Site icon Vistara News

ʼಹುದ್ದೆ ವಾಪ್ಸಿʼ ಅಭಿಯಾನ: ರೋಹಿತ್‌ ಚಕ್ರತೀರ್ಥ ತಲೆದಂಡಕ್ಕಾಗಿ ಸಾಲುಸಾಲು ರಾಜೀನಾಮೆ

VP niranjanaradhya Hampana sg siddaramaiah (2)

ಬೆಂಗಳೂರು: ರಾಜ್ಯದಲ್ಲಿ ಈಗಾಗಲೆ ನಡೆಯುತ್ತಿರುವ ಶಾಲಾ ಪಠ್ಯಪುಸ್ತಕ ವಿವಾದ ಮತ್ತಷ್ಟು ಸಂಕೀರ್ಣವಾಗಿದ್ದು, ಒಂದೆಡೆ ಜಾತಿಯ ಬಣ್ಣ ಪಡೆದರೆ ಮತ್ತೊಂದೆಡೆ ಸಾಹಿತಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ʼಹುದ್ದೆ ವಾಪ್ಸಿʼ ಅಭಿಯಾನದ ಮೂಲಕ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ತಲೆದಂಡಕ್ಕೆ ಒತ್ತಾಯಿಸುತ್ತಿದ್ದಾರೆ.

ಸದ್ಯದ ಮಟ್ಟಿಗೆ ಇಬ್ಬರು ಹಿರಿಯ ಸಾಹಿತಿಗಳು ಸರ್ಕಾರದ ಪ್ರತಿಷ್ಠಾನಗಳಿಗೆ ರಾಜೀನಾಮೆ ನೀಡಿದ್ದು, ಒಬ್ಬ ಶಿಕ್ಷಣ ತಜ್ಞರು ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ʼಹುದ್ದೆ ವಾಪ್ಸಿʼ ಅಭಿಯಾನಕ್ಕೆ ಚಾಲನೆ ದೊರೆತಂತಾಗಿದೆ.

ಇದನ್ನೂ ಓದಿ | ರೋಹಿತ್‌ ಚಕ್ರತೀರ್ಥರನ್ನು ಸುಮ್ಮನೆ ಟಾರ್ಗೆಟ್‌ ಮಾಡೋದ್ಯಾಕೆ ಎಂದ ಪ್ರತಾಪ ಸಿಂಹ

2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಕೋಮುಗಲಭೆಗಳು, ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚಾಗಿವೆ ಎಂದು ಎಡಪಂಥೀಯ ಚಿಂತಕರು ಆರೋಪಿಸಿದ್ದರು. ಈ ಅಭಿಯಾನದಲ್ಲಿ ಅನೇಕ ಹಿರಿಯ ಸಾಹಿತಿಗಳು ತಮಗೆ ಸರ್ಕಾರದಿಂದ ಲಭಿಸಿದ್ದ ಪ್ರಶಸ್ತಿಗಳನ್ನು ವಾಪಸ್‌ ನೀಡುವ ʼಅವಾರ್ಡ್‌ ವಾಪ್ಸಿʼ ಅಭಿಯಾನ ನಡೆದಿತ್ತು.

ಹಂಪನಾ ರಾಜೀನಾಮೆ ವಾಪ್ಸಿ
ರಾಷ್ಟ್ರಕವಿ ಕುವೆಂಪು ಅವರನ್ನು ಅವಮಾನಿಸುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಹಿರಿಯ ಸಂಶೋಧಕ ಪ್ರೊ. ಹಂ.ಪ. ನಾಗರಾಜಯ್ಯ ಅವರು ಕುವೆಂಪು ಪ್ರತಿಷ್ಠಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರಿಗೆ ಪತ್ರ ಬರೆದಿದ್ದಾರೆ. ತಮ್ಮ ಅಮೂಲ್ಯ ಕೃತಿಗಳಿಂದ ಹೊಸಗನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಸಪ್ರಾಣಿಸಿ ಭಾರತೀಯ ಸಾಃಇತ್ಯದಲ್ಲಿ ಕನ್ನಡಕ್ಕೂ ಕರ್ಣಾಟಕಕ್ಕೂ ಮಹಾಕವಿ ಕುವೆಂಪು ಅವರು ಗೌರವ ತಂದರು. ಅವರು ಕನ್ನಡಕ್ಕೆ ಜ್ಞಾನಪೀಠ ತಂದ ಮೊದಲಿಗರು.

ಆದರೆ ಇಂದು ಕುವೆಂಪು ಅವರನ್ನೂ, ಅವರು ಹುಟ್ಟಿದ ಗೌರವಾನ್ವಿತ ದೊಡ್ಡ ಜನಾಂಗವನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಮ್ಮ ರಾಷ್ಟ್ರಗೀತೆಯಾದ ನಾಡಗೀತೆಯನ್ನು ಲೇವಡಿ ಮಾಡಿದ ವ್ಯಕ್ತಿಯ ಮೇಳೆ ಸರ್ಕಾರ ಕ್ರಮ ಕೈಗೊಳ್ಳುವ ಬದಲು ಹೆಚ್ಚಿನ ಜವಾಬ್ದಾರಿಯನ್ನು ನೀಡುತ್ತಿದೆ. ಇದು ಅಪಾಯಕಾರಿಯಾದ ಬೆಳವಣಿಗೆ.ಪುಣ್ಯಶ್ಲೋಕರ ಮೇಲೆ ಕೆಟ್ಟ ಮಾತುಗಳ ಮಳೆ ಸುರಿಸಿದರೆ ಅಂಥವರಿಗೆ ಸರ್ಕಾರದ ಸಮಿತಿಗಳಲ್ಲಿ ಸದಸ್ಯರಾಘುವ ಸದವಕಾಶವಿದೆ ಎಂಬ ಸಂದೇಶ ರವಾನೆ ಆಗುತ್ತದೆ. ರಾಷ್ಟ್ರಕವಿ ಕುವೆಂಪು ಅವರನ್ನೂ ನಮ್ಮ ನಾಡಗೀತೆಯನ್ನೂ ಅಪಮಾನಿಸುತ್ತಿದ್ದರೂ ನೋಡಿಕೊಂಡು ತೆಪ್ಪಗಿರುವುದು ನನಗೆ ಕಷ್ಟವಾಗಿದೆ. ಸರ್ಕಾರ ಸ್ಥಾಪಿಸಿರುವ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೂ, ಸದಸ್ಯ ಸ್ಥಾನಕ್ಕೂ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಎಸ್‌.ಜಿ. ಸಿದ್ದರಾಮಯ್ಯ ವಾಪ್ಸಿ

ಶಿಕ್ಷಣ, ಸಂಸ್ಕೃತಿ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಅಸಾಂವಿಧಾನಿಕ ದಬ್ಬಾಳಿಕೆಯನ್ನು ವಿರೋಧಿಸಿ ರಾಷ್ಟ್ರಕವಿ ಡಾ. ಜಿ.ಎಸ್‌. ಶಿವರುದ್ರಪ್ಪ ಟ್ರಸ್ಟ್‌ಗೆ ರಾಜೀನಾಮೆ ನೀಡುತ್ತಿರುವುದಾಗಿ ಡಾ. ಎಸ್‌. ಜಿ. ಸಿದ್ದರಾಮಯ್ಯ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ನಮ್ಮ ರಾಝ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣ, ಸಂಸ್ಕೃತಿ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಕಂಡು ಆತಂಕ ಭಯ ಉಂಟಾಗಿದೆ. ಕೋಮುಧ್ವೇಷವನ್ನು ರಾಜಾರೋಷವಾಗಿ ಮಾತನಾಡುತ್ತ ಆಟಾಟೋಪ ಮೆರೆಯುತ್ತ ಪ್ರಜಾಪ್ರಭೂತ್ವದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಸರ್ಕಾರ ಮೌನ ವಹಿಸಿರುವುದು ಇನ್ನೂ ಹೆಚ್ಚಿನ ಆತಂಕ, ಭಯ ಉಂಟುಮಾಡುತ್ತಿದೆ.

ಇದೆಲ್ಲ ಬೆಳವಣಿಗೆಗಳಿಂದ ಬೇಸತ್ತು ನಾವುಗಳು ರಾಷ್ಟ್ರಕವಿ ಡಾ. ಜಿ.ಎಸ್‌. ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅಧ್ಯಕ್ಷ ಎಸ್‌. ಜಿ. ಸಿದ್ದರಾಮಯ್ಯ, ಸದಸ್ಯರಾದ ಡಾ. ಎಚ್‌.ಎಸ್‌. ರಾಘವೇಂದ್ರ ರಾವ್‌, ಡಾ. ಚಂದ್ರಶೇಖರ ನಂಗಲಿ, ಡಾ. ನಟರಾಜ ಬೂದಾಳು ಪತ್ರ ಬರೆದಿದ್ದಾರೆ.

ಇದನ್ನೂ ಓದಿ | ರೋಹಿತ್‌ ಚಕ್ರತೀರ್ಥ ತಲೆದಂಡ ಸಾಧ್ಯತೆ: ಇಂದು ಗಂಭೀರವಾಗಿ ಪರಿಶೀಲನೆ ಎಂದ ಬೊಮ್ಮಾಯಿ

ನಿರಂಜನಾರಾಧ್ಯ ವಾಪ್ಸಿ

ಡಿಎಸ್‌ಇಆರ್‌ಟಿ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ತಿಳಿಸಿದ್ದಾರೆ. ಈ ಕುರಿತು ಡಿಎಸ್‌ಇಆರ್‌ಟಿ ನಿರ್ದೇಶಕರಿಗೆ ಪತ್ರ ಬರೆದಿರುವ ನಿರಂಜನಾರಾಧ್ಯ, ತಮ್ಮ ಆಹ್ವಾನ ಪತ್ರಕ್ಕೆ ಧನ್ಯವಾದಗಳು. ತಾವು ಅಭಿನಂದಿಸಲು ಆಹ್ವಾನಿಸಿರುವ ಪತ್ರ ಸಿಕ್ಕಿದೆ . ಇತ್ತೀಚೆಗೆ ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆಯಲ್ಲಿನ ಬೆಳೆವಣಿಗಳು ಮನಸ್ಸಿಗೆ ತುಂಬಾ ನೋವು ಮತ್ತು ಅಘಾತವನ್ನುಂಟು ಮಾಡಿವೆ. ಹಿಜಾಬ್ ಹೆಸರಿನಲ್ಲಿ ಮಕ್ಕಳ ಶಿಕ್ಷಣ ಹಕ್ಕನ್ನು ಕಸಿಯುವ ರೀತಿಯಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿ ಸರ್ಕಾರ ಕೆಲಸ ನಿರ್ವಹಿಸುತ್ತಿದೆ. ನ್ಯಾಯಾಲಯದ ಆದೇಶ ಒಂದು ರೀತಿಯಾದರೆ, ಇಲಾಖೆ ಅದನ್ನು ಬೇರೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದೆ.
ಮುಂದುವರಿದು, ಪಠ್ಯ ಪರಿಷ್ಕರಣೆಯ ಹೆಸರಿನಲ್ಲಿ ಭಗತ್ ಸಿಂಗ್, ಮೂರ್ತಿರಾವ್, ಸಾರಾ ಅಬೂಬ್ಕರ್‌ರವರ ಪಠ್ಯಗಳನ್ನು ಕೈ ಬಿಟ್ಟು ಸಂವಿಧಾನ ವಿರೋಧಿ ಹೆಡ್ಗೆವಾರ್‌ರವರ ಪಾಠಗಳನ್ನು ಸೇರಿಸಿ ಶಿಕ್ಷಣವನ್ನು ಕೋಮುವಾದೀಕರಣ ಮತ್ತು ಕೇಸರೀಕರಣಗೊಳಿಸುವ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಪ್ರಮಾಣೀಕರಿಸಿದ ಪಠ್ಯಕ್ರಮ ಚೌಕಟ್ಟು, ಸಂವಿಧಾನದ ಮೌಲ್ಯಗಳು ಮತ್ತು ಶಿಕ್ಷಣ ನೀತಿಯ ತತ್ವಗಳನ್ನು ಪರಿಪಾಲಿಸುತ್ತಿಲ್ಲ. ಈ ಎಲ್ಲ ಬೆಳವಣಿಗೆಗಳು ಮಾನ್ಯ ಶಿಕ್ಷಣ ಸಚಿವರ ಮುಂದಾಳತ್ವದಲ್ಲಿ ನಡೆಯುತ್ತಿರುವುದು ದುರದೃಷ್ಟಕರ. ಅವರ ಅಧ್ಯಕತೆಯಲ್ಲಿ ನಡೆಯುತ್ತಿರುವ ಈ ಸಮಾರಂಭವನ್ನು ಸಂವಿಧಾನದ ಮೌಲ್ಯಗಳಿಗೆ ನಾನು ಬದ್ಧನಾಗಿ ನಾನು ಬಹಿಷ್ಕರಿಸುತ್ತೇನೆ .

ಈ ಎಲ್ಲಾ ಕಾರಣಗಳಿಂದ, ಸಮುದಾಯದ ಭಾಗವಹಿಸುವಿಕೆಯಲ್ಲಿ ಉದಯೋನ್ಮುಖ ಬೆಳೆವಣಿಗೆಗಳ ಪೊಸಿಸನ್ ಪೇಪರ್ ತಯಾರಿಕೆಯ ತಂಡದ ಮುಖ್ಯಸ್ಥನಾಗಿ ನಾನು ಮಾನ್ಯ ಶಿಕ್ಷಣ ಸಚಿವರ ಅಧ್ಯಕತೆಯಲ್ಲಿ 2022ರ ಮೇ 3ರಂದು ಶಿಕ್ಷಕರ ಸದನದಲ್ಲಿ ಆಯೋಜಿಸಿರುವ ಅಭಿನಂದನಾ ಸಮಾರಂಭದಲ್ಲಿ ಪ್ರತಿಭಟನಾ ಸಂಕೇತವಾಗಿ ನಾನು ಭಾಗವಹಿಸುತ್ತಿಲ್ಲವೆಂದು ತಿಳಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ | ರೋಹಿತ್‌ ಚಕ್ರತೀರ್ಥ ಆಯ್ಕೆಗೆ ಮಾನದಂಡ ಏನು?: ಸರ್ಕಾರಕ್ಕೆ 83 ಸಾಹಿತಿಗಳ ಪತ್ರ

Exit mobile version