳು. ಅಮ್ಮ ಸಾಯುವ ಮುಂಚೆ ‘ಏನೇ ಆಗಿರಲೇ ಭಾಗಿ. ಇದೊಂದು ಜೀವ ಎಲ್ಲರ ಚಾಕರಿ ಮಾಡಿದೆ. ಇವಳನ್ನು ಕೈಬಿಡಬೇಡವೇ! ಇವಳನ್ನು ಉಸ್ ಅನಿಸಬೇಡ.’ ಎಂದು ನನ್ನ ಕೈಹಿಡಿಯುವಾಗ, ಕಣ್ಣೀರು ಕಪಾಳಕ್ಕೆ ಸುರಿಯುವಾಗ ಚಿಕ್ಕಿಯ ಕಣ್ಣಲ್ಲೂ ನೀರು ತುಂಬಿಕೊಂಡು ಅಮ್ಮನ ಹಣೆಯನ್ನು ನೇವರಿಸುತ್ತಿದ್ದಳು. ಚಿಕ್ಕಿಯ ಕಣ್ಣುಗಳಲ್ಲಿ ಅದ್ಯಾವ ಭಾವವಿತ್ತು. ತಾನು ಅನಾಥಳಾಗಿಬಿಡುತ್ತೇನೆ ಅನ್ನುವ ಭಾವವಿತ್ತೆ? ಮುಂದಿನ ದಿನಗಳ ಅನಿಶ್ಚಿತತೆ ಇತ್ತೇ? 

*** 

ಚಿಕ್ಕಿಗೆ ಅದೇನೋ ಪುರಾಣದ ಕಥೆಗಳ ಮೇಲೆ ಇನ್ನಿಲ್ಲದ ಮೋಹ. ನಮ್ಮ ಹೊಸ ಮನೆಗೆ ಬಂದ ಮೇಲೆ ಅವಳ ಒತ್ತಾಯದಿಂದಲೇ ಕೃಷ್ಣ ಅರ್ಜುನನ ಸಾರಥಿಯಾಗಿ ಯುದ್ಧ ಮುನ್ನಡೆಸುವ ಚಿತ್ರವನ್ನು ಬಾಗಿಲ ಮೇಲೆ ಕೆತ್ತಿಸಿದ್ದೆವು. ಪ್ರತಿ ಬಾರಿ ಹೊರಗಿನಿಂದ ಮನೆಯೊಳಗಡೆ ಪ್ರವೇಶಿಸುವಾಗ ಮತ್ತು ಹೊರಗಡೆ ಹೋಗುವಾಗ ಅದಕ್ಕೊಂದು ನಮಸ್ಕಾರ ಹಾಕುತ್ತಿದ್ದಳು. ಭೂಮಿಯ ಕಾರಣಕ್ಕೆ ನಾವೆಲ್ಲೆ ಹೋದರೂ ಚಿಕ್ಕಿಯ ಉಪಸ್ಥಿತಿ ಬೇಕೇಬೇಕಾಗುತ್ತಿದ್ದರಿಂದ ಒಮ್ಮೆ ಬೆಂಗಳೂರಿನ 1 ಶಾಂತಿ ರೋಡ್ ನಲ್ಲಿನ ಆರ್ಟ್ ಗ್ಯಾಲರಿಗೆ ಚಿತ್ರಕಲಾಪ್ರದರ್ಶನಕ್ಕೆ ಎಂದು ಕರೆದುಕೊಂಡು ಹೋಗಿದ್ದಾಗ ಮಹಾಭಾರತದ ಭೀಷ್ಮ ಪ್ರತಿಜ್ಞೆ ಮಾಡುತ್ತಿರುವ ಅಮೂರ್ತವಾದ ಪೇಂಟಿಂಗ್ ಒಂದನ್ನು ಐವತ್ತು ಸಾವಿರ ಕೊಟ್ಟು ಮನೆಗೆ ತರಬೇಕಾಯಿತು. ಚಿಕ್ಕಿ ಮತ್ತವಳ ನಿರುಪದ್ರವಿ ಬೇಡಿಕೆಗಳು ನನಗೆ ಒಮ್ಮೊಮ್ಮೆ ಮುದ್ದು ಮುದ್ದೆನಿಸುತ್ತಿದ್ದವಾದರೂ ಸೆಕ್ಯೂಲರ್ ಗಳ ಮನೆಯ ತುಂಬಾ ಇಂತ ಪೇಂಟಿಂಗ್ ಇರುವುದು ಅದೇಕೋ ಇರುಸುಮುರುಸಾಗಿ ಕಡೆಗೆ ಭೂಮಿಯ ಕೋಣೆಯ ಮೇಲೆ ಪ್ರತಿಷ್ಠಪಿತವಾಗಿತ್ತು…

***

ಇದೆ ನಡುವೆ ನನ್ನ ಮತ್ತು ಪ್ರಸಾದನ ನಡುವೆ ಮೌನ ಕಡಿಮೆಯಾಗಿ ಮತ್ತೊಂದು ಚಿಗುರು ಕುಡಿಯೊಡೆದಿತ್ತು. ಆದರೆ ನನ್ನ ಪಾಲಿನ ಬದುಕು ನನ್ನ ಜೀವನದಲ್ಲಿ ಮತ್ತೊಂದು ಸಿಡಿಲನ್ನು ಎಸೆದಿತ್ತು. ಎರಡನೇ ಮಗುವಿನದು ಅದೇ ಸ್ಥಿತಿ ಇತ್ತು. ಇಂಟೆರ್ ಸೆಕ್ಸ್ ಕಿಡ್. ಇದಕ್ಕೂ ಅದರ ಜೆನಿಟಿಲಿಯ ಸರಿಯಾಗಿ ಬೆಳೆದಿರಲಿಲ್ಲ. ಡಾಕ್ಟರ್ ಯಥಾವತ್ತಾಗಿ ಹುಡುಗಿ ಮಾಡುವುದೇ ಸುಲಭ ಎಂದರು. ಪ್ರಸಾದ್ ‘ಬೇಡ ಬೇಡ. ನಮಗೆ ಗಂಡು ಮಗು ಬೇಕು. ಶಿಶ್ನವನ್ನೇ ಉಳಿಸೋ ಹಾಗೆ ಸರ್ಜರಿ ಮಾಡಿ ಎಂದ.’. ಡಾಕ್ಟರ್ ಫಾರಮ್ಮಿಗೆ ಸಹಿ ಹಾಕಿಸಿಕೊಂಡು ಆರು ತಿಂಗಳಾದ ಮೇಲೆ ಸರ್ಜರಿ ಮಾಡಿದರು. ಹಾಗೆ ನಮಗೆ ಮಗ ಹುಟ್ಟಿದ. ಮುಗಿಲು ಎಂದು ಹೆಸರಿಟ್ಟೆವು. ನಮ್ಮ ಪಾಲಿನ ಭಾಗ್ಯವೂ ಬದಲಾಯಿತು. ಮನೆ ಕಟ್ಟಿದೆವು. ಮುಗಿಲು ಭೂಮಿಯ ಕೋಣೆಯ ಪೇಂಟಿಂಗನ್ನು ತನ್ನ ಕೋಣೆಗೆ ವರ್ಗಾಯಿಸಿಕೊಂಡ…

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೀರ್ಪುಗಾರರ ಟಿಪ್ಪಣಿ: ಸಾಮಾಜಿಕ ಪ್ರಸ್ತುತತೆಯೇ ಜೀವಾಳವಾಗಿರುವ ಕತೆಗಳು

ಮುಗಿಲು ಬೆಳೆಯುವುದಕ್ಕೆ ಅಷ್ಟೇನೂ ತೊಂದರೆಯಾಗಲಿಲ್ಲ. ಆದರೆ ಅವನೊಂದು ದಿನ ಬಂದು ‘ಐ ಡೋಂಟ್ ವಾಂಟ್ ಟು ಗೆಟ್ ಮ್ಯಾರೀಡ್’ ಎಂದು ಘೋಷಿಸಿದ. ಪ್ರಸಾದ್ ನನ್ನ ಕಡೆ ನೋಡಿದ್ದರು. ಎಲ್ಲದಕ್ಕೂ ನನ್ನ ಕಡೆ ನೋಡಿದರೆ ನಾನೇನು ಮಾಡಲಿ? ಭೂಮಿಯನ್ನು ಕೇಳಿನೋಡಿದೆ. ಅವಳಿಂದಲೂ ಏನೂ ಉತ್ತರ ಬರಲಿಲ್ಲ. ಕಡೆಗೆ ಇವನ ಇನ್ಸ್ಟಾ ಬಯೋದಲ್ಲಿ ‘ರೈನ್ಬೋ ರಾಗ’ ಎಂದು ಬರೆದು ಅದರ ಪಕ್ಕ ಮಳೆಬಿಲ್ಲಿನ ಎಮೋಜಿ ಹಾಕಿಕೊಂಡಿದ್ದ. ಸಾಯ್ಲಿ, ನಮ್ಮ ಮನೇಲಿ ಇದೂ ಒಂದು ಬೇಕಿತ್ತು ಎಂದು ಕಿರಿಕಿರಿಯಾಗಿತ್ತು. ಹೀಗಂದುಕೊಳ್ಳುವಾಗಲೇ ಕೋಣೆಯಲ್ಲಿ ತಿರುಗುತ್ತಿದ್ದ ಕೂಸು ಎಡವಿಬಿತ್ತು. ನಾನು ಓಡಿ ಹೋಗಿ ಎತ್ತುವಲ್ಲಿ ಅಲ್ಲಿಂದ ಅದು ಮಾಯವಾಗಿತ್ತು. 

***

ಮುಗಿಲಿನ ಮದುವೆ ತಯಾರಿ ಮಾಡೋಣ ಎಂದಾಗ ಅವನು ಒಲ್ಲೆನೆಂದ. ಭೂಮಿಯ ಬರ್ತ್ಡೇ ಪಾರ್ಟಿ ಇಟ್ಟುಕೊಂಡಿದ್ದೆವು. ನಮ್ಮ ಆಪ್ತೆಷ್ಟರನ್ನಷ್ಟೇ ಕರೆದಿದ್ದವು. ಮುಗಿಲು ಮನೆಬಿಟ್ಟು ಹೋಗಿ ಒಂದು ವಾರವಾಗಿತ್ತು. ನಮ್ಮ ಫೋನಿಗೆ ಸಿಗುತ್ತಿರಲಿಲ್ಲ. ಪ್ರಸಾದ್ ನ ಒಂದು ಪೊಲಿಟಿಕಲ್ ಮೂವ್ ಗೆ ಮನೆಗೆ ಅತಿಥಿಗಳನ್ನು ಕರೆಯುವುದಕ್ಕೆ ಒಂದು ನೆಪ ಬೇಕಿತ್ತು. ಭೂಮಿಯ ಬರ್ತ್ಡೇ ಸಹಾಯಕ್ಕೆ ಬಂದಿತ್ತು.ಅದಕ್ಕೆ ಇಬ್ಬರೂ ಮಕ್ಕಳಿಗೆ ಸರ್ಜರಿ ಮಾಡಿದ್ದ ಡಾಕ್ಟರ್ ಕೂಡ ಪ್ರೀತಿಯಿಂದ ಬಂದಿದ್ದರು. ಭೂಮಿ ಎಂದಿನಂತೆ ಅವಳ ಟಾಮ್ ಬಾಯ್ ದಿರಿಸನಲ್ಲೆ ಕೇಕ್ ಕಟ್ ಮಾಡಿದ್ದಳು. ಡಾಕ್ಟರ್ ಸುಮ್ಮನೆ ಇರಲಾರದೆ ‘ನಿಮ್ಮ ತಮ್ಮ ಅಂತೂ ಮದ್ವೆ ಬೇಡ ಅಂತಿದಾನೆ. ನಿಮ್ಮಪ್ಪ ತುಂಬಾ ಟೆನ್ಶನ್ ಮಾಡಿಕೊಂಡಿದ್ದಾರೆ. ನೀನಾದ್ರೂ ಮದ್ವೆ ಗಿದ್ವೆ ಮಾಡಿಕೊಳ್ತೀಯಾ ಹೇಗೆ?!’ ಎಂದು ಕೇಳಿದ್ದೆ ತಡ ಅವರನ್ನು ಕೂರಿಸಿಕೊಂಡು, ನನ್ನನ್ನೂ ಕರೆದು ‘ನನ್ನ ತಮ್ಮನನ್ನು ಹುಡುಗನಾಗಿ ಮಾಡಿದಿರಿ. ನನ್ಯಾಕೆ ಹುಡುಗಿ ಮಾಡಿದ್ರಿ? ಐ ಫೀಲ್ ಅಯಾಮ್ ಅ ಬಾಯ್…’ ಎಂದು ಅಳುತ್ತಾ ಕೇಳಿದ್ದಳು. ಅದಕ್ಕೆ ನಮ್ಮ ಬಳಿ ಉತ್ತರ ಇರಲಿಲ್ಲ. ಮುಗಿಲು ನಡೆದಿದ್ದ. ಈಗ ಇವಳು ಈ ರೀತಿ ಹೇಳುತ್ತಿದ್ದಾಳೆ. ನನಗೊಂದು ರೀತಿಯ ಭಯ. ಪ್ರಸಾದ್ ಗೆ ಒಂದು ರೀತಿಯ ಭಯ…

ಇಂಟೆರ್ ಸೆಕ್ಸ್ ಮಕ್ಕಳನ್ನು ಹುಟ್ಟಿದ ಮೇಲೆ ಅವರ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾ ಬೇಡವಾ ಎನ್ನುವ ಚರ್ಚೆಗಳು ವೈದ್ಯಕೀಯ ವಲಯದಲ್ಲಿ ನಡೆಯುತ್ತಿರಬೇಕಾದರೆ ನಮಗೆ ತೋಚಿದ್ದನ್ನು ಮಾಡಿದ್ದೇವೆ. ಈಗ ಮಕ್ಕಳು ಇದಕ್ಕೆ ಪೂರ್ತಿ ಹೊಣೆಗಾರರನ್ನಾಗಿ ಮಾಡಿ ‘ವಿ ಹೇಟ್ ಯೂ… ವಿ ಆರ್ ನಾಟ್ ಜಸ್ಟ್ ಪಪೆಟ್ಸ್!’ ಎಂದು ಕಣ್ಣೀರು ಹಾಕುತ್ತಾ ಕುಳಿತರೆ ಏನು ಮಾಡುವುದು? ಯಾರ ಕಣ್ಣೀರಿಗೆ ಇಲ್ಲಿ ಹೆಚ್ಚು ಬೆಲೆಯಿದೆ? ಎಲ್ಲರೂ ಏನನ್ನು ಹುಡುಕುತ್ತಿದ್ದೇವೆ? 

ನಾವೆಷ್ಟೇ ನಿಭಾಯಿಸಿದ್ದೇವೆ ಎನಿಸಿದರೂ ನೋಡಿಲ್ಲಿ ನೀನು ಇದನ್ನ ಹೇಗೆ ನಿಭಾಯಿಸುತ್ತಿ ಎಂದು ಹೊಸ ಪ್ರಶ್ನೆಪತ್ರಿಕೆಯನ್ನು ನಮ್ಮೆಡೆಗೆ ಎಸೆದರೆ?! ನನಗೆ ಮತ್ತೆ ಭಯ… ನಿದ್ದೆಯಿಲ್ಲದ ರಾತ್ರಿಗಳು. ಕನವರಿಕೆಗಳು. ಮಕ್ಕಳದೇ ಚಿಂತೆ.. 

ಪ್ರತಿದಿನ ಸಂಜೆ ತಾರಸಿಯ ಮೇಲೆ ಬಸವಳಿದು ನಿಂತಾಗ ಎಡಕ್ಕೆ ನಿಂತ ತೆಂಗಿನ ಗರಿಗಳ ಮಿಸುಕಾಟ ಆತ್ಮಸಂಗಾತಿಯ ಪಿಸುಗುಡುವಿಕೆಯಂತೆ ಕೇಳಿಸುತ್ತದೆ. ತಲೆಯೆತ್ತಿ ನೋಡಿದರೆ ಮುಗಿಲು ಚೂರು ಕೆಳಗಿಳಿದು ತನ್ನ ಕೈಬೆರಳುಗಳಿಂದ ಮಾಂತ್ರಿಕವಾಗಿ ಸ್ಪರ್ಶಿಸಿದ ಹಾಗೆ ಭಾಸವಾಗುತ್ತದೆ. ಸುತ್ತ ಸುಳಿವ ಗಾಳಿಯು ಅದೆಷ್ಟೇ ದೀರ್ಘ ಉಸಿರಾದರೂ ಬೇಸರಿಸಿಕೊಳ್ಳದೆ ಒಳಗಿಳಿದು ಊಟ ಮಾಡಿಸಿ ಡಬ್ಬಿಗೂ ತುಂಬುವ ತಾಯಿಯಂತೆ ತಂಗಾಳಿಯೊಂದು ಬೆಚ್ಚಗೆ ಮೈಸವರುತ್ತದೆ. ತಾರಸಿಯ ಹೊದಿಕೆಯ ಮೇಲೆ ಗುಟುರು ಹಾಕುವ ಪಾರಿವಾಳಗಳು ಚಿಕ್ಕಪುಟ್ಟ ಹೆಜ್ಜೆ ಹಾಕುತ್ತಾ ಹತ್ತಿರ ಬಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿ ರೆಕ್ಕೆ ಬಿಚ್ಚಿ ಹಾರಿ ಹೋಗುತ್ತವೆ. ಅದೆಲ್ಲಿಂದಲೋ ಹುಡುಕಿಕೊಂಡು ಓಡಿ ಬರುವ ಬೆಕ್ಕು ಕಾಲು ಸವರುತ್ತಾ ತಲೆಯೆತ್ತಿ ಮಿಯಾವ್ ಎಂದು ಗೋಗರೆಯುತ್ತದೆ. ಒಂದಿಷ್ಟು ಅರೆಘಳಿಗೆ ಇವೆಲ್ಲದರಲಿ ಕಳೆದು ಹೋದಾಗ ಉರಿವ ಸೂರ್ಯ ಅಸ್ತoಗತನಾಗಿ ಚಂದ್ರ ಹುಟ್ಟುತ್ತಾನೆ. ಜೀವದುಸಿರಿನ ಲಯ ವಿಶ್ವಶಕ್ತಿಯ ಲಯದ ಜೊತೆ ಮಾತಿಗೆ ಕೂತ ಹೊತ್ತು… ಒಳಗೆ ದಿವ್ಯ ಪ್ರಭೆಯೊಂದು ಹುಟ್ಟುತ್ತದೆ. ಕಾಯುತ್ತದೆ. ನಾಳೆ ಹೊಸ ಹಾದಿ. ನಾಳೆ ಹೊಸ ಹಾಡು. ಕನಸು ಕಟ್ಟುತ್ತದೆ ಜೀವ. ನಾನು ಒಳ್ಳೆಯ ತಾಯಿಯಾಗುತ್ತೇನೆಯೇ? ಕನಸು ಕಟ್ಟುತ್ತದೆ ಜೀವ. ಹಾಗಾಗುವುದಕ್ಕೆ ಏನು ಮಾಡಬೇಕು? ಇದೆಲ್ಲಾ ಕನಸಿನಲ್ಲಿ ಬರುವ ಹುಡುಗ ಸೃಷ್ಟಿಸುವ ಗಾಳಿ ಚಿತ್ರ ಮಾತ್ರವೇ? ಮಕ್ಕಳ ಪರವಾಗಿ ನಿಂತರೆ ನಾನು ಒಳ್ಳೆಯ ತಾಯಿಯಾಗುತ್ತೇನೆಯೇ?! 

ರಾತ್ರಿಯ ಹೊತ್ತು ಕಣ್ಣಾಲಿಗಳನ್ನು ತುಂಬಿಕೊಂಡು ಮಗನ ಓದುವ ಟೇಬಲ್ಲಿನಲ್ಲಿ ಕೂತು ಅವನದೇ ಡೈರಿಯನ್ನು ತಡಕಿದೆ.

 ‘ನೀವು ಡಾಕ್ಟರ್ ಸೇರಿಕೊಂಡು ನನ್ನ ಪರವಾಗಿ ನಾನೇನಾಗಬೇಕೆನ್ನುವ ನಿರ್ಧಾರ ತೆಗೆದುಕೊಂಡಿರಿ. ಈ ನಡುವೆ ನಮ್ಮ ಒಂದು ಮಾತನ್ನೂ ಕೇಳಲಿಲ್ಲ. ಯಾಕಮ್ಮ? ನಮಗೇನಾಗಬೇಕು ಎಂದು ನಾನು ನಿರ್ಧರಿಸುವುದು ನಮಗೆ ಹಕ್ಕಿಲ್ಲವಾ? ನನ್ನ ಜೆನಿಟಿಲಿಯಾದ ಒಂದೇ ಕಾರಣಕ್ಕೆ ನೀನು ನನ್ನ ಗಂಡಾಗಿ ಸರ್ಜರಿ ಮಾಡಿಸಿದ್ದಿ? ಅಯಾಮ್ ನಾಟ್ ಯುವರ್ ಪೊಲಿಟಿಕಲ್ ಪಪೆಟ್. ಐ ಹೇಟ್ ಯು!’  ಎಂದು ಬರೆದಿತ್ತು. ಕೂಗಿ ಹೇಳಿದ್ದರೆ ಸ್ವಲ್ಪ ಹೊತ್ತು ಗಾಳಿಯಲ್ಲಿ ತೇಲಿ ದಿನಕಳೆದಂತೆ ಮರೆತುಹೋಗಬಹುದು… ಹೀಗೆ ಬರೆದಿಟ್ಟು ಹೋದರೆ ಗಾಯವೆಂತು ಮಾಯುವುದು?!  ದೊಡ್ಡ ಮನೆ. ಅಗಾಧ ಮೌನ. ನಮ್ಮ ಮಾತು, ಉಚ್ವಾಸ ನಿಶ್ವಾಸಗಳು ಮಾರ್ದನಿಸುತ್ತವೆ. ಒಬ್ಬ ತಾಯಿಗೆ ‘ಐ ಹೇಟ್ ಯು.’ ಎಂದು ತನ್ನದೇ ಕೂಸಿನಿಂದ ಕೇಳಿಸಿಕೊಳ್ಳುವುದು ಅದೆಷ್ಟು ಹಿಂಸೆ ಎನ್ನುವುದು ತಾಯಂದಿರಿಗಷ್ಟೇ ಅರ್ಥವಾಗುವ ವಿಷಯ… 

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ‌ ಚಂದ್ರಶೇಖರ್

ತಡಕಿ ಅಲ್ಲಿಯೇ ಸ್ಟ್ಯಾಂಡಿನಲ್ಲಿದ್ದ ಪೆನ್ನನ್ನು ಕೈಗೆತ್ತಿಕೊಂಡು ಕೊನೆಯ ಪುಟದಲ್ಲಿ ನಾನು ಬರೆಯತೊಡಗಿದೆ. 

‘ನನ್ನ ಹೆಸರೂ ಭಾಗೀರಥಿಯೇ.. ನನಗೆ ಒಬ್ಬನೇ ಮಗ ಭಾಗೀರಥಿ. ನಿನ್ನಂತೆ ನಿನ್ನ ತಟದಲ್ಲಿ ಪ್ರಮಾಣಗೈಯುವ ಪ್ರತಿಯೊಬ್ಬರನ್ನೂ ಮಕ್ಕಳೆಂದು ತಿಳಿಯಲಾರೆ. ಅದಕ್ಕೆ ನನ್ನ ಮಗ ನಾನು ಮದುವೆಯನ್ನೇ ಆಗುವುದಿಲ್ಲ ಎಂದಾಗ ತಡೆಯದೇ ಇರಲಾಗಲಿಲ್ಲ.’ 

ಇಷ್ಟು ಬರೆದು ಕಣ್ಣೆತ್ತಿ ನೋಡಿದೆ. ಅಲ್ಲೇ ಗೋಡೆಯಲ್ಲಿದ್ದ ಚಿತ್ರ ಕಲಾಕೃತಿಯಲ್ಲಿ ಭೀಷ್ಮ ಪ್ರತಿಜ್ಞೆಗೈಯುತ್ತಿದ್ದ. ಭಾಗೀರಥಿ ತಣ್ಣಗೆ ಹರಿಯುತ್ತಿದ್ದಳು. ಕಣ್ಣೀರು ನಾನು ಬರೆದ ಆ ಸಾಲುಗಳ ಮೇಲೆ ಬಿತ್ತು… ನನ್ನ ಭುಜದ ಮೇಲೆ ಮೆತ್ತಗೆ ಅಮುಕಿದ ಬಿಸುಪನ್ನು ಅನುಭವಿಸಿ ಹಿಂತಿರಿಗೆ ನೋಡಿದೆ. ಚಿಕ್ಕಿ ನಿಂತಿದ್ದಳು. ಅವಳ ಕಣ್ಣಲ್ಲೂ ನೀರಿದ್ದವು… ಅವಳ ಕೈಗಳು ನನ್ನ ಕಣ್ಣೀರನ್ನು ಒರೆಸಿದವು. ಪಕ್ಕಕ್ಕೆ ಚೇರ್ ಎಳೆದು ಕುಳಿತು ಬೆನ್ನ ನೇವರಿಸಿದವು. ‘ಯಾಕಳ್ತಿಯೇ ಭಾಗಿ… ಅಂದವರು ನಮ್ಮ ಮಕ್ಕಳಲ್ಲವೇನೇ?! ಎಲ್ಲಾ ಸರಿ ಹೋಗತ್ತೆ. ನೀನಳಬೇಡ.’ ಎಂದು ಸಮಾಧಾನಿಸಿದಳು. ನಾನು ನನ್ನ ಥೆರಪಿಸ್ಟ್ ಸುಮಾಗೆ ಕರೆ ಮಾಡಿ ಸ್ಪೀಕರಿನಲ್ಲಿ ಹಾಕಿಟ್ಟು ಅವಳು ಕರೆ ಎತ್ತುವುದನ್ನೇ ಕಾಯುತ್ತಾ ಕುಳಿತೆ. ಕೋಣೆಯ ಬಾಗಿಲನ್ನು ಮೆಲ್ಲಗೆ ತಳ್ಳಿ ಸೀದಾ ಕನ್ನಡಿಯ ಮುಂದೆ ಹೋಗಿ ಕನಸಿನಲ್ಲಿ ಕಾಣಿಸಿದ ಹುಡುಗ ತನ್ನ ಕೈಗೋಲನ್ನು ಹಿಡಿದು ಚಿತ್ರ ಸೃಷ್ಟಿಸುತ್ತಾ ಕುಳಿತ. ಹಾಗೆ ಕುಳಿತವನೇ ಮೊದಲ ಬಾರಿಗೆ ನನ್ನತ್ತ ತಿರುಗಿ ಕೋಪದಿಂದ ಕೆಂಡಗಣ್ಣುಗಳನ್ನು ಮಾಡಿಕೊಂಡು ಜೋರಾಗಿ ಬಾಯಿತೆರೆಯಲು ಶುರುಮಾಡಿದ. ಅದೆಷ್ಟು ದೊಡ್ಡ ಬಾಯಿಯೆಂದರೆ ನನ್ನನ್ನೇ ನುಂಗಿಬಿಡುವಷ್ಟು… ನನಗೆ ಭಯ. ಇದೆಲ್ಲಿ ನನ್ನನ್ನು ಆಪೋಶನ ತೆಗೆದುಕೊಂಡುಬಿಡುವುದೋ ಎಂದು! ನಾನೇನು ಹೇಳುವುದನ್ನು ಮಿಸ್ ಮಾಡಿಕೊಂಡೆ?! ನನಗಾಗ ದೈತ್ಯಾಕಾರದಲ್ಲಿ ಬಾಯಿ ತೆರೆದ ಆ ಪುಟ್ಟ ಹುಡುಗ ಬ್ರಹ್ಮಾoಡವನ್ನೇ ತೋರಿಸಿದ ಕೃಷ್ಣನ ಹಾಗೆ ಕಾಣಿಸಿದ. ಅವನನ್ನು ಕರೆಯಲು ಒಳಗಿನಿಂದ ಒಂದು ಧ್ವನಿ ಕಿತ್ತು ಬರುತ್ತಿತ್ತು. ಸುಮಾ ಕರೆ ಎತ್ತಿದಳು.. ‘ಮಿಸಸ್ ಭಾಗೀರಥಿ. ಏನಾಯ್ತು?’ ಎಂದು ಕೂಗುತ್ತಿದ್ದಾಳೆ. ವಸು ಚಿಕ್ಕಿ ‘ಉಸಿರು ತಗೋ ಭಾಗಿ.’ ಎಂದು ಗಾಳಿ ಹಾಕುತ್ತಿದ್ದಾಳೆ. ಇನ್ನೇನು ಅವನು ನುಂಗಬೇಕು ಎನ್ನುವಲ್ಲಿ ನಾನು ಅಳುತ್ತಾ ಕೈಮುಗಿದು ‘ಮುಗಿಲುsss’ ಎಂದು ಕೂಗಿದೆ. ಕತ್ತಲು ಆವರಿಸಿತು. ಅದಷ್ಟೇ ನೆನಪು… 

ಇದಾದ ಮೇಲೆ ಆಸ್ಪತ್ರೆಯಲ್ಲಿ ಒಂದು ವಾರವಿದ್ದೆ. ಮನೆಗೆ ಬಂದ ಮೇಲೆ ನಾನೇನನ್ನೋ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನಿಸುತ್ತಿರುತ್ತದೆ. ಮತ್ತೆ ಎಂದಾದರೂ ಆ ಹುಡುಗ ನನ್ನ ಕನಸಿನಲ್ಲಿ ಸುಳಿದು ಅಲ್ಲಿಂದ ಮತ್ತೆ ಎದ್ದು ಬಂದು ಕನ್ನಡಿಯ ಮುಂದೆ ಕೂರುತ್ತದೇನೋ ಎಂಬ ಭಯಮಿಶ್ರಿತ ನಿಗೂಢ ಆಸೆ ಹುಟ್ಟಿ ಮಾಯವಾಗುತ್ತದೆ. 

Exit mobile version