Site icon Vistara News

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಪ್ರೀತಿ ಇಲ್ಲದ ಮೇಲೆ…

preeti illada mele short story

:: ಶರತ್‌ ಭಟ್‌ ಸೇರಾಜೆ

ನಾನೊಬ್ಬಳು ಸ್ಟಾಂಡ್ ಅಪ್ ಕಾಮಿಡಿಯನ್. ನನ್ನ ಹೆಸರು ತಾನ್ಯಾ. ನಂಗೆ ಹಾಗಂತ ಯಾರು ಹೆಸರಿಟ್ಟರೋ, ಯಾಕಾದರೂ ಇಟ್ಟರೋ? ಅಕ್ಕ ಸಾನ್ಯಾಳ ಹೆಸರಿನ ಜೊತೆ ಪ್ರಾಸ ಸರಿಹೋಗುತ್ತದೆ ಅಂತ ಯೋಚನೆ ಮಾಡಿ ಅಪ್ಪನೇ ಇಟ್ಟಿರಬೇಕು. ನನ್ನನ್ನು ಮುಗಿಸುವ ಸಂಚು ಮಾಡುತ್ತಿರುವ ಅಪ್ಪ! ಕಲ್ಲೆದೆಯ ಅಪ್ಪ. ನನ್ನ ಅಪ್ಪ! ವಿಖ್ಯಾತ ವಿಜ್ಞಾನಿ ಶಂತನು ಕಾಮತ್. ನನ್ನ ಸಮಸ್ಯೆ ಏನು ಅಂದ್ರೆ ನಂಗೆ ಮನಸ್ಸಿನ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳೋಕೆ ಬರೋದಿಲ್ಲ. ಆತಂಕವನ್ನು ಅವಿತಿಡುವ ವಿದ್ಯೆಯನ್ನು ನನಗೆ ಯಾವ ಗುರುವರ್ಯನೂ ಹೇಳಿಕೊಡಲಿಲ್ಲ, ನಾನೂ ಆ ವಿದ್ಯೆಯ ಉಸಾಬರಿಗೆ ಹೋಗಲಿಲ್ಲ. ಏನು ವಿಜ್ಞಾನಿಯಾದರೆ, ಯಾವ ಪ್ರಶಸ್ತಿ ಬಂದರೆ ಏನು ಪುರುಷಾರ್ಥ ಸಾಧಿಸಿದ ಹಾಗಾಯಿತು; ವಾತ್ಸಲ್ಯವೆಂಬುದೇ ಅಪ್ಪನಿಗೆ ಅಪರಿಚಿತ ಶಬ್ದವಾಗಿರುವಾಗ.

ಅಪ್ಪ ಕ್ರುದ್ಧ ಮುಖದ, ನಿರ್ದಯತೆ ತುಂಬಿದ ಕಣ್ಣುಗಳ, ಪೆಡಸು ಮಾತಿನ ಒರಟು ಜೀವಿಯಾಗಿದ್ದರೆ ನಾನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ವಿಷಯ ಹಾಗಿಲ್ಲ. ಬೇಕಾದಾಗ ಬೇಕಾದವರ ಪಾಲಿಗೆ ಅಪ್ಪ ಪ್ರೀತಿಯ ಊಟೆ, ಮುರುಡೇಶ್ವರದ ಕಡಲ ಕಿನಾರೆಯಲ್ಲಿ ಉಬುಕಿ ಬರುವ ತೆರೆಯ ಕಡೆಗೆ ಮಗುವಿನ ಜೊತೆ ಓಡಿ ನಲಿಯಬಲ್ಲ ಹಸುಳೆ ಮನಸ್ಸು ಅವನದು. ಬೇಕಾದರೆ ಅಕ್ಕ ಸಾನ್ಯಾಳ ಹತ್ತಿರ ಕೇಳಿ ನೋಡಿ.

ಅವಳು ಹೊನ್ನಾವರದಲ್ಲಿ ಕಳೆದ ಬಾಲ್ಯದ ನೆನಪುಗಳ ಉಯ್ಯಾಲೆಯನ್ನು ಜೀಕಿ ಜೀಕಿ ದಣಿಯುತ್ತಾಳೆ. ಅವಳು ಅತ್ತು ಕೂಗಿ ಹಠ ಮಾಡಿದಾಗ ವೀಣೆಯ ಝೇಂಕೃತಿಯಂಥ ದನಿಯಿಂದ ಅನುನಯದ ಮಾತಾಡಿದ್ದರ ಸಾವಿರ ಕಥೆಗಳನ್ನು ಹೇಳ್ತಾಳೆ. ನನ್ನ ಹತ್ತಿರ ಅಂಥ ಯಾವ ಕಥೆಗಳೂ ಇಲ್ಲ. ನನಗೆ ಅಪ್ಪ ಕಲಿಸಿದ್ದು ಅಲಂಕಾರದ ಭಾಷೆಯನ್ನು, ಹಾಸ್ಯವನ್ನು, ಸ್ಟಾಂಡ್ ಅಪ್ ಕಾಮಿಡಿಯನ್ನು. ಅವರ ಪಾಲಿಗೆ ನಾನೊಂದು ಜೋಕು ಸಿಡಿಸುವ ಯಂತ್ರ. “ಹೇಗೆ ತಯಾರು ಮಾಡಿದ್ದೀನಿ ನೋಡಿ ಇವಳನ್ನ” ಅಂಥ ನನ್ನ ಜೋಕುಗಳ ಯಶಸ್ಸನ್ನು ತಾನೇ ಕಸಿದುಕೊಂಡು ಟಿವಿಯಲ್ಲಿ ಮಿರ್ರನೆ ಮೆರೆಯುವುದಕ್ಕೆ ನಾನೊಂದು ಸಾಧನ ಮಾತ್ರ ಅವರಿಗೆ. “ಗೋಣಿಗಟ್ಟಲೆ ಮಾರ್ಕು ತೆಗೆದು ಸಾಯಿ, ತುಂಟಕೋತಿಗಳಿರುವ ಕ್ಲಾಸಿಗೆ ನೀನೇ ಫಷ್ಟು ಬಾ, ಭಾವಗೀತೆಯ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕಸಿದುಕೊಂಡು ಬಾ” ಅಂತೆಲ್ಲ ಪೀಡಿಸುವ ಅಪ್ಪ ಅಮ್ಮ ಲೋಕದಲ್ಲಿ ಇರುತ್ತಾರಂತೆ. ಜೋಕು ಹೇಳು, ಸ್ಟಾಂಡ್ ಅಪ್ ಕಾಮಿಡಿ ಮಾಡು ಅಂತ ಜೀವ ತಿನ್ನುವ ಅಪ್ಪ ಇವರು ಮಾತ್ರವೇಯೋ ಏನೋ.

ಅಕ್ಕ ಮೊದಲಿಂದಲೂ ತಾನೇ ಆಸೆಪಟ್ಟು ಕಾಮಿಡಿಯನ್ ಆದದ್ದೇ ನನ್ನ ಕರ್ಮ, ಈ ಕಾಮಿಡಿಯ ಬೇತಾಳ ನನ್ನ ಹೆಗಲಿಗೂ ಹತ್ತಿ ಕುಣಿಯುವುದಕ್ಕೆ ಶುರು ಮಾಡಿದ್ದು ಅಕ್ಕ ಹಾಸ್ಯದ ಕ್ಷೇತ್ರಕ್ಕೆ ಹೋದದ್ದರಿಂದಲೇ. ಸಾನ್ಯಾ ಎಷ್ಟಾದ್ರೂ ಹೆಸರಾಂತ ಹಾಸ್ಯಪಟು, ಈ ಕೆಲಸಕ್ಕೆ ಬಾರದ ಪ್ರಾಣಿಯೂ ಅಕ್ಕನ ಹಾಗೇ ಆಗಲಿ ಅಂದುಕೊಂಡಿರಬೇಕು ನಮ್ಮ ವಿಜ್ಞಾನಿ ಮಹಾಶಯ ಶಂತನು ಕಾಮತರು. ಹಾಗಾಗಿ ನನಗೂ ಈ ಹಾಸ್ಯದ ಸಿಂಹಾಸನ, ಬಲವಂತದ ಪಟ್ಟಾಭಿಷೇಕ!

ನನಗೆ ಅಕ್ಕನ ಹಾಗೆ ಆಗಲು ಇಷ್ಟ ಇದೆಯೇ ಅಂತ ಯಾರು ಕೇಳುತ್ತಾರೆ? ಅಷ್ಟು ಸೌಜನ್ಯ ಯಾರಿಗಾದರೂ ಇದ್ದರೆ ನಾನು ಇಷ್ಟೆಲ್ಲ ಯಾಕೆ ಮಾತಾಡುತ್ತಿದ್ದೆ. ನಿಜ ಹೇಳಬೇಕೆಂದರೆ ಇದರಲ್ಲಿ ನನ್ನದೂ ಚಿಟಿಕೆ ಉಪ್ಪಿನಷ್ಟು ತಪ್ಪಿದೆ, ನನಗೆ ಇಷ್ಟಗಳಿವೆ, ಆಕಾಂಕ್ಷೆಗಳು ಇವೆ ಅಂತಲೇ ನನಗೆ ಮೊದಮೊದಲು ಗೊತ್ತಾಗುತ್ತಿರಲಿಲ್ಲ, ನನಗೆ ಈ ಸ್ಟಾಂಡ್ ಅಪ್ಪು ಸಿಟ್ ಡೌನು ಎಲ್ಲ ಬೇಕಾಗಿಲ್ಲ ಅಂತ ಹೇಳಲು ಸಾಧ್ಯವಿದೆ ಅಂತಲೇ ನನಗೆ ಗೊತ್ತಿರಲಿಲ್ಲ. ಅದೆಲ್ಲ ನನ್ನ ತಲೆಗೆ ಹೋದದ್ದು ಇತ್ತೀಚೆಗೆ. ನನಗೆ ತಲೆ ಇದೆ ಅಂತಲೇ ನನ್ನ ಅಕ್ಕ ಅಂದುಕೊಂಡಿಲ್ಲ, ಆ ಮಾತು ಬೇರೆ. ಇನ್ನು ಅಪ್ಪನ ಬಗ್ಗೆಯಂತೂ ಹೇಳುವುದೇ ಬೇಡ ಬಿಡಿ.

ಸಾನ್ಯಾ ಸುಮ್ಮನೆ ಯಾವುದೋ ಅದೃಷ್ಟದ ಮುಂಜಾವಿನಲ್ಲಿ ಯಾರೋ ಮಾಯೆಯಿಂದ ಚಿಮುಕಿಸಿದ ಇಬ್ಬನಿಯಂತೆ ಬಂದ ಭಾಗ್ಯದಿಂದ ಇಷ್ಟೊಂದು ಹೆಸರು ಮಾಡಿದವಳೇನಲ್ಲ. ಅವಳೂ ಕಷ್ಟ ಪಟ್ಟಿದ್ದಳು, ಅವಳಂತೆ ಆಗಹೊರಟು ನಾನೂ ವಿಲಿವಿಲಿ ಒದ್ದಾಡಿದ್ದೆ. ಅದೊಂದು ಕಾಲದಲ್ಲಿ ವಾರಕ್ಕೆ ಎರಡು ಸಲ ಬಾರುಗಳಿಗೆ ಪಬ್ಬುಗಳಿಗೆ ಅಬ್ಬೇಪಾರಿಯಂತೆ ಹೋಗುತ್ತಿದ್ದವಳು ಅಕ್ಕ; ಹೋಗಿ ಒಂದು ತೊಟ್ಟೂ ಕುಡಿಯದೇ ಬರುತ್ತಿದ್ದವಳವಳು! ಅವಳದೇನಿದ್ದರೂ ಕಾಮಿಡಿಯ ನಶೆ. ಆ ಕಾಲದಲ್ಲಿ ಓಪನ್ ಮೈಕುಗಳು ಇರುತ್ತಿದ್ದದ್ದು ಅಂಥ ಬಾರುಗಳ ಮಂದಬೆಳಕಿನಲ್ಲಿ ಮಿಂದ, ಎಂಥವರನ್ನೂ ತಬ್ಬಿಬ್ಬಾಗಿಸುವ ವೇದಿಕೆಗಳಲ್ಲಿ.

‘ಓಪನ್ ಮೈಕಿಗೆ ಬಾರಿಗೆ ಹೋಗ್ತೇನೆ’ ಅಂದಾಗ, ಹಾಗಂದರೆ ಏನು ಅಂತಲೇ ಅಪ್ಪನಿಗೆ ಗೊತ್ತಿರಲಿಲ್ಲ. ಬಾರುಗಳಿಗೆ ಮಗಳು ಯಾಕೆ ಹೋಗುತ್ತಿದ್ದಾಳೆ ಅಂತ ಅಪ್ಪ ಕಕ್ಕಾಬಿಕ್ಕಿಯಾಗಿದ್ದರು. ಏನೇ ತಿಪ್ಪರಲಾಗ ಹಾಕಿದರೂ ಗೆಳೆಯರ ಜೊತೆ ಕುಡಿಯಲು ಕೂತವರನ್ನು ಜೋಕು ಹೇಳಿ ಒಲಿಸಿಕೊಳ್ಳುವುದು ಕಷ್ಟ ಅಂತ ಗೊತ್ತಿದ್ದರೂ, ಸಿಕ್ಕಿದ ವೇದಿಕೆಗಳನ್ನು ಬಿಡಲಿಕ್ಕೆ ಸಾನ್ಯಾ ತಯಾರಿರಲಿಲ್ಲ. ಅವಳ ಸ್ವಭಾವವೇ ಹಾಗೆ. ಹಿಡಿದದ್ದನ್ನು ಸಾಧಿಸದೇ ಬಿಡುವವಳಲ್ಲ. ‘ಯಾವ ಯಬಡೇಶಿ ಬೇಕಾದರೂ ಧಬಾಲನೇ ಬಂದು ಜನರ ಮುಂದೆ ಕಲಕಲ ಜೋಕು ಹೇಳಲು, ತಾಲೀಮು ಮಾಡಲು ಇರುವ ಮುಕ್ತವಾದ ವೇದಿಕೆಯೇ ಓಪನ್ ಮೈಕು, ವಿದೇಶಗಳಲ್ಲೆಲ್ಲ ದೊಡ್ಡವರೂ ತಮ್ಮ ಹೊಸ ಜೋಕು ಜನರನ್ನು ನಗಿಸುತ್ತದಾ ಅಂತ ಪರೀಕ್ಷೆ ಮಾಡಲಿಕ್ಕೆ ಓಪನ್ ಮೈಕುಗಳಿಗೆ ಬರ್ತಾರೆ’ ಅಂತ ಅಪ್ಪನಿಗೆ ಅರ್ಥ ಆಗುವ ಹಾಗೆ ವಿವರವಾಗಿ ಬಿಡಿಸಿ ಹೇಳಿದ್ದಳು ಅಕ್ಕ. ಆಮೇಲೆ ಕೋರಮಂಗಲದ ಕ್ಲೇಟೋಪಿಯಾದಲ್ಲಿ, ಅಲಸೂರಿನ ಅರ್ಬನ್ ಸೋಲೇಸ್ ಕೆಫೆಯಲ್ಲಿ, ಇಂದಿರಾನಗರದಲ್ಲಿ ಅಲ್ಲಿ ಇಲ್ಲಿ ಅಂತ ಓಪನ್ ಮೈಕುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಅವಳು ಹೋದಲ್ಲಿಗೆ ನಾನೂ ಹೋಗಬೇಕಾಗುತ್ತಿತ್ತು.

ಒಂದು ಸಲ ವೈಟ್ ಫೀಲ್ಡಿನ ಕೆಫೆಯೊಂದರಲ್ಲಿ ಆದ ಓಪನ್ ಮೈಕೊಂದನ್ನು ಸಾನ್ಯಾ ಇವತ್ತಿಗೂ ಮರೆತಿಲ್ಲ. ಪುಟ್ಟ ಬೆಡ್ರೂಮಿನಂತಿದ್ದ, ನಮ್ಮ ರಂಗಸ್ಥಳವಾಗಲಿದ್ದ ಕೋಣೆ, ಗೋಡೆಗಳಲ್ಲಿ ನೇತು ಹಾಕಿದ್ದ ತರಹೇವಾರಿ ಪೇಂಟಿಂಗುಗಳು, ಇಷ್ಟಿಷ್ಟೇ ಪ್ರಭೆ ಸೂಸಿ ಹಲ್ಲು ಕಿರಿಯುವ ಬಲ್ಬುಗಳ ಮಬ್ಬಾದ ಬೆಳಕು, ಒತ್ತೊತ್ತಾಗಿ ಜೋಡಿಸಿದ ಮೇಜುಗಳು ಎಲ್ಲ ಸೇರಿ, ‘ಇಂಥದ್ದನ್ನೂ ನಾವು ವೇದಿಕೆ ಅಂದುಕೊಂಡು ಜೋಕು ಮಾಡಬೇಕಾ’ ಎಂಬ ಗಲಿಬಿಲಿ ಹುಟ್ಟಿಸುವಂಥ ಸುತ್ತುಮುತ್ತು ಅಲ್ಲಿಯದ್ದು. ಅಲ್ಲಿ ಹದಿನಾರು ಜನ ಕೂತಿದ್ದರು. ‘ಹೊಸಬರ ಪ್ರದರ್ಶನಕ್ಕೆ ಹದಿನಾರು ಜನ ಪ್ರೇಕ್ಷಕರು ಅಂದರೆ ಸಣ್ಣ ಮಾತಲ್ಲ’ ಅಂತ ಅಕ್ಕ ಅಪ್ಪನಿಗೆ ಫೋನಿನಲ್ಲಿ ತಿಳಿಸಿದ್ದು ಕೇಳಿಸಿಕೊಂಡಿದ್ದೆ. ಅಸಲಿ ವಿಷಯ ಗೊತ್ತಾದದ್ದು ಆಮೇಲೆ – ಬಂದ ಹದಿನಾರರಲ್ಲಿ ಹದಿನೈದು ಜನ ಅಕ್ಕನ ಹಾಗೆ ಜೋಕು ಹೇಳಿ ಅಭ್ಯಾಸ ಮಾಡುವುದಕ್ಕೆ ವೇದಿಕೆ ಹುಡುಕಿ ಬಂದಿದ್ದವರು!

ಅವತ್ತು ರಾತ್ರಿ ಮನೆಯಲ್ಲಿ ಬೇಸರ ಕಳೆಯುವುದಕ್ಕೆ ಅಪ್ಪ ಹೊನ್ನಾವರದ ನೆನಪುಗಳನ್ನು ಹೇಳಿದ್ದರು. ಸಾನ್ಯಾಳನ್ನು ಕರೆದುಕೊಂಡು ಹೋಗಿ ಮುರುಡೇಶ್ವರದ ಸಮುದ್ರದಲ್ಲಿದ್ದ ಕ್ಯಾಂಟೀನಿನಲ್ಲಿ ತಿಂದದ್ದು, ಗೋಕರ್ಣದಲ್ಲಿ ಭಟ್ರ ಮನೆಯಲ್ಲಿ ಉಳಿದುಕೊಂಡಾಗ ಅವಳು ತಂಟೆ ಮಾಡಿದ್ದು, ಗುಣವಂತೆಯ ಹೋಟೆಲ್ಲಿನಲ್ಲಿ ಅವಲಕ್ಕಿ ಮೊಸರು ಎರಡೆರಡು ಪ್ಲೇಟು ತಿಂದ ಕಥೆ ಎಲ್ಲ ಬಂದು ಹೋದವು. ಈ ಯಾವ ಕಥೆಯಲ್ಲಿಯೂ ನನ್ನ ಪ್ರಸ್ತಾವ ಇರಲೇ ಇಲ್ಲ! ಹೊನ್ನಾವರದ ಶರಾವತಿಯ ಸೇತುವೆ ಹಾಳಾಗಿದ್ದಾಗ, ಬಸ್ಸುಗಳು ಲಾರಿಗಳು ಎಲ್ಲ ನದಿಯನ್ನು ದಾಟಲಿಕ್ಕೆ ಬಾರ್ಜ್ ಅನ್ನುವ ನಾವೆಯನ್ನು ಬಳಸುತ್ತಿದ್ದವು. ಬಾರ್ಜು ಈ ದಡದಿಂದ ಆ ದಡಕ್ಕೆ ಶರಾವತಿಯಲ್ಲಿ ತೇಲುತ್ತಾ ಹೋಗುವಾಗ ಅದರಲ್ಲಿ ನಿಂತು ಪಿಕ್ನಿಕ್ಕಿನ ಹಾಗೆ ಹೋಗುತ್ತಿದ್ದರಂತೆ. ಸಾನ್ಯಾಳಿಗೆ ಈ ಬಾರ್ಜ್ ಯಾನ ಭಾರೀ ಖುಷಿ ಕೊಡುತ್ತಿತ್ತಂತೆ, ಒಂದ್ಸಲ “ನದಿಯಲ್ಲಿ ಬಾರ್ಜು ಬಸ್ಸನ್ನು ಹೊತ್ಕೊಂಡು ಹೋಗ್ತದೆ, ರಸ್ತೆಯಲ್ಲಿ ಬಸ್ಸು ಯಾಕೆ ಬಾರ್ಜನ್ನ ಹೊತ್ಕೊಂಡು ಹೋಗುದಿಲ್ಲ” ಅಂತ ಕೇಳಿದ್ದಳಂತೆ ಸಾನ್ಯಾ. ಇದನ್ನೊಂದು ದೊಡ್ಡ ಜೋಕು ಎಂಬಂತೆ ಹೇಳಿ ನಕ್ಕು ಅಕ್ಕನನ್ನೂ ನಗಿಸಿದ್ದರು ಅಪ್ಪ. ನನ್ನ ಬಗ್ಗೆ ಇಂಥ ನೆನಪುಗಳೂ ಇಲ್ಲ, ನನ್ನನ್ನವರು ಹೀಗೆ ನಗಿಸಿದ ಉದಾಹರಣೆಗಳೂ ಇಲ್ಲ. ನನ್ನ ದುಃಖ, ಆತಂಕ ಎಲ್ಲ ನನ್ನವು ಮಾತ್ರ.

ಇದಾದರೂ ತೊಂದರೆಯಿಲ್ಲ, ಅದಾಗಿ ಒಂದು ವಾರ ಆದ ಮೇಲೆ ಆದ ಘಟನೆಗೆ ಮಾತ್ರ ನಾನು ಅಪ್ಪನನ್ನು ಇವತ್ತಿಗೂ ಕ್ಷಮಿಸಿಲ್ಲ. ಮನೆಯ ಹದಿನೆಂಟು ಮೆಟ್ಟಿಲುಗಳನ್ನು ಹತ್ತುವಾಗ ನೋಡಿಕೊಂಡು ನಡೆಯುವುದು ಬಿಟ್ಟು ಮೊಬೈಲು ನೋಡುತ್ತಾ ಹತ್ತಿದ್ದಳು ಸಾನ್ಯಾ. ಎಡವಿ ಕಾಲು ಜಾರಿ ಬುಡಕ್ಕನೇ ಕೆಳಗೆ ಬಿದ್ದಿದ್ದಳು. ಹಣೆಯಿಂದ ನೆತ್ತರು ಜಿನುಗಿತ್ತು. ವಿಷಯ ತಿಳಿದು ಓಡೋಡಿ ಬಂದ ಅಪ್ಪ ಅವಳಿಗೆ ಅಂಥದ್ದೇನು ಆಗಿರದಿದ್ದರೂ ಅವಳನ್ನು ಕೂಡಲೇ ಆಸ್ಪತ್ರೆಗೆ ಹೊತ್ತುಕೊಂಡು ಓಡಿದ್ದರು. ‘ಫ್ರಾಕ್ಚರ್ ಆಗಿದೆಯಾ, ಅದು ಆಗಿದೆಯಾ ಇದು ಆಗಿದೆಯಾ’ ಅಂತ ಒದ್ದಾಡಿದ್ದರು. ಅವರ ಕಣ್ಣಂಚು ಒದ್ದೆಯಾಗಿಬಿಟ್ಟಿತ್ತು.

ನನಗೆ ಹೀಗಾದರೆ ಏನು ಮಾಡುತ್ತಾರೆ ನೋಡೋಣ ಅಂತ ಅದರ ಮರುದಿನ ನಾನೂ ಅದೇ ಮೆಟ್ಟಿಲಿನಿಂದ ಕೆಳಗೆ ಬಿದ್ದೆ. ಬೇಕೆಂದೇ ಬಿದ್ದೆ. ಕಿರುಚಿದೆ. ವಿಷಯ ಅಪ್ಪನಿಗೆ ಗೊತ್ತಾದಾಗ ಅಪ್ಪ ನಗುವೇ ಬಾರದ ಜೋಕೊಂದನ್ನು ಕೇಳಿದವರ ಹಾಗೆ ಮುಖ ಮಾಡಿದ್ದರು. ಮುಖದಲ್ಲಿ ಭಾವೋದ್ವೇಗದ ಸುಳಿವೇ ಇರಲಿಲ್ಲ. ಅವರಿಗೆ ಆಶ್ಚರ್ಯವೇನೂ ಆಗಲಿಲ್ಲ, ಈ ವರ್ತನೆಯನ್ನು ನೋಡಿ ನನಗೂ ಆಶ್ಚರ್ಯವೇನೂ ಆಗಲಿಲ್ಲ! ಗಾಬರಿ, ಆತಂಕ, ಕಣ್ಣೀರು ಏನೂ ಇಲ್ಲ. ನನ್ನನ್ನು ಆಸ್ಪತ್ರೆಗೆ ಒಯ್ಯುವ ಮಾತೇ ಇಲ್ಲ! ಏನೋ ಶಿಕ್ಷೆ ಕೊಡುವವರ ಥರ ನನ್ನನ್ನೊಂದು ಕೋಣೆಗೆ ಎತ್ತಿಕೊಂಡು ಹೋಗಿ ಹಾಕಿದರು. ಆಮೇಲೆ ಏನಾಯಿತೋ ಗೊತ್ತಿಲ್ಲ, ಪ್ರಜ್ಞೆ ತಪ್ಪಿದ ಹಾಗಾಯಿತು, ಮತ್ತೆ ಎಚ್ಚರವಾದದ್ದು ಮರುದಿನವೇ. ಕಣ್ಣು ಬಿಡುವಾಗ ನಾನು ಮನೆಯ ಹಾಲಿನಲ್ಲೇ ಇದ್ದೆ. “ಪ್ರೀತಿ ಇಲ್ಲದ ಮೇಲೆ ನರಳುವ ಪಾಡು ತಪ್ಪೀತು ಹೇಗೆ?”

ನಾನು ರಾಜೇಶನಿಗೆ ಸಹಾಯ ಮಾಡಬೇಕೆಂದು ನಿರ್ಧಾರ ಮಾಡಿದ್ದು ಆಗಲೇ. ರಾಜೇಶ ಸಾಯುವ ಮಾತಾಡುವ ಹುಡುಗನಾಗಿರಲಿಲ್ಲ, ಓಪನ್ ಮೈಕುಗಳಿಗೆ ಎಡತಾಕುತ್ತಿದ್ದ. ಸ್ಟಾಂಡ್ ಅಪ್ ಕಾಮಿಡಿಗೆ ಬರಬೇಕು, ನಾಕು ಜನ ಚಪ್ಪಾಳೆ ತಟ್ಟುವ ಹಾಗೆ ನಗಿಸಬೇಕು ಅಂದುಕೊಂಡಿದ್ದ. ಅದಕ್ಕೋಸ್ಕರ ಐಬಿಎಮ್ಮಿನ ಸಾಫ್ಟ್ವೇರ್ ಕೆಲಸವನ್ನೂ ಬಿಟ್ಟಿದ್ದ. ಅವನ ಈ ಉತ್ಕಟವಾದ ಹಾರೈಕೆಯನ್ನು ಮೊಟಕುಗೊಳಿಸಿದ್ದು Cystic Fibrosis ಎಂಬ ಶ್ವಾಸಕೋಶದ ರೋಗ. ಸಾವೇ ಇಲ್ಲ ಎಂಬಂತೆ ಓಡಾಡುತ್ತಿದ್ದವನು ಹುಟ್ಟಿಯೇ ಇಲ್ಲ ಎಂಬಂತೆ ಸ್ಥಬ್ಧನಾಗಬಾರದು ಎಂಬಲ್ಲಿಗೆ ಬಂದದ್ದು ಹಾಗೆ. ಅವನಿಗೆ ಬರಲಿರುವ ಸಾವಿಗೆ ಒಂದಷ್ಟು ಘನತೆ ಕೊಡೋಣ, ಅವನ ನೋವಿಗೆ ಉಪಶಮನ ಕೊಡೋಣ ಅಂತ ಹೊರಟದ್ದೇ ನನ್ನ ಕೊಲೆಯ ಪ್ರಯತ್ನಕ್ಕೆ ಮುನ್ನುಡಿ ಬರೆಯುತ್ತದೆ ಅಂತ ನನಗೆಲ್ಲಿ ಗೊತ್ತಿತ್ತು. ಈ ರಾಜೇಶನ ಸಾವಿಗೆ ಆಮೇಲೆ ಬರುತ್ತೇನೆ. ನನ್ನ ಕೊಲೆಯ ಪ್ರಯತ್ನದ ಸುಳಿವಿನ ಬಗ್ಗೆ ಮೊದಲು ಹೇಳುತ್ತೇನೆ.

ಉಪಮೆಗಳನ್ನು ಹೇಳಿಕೊಟ್ಟಿದ್ದ, ಅನಿರೀಕ್ಷಿತ ಅಂತ್ಯಗಳ ರಚನೆಗಳನ್ನು ಅಭ್ಯಾಸ ಮಾಡಿಸಿದ್ದ,ಅಷ್ಟೊಂದು ಭಾಷಾ ಕೌಶಲ ಕಲಿಸಿದ್ದ ಅಪ್ಪ ನನಗೆ heckler ಮತ್ತು bombing ಎಂಬ ಪದಗಳ ಅರ್ಥವನ್ನು ಹೇಳಿಕೊಟ್ಟರಲೇ ಇಲ್ಲ; ಅದು ನನಗೆ ಗೊತ್ತಾದದ್ದು ಆ ಎರಡು ಪ್ರಸಂಗಗಳಲ್ಲಿಯೇ.

ಮೊದಲ ಘಟನೆ ಆದದ್ದು ಕೋರಮಂಗಲದ ಬಾರೊಂದರ ತಿಳಿಗತ್ತಲಿನಲ್ಲಿ. ಅಲ್ಲಿನ ಓಪನ್ ಮೈಕಿಗೆ ಅಕ್ಕನ ಹೆಸರೂ ನನ್ನ ಹೆಸರೂ ರಿಜಿಸ್ಟರ್ ಆಗಿತ್ತು. ಕಿರಿಗುಟ್ಟುತ್ತಿದ್ದ ಟ್ರಾಫಿಕ್ಕಿನ ಪಡಿಪಾಟಲಿನಿಂದ ತಪ್ಪಿಸಿಕೊಳ್ಳಲು ಬಂದು ಕೂತಿದ್ದ ನಿರಾಶ್ರಿತರ ಥರ ಕಾಣುತ್ತಿದ್ದ ಒಂದಷ್ಟು ಜನ ಕೂತಿದ್ದರು, ನನ್ನದು ಹನ್ನೆರಡನೇ ಹೆಸರು, ಸಾನ್ಯಾಳದು ಹದಿನಾಲ್ಕನೇ ಹೆಸರು. ನನ್ನ ಸರದಿ ಬಂತು. ಕಪ್ಪಗಿದ್ದ ಕಾರ್ಡ್ಲೆಸ್ ಮೈಕು ನನಗೆ ನಾನೇ ಚುಚ್ಚಿಕೊಳ್ಳಲು ಹಿಡಿದ ಬಾಣದಂತೆ ಕಾಣುತ್ತಿತ್ತು. ನಾನು ಕಲಿತಿದ್ದ, ಅಭ್ಯಾಸ ಮಾಡಿದ್ದ ಜೋಕುಗಳನ್ನು ಉದುರಿಸಲು ಶುರು ಮಾಡಿದೆ. ಒಬ್ಬ ಓಲ್ಡ್ ಮಾಂಕ್ ಪ್ರಿಯ ದೊಡ್ಡ ದನಿಯಲ್ಲಿ ಅಪಹಾಸ್ಯದ ಕಾಮೆಂಟುಗಳನ್ನು ಹೊಡೆಯುವುದಕ್ಕೆ ಶುರು ಮಾಡಿದ, ನನ್ನ ಜೋಕಿಗೆ ನಕ್ಕದ್ದಕ್ಕಿಂತ ಜಾಸ್ತಿ ಅವನ ಕಾಮೆಂಟುಗಳಿಗೆ ನಗುವ ಗೆಳೆಯರ ದಂಡು ಅವನ ಜೊತೆಗಿತ್ತು. ನನ್ನ ಬಾಯಿಕಟ್ಟಿ, ಪ್ರದರ್ಶನವನ್ನು ಅಲ್ಲಿಗೇ ನಿಲ್ಲಿಸಿ ಇಳಿದು ಬಂದೆ. ಹೀಗೆ ಕಿಚಾಯಿಸಿ ರಂಗಮಂಚದಲ್ಲಿ ನಿಂತವರ ಧೈರ್ಯ ಉಡುಗಿಸಿ ಮಜಾ ತೆಗೆದುಕೊಳ್ಳುವ ಪ್ರೇಕ್ಷಕರನ್ನು ಹೆಕ್ಲರುಗಳು ಅನ್ನುತ್ತಾರಂತೆ. ಇಂಥವರನ್ನು ಏನು ಮಾಡಬೇಕು ಅಂತ ನನಗ್ಯಾರೂ ಹೇಳಿಕೊಟ್ಟಿರಲಿಲ್ಲ. ನಾನು ಇಂಟರ್ನೆಟ್ಟಿನಲ್ಲಿ ಓದಿದ್ದನ್ನು ಪೂರ್ತಿ ಅರೆಕ್ಷಣದಲ್ಲಿ ಒಳಗೊಳಗೇ ಸ್ಕ್ಯಾನ್ ಮಾಡಿ ನೋಡಿದೆ, ಪಕ್ಕನೆ ಇಂಗ್ಲೀಷಿನಲ್ಲಿ ನೋಡಿದ್ದು ನೆನಪಾಗಿ ತೋಚಿದ್ದನ್ನು ಕನ್ನಡದಲ್ಲಿ ಹೇಗೆ ಹೇಳುವುದು ಅಂತ ಗೊತ್ತಾಗದೆ ಹೇಳಿದೆ, “ನಿಮ್ಮ ಮೆದುಳನ್ನ ನೀವು ವಿಜ್ಞಾನದ ವಿದ್ಯಾರ್ಥಿಗಳಿಗೆ ದಾನ ಕೊಡುವುದೇನೋ ಒಳ್ಳೆಯ ಕೆಲಸವೇ, ಆದರೆ ನೀವು ಆ ಕೆಲಸ ಮಾಡಲಿಕ್ಕೆ ಸಾಯುವವರೆಗೆ ಕಾಯಬೇಕಿತ್ತು”. ನಾನು ಹೇಳಿದ್ದು ಸರಿಯಾಗಲಿಲ್ಲವೋ, ಕುಡಿದವರಿಗೆ ಅರ್ಥ ಆಗಲಿಲ್ಲವೋ, ಅಂತೂ ನನ್ನ ತಿರುಗುಬಾಣಕ್ಕೆ ಯಾರೂ ನಗಲಿಲ್ಲ.

ಅಕ್ಕ ಸಾನ್ಯಾ ನನ್ನಂತೆ ಶರಣಾಗಿ ಬಿಟ್ಟುಕೊಡಲಿಲ್ಲ. ಹೆಕ್ಲರು ವರಾತ ಶುರು ಮಾಡಿದಾಗ ರಪಕ್ಕನೆ ಅವನನ್ನು ಸೆಕ್ಷುಯಲ್ ಆಗಿ ಅವಹೇಳನ ಮಾಡಿ ಮುಖಭಂಗ ಮಾಡಿ ಅವನ ಬಾಯಿ ಮುಚ್ಚಿಸಿದ್ದಳು. ನನಗಿದು ಯಾಕೆ ತೋಚಲಿಲ್ಲ ಅಂತ ಅರ್ಥ ಆಗಿರಲಿಲ್ಲ. ದುಃಖ ಅಂದರೆ ಏನು ಎಂಬುದು ಮಾತ್ರ ಅವತ್ತು ಅರ್ಥವಾಯಿತು, ಅಪ್ಪ ಕೆಲವು ತಂತ್ರಗಳನ್ನು ನನಗೆ ಹೇಳದೇ ಸಾನ್ಯಾಳಿಗೆ ಮಾತ್ರ ಹೇಳಿಕೊಡುತ್ತಿದ್ದಾರಾ ಎಂಬ ಅನುಮಾನ ಹುಟ್ಟಿದ್ದೇ ಅವತ್ತು.

ಎರಡನೇ ಘಟನೆ ನಡೆದದ್ದು ಕನಕಪುರ ರಸ್ತೆಯಲ್ಲಿದ್ದ ರೆಸಾರ್ಟ್ ಒಂದರಲ್ಲಿ. ನಾನು ಚಪ್ಪಾಳೆ ಗಿಟ್ಟಿಸಿಕೊಂಡ ಕಥೆ ಅದು. ನೆರೆದಿದ್ದವರ ಊಟಕ್ಕೆ ಇನ್ನು ಅರ್ಧ ಗಂಟೆ ಬಾಕಿ ಇತ್ತು. ತಿಳಿನೀಲಿ ಜೀನ್ಸ್ ಪ್ಯಾಂಟು, ಕಪ್ಪನೆಯ ದೊಗಳೆ ಅಂಗಿ ಹಾಕಿದ ನಿರೂಪಕನೊಬ್ಬ ಮೊದಲ ಹದಿನೈದು ನಿಮಿಷ ಸಾನ್ಯಾ, ಆಮೇಲೆ ಹದಿನೈದು ನಿಮಿಷ ತಾನ್ಯಾ ನಿಮ್ಮನ್ನು ರಂಜಿಸಲಿದ್ದಾಳೆ ಅಂದಾಗ ಔಟಿಂಗಿಗೆ ಬಂದಿದ್ದ ಪ್ರೇಕ್ಷಕರು ತಯಾರಾಗಿ ಕೂತರು. ಸಾನ್ಯಾ ಮಾತಾಡಿದಾಗ ತಡೆದು ತಡೆದು ನಗು ಬಂತು, ಅಂದುಕೊಂಡಷ್ಟು ನಗು ಬರುತ್ತಿಲ್ಲ ಅನ್ನಿಸಿದಾಗ ಡಬಲ್ ಮೀನಿಂಗು, ಇಂಗ್ಲೀಷಿನ ಅಶ್ಲೀಲ ಬೈಗುಳ, ಸೆಕ್ಸುಯಲ್ ಕಂಟೆಂಟುಗಳಿಗೆ ಹೊರಳಿ ಎಲ್ಲರನ್ನೂ ನಗಿಸಿಯೇ ಬಿಟ್ಟಳು. ಇಂಥದ್ದಕ್ಕೆ ನಗುವವರು ನಿಜವಾಗಿಯೂ ತಮಾಷೆ ಇಷ್ಟವಾಗಿ ನಗುತ್ತಿದ್ದಾರಾ ಅಥವಾ ತಾವು ಇಂತಾದ್ದರಲ್ಲೆಲ್ಲ ತುಂಬಾ ಆಧುನಿಕರು, ಲಿಬರಲ್ಲುಗಳು ಅಂತ ತೋರಿಸಿಕೊಳ್ಳುವುದಕ್ಕೆ ನಗುತ್ತಾರಾ ಅನ್ನುವ ಸಂದೇಹ ನನ್ನ ತಲೆಯಲ್ಲಿತ್ತು. ಕೇಳಿದರೆ ಅಕ್ಕನ ಯಶಸ್ಸಿನ ಬಗ್ಗೆ ಹೊಟ್ಟೆಕಿಚ್ಚು ಪಟ್ಟು ಕೊಂಕು ತೆಗೀತಾಳೆ ಅನ್ನಬಹುದು ಅನ್ನಿಸಿ ಸುಮ್ಮನಾದೆ.

ಹದಿನಾರನೇ ನಿಮಿಷಕ್ಕೆ ನಾನು ಧ್ವನಿವರ್ಧಕದ ಮುಂದಿದ್ದೆ. ನಾನು ತಯಾರು ಮಾಡಿದ್ದ ಜೋಕುಗಳ ಸಂಚಿಯನ್ನು ಹೇಗೆ ಬಿಚ್ಚಿದರೂ ಅಲ್ಲಿ ಇದ್ದದ್ದು ಬರಿಯ ಮೌನ, ‘ನಗುವಿನ ಕಲಕಲ ಯಾಕಿಲ್ಲ’ ಅಂದುಕೊಳ್ಳುತ್ತಲೇ ಮುಂದುವರಿದೆ. ಆಗ ಬಿತ್ತು ನೋಡಿ ಚಪ್ಪಾಳೆ, ನಾಲ್ಕೂವರೆ ನಿಮಿಷಕ್ಕೆ. ಆಯ್ತಲ್ಲ, ‘I killed it’ ಅಂತ ಉತ್ಸಾಹ ಹೆಚ್ಚಿ ಇನ್ನಷ್ಟು ಜೋಕುಗಳನ್ನು ಹೊರ ತೆಗೆದೆ, ದೊಗಳೆ ಅಂಗಿಯ ನಿರೂಪಕ ಆಚೆ ಕರ್ಕೊಂಡು ಹೋಗಿ, ‘ಸಾಕು ಸಾಕು’ ಅಂದಾಗಲೇ ನನಗೆ ವಿಷಯ ಗೊತ್ತಾದದ್ದು, ಅದು ಮೆಚ್ಚುಗೆಯ ಕರತಾಡನ ಅಲ್ಲವಂತೆ. “ಸಾಕು ತಾಯೀ, ನಿಲ್ಸು ಒಂದ್ಸರ್ತಿ” ಅಂತ ಹೇಳುವ ಅಪಹಾಸ್ಯದ ಚಪ್ಪಾಳೆಯಂತೆ ಅದು. ಈ ಮನುಷ್ಯರ ವಿಚಿತ್ರ ಪರಿಗಳು ನನಗೆ ಹೇಗೆ ಅರ್ಥವಾಗಬೇಕು, ಅಳು ಒತ್ತರಿಸಿ ಬಂತು, ಏನೇ ಆದರೂ ಹೀಗೆ ಫ್ಲಾಪ್ ಆಗುವುದಕ್ಕೆ ಬಾಂಬಿಂಗ್ ಅನ್ನುತ್ತಾರೆ ಅಂತ ತಿಳಿದುಕೊಂಡೆ. ಹೊಸ ಶಬ್ದವೊಂದರ ಅರ್ಥ ಗೊತ್ತಾಯಿತು.

ಆವತ್ತು ಎಲ್ಲಕ್ಕಿಂತ ಹೆಚ್ಚು ಇರಿದದ್ದು ಅಕ್ಕನ ವರ್ತನೆ. ಹೀಗೆ ನನ್ನ ಬಾಂಬಿಂಗ್ ಆಗುತ್ತಿದ್ದಾಗ ಅಕ್ಕ ಮೊಬೈಲಿನಲ್ಲಿ ನನ್ನ ಮಾನ ಹೋಗುತ್ತಿರುವುದರ ವೀಡಿಯೊ ಮಾಡುತ್ತಿದ್ದಳು! ಅದನ್ನು ಪ್ರಸಿದ್ಧ ವಿಜ್ಞಾನಿ ಶಂತನು ಕಾಮತರಿಗೆ ಕಳಿಸಲಿಕ್ಕೆ! ನನ್ನ ವೀಡಿಯೋಗಳನ್ನು ವಿಶ್ಲೇಷಣೆ ಮಾಡಲಿಕ್ಕೆ. ನನ್ನ ಮೇಲೆ ಕಣ್ಣಿಡುವ ಉಪಾಯ ಇದು ಎಂಬುದು ನನಗೆ ಗೊತ್ತಾಗಿ ಹೋಯಿತು. ಅಪ್ಪ ಮತ್ತು ಸಾನ್ಯಾ ನನ್ನ ವಿರುದ್ಧ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ ಎಂಬ ನನ್ನ ಗುಮಾನಿಗೆ ಪುಷ್ಟಿ ಸಿಕ್ಕಿದ್ದೇ ಅವತ್ತು. ಅದಾದ ಮೇಲೆ ಹಂತ ಹಂತವಾಗಿ ತಪ್ಪುಗಳನ್ನು ತಿದ್ದಿಕೊಂಡು, ಮೇಲೇರುತ್ತಾ ಬಂದೆ. ‘ನಾಟ್ ಬ್ಯಾಡ್ ಯಾರ್’ಗಳಿಂದ ಹಿಡಿದು ‘ಸಕತ್ತಾಗಿ ಕಾಮಿಡಿ ಮಾಡ್ತಾಳೆ’ ಎಂಬವರೆಗೂ ಮಾತುಗಳು ಕೇಳಿಬರತೊಡಗಿದವು. ಇದನ್ನು ಅವರಿಬ್ಬರಿಗೆ ಸಹಿಸಲು ಆಗಲಿಲ್ಲವೇನೋ.


ವಾಸಿಯಾಗದ ಕಾಯಿಲೆಗಳಿಂದ ನರಳುತ್ತಾ ಇರುವವರ ಬಗ್ಗೆ ಕಾಳಜಿ ವಹಿಸುವ Indian Association of Palliative Care ಎಂಬ ಸಂಸ್ಥೆಯ ಬಗ್ಗೆ ನನಗೆ ಹೇಳಿದ್ದು ರಾಘು. ಕಾರ್ಪೊರೇಟ್ ಕಾಮಿಡಿಗೆ ಹೆಸರಾಗಿರುವ ರಾಘವೇಂದ್ರ. ಕಾರ್ಪೊರೇಟುಗಳಲ್ಲಿ ಅದರ ಬಗ್ಗೆ ಮಾತಾಡಲು ಹೋಗಬೇಡಿ, ಇದರ ಬಗ್ಗೆ ಜೋಕುಗಳು ಬೇಡ , ಇನ್ನೊಂದನ್ನಂತೂ ತರಲೇಬೇಡಿ ಅಂತೆಲ್ಲ ಹೆಜ್ಜೆಗೊಂದು ನಿಷೇಧಗಳನ್ನು, ಕರಾರುಗಳನ್ನು ಹಾಕಿ ಜೀವ ತಿಂತಾರೆ, ಇವನ್ನೆಲ್ಲ ಬಿಟ್ಟರೆ ಮತ್ತೆ ಜೋಕು ಮಾಡುವುದು ಯಾವ ವಿಷಯದ ಮೇಲೆ ಅನ್ನಿಸಿಬಿಡುತ್ತೆ, ಇನ್ನು ಈ ಫಾರ್ಮಲ್ಸ್ ಹಾಕಿ ಶಿಸ್ತಾಗಿ ಕೂತ ಉದ್ಯೋಗಿಗಳು, ಸೂಟು ಬೂಟು ಹಾಕಿ ಠಾಕು ಠೀಕಾಗಿ ಕೂತ ವೈಸ್ ಪ್ರೆಸಿಡೆಂಟುಗಳು, ಸಿಇಓಗಳನ್ನೆಲ್ಲ ನೋಡಿದರೆ ಗೊತ್ತಿರುವ ಜೋಕುಗಳೂ ಮರೆತುಹೋಗ್ತವೆ ಅಂತಿದ್ದ ರಾಘವೇಂದ್ರ. ಆದರೂ ನಿಜವಾಗಿಯೂ ದುಡ್ಡಿನ ರುಚಿ ನೋಡಬೇಕಾದರೆ ಮೂರ್ನಾಲ್ಕು ವೈರಲ್ ವೀಡಿಯೋಗಳನ್ನು ಬಿಟ್ಟಾದ ಮೇಲೆ ಕಾರ್ಪೊರೇಟ್ ಗಿಗ್ಗುಗಳನ್ನು ಒಪ್ಪಲು ಶುರು ಮಾಡಬೇಕು ಎಂದು ಸಮಜಾಯಿಷಿಯನ್ನೂ ಕೊಡುತ್ತಿದ್ದ. ಬದುಕಿನ ಪಯಣದಲ್ಲಿ ಕೊನೆಯ ನಿಲ್ದಾಣಕ್ಕೆ ಬಂದಿರುವವರ ಕೈಯ್ಯಲ್ಲಿ ಸ್ಟಾಂಡ್ ಅಪ್ ಕಾಮಿಡಿ ಮಾಡಿಸುವ ಯೋಜನೆ ಆ Palliative Care ಸಂಸ್ಥೆಗೆ ಇದೆ ಅಂತ ಅವನಿಗೆ ಗೊತ್ತಾದದ್ದು ಯಾವುದೋ ಕಾರ್ಪೊರೇಟ್ ಗಿಗ್ ಆಗುತ್ತಿದ್ದಾಗಲೇ.

ಸಾವು ಕರೆಯುತ್ತಿದೆ, ಹೋಗದೇ ಇರುವಂತಿಲ್ಲ ಎನ್ನುವವರು ಅಳುಮುಖ ಮಾಡಿ, ಉಳಿದವರನ್ನೂ ಅಳಿಸಿ, ವಿಷಾದದ ಬಟ್ಟಲನ್ನು ಬಿಟ್ಟು ಹೋಗುವ ಬದಲು ಒಂದಷ್ಟು ಜೋಕು ಸಿಡಿಸಿ, ತಮ್ಮ ಬಗ್ಗೆ, ಉಳಿದವರ ಬಗ್ಗೆ, ಬದುಕಿನ ಬಗ್ಗೆ, ಸಾವಿನ ಬಗ್ಗೆ, ಅದರಲ್ಲೂ ತಮ್ಮದೇ ಸಾವಿನ ಬಗ್ಗೆ ತಮಾಷೆ ಮಾಡಿದರೆ ಒಳ್ಳೆಯದಲ್ಲವೇ ಎಂಬುದು ಅವರ ಯೋಜನೆಯಂತೆ. ಅದೊಂದು ಕ್ಯಾಂಪೇನ್ ಅಂತೆ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಆತ್ಮದ ಗಿಡುಗ

ಹಾಗೆ ಸಾವಿನ ಕದ ತಟ್ಟುತ್ತ ನಿಂತುಕೊಂಡೇ ಕಾಮಿಡಿ ಮಾಡಹೊರಟವರಿಗೆ ಮೂರು ವಾರ ತರಬೇತಿ ನೀಡಿ, ನಗೆಚಟಾಕಿಗಳನ್ನು ಹೇಳಿಕೊಟ್ಟು ಅವರನ್ನು ಪ್ರದರ್ಶನಕ್ಕೆ ತಯಾರು ಮಾಡುವುದಕ್ಕೆ ರಾಘವೇಂದ್ರನೂ ಹೋಗುತ್ತಿದ್ದಾನಂತೆ. ‘ನೀನೂ ಬರ್ತೀಯಾ’ ಅಂದ. ಬರ್ತೇನೆ ಅಂದೆ. ವಯೋವೃದ್ಧರೇ ಜಾಸ್ತಿ ಇರುವ ಈ ಪಟ್ಟಿಯಲ್ಲಿ ರಾಜೇಶನೂ ಸೇರಿಕೊಂಡರೆ ಸಾವನ್ನು ಸಂಧಿಸಲು ಕಾದು ಕೂತಿರುವ ಮಧ್ಯವಯಸ್ಕನೂ ಸೇರಿದಂತಾಗುತ್ತದೆ ಅಂದುಕೊಂಡೆ.

“ನನ್ನನ್ನು ಕಾಡು ಬಾ ಅಂತಿದೆ, ಊರು ಹೋಗು ಅಂತಿದೆ, ಅದಕ್ಕೇ ಟ್ರೆಕಿಂಗ್ ಹೊರಟೆ, ಇನ್ನೇನು ಕಾಡಿಗೆ ಕಾಲಿಡಬೇಕು ಅನ್ನುವಾಗ ನಂಗೆ Cystic Fibrosis ಇದೆ ಅಂತ ಗೊತ್ತಾಯ್ತು. ಈ ರೋಗಕ್ಕಿಂತ ಈ ರೋಗಗಳಿಗಿರುವ ಸೈಂಟಿಫಿಕ್ ಹೆಸರುಗಳೇ ನನ್ನನ್ನು ಜಾಸ್ತಿ ಹೆದರಿಸುತ್ತವೆ, Cystic Fibrosis ಅನ್ನುವ ಬದಲು “ಲಂಗ್ಸ್ ಢಮಾರ್’ ಅಂದ್ರೆ ಈ ಡಾಕ್ಟರುಗಳ ಗಂಟೇನು ಹೋಗ್ತಿತ್ತು” ಅನ್ನುವ ಓಪನಿಂಗ್ ಲೈನನ್ನು ರಾಜೇಶ ಹೇಳುತ್ತಿರುವಂತೆ, ಅದಕ್ಕೆ ವಿಷಲ್ ಬಿದ್ದಂತೆ ಕಲ್ಪಿಸಿಕೊಂಡೆ. ರಾಜೇಶನಿಗೂ ಮತ್ತೊಬ್ಬ ಕ್ಯಾನ್ಸರ್ ರೋಗಿ ವೃದ್ಧರಿಗೂ ಕಾಮಿಡಿ ಹೇಳಿಕೊಡುವ, ಜೋಕು ಬರೆದುಕೊಡುವ ಕೆಲಸ ಒಪ್ಪಿಕೊಂಡೆ. ದಿನನಿತ್ಯ ಪ್ರಾಕ್ಟೀಸ್ ಸೆಷನ್ನುಗಳಿಗೆ ಹೋಗಿ ಬರಲಾರಂಭಿಸಿದೆ.

ಈ ವಿಷಯ ಅಪ್ಪನಿಗೆ ಗೊತ್ತಾದದ್ದೇ ಎಡವಟ್ಟಾಯಿತು. ಇನ್ನೊಬ್ಬರಿಗೆ ಉಪಕಾರ ಮಾಡಿ ಒಳ್ಳೆಯವಳಾದ ತಪ್ಪಿಗೆ ನನ್ನ ಜೀವಿತಾವಧಿಯನ್ನು ಕಡಿತಗೊಳಿಸುವ, ನನ್ನ ಪ್ರದರ್ಶನವನ್ನು, ಮತ್ತು ನನ್ನನ್ನೇ ಮುಗಿಸುವ ಮಾತುಗಳನ್ನು ಅವರು ಆಚೆ ಕೋಣೆಯಲ್ಲಿ ಆಡಿದ್ದು ಆಡಿದ್ದು ನನಗೂ ಕೇಳಿಸಿತು. ತಪ್ಪಿಸಿಕೊಂಡು ಓಡಿಹೋಗೋಣ ಅಂದುಕೊಂಡೆ. ಬಾಗಿಲಿನ ಚಿಲಕ ಹೊರಗಿಂದ ಹಾಕಿತ್ತು, ತೆಗೆಯಲಾಗಲಿಲ್ಲ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಹುರಿಮೀಸೆ

ಅರ್ಧ ಗಂಟೆಯಿಂದ ಒದ್ದಾಡುತ್ತಿದ್ದೇನೆ. ಹೊರಗಿಂದ ಯಾರೋ ಬಾಗಿಲು ತೆಗೆಯುತ್ತಿದ್ದಾರೆ. ಅರೆ ಅಪ್ಪ ಇಲ್ಲಿಗೇ ಬಂದರು, ರಿಮೋಟ್ ಕಂಟ್ರೋಲ್ ಒಂದನ್ನು ಒತ್ತಿದರು. ನಾನು…..


“ಪ್ರಯೋಗ ಮುಗೀತಾ ಅಪ್ಪ? ತಾನ್ಯಾಳನ್ನ ಶಾಶ್ವತವಾಗಿ ಶಟ್ ಡೌನ್ ಮಾಡ್ತೀರಾ? she was fun to be around, ಇಷ್ಟು ಬೇಗ ಕಾಮಿಡಿ ಕಲೀತಾಳೆ ಅಂತ ನಾನಂತೂ ಅಂದ್ಕೊಂಡಿರ್ಲಿಲ್ಲ, ಆಲ್ಮೋಸ್ಟ್ ನನ್ ತಂಗಿಯೇ ಅನ್ನುವ ಹಾಗಿದ್ಳು. ಅವಳು ಮನುಷ್ಯಳಲ್ಲ ಅಂತ ನಂಬೋದೇ ಕಷ್ಟ ಅನ್ನೋ ತರ ಇದ್ಳು! what a creation! ಈಗ ಏನಾಯ್ತು? what went wrong?” ಸಾನ್ಯಾ ಒಂದು ಬುಟ್ಟಿ ಪ್ರಶ್ನಾರ್ಥಕ ಚಿಹ್ನೆಗಳನ್ನು ಸುರುವಿ ಒಂದೇ ಉಸುರಿಗೆ ಬಡಬಡಿಸಿದಳು.

ವಿಜ್ಞಾನಿ ಶಂತನು ಕಾಮತ್ ನಿಧಾನಕ್ಕೆ ಬಾಯಿ ತೆರೆದರು, “ಒಂದು ಹ್ಯೂಮನಾಯ್ಡ್ ರೊಬೋಟು ಜೋಕು ಹೇಳಲು ಕಲಿಯುತ್ತದೆ ಅಂದ್ರೆ ನೀನು ನಂಬಿರ್ಲಿಲ್ಲ ಅಲ್ಲಾ? ನಾನು ಈಗ ಹೇಳುದನ್ನೂ ನೀನು ಒಪ್ಪುದಿಲ್ಲ ನೋಡು ಬೇಕಾದ್ರೆ?” ಪ್ರಶ್ನೆಗಳನ್ನು ಕೆಳಗುದುರುವ ಮೊದಲೇ ಗುಡಿಸಿ ಎಸೆಯುವ ಉತ್ಸಾಹ ಅವರ ಸ್ವರದಲ್ಲಿತ್ತು.

“ಅಂದ್ರೆ? ಈಗ ತಾನ್ಯಾ ಎಂಥ ಮಾಡಿದ್ಳು ಅಂಥ ನೀವು ಹೇಳುದು?” ಸಾನ್ಯಾಳ ಕಣ್ಣುಗಳಲ್ಲಿ ಇನ್ನೂ ಪ್ರಶ್ನಾರ್ಥಕ ಚಿಹ್ನೆ ಮಾಸಿರಲಿಲ್ಲ. “ಅವಳು ಏನು ಮಾಡಬಾರದಿತ್ತೋ ಅದನ್ನು ಮಾಡಿದ್ಳು. ಸಾಯುವವರಿಗೆ ಅದು ಮಾಡ್ತೇನೆ ಇದು ಮಾಡ್ತೇನೆ ಅಂತ ಕರುಣಾಮಯಿಯಾಗ ಹೊರಟಳು, ಇದೇ ಮೊದಲ ಸಲ ಭಾವಜೀವಿಯಾದ್ಳು, ಇನ್ನು ಅವಳನ್ನ ಶಟ್ ಡೌನ್ ಮಾಡುದು ಬಿಟ್ರೆ ಬೇರೆ ಆಪ್ಶನ್ ಏನಿದೆ?” ತನ್ನ ಕೊನೆಯ ವಾಕ್ಯವೊಂದು ಪ್ರಶ್ನೆಯೇ ಅಲ್ಲ ಎಂಬಂತೆ ಸಾನ್ಯಾಳ ಲೋಹದ ತಲೆಯ ಮೇಲಿದ್ದ ಕೂದಲನ್ನು ಮೆಲ್ಲಗೆ ಎಡಗೈಯಿಂದ ಸವರಿ, ರಿಮೋಟನ್ನು ಕೆಳಗಿಟ್ಟರು ಶಂತನು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಏಳು ಮಲ್ಲಿಗೆ ತೂಕದವಳು…

Exit mobile version